ವನಸ್ಪತಿಗಳಿಗನುಸಾರ ಶುಭವಾಗುವ ಭೂಮಿ
ಕುಶಕಾಶಯುತಾ ಬ್ರಾಹ್ಮೀ ದೂರ್ವಾ ನೃಪತಿವರ್ಗಗಾ ।
ಫಲಪುಷ್ಪಲತಾವೈಶ್ಯಾ ಶೂದ್ರಾಣಾಂ ತೃಣಸಂಯುತಾ । – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೩೪ ಮತ್ತು ೩೫
ಅರ್ಥ : ದರ್ಭೆ ಮತ್ತು ಕೊರನಾರಿ ಇರುವ ಭೂಮಿಯು ಬ್ರಾಹ್ಮಣ ವರ್ಣದವರಿಗೆ (ಬುದ್ಧಿಜೀವಿಗಳಿಗೆ) ಶುಭ ದಾಯಕವಾಗಿರುತ್ತದೆ. ಗರಿಕೆ ಇರುವ ಭೂಮಿಯು ಕ್ಷತ್ರಿಯರಿಗೆ, ಹಣ್ಣು-ಹೂವು ಬಳ್ಳಿಗಳಿಂದ ಕೂಡಿದ ಭೂಮಿಯು ವೈಶ್ಯರಿಗೆ ಮತ್ತು ಕೇವಲ ಸಾಮಾನ್ಯ ಹುಲ್ಲು ಇರುವ ಭೂಮಿಯು ಶೂದ್ರ ವರ್ಣದವರಿಗೆ ಶುಭದಾಯಕವಾಗಿರುತ್ತದೆ. ಇಲ್ಲಿ ‘ವರ್ಣ’ ಎನ್ನುವುದು ವ್ಯಕ್ತಿಯ ಗುಣ ಮತ್ತು ಮಾಡುವ ಕೆಲಸಕ್ಕೆ (ಗುಣಕರ್ಮಕ್ಕೆ) ಅನುಗುಣವಾಗಿರಬೇಕು.
ಕುಶಕಾಶಾನ್ವಿತಾ ಬ್ರಹ್ಮವರ್ಚಸಾನ್ ಕುರುತೇ ಸುತಾನ್ ।
ದೂರ್ವಾನ್ವಿತಾ ವೀರಜನಿ: ಫಲಾಢ್ಯಾ ಧನಪುತ್ರದಾ ।। – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೫೩
ಅರ್ಥ : ದರ್ಭೆ ಮತ್ತು ಕೊರನಾರಿಯುಕ್ತ ಭೂಮಿಯಲ್ಲಿ ವಾಸಿಸುವುದರಿಂದ ಬ್ರಾಹ್ಮತೇಜಯುಕ್ತ ಮಕ್ಕಳು ಜನಿಸುತ್ತಾರೆ. ಗರಿಕೆ ಹುಲ್ಲು ಹೆಚ್ಚಾಗಿರುವ ಜಾಗದಲ್ಲಿ ಶೂರ ಪುರುಷರು ಜನಿಸುತ್ತಾರೆ. ಭೂಮಿಯಲ್ಲಿ ಹೇರಳ ಹಣ್ಣುಗಳಿದ್ದರೆ ಅಂತಹ ಭೂಮಿಯು ಧನಸಂಪತ್ತು ಮತ್ತು ಸಂತಾನ ಭಾಗ್ಯವನ್ನು ನೀಡುತ್ತದೆ.
