ಸಾಧನಾವೃದ್ಧಿ ಸತ್ಸಂಗ (28)

ಕಳೆದ ಲೇಖನದಲ್ಲಿ ನಾವು ಅಪರಾಧಿಭಾವದ ಬಗ್ಗೆ ತಿಳಿದುಕೊಂಡಿದ್ದೆವು ಮತ್ತು ಅದಕ್ಕಾಗಿ ನಾವು ಪ್ರತಿದಿನ ಭಗವಂತನಲ್ಲಿ ಕ್ಷಮಾಯಾಚನೆ ಮಾಡುವಂತೆ ನಿರ್ಧರಿಸಿದ್ದೆವು ಹಾಗೂ ನಮ್ಮಿಂದ ತಪ್ಪುಗಳಾದರೆ ನಮ್ಮ ಸಂಪರ್ಕದಲ್ಲಿ ಬರುವ ವ್ಯಕ್ತಿಗಳಲ್ಲಿ ಪ್ರತ್ಯಕ್ಷ ಕ್ಷಮಾಯಾಚನೆ ಮಾಡುವಂತೆಯೂ ನಿರ್ಧರಿಸಿದ್ದೆವು. ಅದಕ್ಕನುಸಾರವಾಗಿ ತಮ್ಮಿಂದ ಪ್ರಯತ್ನಗಳಾಗಿದೆಯೇ? ನಾವು ನಿರ್ಮಲ ಮನಸ್ಸಿನಿಂದ, ಪ್ರತ್ಯಕ್ಷ ಗುರುತತ್ತ್ವಕ್ಕೇ ನಮ್ಮ ಸಾಧನೆಯ ಪ್ರಯತ್ನಗಳನ್ನು ಹೇಳುತ್ತಿದ್ದೇವೆ ಎಂಬ ಭಾವವನ್ನು ಇಟ್ಟುಕೊಳ್ಳೋಣ.

ಅ. ಸೇವೆ

ಇಲ್ಲಿಯವರೆಗೆ ನಾವು 27 ಸಾಧನಾವೃದ್ಧಿ ಸತ್ಸಂಗಗಳನ್ನು ನೋಡಿದ್ದೇವೆ. ಈ ಸತ್ಸಂಗಗಳ ಲೇಖನಲ್ಲಿ ನಾವು ಪ್ರಾರಂಭದಲ್ಲಿ ಸತ್ಸೇವೆಯ ಮಹತ್ವವನ್ನು ತಿಳಿದುಕೊಂಡೆವು. ಸಾಧನೆಯಲ್ಲಿ ಎರಡು ಅಂಗಗಳಿವೆ – ವ್ಯಷ್ಟಿ ಮತ್ತು ಸಮಷ್ಟಿ ! ಸಾಧನೆಯು ಪೂರ್ಣತ್ವಕ್ಕೆ ತಲುಪಲು ವ್ಯಷ್ಟಿ ಮತ್ತು ಸಮಷ್ಟಿಗಳ ಹೊಂದಾಣಿಕೆ ಆವಶ್ಯಕವಿರುತ್ತದೆ. ಅಧ್ಯಾತ್ಮಪ್ರಚಾರವು ಸರ್ವೋಚ್ಚ ಸಮಷ್ಟಿ ಸಾಧನೆಯಾಗಿದೆ. ಅಧ್ಯಾತ್ಮಪ್ರಚಾರ ಮಾಡುವುದಕ್ಕೆ ವಿವಿಧ ಮಾಧ್ಯಮಗಳಿವೆ. ಅಧ್ಯಾತ್ಮದಲ್ಲಿ ’ಎಷ್ಟು ವ್ಯಕ್ತಿಗಳೋ ಅಷ್ಟು ಪ್ರಕ್ರುತಿಗಳು ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತಕ್ಕನುಸಾರ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅಭಿರುಚಿ ಹಾಗೂ ಕ್ಷಮತೆಗನುಸಾರ ಸೇವೆ ಮಾಡಿದರೆ ಅದರಿಂದ ಆ ವ್ಯಕ್ತಿಯ ಪ್ರಗತಿಯು ಶೀಘ್ರ ಗತಿಯಲ್ಲಿ ಆಗುತ್ತದೆ. ತಮ್ಮಲ್ಲಿ ಕೆಲವರು ಸತ್ಸೇವೆಯನ್ನು ಮಾಡಿ ಅದರಿಂದ ಸಿಗುವ ಆನಂದವನ್ನು ಅನುಭವಿಸಿರಬಹುದು.

