ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ ಏನು ಮಾಡಬೇಕು?

Article also available in :

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು ಎನ್ನುತ್ತಾರೆ, ಇದರ ಕಾರಣವೇನು ?

ಮೃತ್ಯು ಒಂದು ಅನಿವಾರ್ಯ ಸತ್ಯವಾಗಿದ್ದು, ಇಂದು ಅಥವಾ ನಾಳೆ ಪ್ರತಿಯೊಂದು ಜೀವಿಗೂ ತನ್ನ ಪ್ರಾರಬ್ಧಕರ್ಮಕ್ಕನುಸಾರ ಮೃತ್ಯು ಬಂದೇ ಬರುತ್ತದೆ! ಆದರೆ ಕೆಲವೊಮ್ಮೆ ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದೇ ತೀವ್ರ ಯಾತೆಯನ್ನು ಅನುಭವಿಸುತ್ತಾನೆ. ಹೀಗಾದರೆ ಆ ವ್ಯಕ್ತಿಯ ಸಂಬಂಧಿಕರು ಏನು ಮಾಡಿ ಅವರಿಗೆ ಸಹಾಯ ಮಾಡಬಹುದು ಎಂದು ನೋಡೊಣ…

ಪ್ರಾಣ ಹೋಗದೇ ದೇಹದಲ್ಲಿಯೇ ಸಿಕ್ಕಿಹಾಕಿಕೊಳ್ಳುವುದರ ಕಾರಣ

ಪೃಥ್ವಿಯ ಮೇಲೆ ಜೀವನ ನಡೆಸುತ್ತಿರುವಾಗ ಕೆಲವು ಜನರ ಪ್ರಾಪಂಚಿಕ ಆಸೆಗಳು ಈಡೇರದೇ ಉಳಿಯುತ್ತವೆ, ಹಾಗೆಯೇ ಅವರು ತಮ್ಮ ಜೀವನದಲ್ಲಿ ಸಾಧನೆಯನ್ನೂ ಮಾಡಿರುವುದಿಲ್ಲ. ಇದರಿಂದ ಅಂತಹ ವ್ಯಕ್ತಿಗಳು ರಜ-ತಮ ಪ್ರಧಾನರಾಗುತ್ತಾರೆ. ಸೂಕ್ಷ್ಮ ಜಗತ್ತಿನ ಕೆಟ್ಟ ಶಕ್ತಿಗಳಿಗೆ ಇಂತಹ ವ್ಯಕ್ತಿಗಳ ಮರಣದ ನಂತರ ಅವರ ಲಿಂಗದೇಹಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮತ್ತು ಅವರನ್ನು ತಮ್ಮ ದಾಸರನ್ನಾಗಿ (ಗುಲಾಮರನ್ನಾಗಿ) ಮಾಡಿಕೊಳ್ಳುವುದು ಸುಲಭವಾಗುತ್ತದೆ. ಇದರಿಂದ ಅಂತಹ ವ್ಯಕ್ತಿಗಳ ಮರಣದ ಸಮಯದಲ್ಲಿ ಅವರ ಲಿಂಗದೇಹಗಳ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಮುಂದೆ ಅವರ ಮೂಲಕ ಕೆಟ್ಟ ಕಾರ್ಯಗಳನ್ನು ಮಾಡಿಸಲು ಕೆಟ್ಟ ಶಕ್ತಿಗಳು ಪರಸ್ಪರ ಪೈಪೋಟಿಯಿರುತ್ತದೆ. ಒಂದು ವೇಳೆ ಆ ವ್ಯಕ್ತಿ ಸಾಧನೆ ಮಾಡುವವರಾಗಿದ್ದರೆ, ಕೆಲವೊಮ್ಮೆ ಅವರ ಸಾಧನೆಯ ಫಲವನ್ನು ಕಸಿದುಕೊಳ್ಳಲು ಕೂಡ ಕೆಟ್ಟ ಶಕ್ತಿಗಳು ಈ ರೀತಿ ಪ್ರಯತ್ನಿಸುತ್ತವೆ. ಕೆಟ್ಟ ಶಕ್ತಿಗಳ ಪರಸ್ಪರ ಸ್ಪರ್ಧೆಯ ಪರಿಣಾಮವಾಗಿ, ಮರಣೋನ್ಮುಖ ವ್ಯಕ್ತಿಯ ಪ್ರಾಣವು ಸುಲಭವಾಗಿ ದೇಹದಿಂದ ಹೊರಹೋಗದೆ ದೇಹದಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತದೆ.

