ಸಾಧನಾವೃದ್ಧಿ ಸತ್ಸಂಗ (27)

ಅಪರಾಧಿಭಾವ

ದಿನನಿತ್ಯದ ಜೀವನದಲ್ಲಿ ನಮಗೆ ಪ್ರತಿಕ್ಷಣ ನಮ್ಮ ಅಸ್ತಿತ್ವದ ಅರಿವಿರುತ್ತದೆ ಮತ್ತು ಅದರಂತೆಯೇ ನಮ್ಮಿಂದ ಎಲ್ಲ ಸಂಗತಿಗಳೂ ನಡೆಯುತ್ತಿರುತ್ತವೆ. ತನ್ನ ಅಸ್ತಿತ್ವದ ಬದಲು ದೇವರ ಅಸ್ತಿತ್ವದ ಅರಿವು ಇರುವುದೆಂದರೆನೇ ಭಾವ ! ನಾವು ಹಿಂದಿನ ಕೆಲವು ಲೇಖನಗಳಲ್ಲಿ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು ಎಂಬುದನ್ನು ತೆಳಿದುಕೊಂಡಿದ್ದೆವು. ‘ಯಾವುದಾದರೊಂದು ಸ್ವರೂಪದಲ್ಲಿ ಈಶ್ವರನ ಅಥವಾ ಗುರುಗಳ ಅಸ್ತಿತ್ವದ ತೀವ್ರ ಅರಿವು ಇರುವುದು ಮತ್ತು ಆ ಅರಿವಿನೊಂದಿಗೆ ಕೃತಿ ಮಾಡುವುದು ಮತ್ತು ಆ ಅರಿವಿನ ಹಿನ್ನೆಲೆಯಲ್ಲಿ ಜೀವನವನ್ನು ಅನುಭವಿಸುವುದು’ ಎಂಬುದನ್ನು ’ಈಶ್ವರ ಅಥವಾ ಗುರುಗಳ ಬಗ್ಗೆ ಭಾವವಿರುವುದು’ ಅಥವಾ ’ಆವರೊಂದಿಗೆ ಅನುಸಂಧಾನವಿರುವುದು’ ಎನ್ನುತ್ತಾರೆ. ದೇವರ ಬಗ್ಗೆ ಬೇರೆಬೇರೆ ಭಾವಗಳನ್ನು ಇಟ್ಟುಕೊಳ್ಳಬಹುದು, ಉದಾಹರಣೆಗೆ, ಯಶೋದಾಮಾತೆಯ ವಾತ್ಸಲ್ಯಭಾವ, ಹನುಮಂತನ ದಾಸ್ಯಭಾವ, ಅರ್ಜುನನ ಸಖ್ಯಭಾವ! ಇದಕ್ಕೂ ಹಿಂದಿನ ಲೇಖನದಲ್ಲಿ ನಾವು ಶರಣಾಗತಭಾವದ ಬಗ್ಗೆ ತಿಳಿದುಕೊಂಡಿದ್ದೆವು. ಇಲ್ಲಿ ನಾವು ಅಪರಾಧಿಭಾವದ ಬಗ್ಗೆ ತೀಳಿದುಕೊಳ್ಳುವವರಿದ್ದೇವೆ.

ಅ. ಅಪರಾಧಿಭಾವ ಎಂದರೇನು ?

’ನಮ್ಮಿಂದ ತಿಳಿದೋ-ತಿಳಿಯದೆಯೋ ಆಗುವ ತಪ್ಪುಗಳ ಬಗ್ಗೆ ವಿಷಾದ, ದುಃಖ ಎನಿಸುವುದು, ಆ ತಪ್ಪುಗಳ ಪಾಪಕ್ಷಾಲನೆಗಾಗಿ ಭಗವಂತನ ಚರಣಗಳಲ್ಲಿ ಅನನ್ಯಭಾವದಿಂದ ಕ್ಷಮಾಯಾಚನೆ ಮಾಡುವುದು ಮತ್ತು ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಎಂದರೆ ಅಪರಾಧಿಭಾವ !’ ನಮ್ಮಿಂದ ಪ್ರತಿದಿನ ಹಲವಾರು ತಪ್ಪುಗಳಾಗುತ್ತವೆ. ನಮ್ಮ ನಡೆ-ನುಡಿಯಿಂದ ಯಾರಿಗೋ ನೋವಾಗುತ್ತದೆ. ಈ ಜನ್ಮದಲ್ಲಿ ಮಾತ್ರವಲ್ಲ ಇದಕ್ಕೂ ಹಿಂದಿನ ಜನ್ಮಗಳಲ್ಲಿಯೂ ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ. ಈ ತಪ್ಪುಗಳ ಅರಿವಿರುವುದು ಮತ್ತು ಅದರ ಬಗ್ಗೆ ದುಃಖವೆನಿಸುವುದು ಅಪರಾಧಿಭಾವದ ಮೊದಲ ಮೆಟ್ಟಿಲಾಗಿದೆ.