ಆ. ಆಧ್ಯಾತ್ಮಿಕ ಉಪಾಯಗಳು

ಸತ್ಸೇವೆಯ ಜೊತೆಗೆ ನಾವು ’ಆಧ್ಯಾತ್ಮಿಕ ತೊಂದರೆಗಳು ಮತ್ತು ಅವುಗಳನ್ನು ದೂರಗೊಳಿಸುವುದಕ್ಕಾಗಿ ಆವಶ್ಯಕ ಆಧ್ಯಾತ್ಮಿಕ ಉಪಾಯಗಳು’ ಎಂಬ ಮಹತ್ವದ ವಿಷಯದ ಬಗ್ಗೆ ತಿಳಿದುಕೊಂಡಿದ್ದೇವೆ. ಕಲಿಯುಗದಲ್ಲಿ ಕೆಲವರು ಅನಿಷ್ಟ ಅಥವಾ ದುಷ್ಟ ಅಥವಾ ನಕಾರಾತ್ಮಕ ಶಕ್ತಿಗಳ ಪ್ರಭಾವಕ್ಕೊಳಗಾಗಿರುತ್ತಾರೆ; ಆದರೆ ಅವರಿಗೆ ಈ ವಿಷಯದ ಜ್ಞಾನವಿರುವುದಿಲ್ಲ. ಆದ ಕಾರಣ ಅವರ ಆಧ್ಯಾತ್ಮಿಕ ತೊಂದರೆಯು ದೂರವಾಗುವುದಿಲ್ಲ. ಆಧ್ಯಾತ್ಮಿಕ ತೊಂದರೆಗಳಿದ್ದರೆ ಅದಕ್ಕೆ ಆಧ್ಯಾತ್ಮಿಕ ಉಪಾಯಗಳನ್ನೇ ಮಾಡುವುದು ಆವಶ್ಯಕವಿರುತ್ತದೆ. ನಾವು ಸತ್ಸಂಗಗಳಲ್ಲಿ ಬೇರೆ ಬೇರೆ ಆಧ್ಯಾತ್ಮಿಕ ಉಪಾಯಗಳು ಯಾವುವು, ಅವುಗಳನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಂಡಿದ್ದೇವೆ. ಸಾತ್ತ್ವಿಕ ಕರ್ಪೂರ-ಸುಗಂಧ ದ್ರವ್ಯದ ಉಪಾಯವನ್ನು ಹೇಗೆ ಮಾಡಬೇಕು, ಸಾತ್ತ್ವಿಕ ವಸ್ತುಗಳ ಸಹಾಯದಿಂದ ತನ್ನ ಮೇಲೆ ಬಂದಿರುವ ಆವರಣವನ್ನು ಹೇಗೆ ತೆಗೆಯಬೇಕು, ಉಪ್ಪು ನೀರಿನ ಉಪಾಯವನ್ನು ಹೇಗೆ ಮಾಡಬೇಕು ಎಂಬುದನ್ನೂ ತಿಳಿದುಕೊಂಡಿದ್ದೇವೆ. ದೃಷ್ಟಿ ತೆಗೆಯುವುದರ ಮಹತ್ವ, ಮಾನಸ ದೃಷ್ಟಿಯನ್ನು ತೆಗೆಯುವುದು ಹೇಗೆ ಇದನ್ನೂ ನೋಡಿದ್ದೇವೆ. ಆಧ್ಯಾತ್ಮಿಕ ಉಪಾಯಗಳಿಂದಾಗಿ ಹಲವರ ಕಷ್ಟಗಳು ದೂರವಾಗಿ ಅವರು ಹೆಚ್ಚಿನ ಆನಂದವನ್ನು ಅನುಭವಿಸುತ್ತಿದ್ದಾರೆ.

