ಆಚ್ಛಾದನ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರದ ಒಂದು ಪ್ರಮುಖ ಸ್ತಂಭ !

Article also available in :

(ಟಿಪ್ಪಣಿ: ಆಚ್ಛಾದನ ಎಂದರೆ ಹೊದಿಕೆ)

ಆಚ್ಛಾದನ, ವಾಫಸಾ, ಜೀವಾಮೃತ ಮತ್ತು ಬೀಜಾಮೃತ ಇವು ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ತಂತ್ರದ ಮೂಲ ತತ್ತ್ವಗಳಾಗಿವೆ. ಈ ಲೇಖನದಲ್ಲಿ ನಾವು ‘ಆಚ್ಛಾದನ ಎಂದರೇನು ?’, ಹಾಗೆಯೇ ಅದರ ಮಹತ್ವ ಮತ್ತು ಅದರ ಲಾಭದ ಬಗ್ಗೆ ತಿಳಿದುಕೊಳ್ಳೋಣ.

ಆಚ್ಛಾದನ ಎಂದರೇನು ?

ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರದಲ್ಲಿ ಭೂಮಿಯ ಮೇಲಿನ ಭಾಗವನ್ನು ಮುಚ್ಚುವುದೆಂದರೆ ‘ಆಚ್ಛಾದನ’. ಆಚ್ಛಾದನವು ಭೂಮಿಯ ಸಜೀವತೆ ಮತ್ತು ಫಲವತ್ತತೆಯನ್ನು ಕಾಪಾಡುವ ಕಾರ್ಯವನ್ನು ಮಾಡುತ್ತದೆ. ಆಚ್ಛಾದನದಿಂದ ‘ಸೂಕ್ಷ್ಮ ಪರಿಸರ’ದ ನಿರ್ಮಿತಿಯೂ ಸಹಜವಾಗಿ ಆಗುತ್ತದೆ. ‘ಸೂಕ್ಷ್ಮಪರಿಸರ’ ಎಂದರೆ ‘ಭೂಮಿಯಲ್ಲಿನ ಸೂಕ್ಷ್ಮ ಜೀವಾಣುಗಳ ಮತ್ತು ಎರೆಹುಳುಗಳ ಕಾರ್ಯಕ್ಕಾಗಿ ಆವಶ್ಯಕವಿರುವ ವಾತಾವರಣ’. ಇದರಿಂದ ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿನ ಟೊಳ್ಳುತನ ಹೆಚ್ಚಾಗುತ್ತದೆ,  ಹಾಗೆಯೇ ಮಣ್ಣಿನಲ್ಲಿ ಎಲ್ಲ ವಿಧದ ಜೀವಾಣುಗಳ ಸಂಖ್ಯೆ ವೃದ್ಧಿಯಾಗಲು ಸಹಾಯವಾಗುತ್ತದೆ.  (ಗಿಡಗಳಿಗೆ ಎಲ್ಲ ರೀತಿಯ ಆಹಾರದ್ರವ್ಯಗಳು ಸಿಗಲು ಜೀವಾಣುಗಳ ಆವಶ್ಯಕತೆ ಇರುತ್ತದೆ. ‘ಈ ಜೀವಾಣುಗಳು ಹೇಗೆ ಕಾರ್ಯವನ್ನು ಮಾಡುತ್ತವೆ ?’ ಎಂಬುದನ್ನು ಈ ಲೇಖನದಲ್ಲಿ ನೀಡಿದ್ದೇವೆ.)

