ಚಳಿಗಾಲದಲ್ಲಿನ ಋತುಚರ್ಯೆ

ವೈದ್ಯ ಮೇಘರಾಜ ಪರಾಡಕರ್

೧. ಆರೋಗ್ಯದಾಯಕ ಚಳಿಗಾಲ

ಚಳಿಗಾಲದಲ್ಲಿ ಚಳಿಯಿಂದಾಗಿ ಚರ್ಮದಲ್ಲಿನ ಛಿದ್ರಗಳು ಮುಚ್ಚಲ್ಪಡುವುದರಿಂದ ಶರೀರದಲ್ಲಿನ ಅಗ್ನಿ ಒಳಗೇ ಶೇಖರಿಸಲ್ಪಟ್ಟು ಜಠರಾಗ್ನಿ ಪ್ರಜ್ವಲಿತವಾಗುತ್ತದೆ. ಶರೀರದಲ್ಲಿನ ರೋಗನಿರೋಧಕ ಕ್ಷಮತೆ ಮತ್ತು ಬಲ ಅಗ್ನಿಯನ್ನು ಅವಲಂಬಿಸಿರುವುದರಿಂದ ಅವುಗಳು ಸಹ ಈ ಋತುವಿನಲ್ಲಿ ಚೆನ್ನಾಗಿರುತ್ತವೆ; ಆದ್ದರಿಂದ ಚಳಿಗಾಲದ ಸುಮಾರು ೪ ತಿಂಗಳು ನಿಸರ್ಗದ ಮೂಲಕವೇ ಆರೋಗ್ಯ ಉತ್ತಮವಾಗಿರುತ್ತದೆ.

೨. ಋತುಗನುಸಾರ ಆಹಾರ

೨ ಅ. ಚಳಿಗಾಲದಲ್ಲಿ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ? : ಈ ಋತುವಿನಲ್ಲಿ ಜಠರಾಗ್ನಿ ಉತ್ತಮವಾಗಿರುವುದರಿಂದ ಯಾವುದೇ ರೀತಿಯ ಆಹಾರವು ಸಹಜವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಊಟ–ತಿಂಡಿಗಳಿಗೆ ಹೆಚ್ಚಿನ ಬಂಧನವಿರುವುದಿಲ್ಲ. ಈ ಕಾಲದಲ್ಲಿ ರಾತ್ರಿ ದೊಡ್ಡದಾಗಿರುವುದರಿಂದ ಬೆಳಿಗ್ಗೆ ಎದ್ದ ತಕ್ಷಣ ಹಸಿವಾಗುತ್ತದೆ. ಆದ್ದರಿಂದ ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿದ ತಕ್ಷಣ ಹೊಟ್ಟೆ ತುಂಬ ಊಟ ಮಾಡಬೇಕೆಂದು ಆಯುರ್ವೇದದಲ್ಲಿ ಹೇಳಿದೆ. ಚಳಿಗಾಲದಲ್ಲಿ ಶುಷ್ಕತೆ (ಒಣಗುವಿಕೆ) ಹೆಚ್ಚಾಗಿರುತ್ತದೆ. ಆದ್ದರಿಂದ ಆಹಾರದಲ್ಲಿ ಸ್ನಿಗ್ಧ (ಎಣ್ಣೆಯ ಅಂಶವಿರುವ) ಘಟಕಗಳು ಉದಾ. ಎಳ್ಳು, ನೆಲಕಡಲೆ, ಕೊಬ್ಬರಿ ಇತ್ಯಾದಿ ನಿಯಮಿತವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿರ ಬೇಕು; ಆದ್ದರಿಂದ ಈ ಸಮಯದಲ್ಲಿ ಎಳ್ಳುಬೆಲ್ಲ ಹಂಚುವ ಪರಂಪರೆಯಿದೆ. ಈ ಋತುವಿನಲ್ಲಿ ಪೌಷ್ಟಿಕ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. ನಡುನಡುವೆ ತಿನ್ನುತ್ತಾ ಇರುವುದು ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ; ಆದ್ದರಿಂದ ದಿನದ ನಿರ್ಧಿಷ್ಟ ೨ ಸಮಯದಲ್ಲಿ ಹೊಟ್ಟೆ ತುಂಬ ಊಟ ಮಾಡಬೇಕು, ಅದರಿಂದ ಸಮಯದ ಮೊದಲೇ ಹಸಿವಾಗುವುದಿಲ್ಲ. ಜೀರ್ಣಶಕ್ತಿ ಹೆಚ್ಚಿಸಲು ಊಟದ ನಂತರ ವೀಳ್ಯದೆಲೆ ತಿನ್ನಬೇಕು ತಕ್ಷಣ ಜೀರ್ಣವಾಗಿ ತಕ್ಷಣ ಹಸಿವಾಗುವಂತಹ ಪದಾರ್ಥ ಉದಾ. ಮುಂಡಕ್ಕಿ, ಕುರ್‌ಕುರೆ ಇತ್ಯಾದಿಗಳಿಂದ ಆದಷ್ಟು ದೂರವಿರಬೇಕು.

