ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು

ಈಶ್ವರನು ಸೃಷ್ಟಿಯನ್ನು ನಿರ್ಮಿಸಿದಾಗ, ಅದರಲ್ಲಿ ಯಾವುದೇ ವಸ್ತುವಿನ ಸ್ಥಾನವನ್ನು ನಿಶ್ಚಿತಗೊಳಿಸಲು ದಿಕ್ಕುಗಳನ್ನ ಕೂಡ ನಿರ್ಮಿಸಿದನು. ದಿಕ್ಕುಗಳಿಂದಾಗಿ ಯಾವುದೇ ವಸ್ತುವು ನಿಖರವಾಗಿ ಎಲ್ಲಿದೆ ಎಂದು ನಾವು ಹೇಳಬಹುದು. ‘ದಿಕ್ಕು’ ಎಂಬ ವಿಷಯವು ವಾಸ್ತುಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ; ಏಕೆಂದರೆ ದಿಕ್ಕುಗಳ ಜ್ಞಾನವಾದರೆ ಮಾತ್ರ ನಾವು ವಾಸ್ತುಶಾಸ್ತ್ರದ ನಿಯಮಗಳ ಬಗ್ಗೆ ವಿಚಾರ ಮಾಡಬಹುದು. ವಾಸ್ತುಶಾಸ್ತ್ರವಾಗಿರಲಿ, ಸಾಧನೆಯಾಗಿರಲಿ ಅಥವಾ ಜೀವನವಾಗಿರಲಿ, ಈ ಎಲ್ಲಾ ಕಡೆಗಳಲ್ಲಿ ದಿಕ್ಕು ಸ್ಪಷ್ಟವಾಗಿರುವುದು ಮಹತ್ವದ್ದಾಗಿದೆ. ಪ್ರತಿಯೊಂದು ದಿಕ್ಕಿನ ಕಾರಕತ್ವವನ್ನು ಶಾಸ್ತ್ರವು ನಿಶ್ಚಿತಗೊಳಿಸಿದೆ. (ಮನುಷ್ಯನ ಜೀವನದ ಯಾವ ವಿಷಯದ ಮೇಲೆ ದಿಕ್ಕು ಪರಿಣಾಮ ಬೀರುತ್ತದೆಯೋ, ಅದನ್ನು ಆ ದಿಕ್ಕಿನ ‘ಕಾರಕತ್ವ’ ಎಂದು ಹೇಳುತ್ತಾರೆ.) ದಿಕ್ಕಿನ ಶುಭಾಶುಭಗಳಿಗನುಸಾರ ಮನುಷ್ಯನು ಫಲವನ್ನು ಅನುಭವಿಸುತ್ತಾನೆ. ಪ್ರತಿಯೊಂದು ದಿಕ್ಕಿಗೆ ಒಬ್ಬ ಪಾಲಕನಿದ್ದಾನೆ, ಅವನನ್ನು ನಾವು ‘ದಿಕ್ಪಾಲಕ’ ಎಂದು ಕರೆಯುತ್ತೇವೆ. ಈ ದಿಕ್ಪಾಲಕ ಆ ದಿಕ್ಕಿನ ಅಧಿಪತಿಯಾಗಿರುತ್ತಾನೆ ಮತ್ತು ದಿಕ್ಕಿನ ಕಾರಕತ್ವಕ್ಕೆ ಅನುಗುಣವಾಗಿ ಫಲ ನೀಡುವ ಕಾರ್ಯ ಮಾಡುತ್ತಾನೆ. ವಾಸ್ತುಶಾಸ್ತ್ರದ ದೃಷ್ಟಿಯಿಂದ ಎಲ್ಲಿ ಏನಿರಬೇಕು ಅಥವಾ ಏನಿರಬಾರದು ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ ಮತ್ತು ಕಾರಕತ್ವವನ್ನು ತಿಳಿದರೆ ವಾಸ್ತುವಿನ ನಿಯಮಗಳು ಹೇಗೆ ಸಿದ್ಧವಾದವು ಎಂಬುದು ತಿಳಿಯುವುದು.

ಪೂರ್ವ ದಿಕ್ಕು

ಅ. ದೇವತೆ

ಇದು ಪ್ರಥಮ ದಿಕ್ಕಾಗಿದ್ದು ಇದೇ ದಿಕ್ಕಿನಲ್ಲಿ ಪ್ರಾತಃಕಾಲದಲ್ಲಿ ಸೂರ್ಯೋದಯವಾಗುತ್ತದೆ. ಈ ದಿಕ್ಕಿನ ದೇವತೆ ಸೂರ್ಯನಾಗಿದ್ದಾನೆ. ಸೂರ್ಯನಿಂದಲೇ ನಮಗೆ ಆತ್ಮಿಕ ಶಕ್ತಿ ಸಿಗುತ್ತದೆ.

ಆ. ಪಾಲಕ, ವಾಹನ, ನಗರ, ಆಯುಧ

ಈ ದಿಕ್ಕಿನ ಪಾಲಕ ಇಂದ್ರನಾಗಿದ್ದು, ಶಚಿ (ಸುಖ ನೀಡುವವಳು) ಅವನ ಪತ್ನಿಯಾಗಿದ್ದಾಳೆ; ಆದ್ದರಿಂದ ಎಲ್ಲಾ ರೀತಿಯ ಸೌಖ್ಯಗಳು ಈ ದಿಕ್ಕಿನಿಂದ ಸಿಗುತ್ತವೆ. ಐರಾವತ (ಅತಿಯಾದ ಶ್ರೀಮಂತಿಕೆ) ಅವನ ವಾಹನವಾಗಿದೆ ಮತ್ತು ಅಮರಾವತಿ ಅವನ ನಗರವಾಗಿರುವುದರಿಂದ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ನಮಗೆ ಪೂರ್ವ ದಿಕ್ಕಿನಿಂದ ಸಿಗುತ್ತವೆ. ಅವನ ಆಯುಧ ವಜ್ರ, ಅಂದರೆ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ.

