ತೋಟಗಾರಿಕೆಗೆ ಜ್ಯೋತಿಷ್ಯ ಶಾಸ್ತ್ರದ ಕೆಲವು ಸಲಹೆಗಳು

Article also available in :

೧. ಗಿಡಗಳನ್ನು ನೆಡುವಾಗ ಯಜುರ್ವೇದದ ಋಚೆ ಪಠಿಸುವುದು

ಅಪೋ ದೇವೀರುಪಸೃಜ ಮಧುಮತೀಃ, ಅಯಕ್ಷ್ಮಾಯ ಪ್ರಜಾಭ್ಯ: ।
ತಾಸಾಮ್ ಆಸ್ಥಾನಾತ್ ಉಜ್ಜಿಹತಾಮ್, ಓಷಧಯ: ಸುಪಿಪ್ಪಲಾ: ॥

– ಯಜುರ್ವೇದ, ಅಧ್ಯಾಯ ೧೧, ಕಣ್ಡಿಕಾ ೩೮

ಅರ್ಥ : ಹೇ ಅಗ್ನಿದೇವ, ಜನರು ಆರೋಗ್ಯವಂತರಾಗಿರಲು ಆರೋಗ್ಯ ಕರುಣಿಸುವ ಜಲದೇವತೆಗಳನ್ನು ಈ ಸ್ಥಾನಕ್ಕೆ ತನ್ನಿ. ಜಲದೇವತೆಗಳು ಸಿಂಚನ ಮಾಡಿರುವ ಈ ಭೂಮಿಯಲ್ಲಿ ಹಣ್ಣು ಮತ್ತು ಹೂವುಗಳಿಂದ ಸಮೃದ್ಧವಾಗಿರುವ ಸಸ್ಯಗಳು ಬೆಳೆಯಲಿ ಎಂದು ನಾನು ನಿಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.

ಗಿಡಗಳನ್ನು ನೆಡುವಾಗ ಯಜುರ್ವೇದದ ಈ ಶ್ಲೋಕವನ್ನು ಪಠಿಸಿದರೆ, ಆ ಗಿಡಕ್ಕೆ ದೀರ್ಘಾಯುಷ್ಯ ಲಭಿಸಿ ಅದು ಹೂ-ಹಣ್ಣುಗಳಿಂದ ಸಮೃದ್ಧವಾಗುತ್ತದೆ. ಗಿಡಗಳನ್ನು ನೆಡಲು ತೋಡಿರುವ ಗುಂಡಿಯಲ್ಲಿ ಮಂತ್ರೋಚ್ಛಾರ ಸಹಿತ ನೀರನ್ನು ಸಿಂಪಡಿಸಿ. ಮಂತ್ರವನ್ನು ಪಠಿಸುತ್ತಲೇ ಗಿಡದ ಬೇರುಗಳು ಮತ್ತು ತುದಿಗಳ ಮೇಲೆ ನೀರನ್ನು ಚಿಮುಕಿಸಬೇಕು.

ಸೌ. ಪ್ರಾಜಕ್ತಾ ಜೋಶಿ

೨. ತೋಟಗಾರಿಕೆಗೆ ಶುಭ ನಕ್ಷತ್ರಗಳು

ಮನೆಯ ಸುತ್ತಮುತ್ತ ತೋಟ ಬೆಳೆಸಲು ಅಶ್ವಿನಿ, ರೋಹಿಣಿ, ಮೃಗಶಿರಾ, ಪುಷ್ಯ, ಉತ್ತರಾ, ಹಸ್ತ, ಚಿತ್ರ, ವಿಶಾಖಾ, ಅನುರಾಧ, ಉತ್ತರಾಷಾಢ, ಶತಭಿಷಾ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳಿರುವ ಶುಭದಿನಗಳನ್ನು ಆರಿಸಬಹುದು.

೩. ಈ ಗಿಡಗಳನ್ನು ಎಂದೂ ನೆಡಬಾರದು

ಸ್ಮಶಾನ, ರಸ್ತೆಬದಿ, ಸನ್ಯಾಸಿಗಳ ಆಶ್ರಮ, ನದಿಗಳ ಸಂಗಮದಂತಹ ಸ್ಥಳಗಳಲ್ಲಿ ಬೆಳೆದ ಗಿಡ-ಬಳ್ಳಿಗಳು, ಚಂಡಮಾರುತದಿಂದ ಬೇರುಸಹಿತ ಕಿತ್ತು ಬಿದ್ದಿರುವ ಗಿಡಗಳು, ಒಣಗಿದ ಗಿಡ-ಮರಗಳು, ಮತ್ತು ರೋಗಿ ವ್ಯಕ್ತಿಯು ತಂದ ಹೂವು ಅಥವಾ ಹಣ್ಣುಗಳಿಂದ ಗಿಡಗಳನ್ನು ಎಂದಿಗೂ ನೆಡಬಾರದು.