ಪ್ರಾಣವು ದೇಹದಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಮರಣೋನ್ಮುಖ ವ್ಯಕ್ತಿಗೆ ಬಹಳಷ್ಟು ಯಾತನೆಗಳಾಗುತ್ತವೆ. ಯಾತನೆಗಳಿಂದ ವ್ಯಕ್ತಿಯನ್ನು ಮುಕ್ತಗೊಳಿಸಲು ಮಾಡಬೇಕಾದ ಪರಿಹಾರೋಪಾಯಗಳನ್ನು ಮುಂದೆ ನೀಡಲಾಗಿದೆ.

ಮರಣೋನ್ಮುಖ ವ್ಯಕ್ತಿಯನ್ನು ಉಪ್ಪು-ರೊಟ್ಟಿ ಅಥವಾ ಉಪ್ಪು- ಬೇಯಿಸಿದ ಮಾಂಸದ ತುಂಡು ಇವುಗಳಿಂದ ನಿವಾಳಿಸುವುದು

ಅ. ನಿವಾಳಿಸುವುದು ಎಂದರೇನು? : ಕೆಲವು ವಸ್ತುಗಳನ್ನು ಕೆಟ್ಟ ಶಕ್ತಿಗಳಿಗೆ ಅರ್ಪಿಸಿ, ಅದರ ಮೂಲಕ ಕೆಟ್ಟ ಶಕ್ತಿಗಳ ಇಚ್ಛೆಗಳನ್ನು ತೃಪ್ತಿಪಡಿಸುವ ಪ್ರಕ್ರಿಯೆಯನ್ನು ನಿವಾಳಿಸುವುದು ಎಂದು ಕರೆಯುತ್ತಾರೆ.

ಆ. ಉಪ್ಪು-ರೊಟ್ಟಿ ಅಥವಾ ಉಪ್ಪು- ಬೇಯಿಸಿದ ಮಾಂಸದ ತುಂಡಿನಿಂದ ನಿವಾಳಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ : ಉಪ್ಪಿನಿಂದ ಹರಡುವ ರಜ-ತಮಾತ್ಮಕ ಸೂಕ್ಷ್ಮ ವಾಯುವು ಕೆಟ್ಟ ಶಕ್ತಿಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಈ ವಾಯುವು ಅತ್ಯಂತ ಹಗುರವಾಗಿರುತ್ತದೆ ಮತ್ತು ಅದು ಕೆಟ್ಟ ಶಕ್ತಿಗಳ ಸುತ್ತಲಿರುವ ವಾಯುಕೋಶಗಳಿಂದ ಕೂಡಲೇ ಗ್ರಹಿಸಲ್ಪಡುತ್ತದೆ. ಆದುದರಿಂದ ಮರಣೋನ್ಮುಖ ವ್ಯಕ್ತಿಯನ್ನು ಉಪ್ಪು-ರೊಟ್ಟಿ ಅಥವಾ ಉಪ್ಪು- ಬೇಯಿಸಿದ ಮಾಂಸದ ತುಂಡಿನಿಂದ ನಿವಾಳಿಸಬೇಕು. ಇದರಿಂದ ಕೆಲವು ಸಮಯದ ವರೆಗೆ ಆ ವ್ಯಕ್ತಿಯ ಮೇಲಿರುವ ಕೆಟ್ಟ ಶಕ್ತಿಗಳ ಹಿಡಿತವು ಕಡಿಮೆಯಾಗುತ್ತದೆ ಮತ್ತು ಆ ವ್ಯಕ್ತಿಯ ಪ್ರಾಣವು ದೇಹದಿಂದ ಸುಲಭವಾಗಿ ಹೊರಗೆ ಹೋಗುತ್ತದೆ. – ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, 21.3.2005, ರಾತ್ರಿ 9.55 ಮತ್ತು 25.12.2006, ರಾತ್ರಿ 9.55)