ಇ. ಲಾಭ

ಈ ದಿಕ್ಕಿನಲ್ಲಿ ಐಶ್ವರ್ಯಲಕ್ಷ್ಮಿಯ ಸ್ಥಾನವಿದೆ; ಆದ್ದರಿಂದ ವಾಸ್ತುವಿನ ಎಲ್ಲ ಗ್ರಂಥಗಳಲ್ಲಿ ಮನೆಯು ಪೂರ್ವಾಭಿಮುಖವಾಗಿರಬೇಕು ಎಂದು ಆಗ್ರಹಿಸಲಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಈ ದಿಕ್ಕು ಮಹತ್ವದ್ದಾಗಿದ್ದು ಇದು ಪ್ರಸಿದ್ಧಿಯನ್ನು ತಂದುಕೊಡುವ ದಿಕ್ಕಾಗಿದೆ. ಅದೇ ರೀತಿ ಸಂತಾನಪ್ರಾಪ್ತಿಗಾಗಿ ಈ ದಿಕ್ಕು ದೋಷಮುಕ್ತವಾಗಿರುವುದು ಆವಶ್ಯಕವಾಗಿರುತ್ತದೆ. ಪೂರ್ವ ದಿಕ್ಕು ಮನುಷ್ಯನ ಜೀವನದಲ್ಲಿ ಪ್ರಸಿದ್ಧಿ, ಆರೋಗ್ಯ ಮತ್ತು ವಿದ್ಯೆಯ ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕು ಯಾವಾಗಲೂ ತೆರೆದಿದ್ದರೆ ಮನೆಯವರಿಗೆ ಸಕಾರಾತ್ಮಕ ಶಕ್ತಿಯ ಲಾಭವಾಗುತ್ತದೆ.

ಆಗ್ನೇಯ ದಿಕ್ಕು

ಅ. ದೇವತೆ

ಶುಕ್ರನು ದಿಕ್ಕಿನ ದೇವತೆಯಾಗಿದ್ದಾನೆ. ಪ್ರಣಯ, ವಿಲಾಸಿ ವಸ್ತುಗಳು, ಸಂತಾನಸೌಖ್ಯ, ಶಕ್ತಿ, ಅಗ್ನಿ ಇತ್ಯಾದಿ ಸಂಗತಿಗಳು ನಮಗೆ ಆಗ್ನೇಯ ದಿಕ್ಕಿನಿಂದ ಸಿಗುತ್ತವೆ.

ಆ. ಪಾಲಕ, ವಾಹನ, ನಗರ, ಆಯುಧ

ಅಗ್ನಿಯು ಈ ದಿಕ್ಕಿನ ಪಾಲಕನಾಗಿದ್ದಾನೆ. ಸದಾ ಕಾರ್ಯನಿರತ ಮತ್ತು ಶಕ್ತಿಶಾಲಿಯಾಗಿರಲು ಈ ದಿಕ್ಕು ನಮಗೆ ಸಹಾಯ ಮಾಡುತ್ತದೆ. ಅತೀ ಹೆಚ್ಚಿನ ಅಗ್ನಿ ಮನುಷ್ಯನಿಗೆ ತೊಂದರೆದಾಯಕ ಹಾಗೂ ಮತ್ತು ಕಡಿಮೆ ಅಗ್ನಿ ನಿರುಪಯುಕ್ತವಾಗಿದೆ. ಅದೇ ರೀತಿ ಈ ದಿಕ್ಕು ಸಮತೋಲನದಲ್ಲಿದ್ದರೆ ಮಾತ್ರ ವಾಸ್ತುವು ಶಕ್ತಿಯುತವಾಗಿರುತ್ತದೆ. ತೇಜೋವತಿ (ತೇಜಸ್ಸನ್ನು ಪ್ರದಾನಿಸುವ ನಗರ) ಅಗ್ನಿಯ ನಗರ ಹಾಗೂ ಟಗರು ಅಗ್ನಿಯ ವಾಹನವಾಗಿದೆ. ಟಗರು ಎಂದರೆ ಕಾರ್ಯಮಗ್ನತೆ.

ಕೋಪ ಮತ್ತು ಕ್ರೋಧ ಇವು ದಿಕ್ಪಾಲಕನ ಶಸ್ತ್ರಗಳಾಗಿರುವುದರಿಂದ ಈ ದಿಕ್ಕು ನಕಾರಾತ್ಮಕವಾಗಿದ್ದರೆ ಮನೆಯಲ್ಲಿ ಕ್ರೋಧದ ವಾತಾವರಣವಿರುತ್ತದೆ. ಆಗ್ನೇಯ ದಿಕ್ಕು ದೋಷಪೂರ್ಣವಾಗಿದ್ದರೆ ಕುಟುಂಬದಲ್ಲಿ ವಾಗ್ವಾದ ಮತ್ತು ಜಗಳಗಳಾಗುತ್ತವೆ.

