ಸಾಧನೆಯ ಬಗ್ಗೆ ಮನಮುಕ್ತವಾಗಿ ಮಾತನಾಡುವುದರ ಮಹತ್ವ ಮತ್ತು ಲಾಭಗಳು !

Contents

ಶ್ರೀ. ಚೇತನ ರಾಜಹಂಸ

ಧರ್ಮಪ್ರಸಾರಕ್ಕಾಗಿ ದೇಶದಾದ್ಯಂತ ಪ್ರವಾಸ ಮಾಡುವಾಗ ಅನೇಕ ಸಾಧಕರು ಭೇಟಿಯಾದರು. ಇವರ ಪೈಕಿ ಒಳ್ಳೆಯ ಕ್ಷಮತೆ ಇದ್ದರೂ ಅನೇಕ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನವಾಗುವುದು ಕಂಡು ಬರಲಿಲ್ಲ. ಈ ಬಗ್ಗೆ ಸಾಧಕರೊಂದಿಗೆ ಮಾತನಾಡುವಾಗ ಗಮನಕ್ಕೆ ಬಂದ ಅಂಶವೆಂದರೆ, ಹೆಚ್ಚಿನ ಸಾಧಕರು ಸಾಧನೆಯಲ್ಲಿನ ಅಡಚಣೆಗಳು ಅಥವಾ ಸಾಧನೆಯನ್ನು ಮಾಡುವಾಗ ಬರುವ ಕೌಟುಂಬಿಕ-ಆರ್ಥಿಕ-ವ್ಯಾವಹಾರಿಕ ಅಡಚಣೆಗಳಿಂದ ಎಲ್ಲಿಯಾದರೂ ನಿಂತಿದ್ದಾರೆ. ಸಾಧನೆಯಲ್ಲಿ ಮಾರ್ಗದರ್ಶಕ ಸಂತರೊಂದಿಗೆ ತಮ್ಮ ಸಾಧನೆಯ ಬಗ್ಗೆ ಅಥವಾ ಸಾಧನೆಯಲ್ಲಿನ ಅಡಚಣೆಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡದಿರುವುದು, ಇವು ಅವರ ಪ್ರಮುಖ ಅಡಚಣೆಗಳಾಗಿದ್ದವು ಎಂದು ಗಮನಕ್ಕೆ ಬಂದಿತು. ನಮ್ಮ ಸಾಧನೆಯು ಗುರುಕೃಪಾಯೋಗಾನುಸಾರ ಆಗಿರುವುದರಿಂದ ಸಾಧನೆಯಲ್ಲಿ ಗುರುರೂಪದ ಸಂತರ ಮಾರ್ಗದರ್ಶನಕ್ಕೆ ಅಥವಾ ಅವರು ನೀಡಿದ ಸಾಧನೆಯ ದಿಶೆಗೆ ಅಸಾಧಾರಣ ಮಹತ್ವವಿದೆ. ಸಾಧನೆಯ ಬಗ್ಗೆ ಮನಮುಕ್ತವಾಗಿ ಮಾತನಾಡುವುದಕ್ಕೆ ಮಹತ್ವವಿದೆ. ಈ ವಿಷಯದಲ್ಲಿ ಕೆಲವು ಅಂಶಗಳನ್ನು ಮುಂದೆ ನೀಡಲಾಗಿದೆ.

೧. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು ಎಂದರೇನು ?

