ಸಾಧನಾವೃದ್ಧಿ ಸತ್ಸಂಗ (14)

ಉಪ್ಪು ನೀರಿನ ಉಪಾಯ

ಈ ಹಿಂದ ನಾವು ಕೆಟ್ಟ ಶಕ್ತಿಗಳ ತೊಂದರೆ ಎಂದರೇನು? ಹಾಗೂ ಆಧ್ಯಾತ್ಮಿಕ ಉಪಾಯ ಎಂದರೇನು? ಎಂದು ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯದ ಅಂತರ್ಗತ ಕರ್ಪೂರ-ಅತ್ತರ ಉಪಾಯವನ್ನು ಮಾಡುವುದು ಹೇಗೆ ಎಂದು ಸಹ ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯಗಳಿಂದ ಸಾಧನೆಯ ಅಡಚಣೆಗಳು ದೂರವಾಗುತ್ತವೆ. ನಮ್ಮ ಶರೀರ, ಮನಸ್ಸು ಹಾಗೂ ಬುದ್ಧಿಯ ಮೇಲಿನ ನಕಾರಾತ್ಮಕ ಮತ್ತು ಅನಿಷ್ಟ ಶಕ್ತಿಗಳ ಆವರಣ ದೂರವಾಗಲು ಸಹಾಯವಾಗುತ್ತದೆ; ಕೆಟ್ಟ ಶಕ್ತಿಗಳನ್ನು ದೂರಗೊಳಿಸಲು ಸಾಧ್ಯವಾಗುತ್ತದೆ. ತಾವು ಕರ್ಪೂರ – ಅತ್ತರ ನ ಉಪಾಯವನ್ನು ಮಾಡಿದ ನಂತರ ಅದರ ಪರಿಣಾಮವನ್ನು ಸಹ ಅನುಭವಿಸಿರಬಹುದು. ನಾವು ಎಷ್ಟು ಆಧ್ಯಾತ್ಮಿಕ ಉಪಾಯಗಳನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಸುತ್ತಲಿನ ಆವರಣವು ದೂರವಾಗಿ ಹಗರುವೆನಿಸುತ್ತದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಆಠವಲೆಯವರು ಅಖಿಲ ಮಾನವಜಾತಿಯ ಕಲ್ಯಾಣಕ್ಕಾಗಿ, ಸಾಧಕರಿಗೆ ಉತ್ತಮವಾಗಿ ಸಾಧನೆಯನ್ನು ಮಾಡಲು ಆಗಬೇಕೆಂದು ಅನೇಕ ಉಪಚಾರ ಪದ್ಧತಿಗಳನ್ನು ಹುಡುಕಿ ತೆಗೆದಿದ್ದಾರೆ. ಈ ಲೇಖನದಲ್ಲಿ ನಾವು ಅವುಗಳಲ್ಲಿ ಒಂದಾದ ‘ಉಪ್ಪು ನೀರಿನ ಉಪಾಯ’ದ ವಿಷಯದಲ್ಲಿ ತಿಳಿದುಕೊಳ್ಳುವವರಿದ್ದೇವೆ. ಕೆಟ್ಟ ಶಕ್ತಿಗಳನ್ನು ದೂರ ಗೊಳಿಸಲು ಉಪ್ಪು ನೀರಿನ ಉಪಾಯವು ಅತ್ಯಂತ ಸರಳ ಹಾಗೂ ಪ್ರಭಾವಶಾಲಿಯಾಗಿದೆ. ನಿಯಮಿತವಾಗಿ ಉಪ್ಪು ನೀರಿನ ಉಪಾಯ ಮಾಡಿದರೆ ಶರೀರದಲ್ಲಿರುವ ಕೆಟ್ಟ ಶಕ್ತಿಗಳು ನಾಶವಾಗಲು ಸಹಾಯವಾಗುತ್ತದೆ.

