ಶ್ರಾದ್ಧದ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ

೧. ಭಾರತದಲ್ಲಿ ಶಾಸ್ತ್ರಾನುಸಾರ ಅಮಾವಾಸ್ಯೆಯು ಪಿತೃಗಳಿಗಾಗಿ ‘ಅತ್ಯಧಿಕ ಪ್ರಿಯವಾದ ತಿಥಿ’ ಆಗಿರುವುದರ ಹಿಂದಿನ ಕಾರಣಗಳು ಮತ್ತು ಆ ತಿಥಿಯ ಮಹತ್ವ

ಮತ್ಸ್ಯಪುರಾಣದಲ್ಲಿ ಈ ವಿಷಯದ ಬಗ್ಗೆ ಒಂದು ಕಥೆಯಿದೆ. ಮತ್ಸ್ಯಪುರಾಣದಲ್ಲಿ ಅಚ್ಛೋದ ಸರೋವರ ಮತ್ತು ಅಚ್ಛೋದ ನದಿಯ ಉಲ್ಲೇಖವಿದೆ. ಈ ಸರೋವರ ಮತ್ತು ನದಿ ಕಾಶ್ಮೀರದಲ್ಲಿವೆ.

ಅಚ್ಛೋದಾ ನಾಮ ತೇಷಾಂ ತು ಮಾನಸೀ ಕನ್ಯಕಾ ನದಿ ||
ಅಚ್ಛೋದಂ ನಾಮ ಚ ಸರಃ ಪಿತೃಭಿರ್ನಿರ್ಮಿತಂ ಪುರಾ|
ಅಚ್ಛೋದಾ ತು ತಪಶ್ಚಕ್ರೆ ದಿವ್ಯಂ ವರ್ಷಸಹಸ್ರಕಮ್||

-ಮತ್ಸ್ಯಪುರಾಣ, ಅಧ್ಯಾಯ ೧೪, ಶ್ಲೋಕ ೨ ಮತ್ತು ೩.