ಮನಸ್ಸಿನಲ್ಲಿ ಸಾಧನೆಯ ವಿಷಯದಲ್ಲಿ ಯಾವ ವಿಚಾರವಿರುತ್ತದೆಯೋ, ಯಾವ ದ್ವಂದ್ವ ಇರುತ್ತದೆಯೋ, ಯಾವ ದೃಷ್ಟಿಕೋನವಿರುತ್ತದೆಯೋ, ಯಾವ ಭಾವವಿರುತ್ತದೆಯೋ, ಯಾವ ಅಡಚಣೆ ಇರುತ್ತದೆಯೋ, ಯಾವ ಸಂದೇಹವಿರುತ್ತದೆಯೋ ಅಥವಾ ಯಾವ ಸೂಚನೆ ಇರುತ್ತದೆಯೋ, ಅದನ್ನು ಇದ್ದ ಹಾಗೆ (as it is) ಹೇಳುವುದು. ಇದರಲ್ಲಿ ವಿಚಾರ, ಪ್ರಶ್ನೆ, ಸೂಚನೆ ಅಥವಾ ದೃಷ್ಟಿಕೋನ ಯೋಗ್ಯ ಅಥವಾ ಅಯೋಗ್ಯ ಹೀಗೆ ಎರಡೂ ಇದ್ದರೂ, ಅದನ್ನು ಹೇಳುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಅದನ್ನು ಹೇಳಿದ ನಂತರವೇ ಅದು ಸಾಧನೆಯ ದೃಷ್ಟಿಯಿಂದ ಯೋಗ್ಯವೋ ಅಯೋಗ್ಯವೋ ಎಂದು ತಿಳಿಯಬಹುದು.

೨. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವ ಆಚಾರಸಂಹಿತೆ

ಅ. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವಾಗ ಜಿಜ್ಞಾಸೆ ಇರಬೇಕು.

ಆ. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು, ಎಂದರೆ ಮನಸ್ಸಿನಲ್ಲಿನ ವಿಚಾರಗಳನ್ನು ಬಲವಂತವಾಗಿ ಹೇಳುವುದಲ್ಲ.

ಇ. ಸಾಧನೆಯ ವಿಷಯದಲ್ಲಿ ಯೋಗ್ಯ ದೃಷ್ಟಿಕೋನವನ್ನು ನೀಡುವ ಕ್ಷಮತೆಯುಳ್ಳ ಸಾಧಕರ ಬಳಿಗೆ ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು ಅಪೇಕ್ಷಿತವಿರುತ್ತದೆ, ಉದಾಹರಣೆಗಾಗಿ – ಮಾರ್ಗದರ್ಶಕ ಸಂತರು, ಉನ್ನತ ಸಾಧಕರು, ಜವಾಬ್ದಾರ ಸಾಧಕರು, ವ್ಯಷ್ಟಿ ವರದಿಯನ್ನು ತೆಗೆದುಕೊಳ್ಳುವ ಸಾಧಕರು, ಆಧ್ಯಾತ್ಮಿಕ ಮಿತ್ರ, ಸಮಷ್ಟಿ ಸಾಧನೆಯಲ್ಲಿನ ಸಹಸಾಧಕರು ಇತ್ಯಾದಿ. ಸಂಕ್ಷಿಪ್ತದಲ್ಲಿ ಇತರ ಸಾಧಕರು, ಸಂಬಂಧಿಕರೊಂದಿಗೆ ಸಾಧನೆಯ ಬಗ್ಗೆ ಮನಮುಕ್ತತೆಯಿಂದ ಮಾತನಾಡಬಾರದು. ಏಕೆಂದರೆ ಅವರಿಗೆ ಸಾಧನೆಯ ಬಗ್ಗೆ ಯೋಗ್ಯ ದೃಷ್ಟಿಕೋನವಿರುವುದಿಲ್ಲ.

ಈ. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು, ಈ ಅಂಶ ಸ್ವಂತದ ವ್ಯಷ್ಟಿ ಸಾಧನೆಯ ಸಂದರ್ಭದಲ್ಲಾಗಿದೆ.