ಇ. ಪತ್ನಿ

ಸ್ವಾಹಾ ಈ ದಿಕ್ಪಾಲಕನ ಪತ್ನಿ ಆಗಿದ್ದಾಳೆ, ಅಂದರೆ ಇಲ್ಲಿನ ಶಕ್ತಿಯ ಸಹಾಯದಿಂದ ವಾಸ್ತುವಿನಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಅದಕ್ಕಾಗಿ ಈ ದಿಕ್ಕು ಮಹತ್ವದ್ದಾಗಿದೆ.

ಈ. ಲಾಭ

ಧಾನ್ಯಲಕ್ಷ್ಮಿಯ ಸ್ಥಾನ ಆಗ್ನೇಯ ದಿಕ್ಕಿಗೆ ಇರುತ್ತದೆ; ಆದ್ದರಿಂದ ಜೀವನಾವಶ್ಯಕ ಪ್ರಾಣಶಕ್ತಿಯು ಇಲ್ಲಿಂದ ಸಿಗುತ್ತದೆ. ಶುಕ್ರಗ್ರಹವು ವಿಲಾಸ ಮತ್ತು ವ್ಯಸನಗಳಿಗೆ ಕಾರಕವಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ವ್ಯಕ್ತಿಯನ್ನೂ ಅದೇ ದಿಕ್ಕಿಗೆ ಕರೆದೊಯ್ಯುತ್ತದೆ. ಶುಕ್ರ ಗ್ರಹವು ಸ್ತ್ರೀ ಗ್ರಹವಾಗಿರುವುದರಿಂದ ಮನೆಯ ಸ್ತ್ರೀಯರ ಆರೋಗ್ಯವನ್ನು ಪರಿಪೂರ್ಣವಾಗಿಡುತ್ತದೆ. ದಿಕ್ಕು ಹದಗೆಟ್ಟರೆ ಸ್ತ್ರೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳಿಗೆ ಈ ದಿಕ್ಕು ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ವ್ಯಾಯಾಮಶಾಲೆ ಅಥವಾ ಕಠಿಣ ಪರಿಶ್ರಮದ ಸಾಧನಗಳು ಈ ದಿಕ್ಕಿನಲ್ಲಿರುವುದು ಒಳ್ಳೆಯದು.

ದಕ್ಷಿಣ ದಿಕ್ಕು

ಅ. ದೇವತೆ

ಮಂಗಳನು ಈ ದಿಕ್ಕಿನ ದೇವತೆ.

ಆ. ಮಹತ್ವ

‘ಈ ದಿಕ್ಕು ನಕಾರಾತ್ಮಕವಾಗಿದೆ’, ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ; ಆದರೆ ವಾಸ್ತುಶಾಸ್ತ್ರದ ಪ್ರಕಾರ ಈ ದಿಕ್ಕನ್ನು ನಕಾರಾತ್ಮಕವೆಂದು ಪರಿಗಣಿಸಲಾಗಿಲ್ಲ. ಯಮನು ಈ ದಿಕ್ಕಿನ ಪಾಲಕನಾಗಿದ್ದಾನೆ. ಯಮನು ಮೃತ್ಯುವಿನ ದೇವತೆಯಾಗಿರುವುದರಿಂದ ಇದು ಅಂತಿಮ ಸತ್ಯವನ್ನು ಹೇಳುವ ದಿಕ್ಕಾಗಿದೆ. ಆದ್ದರಿಂದ ಭೌತಿಕ ವಿಷಯಗಳಲ್ಲಿ ಮುಳುಗಿದವರಿಗೆ ಇದು ಬೇಡವೆನಿಸುತ್ತದೆ; ಆದರೆ ಈ ದಿಕ್ಕಿನಲ್ಲಿ ‘ಮೋಕ್ಷ’ ಎಂಬ ಪುರುಷಾರ್ಥವಿದೆ. ಭೌತಿಕ ಸುಖವನ್ನು ತ್ಯಾಗ ಮಾಡಿದವರಿಗೆ ಈ ದಿಕ್ಕು ಬಹಳಷ್ಟು ಶಕ್ತಿಯನ್ನು ಪ್ರದಾನಿಸುತ್ತದೆ.

ಇ. ಪತ್ನಿ

ದಿಕ್ಪಾಲಕನ ಪತ್ನಿ ಶ್ಯಾಮಲಾ ಎಂಬ ದೇವಿಯಾಗಿದ್ದಾಳೆ. ಇವಳು ರೂಪ-ಬಣ್ಣಕ್ಕಿಂತ ಗುಣಕರ್ಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾಳೆ. ಇಂದಿನ ಕಾಲದಲ್ಲಿ ಗುಣಕರ್ಮಗಳು ಯಾರಿಗೂ ಬೇಡವಾಗಿದ್ದು, ಈ ದಿಕ್ಕು ನಕಾರಾತ್ಮಕವಾಗಿದೆ ಅನಿಸುತ್ತದೆ.

ಈ. ನಗರ, ವಾಹನ, ಆಯುಧ

ಈ ದಿಕ್ಪಾಲಕನ ನಗರ ಸಂಯಮನೀ, ಅಂದರೆ ಬುದ್ಧಿಯನ್ನು ಉಪಯೋಗಿಸಿ ಮತ್ತು ಸಂಯಮದಿಂದ ವರ್ತಿಸುವವರಿಗೆ ಇದು ಲಾಭ ನೀಡುತ್ತದೆ. ಈ ದಿಕ್ಕು ಹದಗೆಟ್ಟರೆ ನೀತಿ-ನಿಯಮ, ಸಂಯಮ ಮುಂತಾದ ವಿಷಯಗಳು ಪಾಲನೆಯಾಗುವುದಿಲ್ಲ. ಮಹಿಷ (ಎಮ್ಮೆ) ಈ ದಿಕ್ಕಿನ ವಾಹನವಾಗಿದೆ, ಅಂದರೆ ಆಲಸ್ಯ ಮತ್ತು ತನ್ನಲ್ಲೇ ಮಗ್ನರಾಗಿರುವುದು ಇಂತಹ ಪರಿಣಾಮ ಬೀರುತ್ತದೆ.

