ಗುರುತತ್ತ್ವದ ವಿವಿಧ ರೂಪಗಳ ಸಂಗಮ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತೀಯ ಪರಂಪರೆಯಲ್ಲಿನ ಶ್ರೀ ಗುರುಗಳ ವಿವಿಧ ರೂಪಗಳು, ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಗುರುತತ್ತ್ವದ ಎಲ್ಲ ಗುಣಲಕ್ಷಣಗಳಿಂದ ಪರಿಪೂರ್ಣರಾಗಿರುವ ‘ಪರಮ ಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ಗುರು ಮತ್ತು ಶ್ರೀ ಗುರು ಪರಂಪರೆಗೆ ಬಹಳ ಮಹತ್ವ ನೀಡಲಾಗಿದೆ. ‘ಗುರು’ ಎಂಬ ಶಬ್ದ ಕೇಳಿದಾಕ್ಷಣ ಮನಸ್ಸಿನಲ್ಲಿ ಗುರುರೂಪಿ ಪರಮೇಶ್ವರನ ಬಗ್ಗೆ ಗೌರವಭಾವ, ಕೃತಜ್ಞತಾಭಾವ ಮತ್ತು ಶರಣಾಗತ ಭಾವಗಳು ಜಾಗೃತಗೊಂಡು ಮನಸ್ಸು ಗುರುಭಕ್ತಿಯಿಂದ ತುಂಬಿ ಬರುತ್ತದೆ. ಇಂತಹ ‘ಶ್ರೀ ಗುರುಗಳ ಕೃಪಾಶೀರ್ವಾದ ಲಭಿಸಲಿ’ ಎಂದು ಸಾಧಕರು ಮತ್ತು ಶಿಷ್ಯರು ಬಯಸುತ್ತಾರೆ. ಅದಕ್ಕಾಗಿಯೇ ಸಂತ ಏಕನಾಥ ಮಹಾರಾಜರು ಶ್ರೀ ಗುರುಗಳ ಮಹತ್ವವನ್ನು ವಿವರಿಸುವಾಗ, ‘ಗುರು ಸಾಕ್ಷಾತ್‌ ಪರಮಾತ್ಮನೇ ಆಗಿದ್ದಾನೆ, ಇಂತಹ ದೃಢವಾದ ವಿಶ್ವಾಸ ಶಿಷ್ಯನಿಗೆ ಇರಬೇಕು’ ಎಂದು ಹೇಳಿದ್ದಾರೆ. ಹಾಗೆಯೇ ಶ್ರೀ. ಶಂಕರ ವೈದ್ಯರು ‘ಗುರುವಿನ ಹೊರತು ಬೇರೆ ಆಧಾರವಿಲ್ಲ !’ ಎಂದು ಹೇಳಿದ್ದಾರೆ. ಇಂತಹ ಶ್ರೀ ಗುರುಗಳಿಗೆ ಕಾರ್ಯಾನುಮೇಯವಾಗಿ ಅಸಂಖ್ಯ ರೂಪಗಳಿದ್ದು, ಅವು ವಿಶ್ವಕಲ್ಯಾಣಕ್ಕಾಗಿ ಅವಿರತವಾಗಿ ಕಾರ್ಯನಿರತವಾಗಿರುತ್ತವೆ. ಗುರುತತ್ತ್ವವು ಅವತಾರಗಳ, ದೇವತೆಗಳ, ಋಷಿಮುನಿಗಳ ಮತ್ತು ಭಕ್ತರ ಮೂಲಕ ವಿವಿಧ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ರೂಪದಲ್ಲಿ ಗುರುಗಳ ಮಹತ್ವವನ್ನು ಎಷ್ಟು ವರ್ಣಿಸಿದರೂ ಅದು ಕಡಿಮೆಯೇ. ಆದರೂ ನನ್ನ ಅಲ್ಪಬುದ್ಧಿಗೆ ಏನು ತಿಳಿದಿದೆಯೋ ಅದನ್ನು ನಾನು ಲೇಖನ ರೂಪದಲ್ಲಿ ಬರೆದು ಭಕ್ತಿಭಾವದಿಂದ ಶ್ರೀ ಗುರುಚರಣಗಳಿಗೆ ಅರ್ಪಿಸುತ್ತಿದ್ದೇನೆ.

೧. ಗುರು

ಯಾವುದೇ ಜೀವವು ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ, ಅವನು ‘ಸಂತ’ನಾಗುತ್ತಾನೆ. ಆಧ್ಯಾತ್ಮಿಕ ಮಟ್ಟವು ಶೇ. ೭೫ ಕ್ಕೆ ತಲುಪಿದಾಗ, ಗುರುಪದದಲ್ಲಿ ವಿರಾಜಿಸುತ್ತಾನೆ. ‘ಗುರುಪದ’ ವಿರಾಜಿಸಿದ ನಂತರ ಆ ಜೀವವು ಇತರ ಜೀವಗಳಿಗೆ ಸಾಧನೆ ಮಾಡಿ ಮುಕ್ತಿ ಮತ್ತು ಮೋಕ್ಷವನ್ನು ಪಡೆಯಲು ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡುತ್ತದೆ. ಉದಾಹರಣೆಗೆ, ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡಿ ಅವರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಂಡಿದ್ದರು.