ಪರಿಸರಕ್ಕೆ ಅನುಗುಣವಾಗಿ ಭೂಮಿಯ ಪರೀಕ್ಷಣೆ
ನದೀಘಾತಾಶ್ಚಿತಾಂ ತದ್ವನ್ಮಹಾಪಾಷಾಣಸಂಯುತಾಮ್ ।।
ಪರ್ವತಾಗ್ರೇಷು ಸಂಲಗ್ನಾಂ ಗರ್ತಾಂ ವಿವರಸಂಯುತಾಮ್ ।
ವಕ್ರಾಂ ಸೂರ್ಯನಿಭಾಂ ತದ್ವಲ್ಲಕುಟಾಭಾಂ ಕುರೂಪಿಣೀಮ್ ।।
ಮುಸಲಾಭಾಂ ಮಹಾಘೋರಾಂ ವಾಯುನಾ ವಾಪಿ ಪೀಡಿತಾಮ್ ।
ಭಲ್ಲಭಲ್ಲೂಕಸಂಯುಕ್ತಾಂ ಮಧ್ಯೇ ವಿಕಟರೂಪಿಣೀಮ್ ।।
ಶ್ವಶ್ರೃಗಾಲನಿಭಾಂ ರೂಕ್ಷಾಂ ದನ್ತಕೈ: ಪರಿವಾರಿತಾಮ್ ।
ಚೈತ್ಯಮಶ್ಮಶಾನವಲ್ಮೀಕಧೂರ್ತಕಾಲಯವರ್ಜಿತಾಮ್ ।।
ಚತುಷ್ಪದ ಮಾಹವೃಕ್ಷ ದೇವಮನ್ನಿವಾಸಿತಾಮ್ ।
ದೂರಾಶ್ರಿತಾಂಚ ಭೂಗರ್ತಯುಕ್ತಾಂ ಚೈವ ವಿವರ್ಜಯೇತ್ ।। – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೩೫ ರಿಂದ ೩೯
ಅರ್ಥ : ನದಿಯ ಪ್ರವಾಹಕ್ಕೆ ತುತ್ತಾಗುವ, ಬೃಹತ್ ಬಂಡೆಗಳಿಂದ ಕೂಡಿದ, ಪರ್ವತದ ಶಿಖರದ ಹತ್ತಿರವಿರುವ, ಗುಂಡಿಗಳು ಮತ್ತು ಬಿರುಕುಗಳಿಂದ ತುಂಬಿದ ಭೂಮಿಯನ್ನು ನಿವಾಸಕ್ಕಾಗಿ ಬಳಸಬಾರದು. ಹಾಗೆಯೇ ವಕ್ರವಾದ, ಮೊರದ ಆಕಾರದ, ದಂಡದ ಆಕಾರದ ಅಥವಾ ಒರಟಾದ ಮತ್ತು ಅತಿಯಾದ ಗಾಳಿ ಬೀಸುವ ಜಾಗಗಳು ಅಶುಭವಾಗಿರುತ್ತವೆ. ಕರಡಿಗಳಂತಹ ಕಾಡುಪ್ರಾಣಿಗಳ ವಾಸವಿರುವ, ನೋಡಲು ಕುರೂಪಿಯಾಗಿರುವ, ನಾಯಿ ಅಥವಾ ನರಿಯ ಆಕಾರವನ್ನು ಹೋಲುವ ರುಕ್ಷ ಭೂಮಿಯು ವಾಸಕ್ಕೆ ಯೋಗ್ಯವಲ್ಲ. ಇದಲ್ಲದೆ, ಆನೆಗಳಿಂದ ಆವೃತ್ತವಾದ, ಚೈತ್ಯ, ಸ್ಮಶಾನ, ಹುತ್ತಗಳು ಅಥವಾ ನರಿಗಳ ಆಶ್ರಯತಾಣವಾಗಿರುವ ಭೂಮಿಯನ್ನು ವಾಸಕ್ಕಾಗಿ ಸಂಪೂರ್ಣವಾಗಿ ವರ್ಜಿಸಬೇಕು. ನಾಲ್ಕು ರಸ್ತೆಗಳು ಬಂದು ಸಂಧಿಸುವ ಜಾಗ, ಬೃಹತ್ ಮರಗಳಿರುವ ಅಥವಾ ದೇವಸ್ಥಾನಗಳ ಹತ್ತಿರವಿರುವ ಭೂಮಿ, ಸಚಿವರ ಅಥವಾ ಮಂತ್ರಿಗಳ ಮನೆಗಳಿರುವ ಜಾಗ, ನಗರದಿಂದ ಅಥವಾ ಮುಖ್ಯ ರಸ್ತೆಯಿಂದ ಬಹಳ ದೂರವಿರುವ ಭೂಮಿ, ಹಲವಾರು ಗುಂಡಿ-ಹಳ್ಳಗಳಿರುವ ಭೂಮಿಯನ್ನು ವಾಸಕ್ಕಾಗಿ ಬಳಸಬಾರದು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವ ಸ್ಥಳದಲ್ಲಿ ಮನುಷ್ಯನ ಆರೋಗ್ಯದ ಮೇಲೆ ಮತ್ತು ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದೋ, ಅಥವಾ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆಯೋ ಹಾಗೂ ಕಟ್ಟಡಕ್ಕೆ (ವಾಸ್ತುವಿಗೆ) ಅಪಾಯವಿರುತ್ತದೆಯೋ, ಅಂತಹ ಭೂಮಿಯನ್ನು ವಾಸ್ತುಶಾಸ್ತ್ರಜ್ಞರು ಕಟ್ಟಡ ನಿರ್ಮಾಣಕ್ಕೆ ನಿಷೇಧಿಸಿದ್ದಾರೆ (ವರ್ಜ್ಯವೆಂದು ಹೇಳಿದ್ದಾರೆ).