೩. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದರಿಂದ ಆಗುವ ಲಾಭಗಳು

೩ ಅ. ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುವುದು

ಹೆಚ್ಚಿನ ಬಾರಿ ಕೆಲವು ವಿಚಾರಗಳಿಂದ ಅಥವಾ ಅಡಚಣೆಗಳಿಂದ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗಿರುತ್ತದೆ. ಆ ಬಗ್ಗೆ ಮನಮುಕ್ತವಾಗಿ ಯೋಗ್ಯ ವ್ಯಕ್ತಿಯೊಂದಿಗೆ ಮಾತನಾಡಿದರೆ ಪರಿಹಾರ ಸಿಗುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.

ಸಾಧಕರ ಮನಸ್ಸಿನ ಒತ್ತಡದ ಬಗ್ಗೆ ಅಧ್ಯಯನ ಮಾಡಿದಾಗ ಗಮನಕ್ಕೆ ಬಂದ ಅಂಶವೆಂದರೆ, ಒಂದೇ ಪ್ರಸಂಗದಲ್ಲಿ ಸಾಧಕನ ಮನಸ್ಸಿನ ಮೇಲೆ ಎರಡು-ಮೂರು ಪ್ರಕಾರದ ಒತ್ತಡ ಇರಬಹುದು. ಆದುದರಿಂದ ಯಾವುದಾದರೊಂದು ಒತ್ತಡದ ನಿವಾರಣೆಯಾದರೆ, ಇನ್ನೆರಡು ಒತ್ತಡಗಳಿಂದಾಗಿ ಅವನ ಸ್ಥಿತಿ ಒತ್ತಡಯುಕ್ತವಾಗಿರುತ್ತದೆ. ಇಂತಹ ಸಮಯದಲ್ಲಿ ಮನಮುಕ್ತವಾಗಿ ಒತ್ತಡದ ಎಲ್ಲ ಅಂಶಗಳನ್ನು ಹೇಳಿದರೆ ಅದರಿಂದ ಲಾಭವಾಗುತ್ತದೆ.

೩ ಆ. ಸಾಧನೆಯಲ್ಲಿನ ಅಡಚಣೆಗಳ ಉಪಾಯಗಳಿಗಾಗಿ ದಿಶೆ ಸಿಗುವುದು

ಸಾಧನೆಯ ಅಡಚಣೆಗಳು ಅಥವಾ ಸಾಧನೆ ಮಾಡುವಾಗ ಬರುವ ಕೌಟುಂಬಿಕ-ಆರ್ಥಿಕ-ವ್ಯಾವಹಾರಿಕ ಅಡಚಣೆಗಳ ಬಗ್ಗೆ ದಿಶೆ ಸಿಗುವುದರಿಂದ ಆ ಬಗ್ಗೆ ಪ್ರಯತ್ನವಾಗತೊಡಗುತ್ತದೆ. ಇದರಿಂದ ಮುಂದೆ ಒಳ್ಳೆಯ ಸಾಧನೆಯಾಗತೊಡಗುತ್ತದೆ.

೩ ಇ. ಆತ್ಮವಿಶ್ವಾಸವು ಹೆಚ್ಚಾಗುವುದು

ಕೆಲವೊಮ್ಮೆ ಮನಸ್ಸಿನಲ್ಲಿ ಸಾಧನೆಯ ದೃಷ್ಟಿಕೋನ ಅಥವಾ ಸಮಷ್ಟಿಯಲ್ಲಿನ ನಿಲುವು ಇವುಗಳ ಬಗ್ಗೆ ದ್ವಂದ್ವವಿರುತ್ತದೆ. ಆದುದರಿಂದ ಆ ಕೃತಿಯನ್ನು ಮಾಡುವ ವಿಷಯದಲ್ಲಿ ಆತ್ಮವಿಶ್ವಾಸ ಕಡಿಮೆಯಿರುತ್ತದೆ. ಈ ಬಗ್ಗೆ ಮನಮಕ್ತವಾಗಿ ಮಾತನಾಡಿದರೆ ದ್ವಂದ್ವದಿಂದ ಒಂದು ವಿಚಾರದೆಡೆಗೆ ಹೋಗುವ ಮಾರ್ಗ ದೊರಕಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ.