೨. ಕುಲಗುರು

ಗುರುಗಳು ಯಾವುದಾದರೊಂದು ಕುಲದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರೆ, ಅವರನ್ನು ‘ಕುಲಗುರು’ ಎನ್ನುತ್ತಾರೆ. ಕುಲಗುರುಗಳು ಕುಲದ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಕುಲಾಚಾರ ಪಾಲಿಸುವಂತೆ ಮಾಡಿಸಿ, ಅವರಿಂದ ಧರ್ಮಾಚರಣೆ ಮಾಡಿಸಿಕೊಳ್ಳುತ್ತಾರೆ. ಕುಲಗುರುಗಳು ಸಂಪೂರ್ಣ ಕುಲದ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯನ್ನು ಮಾಡಿಸಲು ಅವರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ಗರ್ಗಮುನಿಗಳು ಯಾದವ ಕುಲದ ಮತ್ತು ಶಾಂಡಿಲ್ಯ ಋಷಿಗಳು ನಂದಕುಲದ ಕುಲಗುರುಗಳಾಗಿದ್ದರು.

೩. ಯೋಗಗುರು

ಯಾವ ಗುರುಗಳು ತಮ್ಮ ಶಿಷ್ಯರಿಗೆ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ಧ್ಯಾನಯೋಗ, ಹಠಯೋಗ, ಶಕ್ತಿಪಾತಯೋಗ ಇತ್ಯಾದಿ ಯೋಗಮಾರ್ಗಗಳಂತೆ ಸಾಧನೆ ಮಾಡಲು ಮಾರ್ಗದರ್ಶನ ಮಾಡುತ್ತಾರೋ, ಅವರನ್ನು ‘ಯೋಗಗುರು’ ಎನ್ನುತ್ತಾರೆ. ಉದಾಹರಣೆಗೆ, ಪತಂಜಲಿ ಋಷಿಗಳು ಯೋಗಸಾಧನೆ ಮಾಡಿ ತಮ್ಮ ಶಿಷ್ಯರಿಗೆ ಅವರ ಪ್ರಕೃತಿಗನುಸಾರವಾಗಿ ಶಕ್ತಿಪಾತಯೋಗ, ಜ್ಞಾನಯೋಗ ಇತ್ಯಾದಿ ಯೋಗಗಳನ್ನು ಕಲಿಸಿದರು. ಪತಂಜಲಿ ಋಷಿಗಳು ವಿವಿಧ ರೀತಿಯ ಯೋಗಾಸನಗಳನ್ನು ಕಂಡುಹಿಡಿದು ಅದರಿಂದ ‘ಅಷ್ಟಾಂಗ ಯೋಗ’ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ) ಕಲಿಸಿ ಹಠಯೋಗದಿಂದ ಈಶ್ವರಪ್ರಾಪ್ತಿ ಮಾಡುವ ಮಾರ್ಗವನ್ನು ತೋರಿಸಿದರು. ಕುರುಕ್ಷೇತ್ರದಲ್ಲಿ ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಅಷ್ಟಾಂಗ ಯೋಗದ ಅನುಸಾರ ಸಾಧನೆ ಮಾಡುವ ಬಗ್ಗೆಯೂ ಮಾರ್ಗದರ್ಶನ ಮಾಡಿದ್ದನು.

೪. ದೀಕ್ಷಾಗುರು

ಶಕ್ತಿಪಾತಯೋಗಕ್ಕನುಸಾರ ಸಾಧನೆ ಮಾಡುವ ಜೀವಕ್ಕೆ ಶ್ರೀ ಗುರುಗಳಿಂದ ದೀಕ್ಷೆ ಸಿಗುವಾಗ, ಸುಪ್ತಾವಸ್ಥೆಯಲ್ಲಿರುವ ಅವನ ಕುಂಡಲಿನಿ ಶಕ್ತಿಯು ಜಾಗೃತವಾಗುತ್ತದೆ. ಈ ರೀತಿ ಶಿಷ್ಯನಿಗೆ ಶಕ್ತಿಪಾತಯೋಗದ ದೀಕ್ಷೆ ನೀಡುವ ಶ್ರೀ ಗುರುಗಳಿಗೆ ‘ದೀಕ್ಷಾಗುರು’ ಎನ್ನುತ್ತಾರೆ. ಉದಾಹರಣೆಗೆ, ಆದಿಗುರು ಶಂಕರಾಚಾರ್ಯರು ‘ಗಿರಿ’ ಎಂಬ ಮೂಢ ವ್ಯಕ್ತಿಗೆ ದೀಕ್ಷೆ ನೀಡಿ, ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು. ದೀಕ್ಷೆ ನೀಡಿದ್ದರಿಂದ ಅವನ ಕುಂಡಲಿನಿ ಶಕ್ತಿ ಜಾಗೃತವಾಗಿ ಅವನಿಗೆ ಆತ್ಮಜ್ಞಾನ ಪ್ರಾಪ್ತವಾಯಿತು. ಆಗ ಗಿರಿಯು ಒಂದು ಭಾವಪೂರ್ಣ ಅಷ್ಟಕವನ್ನು ರಚಿಸಿದ. ಆದಿಗುರು ಶಂಕರಾಚಾರ್ಯರು ಈ ಅಷ್ಟಕವನ್ನು ಕೇಳಿದಾಗ, ಅವರು ಗಿರಿಯ ಮೇಲೆ ಪ್ರಸನ್ನರಾದರು ಮತ್ತು ‘ಗಿರಿ’ಯನ್ನು ‘ತೋಟಕಾಚಾರ್ಯ’ ಎಂದು ಹೆಸರಿಸಿದರು. ಆ ಅಷ್ಟಕವು ‘ತೋಟಕಾಷ್ಟಕಂ’ ಎಂದು ಪ್ರಸಿದ್ಧವಾಯಿತು.

