ಈ ಲೇಖನದಿಂದ ಜಾತಕದ ಮನೆಗಳ (ಸ್ಥಾನಗಳ) ರಹಸ್ಯವನ್ನು ತಿಳಿದುಕೊಳ್ಳೋಣ. ಜಾತಕದ (ಜನ್ಮಕುಂಡಲಿಯ) ೧೨ ಮನೆಗಳು ಮನುಷ್ಯನ ನೈಸರ್ಗಿಕ ಜೀವನಪ್ರವಾಸವನ್ನು ದರ್ಶಿಸುತ್ತವೆ. ಈ ಪ್ರವಾಸವು ಸಂಕುಚಿತತೆಯಿಂದ ವ್ಯಾಪಕತ್ವದತ್ತ, ಸ್ಥೂಲದಿಂದ ಸೂಕ್ಷ್ಮದತ್ತ, ತಾಮಸಿಕತೆಯಿಂದ ಸಾತ್ತ್ವಿಕತೆಯತ್ತ ಮತ್ತು ಅಜ್ಞಾನದಿಂದ ಜ್ಞಾನದತ್ತ ಸಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಎಷ್ಟು ಆಳವಾಗಿ ಮತ್ತು ಸೂಕ್ಷ್ಮ ವಿಚಾರ ಮಾಡಲಾಗಿದೆ ಎಂಬುದಕ್ಕೆ ಉದಾಹರಣೆಯಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
೧. ಜಾತಕದ ಸ್ಥಾನಗಳು ಎಂದರೆ ಏನು
ಜಾತಕದ ಮನೆಗಳು ಎಂದರೆ ಆಕಾಶದ ೧೨ ವಿಭಾಗಗಳು. ಒಂದು ವಿಭಾಗವು ೩೦ ಅಂಶ (ಡಿಗ್ರಿ) ದ್ದಾಗಿರುತ್ತದೆ. ೧೨ ವಿಭಾಗಗಳು ಸೇರಿ ಆಕಾಶದ ೩೬೦ ಅಂಶಗಳಾಗುತ್ತವೆ. ಈ ವಿಭಾಗಗಳು ಪೃಥ್ವಿಯ ಸಾಪೇಕ್ಷವಾಗಿರುತ್ತವೆ; ಅಂದರೆ ವ್ಯಕ್ತಿಯು ಪೃಥ್ವಿಯ ಮೇಲೆ ಎಲ್ಲಿ ನಿಂತಿರುತ್ತಾನೆಯೋ, ಆ ಸ್ಥಳಕ್ಕೆ ಅನುಗುಣವಾಗಿ ಈ ೧೨ ವಿಭಾಗಗಳಿರುತ್ತವೆ. ಮಾನವ ಜೀವನದ ಎಲ್ಲಾ ವಿಷಯಗಳು ಈ ೧೨ ವಿಭಾಗಗಳಲ್ಲಿ ಅಡಕವಾಗಿವೆ.
೧ ಅ. ಜಾತಕದ ಸ್ಥಾನಗಳು ಮತ್ತು ಆಕಾಶದ ೪ ಮುಖ್ಯ ಬಿಂದುಗಳು
೧. ಜಾತಕದ ಪ್ರಥಮ ಸ್ಥಾನವು ಪೂರ್ವ ದಿಗಂತದ ದರ್ಶಕವಾಗಿರುತ್ತದೆ. ದಿಗಂತ (ಕ್ಷಿತಿಜ ಅಥವಾ horizon) ಎಂದರೆ ಭೂಮಿ ಮತ್ತು ಆಕಾಶ ಸಂಧಿಸುವಂತೆ ಕಾಣುವ ರೇಖೆ. ಪೂರ್ವ ಕ್ಷಿತಿಜದ ಮೇಲೆ ಯಾವ ಗ್ರಹವು ಉದಯಿಸುತ್ತಿರುತ್ತದೆಯೋ, ಅದನ್ನು ಕುಂಡಲಿಯ ಪ್ರಥಮ ಸ್ಥಾನದಲ್ಲಿ ಬರೆಯಲಾಗುತ್ತದೆ.
೨. ಜಾತಕದ ದಶಮ (ಹತ್ತನೇ) ಸ್ಥಾನವು ‘ಖಸ್ವಸ್ತಿಕ’ದ ದರ್ಶಕವಾಗಿರುತ್ತದೆ. ಖಸ್ವಸ್ತಿಕ (ಅಥವಾ ಖಮಧ್ಯ) ಎಂದರೆ ಪೃಥ್ವಿಯ ಮೇಲೆ ನಿಂತಿರುವ ವ್ಯಕ್ತಿಯ ತಲೆಯ ಸರಿಯಾಗಿ ಮೇಲಿರುವ ಆಕಾಶದ ಭಾಗ. ಖಸ್ವಸ್ತಿಕದ ಮೇಲೆ ಯಾವ ಗ್ರಹವು ಬರುತ್ತದೆಯೋ, ಅದನ್ನು ಜಾತಕದ ದಶಮ ಸ್ಥಾನದಲ್ಲಿ ಬರೆಯಲಾಗುತ್ತದೆ.
೩. ಜಾತಕದ ಸಪ್ತಮ (ಏಳನೇ) ಸ್ಥಾನವು ಪಶ್ಚಿಮ ಕ್ಷಿತಿಜದ ದರ್ಶಕವಾಗಿರುತ್ತದೆ. ಪಶ್ಚಿಮ ಕ್ಷಿತಿಜದ ಮೇಲೆ ಯಾವ ಗ್ರಹವು ಅಸ್ತಮಿಸುತ್ತಿರುತ್ತದೆಯೋ, ಅದನ್ನು ಜಾತಕದ ಸಪ್ತಮ ಸ್ಥಾನದಲ್ಲಿ ಬರೆಯಲಾಗುತ್ತದೆ.