ಆ. ತಪ್ಪುಗಳನ್ನು ಸ್ವೀಕರಿಸುವುದು ಮತ್ತು ಅದರಿಂದ ಕಲಿಯುವುದರ ಮಹತ್ವ

ಬಹಳಷ್ಟು ಬಾರಿ ಹೇಗಾಗುತ್ತದೆಯೆಂದರೆ ತಪ್ಪುಗಳ ಬಗ್ಗೆ ದುಃಖ ಎನಿಸುವುದು, ಅವುಗಳು ಮತ್ತೆ ಆಗಬಾರದೆಂದು ಪ್ರಯತ್ನಿಸುವುದು, ಅವುಗಳಿಗೆ ಪರಿಹಾರ ಹುಡುಕುವುದು, ಸಂಬಂಧಪಟ್ಟವರಲ್ಲಿ ಮನಸಾರೆ ಕ್ಷಮೆ ಕೇಳುವುದು ಇತ್ಯಾದಿಗಳನ್ನು ಮಾಡುವ ಬದಲು ನಾವು ಆ ತಪ್ಪುಗಳ ಬಗ್ಗೆ ಸ್ಪಷ್ಟೀಕರಣ ನೀಡುತ್ತೇವೆ. ’ನನ್ನ ಉದ್ದೇಶವು ಯೋಗ್ಯವಾಗಿತ್ತು, ಆದರೆ ಇತರರೇ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ಪರಿಸ್ಥಿತಿಯು ಬೇರೆಯೇ ಆಗಿತ್ತು’ ಈ ವಿಧದ ವಿಚಾರಪ್ರಕ್ರಿಯೆಯಿಂದಾಗಿ ನಾವು ತಪ್ಪಿನ ಮೂಲಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಹೀಗಾಗುತ್ತದೆ ಅಲ್ವಾ ? ಯಾರಾದರೂ ನಮ್ಮ ಕುಂದುಕೊರತೆಗಳನ್ನು ಹೇಳಿದರೆ ಅಥವಾ ತಪ್ಪುಗಳನ್ನು ಹೇಳಿದರೆ ಸಾಮಾನ್ಯವಾಗಿ ನಮ್ಮ ವಿಚಾರಪ್ರಕ್ರಿಯೆ ಹೇಗಿರುತ್ತದೆ ? ಸಾಮಾನ್ಯವಾಗಿ ಯಾರಲ್ಲಿಯೂ ತಪ್ಪುಗಳನ್ನು ಸ್ವೀಕರಿಸುವ ಸಿದ್ಧತೆಯಿರುವುದಿಲ್ಲ. ಮೊದಲನೆಯದಾಗಿ ತಪ್ಪೇ ಸ್ವೀಕಾರವಾಗಲಿಲ್ಲ ಎಂದರೆ ಅದು ಮತ್ತೆ ಆಗಬಾರದು ಎಂಬುದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳಲ ಸಾಧ್ಯವಾದೀತು ? ತಪ್ಪುಗಳನ್ನು ಸ್ವೀಕರಿಸದ ಕಾರಣ ನಮ್ಮ ವೃತ್ತಿಯು ಬಹಿರ್ಮುಖವಾಗಿದ್ದು ನಾವು ಈಶ್ವರನಿಂದ ಅಂದರೆ ಆನಂದದಿಂದ ದೂರ ಹೋಗುತ್ತೇವೆ. ಹೀಗಾಗಬಾರದೆಂದು ಅಪರಾಧಿಭಾವವು ನಿರ್ಮಾಣವಾಗುವುದು ಮಹತ್ವದ್ದಾಗಿದೆ. ತಪ್ಪನ್ನು ಸ್ವೀಕರಿಸದೆ ಸ್ಪಷ್ಟೀಕರಣ ನೀಡಿ ತಾನು ಸರಿಯೆಂದು ತೋರಿಸಲು ನಾವು ಸಂಘರ್ಷ ಮಾಡುವುದರಲ್ಲಿ ವೆಚ್ಚವಾಗುವ ಶಕ್ತಿಯನ್ನು ನಾವು ತಪ್ಪನ್ನು ಸ್ವೀಕರಿಸಲು ಮತ್ತು ತನ್ನಲ್ಲಿರುವ ಕುಂದು-ಕೊರತೆಗಳನ್ನು ಹುಡುಕಿ ಅವುಗಳ ಮೇಲೆ ಜಯಗಳಿಸಲು ಉಪಯೋಗಿಸಿದರೆ ಅದು ಹೆಚ್ಚು ಸೂಕ್ತವಾಗಿರುವುದು. ಅದು ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ನಮ್ಮ ನಿಜವಾದ ಮುನ್ನಡೆ ಹಾಗೂ ವ್ಯಕ್ತಿತ್ವ ವಿಕಸನವಾಗುವುದು.