ಆಚ್ಛಾದನ ವಿಧಗಳು

ಮನೆಯಲ್ಲಿನ ಕೃಷಿಗಾಗಿ ಉಪಯುಕ್ತ ಎರಡು ರೀತಿಯ ಆಚ್ಛಾದನಗಳಿವೆ – ಕಾಷ್ಠ ಆಚ್ಛಾದನ ಮತ್ತು ಸಜೀವ ಆಚ್ಛಾದನ

ಅ.  ಕಾಷ್ಠ ಆಚ್ಛಾದನ

ಗಿಡಗಳ ಅಥವಾ ಸಸಿಗಳ ಸುತ್ತಲಿನ ಭೂಮಿಯ ಮೇಲಿನ ಬದಿಯನ್ನು ‘ಒಣ ತೊಪ್ಪಲು/ಎಲೆಗಳು, ಒಣಗಿದ ಕಸಕಡ್ಡಿ, ತೆಂಗಿನ ಸಿಪ್ಪೆ, ಧಾನ್ಯಗಳ ಸಿಪ್ಪೆ, ಕಬ್ಬಿನ ಚಿಪ್ಪಾಡಿ (ಚಿಪ್ಪಾಟಿ), ಅಡುಗೆ ಮನೆಯಲ್ಲಿನ ಹಸಿಕಸ ಇತ್ಯಾದಿಗಳಿಂದ ಮುಚ್ಚುವುದಕ್ಕೆ ‘ಕಾಷ್ಠ ಆಚ್ಛಾದನ’ ಎಂದು ಹೇಳುತ್ತಾರೆ. ಈ ಎಲ್ಲ ವಸ್ತುಗಳು ನಮಗೆ ಮನೆಯಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸುಲಭವಾಗಿ ಮತ್ತು ಉಚಿತವಾಗಿ ಸಿಗುತ್ತವೆ. ಕಾಷ್ಠ ಹೊದಿಕೆಯನ್ನು ನಾಲ್ಕೂವರೆ ಇಂಚು ದಪ್ಪ ಮಾಡಬಹುದು; ಆದರೆ, ಅಡುಗೆಮನೆಯಲ್ಲಿನ ಹಸಿಕಸವನ್ನು ಹರಡುವಾಗ, ಅದು ಒಂದು ಜಾಗದಲ್ಲಿ ಒಂದು ಇಂಚಿಗಿಂತ ಹೆಚ್ಚು ದಪ್ಪವಾಗಿರಬಾರದು.

ಹೊದಿಕೆಯ ಮೇಲೆ ೭ ದಿನಗಳಿಗೊಮ್ಮೆ ಅಥವಾ ೧೫ ದಿನಗಳಿಗೊಮ್ಮೆ ೧೦ ಪಟ್ಟು ನೀರಿನಲ್ಲಿ ತೆಳುಗೊಳಿಸಿದ ಜೀವಾಮೃತವನ್ನು ಸಿಂಪಡಿಸಿದರೆ, ಅದರ ವಿಭಜನೆಯ ಪ್ರಕ್ರಿಯೆ ವೇಗದಿಂದ ಆಗುತ್ತದೆ ಮತ್ತು ಅದು ಕಪ್ಪು, ಹಗುರಾದ ಮತ್ತು ಫಲವತ್ತಾದ ಮಣ್ಣಿನಲ್ಲಿ ಬದಲಾಗುತ್ತದೆ, ಇದಕ್ಕೆ ‘ಹ್ಯೂಮಸ್’ ಎಂದು ಹೇಳುತ್ತಾರೆ. (ಇದರಿಂದಾಗಿ ಕೆಲವು ದಿನಗಳ ನಂತರ ನಾವು ಮತ್ತೆ ಕಾಷ್ಠ ಹೊದಿಕೆಯನ್ನು ಹಾಕಬೇಕಾಗುತ್ತದೆ.)