ಅ. ಆವರಣದ ಲಕ್ಷಣಗಳು

ನಮ್ಮ ಮೇಲೆ ಕೆಟ್ಟ ಶಕ್ತಿ ಅಥವಾ ಕಪ್ಪು ಶಕ್ತಿಗಳ ಆವರಣ ಬಂದಿದೆ ಎಂದು ಹೇಗೆ ಗುರುತಿಸುವುದು? ಅದರ ಕೆಲವು ಲಕ್ಷಣಗಳಿವೆ. ಆ ಲಕ್ಷಣಗಳು ಯಾವುವು, ಅಂದರೆ ದಿನವಿಡಿ ಸುಸ್ತಾಗುವುದು, ಜಡತ್ವ ಅನಿಸುವುದು, ನಿರುತ್ಸಾಹವಿರುವುದು, ಏನೂ ಹೊಳೆಯದಿರುವುದು, ಚಿಂತೆಯಿಂದಿರುವುದು, ಯಾವುದೇ ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು, ಏನೂ ಕಾರಣವಿಲ್ಲದಿರುವಾಗ ಅಸಹನೆಯಾಗುವುದು, ಕೋಪ ಬರುವುದು, ಶರೀರವು ರೋಗಗ್ರಸ್ತವಾಗುವುದು. ಇಂತಹ ರೀತಿಯ ಅನುಭವಗಳು ಬರುತ್ತಿದ್ದಲ್ಲಿ ‘ನಮ್ಮ ಮೇಲೆ ಆವರಣ ಬಂದಿದೆ’ ಎಂದು ನಾವು ಹೇಳಬಹುದು. ಆವರಣವು ಹೆಚ್ಚಾದೊಡನೆ ನಾವು ಶಾರೀರಿಕ ಮತ್ತು ಮಾನಸಿಕ ದೃಷ್ಟಿಯಿಂದ ದುರ್ಬಲರಾಗುತ್ತೇವೆ. ಹೀಗಾಗಬಾರದು ಎಂದು ನಾವು ಗಾಂಭೀರ್ಯದಿಂದ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಆವಶ್ಯಕವಾಗಿರುತ್ತದೆ.

ಆ. ಆಧ್ಯಾತ್ಮಿಕ ಉಪಾಯಗಳ ಮಹತ್ವ

ವಾತಾವರಣದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎಂಬ ಎರಡು ರೀತಿಯ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಅವುಗಳಿಗೆ ಆಧ್ಯಾತ್ಮಿಕ ಭಾಷೆಯಲ್ಲಿ ಅನುಕ್ರಮವಾಗಿ ದೈವೀ ಮತ್ತು ಕೆಟ್ಟ ಶಕ್ತಿಗಳು ಎನ್ನುತ್ತಾರೆ. ದೈವೀ ಶಕ್ತಿಗಳು ಸಾಧನೆಯನ್ನು ಮಾಡುವ ಜೀವಗಳಿಗೆ ಸಹಾಯ ಮಾಡುತ್ತವೆ, ಮತ್ತು ಕೆಟ್ಟ ಶಕ್ತಿಗಳು ಸಾಧನೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತವೆ. ಇದು ಒಂದು ರೀತಿಯಲ್ಲಿ ದೇವಾಸುರರ ಸಂಗ್ರಾಮವಾಗಿದೆ. ಅದು ಅನಾದಿ ಕಾಲದಿಂದ ನಡೆಯುತ್ತಿದೆ. ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳು ತಮ್ಮ ಸೂಕ್ಷ್ಮ ಕಪ್ಪು ಶಕ್ತಿಯಿಂದ ಜನರಿಗೆ ತೊಂದರೆ ನೀಡುತ್ತವೆ. ಕೆಟ್ಟ ಶಕ್ತಿಗಳು ವ್ಯಕ್ತಿಯ ಶರೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಟ್ಟ ಶಕ್ತಿಗಳ ಕೇಂದ್ರಗಳನ್ನು ಮಾಡಿಡುತ್ತವೆ ಮತ್ತು ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ. ಈ ಕೆಟ್ಟ ಶಕ್ತಿಗಳ ನಿವಾರಣೆ ಮಾಡುವ ಏಕೈಕ ಉಪಾಯವೆಂದರೆ ಸಾಧನೆಯನ್ನು ಮಾಡುವುದು, ಹಾಗೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು! ಆಧ್ಯಾತ್ಮಿಕ ಉಪಾಯಗಳಿಂದ ಕೆಟ್ಟ ಶಕ್ತಿಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ತೊಂದರೆಗಳೊಂದಿಗೆ ಹೋರಾಡಲು ಸಾಧನೆಯು ಖರ್ಚಾಗುವುದಿಲ್ಲ ಮತ್ತು ಸಾಧನೆಯು ಆಧ್ಯಾತ್ಮಿಕ ಉನ್ನತಿಗಾಗಿ ಉಪಯೋಗವಾಗುತ್ತದೆ.