೫. ಗುಣಗುರು

ಚರಾಚರದಲ್ಲಿರುವ ಪ್ರತಿಯೊಂದು ಜೀವದಿಂದ ನಾವು ಏನನ್ನಾದರೂ ಕಲಿಯಬಹುದು. ಪ್ರತಿಯೊಂದು ಜೀವದಲ್ಲಿರುವ ಗುಣ ಅಥವಾ ಅವಗುಣಗಳನ್ನು ಗುರುತಿಸಿ ಅದರಿಂದ ಜ್ಞಾನವನ್ನು ಪಡೆಯುವುದಕ್ಕೆ ‘ಚರಾಚರದಲ್ಲಿರುವ ಪ್ರತಿಯೊಂದು ಜೀವದಿಂದ ಕಲಿಯುವುದು’ ಎಂದು ಹೇಳಲಾಗುತ್ತದೆ. ಆದ್ದರಿಂದ ಪ್ರತಿಯೊಂದು ಜೀವವೂ ಇನ್ನೊಂದಕ್ಕೆ ‘ಗುಣಗುರು’ ಆಗಿರುತ್ತದೆ. ಉದಾಹರಣೆಗೆ, ಭಗವಾನ್‌ ದತ್ತಾತ್ರೇಯರು ಸ್ವತಃ ಗುರುಗಳಾಗಿದ್ದರೂ, ಅವರು ಕೀಟ-ಪತಂಗದಿಂದ ಹಿಡಿದು ಹೆಬ್ಬಾವಿನವರೆಗೆ ೪ ಗುರುಗಳು ಮತ್ತು ೨೪ ಉಪಗುರುಗಳಿಂದ ಗುಣ ಮತ್ತು ಅವಗುಣಗಳನ್ನು ಅರಿತು ಕಲಿತರು.

೬. ಅನುಭವಿಗುರು

ಯಾರ ಅನುಭವದಿಂದ ನಮಗೆ ಕಲಿಯಲು ಸಿಗುತ್ತದೆಯೋ, ಅವರನ್ನು ‘ಅನುಭವಿಗುರು’ ಎನ್ನುತ್ತಾರೆ. ಉದಾಹರಣೆಗೆ, ಮಹಾಭಾರತ ಯುದ್ಧದ ನಂತರ ಭಗವಾನ್‌ ಶ್ರೀಕೃಷ್ಣನು ಪಾಂಡವರೊಂದಿಗೆ ಶರಪಂಜರದಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ದರ್ಶನಕ್ಕೆ ಕುರುಕ್ಷೇತ್ರಕ್ಕೆ ಬಂದಾಗ, ಅವರು ಯುಧಿಷ್ಠಿರನಿಗೆ ಭೀಷ್ಮಾಚಾರ್ಯರಿಂದ ಅನುಭವಗಳನ್ನು ಕಲಿಯಲು ಹೇಳುತ್ತಾರೆ. ಭೀಷ್ಮಾಚಾರ್ಯರು ಶ್ರೀಕೃಷ್ಣನಿಗೆ, ‘‘ಭಗವಂತ, ನೀವು ಪರಮ ಜ್ಞಾನಿಯಾಗಿರುವಾಗ ಯುಧಿಷ್ಠಿರನಿಗೆ ನನ್ನಿಂದ ಕಲಿಯಲು ಏಕೆ ಹೇಳುತ್ತಿದ್ದೀರಿ ?’’ ಎಂದು ಕೇಳಿದಾಗ ಶ್ರೀಕೃಷ್ಣನು, ‘‘ನನ್ನ ಬಳಿ ಜ್ಞಾನವಿದೆ; ಆದರೆ ಅನುಭವವಿಲ್ಲ. ಆದ್ದರಿಂದ ನಾನು ಯುಧಿಷ್ಠಿರನಿಗೆ ಹಾಗೆ ಹೇಳಿದೆ’’ ಎನ್ನುತ್ತಾನೆ. ಆಗ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಸ್ವತಃ ರಾಜಧರ್ಮವನ್ನು ಪಾಲಿಸುವಾಗ ‘ಭೀಷ್ಮಪ್ರತಿಜ್ಞೆಯ ಕಾರಣದಿಂದ ಹಸ್ತಿನಾಪುರ ರಾಜ್ಯವನ್ನು ವಿಭಜಿಸಿದ್ದು, ದುರ್ಯೋಧನನ ಮಾತಿನಂತೆ ದುಃಶಾಸನನಿಂದ ಕುಲವಧು ದ್ರೌಪದಿಯ ವಸ್ತ್ರಹರಣವಾದಾಗ ಮೌನವಾಗಿದ್ದು, ಮಹಾಭಾರತ ಯುದ್ಧದಲ್ಲಿ ಅಧರ್ಮದ ಅಂದರೆ ಕೌರವರ ಪಕ್ಷ ವಹಿಸಿದ್ದು’ – ತಮ್ಮಿಂದಾದ ಇಂತಹ ಅಕ್ಷಮ್ಯ ತಪ್ಪುಗಳನ್ನು ಅಪರಾಧಭಾವದಿಂದ ಉಲ್ಲೇಖಿಸಿ, ‘ಯಾವುದೇ ರಾಜನು ಸರಿಯಾದ ರಾಜಧರ್ಮವನ್ನು ಹೇಗೆ ಪಾಲಿಸಬೇಕು’ ಎಂಬುದರ ಜ್ಞಾನವನ್ನು ನೀಡುತ್ತಾರೆ.