೪. ಜಾತಕದ ಚತುರ್ಥ (ನಾಲ್ಕನೇ) ಸ್ಥಾನವು ‘ಅಧಃಸ್ವಸ್ತಿಕ’ದ ದರ್ಶಕವಾಗಿದೆ. ಅಧಃಸ್ವಸ್ತಿಕ (ಅಥವಾ ಅಧೋಬಿಂದು) ಎಂದರೆ ಖಸ್ವಸ್ತಿಕದ ಸರಿಯಾಗಿ ವಿರುದ್ಧ ದಿಕ್ಕಿನಲ್ಲಿರುವ, ಹಾಗೆಯೇ ವ್ಯಕ್ತಿಗೆ ಕಾಣಿಸಲು ಸಾಧ್ಯವಿಲ್ಲದ (ಪಾದಗಳ ಕೆಳಗಿನ) ಆಕಾಶದ ಭಾಗ. ಅಧಃಸ್ವಸ್ತಿಕದಲ್ಲಿ ಯಾವ ಗ್ರಹವು ಬರುತ್ತದೆಯೋ, ಅದನ್ನು ಕುಂಡಲಿಯ ಚತುರ್ಥ ಸ್ಥಾನದಲ್ಲಿ ಬರೆಯಲಾಗುತ್ತದೆ.
೨. ಜಾತಕದ ಸ್ಥಾನಗಳ ವಿಭಜನೆ
ಜಾತಕದ ೧೨ ಸ್ಥಾನಗಳನ್ನು ೨ ಪ್ರಕಾರಗಳಲ್ಲಿ ವಿಭಜಿಸಲಾಗಿದೆ – ಪುರುಷಾರ್ಥಕ್ಕನುಸಾರ ಮತ್ತು ಸ್ವಭಾವಕ್ಕನುಸಾರ.
೨ ಅ. ಪುರುಷಾರ್ಥಕ್ಕನುಸಾರ
ಮೊದಲನೇ ವಿಭಜನೆಯನ್ನು ಪುರುಷಾರ್ಥಕ್ಕನುಸಾರ ಮಾಡಲಾಗಿದೆ. ಜಾತಕದ ೧, ೫, ೯ ನೇ ಸ್ಥಾನಗಳು ‘ಧರ್ಮ ಪುರುಷಾರ್ಥ’; ೨, ೬, ೧೦ ನೇ ಸ್ಥಾನಗಳು ‘ಅರ್ಥ ಪುರುಷಾರ್ಥ’; ೩, ೭, ೧೧ ನೇ ಸ್ಥಾನಗಳು ‘ಕಾಮ ಪುರುಷಾರ್ಥ’ ಮತ್ತು ೪, ೮, ೧೨ ನೇ ಸ್ಥಾನಗಳು ‘ಮೋಕ್ಷ ಪುರುಷಾರ್ಥ’ವನ್ನು ದರ್ಶಿಸುವ ಸ್ಥಾನಗಳಾಗಿವೆ.
೨ ಆ. ಸ್ವಭಾವಕ್ಕನುಸಾರ
ಎರಡನೆಯ ವಿಭಜನೆಯನ್ನು ಸ್ವಭಾವಕ್ಕನುಸಾರ ಮಾಡಲಾಗಿದೆ. ಜಾತಕದ ೧, ೪, ೭, ೧೦ ಈ ಸ್ಥಾನಗಳು ‘ಚರ ಸ್ವಭಾವದ ಸ್ಥಾನಗಳು’; ೨, ೫, ೮, ೧೧ ಈ ಸ್ಥಾನಗಳು ‘ಸ್ಥಿರ ಸ್ವಭಾವದ ಸ್ಥಾನಗಳು’; ಇನ್ನು ೩, ೬, ೯, ೧೨ ಈ ಸ್ಥಾನಗಳು ‘ದ್ವಿಸ್ವಭಾವದ ಸ್ಥಾನಗಳು’ ಆಗಿವೆ. ಇದನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.
| ಪುರುಷಾರ್ಥ | ಚರ ಸ್ವಭಾವದ ಸ್ಥಾನಗಳು | ಸ್ಥಿರ ಸ್ವಭಾವದ ಸ್ಥಾನಗಳು | ದ್ವಿಸ್ವಭಾವದ ಸ್ಥಾನಗಳು |
|---|---|---|---|
| ಧರ್ಮ | ೧ | ೫ | ೯ |
| ಅರ್ಥ | ೧೦ | ೨ | ೬ |
| ಕಾಮ | ೭ | ೧೧ | ೩ |
| ಮೋಕ್ಷ | ೪ | ೮ | ೧೨ |
೩. ಪುರುಷಾರ್ಥ ಮತ್ತು ಸ್ವಭಾವಕ್ಕನುಸಾರ ಸ್ಥಾನಗಳ ವೈಶಿಷ್ಟ್ಯಗಳು
ಜಾತಕದ ಸ್ಥಾನಗಳಿಗೆ ನೀಡಲಾದ ಪುರುಷಾರ್ಥ ಮತ್ತು ಸ್ವಭಾವದ ಕಾರಣದಿಂದ ಅಲ್ಲಿನ ಪ್ರತಿಯೊಂದು ಸ್ಥಾನಕ್ಕೆ ಬೇರೆ ಬೇರೆ ವೈಶಿಷ್ಟ್ಯಗಳಿವೆ. ಅವುಗಳಲ್ಲಿ ಉಂಟಾದ ಈ ಸಮನ್ವಯವು ಯಾವ ರಹಸ್ಯಗಳನ್ನು ಬಿಚ್ಚಿಡುತ್ತವೆ ಎಂಬುದನ್ನು ನೋಡೋಣ.