ಅರ್ಥ: ಭಗವಾನ ಮರೀಚಿಯ ವಂಶಜರು ಎಲ್ಲಿ ಇರುತ್ತಿದ್ದರೋ, ಅಲ್ಲಿ ಅಚ್ಛೋದಾ ಹೆಸರಿನ ನದಿ ಹರಿಯುತ್ತದೆ. ಅಚ್ಛೋದಾ ಪಿತೃ ಗಣಗಳ ಮಾನಸಕನ್ಯೆಯಾಗಿದ್ದಾಳೆ. ಪ್ರಾಚೀನ ಕಾಲದಲ್ಲಿ ಪಿತೃಗಳು ಅಲ್ಲಿ ಅಚ್ಛೋದ ಹೆಸರಿನ ಒಂದು ಸರೋವರವನ್ನು ಉತ್ಪತ್ತಿ ಮಾಡಿದ್ದರು. ಹಿಂದೆ ಅಚ್ಛೋದಾಳು (ಅಗ್ನಿಷ್ವಾತ್ತನ ಮಾನಸ ಪುತ್ರಿ) ೧ ಸಾವಿರ ವರ್ಷಗಳವರೆಗೆ ಕಠಿಣ ತಪಸ್ಸನ್ನು ಮಾಡಿದ್ದಳು. ಕಾಶ್ಮೀರವು ಭಾರತದ ಒಂದು ಪ್ರಾಚೀನ ರಾಜ್ಯವಾಗಿದೆ. ಮರೀಚಿಯ ಪುತ್ರ ಕಶ್ಯಪನ ಹೆಸರಿನಿಂದ ಮೊದಲು ಕಾಶ್ಮೀರದ ಹೆಸರು ಕಶ್ಯಪಮರ ಅಥವಾ ಕಶೇಮರ್ರ ಆಗಿತ್ತು. ಮತ್ಸ್ಯಪುರಾಣದಲ್ಲಿ ಸೋಮಪಥ ಹೆಸರಿನ ಸ್ಥಳದಲ್ಲಿ ಮರೀಚಿಯ ಪುತ್ರ ಅಗ್ನಿಷ್ವಾತ್ತ ಹೆಸರಿನ ದೇವತೆಯ ಪಿತೃಗಣರು ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಅಲ್ಲಿಯೇ ಅಗ್ನಿಷ್ವಾತ್ತನ ಮಾನಸಪುತ್ರಿ ಅಚ್ಛೋದಾ ೧ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿದಳು. ಅವಳ ತಪಸ್ಸಿಗೆ ಪ್ರಸನ್ನರಾಗಿ ದೇವತೆಗಳ ಸಮಾನರಾಗಿರುವ ಸುಂದರ ಮತ್ತು ಕಾಂತಿಯುಕ್ತ ಪಿತೃಗಣಗಳು ವರವನ್ನು ನೀಡಲು ಅಚ್ಛೋದಾಳ ಬಳಿಗೆ ಬಂದರು. ಎಲ್ಲ ಪಿತೃರು ಮನಸೂರೆಗೊಳ್ಳುವಂತಿದ್ದರು. ಅವರ ಸೌಂದರ್ಯ ಮತ್ತು ರೂಪದಿಂದ ಪ್ರಭಾವಿತಳಾದ ಅಚ್ಛೋದಾ ‘ಅಮಾವಸು’ ಹೆಸರಿನ ಒಬ್ಬ ಪಿತೃನ ಮೇಲೆ ಆಸಕ್ತಳಾದಳು. ಪಿತೃಗಣಗಳ ವಿಷಯದಲ್ಲಿ ಈ ರೀತಿಯ ಇಚ್ಛೆಯನ್ನು ಮನಸ್ಸಿನಲ್ಲಿ ತರುವುದು ಒಂದು ದೊಡ್ಡ ಅಪರಾಧವಾಗಿತ್ತು. ಆಗ ಅಮಾವಸು ತಕ್ಷಣವೇ ಅಚ್ಛೋದಾಳ ಕೋರಿಕೆಯನ್ನು ನಿರಾಕರಿಸಿ, ಅವಳಿಗೆ ಶಾಪ ಕೊಟ್ಟನು. ಯಾವ ಪುಣ್ಯತಿಥಿಗೆ ಅಮಾವಸು ಅಚ್ಛೋದಾಳ ವಾಸನೆಯನ್ನು ನಿರಾಕರಿಸಿದ್ದನೋ, ಆ ತಿಥಿಯು ಅವನ ಗೌರವಾರ್ಥ ಅವನ ಹೆಸರಿನಿಂದಲೇ ‘ಅಮಾವಾಸ್ಯಾ’ ಎಂದು ಪ್ರಸಿದ್ಧವಾಯಿತು ಮತ್ತು ಆಗಿನಿಂದ ನಮ್ಮ ಪಿತೃಗಳಿಗೆ ಅದು ಅತ್ಯಧಿಕ ಇಷ್ಟವಾದ ತಿಥಿಯಾಯಿತು.

೨. ವಿದೇಶಗಳಲ್ಲಿರುವ ಭಾರತೀಯರು ಸಂಚಾರವಾಣಿಯ ಮೂಲಕ ಪುರೋಹಿತರಿಂದ ಶ್ರಾದ್ಧ ಮತ್ತು ತರ್ಪಣ ವಿಧಿಯನ್ನು ಮಾಡಿಸಿಕೊಳ್ಳುವುದು ಅಯೋಗ್ಯ !

ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿರುವ ಭಾರತೀಯರು ತಮ್ಮ ಪಿತೃಗಳ ತರ್ಪಣ ಮತ್ತು ಪಿಂಡದಾನ ವಿಧಿಯನ್ನು ಮಾಡಲು ಉಜ್ಜೈನಿಯ ಮತ್ತು ಗಯಾದ ಪುರೋಹಿತರನ್ನು ಸಂಚಾರವಾಣಿಯ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಮತ್ತು ಅವರಿಂದ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವು ಪುರೋಹಿತರು ಇದಕ್ಕೆ ಸಮ್ಮತಿಯನ್ನೂ ನೀಡಿದ್ದಾರೆ. ಅವರು ಸಂಚಾರವಾಣಿಯ ಮೂಲಕ ಯಜಮಾನನಿಂದ ಸಂಕಲ್ಪವನ್ನು ಮಾಡಿಸಿಕೊಳ್ಳುತ್ತಾರೆ. ತದನಂತರ ಯಜಮಾನನು ಹೇಳಿರುವ ಹೆಸರುಗಳಿಂದ ಪುರೋಹಿತರು ತರ್ಪಣ ಮತ್ತು ಪಿಂಡದಾನವನ್ನು ಮಾಡುತ್ತಾರೆ. ಆಪದ್ಧರ್ಮದ ಕೆಲವು ಪರಿಸ್ಥಿತಿಗಳಲ್ಲಿ ಬ್ರಾಹ್ಮಣರಿಂದ ತರ್ಪಣವನ್ನು ಮಾಡಿಸಿಕೊಳ್ಳಬಹುದು; ಆದರೆ ಬ್ರಾಹ್ಮಣರು ಕೇವಲ ಧನದ ಲೋಭದಿಂದ ವಿದೇಶದಲ್ಲಿನ ಜನರಿಂದ ಈ ರೀತಿ ಸಂಚಾರವಾಣಿ ಮೂಲಕ ಸಂಕಲ್ಪವನ್ನು ಮಾಡಿಸಿಕೊಂಡು ಶ್ರಾದ್ಧದ ವಿಧಿಯನ್ನು ಮಾಡುವುದು ಅಯೋಗ್ಯವಾಗಿದೆ. ಪಿತೃಗಳ ಮುಕ್ತಿಗಾಗಿ ವ್ಯಕ್ತಿಯು ಸ್ವತಃ ತೀರ್ಥಸ್ಥಾನಗಳಲ್ಲಿ ದೇವತೆಗಳ ಸಾಕ್ಷಿಯಿಂದ ತಮ್ಮ ಪಿತೃಗಳಿಗೆ ತರ್ಪಣ ಮತ್ತು ಪಿಂಡದಾನವನ್ನು ಮಾಡಬೇಕು. ಇದರಿಂದ ಪಿತೃಗಳಿಗೆ ತೃಪ್ತಿಯಾಗಿ ಅವರ ಮುಕ್ತಿಯ ಮಾರ್ಗ ಸುಲಭವಾಗುತ್ತದೆ.

೩. ಹಿಂದೂ ಧರ್ಮದಲ್ಲಿ ಶ್ರಾದ್ಧದ ಮಹತ್ವದ ಘಟಕವಾಗಿರುವ ಪವಿತ್ರ ದರ್ಭೆಯ ಮಹತ್ವ

ಮಹಾಭಾರತದಲ್ಲಿರುವ ಕಥೆಗನುಸಾರ ಗರುಡದೇವನು ಸ್ವರ್ಗದಿಂದ ಅಮೃತ ಕಲಶವನ್ನು ತೆಗೆದುಕೊಂಡು ಬಂದು ಕೆಲವು ಸಮಯ ಆ ಕಲಶವನ್ನು ದರ್ಭೆಯ ಮೇಲೆ ಇಟ್ಟಿದ್ದನು. ದರ್ಭೆಯ ಮೇಲೆ ಅಮೃತ ಕಲಶವನ್ನು ಇಟ್ಟಿದ್ದರಿಂದ ದರ್ಭೆಯನ್ನು ಪವಿತ್ರವೆಂದು ತಿಳಿಯಲಾಗುತ್ತದೆ. ಶ್ರಾದ್ಧದ ಸಮಯದಲ್ಲಿ ದರ್ಭೆಯಿಂದ ತಯಾರಿಸಿದ ಉಂಗುರವನ್ನು ಅನಾಮಿಕಾದಲ್ಲಿ ಹಾಕಿಕೊಳ್ಳುವ ಪರಂಪರೆಯಿದೆ. ದರ್ಭೆಯ ಅಗ್ರಭಾಗದಲ್ಲಿ ಬ್ರಹ್ಮ, ಮಧ್ಯಭಾಗದಲ್ಲಿ ವಿಷ್ಣು ಮತ್ತು ಮೂಲದಲ್ಲಿ ಭಗವಾನ ಶಿವನು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಶ್ರಾದ್ಧಕರ್ಮದಲ್ಲಿ ದರ್ಭೆಯ ಉಂಗುರವನ್ನು ಧರಿಸುವುದರಿಂದ ‘ನಾವು ಪವಿತ್ರರಾಗಿ ನಮ್ಮ ಪಿತೃಗಳ ಶಾಂತಿಗಾಗಿ ಶ್ರಾದ್ಧಕರ್ಮ ಮತ್ತು ಪಿಂಡದಾನವನ್ನು ಮಾಡುತ್ತೇವೆ’, ಎಂಬುದು ಅದರ ಅರ್ಥವಾಗಿದೆ.