೭. ಉಪಾಯಗುರು

ಕೆಲವು ಗುರುಗಳು ತಮ್ಮ ಬಳಿ ಬರುವ ಪೀಡಿತರು ಮತ್ತು ದುಃಖಿತರಿಗೆ ಅವರ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಗೆ ಉಪಾಯಗಳನ್ನು ಹೇಳಿ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಸಮಾಜದಲ್ಲಿ ಅನೇಕ ಸಂತರು ‘ಉಪಾಯಗುರು’ಗಳಾಗಿ ಸಮಾಜದ ದುಃಖವನ್ನು ನಿವಾರಿಸುತ್ತಾರೆ. ಅಸುರರಿಂದ ದೇವತೆಗಳಿಗೆ ಸಂಕಟಗಳು ಬಂದಾಗ, ದೇವತೆಗಳು ‘ಶಿವ’ ಅಥವಾ ‘ವಿಷ್ಣು’ವಿಗೆ ಶರಣಾದಾಗ ಶಿವ ಅಥವಾ ವಿಷ್ಣು ಅವರಿಗೆ ವಿವಿಧ ಉಪಾಯಗಳನ್ನು ಹೇಳಿ ಅವರ ಸಮಸ್ಯೆಯನ್ನು ಪರಿಹರಿಸುತ್ತಾರೆ. ಇಲ್ಲಿ ಶಿವ ಅಥವಾ ವಿಷ್ಣುವು ‘ಉಪಾಯಗುರು’ಗಳಾಗಿ ದೇವತೆಗಳಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ಸನಾತನ ಸಂಸ್ಥೆಯಲ್ಲಿರುವ ಸದ್ಗುರು ಡಾ. ಮುಕುಲ ಗಾಡಗೀಳರು ಸಾಧಕರಿಗೆ ಆಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ, ಹೀಗೆ ವಿವಿಧ ರೀತಿಯ ತೊಂದರೆಗಳಿಗೆ ವಿವಿಧ ದೇವತೆಗಳ ಮತ್ತು ತತ್ತ್ವಗಳ ನಾಮಜಪ, ನ್ಯಾಸ ಮತ್ತು ಮುದ್ರೆಗಳನ್ನು ಕಂಡುಹಿಡಿದು ಉಪಾಯಗಳನ್ನು ಹೇಳುತ್ತಾರೆ.

೮. ಮಂತ್ರಗುರು

ಯಾವ ಗುರುಗಳು ಮಂತ್ರವನ್ನು ನೀಡಿ ಶಿಷ್ಯನ ಉದ್ಧಾರವನ್ನು ಮಾಡುತ್ತಾರೋ, ಅವರನ್ನು ‘ಮಂತ್ರಗುರು’ ಎಂದು ಕರೆಯುತ್ತಾರೆ.

ಉದಾ. ೧. ಬಾಲ ಮಾರ್ಕಂಡೇಯನ ಪ್ರಾರಬ್ಧದಲ್ಲಿ ಅಪಮೃತ್ಯುಯೋಗವಿತ್ತು. ಆದ್ದರಿಂದ ೧೬ ವರ್ಷದ ಬಾಲ ಮಾರ್ಕಂಡೇಯನ ಮೃತ್ಯು ಸಮೀಪಿಸಿದಾಗ, ಅವನು ನಿರಂತರ ಶಿವನ ಆರಾಧನೆಯನ್ನು ಪ್ರಾರಂಭಿಸಿದನು. ಆಗ ಶಿವನ ಕೃಪೆಯಿಂದ ಅವನಿಗೆ ಮಹಾಮೃತ್ಯುಂಜಯ ಎಂಬ ಮಹಾಮಂತ್ರದ ಜ್ಞಾನವಾಯಿತು. ಅನಂತರ ಬಾಲ ಮಾರ್ಕಂಡೇಯನು ಅರಣ್ಯಕ್ಕೆ ಹೋಗಿ ಮಹಾಮೃತ್ಯುಂಜಯ ಮಂತ್ರವನ್ನು ನಿರಂತರವಾಗಿ ಜಪಿಸಿದನು. ಆದ್ದರಿಂದ ಯಮನು ಅವನ ಪ್ರಾಣವನ್ನು ಹರಣ ಮಾಡಲು ಬಂದಾಗ, ಅರಣ್ಯದಲ್ಲಿ ಸಾಕ್ಷಾತ್‌ ಶಿವನು ಪ್ರಕಟನಾದನು ಮತ್ತು ಬಾಲ ಮಾರ್ಕಂಡೇಯನನ್ನು ರಕ್ಷಿಸಿ, ಅವನಿಗೆ ಏಳು ಕಲ್ಪಗಳ ವರೆಗೆ ಚಿರಂಜೀವಿಯಾಗುವ ವರವನ್ನು ನೀಡಿದನು. ಶಿವನ ಕೃಪೆಯಿಂದಲೇ ಮಾರ್ಕಂಡೇಯ ಋಷಿ ಅಮರರಾದರು ಮತ್ತು ಮಾರ್ಕಂಡೇಯ ಪುರಾಣ ಹಾಗೂ ದೇವಿಯ ‘ಸಪ್ತಶತಿ’ ಎಂಬ ಗ್ರಂಥಗಳನ್ನು ರಚಿಸಿದರು.

