ದಿಕ್ಕುಗಳ ಮಹತ್ವ ಮತ್ತು ದಿಕ್ಕು-ಉಪದಿಕ್ಕುಗಳ ಅನ್ಯೋನ್ಯತೆ

ದಿಕ್ಕುಗಳು ಮತ್ತು ವಾಸ್ತುಶಾಸ್ತ್ರ

ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ದಿಕ್ಕುಗಳು ಮತ್ತು ಉಪದಿಕ್ಕುಗಳ ಮಹತ್ವ ಹಾಗೂ ಅವುಗಳ ಅನ್ಯೋನ್ಯತೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ದಿಕ್ಕುಗಳ ನಿಶ್ಚಿತಿಯ ಮಹತ್ವ

ದಿಕ್ಕು ಇದು ವಾಸ್ತುಶಾಸ್ತ್ರದ ಒಂದು ಪ್ರಮುಖ ಭಾಗವಾಗಿದೆ; ಏಕೆಂದರೆ ದಿಕ್ಕುಗಳ ಆಧಾರದಲ್ಲಿಯೇ ಸಂಪೂರ್ಣ ವಾಸ್ತುವನ್ನು (ಕಟ್ಟಡದ) ರಚಿಸುವುದು ಆವಶ್ಯಕವಾಗಿರುತ್ತದೆ. ವಾಸ್ತುವಿನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಶಕ್ತಿಯು ಪ್ರವಹಿಸುತ್ತಿರುತ್ತದೆ. ಆದ್ದರಿಂದ ಈ ಅಂಶವನ್ನು ಗಮನದಲ್ಲಿರಿಸಿ ವಾಸ್ತುವನ್ನು ರಚಿಸಬೇಕಾಗುತ್ತದೆ. ಅದಕ್ಕಾಗಿ ಮೊದಲಿಗೆ ದಿಕ್ಕುಗಳನ್ನು ನಿಖರವಾಗಿ ಗುರುತಿಸುವುದು ಆವಶ್ಯಕವಾಗಿದೆ.

ಪ್ರಾಸಾದೇ ಸದನೇಽಲಿನ್ದೇ ದ್ವಾರೇ ಕುಣ್ಡೇ ವಿಶೇಷತ: ।
ದಿಙ್ಮುಢೇ ಕುಲನಾಶ: ಸ್ಯಾತ್ ತಸ್ಮಾತ್ಸಂಶೋಧಯೇತ್ ದಿಶ: ।। – ವೃದ್ಧ ನಾರದ (ನಾರದ ಸಂಹಿತಾ)

ಅರ್ಥ : ದೇವಸ್ಥಾನ, ಮನೆ, ಜಗುಲಿ (ವರಾಂಡ), ದ್ವಾರ ಮತ್ತು ಕುಂಡಗಳ ನಿರ್ಮಾಣದ ಸಮಯದಲ್ಲಿ ನಿಖರವಾದ ದಿಕ್ಕುಗಳ ಜ್ಞಾನವು ಬಹಳ ಆವಶ್ಯಕವಾಗಿದೆ. ದಿಕ್ಕುಗಳ ಅಯೋಗ್ಯ ಜ್ಞಾನದಿಂದ (ದಿಙ್ಮೂಢತೆಯಿಂದ ಅಂದರೆ ದಿಕ್ಕು ತಿಳಿಯದೇ ತಪ್ಪು ಮಾಡುವುದರಿಂದ) ಗೃಹಸ್ವಾಮಿ ಅಥವಾ ಮನೆಯ ಯಜಮಾನನ ಕುಲ ನಾಶವಾಗುವ ಸಾಧ್ಯತೆಯಿರುತ್ತದೆ.