೨ ಆ. ನೀರು : ಈ ಸಮಯದಲ್ಲಿ ಸ್ವಚ್ಛ ನೈಸರ್ಗಿಕ ಸ್ಥಳದ ಉದಾ. ಬಾವಿ, ಒಸರು ಇತ್ಯಾದಿಗಳ ನೀರು ಸ್ವಾಭಾವಿಕವಾಗಿ ದೋಷರಹಿತವಾಗಿರುತ್ತದೆ. ಆದ್ದರಿಂದ ಇಂತಹ ನೀರನ್ನು ಗಾಳಿಸಿ ಕುಡಿಯುವುದರಿಂದ ಏನೂ ಅಪಾಯವಾಗುವುದಿಲ್ಲ. ಯಾರಿಗೆ ತಣ್ಣೀರು ಜೀರ್ಣವಾಗುವುದಿಲ್ಲವೋ, ಅವರು ಮಾತ್ರ ಬಿಸಿ ನೀರು ಕುಡಿಯುವ ಅವಶ್ಯಕತೆಯಿರುತ್ತದೆ. ನಗರಗಳಲ್ಲಿನ ನೀರು ಮಾತ್ರ ಕಲುಷಿತವಿರುವ ಸಾಧ್ಯತೆ ಇರುವುದರಿಂದ ಅದನ್ನು ಗಾಳಿಸಿ ಬಿಸಿ ಮಾಡಿ ಕುಡಿಯುವುದೇ ಉತ್ತಮವೆನಿಸುತ್ತದೆ.

೨ ಇ. ಕೂಲರ್‌ನಲ್ಲಿನ ತಣ್ಣೀರು ಆರೋಗ್ಯಕ್ಕೆ ಹಾನಿಕರವಾಗಿದೆ : ಯಾವುದೇ ಋತುವಿನಲ್ಲಿ ಫ್ರಿಡ್ಜ್ ನಲ್ಲಿನ ಅಥವಾ ಕೂಲರ್‌ನಲ್ಲಿನ ತಣ್ಣೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ ವಾಗಿದೆ. ಇಂತಹ ನೀರು ಕುಡಿಯುವುದರಿಂದ ಜೀರ್ಣಶಕ್ತಿ ಮಂದವಾಗುತ್ತದೆ ಹಾಗೂ ಶೀತ, ಕೆಮ್ಮು, ಸಂಧುನೋವು, ಆಲಸ್ಯ ಇತ್ಯಾದಿ ರೋಗಗಳು ಉದ್ಭವಿಸುತ್ತವೆ.