ಉದಾ. ೨. ಕುಂತಿಯು ಮನಃಪೂರ್ವಕವಾಗಿ ದುರ್ವಾಸ ಋಷಿಗಳ ಸೇವೆಯನ್ನು ಮಾಡಿದ್ದರಿಂದ, ದುರ್ವಾಸ ಋಷಿಗಳು ಅವಳಿಗೆ ‘ವಶೀಕರಣ’ದ ವಿವಿಧ ಮಂತ್ರಗಳನ್ನು ನೀಡಿದ್ದರು. ಈ ಮಂತ್ರಗಳನ್ನು ಪ್ರಯೋಗಿಸಿದಾಗ ಕುಂತಿಯು ಯಮಧರ್ಮನಿಂದ ಯುಧಿಷ್ಠಿರನನ್ನು, ಪವನದೇವತೆಯಿಂದ ಭೀಮನನ್ನು ಮತ್ತು ಇಂದ್ರನಿಂದ ಅರ್ಜುನನನ್ನು ಪುತ್ರನಾಗಿ ಪಡೆದಳು. ಹಾಗೆಯೇ ಅವಳು ಈ ಮಂತ್ರಗಳನ್ನು ತನ್ನ ಸವತಿ ಮಾದ್ರಿಗೂ ನೀಡಿದಳು. ಇದರಿಂದ ಮಾದ್ರಿಯು ‘ದಸ್ತ್ರ ಮತ್ತು ನಾಸತ್ಯ’ ಎಂಬ ಅಶ್ವಿನಿಕುಮಾರರಿಂದ ನಕುಲ ಮತ್ತು ಸಹದೇವ ಎಂಬ ಪುತ್ರರನ್ನು ಪಡೆದಳು.

೯. ಮಾರ್ಗದರ್ಶಕ ಗುರು

ಯಾವ ಗುರುಗಳು ಶಿಷ್ಯನ ಆವಶ್ಯಕತೆಯನ್ನು ಅರಿತು, ವಿವಿಧ ರೂಪಗಳಲ್ಲಿ ಅಥವಾ ವಿವಿಧ ಪ್ರಸಂಗಗಳಲ್ಲಿ ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಾರೆಯೋ, ಅವರಿಗೆ ‘ಮಾರ್ಗದರ್ಶಕ ಗುರು’ ಎನ್ನುತ್ತಾರೆ. ಅನೇಕ ಬಾರಿ ಕೆಲವು ಶಿಷ್ಯರಿಗೆ ಒಂದಕ್ಕಿಂತ ಹೆಚ್ಚು ಸಂತರು ಅಥವಾ ಗುರುಗಳ ದರ್ಶನ ಮತ್ತು ಮಾರ್ಗದರ್ಶನ ಲಭಿಸುತ್ತದೆ. ಇವರಲ್ಲಿ ಎಲ್ಲ ಸಂತರು ಅಥವಾ ಗುರುಗಳು ಅವರ ಮೋಕ್ಷ ಗುರುಗಳಾಗಿರದೆ, ಅವರು ಆ ಶಿಷ್ಯನಿಗೆ ಕೇವಲ ನಿರ್ದಿಷ್ಟ ವಿದ್ಯೆ ಅಥವಾ ಜ್ಞಾನವನ್ನು ನೀಡಲು ಅವರ ಜೀವನದಲ್ಲಿ ಬಂದಿರುತ್ತಾರೆ. ಆದ್ದರಿಂದ ಅವರಿಗೆ ‘ಮಾರ್ಗದರ್ಶಕ ಗುರು’ ಎಂದು ಸಂಬೋಧಿಸಲಾಗಿದೆ.

ಉದಾಹರಣೆ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಸಿಂಧುದುರ್ಗದ ಸಂತ ಪ.ಪೂ. ಭಾವು ಮಸೂರಕರ ಅವರಿಂದ ಸಂಖ್ಯಾಶಾಸ್ತ್ರ, ಪ.ಪೂ. ವಟಕರ ಮಹಾರಾಜರಿಂದ ವಿವಿಧ ರೀತಿಯ ಮುದ್ರೆಗಳ, ಪ.ಪೂ. ಡಬರಾಲವಾಲೆ ಬಾಬಾ ಅವರಿಂದ ಅನಿಷ್ಟ ಶಕ್ತಿಗಳ ತೊಂದರೆಗಳು ಮತ್ತು ಅವುಗಳ ಪರಿಹಾರಗಳ ಕುರಿತು ಮಾರ್ಗದರ್ಶನ ದೊರೆಯಿತು. ಹೀಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಪ.ಪೂ. ಭಕ್ತರಾಜ ಮಹಾರಾಜರು ‘ಮೋಕ್ಷಗುರುಗಳು’ ಆಗಿದ್ದರು ಹಾಗೂ ಅವರ ಜೀವನದಲ್ಲಿ ಬಂದ ವಿವಿಧ ಸಂತರು ಅವರ ‘ಮಾರ್ಗದರ್ಶಕ ಗುರು’ಗಳಾಗಿದ್ದರು.

