ವಾಸ್ತುಶಾಸ್ತ್ರ ಮನುಷ್ಯ ಜೀವನದ ಒಂದು ಮಹತ್ವದ ಘಟಕವಾಗಿದೆ. ಭಗವಾನ್ ವಿಶ್ವಕರ್ಮ ತನ್ನ ಗ್ರಂಥದಲ್ಲಿ ಮೊದಲು ಗೃಹದ (ಮನೆಯ) ಬಗ್ಗೆ ಹೀಗೆ ಹೇಳಿದ್ದಾರೆ.
ಆಬ್ರಹ್ಮಭುವನಾಲ್ಲೋಕಾ ಗೃಹಸ್ಥಾಶ್ರಮಮಾಶ್ರಿತಾಃ।
ಯತಸ್ತಸ್ಮಾತ್ ಗೃಹಾರಮ್ಭಪ್ರವೇಶಸಮಯಂ ಹ್ಯಹಮ್॥ – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೨
ಅರ್ಥ : ಈ ಬ್ರಹ್ಮಲೋಕದಲ್ಲಿ ಎಷ್ಟು ಜೀವಗಳಿವೆಯೋ, ಅವೆಲ್ಲವೂ ಗೃಹಸ್ಥಾಶ್ರಮದ ಆಧಾರದ ಮೇಲೆ ತಮ್ಮ ಜೀವನವನ್ನು ನಡೆಸುತ್ತವೆ. ಆದ್ದರಿಂದ, ಆ ಮನೆಯಲ್ಲಿ ವಾಸಿಸುವವರಿಗಾಗಿ ನಾನು ಗೃಹ ನಿರ್ಮಾಣ ಮತ್ತು ಅದರ ಪ್ರವೇಶದ ಕುರಿತು ಹೇಳುತ್ತೇನೆ.
ವಾಸ್ತುವಿನ ಶುಭಾಶುಭವು ಮನುಷ್ಯನ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವುದು
ಈ ವಿಶ್ವದಲ್ಲಿ ಪ್ರತಿಯೊಂದು ಜೀವಿಯೂ ಮನೆಯ ಆಶ್ರಯದಲ್ಲಿ ವಾಸಿಸುತ್ತದೆ. ಪಶು-ಪಕ್ಷಿಗಳಿಂದ ಹಿಡಿದು ಮಾನವರವರೆಗೆ ಎಲ್ಲರೂ ಮನೆಯ ಆಶ್ರಯದಲ್ಲಿ ಜೀವನವನ್ನು ಕಳೆಯುತ್ತಾರೆ; ಆದ್ದರಿಂದ ನಮ್ಮ ಜೀವನದಲ್ಲಿ ಗೃಹದ, ಅಂದರೆ ವಾಸ್ತುವಿನ ಅಮೂಲ್ಯವಾದ ದೇಣಿಗೆಯಿದೆ. ಅದರ ಶುಭಾಶುಭವು ಮನುಷ್ಯನ ಜೀವನದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತವೆ; ಆದ್ದರಿಂದ ನಮ್ಮ ಶಾಸ್ತ್ರಗಳಲ್ಲಿ ಇದರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಲಾಗಿದೆ. ಆದರೆ ಸಮಾಜದಲ್ಲಿ ಇಂದು ಇದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಮಾತ್ರವಲ್ಲ, ಯೋಗ್ಯ ಮಾಹಿತಿ ಇಲ್ಲದಿರುವುದು ಕಂಡುಬರುತ್ತವೆ. ಸಾಮಾಜಿಕ ಮಾಧ್ಯಮಗಳ ಮೂಲಕ ವಾಸ್ತುಶಾಸ್ತ್ರದ ಕುರಿತು ಬೇರೆ-ಬೇರೆ ದೃಷ್ಟಿಕೋನಗಳು ಮುಂದೆ ಬರುತ್ತವೆ. ಇದರಿಂದಾಗಿ ಮೂಲ ಗ್ರಂಥಗಳಲ್ಲಿ ನಿಖರವಾಗಿ ಏನು ಹೇಳಲಾಗಿದೆ ಎಂಬುದರ ಬಗ್ಗೆ ಹಲವರ ಮನಸ್ಸಿನಲ್ಲಿ ಜಿಜ್ಞಾಸೆ ಇರುತ್ತದೆ.