೪. ಯಾವ ದಿಕ್ಕಿನಲ್ಲಿ ಯಾವ ಗಿಡ ನೆಡಬೇಕು?

ಪೂರ್ವಕ್ಕೆ ಔದುಂಬರ (ಅತ್ತಿ) ಮರಗಳು, ಪಶ್ಚಿಮಕ್ಕೆ ಅಶ್ವತ್ಥ (ಅರಳಿ) ಮತ್ತು ದಕ್ಷಿಣಕ್ಕೆ ಔದುಂಬರ ಮರಗಳು ಇರುವುದು ಶುಭದಾಯಕವಾಗಿದೆ. ಮಲ್ಲಿಗೆ, ಸಂಪಿಗೆ, ಹಳದಿ ಕೇದಗೆ, ಬಿಳಿ ಗುಲಾಬಿ, ಕೆಂಪು ಹೂವಿನ ಗಿಡಗಳು, ತೆಂಗು, ನಿಂಬೆ, ಅಡಕೆ, ನೇರಳೆ ಮತ್ತು ಮಾವಿನ ಮರಗಳನ್ನು ಪೂರ್ವ ದಿಕ್ಕಿನಲ್ಲಿ ನೆಡಬೇಕು.

೫. ಮನೆಯಂಗಳದಲ್ಲಿ ಯಾವ ಗಿಡ-ಮರಗಳನ್ನು ನೆಡಬೇಕು?

ಅ. ಬಿಲ್ವಪತ್ರೆ, ಬನ್ನಿ (ಶಮಿ), ಅಶೋಕ, ನಾಗಕೇಸರ, ಸಂಪಿಗೆ, ದಾಳಿಂಬೆ ಮುಂತಾದ ಮರಗಳನ್ನು ಮತ್ತು ಗುಲಾಬಿ, ಮಲ್ಲಿಗೆ ಮತ್ತು ಕೇದಗೆಯಂತಹ ಹೂವಿನ ಗಿಡಗಳನ್ನು ನೆಡುವುದು ಮಂಗಳಕರವಾಗಿದೆ.

ಆ. ಕೇಸರಿ, ಅಶೋಕ, ಮಾಲತಿ, ದಾಸವಾಳ, ಶ್ರೀಗಂಧ, ಚಕ್ಕೆ (ದಾಲಚಿನ್ನಿ), ತೆಂಗು ಮತ್ತು ಹಲಸಿನ ಮರಗಳಂತಹ ಸಸ್ಯಗಳನ್ನು ಯಾವುದೇ ದಿಕ್ಕಿನಲ್ಲಿ ನೆಟ್ಟರೂ ಶುಭವೇ.

ಇ. ತುಳಸಿ ಗಿಡಗಳನ್ನು ಮತ್ತು ದೂರ್ವೆಯನ್ನು ಹೇರಳವಾಗಿ ನೆಡುವುದರಿಂದ ಅವು ಸಕಾರಾತ್ಮಕ ಪರಿಣಾಮ ಬೀರುತ್ತವೆ. ನಿಮ್ಮ ನಿವೇಶನದಲ್ಲಿ ತುಳಸಿ ಮತ್ತು ಬೇವಿನ ಮರಗಳು ಹೇರಳವಾಗಿ ಬೆಳೆದರೆ ಪರಿಸಿರದಲ್ಲಿ ಆಮ್ಲಜನಕದ ಕೊರೆತೆಯಾಗದು.