ಭೂಮಿ ಪರೀಕ್ಷಣೆ
ನಾವು ವಾಸ್ತು ನಿರ್ಮಿತಿಗಾಗಿ ಯಾವ ಜಾಗವನ್ನು ಆಯ್ದುಕೊಳ್ಳುತ್ತೇವೋ, ಅಲ್ಲಿನ ಸ್ಪಂದನಗಳು ಮತ್ತು ಊರ್ಜೆಯು ವಾಸ್ತು ಮಾಲಿಕನ ದೃಷ್ಟಿಯಲ್ಲಿ ಅನುಕೂಲವಿರುವುದು ಆವಶ್ಯಕವಾಗಿರುತ್ತದೆ. ಭೂಮಿಯ ಏರು-ಇಳಿತ ಇತ್ಯಾದಿ ಸ್ಥೂಲ ವಿಷಯಗಳ ಬಗ್ಗೆ ನಾವು ಅಧ್ಯಯನ ಮಾಡಲೇಬೇಕು; ಆದರೆ ಆ ಭೂಮಿಯ ಮಾಲಿಕನ ಅದೃಷ್ಟಕ್ಕೆ ಇರುವ ಸಂಬಂಧವನ್ನು ಪರಿಶೀಲಿಸಬೇಕು, ಅಂದರೆ ಭೂಮಿಯು ಅವನಿಗೆ ಅದೃಷ್ಟ ತರುತ್ತದೆಯೇ ಅಥವಾ ಇಲ್ಲವೇ ಎಂಬುವುದರ ಅಧ್ಯಯನವು ಅತ್ಯಂತ ಮಹತ್ವದ್ದಾಗಿದೆ.
ಅಲ್ಲಿನ ಸ್ಪಂದನಗಳ ಬಗ್ಗೆ ಅಧ್ಯಯನ ಮಾಡಲು ಸೂಕ್ಷ್ಮ ಸ್ಪಂದನಗಳ ಜ್ಞಾನ, ಹಾಗೆಯೇ ಸಾಧನೆ ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಪ್ರತಿಯೊಬ್ಬರಿಗೂ ಅದು ಸಾಧ್ಯವಾಗುವುದಿಲ್ಲ ಅಥವಾ ಅದರಲ್ಲಿ ಯೋಗ್ಯ ಉತ್ತರ ದೊರಕಲು ಅನಿಷ್ಟ ಶಕ್ತಿಗಳ ಅಡೆತಡೆಗಳು ಬರುವ ಸಾಧ್ಯತೆ ಇರುತ್ತದೆ, ಇವುಗಳಿಗಾಗಿ ಎಲ್ಲ ದೃಷ್ಟಿಗಳಿಂದ ಬೂಮಿಯ ಅಧ್ಯಯನ ಮಾಡಲು ಶಾಸ್ತ್ರಕಾರರು ಕೆಲವು ಭೂಮಿಗಳನ್ನು ಪರೀಕ್ಷಿಸಲು ಹೇಳಿದ್ದಾರೆ. ಆ ಕುರಿತು ನಾವು ತಿಳಿದುಕೊಳ್ಳೋಣ.