‘ವಾಸ್ತುವು ವಾಸ್ತುಶಾಸ್ತ್ರದ ಮಾನದಂಡಗಳನ್ನು ಪೂರೈಸುತ್ತದೆಯೇ’ ಎಂಬುದರ ಅಧ್ಯಯನ ಮಾಡಬೇಕು
ಪ್ರಸ್ತುತ ಅನೇಕ ಕಟ್ಟಡ ನಿರ್ಮಾಣ ವೃತ್ತಿಪರರು ‘ನಮ್ಮ ಅಪಾರ್ಟ್ಮೆಂಟ್‌ಗಳನ್ನು ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ’ ಎಂದು ಸಲೀಸಾಗಿ ಪ್ರಚಾರ ಮಾಡುವುದು ಕಂಡುಬರುತ್ತದೆ; ಆದರೆ ನಿಜವಾಗಿಯೂ ಆ ವಾಸ್ತುವು ವಾಸ್ತುಶಾಸ್ತ್ರದ ಮಾನದಂಡಗಳನ್ನು ಪೂರೈಸುತ್ತದೆಯೇ ಎಂಬುದರ ಅಧ್ಯಯನ ಮಾಡುವ ಆವಶ್ಯಕತೆಯಿದೆ. ಆದ್ದರಿಂದ, ಎಲ್ಲರಿಗೂ ವಾಸ್ತುಶಾಸ್ತ್ರದ ಕುರಿತು ಪ್ರಾಥಮಿಕ ಮಾಹಿತಿ ಸಿಗಬೇಕು ಎಂಬ ಉದ್ದೇಶದಿಂದ, ಈ ಲೇಖನಗಳ ಮೂಲಕ ಮಾಹಿತಿಯನ್ನು ಮಂಡಿಸಲು ಪ್ರಯತ್ನಿಸುತ್ತಿದ್ದೇನೆ.
ವಾಸ್ತು ಎಂದರೇನು ಮತ್ತು ಅದರ ವ್ಯಾಪ್ತಿ
ಅ. ವಸಂತಿ ಪ್ರಾಣಿನೋ ಯತ್ರ ತದ್ ವಾಸ್ತು |
ಅರ್ಥ : ಯಾವ ಸ್ಥಳದಲ್ಲಿ ಪ್ರಾಣಿಗಳು ವಾಸಿಸುತ್ತವೆಯೋ, ಅದಕ್ಕೆ ವಾಸ್ತು ಎನ್ನುತ್ತಾರೆ.
ಆ. ಅಮರ್ತ್ಯಾಶ್ಚೈವ ಮರ್ತ್ಯಾಶ್ಚ ಯತ್ರ ಯತ್ರ ವಸಂತಿ ಹಿ |
– ಮಯಮತಮ್, ಅಧ್ಯಾಯ ೨, ಶ್ಲೋಕ ೧
ಅರ್ಥ : ಮರ್ತ್ಯ ಮತ್ತು ಅಮರ ಇಂತಹ ಜೀವಗಳು ಯಾವ ಸ್ಥಳದಲ್ಲಿ ವಾಸಿಸುತ್ತಾರೆಯೋ, ಅದಕ್ಕೆ ‘ವಾಸ್ತು’ ಎನ್ನುತ್ತಾರೆ. ಮಯನು ಎಲ್ಲಾ ಮರ್ತ್ಯ ಪ್ರಾಣಿಗಳೊಂದಿಗೆ ಅಮರರಾದ ದೇವಾದಿಗಳ ವಿಚಾರವನ್ನೂ ಇದರಲ್ಲಿ ಮಾಡಿದ್ದಾನೆ.