೩ ಅ. ಚರ ಸ್ವಭಾವದ ಸ್ಥಾನಗಳ ಮಾಧ್ಯಮದಿಂದ ೪ ಪುರುಷಾರ್ಥಗಳನ್ನು ಪಡೆಯಲು ಮನುಷ್ಯನು ಮಾಡಬೇಕಾದ ಪ್ರಯತ್ನಗಳು ತಿಳಿಯುತ್ತವೆ
‘ನಿಸರ್ಗ (ಕಾಲಪುರುಷನ) ಜಾತಕದಲ್ಲಿ’ (ಮೇಷ ರಾಶಿಯು ಪ್ರಥಮ ಸ್ಥಾನದಲ್ಲಿರುವ ಕುಂಡಲಿಯಲ್ಲಿ) ೧, ೪, ೭ ಮತ್ತು ೧೦ ಈ ಸ್ಥಾನಗಳಲ್ಲಿ ಅನುಕ್ರಮವಾಗಿ ಮೇಷ, ಕರ್ಕ, ತುಲಾ ಮತ್ತು ಮಕರ ಎಂಬ ಚರ ಸ್ವಭಾವದ ರಾಶಿಗಳು ಬರುತ್ತವೆ. ‘ಚರ’ ಎಂದರೆ ಗತಿ ಅಥವಾ ಚಲನೆ. ಗತಿಯು ಪ್ರಯತ್ನಗಳನ್ನು ಸೂಚಿಸುತ್ತದೆ. ಧರ್ಮಾದಿ ಪುರುಷಾರ್ಥಗಳನ್ನು ಸಾಧಿಸಲು ಮನುಷ್ಯನು ಯಾವ ಪ್ರಯತ್ನಗಳನ್ನು ಮಾಡಬೇಕಾಗುತ್ತದೆಯೋ, ಅವು ಈ ಸ್ಥಾನಗಳಿಂದ ತಿಳಿಯುತ್ತದೆ. ಇವು ಜಾತಕದ ಬಲವಾದ ಸ್ಥಾನಗಳಾಗಿವೆ. ಜ್ಯೋತಿಷ್ಯಶಾಸ್ತ್ರದಲ್ಲಿನ ಬಹುತೇಕ ‘ರಾಜಯೋಗಗಳು’ (ಉತ್ತಮ ಫಲಗಳನ್ನು ನೀಡುವ ಯೋಗಗಳು) ಈ ೪ ಸ್ಥಾನಗಳಲ್ಲಿನ ಗ್ರಹಯೋಗಗಳಿಂದ ಉಂಟಾಗುತ್ತವೆ. ಈ ೪ ಸ್ಥಾನಗಳಲ್ಲಿನ ಬಲವಾದ ಗ್ರಹಗಳು ವ್ಯಕ್ತಿಯನ್ನು ಪ್ರಯತ್ನಶಾಲಿ, ಉದ್ಯಮಿ ಮತ್ತು ಪರಾಕ್ರಮಿಯನ್ನಾಗಿ ಮಾಡುತ್ತವೆ. ಈ ೪ ಸ್ಥಾನಗಳ ಸಂಕ್ಷಿಪ್ತ ಮಾಹಿತಿಯನ್ನು ಮುಂದೆ ನೀಡಲಾಗಿದೆ.
೩ ಅ ೧. ಪ್ರಥಮ ಸ್ಥಾನ
ಪ್ರಥಮ ಸ್ಥಾನವು ‘ಧರ್ಮ’ ಪುರುಷಾರ್ಥದ ಮತ್ತು ಚರ ಸ್ವಭಾವದ್ದಾಗಿದೆ. ಧರ್ಮ ಎಂದರೆ ಸ್ವಭಾವ ಅಥವಾ ಪ್ರವೃತ್ತಿ. ವ್ಯಕ್ತಿಯ ಜನ್ಮಜಾತ ಪ್ರವೃತ್ತಿ ಮತ್ತು ಪ್ರಕೃತಿ ಹೇಗಿರುತ್ತದೆ, ಅವರ ವ್ಯಕ್ತಿತ್ವದ ವಿಕಾಸವು ಯಾವ ದಿಕ್ಕಿನಲ್ಲಿ ಆಗುವುದು, ಅವರಿಗೆ ಜೀವನದಲ್ಲಿ ಯಾವ ವಿಷಯದ ಸೆಳೆತವಿದೆ, ಜೀವನದತ್ತ ನೋಡುವ ಅವರ ದೃಷ್ಟಿಕೋನ ಹೇಗಿದೆ, ಇತ್ಯಾದಿ ವಿಷಯಗಳು ಪ್ರಥಮ ಸ್ಥಾನಕ್ಕೆ ಸಂಬಂಧಿಸಿವೆ. ಪ್ರಥಮ ಸ್ಥಾನದಲ್ಲಿನ ಗ್ರಹ, ಪ್ರಥಮ ಸ್ಥಾನದ ಸ್ವಾಮಿಯು ಅನ್ಯ ಗ್ರಹಗಳೊಂದಿಗೆ ಹೊಂದಿರುವ ಯೋಗ, ಪ್ರಥಮ ಸ್ಥಾನದಲ್ಲಿನ ರಾಶಿ ಮುಂತಾದ ಘಟಕಗಳಿಂದ ಈ ವಿಷಯಗಳು ಗಮನಕ್ಕೆ ಬರುತ್ತವೆ.
೩ ಅ ೨. ಚತುರ್ಥ ಸ್ಥಾನ
ಚತುರ್ಥ ಸ್ಥಾನವು ‘ಮೋಕ್ಷ’ ಪುರುಷಾರ್ಥದ ಮತ್ತು ಚರ ಸ್ವಭಾವದ್ದಾಗಿದೆ. ವ್ಯಕ್ತಿಗೆ ಜೀವನದಲ್ಲಿ ಬೇಕಾಗುವ ಮಾನಸಿಕ ಸುರಕ್ಷತೆ, ಆಧಾರ ಮತ್ತು ಸಹಾನುಭೂತಿಯನ್ನು ಈ ಚತುರ್ಥ ಸ್ಥಾನವು ಸೂಚಿಸುತ್ತದೆ. ಆದ್ದರಿಂದ ಈ ಸ್ಥಾನವು ಮನೆ, ಮಾತೆ (ತಾಯಿ), ಕುಟುಂಬ ಮುಂತಾದ ವಿಷಯಗಳಿಗೆ ಸಂಬಂಧಿಸಿದೆ. ಇದು ಮೋಕ್ಷ ಪುರುಷಾರ್ಥದ ಮೊದಲ ಸ್ಥಾನವಾಗಿದೆ; ಏಕೆಂದರೆ ಇಲ್ಲಿ ಮನಸ್ಸಿನ ಅಂತರ್ಮನಸ್ಸಿದೆ. ವ್ಯಕ್ತಿಗೆ ಮನಸ್ಸಿನ ಅಂತರ್ಮನಸ್ಸಿನಲ್ಲಿ ಇಣುಕಿ ನೋಡುವ, ಅಂದರೆ ‘ಸ್ವ’ವನ್ನು ಹುಡುಕುವ ಇಚ್ಛೆಯು ಇಲ್ಲಿಂದ ಉಂಟಾಗುತ್ತದೆ. ಇಲ್ಲಿಂದ ಅಧ್ಯಾತ್ಮದ ಪ್ರವಾಸದ ಆರಂಭವಾಗುತ್ತದೆ.