ಈ. ಪಾರಿಜಾತ, ಕಣಗಿಲೆ ಮತ್ತು ನೀಲಿ ಬಣ್ಣದ ಹೂವುಗಳನ್ನು ಹೊಂದಿರುವ ಗಿಡ-ಬಳ್ಳಿಗಳು, ಉದಾ. ಶಂಖಪುಷ್ಪಿ, ಕೃಷ್ಣ ಕಮಲ ಮುಂತಾದವು ಈಶಾನ್ಯ ದಿಕ್ಕಿನಲ್ಲಿದ್ದರೆ ಪರಿಣಾಮ ಶುಭವಾಗುತ್ತದೆ. ಈ ದಿಕ್ಕಿನಲ್ಲಿ ಕಮಲಪೀಠ ಮತ್ತು ಕಾರಂಜಿಗಳು ಇರುವುದು ಮಂಗಳಕರ.

ಉ. ಹುಲ್ಲುಹಾಸು (ಲಾನ್), ಕಡಿಮೆ ಎತ್ತರದ (ಚಿಕ್ಕ) ಸಸ್ಯಗಳು, ಔಷಧೀಯ ಗುಣಗಳನ್ನು ಹೊಂದಿರುವ ಸಣ್ಣ ಸಸ್ಯಗಳು, ಆಲಂಕಾರಿಕ ಸಸ್ಯಗಳು, ಪರಿಮಳ ಬೀರುವ ಹೂವಿನ ಸಸ್ಯಗಳು, ಉದಾ. ಮಲ್ಲಿಗೆ, ಸೂಜಿಮಲ್ಲಿಗೆ, ಸೇವಂತಿಗೆ, ಗುಲಾಬಿ ಹೂವಿನ ಪಾತಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ತಯಾರಿಸಬೇಕು.

ಊ. ಉತ್ತರ ಮತ್ತು ವಾಯವ್ಯಕ್ಕೆ ಮನೆತೋಟವನ್ನು ಬೆಳಸಬೇಕು.

ಎ. ಉತ್ತರ ದಿಕ್ಕಿನಲ್ಲಿ ಪೇರಲೆ ಮರವನ್ನು ನೆಟ್ಟರೆ ಸಮೃದ್ಧಿಗೆ ಪೂರಕವಾಗಿದೆ.

ಏ. ವಾಯವ್ಯ ಪ್ರದೇಶದಲ್ಲಿ ಸುವಾಸನೆ ಬೀರುವ ಬಿಳಿ ಹೂಗಳ ಗಿಡಗಳನ್ನು ಉದಾ. ಕನಕಚಂಪಕ, ಏಳುಸುತ್ತಿನ ಮಲ್ಲಿಗೆ (ಮೋಗ್ರಾ) ನೆಡಬೇಕು. ಇವು ಮನಸ್ಸಿಗೆ ಪ್ರಸನ್ನತೆಯನ್ನು ನೀಡುತ್ತವೆ.

ಐ. ಯಾವುದೇ ತಿಂಗಳಿನ ಶುಕ್ಲ ಪಕ್ಷದ ಹಸ್ತ ನಕ್ಷತ್ರವಿರುವ ದಿನದಂದು ನಿವೇಶನದ ಉತ್ತರ ದಿಕ್ಕಿನಲ್ಲಿ ದಾಳಿಂಬೆ ಗಿಡವನ್ನು ನೆಡಬಹುದು. ದಾಳಿಂಬೆ ಮರದಲ್ಲಿ ಲಕ್ಷ್ಮಿಯ ವಾಸವಿರುತ್ತದೆ.

ಒ. ಕರಿಬೇವಿನ ಗಿಡವನ್ನು ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ನೆಡಬೇಕು.

ಓ. ಶುಕ್ಲ ಪಕ್ಷದ ಉತ್ತರಾ ನಕ್ಷತ್ರವಿರುವ ದಿನದಂದು ಆಗ್ನೇಯ ದಿಕ್ಕಿನಲ್ಲಿ ಬಾದಾಮಿಯನ್ನು (ಬದಾಮಿ) ನೆಟ್ಟರೆ ಸಮೃದ್ಧಿಯಾಗುವುದು.

ಔ. ಔದುಂಬರ ಮರವು ದಕ್ಷಿಣ ದಿಕ್ಕಿನಲ್ಲಿದ್ದರೆ ಶುಭ ಫಲವನ್ನು ನೀಡುತ್ತದೆ; ಏಕೆಂದರೆ ಈ ಮರದಲ್ಲಿ ಗುರುತತ್ತ್ವವಿರುತ್ತದೆ. ಇದರಿಂದಾಗಿ ದಕ್ಷಿಣ ದಿಕ್ಕಿನಿಂದ ಬರುವ ಯಮಲಹರಿಗಳ ನಾಶವಾಗುತ್ತದೆ.