ಇ. ಭೂರೇವ ಮುಖ್ಯಂ ವಾಸ್ತು ತತ್ರ ಜಾತಾನಿ ಯಾನಿಹಿ |
ಪ್ರಾಸಾದಾದೀನಿ ವಸ್ತೂನಿ ವಸ್ತುತ್ವಾತ್ ವಾಸ್ತುಸಂಶ್ರಯಾತ್||
– ಸಮರಾಂಗಣಸೂತ್ರಧಾರ
ಅರ್ಥ : ಭೂಮಿ (ಪೃಥ್ವಿ) ಇದೇ ನಿಜವಾದ ವಾಸ್ತು, ಪೃಥ್ವಿಯಲ್ಲಿ ಹುಟ್ಟುವ ಜೀವಗಳ ಆಶ್ರಯಕ್ಕಾಗಿ ನಿರ್ಮಿಸಲಾದ ಪ್ರಾಸಾದಾದಿ (ಅರಮನೆ) ರಚನೆಗಳನ್ನೂ ಕೂಡ ‘ವಾಸ್ತು’ ಎಂದೇ ಕರೆಯುತ್ತಾರೆ.
ಮೇಲಿನ ವ್ಯಾಖ್ಯೆಗಳ ಅಧ್ಯಯನದಿಂದ ಭೂಮಿಯಲ್ಲಿ ಆಶ್ರಯಕ್ಕಾಗಿ ಕಟ್ಟಿದ ಪ್ರಾಸಾದಾದಿ ರಚನೆಗಳೊಂದಿಗೆ, ವಾಸಕ್ಕಾಗಿ ಆಯ್ಕೆ ಮಾಡಿದ ಮತ್ತು ನಾಲ್ಕೂ ಕಡೆಯಿಂದ ಕಟ್ಟಿದ ತೆರೆದ ಭೂಮಿಯನ್ನೂ ಸಹ ‘ವಾಸ್ತು’ ಎಂದು ಕರೆಯುತ್ತಾರೆ ಎಂದು ನಮಗೆ ತಿಳಿಯುತ್ತದೆ. ಇದಕ್ಕಾಗಿಯೇ ವಾಸ್ತುಶಾಸ್ತ್ರಜ್ಞರು ಭೂಮಿಯ ಶುಭಾಶುಭ ಮತ್ತು ಭೂಮಿ ಪರೀಕ್ಷೆಯ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿರುವುದು ಕಂಡುಬರುತ್ತದೆ. ವಾಸಕ್ಕಾಗಿ ಆಯ್ಕೆ ಮಾಡಿದ, ನಾಲ್ಕೂ ಕಡೆಗಳಿಂದ ಕಟ್ಟಿದ ಭೂಮಿಯೂ ಕೂಡ ವಾಸ್ತುವೇ ಆಗಿದೆ. ಇದನ್ನು ನಮ್ಮ ಶಾಸ್ತ್ರದಲ್ಲಿ ‘ದಿಗ್ಬಂಧನ’ ಎಂದು ಕರೆಯಲಾಗಿದೆ. ಪ್ರಾಸಾದ, ಭವನ, ಧಾಮ, ಗೃಹ, ಸದನ, ವಿಮಾನ, ಅಗಾರ, ವೇಶ್ಮ, ಸ್ಥಾನ, ಪದ, ಹರ್ಮ್ಯ, ನಿಲಯ, ಆಸ್ಪದ, ವಾಸ, ಆಲಯ, ದಮ, ಕ್ಷೇತ್ರ, ಉದ್ದಾಸಿತ, ಗೇಹ, ಸೌಧ, ಆಯತನ, ಮಂದಿರ, ಪುರಿ, ಕುಟಿ ಹೀಗೆ ಅನೇಕ ಶಬ್ದಗಳು ‘ವಾಸ್ತು’ ಶಬ್ದವನ್ನು ಪ್ರತಿನಿಧಿಸುತ್ತವೆ. ಹೀಗಿದ್ದಾಗ, ನಾವು ವಾಸಿಸುವ ಮನೆಯನ್ನು ವಾಸ್ತು ಎನ್ನಬಹುದೇ? ಹೌದು, ಅದು ಕೂಡ ವಾಸ್ತುವೇ ಆಗಿದೆ; ಆದರೆ ಶಾಸ್ತ್ರೀಯ ದೃಷ್ಟಿಯಿಂದ ನಾವು ಅದನ್ನು ‘ಭವನ’ ಎಂದು ಕರೆಯುತ್ತೇವೆ.
ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದ ಸಮತೋಲನ !
ವಾಸ್ತುಶಾಸ್ತ್ರವು ಒಂದು ಸಾಮಾಜಿಕ ಶಾಸ್ತ್ರವಾಗಿದೆ. ಆದ್ದರಿಂದ, ವಾಸ್ತುಶಾಸ್ತ್ರದ ಮೂಲ ನಿಯಮಗಳನ್ನು ಬಳಸುವಾಗ ಸಾಮಾಜಿಕ ಪರಿಸ್ಥಿತಿ, ಪರಂಪರೆ ಇತ್ಯಾದಿಗಳನ್ನು ಪರಿಗಣಿಸಬೇಕು. ನಮ್ಮ ಜೀವನ ಸುಖಮಯಗೊಳಿಸಲು ನಾವು ಪ್ರಯತ್ನಿಸುತ್ತೇವೆ; ಆದರೆ ಹಲವು ಬಾರಿ ಪ್ರಾರಬ್ಧ, ಸಂಚಿತ ಇತ್ಯಾದಿ ಕಾರಣಗಳಿಂದ ಲಾಭದಲ್ಲಿ ಕೊರತೆ ಕಾಣಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಮೂಲಕ ನಮಗೆ ಅದರ ಅರಿವಾದರೆ ವಾಸ್ತುಶಾಸ್ತ್ರವು ಅದರಲ್ಲಿ ಸ್ವಲ್ಪ ಸುಧಾರಣೆ ತಿಳಿಸುತ್ತದೆ.
ವಾಸ್ತುಶಾಸ್ತ್ರದ ಉಪಯುಕ್ತತೆ !
ಅ. ವಾಸ್ತುಶಾಸ್ತ್ರದ ನಿಯಮಗಳನ್ನು ಋಷಿಮುನಿಗಳು ತಮ್ಮ ಸಾಮರ್ಥ್ಯ, ಅಧ್ಯಯನ ಮತ್ತು ದೀರ್ಘ ಅನುಭವದಿಂದ ಸಿದ್ಧಪಡಿಸಿದ್ದಾರೆ. ಆದ್ದರಿಂದ ಆ ನಿಯಮಗಳನ್ನು ವಾಸ್ತುನಿರ್ಮಾಣದಲ್ಲಿ ಅನ್ವಯಿಸಿ ನಾವು ಅವುಗಳ ಲಾಭವನ್ನು ಪಡೆಯಬೇಕು.
ಆ. ವಾಸ್ತುಶಾಸ್ತ್ರದ ನಿಯಮಗಳನ್ನು ಪಂಚಮಹಾಭೂತಗಳು, ದಿಕ್ಕುಗಳು, ವೈಶ್ವಿಕ ಊರ್ಜೆ, ಕಾಂತೀಯ ಊರ್ಜೆ, ಭೂಗರ್ಭ ಊರ್ಜೆ, ವಿದ್ಯುತ್ ಊರ್ಜೆ ಇವುಗಳ ಅಧ್ಯಯನದಿಂದ ತಯಾರಿಸಲಾಗಿದ್ದು ಈ ಎಲ್ಲಾ ಊರ್ಜೆಗಳಿಂದ ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಗಳ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ.