ತಪ್ಪುಗಳಾದ ನಂತರ ಉತ್ಸಾಹರಹಿತರಾಗದೆ, ನಿರಾಶರಾಗದೆ ಅವುಗಳಿಂದ ಕಲಿಯುವುದು ಮಹತ್ವದ್ದಾಗಿರುತ್ತದೆ. ನಾವೆಲ್ಲರೂ ಸಾಮಾನ್ಯ ವ್ಯಕ್ತಿಗಳಾಗಿದ್ದೇವೆ. ಆದ್ದರಿಂದ ನಮ್ಮಿಂದ ತಪ್ಪುಗಳಾಗುವುದು ಅನಿವಾರ್ಯ. ನಾವು ಅವುಗಳನ್ನು ಸ್ವೀಕರಿಸಿ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಈ ಪ್ರಯತ್ನಗಳಲ್ಲಿ ಆನಂದವಿದೆ.

ಇ. ಕರ್ಮಫಲ ಮತ್ತು ಜನನ-ಮರಣದ ಚಕ್ರ

ಮನುಷ್ಯನು ಕರ್ಮ ಮಾಡುವುದು ಅನಿವಾರ್ಯ. ಕರ್ಮ ಮಾಡುವಾಗ ಸದಾ ಇತರರೊಂದಿಗೆ ಕೊಡು-ಕೊಳ್ಳುವ ಸಂಬಂಧ ನಿರ್ಮಾಣವಾಗುತ್ತಿರುತ್ತದೆ; ಅಲ್ಲದೆ ಪ್ರತಿಯೊಂದು ಕರ್ಮಕ್ಕೂ ಪಾಪ-ಪುಣ್ಯಾತ್ಮಕ ಫಲವಿರುತ್ತದೆ. ರಾಗದ್ವೇಷಾದಿ ಸ್ವಭಾವದೋಷಗಳು, ಕುಬುದ್ಧಿ, ಅಧರ್ಮಾಚರಣೆ, ಕರ್ಮವನ್ನು ಮಾಡುವಾಗ ಆಗುವ ತಪ್ಪುಗಳು ಇವೇ ಮುಂತಾದವುಗಳಿಂದ ವ್ಯಕ್ತಿಯ ಪಾಪ ಹೆಚ್ಚಾಗುತ್ತಾ ಹೋಗುತ್ತದೆ. ಅದರ ದುಃಖಸ್ವರೂಪ ಫಲವನ್ನು ಈ ಜನ್ಮದಲ್ಲಿಲ್ಲದಿದ್ದರೆ ಮುಂದಿನ ಯಾವುದಾದರೊಂದು ಜನ್ಮದಲ್ಲಿ ಅನುಭವುಸಲೇ ಬೇಕಾಗುತ್ತದೆ. ಹೀಗಾಗಿ ಜನನ-ಮರಣದ ಚಕ್ರವು ನಡೆಯುತ್ತಲೇ ಇರುತ್ತದೆ. ಇದನ್ನೇ ’ಕರ್ಮಬಂಧನ’ ಎನ್ನುತ್ತಾರೆ. ತಿಳಿಯದೇ ಘಟಿಸುವ ಕರ್ಮಗಳಿಂದಲೂ ಪಾಪ ತಗುಲುತ್ತದೆ. ಆದ್ದರಿಂದ ತಪ್ಪುಗಳ ಬಗ್ಗೆ ದುಃಖ ಎನಿಸುವುದು ಮತ್ತು ಅದರಿಂದ ನಿರ್ಮಾಣವಾಗುವ ಪಾಪದ ಪರಿಮಾರ್ಜನೆಯಾಗುವುದಕ್ಕಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಮಹತ್ವದ್ದಾಗಿದೆ. ತಪ್ಪುಗಳ ಬಗ್ಗೆ ದುಃಖ ಎನಿಸುವುದರಿಂದ ಅಪರಾಧಿಭಾವ ನಿರ್ಮಾಣವಾಗುತ್ತದೆ.