ಅಂ. ಮನೆ ಪ್ರವೇಶದ್ವಾರ ಅಥವಾ ಕಾಂಪೌಂಡ್ ಗೇಟ್ ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕದಲ್ಲಿದ್ದರೆ ಅಲ್ಲಿ ಬಾಳೆಗಿಡ ನೆಡಬಾರದು. ಬಾಳೆಗಿಡವು ಪರಿಸರದಲ್ಲಿನ ನಕಾರಾತ್ಮಕತೆಯನ್ನು ಹೀರಿಕೊಳ್ಳುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವುದರಿಂದ, ಇದು ವಾಸ್ತುವಿನ ಸುತ್ತಲೂ ನಕಾರಾತ್ಮಕತೆಯನ್ನು ಹರಡುತ್ತದೆ.

೬. ಯಾವ ದಿಕ್ಕಿನಲ್ಲಿ ಯಾವ ಮರಗಳನ್ನು ನೆಡಬಾರದು ಮತ್ತು ನೆಟ್ಟರೆ ಆಗುವ ದುಷ್ಪರಿಣಾಮಗಳು

ಅ. ಆಗ್ನೇಯ ದಿಕ್ಕಿನಲ್ಲಿ ಔದುಂಬರ (ಅತ್ತಿ), ಪ್ಲಕ್ಷ (ಜುಬ್ಬಿ), ಕೆಂಪು ಹೂವು ಅಥವಾ ಮುಳ್ಳಿರುವ ಗಿಡ-ಮರಗಳನ್ನು ನೆಡಬಾರದು. ಇದರಿಂದ ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ.

ಆ. ಪೂರ್ವದಲ್ಲಿ ಅಶ್ವತ್ಥ (ಅರಳಿ), ಪಶ್ಚಿಮದಲ್ಲಿ ಆಲದ, ಉತ್ತರದಲ್ಲಿ ಔದುಂಬರ ಮತ್ತು ದಕ್ಷಿಣದಲ್ಲಿ ಪ್ಲಕ್ಷವನ್ನು ನೆಡಬಾರದು. ಇದು ಅಶುಭವಾಗಿರುತ್ತದೆ. ಇದರಿಂದ ಉನ್ನತಿಯಾಗುವುದಿಲ್ಲ.

ಇ. ಪೂರ್ವ ದಿಕ್ಕಿನಲ್ಲಿ ಅಶ್ವತ್ಥ ಮರವನ್ನು ನೆಟ್ಟರೆ ಭಯ ಹೆಚ್ಚಾಗುತ್ತದೆ.

ಈ. ಪಶ್ಚಿಮ ದಿಕ್ಕಿನಲ್ಲಿ ಆಲದ ಮರವನ್ನು ನೆಟ್ಟರೆ, ಮನೆ ಮಾಲಿಕರಿಗೆ ಅಥವಾ ಕುಟುಂಬದವರಿಗೆ ಯಾವದಾದರೊಂದು ರೀತಿಯ ತೊಂದರೆ ಉಂಟಾಗುತ್ತದೆ.

ಉ. ಉತ್ತರ ದಿಕ್ಕಿನಲ್ಲಿ ಔದುಂಬರ ಮರವನ್ನು ನೆಟ್ಟರೆ, ಆ ಮನೆಯಲ್ಲಿ ವಾಸಿಸುವವರಿಗೆ ಕಣ್ಣಿನ ಕಾಯಿಲೆಗಳು ಬರಬಹುದು.

ಊ. ಮನೆಯ ಹತ್ತಿರ ಹಳದಿ ಬಣ್ಣದ ಹೂವಿನ ಗಿಡಗಳಿರುವುದು ಅಶುಭ.