ಇ. ಯಾರು ನಿವಾಳಿಸಬೇಕು?

1. ಮರಣೋನ್ಮುಖ ವ್ಯಕ್ತಿಯ ಮೇಲಿಂದ ಇನ್ನೊಬ್ಬ ವ್ಯಕ್ತಿಯು ನಿವಾಳಿಸಬೇಕು.

2. ಪುರುಷರು ನಿವಾಳಿಸಬೇಕು, ಸ್ತ್ರೀಯು ನಿವಾಳಿಸಬಾರದು.

ಈ. ಮರಣೋನ್ಮುಖ ವ್ಯಕ್ತಿಗೆ ಪ್ರಾರ್ಥನೆ ಮಾಡಲು ಹೇಳುವುದು

ಮರಣೋನ್ಮುಖ ವ್ಯಕ್ತಿಯು ಪ್ರಾರ್ಥನೆ ಮಾಡುವ ಸ್ಥಿತಿಯಲ್ಲಿದ್ದರೆ, ಅವನಿಗೆ ಉಪಾಸ್ಯದೇವತೆ ಅಥವಾ ದತ್ತಾತ್ರೇಯ ದೇವರಿಗೆ ಮುಂದಿನ ಪ್ರಾರ್ಥನೆಯನ್ನು ಮಾಡಲು ಹೇಳಬೇಕು

ದೇವರೇ, ಮೃತ್ಯುವಿನ ಸಮಯದಲ್ಲಿ ಆಗುವ ವೇದನೆಗಳನ್ನು ಸಹಿಸಲು ನನಗೆ ಶಕ್ತಿ ನೀಡಿ. ನಿಮ್ಮ ಕೃಪೆಯಿಂದ ನನ್ನ ಮೃತ್ಯು ಸುಲಭವಾಗಲಿ. ನನಗೆ ಸತತವಾಗಿ ನಾಮಜಪದ ಸ್ಮರಣೆಯಾಗಲಿ. ನಿಮ್ಮ ಕೃಪೆಯಿಂದ ನನಗೆ ಸದ್ಗತಿ ದೊರೆಯಲಿ.

ಮರಣೋನ್ಮುಖ ವ್ಯಕ್ತಿಯು ಪ್ರಾರ್ಥನೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಇನ್ನೊಬ್ಬ ವ್ಯಕ್ತಿಯು ಅವನ ಕಿವಿಯಲ್ಲಿ ಮೇಲಿನ ಪ್ರಾರ್ಥನೆಯನ್ನು ಹೇಳಬೇಕು.

ಉ. ಕುಟುಂಬದವರು ಪ್ರಾರ್ಥನೆ ಮಾಡುವುದು : ಕುಟುಂಬದವರು ಕೂಡ ಮರಣೋನ್ಮುಖ ವ್ಯಕ್ತಿಗಾಗಿ ಅವನ ಹೆಸರನ್ನು ಹೇಳಿ ಮೇಲಿನಂತೆ ಪ್ರಾರ್ಥನೆ ಮಾಡಬೇಕು.

