ರವಿವಾರ, ೭.೯.೨೦೨೫ (ಭಾದ್ರಪದ ಹುಣ್ಣಿಮೆ) ಈ ದಿನ ಖಗ್ರಾಸ ಚಂದ್ರಗ್ರಹಣವಿದ್ದು ಅದು ಭಾರತದಲ್ಲಿ ಎಲ್ಲೆಡೆ ಕಾಣಿಸಲಿದೆ. ಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ರಾಶಿಗಳಿಗನುಸಾರ ದೊರೆಯುವ ಫಲ
ಚಂದ್ರಗ್ರಹಣ ಗೋಚರವಾಗುವ ದೇಶಗಳು
ಈ ಚಂದ್ರಗ್ರಹಣ ಭಾರತ ಸಹಿತ ಸಂಪೂರ್ಣ ಏಷ್ಯಾಖಂಡ, ಆಫ್ರಿಕಾಖಂಡ, ಸಂಪೂರ್ಣ ಯುರೋಪ್, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ನಾರ್ವೆ ಮತ್ತು ಅಂಟಾರ್ಕ್ಟಿಕಾ ಈ ಪ್ರದೇಶಗಳಲ್ಲಿ ಕಾಣಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಎಲ್ಲೆಡೆ ಕಾಣಿಸಲಿದೆ.
ಚಂದ್ರಗ್ರಹಣದ ಸಮಯ ( ಭಾರತೀಯ ಪ್ರಮಾಣಿತ ಸಮಯದ ಪ್ರಕಾರ)
೧. ಸ್ಪರ್ಶ (ಆರಂಭ) : ರಾತ್ರಿ ೯.೫೭
೨. ಸಮ್ಮಿಲನ (conjunction) : ರಾತ್ರಿ ೧೧
೩. ಮಧ್ಯ : ರಾತ್ರಿ ೧೧.೪೨
೪. ಉನ್ಮೀಲನ (opposition) : ರಾತ್ರಿ ೧೨.೨೩
೫. ಮೋಕ್ಷ (ಗ್ರಹಣ ಸಮಾಪ್ತಿ ಅಥವಾ ಕೊನೆ) : ರಾತ್ರಿ ೧.೨೭ (೭.೯.೨೦೨೫ರ ಉತ್ತರರಾತ್ರಿ ೧.೨೭)
(ಮೇಲಿನ ಸಮಯವು ಸಂಪೂರ್ಣ ಭಾರತಕ್ಕೆ ಅನ್ವಯಿಸುತ್ತದೆ.)
ಗ್ರಹಣಪರ್ವ
(ಗ್ರಹಣದ ಆರಂಭದಿಂದ ಸಮಾಪ್ತಿಯವರೆಗಿನ ಒಟ್ಟು ಕಾಲಾವಧಿ) : ೩ ಗಂಟೆ ೩೦ ನಿಮಿಷಗಳು
ಟಿಪ್ಪಣಿ ೧ : ಪರ್ವ ಎಂದರೆ ಪರ್ವಣಿ ಅಥವಾ ಪುಣ್ಯಕಾಲ. ಗ್ರಹಣಸ್ಪರ್ಶದಿಂದ ಗ್ರಹಣ ಮೋಕ್ಷದವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ದೇವರ ಚಿಂತನೆಯಲ್ಲಿ ತೊಡಗಿದರೆ ಆಧ್ಯಾತ್ಮಿಕ ಲಾಭವಾಗುತ್ತದೆ, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಗ್ರಹಣದ ವೇಧ ಆರಂಭವಾಗುವುದು
೧. ಅರ್ಥ : ಚಂದ್ರಗ್ರಹಣದ ಮೊದಲು ಚಂದ್ರನು ಪೃಥ್ವಿಯ ಛಾಯೆಯಲ್ಲಿ ಬರತೊಡಗುತ್ತಾನೆ. ಆದ್ದರಿಂದ ಅವನ ಪ್ರಕಾಶವು ನಿಧಾನವಾಗಿ ಕಡಿಮೆಯಾಗತೊಡಗುತ್ತದೆ. ಇದನ್ನೇ ‘ಗ್ರಹಣದ ವೇಧ ತಾಗಿತು’, ಎಂದು ಹೇಳುತ್ತಾರೆ.
೨. ಈ ಗ್ರಹಣವು ರಾತ್ರಿಯ ಎರಡನೇ ಪ್ರಹರದಲ್ಲಿ ಪ್ರಾರಂಭವಾಗುವುದರಿಂದ, ಮೂರು ಪ್ರಹರಗಳ ಮೊದಲು, ಅಂದರೆ ಮಧ್ಯಾಹ್ನ ೧೨.೩೭ ರಿಂದ ಗ್ರಹಣದ ಮೋಕ್ಷದವರೆಗೆ ಗ್ರಹಣದ ವೇಧಗಳನ್ನು ಪಾಲಿಸಬೇಕು.