ಕಾಲಪಾಶ  ದಿಕ್ಪಾಲಕನ ಆಯುಧವಾಗಿದೆ,  ಅಂದರೆ ವಾಸ್ತುವಿನಲ್ಲಿ ದಕ್ಷಿಣ ದಿಕ್ಕು ಸರಿಯಾಗಿದ್ದರೆ ಅನುಕೂಲಕರ ಕಾಲದ ಲಾಭ ನಮಗೆ ಪಡೆಯಲು ಸಾಧ್ಯವಾಗುತ್ತದೆ.

ಉ.ಲಾಭ

ಆದಿಲಕ್ಷ್ಮಿಯ ಸ್ಥಾನ ಈ ದಿಕ್ಕಿನಲ್ಲಿರುತ್ತದೆ. ಈ ದಿಕ್ಕು ಮಂಗಳ ಗ್ರಹದ್ದಾಗಿರುವುದರಿಂದ ಈ ದಿಕ್ಕಿನಿಂದ ಧೈರ್ಯ ಸಿಗುತ್ತದೆ. ಮಂಗಳನು ಸೇನಾಪತಿಯಾಗಿರುವುದರಿಂದ ಈ ದಿಕ್ಕು ಬುದ್ಧಿ ಮತ್ತು ಸಾಮರ್ಥ್ಯದವನ್ನು ಬಳಸಲು  ಪ್ರೇರೇಪಿಸುತ್ತದೆ. ಈ ದಿಕ್ಕು ಲಯದತ್ತ ಒಯ್ಯುವ ವ್ಯವಹಾರಗಳನ್ನು, ಉದಾ. ಜೂಜು, ಮದ್ಯಪಾನ ಇತ್ಯಾದಿ ವಿಷಯಗಳನ್ನು ಪ್ರೇರೇಪಿಸುತ್ತದೆ. ಇದನ್ನು ‘ಸಂಕಷ್ಟಗಳ ದಿಕ್ಕು’ ಎಂದೂ ನಂಬಲಾಗುತ್ತದೆ. ಈ ದಿಕ್ಕನ್ನು ಆದಷ್ಟು ಮುಚ್ಚಿಟ್ಟರೆ ಒಳ್ಳೆಯದು!

ನೈಋತ್ಯ ದಿಕ್ಕು

ಅ. ದೇವತೆ

ಈ ದಿಕ್ಕಿನ ದೇವತೆ ರಾಹು. ಇದು ಪೃಥ್ವಿತತ್ವದ ದಿಕ್ಕಾಗಿದ್ದು ಸ್ಥಿರತೆಯನ್ನು ಪ್ರದಾನಿಸುತ್ತದೆ; ಆದರೆ ದಿಕ್ಪಾಲಕನಾದ ನಿಋತಿಯು ಅಸುರ ಕುಲದವನಾಗಿರುವುದರಿಂದ ಜಡತ್ವ, ಕಷ್ಟ, ರೋಗ, ಸಂಕಟಗಳು ಸಹ ಈ ದಿಕ್ಕಿನ ಕಾರಕತ್ವಗಳಾಗಿವೆ.

ಆ. ವಾಹನ

ದಿಕ್ಪಾಲಕನಾದ ನಿಋತಿಯು ಮನುಷ್ಯನನ್ನೇ ತನ್ನ ವಾಹನವೆಂದು ತಿಳಿದು ವ್ಯಕ್ತಿಯ ಮನಸ್ಸಿನ ಮೇಲೆ ಆರೂಢನಾಗಿ ಅವನ ಬುದ್ಧಿಯನ್ನು ಮುಗಿಸುವ ಕಾರ್ಯವನ್ನು ಮಾಡುತ್ತಾನೆ.

ಇ. ಲಾಭ

ಇದು ಭೂತ, ಪ್ರೇತ, ಪಿಶಾಚ, ರಾಕ್ಷಸ ಮುಂತಾದ ಕೆಟ್ಟ ಶಕ್ತಿಗಳ ದಿಕ್ಕಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ವಾಸ್ತುವಿನಲ್ಲಿ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಬಹುದು. ಈ ದಿಕ್ಕನ್ನು ಒಂದು ವೇಳೆ ನಾವು ಅನುಕೂಲಕರವಾಗಿಸಿದರೆ, ಮನುಷ್ಯನ ಮೇಲೆ ಆರೂಢನಾಗಿ ನಿಋತಿಯು ಮನೆ ಮಾಲೀಕನಿಗೆ ಅಧಿಪತ್ಯವನ್ನೂ ಪ್ರದಾನಿಸುತ್ತಾನೆ; ಆದ್ದರಿಂದ ‘ಈ ದಿಕ್ಕಿನಲ್ಲಿ ಮಾಲೀಕನ ಕೊಠಡಿ ಇರಬೇಕು’, ಎಂದು ಶಾಸ್ತ್ರಕಾರರು ಹೇಳಿದ್ದಾರೆ.