ಆ.  ಉಪ್ಪು ನೀರಿನ ಉಪಾಯ ಮಾಡಲು ಆವಶ್ಯಕವಿರುವ ವಸ್ತುಗಳು

ಉಪ್ಪು ನೀರಿನ ಉಪಾಯವು ಒಂದು ಸುಲಭವಾದ ಆಧ್ಯಾತ್ಮಿಕ ಉಪಾಯವಾಗಿದೆ. ಉಪ್ಪು ನೀರಿನ ಉಪಾಯ ಮಾಡಲು ಅರ್ಧದಷ್ಟು ನೀರು ತುಂಬಿದ ಒಂದು ದೊಡ್ಡ ಬಕೆಟ್, ಮಗ್, ಕಲ್ಲುಪ್ಪು, ಕಾಲೊರೆಸಲು ಬಟ್ಟೆ, ಕಾಲೊರಸು (ಫೂಟ್ ಮಾಟ್) ಇಷ್ಟು ವಸ್ತುಗಳು ಬೇಕಾಗಿರುತ್ತವೆ. ಕಲ್ಲುಪ್ಪು ಇಲ್ಲದಿದ್ದರೆ ಕೆಲವೊಮ್ಮೆ ಹುಡಿ ಉಪ್ಪನ್ನು ಸಹ ಉಪಯೋಗಿಸಬಹುದು. ಆದರೆ ಅದರಿಂದ ೩೦% ದಷ್ಟು ಉಪಾಯಗಳ ಪರಿಣಾಮವು ಕಮ್ಮಿಯಾಗುತ್ತದೆ