ಮೇಲಿನ ಶ್ಲೋಕದ ಮೂಲಕ ವೃದ್ಧ ನಾರದರು ದಿಕ್ಕುಗಳನ್ನು ನಿಶ್ಚಿತಗೊಳಿಸುವ ಮಹತ್ವವನ್ನು ತಿಳಿಸಿದ್ದಾರೆ. ದಿಕ್ಕುಗಳನ್ನು ಸರಿಯಾಗಿ ಗುರುತಿಸದಿದ್ದರೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ಎಚ್ಚರಿಸಿದ್ದಾರೆ. ಇದರಿಂದ ನಮಗೆ ದಿಕ್ಕುಗಳನ್ನು ನಿಶ್ಚಯಿಸುವ ಮಹತ್ವದ ಮನವರಿಕೆಯಾಗುತ್ತದೆ.

ದಿಕ್ಕುಗಳನ್ನು ನಿಶ್ಚಿಯಿಸುವಲ್ಲಿ ದಿಕ್ಸೂಚಿಯ ಮಹತ್ವ

ಹಳೆಯ ಕಾಲದಲ್ಲಿ ದಿಕ್ಕುಗಳನ್ನು ನಿಶ್ಚಿತಗೊಳಿಸಲು ಪೂರ್ವ ದಿಕ್ಕಿನಲ್ಲಿ ಒಂದು ‘ಶಂಕು’ವನ್ನು ಸ್ಥಾಪಿಸಿ, ವಿವಿಧ ಸಮಯಗಳಲ್ಲಿ ಅದರ ನೆರಳು ಬೀಳುವ ಸ್ಥಾನಗಳನ್ನು ದಾಖಲಿಸಿಕೊಳ್ಳುವ ಮೂಲಕ ಪೂರ್ವ ದಿಕ್ಕನ್ನು ಗುರುತಿಸಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು; ಏಕೆಂದರೆ ಸೂರ್ಯನು ವರ್ಷಪೂರ್ತಿ ಸರಿಯಾಗಿ ಪೂರ್ವ ದಿಕ್ಕಿನ ಮಧ್ಯಭಾಗದಲ್ಲೇ ಉದಯಿಸುವುದಿಲ್ಲ. ವರ್ಷದಲ್ಲಿ ೬ ತಿಂಗಳು ದಕ್ಷಿಣಾಯನ ಮತ್ತು ೬ ತಿಂಗಳು ಉತ್ತರಾಯಣ ಇರುತ್ತದೆ. ಆದ್ದರಿಂದ ಈ ಎಲ್ಲಾ ವಿಷಯಗಳ ಅಧ್ಯಯನ ಮಾಡಿ ದಿಕ್ಕುಗಳನ್ನು ನಿಶ್ಚಯಿಸುವುದು ಕಠಿಣವಾಗಿತ್ತು. ಪ್ರಸ್ತುತ ಕಾಲದಲ್ಲಿ ನಮ್ಮ ಬಳಿ ದಿಕ್ಸೂಚಿ (compass) ಸುಲಭವಾಗಿ ಲಭ್ಯವಿರುವುದರಿಂದ ನಾವು ಆಯಸ್ಕಾಂತೀಯ ಉತ್ತರವನ್ನು (magnetic north) ಸುಲಭವಾಗಿ ಪತ್ತೆಹಚ್ಚಬಹುದು ಮತ್ತು ಅದರಂತೆ ದಿಕ್ಕುಗಳನ್ನು ಗುರುತಿಸಬಹುದು.