ಯಾವ ಭೂಮಿಯನ್ನು ಪರೀಕ್ಷಿಸುವುದಿದೆಯೋ, ಆ ಭೂಮಿಯ ಮೇಲೆ ನಿಂತುಕೊಳ್ಳಬೇಕು. ಯಾವ ವ್ಯಕ್ತಿ ಪರೀಕ್ಷಿಸುವನೋ, ಅವರು ಶುಭ ದಿನದಂದು ಉಪವಾಸ ಮಾಡಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಯಾವ ಭೂಮಿಯ ಪರೀಕ್ಷೆ ಮಾಡಬೇಕಿದೆಯೋ, ಅದನ್ನು ನಮಸ್ಕರಿಸಿ ಯಜಮಾನನು ವ್ರತಸ್ಥನಾಗಿ ಅದರ ಪೂಜೆಯನ್ನು ಮಾಡಬೇಕು ಮತ್ತು ಅದಕ್ಕೆ ಮುಂದಿನಂತೆ ಪ್ರಾರ್ಥಿಸಬೇಕು.
ಅಸ್ಮಿನ್ ವಸ್ತುನಿ ವರ್ಧಸ್ವ ಧನಧಾನ್ಯೇನ ಮೇದಿನಿ ।
ಉತ್ತಮಂ ವೀರ್ಯಮಾಸ್ಥಾಯ ನಮಸ್ತೇಸ್ತು ಶಿವಾ ಭವ ।। – ಮಯಮತಮ್, ಅಧ್ಯಾಯ ೪, ಶ್ಲೋಕ ೧೪, ೧೫
ಅರ್ಥ : ಹೇ ಭೂಮಿಯೇ, ಈ ಜಾಗದ ಮೇಲೆ ಧನಧಾನ್ಯಗಳನ್ನು ವೃದ್ಧಿ ಮಾಡುವವಳಾಗು! ಅತ್ಯಂತ ಫಲವತ್ತಾಗು! ಉತ್ತಮ ಶಕ್ತಿಯನ್ನು ನೀಡುವವಳಾಗು! ನಾನು ನಿನಗೆ ನಮಸ್ಕರಿಸುತ್ತೇನೆ. ನೀನು ಶುಭವನ್ನು ಪ್ರದಾನಿಸುವವಳಾಗು!
ಅ. ಪರೀಕ್ಷೆ ಕ್ರ. ೧ (ಭೂಮಿಯ ಘನತೆ)
ನಿಖನೇದ್ಧಸ್ತಮಾತ್ರೇಣ ಪುನಸ್ತೇನೈವ ಪೂರಯೇತ್ ।
ಪಾಂಸುನಾಧಿಕಮಧ್ಯೋನಾ ಶ್ರೇಷ್ಠಾ ಮಧ್ಯಾಧಮಾಕ್ರಮಾತ್ ।। – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೬೧
ಅರ್ಥ : ಯಜಮಾನನ ಒಂದು ಕೈಯಷ್ಟು ಉದ್ದ, ಒಂದು ಕೈಯಷ್ಟು ಅಗಲ ಮತ್ತು ಒಂದು ಕೈಯಷ್ಟು ಆಳ (ಸುಮಾರು ೩ x ೩ x ೩) ಗುಂಡಿಯನ್ನು ತೋಡಬೇಕು. ತೋಡಿದ ಮಣ್ಣನ್ನು ಪುನಃ ತಗ್ಗಿನಲ್ಲಿ ತುಂಬಬೇಕು. ತಗ್ಗು ತುಂಬಿದ ನಂತರ ಮಣ್ಣು ಉಳಿದರೆ, ಭೂಮಿಯು ಉತ್ತಮ ದರ್ಜೆಯದ್ದೆಂದು ತಿಳಿಯಬೇಕು, ತಗ್ಗು ತುಂಬಿದ ನಂತರ ಮಣ್ಣು ಉಳಿಯದಿದ್ದರೆ, ಆ ಭೂಮಿಯು ಮಧ್ಯಮ ದರ್ಜೆಯದೆಂದು ತಿಳಿಯಬೇಕು ಮತ್ತು ಮಣ್ಣಿನಿಂದ ತಗ್ಗು ಪೂರ್ತಿ ತುಂಬದಿದ್ದರೆ, ಆ ಭೂಮಿಯು ಕನಿಷ್ಟ ದರ್ಜೆಯದೆಂದು ತಿಳಿಯಬೇಕು.