ಇ. ವಾಸ್ತುಶಾಸ್ತ್ರದ ನಿಯಮಗಳು ಇಡೀ ವಿಶ್ವದಲ್ಲಿ ಒಂದೇ ರೀತಿ ಅನ್ವಯಿಸುತ್ತವೆ; ಆದ್ದರಿಂದ ಅವುಗಳ ಲಾಭವೂ ಕೂಡ ವೈಶ್ವಿಕ ಮಟ್ಟದಲ್ಲಿ ದೊರೆಯುತ್ತದೆ. ಭಾರತದಲ್ಲಿ ಅನ್ವಯಿಸುವ ನಿಯಮಗಳೇ ಪೃಥ್ವಿಯ ಮೇಲಿನ ಯಾವುದೇ ಭಾಗದಲ್ಲಿಯೂ ಅನ್ವಯಿಸುತ್ತವೆ; ಏಕೆಂದರೆ ಪಂಚಮಹಾಭೂತಗಳು ಮತ್ತು ಶಕ್ತಿಗಳು ಇಡೀ ವಿಶ್ವದಲ್ಲಿ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಈ. ಭೂಮಿಯ ಸುತ್ತಲಿನ ಓಝೋನ್ ಆವರಣವು ಸೂರ್ಯನ ತೊಂದರೆದಾಯಕ ಕಿರಣಗಳನ್ನು ತಡೆದು, ಲಾಭದಾಯಕ ಕಿರಣಗಳ ಪ್ರಯೋಜನವನ್ನು ಜೀವಸೃಷ್ಟಿಯ ಬೆಳವಣಿಗೆಗೆ ನೀಡುವಂತೆ, ವಾಸ್ತುಶಾಸ್ತ್ರದ ಪ್ರಕಾರ ಎಲ್ಲಾ ಊರ್ಜೆಯನ್ನು ಸರಿಯಾಗಿ ಸಮತೋಲನಗೊಳಿಸಿ ನಿರ್ಮಿಸಿದ ವಾಸ್ತುವು ಆ ವಾಸ್ತುವಿನಲ್ಲಿ ವಾಸಿಸುವವರನ್ನು ರಕ್ಷಿಸುತ್ತದೆ ಮತ್ತು ಅವರ ಪ್ರಗತಿಗೆ ಲಾಭದಾಯಕವಾಗುತ್ತದೆ.
ಉ. ವರಾಹಮಿಹಿರರು ತಮ್ಮ ಗ್ರಂಥದಲ್ಲಿ ಮುಂದಿನಂತೆ ಹೇಳಿದ್ದಾರೆ:
ವಾಸ್ತುಶಾಸ್ತ್ರಂ ಪ್ರವಕ್ಷ್ಯಾಮಿ ಲೋಕಾನಾಂ ಹಿತಕಾಮ್ಯಯಾ |
ಆರೋಗ್ಯಂ ಪುತ್ರಲಾಭಂ ಚ ಧನಂ ಧಾನ್ಯಂ ಲಭೇನ್ನರಃ || – ಬೃಹತ್ಸಂಹಿತಾ
ಅರ್ಥ : ನಾನು ಜನರ ಹಿತಕ್ಕಾಗಿ ವಾಸ್ತುಶಾಸ್ತ್ರವನ್ನು ಹೇಳುತ್ತೇನೆ. ಇದರ ಮೂಲಕ ಮನುಷ್ಯನಿಗೆ ಆರೋಗ್ಯ, ಸಂತತಿ, ಧನ-ಧಾನ್ಯ ಇತ್ಯಾದಿಗಳ ಲಾಭವಾಗುತ್ತದೆ.
ಹೀಗೆ ಅಧ್ಯಯನ ಮಾಡಿ ವಾಸ್ತುವನ್ನು ನಿರ್ಮಿಸಿದರೆ ಮನುಷ್ಯನ ಸರ್ವಾಂಗೀಣ ಪ್ರಗತಿಯಾಗುತ್ತದೆ. ಆರೋಗ್ಯದ ದೃಷ್ಟಿಯಲ್ಲಿ, ವಾಸ್ತುವಿನಲ್ಲಿರುವ ಅಸಮತೋಲಿತ ಶಕ್ತಿಯು ಮನುಷ್ಯನ ಶರೀರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಯೋಗ್ಯ ಸಮತೋಲನದ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಅಧ್ಯಯನ ಮಾಡಲಾಗಿದೆ.
ಊ. ವಾಸ್ತುಶಾಸ್ತ್ರಕ್ಕನುಸಾರ ಮಾಡಿದ ಉಪಾಯಗಳು ಅಲ್ಪಾವಧಿಯಲ್ಲಿ ಲಾಭದಾಯಕವಾಗಿ ಅವುಗಳ ಸಕಾರಾತ್ಮಕ ಪರಿಣಾಮವು ಕಂಡುಬರುತ್ತದೆ.