ಊ. ಮರಣೋನ್ಮುಖ ವ್ಯಕ್ತಿ ಮತ್ತು ಕುಟುಂಬದವರು ನಾಮಜಪ ಮಾಡುವುದು : ಮರಣೋನ್ಮುಖ ವ್ಯಕ್ತಿಯು ನಾಮಜಪ ಮಾಡುವ ಸ್ಥಿತಿಯಲ್ಲಿದ್ದರೆ, ಅವನಿಗೆ ಉಪಾಸ್ಯದೇವತೆ ಅಥವಾ ದತ್ತನ ನಾಮಜಪ ಮಾಡಲು ಹೇಳಬೇಕು. ಸಾಧ್ಯವಿದ್ದಲ್ಲಿ ಕುಟುಂಬದವರು ಕೂಡ ಮರಣೋನ್ಮುಖ ವ್ಯಕ್ತಿಗಾಗಿ ಈ ನಾಮಜಪವನ್ನು ಮಾಡಬೇಕು.

ನಿವಾಳಿಸುವ ಪೂರ್ಣ ಪ್ರಕ್ರಿಯೆ ತಿಳಿಯಲು ಮತ್ತು ಮೃತ್ಯುನಂತರದ ಇತರ ಕ್ರಿಯಾಕರ್ಮಗಳ ಬಗ್ಗೆ ತಿಳಿದುಕೊಳ್ಳಬೇಕೇ? ಇಂದೇ ಸನಾತನದ ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರ ಕಿರುಗ್ರಂಥ ತರಿಸಿಕೊಳ್ಳಿ. ಇಲ್ಲಿ ಕ್ಲಿಕ್ ಮಾಡಿ!

ಮರಣ ಹೊಂದುವಾಗ ನಾಲಿಗೆಯಲ್ಲಿ ನಾಮವಿರುವುದರ ಮಹತ್ವ

ಯಾವಾಗ ಜೀವವು ಮರಣ ಹೊಂದುತ್ತದೆಯೋ, ಆಗ ಅದರ ದೇಹದಲ್ಲಿರುವ ಸೂಕ್ಷ್ಮ ಊರ್ಜೆಯು ಸೂಕ್ಷ್ಮವಾಯುವಿನ ರೂಪದಲ್ಲಿ ಅದರ ದೇಹದಲ್ಲಿ ಕಾರ್ಯನಿರತವಾಗುತ್ತದೆ. ಈ ವಾಯುವಿನ ಆಧಾರದಿಂದ ಅದಕ್ಕೆ ಮುಂದಿನ ಗತಿಯು ಪ್ರಾಪ್ತವಾಗುತ್ತದೆ.

ಅ 1. ನಾಮಸಾಧನೆಯನ್ನು ಮಾಡದಿರುವವರು

ಅ. ನಾಮಸಾಧನೆಯನ್ನು ಮಾಡದಿರುವ ಜೀವಗಳಿಗೆ ಯಾವುದೇ ಆಂತರಿಕ ಊರ್ಜೆ (ನಾಮಜಪದಿಂದ ನಿರ್ಮಾಣವಾಗುವ ಸೂಕ್ಷ್ಮ ಇಂಧನ) ಅಥವಾ ಬಾಹ್ಯ ಊರ್ಜೆಯು (ಗುರು ಅಥವಾ ದೇವತೆಗಳ ಆಶೀರ್ವಾದಾತ್ಮಕ ಬಲ) ಸಿಗದಿರುವುದರಿಂದ, ಇಂತಹ ಜೀವಗಳು ಅನೇಕ ವರ್ಷ ಒಂದೇ ಯೋನಿಯಲ್ಲಿ ತಮ್ಮ ಆಸೆ-ಆಕಾಂಕ್ಷೆಗಳೊಂದಿಗೆ ಅಲೆದಾಡುತ್ತಿರುತ್ತವೆ.