೩. ಚಳಿಗಾಲದಲ್ಲಿನ ಇತರ ಆಚಾರಗಳು

೩ ಅ. ಬ್ರಾಹ್ಮಿಮುಹೂರ್ತದಲ್ಲಿ ಏಳುವುದು : ಈ ಕಾಲದಲ್ಲಿ ಚಳಿಯಿಂದಾಗಿ ಇನ್ನೂ ಸ್ವಲ್ಪ ಮಲಗಬೇಕೆಂದು ಅನಿಸುತ್ತಿದ್ದರೂ ನಿಯಮಿತವಾಗಿ ಬ್ರಾಹ್ಮಿಮುಹೂರ್ತದಲ್ಲಿ, ಅಂದರೆ ಸೂರ್ಯೋದಯದ ಒಂದೂವರೆ ಗಂಟೆ ಮೊದಲು ಏಳಬೇಕು. ನಿಯಮಿತವಾಗಿ ಬ್ರಾಹ್ಮಿಮುಹೂರ್ತದಲ್ಲಿ ಏಳುವುದು ಸಹ ಎಲ್ಲ ರೋಗಗಳಿಂದ ದೂರ ವಿಡುವುದಾಗಿದೆ.

೩ ಆ. ಔಷಧಿ ಧೂಮ್ರಪಾನ ಮಾಡುವುದು : ಬೆಳಗ್ಗೆ ಹಲ್ಲುಜ್ಜಿದ ನಂತರ ಔಷಧಿ ಹೊಗೆಯನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಶೀತ, ಕೆಮ್ಮುಗಳಂತಹ ಕಫಕ್ಕೆ ಸಂಬಂಧಪಟ್ಟ ರೋಗಗಳು ಆಗುವುದಿಲ್ಲ. ಕಾಗದದ ಸುರುಳಿಯಲ್ಲಿ ಓಮದ ಪುಡಿಯನ್ನು ಹಾಕಿ ಬೀಡಿಯ ಹಾಗೆ ಕಟ್ಟಬೇಕು ಹಾಗೂ ಅದಕ್ಕೆ ಒಂದೆಡೆ ಬೆಂಕಿ ಹಚ್ಚಿ ಇನ್ನೊಂದೆಡೆಯಿಂದ ೩ ಬಾರಿ ಹೊಗೆ ಎಳೆಯಬೇಕು. ಹೊಗೆಯನ್ನು ಮೂಗಿನಿಂದ ಬಿಡದೆ ಬಾಯಿಯಿಂದಲೇ ಬಿಡಬೇಕು. ಓಮದ ಬದಲು ತುಳಸಿಯ ಎಲೆಗಳ ಪುಡಿಯನ್ನು ಸಹ ಉಪಯೋಗಿಸಬಹುದು.

೩ ಇ. ಸ್ನಾನದ ಮೊದಲು ಮೈಗೆ ನಿಯಮಿತ ಎಣ್ಣೆ ಹಚ್ಚುವುದು : ಈ ಋತುವಿನಲ್ಲಿ ಸ್ನಾನದ ಮೊದಲು ಮೈಗೆ ಕೊಬ್ಬರಿಎಣ್ಣೆ, ಎಳ್ಳೆಣ್ಣೆ, ನೆಲ ಕಡಲೆಯ ಎಣ್ಣೆ, ಸಾಸಿವೆಯ ಎಣ್ಣೆ ಇವುಗಳಲ್ಲಿ ಯಾವುದಾದರೂ ಎಣ್ಣೆಯನ್ನು ಹಚ್ಚಬೇಕು. ಅದರಿಂದ ಚಳಿಯಿಂದಾಗಿ ಚರ್ಮ ಒಣಗಿ ತುರಿಸುವುದು, ಚರ್ಮ, ತುಟಿ, ಕಾಲು ಇತ್ಯಾದಿಗಳು ಒಡೆಯುವುದು ಮುಂತಾದ ರೋಗಗಳಾಗುವುದಿಲ್ಲ. ತೆಂಗಿನೆಣ್ಣೆ ತಂಪು ಹಾಗೂ ಸಾಸಿವೆ ಎಣ್ಣೆ ಉಷ್ಣ ಇರುತ್ತದೆ. ಆದರೂ ಚಳಿಗಾಲದಲ್ಲಿ ತೆಂಗಿನೆಣ್ಣೆ ಉಪಯೋಗಿಸಿದರೆ ಏನೂ ಅಪಾಯವಾಗುವುದಿಲ್ಲ. ಯಾವಾಗಲೂ ಉಷ್ಣತೆಯ ರೋಗವಿರುವವರಿಗೆ ತೆಂಗಿನೆಣ್ಣೆ ಬಹಳ ಲಾಭದಾಯಕವಾಗಿದೆ. ಪೆಟ್ರೋಲಿಯಮ್ ಜೆಲ್ಲಿ, ಕೋಲ್ಡ್ ಕ್ರೀಮ್‌ನಂತಹ ದುಬಾರಿ ಹಾಗೂ ಕೃತಕ ಅಲಂಕಾರದ ವಸ್ತುಗಳನ್ನು ಉಪಯೋಗಿಸುವುದಕ್ಕಿಂತ ಅಗ್ಗ ಹಾಗೂ ನೈಸರ್ಗಿಕ ಎಣ್ಣೆಯನ್ನು ಉಪಯೋಗಿಸುವುದು ಚರ್ಮದ ಆರೋಗ್ಯಕ್ಕಾಗಿ ಹೆಚ್ಚು ಉಪಯುಕ್ತವಾಗಿದೆ.