೪. ಸುವರ್ಣದಾನಕ್ಕಿಂತ ತಮ್ಮ ಪಿತೃಗಳಿಗಾಗಿ ಪಿಂಡದಾನ ಮತ್ತು ಅನ್ನದಾನ ಮಾಡುವುದು ಶ್ರೇಷ್ಠ ಎಂಬುದು ಕರ್ಣನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ

ಒಂದು ಪ್ರಚಲಿತ ಕಥೆಗನುಸಾರ ಕರ್ಣನ ಮರಣದ ಬಳಿಕ ಅವನ ಆತ್ಮವು ಸ್ವರ್ಗಕ್ಕೆ ಹೋಗುತ್ತದೆ, ಆಗ ಅವನಿಗೆ ಭೋಜನಕ್ಕಾಗಿ ಬಹಳಷ್ಟು ಬಂಗಾರ ಮತ್ತು ಆಭರಣಗಳನ್ನು ನೀಡಲಾಗುತ್ತದೆ. ಇದನ್ನು ನೋಡಿ ಕರ್ಣನ ಆತ್ಮಕ್ಕೆ ಪ್ರಶ್ನೆ ಮೂಡಿತು, ಆಗ ಅವನು ಇಂದ್ರದೇವನಿಗೆ ಭೋಜನದ ಬದಲು ಬಂಗಾರವನ್ನೇಕೆ ನೀಡಲಾಗಿದೆ ಎಂದು ಕೇಳಿದನು. ಆಗ ಇಂದ್ರನು ಕರ್ಣನಿಗೆ ‘ನೀನು ಜೀವಂತವಿರುವಾಗ ಜೀವನವಿಡೀ ಸುವರ್ಣದಾನವನ್ನೇ ಮಾಡಿರುವೆ, ಯಾವತ್ತೂ ನಿಮ್ಮ ಪಿತೃಗಳಿಗೆ ಅನ್ನದಾನ ಮಾಡಲಿಲ್ಲ’ ಎಂದು ಹೇಳಿದನು. ಆಗ ಕರ್ಣನು ‘ನನಗೆ ನನ್ನ ಪೂರ್ವಜರ ಬಗ್ಗೆ ಮಾಹಿತಿಯಿರಲಿಲ್ಲ. ಆದುದರಿಂದ ನಾನು ಅವರಿಗೆ ಏನನ್ನೂ ದಾನ ಮಾಡಲು ಸಾಧ್ಯವಾಗಲಿಲ್ಲ’, ಎಂದು ಹೇಳಿದನು. ಕರ್ಣನಿಗೆ ಅವನ ತಪ್ಪನ್ನು ಸುಧಾರಿಸಿಕೊಳ್ಳಲು ಅವಕಾಶವನ್ನು ನೀಡಲಾಯಿತು ಮತ್ತು ಅವನನ್ನು ಪಿತೃಪಕ್ಷದ ೧೬ ದಿನಗಳವರೆಗೆ ಪೃಥ್ವಿಗೆ ಮರಳಿ ಕಳುಹಿಸಲಾಯಿತು. ಅಲ್ಲಿ ಅವನು ತನ್ನ ಪೂರ್ವಜರನ್ನು ಸ್ಮರಿಸಿ ಅವರ ಶ್ರಾದ್ಧವನ್ನು ಮಾಡಿದನು ಮತ್ತು ಅನ್ನದಾನವನ್ನು ಮಾಡಿದನು. ಹಾಗೆಯೇ ಅವರಿಗೆ ತರ್ಪಣವನ್ನೂ ನೀಡಿದನು. ಈ ಪ್ರಚಲಿತ ಕಥೆಯಿಂದ ನಮಗೆ ಸುವರ್ಣದಾನಕ್ಕಿಂತ ನಮ್ಮ ಪಿತೃಗಳಿಗೆ ಪಿಂಡದಾನ, ಅನ್ನದಾನ ಮತ್ತು ತರ್ಪಣ ನೀಡುವುದಕ್ಕೆ ಎಷ್ಟು ಮಹತ್ವವಿದೆ ಎಂಬುದು ತಿಳಿಯುತ್ತದೆ.