ಆ. ಸಜೀವ ಆಚ್ಛಾದನ

ಮುಖ್ಯ ಬೆಳೆಯ ಸುತ್ತಲೂ, ಆ ಬೆಳೆಗಿಂತ ಕಡಿಮೆ ಎತ್ತರದ ಇನ್ನೊಂದು ಬೆಳೆಯನ್ನು ಬೆಳೆಸುವುದೆಂದರೆ ‘ಸಜೀವ ಆಚ್ಛಾದನ’, ಉದಾ. ಒಂದು ಕುಂಡದ ಮಧ್ಯದಲ್ಲಿ ಒಂದು ಟೊಮೆಟೊ ಸಸಿಯನ್ನು ನೆಟ್ಟಿದ್ದರೆ ಅದರ ಸುತ್ತಲೂ ಉಳಿದ ಜಾಗದಲ್ಲಿ ಮೆಂತ್ಯೆ, ಕೊತ್ತಂಬರಿ ಇಂತಹ ಕಾಯಿ ಪಲ್ಲೆಗಳನ್ನು ಅಥವಾ ಮೂಲಂಗಿ, ಕ್ಯಾರೆಟ್, ಬೀಟರೂಟ್, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಗೆಡ್ಡೆ ತರಕಾರಿಗಳನ್ನು ಬೆಳೆಸಬಹುದು.

ಈ ರೀತಿಯ ಆಂತರ ಬೆಳೆಗಳಿಂದ ಕಡಿಮೆ ಜಾಗದಲ್ಲಿ ಹೆಚ್ಚು ಉತ್ಪನ್ನವನ್ನು ಪಡೆಯಬಹುದು ಮತ್ತು ಇದರಿಂದ ಭೂಮಿಯ ಮೇಲೆ ಆಚ್ಛಾದನವೂ ಇರುತ್ತದೆ. ಕರಬೂಜ, ಕಲ್ಲಂಗಡಿ, ಕುಂಬಳಕಾಯಿ, ಬೂದುಗುಂಬಳಕಾಯಿ, ಗೆಣಸು ಮುಂತಾದ ಕೆಲವು ಬಳ್ಳಿಗಳು ಭೂಮಿಯ ಮೇಲೆ ಹರಡುತ್ತವೆ. ಇದರಿಂದ ತಾನಾಗಿ ಭೂಮಿಯ ಮೇಲೆ ಹೊದಿಕೆ ತಯಾರಾಗುತ್ತದೆ.

ಕಾಷ್ಠ ಆಚ್ಛಾದನಕ್ಕಾಗಿ ಆವಶ್ಯಕ ಗಿಡಗಳ ಒಣ ತಪ್ಪಲು, ಕಸಕಡ್ಡಿಗಳನ್ನು ಮಳೆಗಾಲದ ಮೊದಲೇ ಸಂಗ್ರಹಿಸಿಡಬೇಕು !

ಕಾಷ್ಠ ಆಚ್ಛಾದನವು ಸತತವಾಗಿ ವಿಭಜನೆಯಾಗಿ ಫಲವತ್ತಾದ ಮಣ್ಣು ತಯಾರಾಗುವುದರಿಂದ ಅದನ್ನು (ಕಾಷ್ಠ ಆಚ್ಛಾದನವನ್ನು) ಕೆಲವು ದಿನಗಳ ಅಂತರದಲ್ಲಿ ಪುನಃ ಪುನಃ ಮಾಡಬೇಕಾಗುತ್ತದೆ. ಕೇವಲ ಕಸಕಡ್ಡಿಗಳನ್ನು ಬಳಸಿ ಕೃಷಿಯನ್ನು ಮಾಡುವುದಿದ್ದರೆ, ಕಸಕಡ್ಡಿಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತವೆ. ಜೂನ್‌ನಿಂದ ಅಕ್ಟೋಬರ್‌ನ ವರೆಗೆ ಮಳೆ ಬೀಳುವುದರಿಂದ ಒಣ ಕಸಕಡ್ಡಿಗಳನ್ನು ಸಂಗ್ರಹಿಸುವುದು ಕಠಿಣವಾಗುತ್ತದೆ. ಆದ್ದರಿಂದ, ನವೆಂಬರ್‌ನಿಂದ ಮೇ ವರೆಗೆ, ಹೆಚ್ಚೆಚ್ಚು ಒಣ ಕಸಕಡ್ಡಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ಆಚ್ಛಾದನದಿಂದಾಗುವ ಪ್ರಯೋಜನಗಳು