೩ ಈ. ವ್ಯಾಯಾಮ : ಚಳಿಗಾಲದಲ್ಲಿ ಬಹಳಷ್ಟು ವ್ಯಾಯಾಮ ಮತ್ತು ಶ್ರಮ ಮಾಡಬೇಕು. ಬೆಳಗ್ಗೆ ಮೈಗೆ ಎಣ್ಣೆ ಹಚ್ಚಿ ವ್ಯಾಯಾಮ ಮಾಡುವುದು ಮತ್ತು ಅರ್ಧಗಂಟೆಯ ನಂತರ ಸ್ನಾನ ಮಾಡುವುದು ಯೋಗ್ಯವಾಗಿದೆ; ಆದರೆ ಇದು ಸಾಧ್ಯವಿಲ್ಲದವರು ಅನುಕೂಲಕ್ಕನುಸಾರ ಸಮಯವನ್ನು ಬದಲಾಯಿಸ ಬಹುದು. ಕೇವಲ ವ್ಯಾಯಾಮದ ನಂತರ ಅರ್ಧ ಗಂಟೆಯ ಮೊದಲು ಸ್ನಾನ ಮಾಡಬಾರದು.

೩ ಉ. ಸ್ನಾನ : ಈ ಋತುವಿನಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡಬೇಕು; ಆದರೆ ಯಾರಿಗೆ ನಿಯಮಿತವಾಗಿ ತಣ್ಣೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿದೆಯೋ, ಅವರು ಈ ಸಮಯದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಅಪಾಯವಿಲ್ಲ

೩ ಊ. ಬಟ್ಟೆ : ಚಳಿಯಿಂದ ರಕ್ಷಣೆಯಾಗುವ ಸಲುವಾಗಿ ಬೆಚ್ಚಗಿರುವ ಬಟ್ಟೆಗಳನ್ನು ಉಪಯೋಗಿಸ ಬೇಕು.

೪. ಚಳಿಗಾಲದಲ್ಲಿನ ಸಾಮಾನ್ಯ ರೋಗಗಳಿಗೆ ಸುಲಭ ಆಯುರ್ವೇದಿಕ ಉಪಚಾರ

೪ ಅ. ಶೀತ, ಕೆಮ್ಮು, ಜ್ವರ : ಒಂದು ಮುಷ್ಟಿ ತುಳಸಿಯ ಎಲೆಗಳನ್ನು ಎರಡು ಲೋಟ ನೀರಿನಲ್ಲಿ ಹಾಕಿ ಒಂದು ಲೋಟ ನೀರು ಬಾಕಿ ಇರುವವರೆಗೆ ಕುದಿಸಬೇಕು. ರೋಗ ಗುಣವಾಗುವವರೆಗೆ ಅರ್ಧ ಕಷಾಯವನ್ನು ಬೆಳಿಗ್ಗೆ ಮತ್ತು ಉಳಿದ ಅರ್ಧವನ್ನು ಸಾಯಂಕಾಲ ಕುಡಿಯಬೇಕು.