೫. ಹಿಂದೂವಿರೋಧಿಗಳು ಶ್ರಾದ್ಧದಂತಹ ವಿಧಿಯನ್ನು ಟೀಕಿಸುವುದು ಅಜ್ಞಾನವೇ

ಹಿಂದೂವಿರೋಧಿಗಳು ಶ್ರಾದ್ಧದ ಸಂದರ್ಭದಲ್ಲಿ ಬ್ರಾಹ್ಮಣರನ್ನು ಗುರಿ ಮಾಡಿ ವಿವಿಧ ಆರೋಪಗಳನ್ನು ಮಾಡುತ್ತಾರೆ. ಶ್ರಾದ್ಧಾದಿ ವಿಧಿಗಳನ್ನು ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಬ್ರಾಹ್ಮಣರ ವಿಷಯದಲ್ಲಿ ಬರುವ ಉಲ್ಲೇಖದ ಸಂದರ್ಭದಲ್ಲಿ ತಿಳಿದುಕೊಂಡರೆ ಈ ಆರೋಪದಲ್ಲಿರುವ ಮಿಥ್ಯಗಳು ಬಹಿರಂಗವಾಗುತ್ತದೆ. ಉದಾಹರಣೆಗೆ ಶ್ರಾದ್ಧಕರ್ಮಗಳನ್ನು ಮಾಡುವ ಬ್ರಾಹ್ಮಣರ ವಿಷಯದಲ್ಲಿ ಶಾಸ್ತ್ರಗ್ರಂಥದಲ್ಲಿ ಕೆಲವು ನಿಯಮಗಳನ್ನು ಹೇಳಲಾಗಿದೆ, ಉದಾ. ಬ್ರಾಹ್ಮಣನು ವೇದಜ್ಞಾನಿಯಾಗಿರಬೇಕು. ಅವನು ಪರಿಶುದ್ಧನಾಗಿರಬೇಕು. ಅವನು ಶಾಂತಚಿತ್ತ, ನಿಯಮ-ಧರ್ಮದಿಂದ ನಡೆದುಕೊಳ್ಳುವವನು, ತಪಸ್ಸು ಮಾಡುವವನು, ಧರ್ಮಶಾಸ್ತ್ರದಲ್ಲಿ ಶ್ರದ್ಧೆ ಇರುವವನು, ತಂದೆಯನ್ನು ಗೌರವಿಸುವವನು, ಆಚಾರವಂತ ಮತ್ತು ಅಗ್ನಿಹೋತ್ರಿಯಾಗಿರಬೇಕು. ಒಂದು ವೇಳೆ ಇಂತಹ ಯೋಗ್ಯತೆಯುಳ್ಳ ಬ್ರಾಹ್ಮಣ ಸಿಗದಿದ್ದರೆ, ತತ್ತ್ವಜ್ಞಾನಿ ಯೋಗಿಯನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡಿಸಿಕೊಳ್ಳಬೇಕು. ಇಂತಹ ಯೋಗಿಯೂ ಸಿಗದಿದ್ದರೆ, ಯಾವುದಾದರೂ ವಾನಪ್ರಸ್ಥಾಶ್ರಮಿಗೆ ಅನ್ನದಾನವನ್ನು ಮಾಡಿ ಶ್ರಾದ್ಧಕರ್ಮವನ್ನು ಮಾಡಬೇಕು. ವಾನಪ್ರಸ್ಥಾಮಿಯು ಸಿಗದಿದ್ದರೆ, ಮೋಕ್ಷದ ಇಚ್ಛೆಯನ್ನು ಇಟ್ಟುಕೊಳ್ಳುವ, ಅರ್ಥಾತ್ ಸಾಧಕವೃತ್ತಿಯನ್ನು ಹೊಂದಿರುವ ಗೃಹಸ್ಥನಿಗೆ ಅನ್ನದಾನವನ್ನು ಮಾಡಬೇಕು. ಯಾವ ಬ್ರಾಹ್ಮಣನು ಧ್ಯಾನ-ಪೂಜೆ, ಯಜ್ಞ ಇತ್ಯಾದಿ ನಿಯಮಿತ ಕರ್ಮಗಳನ್ನು ಮಾಡುವುದಿಲ್ಲವೋ, ಅವನನ್ನು ಕರೆಯಿಸಿ ಶ್ರಾದ್ಧಕರ್ಮಗಳನ್ನು ಮಾಡುವುದರಿಂದ ಪಿತೃಗಳಿಗೆ ಅಸುರಿ ಯೋನಿ ಪ್ರಾಪ್ತವಾಗುತ್ತದೆ. ಇಷ್ಟೇ ಅಲ್ಲ, ಮದ್ಯಪಾನ ಮಾಡುವವನು, ವೇಶ್ಯಾಗಮನ ಮಾಡುವವನು, ಅಸತ್ಯ ನುಡಿಯುವವನು, ತಂದೆ-ತಾಯಿ, ಗುರುಗಳಿಗೆ ಗೌರವ ನೀಡದವನು, ಚಾರಿತ್ರ್ಯಶೂನ್ಯ, ವೇದಗಳನ್ನು ನಿಂದಿಸುವವನು, ಈಶ್ವರನ ಮೇಲೆ ವಿಶ್ವಾಸ ಇಡದಿರುವವನು, ಹಾಗೆಯೇ ಉಪಕಾರಗಳನ್ನು ಸ್ಮರಿಸದಿರುವವನು ಇಂತಹ ಬ್ರಾಹ್ಮಣರನ್ನು ಶ್ರಾದ್ಧಕರ್ಮ ಮಾಡಲು ಕರೆಯಬಾರದು, ಅಲ್ಲದೇ ಅವರಿಗೆ ದಕ್ಷಿಣೆಯನ್ನು ಕೂಡ ಕೊಡಬಾರದು. ಯಾವ ದಾನವನ್ನು ಸದಾಚಾರಿ ವ್ಯಕ್ತಿಗೆ ಕೊಡಲಾಗುತ್ತದೆಯೋ, ಅದನ್ನೇ ‘ದಾನ’ ಎನ್ನಲಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಈ ನಿಯಮಗಳಿಂದ ವಿರೋಧಕರ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟವಾಗುತ್ತದೆ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