ಋ. ವಾಸ್ತುಶಾಸ್ತ್ರದಲ್ಲಿ ಶ್ರೀಮಂತ ಮತ್ತು ಬಡವ ಎಂಬ ಭೇದವಿಲ್ಲ. ೧೦೦೦ ಚದರ ಮೀಟರ್ ಜಾಗಕ್ಕೆ ಅನ್ವಯಿಸುವ ನಿಯಮಗಳು ೧೦೦ ಚದರ ಮೀಟರ್‌ಗೂ ಅನ್ವಯಿಸುತ್ತವೆ. ಆದ್ದರಿಂದ, ಜಾಗವು ದೊಡ್ಡದಿರಲಿ ಚಿಕ್ಕದಿರಲಿ, ನಾವು ಶಾಸ್ತ್ರದ ನಿಯಮಗಳಿಗನುಸಾರ ನಿರ್ಮಾಣ ಮಾಡಬಹುದು. ವಾಸ್ತುಶಾಸ್ತ್ರದಲ್ಲಿ ಪ್ರತಿಯೊಬ್ಬರಿಗೂ ಲಭ್ಯವಿರುವ ಸಮಯ, ಹಣ ಮತ್ತು ಶ್ರಮಕ್ಕೆ ಅನುಗುಣವಾಗಿ ವಾಸ್ತು ಉಪಾಯಗಳನ್ನು ಮಾಡಬಹುದು.
ಎ. ಹಿಂದೂ ಧರ್ಮದಲ್ಲಿ ವಾಸ್ತುಶಾಸ್ತ್ರದ ಜ್ಞಾನದ ಉಗಮವಾಗಿದ್ದರೂ, ಆ ಶಾಸ್ತ್ರವು ಎಲ್ಲಾ ಜಾತಿ-ಧರ್ಮದ ಜನರಿಗೆ ಲಾಭದಾಯಕವಾಗಿದೆ. ‘ವಸುಧೈವ ಕುಟುಂಬಕಮ್’ (ಇಡೀ ಪೃಥ್ವಿ ಒಂದು ಕುಟುಂಬ) ಎಂಬ ಉಕ್ತಿಯ ಅನುಭವವನ್ನು ನಾವು ವಾಸ್ತುಶಾಸ್ತ್ರದ ಮೂಲಕ ಪಡೆಯಬಹುದು.
ಏ. ವಾಸ್ತುಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಬದಲಾವಣೆಗಳನ್ನು ಮಾಡಿದರೆ, ಮನೆಯಲ್ಲಿನ ಮಾನಸಿಕ ಸಂಘರ್ಷ, ವಾದ-ವಿವಾದ, ಜಗಳಗಳು ಕಡಿಮೆಯಾಗಿ ಮನೆಯಲ್ಲಿರುವ ಎಲ್ಲರ ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ; ಏಕೆಂದರೆ ಹಲವು ಬಾರಿ ಮಾನಸಿಕ ವಿಕಾರ ಅಥವಾ ಸಂಘರ್ಷದ ಕಾರಣವು ಕಲುಷಿತ ವಾಸ್ತುವಾಗಿರುತ್ತದೆ.
ಐ. ಕಾರ್ಖಾನೆಗಳು, ಅಂಗಡಿಗಳು, ಕಛೇರಿಗಳು ಇತ್ಯಾದಿ ವ್ಯವಸಾಯಿಕ ವಾಸ್ತುಗಳಲ್ಲಿ ಊರ್ಜೆಯಂತೆ ಸೂಕ್ತ ಬದಲಾವಣೆಗಳನ್ನು ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದು. ಆಸ್ಪತ್ರೆ ಇತ್ಯಾದಿಗಳನ್ನು ಯೋಗ್ಯ ರೀತಿಯಲ್ಲಿ ರಚಿಸಿ ರೋಗಿಗಳ ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಬಹುದು.
ಒ. ವಾಸ್ತುಶಾಸ್ತ್ರದಲ್ಲಿ ಮನೆಯ ಸುತ್ತಲಿನ ದಿಕ್ಕಿನಲ್ಲಿ ಯಾವ ಮರಗಳನ್ನು ನೆಡಬೇಕು ಎಂಬ ಮಾಹಿತಿಯಿರುವುದರಿಂದ, ನಾವು ಪರಿಸರದ ಸಮತೋಲನವನ್ನು ಕಾಪಾಡಬಹುದು.