ಎ. ಮನೆಯ ಹತ್ತಿರ ಬೋರೆಹಣ್ಣಿನ, ಗೊಬ್ಬಳಿ (ಕರಿಜಾಲಿ, Babul), ಶ್ವದಂಷ್ಟ್ರೆ (ವನಶೃಂಗಾಟ, ನಗ್ಗಿಲು), ಕಳ್ಳಿ (ಕ್ಯಾಕ್ಟಸ್) ಅಥವಾ ಯಾವುದೇ ರೀತಿಯ ಮುಳ್ಳಿನ ಗಿಡಗಳು ಇರಬಾರದು. ಈ ಗಿಡಗಳ ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಪಸರಿಸುತ್ತವೆ. ಅಲ್ಲಿ ಕೆಟ್ಟ ಶಕ್ತಿಗಳ ವಾಸವಿರುತ್ತದೆ. ಇದರಿಂದ ವಿನಾಕಾರಣ ವೈಶಮ್ಯ ನಿರ್ಮಾಣವಾಗಿ, ಮನೆಯಲ್ಲಿ ಕಲಹ ಉಂಟಾಗುತ್ತದೆ, ಉದ್ವಿಗ್ನತೆ ಉಂಟಾಗುತ್ತದೆ, ಹಾಗೆಯೇ ಮನೆಯಲ್ಲಿ ಸಮೃದ್ಧಿಯೂ ಬಾರದು.

ಏ. ಶಮಿ, ಬೇವು ಮತ್ತು ಬಿಲ್ವಪತ್ರೆ ಮರಗಳು ಮನೆಯ ಹಿಂದೆ ಸ್ವಲ್ಪ ದೂರದಲ್ಲಿರಬೇಕು; ಆದರೆ ಅವು ಮನೆಯ ಹತ್ತಿರ ಅಥವಾ ಮನೆಯ ಮುಂದೆ ಇರಬಾರದು.

ಐ. ಸಸ್ಯಕ್ಷೀರವಿರುವ ಗಿಡಗಳನ್ನು (ಎಲೆ, ಕಾಂಡ ಕತ್ತರಿಸಿದಾಗ ಬಿಳಿ ಅಥವಾ ಹಳದಿ ಬಣ್ಣದ ಹಾಲಿನಂತಿರುವ ದ್ರವ ಸೂಸುವ ಗಿಡಗಳು) ಮನೆಯ ಸುತ್ತ ಬೆಳೆಸಿದರೆ ಧನನಾಶವಾಗಬಹುದು. ಶ್ವೇತಾರ್ಕ (ಎಕ್ಕ), ವಿಶೇಷವಾಗಿ ನೇರಳೆ ಬಣ್ಣದ ಎಕ್ಕದ ಗಿಡವನ್ನು ಮನೆಯಂಗಳದಲ್ಲಿ ಬೆಳಸಲೇಬಾರಾದು.

ಒ. ದಿನದ ಒಂದು ಪ್ರಹರವಾದ ನಂತರ ಅಂದರೆ ಬೆಳಗ್ಗೆ ೯ ಗಂಟೆಯ ನಂತರ ಯಾವುದೇ ಮರದ ನೆರಳು ಮನೆಯ ಮೇಲೆ ಬೀಳಬಾರದು.

ಓ. ನೀಲಿ ಗಿಡ ಮತ್ತು ಗಂಡರಿಸಿನ (ಗಂಟರಿಷಿಣ) (ಒಂದು ಬಗೆಯ ಅರಿಶಿನ) ಮನೆಯ ಸುತ್ತ  ನೆಡಬಾರದು. ಈ ಗಿಡಗಳನ್ನು ಹೊಲದಲ್ಲಿ ನೆಡಬೇಕು. ಇದು ಸಂಪತ್ತು ಮತ್ತು ಸಂತತಿಯನ್ನು ನಾಶಪಡಿಸುತ್ತದೆ.

ಔ. ಬಾಳೆ, ಚಿಕ್ಕು (ಸಪೋಟ), ಹುಣಸೆ, ನುಗ್ಗೆ, ನೇರಳೆ ಮತ್ತು ಪಪ್ಪಾಯಿಯಂತಹ ಅನೇಕ ಬೀಜಗಳನ್ನು ಹೊಂದಿರುವ ಸಸ್ಯಗಳನ್ನು ನೆಡುವುದರಿಂದ ಹಣ ಉಳಿಯುವುದಿಲ್ಲ, ಆರ್ಥಿಕ ಒತ್ತಡವನ್ನು ಉಂಟುಮಾಡುತ್ತದೆ; ಆದ್ದರಿಂದ, ಅವುಗಳನ್ನು ಮನೆಯಿರುವಲ್ಲಿ ನೆಡಬಾರದು.