2 thoughts on “ಶ್ರಾದ್ಧದ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ”

 1. ಉತ್ತಮವಾದ ಮಾಹಿತಿ ನೀಡಿದ್ದೀರಿ. ವಂದನೆಗಳು🙏🙏

  ನನ್ನದೊಂದು ಸಂದೇಹ ನಿವಾರಿಸಲು ಕೋರುತ್ತೇನೆ.

  ಗಂಗೆಯಲ್ಲಿ ತಂದೆಯ ಅಸ್ಥಿಯನ್ನು ವಿಸರ್ಜನೆ ಮಾಡಲು ಮಗನಾದವನು ತಂದೆಯ ಮರಣದ ಎಷ್ಟು ಕಾಲದ ನಂತರ ಹೋಗಬೇಕು?

  Reply
  • ನಮಸ್ಕಾರ,
   ವಿಷಯ ಉಪಯುಕ್ತವಾಗಿದೆ ಎಂದೆನಿಸಿದರೆ ದಯವಿಟ್ಟು ಇತರರೊಂದಿಗೂ ಹಂಚಿ.
   ನಿಮ್ಮ ಪ್ರಶ್ನೆಗೆ ಉತ್ತರ ಮುಂದಿನಂತಿದೆ.
   ಮೃತರ ಅಂತ್ಯಕ್ರಿಯೆಯ ೧೦ ದಿವಸಗಳು ಮುಗಿಯುವ ಮೊದಲು ಯಾವುದೇ ದಿನದಂದು ಅಸ್ಥಿ ವಿಸರ್ಜನೆಯನ್ನು ಮಾಡಬಹುದು. ೧೦ ದಿನಗಳು ಕಳೆದ ನಂತರ ಸ್ಥಳೀಯ ಪುರೋಹಿತರನ್ನು ಕೇಳಿ ಒಂದು ದಿನವನ್ನು ಗೊತ್ತುಪಡಿಸಿ ಒಂದು ವಿಶಿಷ್ಟ ವಿಧಿಯನ್ನು ನೆರವೇರಿಸಿ ಅಸ್ಥಿ ವಿಸರ್ಜನೆಯನ್ನು ಮಾಡಬೇಕು.

   Reply

Leave a Comment