೪ ಆ. ಸಂಧುನೋವು : ಪಾರಿಜಾತದ ಎಲೆಗಳು ಮತ್ತು ಹೂವುಗಳಿಂದ ಈ ಮೇಲಿನಂತೆ ಕಷಾಯ ಮಾಡಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸಬೇಕು. ನೋವಿನ ಸ್ಥಾನದ ಮೇಲೆ ಯಾವುದೇ ಎಣ್ಣೆಯನ್ನು ಉಜ್ಜಬೇಕು. ಆಹಾರದಲ್ಲಿ ಎಣ್ಣೆ, ತುಪ್ಪದ ಪ್ರಮಾಣವನ್ನು ಹೆಚ್ಚಿಸಬೇಕು.

೪ ಇ. ಮಲಬದ್ಧತೆ : ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ೧ ಚಮಚ ಅಳಲೆಯ ಚೂರ್ಣದಲ್ಲಿ ೧ ಚಿಟಿಕೆ ಹಿಪ್ಪಲಿಯ ಚೂರ್ಣವನ್ನು ಮಿಶ್ರಣ ಮಾಡಿ ಸೇವಿಸಬೇಕು. ಈ ಪ್ರಯೋಗವನ್ನು ಮಾರ್ಚ್ ತಿಂಗಳ ಕೊನೆಯವರೆಗೆ ನಿಯಮಿತವಾಗಿ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ.

೫. ಇದರಿಂದ ಕಡ್ಡಾಯವಾಗಿ ದೂರವಿರಿ !

ಬೆಳದಿಂಗಳಲ್ಲಿ ಅಲೆದಾಡುವುದು, ಚಳಿಯಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳದಿರುವುದು, ನೀರಿನ ತುಂತುರು ಹನಿವನ್ನು ಮೈಮೇಲೆ ಸಿಂಪಡಿಸಿ ಕೊಳ್ಳುವುದು, ನಿರಂತರ ಪಂಖದ ಗಾಳಿಯ ಸಂಪರ್ಕದಲ್ಲಿರುವುದು, ಹಗಲಿನಲ್ಲಿ ಮಲಗುವುದು ಇತ್ಯಾದಿಗಳನ್ನು ಈ ಋತುವಿನಲ್ಲಿ ಕಡ್ಡಾಯವಾಗಿ ಮಾಡಬಾರದು. ಇದರಿಂದ ಶರೀರದಲ್ಲಿ ಕಫ ಹೆಚ್ಚಾಗುತ್ತದೆ ಹಾಗೂ ರೋಗ ಉತ್ಪನ್ನವಾಗುತ್ತವೆ. ಚಳಿಗಾಲಕ್ಕೆ ಸಂಬಂಧಿಸಿದ ಋತುಚರ್ಯೆಯನ್ನು ಪಾಲಿಸಿ ಸಾಧಕರು ನಿರೋಗಿಗಳಾಗಲಿ ಹಾಗೂ ಎಲ್ಲರಿಗೂ ಆಯುರ್ವೇದದ ಮೇಲಿನ ಶ್ರದ್ಧೆ ಹೆಚ್ಚಾಗಲಿ, ಎಂದು ಭಗವಾನ್ ಧನ್ವಂತರಿಯ ಚರಣಗಳಲ್ಲಿ ಪ್ರಾರ್ಥನೆ !

– ವೈದ್ಯ ಮೇಘರಾಜ ಪರಾಡಕರ್ 

2 thoughts on “ಚಳಿಗಾಲದಲ್ಲಿನ ಋತುಚರ್ಯೆ”

Leave a Comment