ಚಂದ್ರಗ್ರಹಣದ ಕಾಲಾವಧಿಯಲ್ಲಿ ಪಾಲಿಸಬೇಕಾದ ನಿಯಮಗಳು
ವೇಧಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯಕರ್ಮಗಳು, ಜಪ-ತಪ, ಶ್ರಾದ್ಧ ಇತ್ಯಾದಿಗಳನ್ನು ಮಾಡಬಹುದು. ವೇಧ ಕಾಲದಲ್ಲಿ ಊಟ ಮಾಡುವುದು ನಿಷಿದ್ಧವಾಗಿದೆ. ಆದ್ದರಿಂದ ವೇಧ ಕಾಲದಲ್ಲಿ ಯಾವುದೇ ಆಹಾರವನ್ನು ಸೇವಿಸಬಾರದು; ಆದರೆ ಈ ಸಮಯ ದಲ್ಲಿ ಆವಶ್ಯಕ ಕೃತಿಗಳನ್ನು, ಉದಾ. ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ, ನಿದ್ರೆ ಮುಂತಾದವುಗಳನ್ನು ಮಾಡ ಬಹುದು. ಮಕ್ಕಳು, ವೃದ್ಧರು, ರೋಗಿಗಳು, ದುರ್ಬಲರು ಮತ್ತು ಗರ್ಭಿಣಿಯರು ರವಿವಾರ ಸಂಜೆ ೫.೧೫ ರಿಂದ ಗ್ರಹಣದ ವೇಧ ಪಾಲಿಸಬೇಕು. ಗ್ರಹಣದ ಪರ್ವ ಕಾಲದಲ್ಲಿ, ಅಂದರೆ ರಾತ್ರಿ ೯.೫೭ ರಿಂದ ೧.೨೭ ರವರೆಗೆ ನೀರು ಕುಡಿಯುವುದು, ಮಲಗುವುದು, ಮಲ-ಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡಬಾರದು.
ಗ್ರಹಣ ವೇಧ ಕಾಲದಲ್ಲಿ ಉಪವಾಸ ಮಾಡುವುದರ ಮಹತ್ವವನ್ನು ತಿಳಿಸುವ ಲೇಖನ ಓದಲು ಕ್ಲಿಕ್ ಮಾಡಿ !
ಗ್ರಹಣ ಕಾಲದಲ್ಲಿ ಯಾವ ಕರ್ಮಗಳನ್ನು ಮಾಡಬೇಕು ?
೧. ಗ್ರಹಣಸ್ಪರ್ಶವಾದ ಕೂಡಲೆ ಸ್ನಾನ ಮಾಡಬೇಕು.
೨. ಪರ್ವಕಾಲದಲ್ಲಿ ದೇವರ ಪೂಜೆ, ತರ್ಪಣ, ಶ್ರದ್ಧಾ, ಜಪ, ಹೋಮ ಮತ್ತು ದಾನ ಮಾಡಬೇಕು.
೩. ಹಿಂದೆ ಕೆಲವು ಕಾರಣಗಳಿಂದ ಸ್ಥಗಿತಗೊಂಡ ಮಂತ್ರದ ಪುರಶ್ಚರಣೆಯನ್ನು ಈ ಕಾಲಾವಧಿಯಲ್ಲಿ ಆರಂಭಿಸಿದರೆ ಅದರ ಫಲ ಅನಂತಪಟ್ಟುಗಳಲ್ಲಿ ಸಿಗುತ್ತದೆ.
೪. ಗ್ರಹಣಮೋಕ್ಷ (ಗ್ರಹಣ ಮುಗಿದ ನಂತರ) ಆದಾಗ ಸ್ನಾನ ಮಾಡಬೇಕು .
೫. ಸೂತಕ ಇದ್ದರೆ ಗ್ರಹಣ ಕಾಲದಲ್ಲಿ ಗ್ರಹಣ ಸಂಬಂಧಿತ ಸ್ನಾನ ಮತ್ತು ದಾನ ಮಾಡುವ ಮಟ್ಟಿಗೆ ಅವರಿಗೆ ಶುದ್ದಿ ಇರುತ್ತದೆ .