ಈ. ಪತ್ನಿ, ನಗರ

ದೀರ್ಘಾದೇವಿಯು ಈ ದಿಕ್ಪಾಲಕನ ಪತ್ನಿಯಾಗಿದ್ದು ಈ ದಿಕ್ಕಿನಿಂದ ಸಿಗುವ ಪರಿಣಾಮಗಳು ದೀರ್ಘಕಾಲ ಉಳಿಯುತ್ತವೆ. ಕೃಷ್ಣಾಂಗವು ನಗರವಾಗಿದೆ, ಅಂದರೆ ಕೃಷ್ಣಕೃತ್ಯಗಳನ್ನು ಮಾಡಲು ಪ್ರವೃತ್ತರನ್ನಾಗಿಸುವ ದಿಕ್ಕು ಇದಾಗಿದೆ, ಆದ್ದರಿಂದ ಇದನ್ನು ಯೋಗ್ಯ ಮತ್ತು ಸಕಾರಾತ್ಮಕವಾಗಿ ಇಟ್ಟರೆ ಮಾತ್ರ ವಾಸ್ತುವಿನಲ್ಲಿ ನೈತಿಕತೆ ಉಳಿಯುತ್ತದೆ.

ಉ. ಆಯುಧ

ಕುಂತ ಅಥವಾ ಪಾಶವು ಇವನ ಆಯುಧವಾಗಿದೆ, ಅಂದರೆ ಮೋಹಪಾಶದಲ್ಲಿ ಸಿಲುಕಿಸುವಂತದ್ದಾಗಿದೆ. ಇದು ಧೈರ್ಯಲಕ್ಷ್ಮಿಯ ದಿಕ್ಕಾಗಿರುವುದರಿಂದ ಅದು ಸರಿಯಾಗಿದ್ದರೆ ವಾಸ್ತುವಿನಲ್ಲಿರುವ ಜನರಿಗೆ ಧೈರ್ಯವನ್ನು ಪ್ರದಾನಿಸುತ್ತದೆ.

ಈ ದಿಕ್ಕಿನಲ್ಲಿ ದೊಡ್ಡ ದೋಷಗಳು ಉಂಟಾದರೆ ವೈಫಲ್ಯ, ಅಪಘಾತ, ನಿರಾಶೆ, ಆತ್ಮಹತ್ಯೆಯಂತಹ ಪರಿಣಾಮಗಳು ಉಂಟಾಗಬಹುದು. ಈ ದಿಕ್ಕು ಎಷ್ಟರ ಮಟ್ಟಿಗೆ ಮುಚ್ಚಿರುತ್ತದೆಯೋ ಅಷ್ಟು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈ ದಿಕ್ಕು ಅಶುಭ ಪರಿಣಾಮವನ್ನು ನೀಡುತ್ತದೆ.

ಪಶ್ಚಿಮ ದಿಕ್ಕು

ಅ. ದೇವತೆ

ಈ ದಿಕ್ಕಿನ ದೇವತೆ ಶನಿ. ಎಲ್ಲ ರೀತಿಯ ಅವನತಿ, ಕಷ್ಟ, ದಾರಿದ್ರ್ಯ ಇವು ಈ ದಿಕ್ಕಿನ ಕಾರಕತ್ವಗಳಾಗಿವೆ. ಈ ದಿಕ್ಕು ದೋಷಭರಿತವಾದರೆ ಶ್ರಮ, ಸಮಯ, ಹಣ ವ್ಯಯವಾಗುವುದು, ಬೌದ್ಧಿಕ ಕ್ಷಮತೆಯು ವ್ಯರ್ಥವಾಗುವುದು ಇತ್ಯಾದಿ ಪರಿಣಾಮಗಳು ಕಂಡುಬರುತ್ತವೆ. ಸೂರ್ಯನು ಮುಳುಗುವ ಕಡೆಗೆ ಈ ದಿಕ್ಕು ಇದ್ದರೆ ಇದು ಕ್ಷೀಣತೆಯನ್ನು ಉಂಟು ಮಾಡುವ ದಿಕ್ಕಾಗಿದೆ.

ಆ. ಪಾಲಕ

ಈ ದಿಕ್ಕಿನ ಪಾಲಕ ವರುಣನಾಗಿದ್ದಾನೆ. ವಿಲಕ್ಷಣ ಮತ್ತು ಅತ್ಯಂತ ಐಶ್ವರ್ಯವನ್ನು ಪ್ರತಿನಿಧಿಸುವ ದೇವತೆಯಾಗಿದ್ದಾನೆ; ಆದರೆ ಇದು ಶನಿಯ ದಿಕ್ಕಾಗಿರುವುದರಿಂದ ಅಷ್ಟೊಂದು ಶುಭ ಫಲಗಳು ದೊರೆಯುವುದಿಲ್ಲ. ದಿನನಿತ್ಯದ ಬಳಕೆಗೆ ಉಪಯೋಗವಿಲ್ಲದಿದ್ದರೂ, ಕೆಲವು ವಿಶಿಷ್ಟ ವ್ಯವಹಾರಗಳಿಗೆ ಈ ದಿಕ್ಕು ಲಾಭದಾಯಕವಾಗಿದೆ; ಆದರೆ ಇಲ್ಲಿ ಶ್ರೀಮಂತಿಕೆ ಎಷ್ಟು ಕಾಲ ಉಳಿಯುತ್ತದೆ, ಎಂದು ಹೇಳಲು ಬರುವುದಿಲ್ಲ.