ಈ. ಅಪರಾಧಿಭಾವದಿಂದಾಗುವ ಲಾಭಗಳು

1. ಅಂತರ್ಮುಖತೆಯು ಹೆಚ್ಚಾಗುತ್ತದೆ

ಅಪರಾಧಿಭಾವದಿಂದ ನಮ್ಮಲ್ಲಿ ಗುಣವೃದ್ಧಿಯಾಗುತ್ತದೆ. ಅಪರಾಧಿಭಾವದಿಂದ ವೃತ್ತಿಯು ಅಂತರ್ಮುಖವಾಗುತ್ತದೆ. ಭಗವಂತನು ನನಗೆ ಹಲವು ರೂಪಗಳಲ್ಲಿ ಸಹಾಯ ಮಾಡುತ್ತಿದ್ದಾನೆ; ಆದರೆ ನಾನು ಭಗವಂತನಿಗೆ ಅಪೇಕ್ಷಿತವಾಗಿರುವಂತೆ ಪ್ರಯತ್ನ ಮಾಡಲಿಲ್ಲ ಎಂದೆನಿಸುತ್ತದೆ. ಅಪರಾಧಿಭಾವದಲ್ಲಿ ತಪ್ಪಿನ ಬಗ್ಗೆ ಮನದಾಳದಲ್ಲಿ ವಿಷಾದ, ದುಃಖ ನಿರ್ಮಾಣವಾಗುತ್ತದೆ ಮತ್ತು ಆ ಸ್ಥಿತಿಯಿಂದ ಹೊರಬರುವುದಕ್ಕೆಂದು ಭಗವಂತನ ಚರಣಗಳಲ್ಲಿ ಆರ್ತತೆಯಿಂದ ಕ್ಷಮಾಯಾಚನೆ ಮಾಡಲಾಗುತ್ತದೆ. ಸಂಕ್ಷಿಪ್ತದಲ್ಲಿ ಅಪರಾಧಿಭಾವದಿಂದ ಅಂತರ್ಮುಖತೆಯು ಹೆಚ್ಚಾಗುತ್ತದೆ.

2. ಇತರರನ್ನು ಅರ್ಥ ಮಾಡಿಕೊಳ್ಳುವ ವೃತ್ತಿಯು ಹೆಚ್ಚಾಗುತ್ತದೆ

ತನ್ನಲ್ಲಿರುವ ಸ್ವಭಾವದೊಷಗಳು ಮತ್ತು ಅಹಂಗಳಿಂದ ಇತರರಿಗೆ ನೋವಾಗುತ್ತದೆ ಎಂಬುದು ಗಮನಕ್ಕೆ ಬಂದ ನಂತರ ಇತರರನ್ನು ಅರ್ಥ ಮಾಡಿಕೊಳ್ಳುವ ವೃತ್ತಿಯು ನಿರ್ಮಾಣವಾಗುತ್ತದೆ. ವ್ಯಕ್ತಿಯು ಇತರರ ಬಗ್ಗೆ ವಿಚಾರ ಮಾಡಲು ಕಲಿಯುತ್ತಾನೆ.

3. ನಮ್ರತೆಯು ಹೆಚ್ಚಾಗುತ್ತದೆ

ವ್ಯಕ್ತಿಗೆ ತನ್ನಿಂದಾದ ತಪ್ಪುಗಳ ಪರಿಣಾಮಗಳ ಅರಿವಾದ ನಂತರ ತಪ್ಪುಗಳ ಬಗ್ಗೆ ಸಂವೇದನಾಶೀಲತೆಯು ಹೆಚ್ಚಾಗುತ್ತದೆ. ವಿಷಾದ/ದುಃಖ ಎನಿಸುತ್ತದೆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ಅದು ಯೋಗ್ಯವಾಗಿ ಆಗಬೇಕೆಂಬುದಕ್ಕಾಗಿ ಕಲಿಯುವ ಸ್ಥಿತಿಯಲ್ಲಿದ್ದುಕೊಂಡು ತಿಳಿದವರಿಗೆ/ಇತರರಿಗೆ ಕೇಳಿಕೇಳಿ ಮಾಡುವ ವೃತ್ತಿಯು ಹೆಚ್ಚಾಗುತ್ತದೆ. ನಮ್ರತೆಯ ಗುಣವು ಹೆಚ್ಚಾಗುತ್ತದೆ. ಅಹಂಭಾವವು ಕಡಿಮೆಯಾಗುತ್ತದೆ.