ಆ. ಪರೀಕ್ಷೆ ಕ್ರ. ೨ (ಭೂಮಿಯ ಆರ್ದ್ರತೆ)
ಜಲೇನಾಪೂರಯೇಚ್ಛ್ವಭ್ರಂ ಶೀಘ್ರಂ ಗತ್ವಾ ಪದೈ: ಶತಮ್ ।
ತಥೈವಾಗಮ್ಯ ವೀಕ್ಷೇತ ನ ಹೀನಸಲಿಲಾ ಶುಭಾ ।। – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೬೨
ಅರ್ಥ : ಮೇಲಿನಂತೆ ಒಂದು ಕೈ ಅಳತೆಯಷ್ಟು ಗುಂಡಿಯನ್ನು ನೀರಿನಿಂದ ತುಂಬಿದ ತಕ್ಷಣ ೧೦೦ ಹೆಜ್ಜೆ ದೂರ ಹೋಗಿ ಪುನಃ ಗುಂಡಿಯ ಹತ್ತಿರ ಬಂದು ನೀರಿನ ಮಟ್ಟವನ್ನು ನೋಡಬೇಕು. ನೀರು ಸ್ವಲ್ಪವೂ ಇಂಗದಿದ್ದರೆ (೧ ಅಂಗುಲದಷ್ಟು ಕಡಿಮೆಯಾಗಿದ್ದರೆ), ಆ ಭೂಮಿಯು ಉತ್ತಮ ದರ್ಜೆಯದೆಂದು ತಿಳಿಯಬೇಕು, ೨ ಅಂಗುಲಗಳ ವರೆಗೆ ನೀರು ಇಂಗಿದ್ದರೆ, ಮಧ್ಯಮ ದರ್ಜೆಯದ್ದು ಮತ್ತು ೩ ಅಂಗುಲಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ನೀರು ಇಂಗಿದ್ದರೆ, ಆ ಭೂಮಿಯು ಕನಿಷ್ಟ ದರ್ಜೆಯದ್ದೆಂದು ತಿಳಿಯಬೇಕು.
ಇ. ಪರೀಕ್ಷೆ ಕ್ರ. ೩
ಹಣತೆಗಳ ಮೂಲಕ ಯಾವ ವರ್ಣಕ್ಕಾಗಿ ಭೂಮಿಯು ಉತ್ತಮವಾಗಿದೆ, ಎಂಬುದರ ಪರೀಕ್ಷಣೆ ಮಾಡುವುದು.
ಅರತ್ನಿಮಾತ್ರೇ ಶ್ವಭ್ರೇ ವಾ ಹ್ಯನುಲಿಪ್ತೇ ಚ ಸರ್ವತ: ।।
ಘೃತಮಾಮಶರಾವಸ್ಥಂ ಕೃತ್ವಾ ವರ್ತಿಚತುಷ್ಟಯಮ್ ।
ಜ್ವಾಲಯೇದ್ಭೂಪರೀಕ್ಷಾರ್ಥಂ ಸಂಪೂರ್ಣಂ ಸರ್ವದಿಙ್ಮುಖಮ್ ।।
ದೀಪ್ತಾ ಪೂರ್ವಾದಿ ಗೃಹ್ಣೀಯಾದ್ವರ್ಣಾನಾಮನುಪೂವಶ: । – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೬೨, ೬೩ ಮತ್ತು ೬೪
ಅರ್ಥ : ಮೇಲಿನಂತೆ ಒಂದು ಕೈ ಅಳತೆಯ ಗುಂಡಿಯನ್ನು ತೋಡಿ ಅದನ್ನು ಒಳಗಿನಿಂದ ಎಲ್ಲ ಬದಿಯಲ್ಲಿ ಸಾರಿಸಬೇಕು. ಆ ಗುಂಡಿಯಲ್ಲಿ ತುಪ್ಪದಿಂದ ತುಂಬಿದ ಮಣ್ಣಿನ ಹಣತೆಗಳನ್ನಿಟ್ಟು ೪ ಮುಖ್ಯ ದಿಕ್ಕುಗಳಿಗೆ, ೪ ಬತ್ತಿಗಳನ್ನು ಹಚ್ಚಬೇಕು. ಯಾವ ದಿಕ್ಕಿನಲ್ಲಿ ಜ್ಯೋತಿಯು ಎತ್ತರವಾಗಿ ಉರಿಯುತ್ತದೆಯೋ, ಅದಕ್ಕನುಸಾರ ಭೂಮಿಯ ವರ್ಣವನ್ನು ತಿಳಿಯಬೇಕು. ಪೂರ್ವದಿಕ್ಕಿಗೆ ಇದ್ದರೆ ಬ್ರಾಹ್ಮಣವರ್ಣ, ದಕ್ಷಿಣದಿಕ್ಕಿಗೆ ಇದ್ದರೆ ಕ್ಷತ್ರಿಯ, ಪಶ್ಚಿಮದಲ್ಲಿದ್ದರೆ ವೈಶ್ಯ ಮತ್ತು ಉತ್ತರಕ್ಕೆ ಇದ್ದರೆ ಶೂದ್ರವರ್ಣವೆಂದು ತಿಳಿಯಬೇಕು.