೩ ಅ ೩. ಸಪ್ತಮ ಸ್ಥಾನ
ಸಪ್ತಮ ಸ್ಥಾನವು ‘ಕಾಮ’ ಪುರುಷಾರ್ಥದ ಮತ್ತು ಚರ ಸ್ವಭಾವದ್ದಾಗಿದೆ. ಇದು ವ್ಯಕ್ತಿಯ ಪರಸ್ಪರ ಸಂಬಂಧಗಳ ಸ್ಥಾನವಾಗಿದೆ. ಆದ್ದರಿಂದ ವೈವಾಹಿಕ ಜೊತೆಗಾರ/ಜೊತೆಗಾತಿ, ವ್ಯವಹಾರದಲ್ಲಿ ಪಾಲುದಾರ, ನಿಕಟವರ್ತಿಗಳು, ಪ್ರತಿಸ್ಪರ್ಧಿ ಮುಂತಾದ ವ್ಯಕ್ತಿಗಳೊಂದಿಗೆ ಸಂಬಂಧಗಳು ಹೇಗಿರುತ್ತವೆ ಎಂಬುದನ್ನು ಸಪ್ತಮ ಸ್ಥಾನವು ಸೂಚಿಸುತ್ತದೆ. ಈ ಸ್ಥಾನವು ವ್ಯಕ್ತಿಯ ಕೊಡು-ಕೊಳ್ಳುವಿಕೆಯ ಸಂಬಂಧಗಳನ್ನು ದರ್ಶಿಸುತ್ತದೆ.
೩ ಅ ೪. ದಶಮ ಸ್ಥಾನ
ದಶಮ ಸ್ಥಾನವು ‘ಅರ್ಥ’ ಪುರುಷಾರ್ಥದ ಮತ್ತು ‘ಚರ’ ಸ್ವಭಾವದ್ದಾಗಿದೆ. ಇದು ಕರ್ಮಸ್ಥಾನವಾಗಿದೆ. ವ್ಯಕ್ತಿಯು ಯಾವ ಕರ್ಮಗಳನ್ನು ಮಾಡಲು ಜನ್ಮವನ್ನು ಪಡೆದಿದ್ದಾರೆ? ಅವರ ನಿಯತ (ನಿಯತಿಯಿಂದ ನೇಮಿಸಲ್ಪಟ್ಟ) ಕರ್ಮ ಯಾವುದು? ಅವರ ಕಾರ್ಯಕ್ಷೇತ್ರ ಯಾವುದು? ಮುಂತಾದ ವಿಷಯಗಳು ದಶಮ ಸ್ಥಾನದಿಂದ ತಿಳಿಯುತ್ತವೆ. ವ್ಯಕ್ತಿಗೆ ಜೀವನದಲ್ಲಿ ಇರುವ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳ ಬೋಧನೆಯು ಈ ಸ್ಥಾನದಿಂದ ಆಗುತ್ತದೆ. ವ್ಯಕ್ತಿಯು ಕರ್ಮ ಮಾಡುವುದರ ಹಿಂದೆ ಇರುವ ದೃಷ್ಟಿಕೋನವು ದಶಮ ಸ್ಥಾನದಿಂದ ಸೂಚಿತವಾಗುತ್ತದೆ.
೩ ಆ. ಸ್ಥಿರ ಸ್ವಭಾವದ ಸ್ಥಾನಗಳ ಮಾಧ್ಯಮದಿಂದ ೪ ಪುರುಷಾರ್ಥಗಳ ಸಂಚಯವು ಸೂಚಿತವಾಗುವುದು
‘ನಿಸರ್ಗ (ಕಾಲಪುರುಷನ) ಜಾತಕದಲ್ಲಿ’ ೨, ೫, ೮, ೧೧ ಈ ಸ್ಥಾನಗಳಲ್ಲಿ ಅನುಕ್ರಮವಾಗಿ ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ಎಂಬ ಸ್ಥಿರ ಸ್ವಭಾವದ ರಾಶಿಗಳು ಬರುತ್ತವೆ. ಸ್ಥಿರತೆಯು ‘ಸಂಚಯ’ ಅಥವಾ ‘ಸಂಗ್ರಹ’ದ ದರ್ಶಕವಾಗಿರುತ್ತದೆ. ಆದ್ದರಿಂದ ೨, ೫, ೮, ೧೧ ಈ ಸ್ಥಾನಗಳಲ್ಲಿ ಧರ್ಮಾದಿ ಪುರುಷಾರ್ಥಗಳಿಗೆ ಸಂಬಂಧಿಸಿದ ವಿಷಯಗಳ ಸಂಚಯವಾಗುತ್ತದೆ. ಈ ಸ್ಥಾನಗಳು ಬಲವಾದ ಮತ್ತು ಶುಭವಾಗಿರುವುದು ವ್ಯಕ್ತಿಯು ಪೂರ್ವಜನ್ಮದಲ್ಲಿ ಪುಣ್ಯಕರ್ಮಗಳನ್ನು ಮಾಡಿರುವ ದರ್ಶಕವಾಗಿದೆ. ಈ ೪ ಸ್ಥಾನಗಳ ಸಂಕ್ಷಿಪ್ತ ಮಾಹಿತಿಯನ್ನು ಮುಂದೆ ನೀಡಲಾಗಿದೆ.
೩ ಆ ೧. ದ್ವಿತೀಯ (೨) ಸ್ಥಾನ
ದ್ವಿತೀಯ ಸ್ಥಾನವು ‘ಅರ್ಥ’ ಪುರುಷಾರ್ಥದ ಮತ್ತು ‘ಸ್ಥಿರ’ ಸ್ವಭಾವದ್ದಾಗಿದೆ. ಇಲ್ಲಿ ಅರ್ಥದ (ಧನದ) ಸಂಚಯವಾಗುತ್ತದೆ. ಸ್ಥಾವರ ಸಂಪತ್ತು, ಧನ, ಮೌಲ್ಯಯುತ ವಸ್ತುಗಳಂತಹ ಯಾವ ಭೌತಿಕ ವಸ್ತುಗಳ ಮೇಲೆ ವ್ಯಕ್ತಿಯ ಸ್ವಾಮಿತ್ವವಿರುತ್ತದೆಯೋ, ಅವು ಇಲ್ಲಿಂದ ಗಮನಕ್ಕೆ ಬರುತ್ತವೆ. ಈ ಸ್ಥಾನವು ವ್ಯಕ್ತಿಯ ಬಾಲ್ಯವನ್ನು ದರ್ಶಿಸುತ್ತದೆ. ಆದ್ದರಿಂದ ಬಾಲ್ಯದಲ್ಲಿ ಆಗುವ ಸಂಸ್ಕಾರಗಳು ಮತ್ತು ಮನೆತನದ ಪರಂಪರೆಗಳು ಇಲ್ಲಿಂದ ಕಾಣಿಸುತ್ತವೆ. ಇದು ವ್ಯಕ್ತಿಯ ಪೋಷಣೆ ಮಾಡುವ ಸ್ಥಾನವಾಗಿದೆ.