೧೦. ಸಮಷ್ಟಿ ಗುರು

ಯಾವ ಗುರುಗಳು ಶಿಷ್ಯಂದಿರಿಗೆ ವ್ಯಷ್ಟಿ ಸ್ತರದಲ್ಲಿ ಮೋಕ್ಷಪ್ರಾಪ್ತಿಯ ಜೊತೆಗೆ, ಸಮಾಜದಲ್ಲಿ ಧರ್ಮ ಮತ್ತು ಅಧ್ಯಾತ್ಮವನ್ನು ಪ್ರಸಾರ ಮಾಡಿಸಿ ಸುರಾಜ್ಯ ತರಲು ಮಾರ್ಗದರ್ಶನ ಮಾಡುತ್ತಾರೋ, ಅವರನ್ನು ‘ಸಮಷ್ಟಿ ಗುರು’ ಎನ್ನುತ್ತಾರೆ. ‘ಸಮಷ್ಟಿ ಗುರು’ ಎಂದರೆ ‘ಸಮಷ್ಟಿಯ ಕಲ್ಯಾಣ ಮಾಡುವವರು’ ಎಂದರ್ಥ. ಉದಾ. ದತ್ತಾವತಾರಿ ಸಂತ ಶ್ರೀಪಾದ ಶ್ರೀವಲ್ಲಭ, ಸ್ವಾಮಿ ನೃಸಿಂಹ ಸರಸ್ವತಿ, ಸ್ವಾಮಿ ಸಮರ್ಥ ಇತ್ಯಾದಿ ಸಂತರು ಅನೇಕ ಕಡೆ ಸಂಚರಿಸಿ ಧರ್ಮಪ್ರಸಾರ ಮಾಡಿ ಪತಿತರನ್ನು ಉದ್ಧರಿಸಿದರು. ಹಾಗೆಯೇ ಅನೇಕರನ್ನು ಅನಿಷ್ಟ ಶಕ್ತಿಗಳ ತೊಂದರೆಗಳಿಂದ ಮುಕ್ತಗೊಳಿಸಿದರು ಮತ್ತು ಅನೇಕರ ಪ್ರಾರಬ್ಧ ಭೋಗಗಳನ್ನು ಸಹನೀಯವಾಗುವಂತೆ ಮಾಡಿ ಅವರಿಗೆ ಮುಕ್ತಿ ನೀಡಿದರು.

೧೧. ಸದ್ಗುರು

ಯಾರು ನಿರಂತರವಾಗಿ ಸಚ್ಚಿದಾನಂದ ಸ್ಥಿತಿಯನ್ನು ಅನುಭವಿಸುತ್ತಾರೆಯೋ, ಅವರನ್ನು ‘ಸದ್ಗುರು’ಗಳು ಎನ್ನುತ್ತಾರೆ. ಸದ್ಗುರುಗಳು ಜಿಜ್ಞಾಸು, ಮುಮುಕ್ಷು, ಸಾಧಕ ಮತ್ತು ಶಿಷ್ಯರಿಗೆ ಮಾತ್ರವಲ್ಲ, ಸಂತರಿಗೂ ಸಾಧನೆಯ ವಿಷಯದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎರಡೂ ಸ್ತರಗಳಲ್ಲಿ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಉದಾಹರಣೆಗೆ, ವೈಷ್ಣವ ಪಂಥದ ಸದ್ಗುರುಗಳಾದ ರಾಮಾನಂದಾಚಾರ್ಯರು ಸಂತ ಕಬೀರ, ಸಂತ ರವಿದಾಸ, ಸಂತ ಪೀಪಾಜಿ ಮುಂತಾದ ಅನೇಕ ಸಂತರಿಗೆ ಮಾರ್ಗದರ್ಶನ ಮಾಡಿ ಅವರನ್ನು ಸಂತ ಪದವಿಯನ್ನೂ ಮೀರಿಸಿ ಮುಂದಕ್ಕೆ ಕರೆದೊಯ್ದರು.

೧೨. ಪರಾತ್ಪರ ಗುರು

ಪರಾತ್ಪರ ಗುರು ಪದವಿಯಲ್ಲಿರುವ ಗುರುಗಳು ವಿಶ್ವ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಆದ್ದರಿಂದ ಅವರನ್ನು ‘ಪರಮಹಂಸ ಗುರು’ಗಳು ಎನ್ನುತ್ತಾರೆ. ಉದಾ, ಯೋಗಿ ಅರವಿಂದರು ಪರಾತ್ಪರ ಗುರುಗಳಾಗಿದ್ದರಿಂದ ಹಿಟ್ಲರ್ ಭಾರತದ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿದಾಗ, ಯೋಗಿ ಅರವಿಂದರು ಹಿಟ್ಲರ್‍ನಲ್ಲಿದ್ದ ಅನಿಷ್ಟ ಶಕ್ತಿಯೊಂದಿಗೆ ಸೂಕ್ಷ್ಮದಲ್ಲಿ ಯುದ್ಧ ಮಾಡಿ ಅದನ್ನು ಸೋಲಿಸಿ ನಾಶಪಡಿಸಿದರು. ಇದರಿಂದ ಭಾರತವು ಹಿಟ್ಲರ್ ನ ಆಕ್ರಮಣದಿಂದ ರಕ್ಷಿಸಲ್ಪಟ್ಟಿತು. (ಉಲ್ಲೇಖ: ‘ಸರ್ಚ್ ಫಾರ್ ಲೈಟ್’ ಜಾಲತಾಣ)

೧೩. ಮೋಕ್ಷ ಗುರು

ಒಬ್ಬ ಬಂಧಿತ ವ್ಯಕ್ತಿ ಬಂಧನದಲ್ಲಿರುವ ಇನ್ನೊಬ್ಬ ವ್ಯಕ್ತಿಯನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ, ಅದೇ ರೀತಿ ಮೋಕ್ಷ ಪಡೆಯದಿರುವ ಜೀವ ಇತರರಿಗೆ ಮೋಕ್ಷ ಪ್ರಾಪ್ತಿಯ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ.