ಅ. ಆಚ್ಛಾದನದಿಂದ ಭೂಮಿಯನ್ನು ಉರಿಬಿಸಿಲು, ವಿಪರೀತ ಚಳಿ, ಜೋರಾಗಿ ಬೀಸುವ ಗಾಳಿ ಮತ್ತು ಮಳೆಹನಿಗಳಿಂದ ರಕ್ಷಿಸಬಹುದು.

ಆ. ಆಚ್ಛಾದನವನ್ನು ಮಾಡಿದರೆ ಬಿಸಿಲು ಮತ್ತು ಗಾಳಿ ನೇರವಾಗಿ ಮಣ್ಣಿನ ಸಂಪರ್ಕಕ್ಕೆ ಬರುವುದಿಲ್ಲ. ಇದರಿಂದ ಮಣ್ಣಿನ ಆರ್ದ್ರತೆಯು ಹೆಚ್ಚು ಕಾಲ ಉಳಿಯುತ್ತದೆ ಮತ್ತು ಇದರಿಂದ ನೀರು ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ.

ಇ. ಆಚ್ಛಾದವು ಎರೆಹುಳಗಳ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಕ್ಷಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎರೆಹುಳಗಳು ದಿನದಲ್ಲಿ ಕಾರ್ಯವನ್ನು ಮಾಡದೇ ಕೇವಲ ರಾತ್ರಿಯಲ್ಲಿ ಕಾರ್ಯವನ್ನು ಮಾಡುತ್ತವೆ. ಭೂಮಿಯ ಮೇಲೆ ಆಚ್ಛಾದನ ಹಾಕಿದರೆ (ಭೂಮಿಯ ಮೇಲ್ಭಾಗವನ್ನು ಕಸಕಡ್ಡಿಗಳಿಂದ ಮುಚ್ಚಿದರೆ) ಎರೆಹುಳಗಳಿಗೆ ಸೂರ್ಯನ ಬೆಳಕು ಇರುವುದು ತಿಳಿಯುವುದಿಲ್ಲ ಮತ್ತು ಅವು ಹಗಲು ರಾತ್ರಿ ತಮ್ಮ ಕಾರ್ಯ ಮಾಡುತ್ತವೆ. ಅವುಗಳ ಚಲನವಲನದಿಂದ ಭೂಮಿಯು ಸಚ್ಛಿದ್ರ (ರಂಧ್ರಗಳಿರುವುದು) ಮತ್ತು ಟೊಳ್ಳಾಗಿರುತ್ತದೆ. ಇದರಿಂದ ಭೂಮಿನ್ನು ಕೃಷಿಗಾಗಿ ವಿಶೇಷವಾಗಿ ತಯಾರು ಮಾಡುವ ಆವಶ್ಯಕತೆ ಇರುವುದಿಲ್ಲ.

ಈ. ಆಚ್ಛಾದನಕ್ಕೆಂದು ಬಳಸುವ ಎಲ್ಲ ನೈಸರ್ಗಿಕ ಘಟಕಗಳ ವಿಘಟನೆಯಾಗಿ ‘ಹ್ಯೂಮಸ್’ (ಫಲವತ್ತಾದ ಮಣ್ಣು) ತಯಾರಾಗುವ ಪ್ರಕ್ರಿಯೆಯು ಸತತ ನಡೆದಿರುತ್ತದೆ. ಇದರಿಂದ ಗಿಡಗಳಿಗೆ ಬಹಳಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ದೊರಕಿ ಅವು ಸಶಕ್ತ ಮತ್ತು ಬಲಶಾಲಿ ಆಗುತ್ತವೆ.