ಉ. ಅಪರಾಧಿಭಾವವು ನಿರ್ಮಾಣವಾಗುವುದಕ್ಕಾಗಿ ಕ್ಷಮಾಯಾಚನೆ ಮಾಡುವುದು

ಸಾಧನೆಯ ದೃಷ್ಟಿಯಿಂದ ಅಪರಾಧಿಭಾವದ ಮಹತ್ವ ಇಷ್ಟು ಹೆಚ್ಚು ಇದೆ ಅಂದ ಮೇಲೆ ಅದನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಹೇಗೆ ಪ್ರಯತ್ನಿಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ. ಅಪರಾಧಿಭಾವ ನಿರ್ಮಾಣವಾಗುವುದಕ್ಕೆ ಕ್ಷಮಾಯಾಚನೆ ಮಾಡುವ ಆವಶ್ಯಕತೆಯಿದೆ. ತನ್ನಿಂದಾದ ತಪ್ಪುಗಳ ಬಗ್ಗೆ ದುಃಖ ಎನಿಸಿ ಅದರ ಬಗ್ಗೆ ಆತ್ಮನಿವೇದನೆ ಮಾಡಿ ಕ್ಷಮಾಯಾಚನೆ ಮಾಡಿದರೆ ಮನಸ್ಸಿನ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಕ್ಷಮಾಯಾಚನೆ ಮಾಡುವುದರಲ್ಲಿ ಮುಂದಿನ ಎರಡು ಹಂತಗಳಿವೆ. ಒಂದೆಂದರೆ ದೇವರಲ್ಲಿ ಕ್ಷಮಾಯಾಚನೆ ಮಾಡುವುದು ಮತ್ತು ನಮ್ಮ ಪ್ರತ್ಯಕ್ಷ ಸಂಪರ್ಕದಲ್ಲಿರುವ ವ್ಯಕ್ತಿಗಳಲ್ಲಿ ಉದಾಹರಣೆಗೆ ನಮ್ಮ ಪರಿವಾರದವರು, ಸಹೋದ್ಯೋಗಿಗಳು ಅಥವಾ ಬೇರೆ ಯಾರಿಗಾದರೂ ನಮ್ಮಿಂದ ನೋವಾಗಿದ್ದರೆ ಅವರಲ್ಲಿ ಕ್ಷಮಾಯಾಚನೆ ಮಾಡುವುದು.

1. ದೇವರಲ್ಲಿ ಕ್ಷಮಾಯಾಚನೆ ಮಾಡುವುದು

ಈಶ್ವರನು ಸರ್ವವ್ಯಾಪಕನೂ, ಸರ್ವಜ್ಞನೂ, ಸರ್ವಶಕ್ತಿವಂತನೂ ಆಗಿದ್ದಾನೆ. ನಮ್ಮ ಮನಸ್ಸಿನಲ್ಲಿರುವ ಪ್ರತಿಯೊಂದು ವಿಚಾರವೂ ಅವನಿಗೆ ತಿಳಿಯುತ್ತದೆ. ನಮ್ಮ ಭೂತಕಾಲ-ವರ್ತಮಾನಕಾಲ-ಭವಿಷ್ಯತ್ಕಾಲ ಈಶ್ವರನಿಗೆ ತಿಳಿದಿರುತ್ತವೆ. ಭಗವಂತನು ನಮ್ಮ ಅಂತರ್ಬಾಹ್ಯವನ್ನೂ ಅರಿತಿರುತ್ತಾನೆ. ಅಪರಾಧಿಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ನಮ್ಮಿಂದ ತಿಳಿದೋ-ತಿಳಿಯದೆಯೋ ಆದ ಪ್ರತಿಯೊಂದು ಅಪರಾಧದ ಬಗ್ಗೆ ಭಗವಂತನಲ್ಲಿ ಆತ್ಮನಿವೇದನೆ ಮಾಡಬೇಕು. ದಿನದಲ್ಲಿ ಕನಿಷ್ಠ 5 ಬಾರಿ ದೇವರಲ್ಲಿ ಕ್ಷಮಾಯಾಚನೆ ಮಾಡಬೇಕು. ದೇವರಲ್ಲಿ ಕ್ಷಮಾಯಾಚನೆ ಮಾಡುವುದಕ್ಕಾಗಿ ಪ್ರತ್ಯಕ್ಷ ದೇವರ ಕೋಣೆಯ ಎದುರೇ ನಿಲ್ಲಬೇಕು ಎಂದಿಲ್ಲ. ನಾವು ಮನಸ್ಸಿನಲ್ಲಿಯೇ ದೇವರ ಸ್ಮರಣೆ ಮಾಡಿ ಇದ್ದಲ್ಲಿಯೇ ಕ್ಷಮಾಯಾಚನೆ ಮಾಡಬಹುದು.