ಇ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ

ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಬಗ್ಗೆಯೂ ವಿವರವಾಗಿ ತಿಳಿದುಕೊಂಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವಭಾವದೋಷಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಒಂದಲ್ಲ ಒಂದು ಸ್ವರೂಪದ ಅಹಂಕಾರವಿರುತ್ತದೆ. ನಾವು ಮೋಕ್ಷಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಸ್ವಭಾವದೋಷ ನಿರ್ಮೂಲನೆ ಹಾಗೂ ಅಹಂನಿರ್ಮೂಲನೆಗಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಸ್ವಭಾವದೋಷಗಳು ಹಾಗೂ ಅಹಂಗಳಿಂದಾಗಿ ನಮ್ಮಿಂದ ಬಹಳಷ್ಟು ತಪ್ಪುಗಳಾಗುತ್ತವೆ ಮತ್ತು ನಾವು ಮಾಡುತ್ತಿರುವ ಸಾಧನೆಯು ಆ ತಪ್ಪುಗಳಿಂದಾಗುವ ಪಾಪಗಳ ಪರಿಮಾರ್ಜನೆಯಲ್ಲಿಯೇ ವೆಚ್ಚವಾಗುತ್ತಿರುತ್ತದೆ. ಈ ಕಾರಣದಿಂದಾಗಿ ಹಲವು ವರ್ಷಗಳ ಕಾಲ ಉಪಾಸನೆ ಮಾಡಿಯೂ ನಿರೀಕ್ಷಿಸಿದಷ್ಟು ಆಧ್ಯಾತ್ಮಿಕ ಉನ್ನತಿ ಆಗುವುದಿಲ್ಲ. ಬೆನ್ನಿನ ಮೇಲೆ ಸ್ವಭಾವದೋಷಗಳ ಮೂಟೆ ಇರುವಾಗ ನಾವು ಎಷ್ಟೇ ನಾಮಜಪ ಮಾಡಿದರೂ ಭಗವಂತನನ್ನು ಸೇರಲು ಆಗುವುದಿಲ್ಲ. ಆದ ಕಾರಣ ಪ್ರಸ್ತುತ, ನಾಮಜಪಕ್ಕಿಂತ ಸ್ವಭಾವದೋಷ ನಿರ್ಮೂಲನೆಗೇ ಹೆಚ್ಚಿನ ಮಹತ್ವವಿದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯಯಲ್ಲಿ ನಾವು ಕೊಡುವ ಸ್ವಯಂಸೂಚನೆಗಳು ಅಂತರ್ಮನಸ್ಸಿಗೆ ಮುಟ್ಟುತ್ತವೆ ಮತ್ತು ಅದರಿಂದ ಅಂತರ್ಮನಸ್ಸಿನಲ್ಲಿರುವ ಜನ್ಮ-ಜನ್ಮಗಳ ಸ್ವಭಾವದೋಷಗಳು ಕಡಿಮೆಯಾಗುತ್ತವೆ. ಆದ್ದರಿಂದ ಪ್ರತಿದಿನ ಸ್ವಯಂಸೂಚನಾ ಸತ್ರಗಳನ್ನು ಮಾಡುವುದು ಮತ್ತು ಸಾರಣಿಯನ್ನು ಬರೆಯುವುದು ಮಹತ್ವದ್ದಾಗಿದೆ. ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯಿಂದಾಗಿ ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿದೆ ಮತ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲೂ ಸಾಧ್ಯವಾಗುತ್ತಿದೆ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ನಾವು ಈ ಪ್ರಕ್ರಿಯೆಯನ್ನು ನಿರಂತರ ಮುಂದುವರಿಸಬೇಕು.