೩ ಆ ೨. ಪಂಚಮ (೫) ಸ್ಥಾನ
ಪಂಚಮ ಸ್ಥಾನವು ‘ಧರ್ಮ’ ಪುರುಷಾರ್ಥದ ಮತ್ತು ‘ಸ್ಥಿರ’ ಸ್ವಭಾವದ್ದಾಗಿದೆ. ಈ ಸ್ಥಾನವು ವ್ಯಕ್ತಿಯು ಹಿಂದಿನ ಜನ್ಮದಲ್ಲಿ ಮಾಡಿದ ಒಳ್ಳೆಯ ಕರ್ಮಗಳಿಂದ ನಿರ್ಮಾಣವಾದ ಪುಣ್ಯಸಂಚಯವನ್ನು ದರ್ಶಿಸುತ್ತದೆ. ಈ ಸ್ಥಾನವು ಬುದ್ಧಿಮತ್ತೆ ಮತ್ತು ವಿದ್ಯೆಯನ್ನು ದರ್ಶಿಸುತ್ತದೆ. ಇದು ವ್ಯಕ್ತಿಯ ‘ಸ್ವಧರ್ಮ’ವನ್ನು ದರ್ಶಿಸುವ ಸ್ಥಾನವಾಗಿದೆ. ಇದರ ಅರ್ಥ ಈ ಸ್ಥಾನವು ವ್ಯಕ್ತಿಯ ಮೂಲಭೂತ ಪ್ರವೃತ್ತಿಗನುಸಾರ ಅವರಿಗಿರುವ ಕ್ಷಮತೆಯನ್ನು ದರ್ಶಿಸುತ್ತದೆ. ಪಂಚಮ ಸ್ಥಾನವು ಎಷ್ಟು ಬಲವಾಗಿರುತ್ತದೆಯೋ, ವ್ಯಕ್ತಿಯ ಕ್ಷಮತೆ ಮತ್ತು ಅವರ ಜೀವನದ ಅಡಿಪಾಯವು ಅಷ್ಟೇ ಉತ್ತಮವಾಗಿರುತ್ತದೆ.
೩ ಆ ೩. ಅಷ್ಟಮ (೮) ಸ್ಥಾನ
ಅಷ್ಟಮ ಸ್ಥಾನವು ‘ಮೋಕ್ಷ’ ಪುರುಷಾರ್ಥದ ಮತ್ತು ‘ಸ್ಥಿರ’ ಸ್ವಭಾವದ್ದಾಗಿದೆ. ‘ಆಕಸ್ಮಿಕತೆ’ ಮತ್ತು ‘ರೂಪಾಂತರ’ ಈ ಸ್ಥಾನದ ವೈಶಿಷ್ಟ್ಯಗಳಾಗಿವೆ. ಜೀವನದಲ್ಲಿ ಅಂತಹ ಕೆಲವು ವಿಷಯಗಳು ಆಕಸ್ಮಿಕವಾಗಿ ಘಟಿಸುತ್ತವೆ, ಇದರಿಂದ ಜೀವನಕ್ಕೆ ಹೊಸ ತಿರುವು ಸಿಗುತ್ತದೆ. ಈ ಸ್ಥಾನದಲ್ಲಿ ಇರುವ ಸಂಚಯವು ಗುಪ್ತ ಸ್ವರೂಪದ್ದಾಗಿರುತ್ತದೆ ಮತ್ತು ಅದು ಆಕಸ್ಮಿಕವಾಗಿ ಪ್ರಕಟವಾಗುತ್ತದೆ. ಇದೊಂದು ಮೋಕ್ಷಸ್ಥಾನವಾಗಿದೆ; ಏಕೆಂದರೆ ಅಧ್ಯಾತ್ಮದ ಹಾದಿ ಹಿಡಿಯುವುದು ಎಂದರೆ ತನ್ನಲ್ಲಿ ಆಳವಾಗಿ ಇಳಿಯುವುದು, ತನ್ನಲ್ಲಿನ ಗುಪ್ತ ಮತ್ತು ಅದೃಶ್ಯ ತತ್ತ್ವಗಳ ಶೋಧ ಹಾಗೂ ತನ್ನ ಆಧ್ಯಾತ್ಮಿಕ ರೂಪಾಂತರವನ್ನು ಮಾಡಿಕೊಳ್ಳುವುದಾಗಿದೆ. ಜಾತಕದ ಈ ಸ್ಥಾನವು ಬುದ್ಧಿಗೆ ನಿಲುಕದ ಮತ್ತು ರೋಚಕವಾದ ಸ್ಥಾನವಾಗಿದೆ.
೩ ಆ ೪. ಏಕಾದಶ (೧೧) ಸ್ಥಾನ
ಏಕಾದಶ ಸ್ಥಾನವು ‘ಕಾಮ’ ಪುರುಷಾರ್ಥದ ಮತ್ತು ‘ಸ್ಥಿರ’ ಸ್ವಭಾವದ್ದಾಗಿದೆ. ಇಲ್ಲಿ ಕಾಮನೆ ಮತ್ತು ಇಚ್ಛೆಗಳ ಸಂಚಯವಿದೆ. ಈ ಸ್ಥಾನದಲ್ಲಿನ ಗ್ರಹಗಳು ಅವುಗಳ ಗುಣಧರ್ಮಗಳಂತೆ ವ್ಯಕ್ತಿಯಲ್ಲಿನ ಕಾಮನೆಗಳನ್ನು ದರ್ಶಿಸುತ್ತವೆ. ಈ ಕಾಮನೆಗಳು ಜನ್ಮಜಾತವಾಗಿರುತ್ತವೆ. ಅವುಗಳ ಪೂರ್ತಿಗಾಗಿ ವ್ಯಕ್ತಿಯು ಪ್ರಯತ್ನಿಸುತ್ತಿರುತ್ತಾರೆ. ಕಾಮನೆಗಳಿಂದ ಮನುಷ್ಯನು ಕ್ರಿಯಾಶೀಲನಾಗುತ್ತಾನೆ ಮತ್ತು ಕ್ರಿಯೆಯಿಂದ ಲಾಭವಾಗುತ್ತದೆ. ಆದ್ದರಿಂದ ಈ ಸ್ಥಾನಕ್ಕೆ ‘ಲಾಭ ಸ್ಥಾನ’ ಎನ್ನುತ್ತಾರೆ. ಈ ಸ್ಥಾನದಿಂದ ಧನದ ಆಗಮನ, ಪ್ರಸಿದ್ಧಿ, ಮಿತ್ರಮಂಡಳಿ ಮುಂತಾದ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳಬಹುದು.