ದಿಕ್ಕುಗಳು ಮತ್ತು ಉಪದಿಕ್ಕುಗಳು

ತಮ್ಮ ಮನೆ ಪೂರ್ವ-ಪಶ್ಚಿಮವಾಗಿದ್ದರೆ ಅದು ವಾಸ್ತುಶಾಸ್ತ್ರದ ಪ್ರಕಾರ ಸರಿಯಾಗಿದೆ ಎಂಬ ತಪ್ಪು ಕಲ್ಪನೆ ಅನೇಕರಿಗೆ ಇರುತ್ತದೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಅಧ್ಯಯನ ಮಾಡುವಾಗ ಬಹಳಷ್ಟು ವಿಷಯಗಳನ್ನು ಗಮನಿಸಬೇಕಾಗುತ್ತದೆ. ಮನೆ ಪೂರ್ವ-ಪಶ್ಚಿಮವಾಗಿದ್ದರೂ, ದೇವರ ಮನೆ, ಮುಖ್ಯ ಮಲಗುವ ಕೋಣೆ, ಅಡುಗೆ ಮನೆ, ಶೌಚಾಲಯ ಇತ್ಯಾದಿ ಯಾವ ದಿಕ್ಕಿನಲ್ಲಿವೆ ಎಂಬ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ನಾಲ್ಕು ಗೋಡೆಗಳಿರುವಲ್ಲಿ ನಾಲ್ಕು ಮುಖ್ಯ ದಿಕ್ಕುಗಳು ಮತ್ತು ಮೂಲೆಗಳ ಭಾಗವೆಂದರೆ ಉಪದಿಕ್ಕುಗಳು ಎಂಬುದು ನಮ್ಮ ಸಾಮಾನ್ಯ ವಿಚಾರವಾಗಿರುತ್ತದೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ ಎಂಟೂ ದಿಕ್ಕುಗಳಿಗೆ 360 ಅಂಶಗಳಲ್ಲಿ ಸಮಾನ ಭಾಗವನ್ನು ನೀಡಲಾಗಿರುತ್ತದೆ, ಅಂದರೆ ಪ್ರತಿ ದಿಕ್ಕು 360/8 = 45 ಅಂಶಗಳಷ್ಟಿರುತ್ತದೆ. ಉದಾ. ಪೂರ್ವ ದಿಕ್ಕಿನ ಒಟ್ಟು ಉದ್ದ 16 ಅಡಿ ಇದ್ದರೆ, ಅದನ್ನು ಸಮಾನ 4 ಭಾಗಗಳನ್ನಾಗಿ ಮಾಡಿದಾಗ ಬಲಭಾಗದ ಮೊದಲ 4 ಅಡಿ ಭಾಗವು ಆಗ್ನೇಯ ದಿಕ್ಕಿಗೆ ಸೇರುತ್ತದೆ. ಮಧ್ಯದ ತಲಾ 4 ಅಡಿಗಳ ಎರಡು ಭಾಗಗಳು ಪೂರ್ವ ದಿಕ್ಕಿನದ್ದಾಗಿರುತ್ತವೆ, ಹಾಗೆಯೇ ಎಡಭಾಗದ 4 ಅಡಿಗಳ ಒಂದು ಭಾಗವು ಈಶಾನ್ಯ ದಿಕ್ಕಿನದ್ದಾಗಿರುತ್ತದೆ. ವಾಸ್ತುವಿನ ಮಧ್ಯಭಾಗದ 1/9 ಭಾಗವು ‘ಬ್ರಹ್ಮಮಂಡಲ’ದ್ದಾಗಿರುತ್ತದೆ.