ಕ್ಷಮಾಯಾಚನೆ : ಉದಾಹರಣೆಗೆ, ನಮ್ಮಿಂದ ಇಡೀ ದಿನದಲ್ಲಿ ಸಾಧನೆಗೆ ಅತ್ಯಂತ ಕಡಿಮೆ ಪ್ರಯತ್ನಗಳಾಗಿವೆ – ಆಗ ನಾವು ದೇವರಲ್ಲಿ ಮುಂದಿನಂತೆ ಕ್ಷಮಾಯಾಚನೆ ಮಾಡಬಹುದು – ’ಹೇ ಭಗವಂತಾ, ನೀನು ನನಗೆ ಸಾಧನೆಯ ಮಾರ್ಗವನ್ನು ತೋರಿಸಿದೆ; ನಿನ್ನ ಕೃಪಾದೃಷ್ಟಿಯು ನನ್ನ ಮೇಲಿದೆ; ಆದರೆ ಇಂದು ನನ್ನಿಂದ ಸಾಧನೆಯ ಅತ್ಯಂತ ಕೆಡಿಮೆ ಪ್ರಯತ್ನಗಳಾಗಿವೆ. ಹೇ ಭಗವಂತಾ, ನಾನು ನಿನ್ನ ಚರಣಗಳಲ್ಲಿ ಕ್ಷಮೆ ಯಾಚಿಸುತ್ತೇನೆ. ನನ್ನನ್ನು ಕ್ಷಮಿಸು. ಹೇ ಭಗವಂತಾ, ನಾನು ಅಜ್ಞಾನಿಯಾಗಿದ್ದೇನೆ, ಅಸಮರ್ಥನಾಗಿದ್ದೇನೆ. ನೀನೇ ನನ್ನಿಂದ ಸಾಧನೆಯ ಪ್ರಯತ್ನಗಳನ್ನು ಮಾಡಿಸಿಕೊ. ಹೇ ಭಗವಂತಾ ನನ್ನನ್ನು ಸ್ವೀಕರಿಸು! ನಾನು ಇದುವರೆಗೆ ಎಷ್ಟು ತಪ್ಪುಗಳನ್ನು ಮಾಡಿದ್ದೇನೆ ಎಂಬುದು ನನಗೇ ತಿಳಿದಿಲ್ಲ; ಆದರೆ ನಿನಗೆ ಎಲ್ಲವೂ ತಿಳಿದಿದೆ. ನನ್ನ ತಂದೆ-ತಾಯಿ, ಗುರು ಎಲ್ಲವೂ ನೀನೇ. ನಾನು ಇಷ್ಟೊಂದು ತಪ್ಪುಗಳನ್ನು ಮಾಡುತ್ತಿರುವಾಗಲೂ ನೀನು ಯಾವಾಗಲು ನನ್ನ ಮೇಲೆ ಅಪ್ರಸನ್ನನಾಗಲಿಲ್ಲ. ನಾನು ನಿನ್ನ ಚರಣಗಳಲ್ಲಿ ಶರಣು ಬಂದಿದ್ದೇನೆ’ ಈ ರೀತಿ ಭಗವಂತನಲ್ಲಿ ಕ್ಷಮಾಯಾಚಿಸಬಹುದು.