ಇ. ಪತ್ನಿ, ನಗರ ಮತ್ತು ಆಯುಧ

ಕಾಲಿಕಾ ಇವಳು ವರುಣನ ಪತ್ನಿಯಾಗಿದ್ದು, ನೈಋತ್ಯ ದಿಕ್ಕಿನಂತೆಯೇ ನಕಾರಾತ್ಮಕತೆಯನ್ನು ಉತ್ತೇಜಿಸುವವಳಾಗಿದ್ದಾಳೆ. ಕತ್ತಲೆಯಲ್ಲಿ ನಡೆಯುವ ಕೃತ್ಯಗಳಿಗೆ ಈ ದಿಕ್ಕು ಸಹಾಯ ಮಾಡುತ್ತದೆ; ಆದರೆ ಸಮಾಜದ ಆರೋಗ್ಯದ ದೃಷ್ಟಿಯಿಂದ ಅವೆಲ್ಲವೂ ಅನೈತಿಕವಾಗಿರುತ್ತವೆ. ‘ಶ್ರದ್ಧಾವತಿ’ ಎಂಬುದು ಇಲ್ಲಿನ ನಗರವಾಗಿದ್ದು, ಜೀವನದಲ್ಲಿ ಸದ್ವಿವೇಕಬುದ್ಧಿಯಿಂದ ಆಚರಣೆ ಮಾಡಿದರೆ ಮತ್ತು ಧರ್ಮದ ಮೇಲೆ ಶ್ರದ್ಧೆಯಿಟ್ಟರೆ ಈ ದಿಕ್ಕಿನ ನಕಾರಾತ್ಮಕತೆ ಕಡಿಮೆಯಾಗಲು ಸಹಾಯವಾಗುತ್ತದೆ. ಮೊಸಳೆಯು ವರುಣನ ವಾಹನವಾಗಿದ್ದು, ಪಾಶವು ಆಯುಧವಾಗಿದೆ. ಈ ಎರಡೂ ವಿಷಯಗಳು ಬಂಧಿಸುವ ಗುಣವನ್ನು ಹೊಂದಿರುವುದರಿಂದ, ಈ ದಿಕ್ಕು ಅಶುಭವಾದರೆ ಮನುಷ್ಯನು ಎಲ್ಲಾ ಬದಿಗಳಿಂದ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ.

ಈ. ಲಾಭ

ಇದು ಗಜಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕು ಶುಭವಾಗಿದ್ದರೆ ಸಂಪತ್ತು ಲಭಿಸುತ್ತದೆ; ಆದರೆ ಅದು ಬಹಳ ನಿಧಾನಗತಿಯಲ್ಲಿ ಪ್ರಾಪ್ತವಾಗುತ್ತದೆ. ಶನಿಯು ಮಂದಗತಿಯ ಗ್ರಹವಾಗಿರುವುದರಿಂದ ಈ ದಿಕ್ಕು ಅಶುಭವಾಗಿದ್ದರೆ ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬವಾಗುತ್ತದೆ. ಈ ದಿಕ್ಕು ಮಹಿಳೆಯರ ದೃಷ್ಟಿಯಿಂದ ಲಾಭದಾಯಕವಾಗಿದೆ. ಆದ್ದರಿಂದ ಮಹಿಳೆಯರಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈ ದಿಕ್ಕು ಪ್ರಯೋಜನಕಾರಿಯಾಗಿದೆ.

ವಾಯವ್ಯ ದಿಕ್ಕು

ಅ. ದೇವತೆ

ಚಂದ್ರನು ಈ ದಿಕ್ಕಿನ ದೇವತೆಯಾಗಿದ್ದು, ಚಂಚಲತೆ ಮತ್ತು ಅಸ್ಥಿರತೆಯು ಈ ದಿಕ್ಕಿನಿಂದ ಪ್ರಾಪ್ತವಾಗುತ್ತದೆ. ಶುಭ-ಅಶುಭ ದಿಕ್ಕುಗಳ ಮಧ್ಯ ಭಾಗದಲ್ಲಿ ಈ ದಿಕ್ಕು ಬರುವುದರಿಂದ ಇದು ಎರಡೂ ರೀತಿಯ ಫಲಗಳನ್ನು ನೀಡುತ್ತದೆ.

ಆ. ಪಾಲಕ

ವಾಯುವು ಈ ದಿಕ್ಕಿನ ಪಾಲಕನಾಗಿದ್ದಾನೆ. ಚಂಚಲತೆ, ಅಸ್ಥಿರತೆ, ಗತಿಶೀಲತೆ ಮತ್ತು ಕಾರ್ಯತತ್ಪರತೆ ಇವು ಅವನ ವೈಶಿಷ್ಟ್ಯಗಳಾಗಿವೆ. ಈ ದಿಕ್ಕು ಶುಭ ಮತ್ತು ದೋಷಮುಕ್ತವಾಗಿದ್ದರೆ ಮನೆಯಲ್ಲಿ ಶುದ್ಧ ವಾತಾವರಣವನ್ನು ನಿರ್ಮಿಸುತ್ತದೆ. ಉಸಿರುಗಟ್ಟುವ ವಾತಾವರಣವನ್ನು ಹೋಗಲಾಡಿಸಿ ಪ್ರಸನ್ನತೆಯನ್ನು ತರುತ್ತದೆ. ಈ ದಿಕ್ಕಿನಲ್ಲಿ ದೋಷ ಅಥವಾ ಪ್ರವೇಶದ್ವಾರವಿದ್ದರೆ, ಮನುಷ್ಯನ ಮನಸ್ಸಿನಲ್ಲಿ ಗೊಂದಲವನ್ನು ನಿರ್ಮಾಣ ಮಾಡುತ್ತದೆ. ವಾಯುವ್ಯ ದಿಕ್ಕಿನಲ್ಲಿ ಮಲಗುವ ಜಾಗವಿದ್ದರೆ, ಮನುಷ್ಯನು ಏಕಕಾಲದಲ್ಲಿ ಅನೇಕ ವಿಷಯಗಳ ಬಗ್ಗೆ ವಿಚಾರ ಮಾಡುತ್ತಾನೆ; ಆದರೆ ಅವು ಕೃತಿಯಲ್ಲಿ ಬರುವುದಿಲ್ಲ, ಎಂಬಂತಹ ಅವಸ್ಥೆ ಬರುತ್ತದೆ.