ಇ. ಉಪ್ಪು ನೀರಿನ ಉಪಾಯವನ್ನು ಮಾಡುವುದು

ಮೊದಲಿಗೆ ಅರ್ಧ ಬಕೆಟ್ ನೀರನ್ನು ತೆಗೆದುಕೊಳ್ಳಬೇಕು. ಅದರಲ್ಲಿ ೨ ಚಮಚ ಕಲ್ಲುಪ್ಪನ್ನು ಹಾಕಬೇಕು. ಅನಂತರ ಈ ಉಪ್ಪು ನೀರಿನ ಉಪಾಯದಿಂದ ಶರೀರದಲ್ಲಿರುವ ಕೆಟ್ಟ ಶಕ್ತಿಗಳು ನಾಶವಾಗಲು ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಅನಂತರ ೧೦-೧೫ ನಿಮಿಷ ನೀರಿನಲ್ಲಿ ಕಾಲಿಟ್ಟು ನೇರವಾಗಿ ಕುಳಿತುಕೊಳ್ಳಬೇಕು ಎರಡೂ ಕಾಲುಗಳ ನಡುವೆ ೨-೩ ಸೆ.ಮಿ. ಅಂತರವನ್ನಿಟ್ಟುಕೊಳ್ಳಬೇಕು. ಅದರಿಂದ ಶರೀರದಲ್ಲಿರುವ ಹೆಚ್ಚು ಹೆಚ್ಚು ಕಪ್ಪು ಶಕ್ತಿಯು ಹೊರಬೀಳಲು ಸಹಾಯವಾಗುತ್ತದೆ. ಒಂದು ವೇಳೆ ಕಾಲುಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ಕಾಲುಗಳಿಂದ ಕೆಟ್ಟ ಶಕ್ತಿ ಹೊರಬೀಳಲು ಅಡಚಣೆಯಾಗುವ ಸಾಧ್ಯತೆಯಿದೆ. ನೀರಿನಲ್ಲಿ ಕೇವಲ ೧೦-೧೫ ನಿಮಿಷ ಕಾಲಿಟ್ಟುಕೊಂಡಿರಬೇಕು. ಏಕೆಂದರೆ ೧೫ ನಿಮಷಕ್ಕಿಂತ ಹೆಚ್ಚು ಹೊತ್ತು ಇಟ್ಟರೆ ಶರೀರದಿಂದ ಹೊರಬಿದ್ದ ಕೆಟ್ಟ ಶಕ್ತಿಯು ಪುನಃ ಶರೀರದೊಳಗೆ ಬರುವ ಸಾಧ್ಯತೆಯಿರುತ್ತದೆ. ನೀರಿನಲ್ಲಿ ಕಾಲಿಟ್ಟು ಕುಳಿತುಕೊಂಡಿರುವಾಗ ನಾಮಜಪಿಸಬೇಕು. ಯಾರು ಇತ್ತೀಚೆಗೆ ಸಾಧನೆಯನ್ನು ಪ್ರಾರಂಭಿಸಿದ್ದಾರೆಯೋ ಅವರು ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಮಾಡಬಹುದು. ಯಾರು ಅಧ್ಯಾತ್ಮ ಪ್ರಸಾರದ ಸೇವೆಯಲ್ಲಿ ಸಕ್ರಿಯರಾಗಿದ್ದಾರೆಯೋ ಅವರು ‘ಓಂ ಓಂ ನಮೋ ಭಗವತೇ ವಾಸುದೇವಾಯ ಓಂ ಓಂ’ ಎಂಬ ನಾಮಜಪವನ್ನು ಮಾಡಬೇಕು. ಉಪಾಯ ಪೂರ್ಣವಾದ ನಂತರ ಕಾಲುಗಳನ್ನು ಮೆಲ್ಲನೆ ಮೇಲೆತ್ತಿ ಇನ್ನೊಂದು ಮಗ್ ನಲ್ಲಿರುವ ಸ್ವಚ್ಛ ನೀರಿನಿಂದ ಅದೇ ಬಾಲ್ದಿಯಲ್ಲಿ ಕಾಲುಗಳನ್ನು ತೊಳೆದುಕೊಳ್ಳಬೇಕು ನಂತರ ಕಾಲನ್ನು ಬಟ್ಟೆಯಿಂದ ಸ್ವಚ್ಛವಾಗಿ ಒರೆಸಬೇಕು. ಅನಂತರ ಭಗವಂತನ ಕೃಪೆಯಿಂದಲೇ ನಾವು ಉಪಾಯವನ್ನು ಮಾಡಲು ಸಾಧ್ಯವಾಯಿತು ಮತ್ತು ಅವರು ನಮ್ಮ ತೊಂದರೆಗಳನ್ನು ದೂರಗೊಳಿಸಿ ನಮ್ಮ ಸುತ್ತಲೂ ಚೈತನ್ಯದ ಸಂರಕ್ಷಕ ಕವಚವನ್ನು ನಿರ್ಮಾಣ ಮಾಡಿದನು, ಹೊಸ ಸಕಾರಾತ್ಮಕ ಶಕ್ತಿಯನ್ನು ನೀಡಿದನು ಎಂಬ ಬಗ್ಗೆ ಭಗವಂತನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಕೊನೆಗೆ ಆ ಉಪ್ಪು ನೀರನ್ನು ಶೌಚಾಲಯದಲ್ಲಿ ಎಸೆದು ಬಕೆಟ್ಅನ್ನು ಸ್ವಚ್ಛವಾದ ನೀರಿನಿಂದ ತೊಳೆದಿಡಬೇಕು. ಉಪ್ಪು ನೀರಿನ ಉಪಾಯವನ್ನು ಮಾಡುವಾಗ ಜಪ ಮತ್ತು ಪ್ರಾರ್ಥನೆಯನ್ನು ಮಾಡುವುದರಿಂದ ಕಪ್ಪು ಶಕ್ತಿಯು ವಿಘಟಿತವಾಗಲು ಪ್ರಾರಂಭವಾಗುತ್ತದೆ. ಉಪ್ಪು ನೀರಿನಲ್ಲಿ ಕಪ್ಪು ಶಕ್ತಿಯನ್ನು ಎಳೆದು ಹೊರ ತೆಗೆಯುವ ಕ್ಷಮತೆಯಿರುತ್ತದೆ.