ಆ. ಇಂತಹ ಲಿಂಗದೇಹಗಳಿಗೆ ಯಾವುದೇ ರೀತಿಯ ಸಂರಕ್ಷಣೆ ಇಲ್ಲದಿರುವುದರಿಂದ, ಅವು ಕೆಟ್ಟ ಶಕ್ತಿಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತವೆ ಮತ್ತು ಅನೇಕ ವರ್ಷ ಅವುಗಳ ಅಧೀನದಲ್ಲಿ ಕೆಲಸ ಮಾಡಬೇಕಾದ ಸಾಧ್ಯತೆಯು ಬಲವಾಗಿರುತ್ತದೆ.

ಇಂತಹ ಲಿಂಗದೇಹಗಳಿಗೆ ಮುಂದಿನ ಗತಿ ಸಿಗಲು ಶ್ರಾದ್ಧಕರ್ಮಗಳಿಂದ ಬಾಹ್ಯ ಬಲವನ್ನು (ಊರ್ಜೆ ಅಥವಾ ಇಂಧನ) ಪೂರೈಸುವುದು ಆವಶ್ಯಕವಾಗಿದೆ.

ಅ 2. ಮರಣ ಹೊಂದುವಾಗ ನಾಮಸ್ಮರಣೆ ಮಾಡುವವರು

ಮರಣ ಹೊಂದುವಾಗ ಜೀವವು ನಾಮಜಪ ಮಾಡುತ್ತಿದ್ದರೆ, ಅದರ ದೇಹದಲ್ಲಿ ಸಾತ್ತ್ವಿಕ ಊರ್ಜೆಯ ಪ್ರವಾಹವು ಸಂಚರಿಸುತ್ತಿರುವುದರಿಂದ ಅದು ಭೂಲೋಕದಲ್ಲಿ, ಭುವರ್ಲೋಕದಲ್ಲಿ (ಟಿಪ್ಪಣಿ) ಅಥವಾ ಇತರ ಕಡೆಗಳಲ್ಲಿ ಅಲೆದಾಡದೆ, ತನ್ನ ಕರ್ಮಕ್ಕನುಸಾರ ಕೂಡಲೇ ಮುಂದಿನ ಗತಿಯನ್ನು ಪ್ರಾಪ್ತ ಮಾಡಿಕೊಳ್ಳುತ್ತದೆ.

– ಶ್ರೀ ಗುರುತತ್ತ್ವ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, 16.3.2005, ಮಧ್ಯಾಹ್ನ 12.36)

ಟಿಪ್ಪಣಿ – ಭುವರ್ಲೋಕ : ಭುಲೋಕ (ಅಂದರೆ ಪೃಥ್ವಿ) ಮತ್ತು ಸ್ವರ್ಗಲೋಕದ ನಡುವೆ ಭುವರ್ಲೋಕವಿದೆ.

ಮರಣೋನ್ಮುಖ ವ್ಯಕ್ತಿಯ ಸಂದರ್ಭದಲ್ಲಿ ಮಾಡಬೇಕಾದ ಕೃತಿಗಳು

ಅ. ವ್ಯಕ್ತಿಯ ಪ್ರಾಣ ಹೋಗುವ ಸಮಯವು ಹತ್ತಿರ ಬಂದಿದೆ ಎಂದು ಕುಟುಂಬದವರ ಗಮನಕ್ಕೆ ಬಂದಾಗ ಮಾಡಬೇಕಾದ ಕೃತಿ