ಹೆಚ್ಚಿನ ಬಾರಿ ವಾಸ್ತುವಿನ 4 ಗೋಡೆಗಳ ಮಧ್ಯಭಾಗದಲ್ಲಿ ಮುಖ್ಯ ದಿಕ್ಕುಗಳು ಬರದೇ ಉಪದಿಕ್ಕುಗಳು ಬರುತ್ತವೆ. ಆಗ 22.5 ಅಂಶಕ್ಕಿಂತ ಹೆಚ್ಚು 45 ಅಂಶಗಳ ವರೆಗೆ ಒಂದು ವೇಳೆ ದಿಕ್ಕು ಒಂದು ಬದಿಗೆ ವಾಲಿದ್ದರೆ, ಅಂತಹ ವಾಸ್ತುವನ್ನು ‘ವಿದಿಕ್ಷು ವಾಸ್ತು’ ಎಂದು ಕರೆಯಲಾಗುತ್ತದೆ. ವಿದಿಕ್ಷು ವಾಸ್ತುವಿನಲ್ಲಿ ವಿಪರೀತ ಸಂಘರ್ಷವಿರುತ್ತದೆ. ಇಂತಹ ವಾಸ್ತುವು ವಾಸ್ತುಶಾಸ್ತ್ರಕ್ಕೆ ಸಮ್ಮತವಾದುದಲ್ಲ. ಆರ್ಥಿಕ ಲಾಭಕ್ಕಾಗಿ ಇಂತಹ ವಾಸ್ತುವಿನಲ್ಲಿ ವಾಸಿಸುವವರು ದುಪ್ಪಟ್ಟು ಶ್ರಮಪಡಬೇಕಾಗುತ್ತದೆ; ಆದರೆ ವಿದಿಕ್ಷು ವಾಸ್ತುವಿನಲ್ಲಿ ವಾಸಿಸುವ ಜನರಿಗೆ ಅಂತಹ ವಾಸ್ತುವಿನಲ್ಲಿ ವಾಸವಾಗಿರುವುದರಿಂದಲೇ  ತಮಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂಬ ಸತ್ಯವು ಗಮನಕ್ಕೆ ಬರುವುದಿಲ್ಲ. (ಕೆಳಗೆ ನೀಡಲಾದ ವಿದಿಕ್ಷು ವಾಸ್ತುವಿನ ಚಿತ್ರಗಳನ್ನು ಗಮನಿಸಿ.)

ದಿಕ್ಸೂಚಿಯಯನ್ನು ಉಪಯೋಗಿಸಿ ದಿಕ್ಕುಗಳನ್ನು ಖಚಿತಪಡಿಸಿಕೊಳ್ಳುವ ವಿಧಾನ

ವಾಸ್ತುವಿನ ಮಧ್ಯ ಭಾಗದಲ್ಲಿರುವ ಬ್ರಹ್ಮಮಂಡಲದಲ್ಲಿ ನಿಂತು ದಿಕ್ಸೂಚಿಯನ್ನು ಉಪಯೋಗಿಸಿ ವಾಸ್ತುವಿನ ದಿಕ್ಕುಗಳ ನಿರೀಕ್ಷಣೆಯನ್ನು ಮಾಡಬೇಕು. ಬ್ರಹ್ಮಮಂಡಲದಿಂದ ನಿರೀಕ್ಷಣೆ ಮಾಡಿದಾಗ ಮಾತ್ರ ನಮಗೆ ಸರಿಯಾದ ದಿಕ್ಕುಗಳ ಜ್ಞಾನವಾಗುತ್ತದೆ.

ಅ. 4 ಪ್ರಮುಖ ದಿಕ್ಕುಗಳು : ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ

ಆ. 4 ಉಪದಿಕ್ಕುಗಳು : ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ.

ಇ. 2 ಮಹತ್ವದ ದಿಕ್ಕುಗಳು : ಊರ್ಧ್ವ (ಆಕಾಶ), ಅಧೋ (ಭೂಮಿ).