ಈ. ಉಪಾಯಗಳು ಪರಿಣಾಮಕಾರಿಯಾಗಿವೆ ಎಂದು ಗುರುತಿಸುವುದರ ನಿಷ್ಕರ್ಷಗಳು

ಆಕಳಿಕೆ ಬರುವುದು, ತೇಗು ಬರುವುದು, ಕಿವಿ ಮತ್ತು ಕಣ್ಣುಗಳು ಬಿಸಿಯಾಗುವುದು ಅಥವಾ ಅದರಿಂದ ಉಷ್ಣ ಹವೆಯು (ಬಿಸಿಗಾಳಿ) ಬರುವುದು, ನೀರಿನಲ್ಲಿ ಜಡತ್ವದ ಅರಿವಾಗುವುದು, ಕಾಲುಗಳ ಬಾವು ಕಮ್ಮಿಯಾಗುವುದು, ಕೆಲವೊಮ್ಮೆ ನೀರಿನ ಬಣ್ಣವು ಬದಲಾಗಿ ಅದು ಕಪ್ಪಾಗುವುದು, ನೀರಿಗೆ ದುರ್ವಾಸನೆ ಬರುವುದು ಅಥವಾ ನೀರಿನ ತಾಪಮಾನ ಹೆಚ್ಚಾಗುವುದು ಇತ್ಯಾದಿ ಪರಿಣಾಮಗಳು ಕಂಡು ಬರುತ್ತವೆ.

ಉ. ಉಪ್ಪು ನೀರಿನ ಉಪಾಯವನ್ನು ದಿನದಲ್ಲಿ ಎಷ್ಟು ಸಲ ಮಾಡಬೇಕು?

ಆಧ್ಯಾತ್ಮಿಕ ತೊಂದರೆಗಳ ತೀವ್ರತೆ ಹೆಚ್ಚು ಇದ್ದಲ್ಲಿ ದಿನದಲ್ಲಿ ೨-೩ ಸಲ ೨-೩ ಗಂಟೆಗಳ ಅಂತರದಲ್ಲಿ ಮಾಡಬಹುದು ಇಲ್ಲದಿದ್ದರೆ ದಿನದಲ್ಲಿ ಒಂದು ಸಲವಾದರೂ ಈ ಉಪಾಯ ಆಗುವಂತೆ ನೋಡಿಕೊಳ್ಳಬೇಕು.

ಊ. ಸ್ನಾನ ಮಾಡುವಾಗ ಆರಂಭದಲ್ಲಿ ಕಲ್ಲುಪ್ಪಿನ ನೀರನ್ನು ಶರೀರದ ಮೇಲೆ ಹಾಕಿಕೊಳ್ಳುವುದು

ನಾವು ಸ್ನಾನದ ಸಮಯದಲ್ಲಿಯೂ ಉಪ್ಪು ನೀರಿನ ಉಪಾಯವನ್ನು ಮಾಡಬಹುದು. ನಮ್ಮಲ್ಲಿ ೨ ಬಕೆಟ್ಗಳಿದ್ದಲ್ಲಿ ಒಂದು ಬಕೆಟ್ಅಲ್ಲಿ ನಿತ್ಯದಂತೆ ಸ್ನಾನಕ್ಕಾಗಿ ಬಿಸಿ/ ತಣ್ಣಿರು ತೆಗೆದುಕೊಳ್ಳಬೇಕು. ಇನ್ನೊಂದು ಬಾಲ್ದಿಯಲ್ಲಿ ೩-೪ ತಂಬಿಗೆ ಬಿಸಿ/ ತಣ್ಣೀರು ತೆಗೆದುಕೊಂಡು ಅದರಲ್ಲಿ ೨ ಚಮಚ ಕಲ್ಲುಪ್ಪನ್ನು ಹಾಕಬೇಕು. ಸ್ನಾನವನ್ನು ಪ್ರಾರಂಭಿಸವಾಗ ಮೊಟ್ಟಮೊದಲಿಗೆ ಉಪ್ಪುನ್ನು ಹಾಕಿರುವ ನೀರನ್ನು ಮೈಮೇಲೆ ಹಾಕಿಕೊಳ್ಳಬೇಕು. ಆ ಸಮಯದಲ್ಲಿ ಉಪಾಸ್ಯ ದೇವತೆಯಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಹೇ ಭಗವಂತಾ, ಈ ಕಲ್ಲುಪ್ಪಿನ ನೀರಿನ ಮೂಲಕ ನನ್ನ ಸ್ಥೂಲ ಮತ್ತು ಸೂಕ್ಷ್ಮದ ದೇಹದ ಮೇಲೆ ಬಂದಿರುವ ಕಪ್ಪು ಶಕ್ತಿಯ ಆವರಣವು ನಾಶವಾಗಲಿ, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ. ಅನಂತರ ಕಲ್ಲುಪ್ಪಿನ ನೀರನ್ನು ಮೈಮೇಲೆ ಹಾಕಿಕೊಳ್ಳಬೇಕು. ಅನಂತರ ನಿತ್ಯದಂತೆ ಬಿಸಿ / ತಣ್ಣೀರಿನಿಂದ ಸ್ನಾನ ಮಾಡಬೇಕು. ಉಪ್ಪು ನೀರಿನ ಉಪಾಯವನ್ನು ಮಾಡಿದ ನಂತರ ಅನೇಕ ಜನರು ಆಯಾಸ ದೂರವಾದ ಬಗ್ಗೆ, ದೇಹದ ಕಪ್ಪು ಆವರಣ ದೂರವಾದ ಬಗ್ಗೆ, ಉತ್ಸಾಹವೆನಿಸುವುದು ಮುಂತಾದ ಅನುಭೂತಿಗಳನ್ನು ಪಡೆದುಕೊಂಡಿದ್ದಾರೆ.