೩ ಇ. ದ್ವಿಸ್ವಭಾವದ ಸ್ಥಾನಗಳ ಮಾಧ್ಯಮದಿಂದ ವ್ಯಕ್ತಿಯಲ್ಲಿ ನಿರ್ಮಾಣವಾಗುವ ವಿವೇಕ ಮತ್ತು ವ್ಯಾಪಕತೆಯು ತಿಳಿಯುತ್ತದೆ
‘ನಿಸರ್ಗ ಜಾತಕದಲ್ಲಿ’ ೩, ೬, ೯, ೧೨ ಈ ಸ್ಥಾನಗಳಲ್ಲಿ ಅನುಕ್ರಮವಾಗಿ ಮಿಥುನ, ಕನ್ಯಾ, ಧನು ಮತ್ತು ಮೀನ ಎಂಬ ದ್ವಿಸ್ವಭಾವದ ರಾಶಿಗಳು ಬರುತ್ತವೆ. ದ್ವಿಸ್ವಭಾವವು ವೈಚಾರಿಕ ಶಕ್ತಿಯ ಲಕ್ಷಣವಾಗಿದೆ. ಯಾವುದಾದರೂ ವಿಷಯದ ಒಟ್ಟಾರೆ ವಿಚಾರ ಮಾಡುವಾಗ ವ್ಯಕ್ತಿಯು ‘ಯೋಗ್ಯವೇನು ಮತ್ತು ಅಯೋಗ್ಯವೇನು’ ಎಂಬ ವಿಚಾರ ಮಾಡುತ್ತಾನೆ. ಈ ವಿಚಾರಗಳ ವಿಶ್ಲೇಷಣೆಯೇ ದ್ವಿಸ್ವಭಾವತ್ವ. ೩, ೬, ೯, ೧೨ ಈ ಸ್ಥಾನಗಳು ವ್ಯಕ್ತಿಯ ವಿವೇಕವನ್ನು ಜಾಗೃತಗೊಳಿಸುವ ಮತ್ತು ವ್ಯಕ್ತಿಯನ್ನು ವ್ಯಾಪಕನನ್ನಾಗಿ ಮಾಡುವ ಸ್ಥಾನಗಳಾಗಿವೆ. ಈ ಸ್ಥಾನಗಳು ಏನನ್ನಾದರೂ ಪಡೆಯುವುದಕ್ಕಿಂತ ತ್ಯಜಿಸುವ ಸಂದೇಶವನ್ನು ನೀಡುತ್ತವೆ.
೩ ಇ ೧. ತೃತೀಯ (೩) ಸ್ಥಾನ
ತೃತೀಯ ಸ್ಥಾನವು ‘ಕಾಮ’ ಪುರುಷಾರ್ಥದ ಮತ್ತು ದ್ವಿಸ್ವಭಾವದ್ದಾಗಿದೆ. ಇಲ್ಲಿರುವ ಕಾಮನೆಗಳು ಇಂದ್ರಿಯಜನ್ಯವಾಗಿರದೆ ಬುದ್ಧಿಜನ್ಯವಾಗಿವೆ. ಈ ಸ್ಥಾನವು ಸಂವಾದ, ವಕ್ತೃತ್ವ, ಲೇಖನ, ಸಾದರಪಡಿಸುವಿಕೆ ಮುಂತಾದ ಕೌಶಲ್ಯಗಳನ್ನು ದರ್ಶಿಸುತ್ತದೆ. ಈ ಸ್ಥಾನವು ವೈಚಾರಿಕ ಶಕ್ತಿ ಮತ್ತು ಕಲ್ಪನಾಶಕ್ತಿಗೆ ಬಲ ನೀಡುವಂತದ್ದಾಗಿದೆ. ಜೀವನದ ಸಾರ್ಥಕತೆ ಮತ್ತು ಉದಾತ್ತತೆಯನ್ನು ಹುಡುಕುವ ಜಿಜ್ಞಾಸುವೃತ್ತಿಯನ್ನು ಈ ಸ್ಥಾನವು ದರ್ಶಿಸುತ್ತದೆ. ಈ ಸ್ಥಾನವು ಸಾಹಿತಿ, ಕವಿ, ವಿಚಾರವಂತ, ತತ್ತ್ವಜ್ಞ ಮುಂತಾದವರಿಗೆ ಮಹತ್ವದ್ದಾಗಿರುತ್ತದೆ.
೩ ಇ ೨. ಷಷ್ಠ (೬) ಸ್ಥಾನ
ಷಷ್ಠ ಸ್ಥಾನವು ‘ಅರ್ಥ’ ಪುರುಷಾರ್ಥದ ಮತ್ತು ದ್ವಿಸ್ವಭಾವದ್ದಾಗಿದೆ. ಈ ಸ್ಥಾನವು ಧನ ಪಡೆಯುವುದಕ್ಕಿಂತ ದಾನ ಮಾಡುವ ಕಡೆಗೆ, ಹಾಗೆಯೇ ಅಧಿಕಾರ ಪಡೆಯುವುದಕ್ಕಿಂತ ಸೇವೆ ಮಾಡುವ ಕಡೆಗೆ ಒಲವು ಇರುವುದನ್ನು ದರ್ಶಿಸುತ್ತದೆ. ಈ ಸ್ಥಾನವು ಸಮಾಜದ ಕಲ್ಯಾಣಕ್ಕಾಗಿನ ಕಾರ್ಯವನ್ನು ದರ್ಶಿಸುತ್ತದೆ. ಆದ್ದರಿಂದ ಆಧ್ಯಾತ್ಮಿಕ ದೃಷ್ಟಿಯಿಂದ ಈ ಸ್ಥಾನವು ಶುಭವಾಗಿದೆ. ‘ಸಂಘರ್ಷ’ವು ಈ ಸ್ಥಾನದ ಸಾರವಾಗಿದೆ. ಆದ್ದರಿಂದ ಶತ್ರು, ಸಾಲ, ರೋಗ, ಕಷ್ಟ ಈ ವಿಷಯಗಳನ್ನು ಈ ಸ್ಥಾನದಿಂದ ತಿಳಿದುಕೊಳ್ಳಬಹುದು. ನಕಾರಾತ್ಮಕ ವಿಷಯಗಳಿರುವುದರಿಂದ ಈ ಸ್ಥಾನವನ್ನು ಅಶುಭವೆಂದು ಭಾವಿಸುತ್ತಾರೆ; ಆದರೆ ಸಂಘರ್ಷದಿಂದ ಮನುಷ್ಯನು ತಯಾರಾಗುತ್ತಾನೆ; ಆದ್ದರಿಂದ ದೀರ್ಘಕಾಲದ ದೃಷ್ಟಿಯಿಂದ ಈ ಸ್ಥಾನವು ಲಾಭದಾಯಕವಾಗಿದೆ.