ಈ. ಪರೀಕ್ಷೆ ಕ್ರ. ೪ (ಬಿತ್ತನೆ ಮತ್ತು ಮೊಳಕೆಯ ಆಧಾರದಿಂದ ಪರೀಕ್ಷಣೆ)
ಹಲಾಕೃಷ್ಟೇ ತಥೋದ್ದೇಶೇ ಸರ್ವಬೀಜಾನಿ ವಾಪಯೇತ್ ||
ತ್ರಿಪನ್ಚಸಪ್ತರಾತ್ರೇಣ ನ ಪ್ರರೋಹನ್ತಿ ತಾನ್ಯಪಿ |
ಉಪ್ತ ಬೀಜಾ ತ್ರಿರಾತ್ರೇಣ ಸಾಂಕುರಾ ಶೋಭನಾ ಮಹೀ ||
ಮಧ್ಯಮಾ ಪನ್ಚರಾತ್ರೇಣ ಸಪ್ತರಾತ್ರೇಣ ನಿನ್ದಿತಾ | – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೬೪, ೬೫ ಮತ್ತು ೬೬
ಅರ್ಥ : ನೇಗಿಲಿನಿಂದ ಹದಗೊಳಿಸಿದ ಭೂಮಿಯಲ್ಲಿ ಎಲ್ಲ ರೀತಿಯ ಧಾನ್ಯ (ಭತ್ತ, ಹೆಸರು, ಗೋದಿ, ಸಾಸಿವೆ, ಎಳ್ಳು, ಜವೆಗೋದಿಗಳನ್ನು) ಬಿತ್ತಬೇಕು. ಒಂದು ವೇಳೆ ಬಿತ್ತಿದ ೩ ದಿನಗಳಲ್ಲಿ ಮೊಳಕೆ ಒಡೆದರೆ ಆ ಭೂಮಿಯು ಉತ್ತಮವಾಗಿರುತ್ತದೆ. ೫ ದಿನಗಳಲ್ಲಿ ಮೊಳಕೆ ಬಂದರೆ, ಆ ಭೂಮಿಯು ಮಧ್ಯಮ ಮತ್ತು ೭ ದಿನಗಳಲ್ಲಿ ಮೊಳಕೆ ಬಂದರೆ, ಆ ಭೂಮಿಯು ಅಶುಭವೆಂದು ತಿಳಿಯಬೇಕು.
ಉ. ಪರೀಕ್ಷೆ ಕ್ರ. ೫ (ಧೂಳಿನ ಕಣಗಳ ಮೂಲಕ ಭೂಮಿಯ ಪರೀಕ್ಷಣೆ)
ಪಾಂಸವೋರೇಣುತಾಂ ನೀತ್ವಾ ನಿರೀಕ್ಷೇದನ್ತರಿಕ್ಷಗಾ: |
ಅಧೋಮಧ್ಯೋರ್ಧ್ವಗಾ ನೃಣಾಂ ಗತಿತುಲ್ಯಫಲಪ್ರದಾ: || – ವಿಶ್ವಕರ್ಮಪ್ರಕಾಶ, ಅಧ್ಯಾಯ ೧, ಶ್ಲೋಕ ೭೦
ಅರ್ಥ : ಭೂಮಿಯ ತಗ್ಗಿನಲ್ಲಿನ ಧೂಳನ್ನು ಆಕಾಶದತ್ತ ಎಸೆಯಬೇಕು. ಒಂದು ವೇಳೆ ಆ ಧೂಳು ಅದೇ ಜಾಗದಲ್ಲಿ ಅಂದರೆ ತೆಗೆದುಕೊಂಡಿರುವ ಜಾಗದಲ್ಲಿಯೇ ಬಿದ್ದರೆ, ಆ ಭೂಮಿಯು ಕನಿಷ್ಟ ದರ್ಜೆಯದ್ದು, ಸ್ವಲ್ಪ ದೂರ ಬಿದ್ದರೆ ಅದು ಮಧ್ಯಮ ದರ್ಜೆಯದ್ದು ಮತ್ತು ಧೂಳು ಆಕಾಶದತ್ತ ಹೋದರೆ, ಆ ಭೂಮಿಯು ಉತ್ತಮ ದರ್ಜೆಯದ್ದಾಗಿದೆ.