ಎ. ವಿಜ್ಞಾನದ ಪರೀಕ್ಷೆಯಲ್ಲಿಯೂ ಉಪ್ಪು ನೀರಿನ ಉಪಾಯವು ಪ್ರಭಾವಶಾಲಿಯಾಗಿದೆ ಎಂದು ದೃಢಪಡುವುದು

ಈ ಉಪಚಾರ ಪದ್ಧತಿಯ ವಿಷಯದಲ್ಲಿ ‘ಯುನಿವರ್ಸಲ್ ಔರಾ ಸ್ಕಾನರ್’ ಅಂದರೆ ‘ಯು.ಎ.ಎಸ್.’ ಎಂಬ ಉಪಕರಣದ ಮೂಲಕ ಸನಾತನದ ಆಶ್ರಮದಲ್ಲಿ ಸಂಶೋಧನೆಗಳನ್ನು ಮಾಡಲಾಯಿತು. ಈ ಸಂಶೋಧನೆಯಲ್ಲಿ ಉಪ್ಪು ನೀರಿನ ಉಪಾಯವನ್ನು ಮಾಡಿದ ನಂತರ ವ್ಯಕ್ತಿಯ ಶರೀರದಲ್ಲಿರುವ ನಕಾರಾತ್ಮಕತೆಯನ್ನು ತೋರಿಸುವ ‘ಇನ್‌ಫ್ರಾರೆಡ್ ಎನರ್ಜಿ’ ನೋಂದಣಿ ೧೮೦ ರಿಂದ ಶೂನ್ಯಕ್ಕೆ (೦) ಕ್ಕೆ ಬಂದು ನಿಂತಿತು. ಇದು ಅತ್ಯಂತ ದೊಡ್ಡ ಸಕಾರಾತ್ಮಕ ಬದಲಾವಣೆಯಾಗಿದೆ. ಅದರ ಜೊತೆಗೆ ವ್ಯಕ್ತಿಯ ಒಟ್ಟು ಪ್ರಭಾಮಂಡಲ ಅಂದರೆ ‘ಔರಾ’ ೧.೪೧ ನಿಂದ ೨.೨೦ ಮೀಟರ ತನಕ ಹೆಚ್ಚಾಯಿತು. ಇದರಿಂದ ವೈಜ್ಞಾನಿಕ ದೃಷ್ಟಿಯಿಂದಲೂ ಉಪ್ಪು ನೀರಿನ ಉಪಾಯವು ವ್ಯಕ್ತಿಯಲ್ಲಿನ ನಕಾರಾತ್ಮಕತೆಯನ್ನು ಕಡಿಮೆಗೊಳಿಸುತ್ತದೆ ಎಂದು ಕಂಡುಬರುತ್ತದೆ. ನಮ್ಮ ಶಾಸ್ತ್ರದಲ್ಲಿಯೂ ಸಮುದ್ರಸ್ನಾನದ ಮೂಲಕ ಒಂದು ರೀತಿಯಲ್ಲಿ ಉಪ್ಪು ನೀರಿನ ಸ್ನಾನದ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಇದರಿಂದ ಹಿಂದೂಗಳ ಧರ್ಮಶಾಸ್ತ್ರವು ವಿಜ್ಞಾನದ ಪರೀಕ್ಷೆಯಲ್ಲಿಯೂ ೧೦೦% ಯಶಸ್ವಿಯಾಗುತ್ತದೆ ಎಂದು ಕಂಡುಬರುತ್ತದೆ.

Leave a Comment