ಇದರರ್ಥ ಯಾರು ಸ್ವತಃ ಮೋಕ್ಷವನ್ನು ಪಡೆದಿರುತ್ತಾರೋ, ಅವರು ಮಾತ್ರ ಇತರರಿಗೆ ಮೋಕ್ಷವನ್ನು ನೀಡಬಲ್ಲರು. ಇಂತಹ (ಆಧ್ಯಾತ್ಮಿಕ) ಅಧಿಕಾರಿ ವ್ಯಕ್ತಿಯನ್ನು ‘ಮೋಕ್ಷಗುರು’ ಎಂದು ಗೌರವದಿಂದ ಸಂಬೋಧಿಸಲಾಗುತ್ತದೆ. ಉದಾಹರಣೆಗೆ, ‘ಸಾಂದೀಪನಿ ಋಷಿಗಳು ತಮ್ಮ ಶಿಷ್ಯರಾದ ಅರುಣಿ, ಸಂದೀಪಕ ಮತ್ತು ಉಪಮನ್ಯು ಅವರ ಕಠಿಣ ಪರೀಕ್ಷಣೆ ಮಾಡಿ ಅವರಿಗೆ ಆತ್ಮಜ್ಞಾನವನ್ನು ನೀಡಿ ಮೋಕ್ಷಕ್ಕೆ ಕರೆದೊಯ್ದರು’ ಎಂದು ಗುರುಚರಿತ್ರೆಯಲ್ಲಿ ಉಲ್ಲೇಖವಿದೆ. ಪರೀಕ್ಷಿತ ರಾಜನು ಶೃಂಗಿ ಋಷಿಗಳ ತಂದೆಗೆ ಅಪಮಾನ ಮಾಡಿದುದರಿಂದ ಶೃಂಗಿ ಋಷಿಗಳು ಅವನಿಗೆ ‘ಏಳು ದಿನಗಳ ನಂತರ ತಕ್ಷಕ ಸರ್ಪ ಕಚ್ಚಿ ಮರಣ ಹೊಂದುವನು’ ಎಂದು ಶಾಪ ನೀಡುತ್ತಾರೆ. ಮಹರ್ಷಿ ವ್ಯಾಸರ ಪುತ್ರ ಶುಕದೇವರು ರಾಜಾ ಪರೀಕ್ಷಿತನ ‘ಮೋಕ್ಷ ಗುರು’ಗಳಾಗಿದ್ದರು. ಆದ್ದರಿಂದ ಶ್ರವಣ ಭಕ್ತಿಯ ಮೂರ್ತ ರೂಪವಾದ ಪರೀಕ್ಷಿತ ರಾಜನಿಗೆ ಪರಮಜ್ಞಾನಿ ಶುಕದೇವರಿಂದ ಸತತ ಏಳು ದಿನಗಳ ಕಾಲ ಶ್ರೀಮದ್ಭಾಗವತದ ಜ್ಞಾನ ಲಭಿಸಿತು ಮತ್ತು 7 ನೇ ದಿನ ಪರೀಕ್ಷಿತ ರಾಜನಿಗೆ ಸರ್ಪ ಕಚ್ಚಿ ಮರಣ ಹೊಂದಿದಾಗ ಅವನಿಗೆ ಮೋಕ್ಷ ಪ್ರಾಪ್ತವಾಯಿತು.

೧೪. ಅವತಾರಿ ಗುರು

ಭಗವಂತನ ದೇವತಾರೂಪಿ ತತ್ತ್ವವು ಪೃಥ್ವಿಯ ಮೇಲೆ ಅವತರಿಸಿ ಸಮಾಜ ಕಲ್ಯಾಣಕ್ಕಾಗಿ ಅಥವಾ ಧರ್ಮ ಸಂಸ್ಥಾಪನೆಗಾಗಿ ಕಾರ್ಯನಿರ್ವಹಿಸಿದಾಗ, ಅಂತಹ ಗುರುಗಳನ್ನು ‘ಅವತಾರಿ ಗುರು’ ಎಂದು ಕರೆಯಲಾಗುತ್ತದೆ.

೧೪ ಅ. ವ್ಯಷ್ಟಿ ಅವತಾರಿ ಗುರು : ಸಂತ ತುಳಸೀದಾಸರು ಹನುಮಂತನ ತತ್ತ್ವವಿರುವ ವಾಲ್ಮೀಕಿ ಋಷಿಗಳ ಅವತಾರವಾಗಿದ್ದರು. ಆದ್ದರಿಂದ ವಾಲ್ಮೀಕಿ ಋಷಿಗಳು ತ್ರೇತಾಯುಗದಲ್ಲಿ ‘ರಾಮಾಯಣ’ ಮತ್ತು ಕಲಿಯುಗದಲ್ಲಿ ಸಂತ ತುಳಸೀದಾಸರ ರೂಪದಲ್ಲಿ ‘ರಾಮಚರಿತಮಾನಸ’ ಗ್ರಂಥವನ್ನು ಬರೆದರು. ರಾಧೆಯ ಅವತಾರವಾಗಿದ್ದ ನವದ್ವೀಪದ ಸಂತ ಚೈತನ್ಯ ಮಹಾಪ್ರಭುಗಳು ಕೃಷ್ಣಭಕ್ತಿಯನ್ನು ಪ್ರಸಾರ ಮಾಡಿ ಅನೇಕ ಜೀವಗಳನ್ನು ಉದ್ಧರಿಸಿದರು. ಶ್ರೀವಿಷ್ಣುವಿನ ಅಂಶಾವತಾರವಾದ ಸಂತ ಸ್ವಾಮಿ ನಾರಾಯಣರೂ ಭಗವದ್ಭಕ್ತಿಯನ್ನು ಪ್ರಸಾರ ಮಾಡಿ ಸಮಾಜ ಜೀವನವನ್ನು ಸುಖಮಯಗೊಳಿಸಿ ಅನೇಕ ಪತಿತರ ಉದ್ಧಾರ ಮಾಡಿದರು.