ಇ. ಪತ್ನಿ, ನಗರ ಮತ್ತು ವಾಹನ

ಅಂಜನಾ ಇವಳು ಈ ದಿಕ್ಕಿನ ಪಾಲಕನ ಪತ್ನಿಯಾಗಿದ್ದಾಳೆ ಮತ್ತು ಗಂಧವತಿ ಎಂಬುದು ನಗರವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಸುಗಂಧಿತ ವಸ್ತುಗಳನ್ನು ಇಟ್ಟರೆ ವಾಸ್ತುವಿಗೆ ಸಕಾರಾತ್ಮಕತೆ ಪ್ರಾಪ್ತವಾಗುತ್ತದೆ. ದಿಕ್ಪಾಲಕನ ವಾಹನ ಜಿಂಕೆಯಾಗಿದ್ದು, ಇದು ಸತತ ಕಾರ್ಯಮಗ್ನತೆಯನ್ನು ದರ್ಶಿಸುತ್ತದೆ.

ಈ. ಲಾಭ

ಇದು ವಿಜಯಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕು ಶುಭವಾಗಿದ್ದರೆ ಶತ್ರುಗಳ ಮೇಲೆ ವಿಜಯ ತಂದುಕೊಡುತ್ತದೆ. ಸಾಕುಪ್ರಾಣಿಗಳ ಕೊಟ್ಟಿಗೆಗೆ ಈ ದಿಕ್ಕು ಲಾಭದಾಯಕವಾಗಿದೆ.

ಈ ದಿಕ್ಕಿನಲ್ಲಿ ಉತ್ತರ-ವಾಯವ್ಯ ದಿಕ್ಕು ತೆರೆದಿದ್ದರೆ ನಡೆಯುತ್ತದೆ; ಆದರೆ ಪಶ್ಚಿಮ-ವಾಯವ್ಯ ದಿಕ್ಕನ್ನು ತೆರೆದಿಡುವುದನ್ನು ತಪ್ಪಿಸಬೇಕು.

ಉತ್ತರ ದಿಕ್ಕು

ಅ. ದೇವತೆ

ಇದು ಅತ್ಯಂತ ಶುಭ ದಿಕ್ಕಾಗಿದ್ದು ಹಣ, ಸಂಪನ್ನತೆ ಮತ್ತು ಸಮೃದ್ಧಿ ಈ ದಿಕ್ಕಿನ ಕಾರಕತ್ವಗಳಾಗಿವೆ. ಈ ದಿಕ್ಕಿನ ದೇವತೆ ಬುಧ. ಕುಬೇರನು ದಿಕ್ಪಾಲಕನಾಗಿರುವುದರಿಂದ ಈ ದಿಕ್ಕನ್ನು ಸಾಧ್ಯವಾದಷ್ಟು ತೆರೆದಿಟ್ಟರೆ ಅದು ಸಮೃದ್ಧಿಯನ್ನು ನೀಡುತ್ತದೆ. ಅರ್ಥ (ಸಂಪತ್ತು) ಎಂಬ ಪುರುಷಾರ್ಥವು ಈ ದಿಕ್ಕಿನಲ್ಲಿದೆ. ಆದ್ದರಿಂದ ಇದು ಸಮೃದ್ಧಿಯನ್ನು ನೀಡುವ ದಿಕ್ಕಾಗಿದೆ.

ಆ. ಪಾಲಕ, ಪತ್ನಿ, ನಗರ, ವಾಹನ, ಆಯುಧ

ಕುಬೇರನು ಪಾಲಕನಾಗಿರುವುದರಿಂದ ಧನಪ್ರಾಪ್ತಿ ಮತ್ತು ಸಂಚಯ (ಉಳಿತಾಯ) ಈ ಎರಡಕ್ಕೂ ಈ ದಿಕ್ಕು ಶುಭವಾಗಿದೆ. ಚಿತ್ರಲೇಖಾ ಇವನ ಪತ್ನಿಯಾಗಿದ್ದಾಳೆ ಮತ್ತು ಅಲಂಕಾಪುರಿ ಎಂಬುದು ನಗರವಾಗಿದೆ. ಈ ನಗರವು ಎಂದರೆ ಇಂದ್ರಾದಿ ದೇವತೆಗಳ ಧನಸಂಗ್ರಹದ ಸ್ಥಳವಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಮಾಡಿದ ಧನಸಂಗ್ರಹವು ದೀರ್ಘಕಾಲ ಉಳಿಯುತ್ತದೆ. ಬಿಳಿ ಕುದುರೆಯು ಕುಬೇರನ ವಾಹನವಾಗಿದ್ದು ಇದು ಶ್ರೀಮಂತಿಕೆಯ ಲಕ್ಷಣವಾಗಿದೆ. ಖಡ್ಗವು ಆಯುಧವಾಗಿದ್ದು ಇದು ನೇರ ಮತ್ತು ಸ್ಥಿರವಾದ ಏಟು ನೀಡುವಂತಹುದ್ದಾಗಿದ್ದರಿಂದ ಉತ್ತರ ದಿಕ್ಕಿನಿಂದ ವಿಜಯ ಪ್ರಾಪ್ತವಾಗುತ್ತದೆ. ಇದು ಧನಲಕ್ಷ್ಮಿಯ ದಿಕ್ಕಾಗಿರುವುದರಿಂದ, ಈ ದಿಕ್ಕಿನ ದೋಷವನ್ನು ದೂರ ಮಾಡಲು ಈ ದಿಕ್ಕಿಗೆ ಧನಲಕ್ಷ್ಮಿಯ ಚಿತ್ರವನ್ನು ಹಚ್ಚಲಾಗುತ್ತದೆ.