ಉ. ಸಜೀವ ಆಚ್ಛಾದನಯನ್ನು ಮಾಡುವಾಗ ಮುಖ್ಯ ಬೆಳೆ ಏಕದಳ ಆಗಿದ್ದರೆ, ಅಂತರ ಬೆಳೆ ದ್ವಿದಳ ಮತ್ತು ಮುಖ್ಯ ಬೆಳೆ ದ್ವಿದಳವಾಗಿದ್ದರೆ, ಅಂತರ ಬೆಳೆ ಏಕದಳವಾಗಿರಬೇಕು. ಹೀಗೆ ನಿಯೋಜನೆಯನ್ನು ಮಾಡಿದರೆ ದ್ವಿದಳ ಬೆಳೆಗಳ ಬೇರುಗಳಿಂದ ಭೂಮಿಯಲ್ಲಿ ಸಾರಜನಕದ (ನೈಟ್ರೋಜನ್‌) ಪೂರೈಕೆ ಆಗುತ್ತಿರುತ್ತದೆ. (ಯಾವುದರಿಂದ ನಮಗೆ ಬೇಳೆಗಳು ಸಿಗುತ್ತವೆಯೋ ಅವು ದ್ವಿದಳ ಧಾನ್ಯಗಳು ಮತ್ತು ಇತರ ಎಲ್ಲವೂ ಏಕದಳ ಧಾನ್ಯಗಳು)

ಊ. ಆಚ್ಛಾದನದಿಂದ ಭೂಮಿಯಲ್ಲಿ ತಾನಾಗಿಯೇ ಬೇಕಾಗುವಷ್ಟೇ ಆರ್ದ್ರತೆ (ಹಸಿ) ಉಳಿಯುತ್ತದೆ ಮತ್ತು ‘ವಾಫಸಾ’ ಸ್ಥಿತಿ ತಯಾರಾಗುತ್ತದೆ. (ಭೂಮಿಯಲ್ಲಿ ಎರಡು ಮಣ್ಣಿನ ಕಣಗಳ ನಡುವಿನ ಟೊಳ್ಳಿನಲ್ಲಿ ನೀರಿನ ಅಸ್ತಿತ್ವ ಉಳಿಯದೇ ಶೇ. ೫೦ ರಷ್ಟು ಆವಿ (ಹಬೆ) ಮತ್ತು ಶೇ. ೫೦ ರಷ್ಟು ಗಾಳಿ ಇವುಗಳ ಮಿಶ್ರಣ ಉಳಿಯುವುದಕ್ಕೆ ‘ವಾಫಸಾ’ ಎಂದು ಹೇಳುತ್ತಾರೆ). ವಾಫಸಾ ಇದ್ದರೆ ಮಾತ್ರ ಗಿಡಗಳ ಬೇರುಗಳು ಅವುಗಳ ಪ್ರಾಣವಾಯು ಮತ್ತು ನೀರಿನ ಆವಶ್ಯಕತೆಯನ್ನು ಪೂರ್ಣಗೊಳಿಸುತ್ತವೆ.

ಎ. ಹೊದಿಕೆಯಿಂದ ಹ್ಯೂಮಸ್‌ನ ಕಣಗಳು ಗಾಳಿಯ ಜೊತೆಗೆ ಹಾರಿಹೋಗುವುದಿಲ್ಲ, ಹಾಗೆಯೇ  ತೀವ್ರ ಬಿಸಿಲಿನಿಂದ ಅವು ಬತ್ತಿ ಹೋಗುವುದಿಲ್ಲ. ಇದರಿಂದ ಮಣ್ಣಿನ ಸಜೀವತೆ ಉಳಿದುಕೊಳ್ಳುತ್ತದೆ.