ಈ. ಭಾವಜಾಗೃತಿಗಾಗಿ ಪ್ರಯತ್ನಗಳು

ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ಎಂಬುದನ್ನೂ ನಾವು ಸತ್ಸಂಗಗಳಲ್ಲಿ ತಿಳಿದುಕೊಂಡಿದ್ದೇವೆ. ಅಧ್ಯಾತ್ಮದಲ್ಲಿ ಭಾವಕ್ಕೆ ಮಹತ್ವವಿದೆ. “ಭಾವವಿದ್ದಲ್ಲಿ ದೇವರಿದ್ದಾರೆ” ಎಂದು ಹೇಳಲಾಗಿದೆ. ನಮ್ಮಲ್ಲಿ ಪ್ರತ್ಯೊಬ್ಬರಲ್ಲಿಯೂ ಈಶ್ವರನ ಬಗ್ಗೆ ಅಥವಾ ಭಗವಂತನ ಬಗ್ಗೆ ಒಂದಲ್ಲ ಒಂದು ಸ್ವರೂಪದಲ್ಲಿ ಭಾವವಿದೆ. ಆದ್ದರಿಂದಲೇ ನಮಗೆ ಅಧ್ಯಾತ್ಮದಲ್ಲಿ ಆಸಕ್ತಿ ಉಂಟಾಗಿ ನಾವು ಸತ್ಸಂಗಗಳಿಗೆ ಬರುತ್ತೇವೆ ಹಾಗೂ ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸುವುದು ಮಹತ್ವದ್ದಾಗಿದೆ. ಮಾನಸಪೂಜೆ ಮಾಡುವುದು, ಕೃತಿಗೆ ಭಾವವನ್ನು ಜೋಡಿಸುವುದು, ಪ್ರಾರ್ಥನೆ ಮಾಡುವುದು, ಕೃತಜ್ಞತೆ ವ್ಯಕ್ತ ಪಡಿಸುವುದು, ಆತ್ಮನಿವೇದನೆ ಮಾಡುವುದು, ಭಗವಂತನ ಚರಣಗಳಲ್ಲಿ ಶರಣಾಗುವುದು, ನಮ್ಮಿಂದ ತಿಳಿದೋ-ತಿಳಿಯದೆಯೋ ಆದ ತಪ್ಪುಗಳಿಗಾಗಿ ಭಗವಂತನಲ್ಲಿ ಕ್ಷಮೆ ಯಾಚಿಸುವುದು ಇವೇ ಮುಂತಾದವು ಭಾವಜಾಗೃತಿಯ ವಿವಿಧ ಪ್ರಯತ್ನಗಳಾಗಿವೆ. ಭಾವಜಾಗೃತಿಯ ಪ್ರಯತ್ನಗಳಿಂದಾಗಿ ಈಶ್ವರನ ಅಸ್ತಿತ್ವದ ಅರಿವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ಇದುವರೆಗೆ ನಡೆದ ಸತ್ಸಂಗಗಳಲ್ಲಿ ನಾವು ನಮ್ಮ ಸಾಧನೆಯ ಅಡಿಪಾಯ ನಿರ್ಮಾಣವಾಗುವ ದೃಷ್ಟಿಯಿಂದ ಪ್ರಯತ್ನ ಮಾಡಿದೆವು. ಅಧ್ಯಾತ್ಮವನ್ನು ಆಚರಣೆಯಲ್ಲಿಳಿಸುವ ದೃಷ್ಟಿಯಿಂದ ನಾವು ಇನ್ನೂ ಬೇರೆ ಬೇರೆ ಪ್ರಯತ್ನಗಳನ್ನು ಕಲಿಯಬೇಕಾಗಿದೆ. ಮುಂದಿನ ಸತ್ಸಂಗಗಳಲ್ಲಿ ನಾವು ಅವುಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಸಾಧನೆಯ ಪ್ರಯತ್ನಗಳನ್ನು ಮಾಡುವಾಗ ತಮಗೇನೆನಿಸಿತು ? ತನ್ನಲ್ಲಿ ಅಥವಾ ಪರಿವಾರದಲ್ಲಿ ಯಾವ ಬದಲಾವಣೆಗಳು ಕಂಡು ಬಂದವು ? ಯಾವ ಪ್ರಯತ್ನಗಳನ್ನು ಮಾಡುವಾಗ ಕಠಿಣವೆನಿಸುತು? ಈಗ ನಾವೆಲ್ಲರೂ ಒಂದು ಪರಿವಾರದವರಂತಾಗಿದ್ದೇವೆ. ಆದ್ದರಿಂದ ಮನಸ್ಸಿನಲ್ಲಿ ಯಾವುದೇ ವಿಧದ ಸಂಕೋಚವನ್ನು ಇಟ್ಟುಕೊಳ್ಳದೇ ಇದರಲ್ಲಿ ಭಾಗವಹಿಸೋಣ.