೧೪ ಆ. ಸಮಷ್ಟಿ ಅವತಾರಿ ಗುರು : ಪ್ರಜೆಗಳಿಗೆ ಸ್ವರಾಜ್ಯ ಮತ್ತು ಸುರಾಜ್ಯದ ಸುಖವನ್ನು ಅನುಭವಿಸಲು ಸಾಧ್ಯವಾಗಬೇಕೆಂದು ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ಪರಮ ಶಿಷ್ಯ ಛತ್ರಪತಿ ಶಿವಾಜಿ ಮಹಾರಾಜರಿಗೆ ‘ಕ್ಷಾತ್ರಧರ್ಮ’ ಮತ್ತು ‘ರಾಜಧರ್ಮ’ ಪಾಲನೆಯ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅದೇ ರೀತಿ ಆರ್ಯ ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಮಾರ್ಗದರ್ಶನ ಮಾಡಿ ಭಾರತದಲ್ಲಿ ವಿಭಕ್ತವಾಗಿದ್ದ ವಿವಿಧ ರಾಜ್ಯಗಳನ್ನು ಸಂಘಟಿಸಿ ಭಾರತದಲ್ಲಿ ಏಕಚ್ಛತ್ರವಿರುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ್ದರು. ಅದೇ ರೀತಿ ವಿದ್ಯಾರಣ್ಯ ಸ್ವಾಮಿಗಳು ಹರಿಹರ ಮತ್ತು ಬುಕ್ಕರಾಯರಿಗೆ ಮಾರ್ಗದರ್ಶನ ಮಾಡಿ ದಕ್ಷಿಣ ಭಾರತದಲ್ಲಿ ‘ವಿಜಯನಗರ ಸಾಮ್ರಾಜ್ಯವೆಂಬ ಹಿಂದೂ ರಾಷ್ಟ್ರವನ್ನು’ ಸ್ಥಾಪಿಸಿದ್ದರು.

೧೫. ಗುರುತತ್ತ್ವ್ವದ ಎಲ್ಲ ಗುಣಲಕ್ಷಣಗಳಿಂದ ಪರಿಪೂರ್ಣರಾದ ‘ಪರಮ ಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಹಿಂದೂ ರಾಷ್ಟ್ರದ ಪ್ರವರ್ತಕರಾಗಿರುವ ಮತ್ತು ಅಧ್ವರ್ಯು (‘ಅಧ್ವರ’ ಎಂದರೆ ಯಜ್ಞ. ‘ಅಧ್ವರ್ಯು’ ಎಂದರೆ ಯಜ್ಞವನ್ನು ಮಾಡುವ ಪ್ರಮುಖ ಋತ್ವಿಜ [ಅಂದರೆ ಪುರೋಹಿತ]) ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಲ್ಲಿ ಇಲ್ಲಿಯವರೆಗೆ ಉಲ್ಲೇಖಿಸಲಾದ ಎಲ್ಲ ರೀತಿಯ ಗುರುಗಳ ಎಲ್ಲ ದೈವೀ ಲಕ್ಷಣಗಳು ಕಂಡುಬರುತ್ತವೆ. ಈ ರೀತಿ ಪರಿಪೂರ್ಣ ಗುರುವಾಗಿರುವ ವಿಭೂತಿ, ಅಂದರೆ ‘ಪರಮ ಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ. ಆದ್ದರಿಂದ ಅವರು ಪರಿಪೂರ್ಣ ಗುರುಪದವಿಯಲ್ಲಿ ವಿರಾಜಿಸಿದ್ದಾರೆ. ಈ ಪದವು ಅಧ್ಯಾತ್ಮದಲ್ಲಿ ಸರ್ವೋಚ್ಚ ಮತ್ತು ಪರಮೋಚ್ಚ ಸ್ತರದ ಪದವಿ ಆಗಿದೆ. ಎಲ್ಲ ಗುರುಗಳ ಗುಣಲಕ್ಷಣಗಳನ್ನು ಮತ್ತು ಶ್ರೀರಾಮ ಹಾಗೂ ಶ್ರೀಕೃಷ್ಣನಂತೆ ಪರಿಪೂರ್ಣ ಅವತಾರಿ ತತ್ತ್ವವಿರುವ ಗುರುಗಳು ಮಾತ್ರ ಈ ಪದವಿಯಲ್ಲಿ  ವಿರಾಜಿಸಬಹುದು.

– ಸುಶ್ರೀ ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದ ಜ್ಞಾನ) (20.4.2023)

Leave a Comment