ರಾಶಿಗಳಿಗನುಸಾರ ಗ್ರಹಣದ ಫಲ
೧. ಶುಭಫಲ : ಮೇಷ, ವೃಷಭ, ಕನ್ಯಾ ಮತ್ತು ಧನು
೨. ಅಶುಭ ಫಲ : ಕರ್ಕ, ವೃಶ್ಚಿಕ, ಕುಂಭ ಮತ್ತು ಮೀನ
೩. ಮಿಶ್ರಫಲ : ಮಿಥುನ, ಸಿಂಹ, ತುಲಾ ಮತ್ತು ಮಕರ
ಯಾವ ರಾಶಿಗಳಿಗೆ ಅಶುಭ ಫಲವಿದೆಯೋ, ಆ ರಾಶಿಯ ವ್ಯಕ್ತಿಗಳು ಮತ್ತು ಗರ್ಭಿಣಿ ಮಹಿಳೆಯರು ಈ ಚಂದ್ರಗ್ರಹಣವನ್ನು ನೋಡಬಾರದು. (ಆಧಾರ : ದಾತೆ ಪಂಚಾಂಗ)
ಗ್ರಹಣದ ಸಮಯದಲ್ಲಿ ಇವನ್ನು ತ್ಯಜಿಸಿ
ಅ. ಗ್ರಹಣ ಕಾಲದಲ್ಲಿ ಊಟ ನಿಷಿದ್ಧವಾಗಿದೆ; ಆದ್ದರಿಂದ ಆಹಾರಪದಾರ್ಥಗಳನ್ನು ಸೇವಿಸಬಾರದು. ಗ್ರಹಣಕ್ಕೆ ಮೊದಲು ಬೇಯಿಸಿದ ಆಹಾರವನ್ನು ನಂತರ ಸೇವಿಸಬಾರದು. ಏಕೆಂದರೆ ಆ ಆಹಾರವು ಹಾನಿಕರ ವಿಕಿರಣಗಳನ್ನು ಹೀರಿಕೊಂಡಿರಬಹುದು.
ಆ. ಗ್ರಹಣಕಾಲವು ಸಾಧನೆಗೆ ಉತ್ತಮವಾದುದರಿಂದ, ನಿದ್ದೆ ಮಾಡಿ ತಮೋಗುಣವನ್ನು ಹೆಚ್ಚಿಸಿಕೊಳ್ಳುವ ಬದಲು ಸಾಧನೆ ಮಾಡಿ ಈ ಸಮಯದ ಲಾಭ ಪಡೆಯಬೇಕು.
ಇ. ಸಾಧಕರು ಗ್ರಹಣದ ಸಮಯದಲ್ಲಿ ಮನೋರಂಜನೆ ಮತ್ತು ಸುಖವಿಲಾಸಗಳಲ್ಲಿ ಸಮಯ ವ್ಯರ್ಥ ಕಳೆಯಬಾರದು; ಏಕೆಂದರೆ ಸಾಧಕರಿಗೆ ಇದು ಅಮೂಲ್ಯ ಅವಕಾಶವಾಗಿದೆ. ಈ ಸಮಯದಲ್ಲಿ ಮಾಡಿದ ಸಾಧನೆಯ (ಜಪ, ಧ್ಯಾನ ಮತ್ತು ಪ್ರಾರ್ಥನೆ) ಫಲವು ಅನಂತ ಪಟ್ಟುಗಳಲ್ಲಿ ದೊರೆಯುತ್ತದೆ. ಆದ್ದರಿಂದ, ಈ ಸಮಯದಲ್ಲಿ ತಮ್ಮ ಇಷ್ಟದೇವರನ್ನು ಅಥವಾ ಗುರುಗಳ ಚರಣಗಳನ್ನು ಮನಃಪೂರ್ವಕವಾಗಿ ಸ್ಮರಿಸಿ ಏಕಾಗ್ರತೆಯಿಂದ ನಾಮಜಪ ಮಾಡಬೇಕು.
– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಕುಡಾಳ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ (೯.೮.೨೦೨೫)
ಜಾತಕದ ೧೨ ಮನೆಗಳು : ಮಾನವ ಜೀವನವು ಸಂಕುಚಿತತೆಯಿಂದ ವ್ಯಾಪಕತ್ವದತ್ತ ಸಾಗುವ ನೈಸರ್ಗಿಕ ಪ್ರವಾಸವನ್ನು ದರ್ಶಿಸುತ್ತವೆ
ಹಸ್ತ ಸಾಮುದ್ರಿಕಾ ಶಾಸ್ತ್ರ : ಪ್ರಾಥಮಿಕ ಪರಿಚಯ
ಗ್ರಹದೋಷಗಳ ದುಷ್ಪರಿಣಾಮಗಳು ಸಹ್ಯವಾಗಲು ಏನು ಮಾಡಬೇಕು?
ನವಗ್ರಹಗಳ ಉಪಾಸನೆ ಮತ್ತು ಮಹತ್ವ
ಗ್ರಹ, ರಾಶಿ ಮತ್ತು ಕುಂಡಲಿಯ ಮನೆಗಳು