ಮುಕ್ತಾಯ

ನಾವು ಇಲ್ಲಿಯೇ ನಿಲ್ಲಬಾರದು. ಸಾಧನೆಯಲ್ಲಿ ಕಲಿಯುವಂತಹದ್ದು ಬಹಳಷ್ಟು ಇದೆ. ನಾವು ಸಾಧನೆಯಲ್ಲಿನ ಹಾಗೂ ಕಲಿಯುವಲ್ಲಿನ ಆನಂದವನ್ನು ಪಡೆಯಬೇಕಾಗಿದೆ. ಸಾಧನೆಯ ಈ ನಿರಂತರ ಪ್ರಯತ್ನಗಳಿಂದಲೇ ನಮಗೆ ಮೋಕ್ಷಪ್ರಾಪ್ತಿ ಆಗಲಿದೆ. ನಿಮ್ಮ ಆಧ್ಯಾತ್ಮಿಕ ಉನ್ನತಿ ಆಗಲಿದೆ ಎಂಬುದರ ಬಗ್ಗೆ ಆಶ್ವಾಸನೆಯಿರಲಿ. 2 + 2 = 4 ಈ ನಿಯಮವಿರುವಂತೆಯೇ ಸಾಧನೆಯ ಪ್ರಯತ್ನಗಳನ್ನು ಮನಃಪೂರ್ವಕವಾಗಿ ಮಾಡಿದರೆ ನಮಗೆ ಈಶ್ವರಪ್ರಾಪ್ತಿ ಆಗಿಯೇ ಆಗುವುದು ಎಂಬ ನಿಯಮವಿದೆ ಮತ್ತು ಅದರಂತೆ ನಮಗೆ ಆನಂದ ಸಿಕ್ಕಿಯೇ ಸಿಕ್ಕುವುದು.

ಕಾಲಗತಿಯನ್ನು ಗಮನಿಸಿಕೊಂಡು ನಾವು ನಮ್ಮ ಸಾಧನೆಯ ಪ್ರಯತ್ನಗಳ ವೇಗವನ್ನೂ ಹೆಚ್ಚಿಸಬೇಕಾಗಿದೆ. ನಾವೆಲ್ಲರೂ ಪ್ರಸ್ತುತ ಬಹಳ ಕಷ್ಟದ ಕಾಲವನ್ನು ಅನುಭವಿಸುತ್ತಿದ್ದೇವೆ. ಮೇಲ್ನೋಟಕ್ಕೆ ಈ ಆಪತ್ಕಾಲಕ್ಕೆ ಭೌಗೋಳಿಕ, ಮಾನಸಿಕ ಹಾಗೂ ಆರ್ಥಿಕ ಸ್ತರಗಳಲ್ಲಿ ಕೆಲವು ಕಾರಣಗಳಿವೆ ಎಂದೆನಿಸಿದರೂ ಇದು ಹಾಗಲ್ಲ. ಈ ಆಪತ್ಕಾಲದಲ್ಲಿ ಎಲ್ಲರ ಮೇಲೆಯೂ ಶಾರೀರಿಕ, ಮಾನಸಿಕ ಮತ್ತು ಆರ್ಥಿಕ ಸ್ತರಗಳಲ್ಲಿ ಪರಿಣಾಮಗಳಾಗುತ್ತಿವೆ. ಈ ಪರಿಸ್ಥಿತಿಯಲ್ಲಿಯೂ ಸ್ಥಿರ ಹಾಗೂ ಆನಂದಿತರಾಗಿರುವುದಕ್ಕೆ ಬೇಕಾಗಿರುವ ಬಲವು ನಮಗೆ ಸಾಧನೆಯಿಂದ ಸಿಗುತ್ತದೆ. ತಮ್ಮಲ್ಲಿ ಕೆಲವರಿಗೆ ಇದರ ಅನುಭವ ಬಂದಿರಬಹುದು. ನಾವು ಸಾಧನೆ ಮಾಡಿ ಭಗವಂತನ ಭಕ್ತರಾದರೆ ಭಗವಂತನು ಖಂಡಿತ ನಮ್ಮನ್ನು ಈ ಸಂಕಟಕಾಲದಿಂದ ಪಾರು ಮಾಡುವನು. ಸಾಕ್ಷಾತ್ ಶ್ರೀಕೃಷ್ಣನೇ ’ನ ಮೇ ಭಕ್ತಃ ಪ್ರಣಶ್ಯತಿ’ ಅಂದರೆ ನನ್ನ ಭಕ್ತ ಎಂದಿಗೂ ನಾಶವಾಗುವುದಿಲ್ಲ ಎಂದು ವಚನ ಕೊಟ್ಟಿದ್ದಾನೆ. ಹೀಗಾಗಿ ನಾವೆಲ್ಲರೂ ಭಗವಂತನಲ್ಲಿ ಸಂಪೂರ್ಣ ಶ್ರದ್ಧೆಯನ್ನಿದೋಣ. ನಾವೆಲ್ಲರೂ ನಮ್ಮ ಎಲ್ಲ ಚಿಂತೆಗಳನ್ನೂ, ಸಮಸ್ಯೆಗಳನ್ನೂ ಭಗವಂತನ ಚರಣಗಳಲ್ಲಿ ಅರ್ಪಿಸಿ ಇದೇ ಕ್ಷಣದಿಂದ ಇನ್ನೂ ಹೆಚ್ಚಿನ ಸಮರ್ಪಣಾ ಭಾವದಿಂದ ಸಾಧನೆ ಮಾಡುವುದಾಗಿ ನಿರ್ಧರಿಸೋಣ.