ಉಪದಿಕ್ಕುಗಳಿಗೆ ಇಂದಿಗೂ ವಿಶೇಷ ಹೆಸರುಗಳಿರುವ ಏಕೈಕ ರಾಷ್ಟ್ರ – ಭಾರತ

ಭಾರತೀಯ ಶಾಸ್ತ್ರಗಳಲ್ಲಿ 4 ಮುಖ್ಯ ದಿಕ್ಕುಗಳಿಗೆ ವಿಶೇಷ ಮಹತ್ವವಿದೆ. ಆದುದರಿಂದ ಅವುಗಳಿಗೆ ಹೆಸರುಗಳನ್ನು ನೀಡಿದಂತೆಯೇ, ಉಪದಿಕ್ಕುಗಳಿಗೂ ಅಷ್ಟೇ ಮಹತ್ವವಿರುವುದರಿಂದ ಶಾಸ್ತ್ರಕಾರರು ಉಪದಿಕ್ಕುಗಳಿಗೆ ವಿಶೇಷ ಹೆಸರುಗಳನ್ನು ನೀಡಿದ್ದಾರೆ. ಆ ವಿಶೇಷ ಹೆಸರುಗಳನ್ನು ಇಂದಿಗೂ ಉಪಯೋಗಿಸುವ ಏಕೈಕ ರಾಷ್ಟ್ರವೆಂದರೆ ಭಾರತ. ಇತರ ರಾಷ್ಟ್ರಗಳಲ್ಲಿ ಉಪದಿಕ್ಕುಗಳನ್ನು ‘ಎರಡು ದಿಕ್ಕುಗಳು ಸೇರಿ ಸಿದ್ಧವಾದ ದಿಕ್ಕು’ ಎಂಬಂತಹ ಹೆಸರನ್ನು ಉಪಯೋಗಿಸುತ್ತಾರೆ, ಉದಾ. North-East (ಉತ್ತರ-ಪೂರ್ವ), South-East (ದಕ್ಷಿಣ-ಪೂರ್ವ) ಇತ್ಯಾದಿ.

ದಿಕ್ಕುಗಳ ವೈಶಿಷ್ಟ್ಯಗಳು

ನಮ್ಮ ಶಾಸ್ತ್ರಗಳ ಪ್ರಕಾರ ಉಪದಿಕ್ಕುಗಳಿಗೂ ವೈಶಿಷ್ಟ್ಯಗಳು, ಕಾರಕತ್ವ (ಯಾವ ಫಲವನ್ನು ನೀಡಲು ಆ ದಿಕ್ಕು ಬದ್ಧವಾಗಿದೆಯೋ ಅದು), ಸ್ವಾಮಿ ಮತ್ತು ದಿಕ್ಪಾಲಕರು ಬೇರೆ ಬೇರೆಯಾಗಿರುವುದರಿಂದ ಅವುಗಳಿಗೆ ಸ್ವತಂತ್ರ ಹೆಸರಿವೆ. ದಿಕ್ಕುಗಳ ಹೆಸರಿನಲ್ಲೇ ಅವುಗಳ ವೈಶಿಷ್ಟ್ಯಗಳನ್ನು ಗುರುತಿಸಬಹುದು.

ಅ. ಪೂರ್ವ : ಪೂರ್ವ ಎಂದರೆ ಯಾವುದು ಮೊದಲು ಬರುತ್ತದೆಯೋ ಅದು, ಪ್ರಥಮ ದರ್ಜೆಯ ದಿಕ್ಕು.

ಆ. ದಕ್ಷಿಣ : ದಕ್ಷಿಣ ಎಂದರೆ ಹಂತಹಂತವಾಗಿ ಕ್ಷೀಣಗೊಳಿಸುವ ದಿಕ್ಕು.

ಇ. ಪಶ್ಚಿಮ : ಪಶ್ಚಿಮ ಎಂದರೆ ‘ಪಶ್ಚಾತ್’ ಅಂದರೆ ನಂತರ ಬರುವ ಅಥವಾ ಹಿಂದೆ ಇರಬೇಕಾದ ದಿಕ್ಕು.

ಉ. ಉತ್ತರ : ಪ್ರಶ್ನೆಗೆ ಉತ್ತರ ಸಿಗುವ ದಿಕ್ಕು ಉತ್ತರ.

ಊ. ಆಗ್ನೇಯ : ಅಗ್ನಿತತ್ತ್ವದ ಸ್ಥಾನವಿರುವ ದಿಕ್ಕು

ಋ. ನೈಋತ್ಯ : ಯಾವ ದಿಕ್ಕಿನಲ್ಲಿ ನಿಋತಿ ಅಂದರೆ ರಾಕ್ಷಸರ ಸ್ಥಾನವಿರುತ್ತದೆಯೋ ಅದು.