ಇ. ಲಾಭ

ಇದು ಬುಧನ ದಿಕ್ಕಾಗಿರುವುದರಿಂದ ಇದು ಶುಭವಾಗಿದ್ದರೆ ಬುದ್ಧಿಯ ವಿಕಾಸವು ಚೆನ್ನಾಗಿ ಆಗುತ್ತದೆ. ಬುಧನು ವ್ಯಾಪಾರದ ಕಾರಕನಾಗಿರುವುದರಿಂದ ಅದಕ್ಕಾಗಿ ಸಹ ಈ ದಿಕ್ಕು ಲಾಭದಾಯಕವಾಗಿದೆ.

ಈಶಾನ್ಯ ದಿಕ್ಕು

ಅ. ದೇವತೆ

ಎಂಟೂ ದಿಕ್ಕುಗಳಲ್ಲಿ ಇದು ಅತ್ಯಂತ ಶುಭ ದಿಕ್ಕಾಗಿದೆ. ವಿದ್ಯೆ, ಆರೋಗ್ಯ, ಬೌದ್ಧಿಕ ಕ್ಷಮತೆ, ಸಮೃದ್ಧಿ, ಸಂತಾನ ಇತ್ಯಾದಿ ಎಲ್ಲ ವಿಷಯಗಳ ಕಾರಕ ದಿಕ್ಕು ಇದಾಗಿದೆ. ಗುರು ಈ ದಿಕ್ಕಿನ ದೇವತೆಯಾಗಿದ್ದಾರೆ. ಇದು ಈಶ್ವರೀ ತತ್ತ್ವದ ದಿಕ್ಕಾಗಿದ್ದು, ಈಶಾನನು ಇದರ ದಿಕ್ಪಾಲಕನಾಗಿದ್ದಾನೆ.

ಆ. ಪತ್ನಿ, ನಗರ, ವಾಹನ ಮತ್ತು ಆಯುಧ

ಈ ಸ್ಥಳದಲ್ಲಿ ಶಿವನ ಅಧಿಷ್ಠಾನವಿದ್ದು ಪಾರ್ವತಿಯು ಶಿವನ ಪತ್ನಿಯಾಗಿದ್ದಾಳೆ. ಶಿವ-ಶಕ್ತಿಯ ಸಂಗಮವು ಈ ದಿಕ್ಕಿನಲ್ಲಿ ಇರುವುದರಿಂದ ಭೌತಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಈ ದಿಕ್ಕು ಲಾಭದಾಯಕವಾಗಿದೆ. ಕೈಲಾಸವು ನಗರವಾಗಿದ್ದು, ಮನುಷ್ಯನಿಗೆ ತನ್ನ ಕರ್ತವ್ಯದ ಅರಿವು ಮಾಡಿಕೊಡುತ್ತದೆ. ವೃಷಭವು (ಎತ್ತು) ವಾಹನವಾಗಿದ್ದು, ಇದು ಶಾಂತಿ ಮತ್ತು ಕಠಿಣ ಪರಿಶ್ರಮ ಈ ಎರಡರ ಸಂಕೇತವಾಗಿದೆ. ತ್ರಿಶೂಲವು ಆಯುಧವಾಗಿದ್ದು, ಇದು ತ್ರಿವಿಧ ತಾಪಗಳಿಂದ ಮುಕ್ತಿ ನೀಡುತ್ತದೆ ಮತ್ತು ಮೂರು ಗುಣಗಳ (ಸತ್ತ್ವ, ರಜ, ತಮ) ಸಮತೋಲನವನ್ನು ಕಾಪಾಡುತ್ತದೆ.

ಇ. ಲಾಭ

ಅಷ್ಟಲಕ್ಷಿಯರ ಪೈಕಿ ಇದು ಸಂತಾನಲಕ್ಷ್ಮಿಯ ದಿಕ್ಕಾಗಿದೆ. ಈ ದಿಕ್ಕು ದೋಷಮುಕ್ತ ಮತ್ತು ಶುಭವಾಗಿದ್ದರೆ ಸಂತಾನ ಭಾಗ್ಯಕ್ಕೆ ಲಾಭದಾಯಕವಾಗಿರುತ್ತದೆ. ಇದು ಜಲತತ್ತ್ವದ ದಿಕ್ಕಾಗಿರುವುದರಿಂದ ಭೂಮಿಯ ಅಡಿಯಲ್ಲಿ ನೀರಿನ ಸಂಗ್ರಹವನ್ನು (ಉದಾಹರಣೆಗೆ ಟ್ಯಾಂಕ್ ಅಥವಾ ಬಾವಿ) ಈ ದಿಕ್ಕಿನಲ್ಲಿ ಮಾಡಬೇಕು. ಈ ದಿಕ್ಕಿನಲ್ಲಿ ದೋಷ ಉಂಟಾದರೆ ಆರೋಗ್ಯದ ಸಮಸ್ಯೆಗಳಾಗುತ್ತವೆ.

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ)

Leave a Comment