ಮುಂಬರುವ ಸಮರ್ಪಣ ಸತ್ಸಂಗಗಳಲ್ಲಿ ನಾವು ಮುಂದಿನ ಹಂತದ ಸಾಧನೆಯನ್ನು ಕಲಿಯುವವರಿದ್ದೇವೆ. ಅಲ್ಲದೇ ಸಾಧನೆಯ ಮುಂದಿನ ಅಂಗಗಳಾಗಿರುವ ತ್ಯಾಗ, ಪ್ರೀತಿ ಹಾಗೂ ಅಹಂ ನಿರ್ಮೂಲನೆ ಇವುಗಳ ಬಗ್ಗೆಯೂ ತಿಳಿದುಕೊಳ್ಳುವವರಿದ್ದೇವೆ. ಮುಂದಿನ ಹಂತದ ಸತ್ಸಂಗಗಳಲ್ಲಿ ನಾವು ಕೌಶಲ್ಯ ಅಭಿವೃದ್ಧಿಯ ದೃಷ್ಟಿಯಿಂದಲೂ ಕೆಲವು ವಿಷಯಗಳನ್ನು ತೆಗೆದುಕೊಳ್ಳುವವರಿದ್ದೇವೆ. ವ್ಯಾವಹಾರಿಕ ಜೀವನದಲ್ಲಿ ನಾವು ಹೇಗೆ ಮೊದಲನೆಯ ತರಗತಿಯಿಂದ ಎರಡನೆಯ ತರಗತಿಗೆ, ಎರಡನೆಯ ತರಗತಿಯಿಂದ ಮೂರನೆಯ ತರಗತಿಗೆ ಹೀಗೆ ಮುಂದೆ ಮುಂದೆ ಹೋಗುವುದಿರುತ್ತದೆಯೋ ಅಧ್ಯಾತ್ಮದಲ್ಲಿಯೂ ಹಾಗೆಯೇ ಇರುತ್ತದೆ. ಮುಂದಿನ ಸತ್ಸಂಗದಿಂದ ನಾವು ಹೊಸ ಉತ್ಸಾಹ, ಹುಮ್ಮಸ್ಸಿನಿಂದ ಮುಂದಿನ ಹಂತದ ಸಾಧನೆಯನ್ನು ಕಲಿಯುವವರಿದ್ದೇವೆ.

Leave a Comment