೩ ಈ. ಸಂದೇಹನಿವಾರಣೆಯಾಗುವುದು

ಸಂದೇಹಗಳಿರುವುದು ಸ್ವಾಭಾವಿಕ ವಿಷಯವಾಗಿದ್ದರೂ ಅವುಗಳ ನಿವಾರಣೆಯನ್ನು ತಕ್ಷಣ ಮಾಡಿಕೊಳ್ಳದಿದ್ದರೆ, ಅವು ಮುಂದೆ ವಿಕಲ್ಪದಲ್ಲಿ ರೂಪಾಂತರಗೊಳ್ಳುವ ಅಪಾಯವಿರುತ್ತದೆ. ಇದಕ್ಕಾಗಿ ಸಕಾಲದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಉದ್ಭವಿಸಿದ ಸಂದೇಹಗಳನ್ನು ಮನಮುಕ್ತವಾಗಿ ಕೇಳಿ ಅವುಗಳನ್ನು ನಿವಾರಿಸುವುದು ಆವಶ್ಯಕವಾಗಿರುತ್ತದೆ.

೩ ಉ. ಸುಸ್ಪಷ್ಟತೆ ಬರುವುದು

ಸ್ಪಷ್ಟ ಸಂವಾದದ ಅಭಾವದಿಂದ ಸಮಷ್ಟಿ ಸಾಧನೆಯಲ್ಲಿ ಅನೇಕ ಸಲ ಅಡಚಣೆಗಳು ಉದ್ಭವಿಸುತ್ತವೆ. ಯಾವಾಗ ಈ ಅಡಚಣೆಗಳ ಬಗ್ಗೆ ಸಾಧಕರು ಮನಮುಕ್ತವಾಗಿ ಮಾತನಾಡುತ್ತಾರೆಯೋ, ಆಗ ಅವರಿಗೆ ವಿಷಯ ಸ್ಪಷ್ಟವಾಗಿ, ಅಡಚಣೆಗಳು ದೂರವಾಗುತ್ತವೆ.

೩ ಊ. ಭಿನ್ನಾಭಿಪ್ರಾಯ ದೂರಾಗುವುದು

ಕೆಲವೊಮ್ಮೆ ಸಮಷ್ಟಿ ಸಾಧನೆಯಲ್ಲಿ ಜವಾಬ್ದಾರ ಸಹಸಾಧಕರಲ್ಲಿ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವು ಕಂಡು ಬರುತ್ತದೆ. ಇಬ್ಬರೂ ಸಾಧಕರ ಉದ್ದೇಶ ಶುದ್ಧವಿರುತ್ತದೆ, ಅಂದರೆ ಸಾಧನೆಯ ಮತ್ತು ಸಮಷ್ಟಿ ಹಿತದ್ದಾಗಿರುತ್ತದೆ; ಆದರೆ ಅವರ ಚಿಂತನೆಯ ಭಾಗ ಭಿನ್ನವಾಗಿರುತ್ತದೆ. ಯಾವಾಗ ಸಹಸಾಧಕರು ಪರಸ್ಪರರಲ್ಲಿ ಸೇವೆಯ ಬಗ್ಗೆ ಭಿನ್ನಾಭಿಪ್ರಾಯಗಳ ಬಗ್ಗೆ ಮನಮುಕ್ತವಾಗಿ ಮಾತನಾಡತೊಡಗುತ್ತಾರೆಯೋ, ಆಗ ಭಿನ್ನಾಭಿಪ್ರಾಯಗಳು ದೂರವಾಗಿ ಮನಸ್ಸು ಹೊಂದಾಣಿಕೆಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಈ ಪ್ರಕ್ರಿಯೆಯಿಂದ ಪೂರ್ವಾಗ್ರಹ ದೂರವಾಗುತ್ತದೆ.