ಮೇಲಿನ ಪರೀಕ್ಷಣೆಗಳ ಮಾಧ್ಯಮದಿಂದ ನಮಗೆ ಭೂಮಿಯ ಶುಭ-ಅಶುಭದ ಬಗ್ಗೆ ತಿಳಿಯುತ್ತದೆ. ಮೇಲಿನ ಯಾವುದೇ ೨ ಅಥವಾ ೩ ಪರೀಕ್ಷಣೆಗಳನ್ನು ಮಾಡಬಹುದು.
ಇಂದಿನ ಆಧುನಿಕ ತಂತ್ರಜ್ಞಾನದಿಂದಾಗಿ ಜೌಗು ಪ್ರದೇಶದಂತಹ ಜಾಗಗಳಲ್ಲೂ ಭದ್ರವಾದ ಕಟ್ಟಡಗಳನ್ನು ಕಟ್ಟಲು ಸಾಧ್ಯವಾಗಿದೆ. ವಿದೇಶಗಳಲ್ಲಿ ಸಮುದ್ರದ ನಡುವೆಯೇ ಹೋಟೆಲ್ ಅಥವಾ ಕಟ್ಟಡಗಳನ್ನು ನಿರ್ಮಿಸುವ ಹಂತಕ್ಕೆ ತಂತ್ರಜ್ಞಾನ ಬೆಳೆದಿದೆ. ಇಂತಹ ಕಟ್ಟಡಗಳು ಹೊರನೋಟಕ್ಕೆ ಆಕರ್ಷಕವಾಗಿ ಕಂಡರೂ, ಅಲ್ಲಿನ ಆಂತರಿಕ ವಾತಾವರಣ ಮತ್ತು ಸ್ಪಂದನಗಳು ಮನಸ್ಸಿಗೆ ಪ್ರಸನ್ನತೆಯನ್ನು ನೀಡುವುದಿಲ್ಲ. ಅಂತಹ ವಾಸ್ತುಗಳಲ್ಲಿ ವಾಸಿಸುವವರಿಗೆ ಮಾನಸಿಕ ಶಾಂತಿ ಮತ್ತು ಉತ್ತಮ ಆರೋಗ್ಯ ಸಿಗುವುದು ಬಹಳ ಕಷ್ಟ.
(ಆಧಾರ : ಗ್ರಂಥ ‘ಮಯಮತಮ್ ಮತ್ತು ವಿಶ್ವಕರ್ಮಪ್ರಕಾಶ’)
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ. (೧೩.೧.೨೦೨೬)
ವಾಸ್ತು ಪದವಿನ್ಯಾಸ
ಶಕ್ತಿ(ಊರ್ಜೆ) ಮತ್ತು ವಾಸ್ತುಶಾಸ್ತ್ರ !
ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು
ದಿಕ್ಕುಗಳ ಮಹತ್ವ ಮತ್ತು ದಿಕ್ಕು-ಉಪದಿಕ್ಕುಗಳ ಅನ್ಯೋನ್ಯತೆ
ವಾಸ್ತುಶಾಸ್ತ್ರ ಮತ್ತು ವಿಶ್ವ
ವಾಸ್ತುಪುರುಷನ ಜನ್ಮ ಮತ್ತು ವಾಸ್ತುಶಾಂತಿಯ ಮಹತ್ವ