೩ ಇ ೩. ನವಮ (೯) ಸ್ಥಾನ
ನವಮ ಸ್ಥಾನವು ‘ಧರ್ಮ’ ಪುರುಷಾರ್ಥದ ಮತ್ತು ದ್ವಿಸ್ವಭಾವದ್ದಾಗಿದೆ. ಈ ಸ್ಥಾನವು ಉದಾತ್ತತೆ (ಮಹಾನತೆ) ಯೊಂದಿಗೆ ಸಂಬಂಧಿಸಿದೆ. ಜೀವನದಲ್ಲಿನ ಮಹಾನ ತತ್ತ್ವಗಳು, ಉದಾ. ಸತ್ಯ, ಶ್ರದ್ಧೆ, ನೀತಿ, ಮೌಲ್ಯಗಳು, ಗುರು ಮುಂತಾದವು ಈ ಸ್ಥಾನಕ್ಕೆ ಸಂಬಂಧಿಸಿವೆ. ಈ ಸ್ಥಾನಕ್ಕೆ ‘ಭಾಗ್ಯ’ ಸ್ಥಾನವೆಂದು ಹೇಳಲಾಗುತ್ತದೆ; ಆದರೆ ಅದರ ಅರ್ಥ ‘ಸಾಂಸಾರಿಕ ವಿಷಯಗಳ ಪೂರ್ತಿಗಾಗಿ ಬೇಕಾಗುವ ಅದೃಷ್ಟ’ಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ‘ಆಧ್ಯಾತ್ಮಿಕ ಉನ್ನತಿ ಸಾಧಿಸಲು ಆವಶ್ಯಕವಾಗಿರುವ ಗುಣ ಮತ್ತು ಕ್ಷಮತೆ’ ಎಂದು ಅದರ ಸೂಕ್ಷ್ಮ ಅರ್ಥವಾಗಿದೆ; ಏಕೆಂದರೆ ‘ಯಾವುದು ನಮ್ಮ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಾಯಕವಾಗಿದೆಯೋ, ಅದುವೇ ಭಾಗ್ಯ!’ ನವಮ ಸ್ಥಾನದಿಂದ ಪೂರ್ವಜನ್ಮದಲ್ಲಿ ಮಾಡಿದ ಸಾಧನೆಯ ಬೋಧನೆಯಾಗುತ್ತದೆ.
೩ ಇ ೪. ದ್ವಾದಶ (೧೨) ಸ್ಥಾನ
ದ್ವಾದಶ ಸ್ಥಾನವು ‘ಮೋಕ್ಷ’ ಪುರುಷಾರ್ಥದ ಮತ್ತು ದ್ವಿಸ್ವಭಾವದ್ದಾಗಿದೆ. ‘ತ್ಯಾಗ’ವು ಈ ಸ್ಥಾನದ ಸಾರವಾಗಿದೆ. ಇಲ್ಲಿ ಜೀವನದ ಸಾರ್ಥಕತೆಯಿದೆ. ನವಮ ಸ್ಥಾನದಲ್ಲಿ ಸಾತ್ತ್ವಿಕ ಇಚ್ಛೆಗಳು ಬಾಕಿ ಉಳಿಯುತ್ತವೆ; ಆದರೆ ಹನ್ನೆರಡನೇ ಸ್ಥಾನದಲ್ಲಿ ಯಾವುದೇ ಇಚ್ಛೆ ಬಾಕಿ ಉಳಿಯುವುದಿಲ್ಲ. ಸರ್ವ ಕಾಮನೆಗಳ ತ್ಯಾಗವಾದ ಮೇಲೆ ಪ್ರಕಟವಾಗುವ ನಿರ್ಭೇದ್ಯ ಆನಂದವು ಈ ಸ್ಥಾನದಲ್ಲಿದೆ. ಈ ಸ್ಥಾನದಲ್ಲಿ ಸರ್ವಸ್ವದ ತ್ಯಾಗ, ಸಮರ್ಪಣೆ ಮತ್ತು ಈಶ್ವರನ ಬಗ್ಗೆ ಶರಣಾಗತಿಯಿದೆ. ಈ ಸ್ಥಾನಕ್ಕೆ ‘ಮುಕ್ತಿ ಸ್ಥಾನ’ ಎನ್ನುತ್ತಾರೆ. ಈ ಸ್ಥಾನವೆಂದರೆ ಜೀವಾತ್ಮದ ಪ್ರವಾಸದ ಅಂತಿಮ ಹಂತವಾಗಿದೆ. ಜಾತಕದ ಹನ್ನೆರಡನೇ ಸ್ಥಾನವು ಶುಭ ಮತ್ತು ಆಧ್ಯಾತ್ಮಿಕ ಗ್ರಹಗಳಿಗೆ ಸಂಬಂಧಿಸಿದ್ದರೆ ವ್ಯಕ್ತಿಯು ಮುಂದಿನ ಆಧ್ಯಾತ್ಮಿಕ ಪ್ರಗತಿಯಾಗಲು ಜನ್ಮ ಪಡೆದಿರುತ್ತಾರೆ.