ಎ. ವಾಯವ್ಯ : ವಾಯುತತ್ತ್ವದ ದಿಕ್ಕು, ವಾಯುವಿನಂತೆ ಚಂಚಲ.

ಏ. ಈಶಾನ್ಯ : ಅಂದರೆ ಈಶ್ವರನ ದಿಕ್ಕು, ಯಾವ ಸ್ಥಳದಲ್ಲಿ ದೇವತೆಗಳ ವಾಸವಿರುತ್ತದೆಯೋ ಅದು.

ಉಪದಿಕ್ಕುಗಳ ವಿಭಜನೆ

ದೊಡ್ಡ ವಿಸ್ತೀರ್ಣದ ವಾಸ್ತುವಿನಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ಸ್ಥಾನವನ್ನು ನಿಶ್ಚಯಿಸಲು ಉಪದಿಕ್ಕುಗಳನ್ನೂ ವಿಭಾಗಿಸಲಾಗಿದೆ. ಉದಾ. ಆಗ್ನೇಯ ದಿಕ್ಕನ್ನು ಎರಡು ಭಾಗ ಮಾಡಿದರೆ ಪೂರ್ವ ದಿಕ್ಕಿಗೆ ಹೊಂದಿಕೊಂಡಿರುವ ಭಾಗವನ್ನು ‘ಪೂರ್ವ ಆಗ್ನೇಯ’, ಮತ್ತು ದಕ್ಷಿಣ ದಿಕ್ಕಿಗೆ ಹೊಂದಿಕೊಂಡಿರುವ ಭಾಗವನ್ನು ‘ದಕ್ಷಿಣ ಆಗ್ನೇಯ’ ಎನ್ನುತ್ತಾರೆ. ಪೂರ್ವ-ಆಗ್ನೇಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳ ಪರಿಣಾಮಗಳು ಬೇರೆ ಬೇರೆಯಾಗಿರುತ್ತವೆ. ಒಂದು ವೇಳೆ ಪೂರ್ವ-ಆಗ್ನೇಯ ದಿಕ್ಕು ವೃದ್ಧಿಯಾದರೆ ಅದರ ಪರಿಣಾಮವೇ ಬೇರೆ ಮತ್ತು ದಕ್ಷಿಣ ಆಗ್ನೇಯ ದಿಕ್ಕು ಹೆಚ್ಚಾಗಿದ್ದರೆ ಅದರ ಅನುಭವವೇ ಬೇರೆಯಾಗಿರುತ್ತದೆ; ಆದುದರಿಂದಲೇ ವಾಸ್ತುಶಾಸ್ತ್ರದಲ್ಲಿ ಈ ಉಪದಿಕ್ಕುಗಳನ್ನೂ ವಿಭಜಿಸಲಾಗಿದೆ.

ಅ. ಉಪದಿಕ್ಕುಗಳ ವಿಭಜನೆ !

ಪೂರ್ವ-ಆಗ್ನೇಯ
ದಕ್ಷಿಣ-ಆಗ್ನೇಯ
ದಕ್ಷಿಣ-ನೈಋತ್ಯ
ಪಶ್ಚಿಮ-ನೈಋತ್ಯ
ಪಶ್ಚಿಮ-ವಾಯವ್ಯ
ಉತ್ತರ-ವಾಯವ್ಯ
ಉತ್ತರ-ಈಶಾನ್ಯ
ಪೂರ್ವ-ಈಶಾನ್ಯ

(ಆಧಾರ ಗ್ರಂಥ : ‘ನಾರದ ಸಂಹಿತಾ’, ‘ಮಯಮತಮ್’, ‘ವಿಶ್ವಕರ್ಮಪ್ರಕಾಶ’)

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ),

Leave a Comment