2. ವ್ಯಕ್ತಿಗಳಲ್ಲಿ ಕ್ಷಮಾಯಾಚನೆ ಮಾಡುವುದು

ಕ್ಷಮಾಯಾಚನೆಯಲ್ಲಿ ಎರಡನೆಯ ಹಂತ ಎಂದರೆ ತನ್ನಿಂದ ಆದ ತಪ್ಪುಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲಿ ಕ್ಷಮಾಯಾಚನೆ ಮಾಡುವುದು. ತಪ್ಪು ತನ್ನದೇ ಆಗಿದ್ದರೂ ಅಹಂಭಾವದಿಂದಾಗಿ ಸಂಬಂಧಪಟ್ಟ ವ್ಯಕ್ತಿಗಳಲ್ಲಿ ಕ್ಷಮಾಯಾಚನೆ ಮಾಡುವುದು ಕೆಲವರಿಗೆ ಕಠಿಣವೆನಿಸುತ್ತದೆ. ಆದರೆ ಕ್ಷಮಾಯಾಚನೆ ಮಾಡುವುದರಿಂದ ಮಾತ್ರ ವ್ಯಕ್ತಿಗಳ ನಡುವೆ ಹಾಳಾಗಿರುವ ಸಂಬಂಧಗಳು ಸರಿಯಾಗುವ ಸಾಧ್ಯತೆಯಿರುತ್ತದೆ. ಮನಸ್ಸಿನ ಭಾರವೂ ಕಡಿಮೆಯಾಗುತ್ತದೆ. ವ್ಯಕ್ತಿಯಲ್ಲಿ ಕ್ಷಮಾಯಾಚನೆ ಮಾಡುವುದೆಂದರೆ ಆತನಲ್ಲಿರುವ ಈಶ್ವರನಲ್ಲಿಯೇ ಕ್ಷಮಾಯಾಚನೆ ಮಾಡಿದಂತಾಗುತ್ತದೆ. ಇದರಿಂದ ಅಹಂಭಾವ ಕಡಿಮೆಯಾಗಲು ಸಹಾಯವಾಗುತ್ತದೆ. ದೇವರಲ್ಲಿ ಕ್ಷಮೆ ಕೇಳುವುದಕ್ಕಿಂತ ವ್ಯಕ್ತಿಗಳ ಕ್ಷಮೆ ಕೇಳುವುದು ಹೆಚ್ಚು ಕಠಿಣವಾಗಿರುತ್ತದೆ; ಆದರೆ ನಾವು ಪ್ರಯತ್ನ ಮಾಡೋಣ. ನಾವು ವಾರದಲ್ಲಿ ಇಬ್ಬರಲ್ಲಿಯಾದರೂ ಕ್ಷಮಾಯಾಚನೆ ಮಾಡೊಣ. ದೇವರಿಗೋಸ್ಕರ ನಾವು ನಮ್ಮ ಅಹಂ ನ ವಿರುದ್ಧ ಸಂಘರ್ಷ ಮಾಡಬೇಕಾಗಿದೆ. ಈ ವಿಷಯದ ಬಗ್ಗೆ ಸನಾತನದ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಸದ್ಗುರುಪದವಿಯಲ್ಲಿ ಆರೂಢರಾಗಿರುವ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಹೇಳಿರುವುದೇನೆಂದರೆ ‘ಯಾರು ತನ್ನ ತಪ್ಪುಗಳನ್ನು ಜಗತ್ತಿಗೆ ಕೂಗಿ ಕೂಗಿ ಜೋರಾಗಿ ಹೇಳುತ್ತಾನೆಯೋ ಅವನೇ ಮಹಾತ್ಮ ಆಗುವ ಯೋಗ್ಯತೆಯುಳ್ಳವನಾಗಿರುತ್ತಾನೆ’ ಎಂದು!

ದೇವರ ಅಥವಾ ವ್ಯಕ್ತಿಯ ಕ್ಷಮಾಯಾಚನೆ ಮಾಡುವಾಗ ಕೇವಲ ಶಬ್ದಗಳಲ್ಲಿ ಕ್ಷಮೆ ಕೇಳುವ ಬದಲು ಸಾಧ್ಯವಾದರೆ ಕಿವಿಗಳನ್ನು ಹಿಡಿದು – ಬಲಗೈಯನ್ನು ಎಡಗಿವಿಗೆ ತಗುಲಿಸಿ ಮತ್ತು ಎಡಗೈಯನ್ನು ಬಲಗಿವಿಗೆ ತಗುಲಿಸಿ ಕಿವಿಗಳನ್ನು ಸ್ವಲ್ಪ ಎಳೆದು ಕ್ಷಮೆ ಕೇಳಬೇಕು. ಚಿಕ್ಕ ಮಕ್ಕಳಿಗೆ ಹೆತ್ತವರು ಅಥವಾ ಶಿಕ್ಷಕರು ಹೇಳುತ್ತಿದ್ದರಲ್ಲ ಹಾಗೆ! ನಾವು ನಮ್ಮ ಪ್ರತಿಷ್ಠೆಯನ್ನು ಬಿಟ್ಟು ಎಲ್ಲಿ ಸಾಧ್ಯವಿದೆಯೋ ಅಲ್ಲಿ ಕಿವಿ ಹಿಡಿದು ಕ್ಷಮಾಯಾಚನೆ ಮಾಡಬೇಕು. ಪ್ರಾರಂಭದಲ್ಲಿ ಇತರರ ಎದುರು ಸಾಧ್ಯವಾಗದಿದ್ದರೂ ಕನಿಷ್ಠ ದೇವರೆದುರು ಅಥವಾ ರಾತ್ರಿ ಮಲಗುವಾಗ, ದಿನವಿಡೀ ತಿಳಿದೋ-ತಿಳಿಯದೆಯೋ ಆದ ತಪ್ಪುಗಳಿಗಾಗಿ ದೇವರಲ್ಲಿ ಕ್ಷಮಾಯಾಚನೆ ಮಾಡಬೇಕು. ಅದರಿಂದ ಅಹಂ ಕಡಿಮೆಯಾಗಲೂ ಸಹಾಯವಾಗುತ್ತದೆ. ಹೀಗೆ ಮಾಡುವಾಗ ಮೊದಮೊದಲು ಬಹಳ ಸಂಘರ್ಷವಾಗುವುದು ಮತ್ತು ಹೀಗೆ ಮಾಡುವುದು ಬೇಡ ಎಂದೆನಿಸುವುದು; ಆದರೆ ನಾವು ದೇವರಿಗಾಗಿ ಸಣ್ಣತನ ತೆಗೆದುಕೊಳ್ಳಬೇಕಾಗಿದೆ ಎಂಬುದನ್ನು ಗಮನದಲ್ಲಿಟ್ಟೂಕೊಂಡು ಹೀಗೆ ಮಾಡಲು ಪ್ರಯತ್ನಿಸೋಣ.

3. ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು

ಅಪರಾಧಿಭಾವ ನಿರ್ಮಾಣವಾಗುವುದಕ್ಕಾಗಿ ಕ್ಷಮಯಾಚನೆಯ ಜೊತೆಗೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಮನುಷ್ಯನ ಜೀವನವು ಕರ್ಮಮಯವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಮನುಷ್ಯನು ಮಾಡಿದ ಪ್ರತಿಯೊಂದು ಕರ್ಮದ ಫಲವು ಅವನಿಗೆ ಸಿಕ್ಕಿಯೇ ಸಿಗುತ್ತದೆ. ತಪ್ಪುಗಳಿಂದ ಪಾಪ ತಗುಲುತ್ತದೆ. ತಪ್ಪುಗಳಾದ ನಂತರ ಕ್ಷಮಾಯಾಚನೆ ಮಾಡುವ ಮಾತ್ರದಿಂದ ಪಾಪವು ನಷ್ಟವಾಗುವುದಿಲ್ಲ; ಪ್ರಾಯಶ್ಚಿತ್ತವನ್ನು ತೆಗೆದುಕೊಂಡರೆ ಪಾಪದ ಪರಿಮಾರ್ಜನೆಯಾಗಲು ಸಹಾಯವಾಗುತ್ತದೆ. ಪ್ರಾಯಶ್ಚಿತ್ತ ಎಂದರೆ ತಪ್ಪುಗಳಿಂದಾಗುವ ಪಾಪದ ಪರಿಮಾರ್ಜನೆಯಾಗಬೇಕೆಂದು ತಾನು ತನಗೇ ಶಿಕ್ಷೆ ಕೊಟ್ಟೂಕೊಳ್ಳುವುದು ! ಉದಾಹರಣೆಗೆ ದಿನದಲ್ಲಿ ನಮ್ಮಿಂದ 5 ಸ್ವಯಂಸೂಚನಾಸತ್ರಗಳಾಗದಿದ್ದರೆ ಮರುದಿನ 6 ಸ್ವಯಂಸೂಚನೆಗಳನ್ನು ಮಾಡುವುದು ಎಂಬ ಅಥವಾ ಇಷ್ಟವಾದ ತಿಂಡಿಯನ್ನು ತಿನ್ನದಿರುವುದು ಎಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬಹುದು. ಅದರಲ್ಲಿಯೂ 3 ಸ್ವಯಂಸೂಚನಾ ಸತ್ರಗಳನ್ನು ನಿಂತುಕೊಂಡು ಮಾಡುವೆನೆಂಬ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬಹುದು. ಮನೆಯಲ್ಲಿ ಏನಾದರೂ ತಪ್ಪಾದರೆ ಮನೆಯಲ್ಲಿ ಹೆಚ್ಚುವರಿ ಸೇವೆ ಮಾಡುವೆನು, ಸಿಹಿ ತಿಂಡಿ ತಿನ್ನದಿರುವೆನು ಈ ವಿಧದ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬಹುದು. ಸೇವೆಯಲ್ಲಿ ತಪ್ಪುಗಳಾದಾಗ ಹೆಚ್ಚಿನ ಸೇವೆ ಮಾಡುವ ಪ್ರಾಯಶ್ಚಿತ್ತ ತೆಗೆದುಕೊಳ್ಳಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ ಈ ವಾರದಿಂದ ಅಪರಾಧಿಭಾವ ನಿರ್ಮಾಣವಾಗುವುದಕ್ಕಾಗಿ ನಾವು ಪ್ರತಿದಿನ 5 ಬಾರೀ ದೇವರಲ್ಲಿ ಕ್ಷಮಾಯಾಚನೆ ಮಾಡುವುದು, ವಾರದಲ್ಲಿ ಕನಿಷ್ಠ ಇಬ್ಬರು ವ್ಯಕ್ತಿಗಳಲ್ಲಿ ಪ್ರತ್ಯಕ್ಷ ಕ್ಷಮೆ ಕೇಳುವುದು ಮತ್ತು ವಾರದಲ್ಲಿ ಯವುದಾದರೊಂದು ತಪ್ಪಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಈ ರೀತಿ ಪ್ರಯತ್ನಿಸೋಣ.

Leave a Comment