ಓ. ನಾವು ವಾಸ್ತುಶಾಸ್ತ್ರದ ನಿಯಮಕ್ಕನುಸಾರ ವಾಸ್ತು ನಿರ್ಮಿಸುತ್ತೇವೆ, ವ್ಯಾಪಕ ಸ್ವರೂಪದಲ್ಲಿ ನಾವು ನಗರ ಅಥವಾ ರಾಜ್ಯ ರಚನೆಯಲ್ಲಿ ವಾಸ್ತುಶಾಸ್ತ್ರದಂತೆ ವಿಚಾರ ಮಾಡಿದರೆ, ಆ ನಗರ ಅಥವಾ ರಾಜ್ಯದಲ್ಲಿ ವಾಸಿಸುವವರಿಗೆ ವ್ಯಾಪಕ ಸ್ತರದಲ್ಲಿ ಲಾಭವಾಗಬಹುದು.
ಔ. ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಿದರೆ ಮತ್ತು ವಾಸ್ತುವಿನಲ್ಲಿನ ಊರ್ಜೆಯನ್ನು ಯೋಗ್ಯ ರೀತಿಯಲ್ಲಿ ಸಮತೋಲನಗೊಳಿಸಿದರೆ ಮತ್ತು ವಾಸ್ತುವಿನ ಯಾವ ಕೋಣೆಯಲ್ಲಿ ಕುಳಿತು ಉಪಾಸನೆ ಮಾಡಬೇಕು; ಯಾವ ಕೋಣೆಯಲ್ಲಿ ಸತ್ಸಂಗ, ಯೋಜನೆ, ಸಭೆಗಳು ಇತ್ಯಾದಿಗಳನ್ನು ನಡೆಸಬೇಕು ಇತ್ಯಾದಿ ಅಂಶಗಳನ್ನು ಅಧ್ಯಯನ ಮಾಡಿ ರಚಿಸಿದರೆ, ಆಯಾ ಕೋಣೆಯಲ್ಲಿನ ಶಕ್ತಿಯ ಲಾಭವನ್ನು ನಾವು ಪಡೆದು ವೇಗವಾಗಿ ಪ್ರಗತಿಯನ್ನು ಸಾಧಿಸಬಹುದು ಮತ್ತು ಅಸಮತೋಲಿತ ವಾಸ್ತುವಿನಿಂದ ಸಂಘರ್ಷದಲ್ಲಿ ಖರ್ಚಾಗುವ ನಮ್ಮ ಸಾಧನೆಯ ಶಕ್ತಿಯನ್ನು ಉಳಿಸಬಹುದು.
(ಲೇಖನದಲ್ಲಿ ಬಳಸಿದ ಆಧಾರ ಗ್ರಂಥಗಳು : ವಿಶ್ವಕರ್ಮ ಪ್ರಕಾಶ, ಮಯಮತಮ್, ವಾಲ್ಮೀಕಿ ರಾಮಾಯಣ, ಸಮರಾಂಗಣ ಸೂತ್ರಧಾರ, ಅಪರಾಜಿತಪೃಚ್ಛಾ, ಮಾನಸಾರ, ಮಹಾಭಾರತ)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ)
ವಾಸ್ತು ಪದವಿನ್ಯಾಸ
ಶಕ್ತಿ(ಊರ್ಜೆ) ಮತ್ತು ವಾಸ್ತುಶಾಸ್ತ್ರ !
ಭೂಮಿಯ ಶುಭಾಶುಭ ಫಲ ಮತ್ತು ಭೂಮಿ ಪರೀಕ್ಷಣೆ
ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು
ದಿಕ್ಕುಗಳ ಮಹತ್ವ ಮತ್ತು ದಿಕ್ಕು-ಉಪದಿಕ್ಕುಗಳ ಅನ್ಯೋನ್ಯತೆ
ವಾಸ್ತುಶಾಸ್ತ್ರ ಮತ್ತು ವಿಶ್ವ