ಅ 1. ವ್ಯಕ್ತಿಯನ್ನು ಶುದ್ಧಗೊಳಿಸಿದ ನೆಲದ ಮೇಲೆ ದಕ್ಷಿಣ ದಿಕ್ಕಿನತ್ತ ತಲೆ ಮಾಡಿ ಮಲಗಿಸಬೇಕು

ಮರಣೋನ್ಮುಖ ವ್ಯಕ್ತಿಯಯನ್ನು ಮಲಗಿಸಲು ಆರಿಸಿರುವ ಸ್ಥಳದಲ್ಲಿ ಆತನನ್ನು ವ್ಯವಸ್ಥಿತವಾಗಿ ಮಲಗಿಸಿ, ಅಕ್ಕಪಕ್ಕದಲ್ಲಿ ಸ್ವಲ್ಪ ಜಾಗ ಇರುವಷ್ಟು ಸ್ಥಳವನ್ನು ಹಸುವಿನ ಸೆಗಣಿಯಿಂದ ಸಾರಿಸಬೇಕು. ಸೆಗಣಿಯಿಂದ ಸಾರಿಸಲು ಸಾಧ್ಯವಿಲ್ಲದಿದ್ದರೆ ನೆಲದ ಮೇಲೆ ಗೋಮಯ (ಹಸುವಿನ ಸೆಗಣಿ) ಅಥವಾ ಯಜ್ಞದ ವಿಭೂತಿ ಬೆರೆಸಿರುವ ನೀರನ್ನು ಸಿಂಪಡಿಸಬೇಕು. ಮನೆಗೆ ಟೈಲ್ಸ್ ಹಾಕಿದ್ದಲ್ಲಿ, ಆ ಜಾಗವನ್ನು ಗೋಮೂತ್ರಮಿಶ್ರಿತ ನೀರಿನಿಂದ (ಅಥವಾ ಗೋಮೂತ್ರ-ಅರ್ಕ ಮಿಶ್ರಿತ ನೀರಿನಿಂದ) ಒರೆಸಿಕೊಳ್ಳಬೇಕು. ನಂತರ ಆ ನೆಲದ ಮೇಲೆ ಕಪ್ಪು ಎಳ್ಳನ್ನು ಹಾಕಿ ಅವುಗಳ ಮೇಲೆ ದರ್ಭೆಯನ್ನು (ಲಭ್ಯವಿದ್ದಲ್ಲಿ) ದಕ್ಷಿಣದ ಕಡೆಗೆ ತುದಿ ಮಾಡಿ ಹರಡಬೇಕು. ಅದರ ಮೇಲೆ ಹುಲ್ಲಿನ ಚಾಪೆ, ಕಂಬಳಿ ಅಥವಾ ರಗ್ ಹಾಸಬೇಕು. ಅದರ ಮೇಲೆ ಆ ವ್ಯಕ್ತಿಯನ್ನು ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿಸಬೇಕು.

ಅ 2. ಸಾಧ್ಯವಿದ್ದಲ್ಲಿ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಬೇಕು.

ಅ 3. ವ್ಯಕ್ತಿಯ ಸುತ್ತಲೂ ದತ್ತನ ಸಾತ್ತ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಬೇಕು

ವ್ಯಕ್ತಿಯ ತಲೆ ಮತ್ತು ಪಾದಗಳ ಬಳಿ (ಪಕ್ಕದಲ್ಲಿ) ‘ಶ್ರೀ ಗುರುದೇವ ದತ್ತ’ ನಾಮಜಪದ ಒಂದೊಂದು ಪಟ್ಟಿ ಹಾಗೂ ಎಡ ಮತ್ತು ಬಲ ಬದಿಗಳಲ್ಲಿ ತಲಾ 2 ನಾಮಪಟ್ಟಿಗಳನ್ನು ಇಡಬೇಕು. ಈ ನಾಮಪಟ್ಟಿಗಳನ್ನು ಹಾಸಿರುವ ಚಾಪೆಯ ಹೊರಗೆ ಅಥವಾ ಚಾಪೆಯ ಕೆಳಗೆ ಅನುಕೂಲಕ್ಕೆ ತಕ್ಕಂತೆ ಇಡಬಹುದು.

ಹೀಗೇಕೆ ಮಾಡಬೇಕೆಂದು ತಿಳಿದುಕೊಳ್ಳಲು ದತ್ತಗುರುಗಳ ಮಹತ್ವವನ್ನು ಓದಿ…

Leave a Comment