ಅಂ. ಪೂರ್ವ ದಿಕ್ಕಿನಲ್ಲಿ ಮನೆಯ ಹತ್ತಿರ ದೊಡ್ಡ ಮರಗಳನ್ನು ನೆಡಬೇಡಿ; ಏಕೆಂದರೆ ಮನೆಯಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲ. ಸೂರ್ಯನ ಬೆಳಕಿನ ಕೊರತೆಯು ಮನೆಯಲ್ಲಿರುವ ಜನರ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಅಃ. ನಿವೇಶನದಲ್ಲಿ ನೇರಳೆ ಮರವನ್ನು ನೆಡಬಾರದು. ನೇರಳೆ ಬೀಜಗಳನ್ನು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಔಷಧೀಯವಾಗಿ ಬಳಸಲಾಗುತ್ತದೆ, ಅಂದರೆ ರಕ್ತದ ‘ಸಿಹಿ’ ಕಡಿಮೆಯಾಗುತ್ತದೆ. ಅದೇ ರೀತಿ ನೇರಳೆ ಮರ ನಿವೇಶನದಲ್ಲಿದ್ದರೆ ಕುಟುಂಬದಲ್ಲಿ ವಾದಗಳು ಉಂಟಾಗುತ್ತವೆ.

೭. ಗಿಡ-ಮರಗಳನ್ನು ಯಾವಾಗ ಕತ್ತರಿಸಬೇಕು ?

ಭಾದ್ರಪದ ಅಥವಾ ಮಾಘ ಮಾಸದಲ್ಲಿ ಯಾವುದೇ ಗಿಡಮರವನ್ನು ಕಡಿದು ಹಾಕಬಹುದು. ಸೂರ್ಯನು ಸಿಂಹ ಅಥವಾ ಮಕರ ರಾಶಿಯಲ್ಲಿದ್ದಾಗ ಗಿಡಮರಗಳನ್ನು ಕಡಿಯಬೇಡಿ. ಪುನರ್ವಸು, ಅನುರಾಧಾ, ಹಸ್ತ, ಉತ್ತರ ಫಲ್ಗುಣಿ, ಉತ್ತರಾಷಾಢ, ಸ್ವಾತಿ ಮತ್ತು ಶ್ರಾವಣ ನಕ್ಷತ್ರವಿರುವ ದಿನಗಳು ಮರಗಳನ್ನು ಕಡಿಯಲು ಶುಭ.

೮. ಮರಗಳನ್ನು ಕತ್ತರಿಸುವುದಿದ್ದರೆ ಏನು ಮಾಡಬೇಕು?

ಯಾವುದೇ ಮರವನ್ನು ತೆಗೆಯಬೇಕಾದರೆ ಮೊದಲು ಸರಕಾರದಿಂದ ಅನುಮತಿ ಪಡೆಯಬೇಕು. ಅನುಮತಿ ಪಡೆದ ನಂತರ, ಮರವನ್ನು ತೆಗೆಯುವ ಮೊದಲು ಹಿಂದಿನ ರಾತ್ರಿ ನೈವೇದ್ಯವನ್ನು ಅರ್ಪಿಸಿ ಕ್ಷಮೆಯಾಚಿಸಬೇಕು. ‘ಕೆಲವು ಅನಿವಾರ್ಯ ಕಾರಣಗಳಿಂದ ನಿನ್ನನ್ನು ತೆಗೆಯಬೇಕಾಗಿ ಬಂದಿರುವುದಕ್ಕೆ ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತೇನೆ. ನಾನು ಖಂಡಿತವಾಗಿಯೂ ಇನ್ನೊಂದು ಯೋಗ್ಯವಾದ ಜಾಗವನ್ನು ನೋಡಿ ನಿನ್ನಂತಹ ಗಿಡವನ್ನು ಮತ್ತೆ ನೆಡುತ್ತೇನೆ’ ಎಂದು ಸಂಕಲ್ಪ ಮಾಡಿ. ಮರುದಿನ, ಮರವನ್ನು ಪೂಜಿಸಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಮರವನ್ನು ಕತ್ತರಿಸಬೇಕು. ಮರವನ್ನು ಕತ್ತರಿಸುವಾಗ, ಅದು ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಬೀಳುವಂತೆ ನೋಡಬೇಕು.

– ಸೌ. ಪ್ರಜಕ್ತಾ ಜೋಶಿ, ವಾಸ್ತು ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಜ್ಯೋತಿಷ್ಯ ವಿಭಾಗದ ಮುಖ್ಯಸ್ಥರು, ಗೋವಾ.

Leave a Comment