೪. ಜಾತಕದ ೧೨ ಸ್ಥಾನಗಳು ವ್ಯಕ್ತಿಯ ನೈಸರ್ಗಿಕ ವಿಕಾಸಕ್ರಮವನ್ನು ದರ್ಶಿಸುತ್ತಿರುವುದು
ಜಾತಕದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳಿಗೆ ಪ್ರತಿಯೊಂದಕ್ಕೆ ೩ ಸ್ಥಾನಗಳನ್ನು ನೀಡಲಾಗಿದೆ ಎಂದು ಮೇಲಿನ ವಿವೇಚನೆಯಿಂದ ತಿಳಿಯುತ್ತದೆ. ಅವುಗಳಲ್ಲಿ ೧, ೪, ೭, ೧೦ ಈ ಸ್ಥಾನಗಳು ಮನುಷ್ಯನ ಪ್ರಯತ್ನ ಮತ್ತು ಕರ್ತೃತ್ವವನ್ನು ದರ್ಶಿಸುತ್ತವೆ. ೧, ೪, ೭, ೧೦ ಈ ಸ್ಥಾನಗಳ ಮಾಧ್ಯಮದಿಂದ ಮನುಷ್ಯನು ಯಾವ ಪ್ರಯತ್ನಗಳನ್ನು ಮಾಡುತ್ತಾನೋ, ಅವುಗಳ ಸಂಚಯವು ೨, ೫, ೮, ೧೧ ಈ ಸ್ಥಾನಗಳಲ್ಲಿ ಆಗುತ್ತದೆ. ಈ ಸ್ಥಾನಗಳು ಮನುಷ್ಯನು ಮಾಡಿದ ಕರ್ಮಕ್ಕನುಸಾರ ಆತನಿಗೆ ಒಳ್ಳೆಯ-ಕೆಟ್ಟ ಫಲಗಳನ್ನು ನೀಡುತ್ತವೆ. ೨, ೫, ೮, ೧೧ ಈ ಸ್ಥಾನಗಳ ಮಾಧ್ಯಮದಿಂದ ಮನುಷ್ಯನು ಯಾವ ಒಳ್ಳೆಯ-ಕೆಟ್ಟ ಫಲಗಳನ್ನು ಅನುಭವಿಸುತ್ತಾನೋ ಮತ್ತು ಎಲ್ಲಾ ಪ್ರಕಾರದ ಅನುಭವಗಳನ್ನು ಪಡೆಯುತ್ತಾನೋ, ಅವುಗಳ ಮೂಲಕ ಆತನು ಕಲಿಯುತ್ತಾನೆ ಮತ್ತು ಪ್ರಗಲ್ಭನಾಗತೊಡಗುತ್ತಾನೆ. ಪ್ರಗಲ್ಭತೆಯಿಂದ ಜಾಗೃತವಾಗುವ ವಿವೇಕವು ೩, ೬, ೯, ೧೨ ಈ ಸ್ಥಾನಗಳ ಮೂಲಕ ಕಾಣಿಸುತ್ತದೆ. ಇಲ್ಲಿ ಮನುಷ್ಯನು ಆತ್ಮಕೇಂದ್ರಿತ ಭಾವವನ್ನು ತ್ಯಜಿಸಿ ಜೀವನದ ಉದಾತ್ತತೆ ಮತ್ತು ಸಾರ್ಥಕತೆಯನ್ನು ತಿಳಿದುಕೊಂಡು ಅವುಗಳನ್ನು ಅನುಭವಿಸಲು ಪ್ರಯತ್ನಿಸುತ್ತಾನೆ. ಆತನು ತ್ಯಾಗಿ, ವ್ಯಾಪಕ ಮತ್ತು ಜ್ಞಾನಿಯಾಗಿ ಆತ್ಮಿಕ ವಿಕಾಸವನ್ನು ಸಾಧಿಸುತ್ತಾನೆ.
ಈ ರೀತಿಯಾಗಿ ಜಾತಕದ ೧೨ ಸ್ಥಾನಗಳು ವ್ಯಕ್ತಿಯ ನೈಸರ್ಗಿಕ ವಿಕಾಸಕ್ರಮವನ್ನು ತೋರಿಸುತ್ತವೆ. ‘ಕಾಮನೆಗಳು ನಿರ್ಮಾಣವಾಗುವುದು, ಅವುಗಳ ಪೂರ್ತಿಗಾಗಿ ಪ್ರಯತ್ನಿಸುವುದು, ಮಾಡಿದ ಪ್ರಯತ್ನಗಳ ಫಲ ಅನುಭವಿಸುವುದು, ಅದರಿಂದ ಕಲಿಯುವುದು ಮತ್ತು ಕೊನೆಯಲ್ಲಿ ಎಲ್ಲವನ್ನೂ ತ್ಯಾಗ ಮಾಡುವುದು’, ಇಂತಹದ್ದೊಂದು ನೈಸರ್ಗಿಕ ವಿಕಾಸಕ್ರಮವಾಗಿದೆ. ಜ್ಯೋತಿಷ್ಯವು ಕೇವಲ ಒಂದು ಶಾಸ್ತ್ರವಾಗಿರದೆ ಅದೊಂದು ತತ್ತ್ವಜ್ಞಾನವಾಗಿದೆ. ಅದು ವ್ಯಕ್ತಿಯನ್ನು ವಿಕಾಸದ ಮುಂದಿನ ಮೆಟ್ಟಿಲಿಗೆ ಕರೆದೊಯ್ಯಲು ಈಶ್ವರನು ನೀಡಿದ ಒಂದು ಮಾಧ್ಯಮವಾಗಿದೆ ಎಂಬ ಪ್ರಚೀತಿಯು ಇದರ ಮೂಲಕ ಬರುತ್ತದೆ!’
– ಶ್ರೀ. ರಾಜ್ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೧೧.೨೦೨೫)
ಹಸ್ತ ಸಾಮುದ್ರಿಕಾ ಶಾಸ್ತ್ರ : ಪ್ರಾಥಮಿಕ ಪರಿಚಯ
ಅಶುಭ ಕಾಲದಲ್ಲಿ ಹುಟ್ಟಿದ ಮಗುವಿನ ಜನನಶಾಂತಿ ಏಕೆ ಮಾಡಬೇಕು?
೭.೯.೨೦೨೫ ರ ಖಗ್ರಾಸ ಚಂದ್ರಗ್ರಹಣ – ರಾಶಿಗಳಿಗನುಸಾರ ದೊರೆಯುವ ಫಲ
ಗ್ರಹದೋಷಗಳ ದುಷ್ಪರಿಣಾಮಗಳು ಸಹ್ಯವಾಗಲು ಏನು ಮಾಡಬೇಕು?
ನವಗ್ರಹಗಳ ಉಪಾಸನೆ ಮತ್ತು ಮಹತ್ವ
ಗ್ರಹ, ರಾಶಿ ಮತ್ತು ಕುಂಡಲಿಯ ಮನೆಗಳು