ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದವನ್ನು ಪಡೆಯಿರಿ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ ಮತ್ತು ಸಾಧಕರಿಗೆ ಮಹತ್ವದ ಸೂಚನೆ !

೧. ಪಿಂಡದಾನವನ್ನು ಮಾಡಿ ಶ್ರಾದ್ಧವನ್ನು ಮಾಡುವುದು

ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕದ ಅತ್ಯಧಿಕ ಸಮೀಪ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ಉದಕ (ನೀರು) ಮತ್ತು ಪಿಂಡದಾನ ಅವರವರೆಗೆ ಬೇಗನೆ ತಲುಪುತ್ತದೆ. ಆದುದರಿಂದ ಅವರು ಸಂತುಷ್ಟರಾಗುತ್ತಾರೆ ಮತ್ತು ಕುಟುಂಬದವರಿಗೆ ಆಶೀರ್ವಾದ ನೀಡುತ್ತಾರೆ. ಶ್ರಾದ್ಧವಿಧಿಯನ್ನು ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕೆಂದು ಮತ್ತು ಸಾಧನೆಗೆ ಅವರ ಆಶೀರ್ವಾದ ಸಿಗಬೇಕು’ ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.

೨. ಆಮಾನ್ನ ಶ್ರಾದ್ಧ

ಕೆಲವು ಕಾರಣಗಳಿಂದ ಪೂರ್ಣ ಶ್ರಾದ್ಧವಿಧಿಯನ್ನು ಮಾಡುವುದು ಸಾಧ್ಯವಾಗದಿದ್ದರೆ ಸಂಕಲ್ಪ ಮಾಡಿ ‘ಆಮಾನ್ನ ಶ್ರಾದ್ಧ’ ಮಾಡಬೇಕು. ಆಮಾನ್ನ ಶ್ರಾದ್ಧವೆಂದರೆ ತಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಳ್ಳು, ಎಣ್ಣೆ, ತುಪ್ಪ, ಬೆಲ್ಲ, ಬಟಾಟೆ, ತೆಂಗಿನಕಾಯಿ, ವೀಳ್ಯೆ, ದಕ್ಷಿಣೆ ಇತ್ಯಾದಿ ಸಾಮಗ್ರಿಗಳನ್ನು ಯಾರಾದರೊಬ್ಬ ಪುರೋಹಿತರಿಗೆ ನೀಡಬೇಕು. ಪುರೋಹಿತರು ಸಿಗದಿದ್ದರೆ ವೇದಪಾಠಶಾಲೆಗೆ ಅಥವಾ ದೇವಸ್ಥಾನಕ್ಕೆ ದಾನ ನೀಡಬೇಕು.

೩. ಹಿರಣ್ಯ ಶ್ರಾದ್ಧ

‘ಆಮಾನ್ನ ಶ್ರಾದ್ಧ’ವೂ ಸಾಧ್ಯವಿಲ್ಲದಿದ್ದರೆ ಸಂಕಲ್ಪ ಮಾಡಿ ‘ಹಿರಣ್ಯ ಶ್ರಾದ್ಧ’ವನ್ನು ಮಾಡಬೇಕು. ಹಿರಣ್ಯ ಶ್ರಾದ್ಧವೆಂದರೆ ತಮ್ಮ ಕ್ಷಮತೆಗನುಸಾರ ಮೇಲಿನ ಸ್ಥಳಗಳ ಪೈಕಿ ಯಾವುದಾದರು ಒಂದು ಸ್ಥಳಕ್ಕೆ ಧನವನ್ನು ಅರ್ಪಿಸಿಬೇಕು.

೪. ಶ್ರಾದ್ಧವಿಧಿಯನ್ನು ಮಾಡುವಾಗ ಮಾಡಬೇಕಾದ ಪ್ರಾರ್ಥನೆ !

ಹೇ ದತ್ತಾತ್ರೇಯಾ, ತಮ್ಮ ಕೃಪೆಯಿಂದ ನಾವು ಪ್ರಾಪ್ತ ಪರಿಸ್ಥಿತಿಯಲ್ಲಿ ಆಮಾನ್ನ ಶ್ರಾದ್ಧ/ಹಿರಣ್ಯ ಶ್ರಾದ್ಧ (ಯಾವ ಶ್ರಾದ್ಧವನ್ನು ಮಾಡಿದ್ದೇವೆಯೋ, ಅದರ ಉಲ್ಲೇಖ ಮಾಡಬೇಕು) ಮಾಡಿದ್ದೇವೆ. ಈ ಮೂಲಕ ಪಿತೃಗಳಿಗೆ ಅನ್ನ ಮತ್ತು ನೀರು ಸಿಗಲಿ. ಈ ದಾನದಿಂದ ಎಲ್ಲ ಪಿತೃಗಳು ತೃಪ್ತರಾಗಲಿ. ನಮ್ಮ ಮೇಲೆ ಅವರ ಕೃಪಾದೃಷ್ಟಿ ಇರಲಿ. ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಅವರ ಆಶೀರ್ವಾದವು ಪ್ರಾಪ್ತವಾಗಲಿ. ತಮ್ಮ ಕೃಪೆಯಿಂದ ಅವರಿಗೆ ಮುಂದಿನ ಗತಿ ಪ್ರಾಪ್ತವಾಗಲಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.

– ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೯.೨೦೨೨)

Leave a Comment