ಏ. ಬರ ಪರಿಸ್ಥಿತಿಯಲ್ಲಿ ಹೊದಿಕೆಯು ಗಾಳಿಯಿಂದ ಆರ್ದ್ರತೆಯನ್ನು (ತೇವಾಂಶವನ್ನು) ಹೀರಿಕೊಳ್ಳುತ್ತದೆ. ಇದರಿಂದ ಗಿಡಗಳು ಕಡಿಮೆ ನೀರು ಸಿಕ್ಕರೂ ಹಚ್ಚ ಹಸಿರಾಗಿ ಉಳಿಯುತ್ತವೆ.

ಕಸದ ಸಮಸ್ಯೆ ಬಗೆಹರಿಸಲು ಆಚ್ಛಾದನ ತಂತ್ರ ಬಳಸಿರಿ !

ಮೇಲಿನ ಎಲ್ಲ ಅಂಶಗಳಿಂದ ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರ’ದಲ್ಲಿ ಆಚ್ಛಾದನವು ಬಹಳ ಮಹತ್ವದ್ದಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹೊದಿಕೆಗೆ ಬಳಸುವ ನೈಸರ್ಗಿಕ ಘಟಕಗಳು (ಒಣಗಿದ ಎಲೆ, ಕಸಕಡ್ಡಿ, ತೆಂಗಿನ ಸಿಪ್ಪೆಗಳು, ಧಾನ್ಯಗಳ ಸಿಪ್ಪೆ, ಕಬ್ಬಿನ ಚಿಪ್ಪಾಡಿ, ಅಡುಗೆಮನೆಯಲ್ಲಿನ ಹಸಿ ಕಸ ಇತ್ಯಾದಿ) ಸಾಮಾನ್ಯ ವ್ಯಕ್ತಿಗಳಿಗೆ ‘ಕಸ’ ಆಗಿರುತ್ತವೆ; ಆದರೆ ಈ ಘಟಕಗಳೇ ನೈಸರ್ಗಿಕ ಕೃಷಿಯನ್ನು ಮಾಡುವಾಗ ಒಂದು ದೊಡ್ಡ ವರದಾನವಾಗುತ್ತವೆ ಎಂಬುದು ಮೇಲಿನ ವಿವರಗಳಿಂದ ಸ್ಪಷ್ಟವಾಗುತ್ತದೆ. ಇಂದು ಎಲ್ಲ ದೊಡ್ಡ ದೊಡ್ಡ ನಗರ ಮತ್ತು ಊರುಗಳಲ್ಲಿ ಒಣ ಕಸದ ನಿರ್ವಹಣೆಯು ಸರಕಾರವು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಆಚ್ಛಾದನಕ್ಕಾಗಿ ಉಚಿತವಾಗಿ ದೊರೆಯುವ ಈ ಎಲ್ಲ ನೈಸರ್ಗಿಕ ಘಟಕಗಳನ್ನು ಬಳಸಿ ನಾವು ಒಂದು ರೀತಿ ಪರಿಸರದ ರಕ್ಷಣೆಗೆ ಸಹಾಯ ಮಾಡುತ್ತೇವೆ. ಅದಕ್ಕೆ ನಿಸರ್ಗವು ನಮಗೆ ವಿಷರಹಿತ ಮತ್ತು ಶಕ್ತಿಯುತ ತರಕಾರಿ ಹಾಗೂ ರಸಭರಿತ ಹಣ್ಣುಗಳನ್ನು ನೀಡುತ್ತದೆ.

ಸಂಕಲನಕಾರರು : ಸೌ. ರಾಘವಿ ಕೋನೇಕರ, ಢವಳಿ, ಫೋಂಡಾ, ಗೋವಾ. (೨೮.೧೨.೨೦೨೧)

(ಸುಭಾಷ ಪಾಳೆಕರ ನೈಸರ್ಗಿಕ ಕೃಷಿ ತಂತ್ರದ ಮೇಲೆ ಆಧರಿಸಿದ ಲೇಖನಗಳಿಂದ ಸಂಕಲನಗೊಂಡ ಲೇಖನ)

Leave a Comment