೩ ಎ. ಸಾಧನೆಯ ಬಗ್ಗೆ ಯೋಗ್ಯ ದೃಷ್ಟಿಕೋನ ದೊರಕುವುದು

ಸಾಧನೆಯ ಸಿದ್ಧಾಂತಕ್ಕನುಸಾರ ವಿಶಿಷ್ಟ ಪರಿಸ್ಥಿತಿಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಸಾಧನೆಯ ದೃಷ್ಟಿಕೋನ ಭಿನ್ನವಾಗಿರುತ್ತದೆ. ಆದುದರಿಂದ ಇಂತಹ ವಿಶಿಷ್ಟ ಪರಿಸ್ಥಿತಿಯಲ್ಲಿ ಸಾಧನೆಯ ಬಗ್ಗೆ ಯಾವ ಯೋಗ್ಯ ದೃಷ್ಟಿಕೋನವಿಡಬೇಕು ಎಂದು ತಿಳಿಯುತ್ತದೆ.

೩ ಏ. ಸಾಧನೆಯ ಫಲಶೃತಿ ಹೆಚ್ಚಾಗುವುದು

ಮನಸ್ಸಿನ ದ್ವಂದ್ವ, ಸಂದೇಹ ಮತ್ತು ಅಡಚಣೆಯ ನಿವಾರಣೆಯಾಗಿ ಉತ್ತಮ ಸಾಧನೆಯಾಗಿ ಸಾಧನೆಯ ಫಲಶೃತಿ ಹೆಚ್ಚಾಗತೊಡಗುತ್ತದೆ. ಮನಸ್ಸು ಬಿಚ್ಚಿ ಮಾತನಾಡುವ ಅಭ್ಯಾಸವಾಗುವುದರಿಂದ ಉತ್ಸಾಹ ಹೆಚ್ಚಾಗಿ ಆನಂದದಿಂದಿರಲು ಸಾಧ್ಯವಾಗುತ್ತದೆ.

೩ ಐ. ಸಾಧನೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದು

ಕೆಲವು ವರ್ಷ ಸಾಧನೆಯನ್ನು ಮಾಡಿದ ನಂತರ ಕೆಲವು ಸಾಧಕರ ಮನಸ್ಸಿನಲ್ಲಿ ಪೂರ್ಣವೇಳೆ ಸಾಧನೆ ಮಾಡುವ ಬಗ್ಗೆ ವಿಚಾರ ಬರತೊಡಗುತ್ತದೆ. ನೌಕರಿ-ವ್ಯವಸಾಯದಿಂದ ಅಥವಾ ಕುಟುಂಬದ ಕರ್ತವ್ಯದಿಂದ ನಿವೃತ್ತರಾದ ನಂತರ ಸಾಧಕರ ಮನಸ್ಸಿನಲ್ಲಿ ‘ಆಶ್ರಮದಲ್ಲಿದ್ದು ಮುಂದಿನ ಸಾಧನೆಯನ್ನು ಮಾಡಬೇಕು’, ಎಂಬ ವಿಚಾರ ಬರುತ್ತದೆ; ಆದರೆ ಈ ಬಗ್ಗೆ ಜವಾಬ್ದಾರ ಸಾಧಕರೊಂದಿಗೆ ಮನಮುಕ್ತವಾಗಿ ಮಾತನಾಡದಿದ್ದರೆ, ಅವರು ಇದ್ದ ಸ್ಥಿತಿಯಲ್ಲಿಯೇ ಇರಬೇಕಾಗುತ್ತದೆ. ಸಾಧನೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಮನಮುಕ್ತತೆಯು ಅತ್ಯಂತ ಆವಶ್ಯಕವಾಗಿರುತ್ತದೆ.

೪. ಮನಮುಕ್ತವಾಗಿ ಮಾತನಾಡದಿರಲು ಕಾರಣಗಳು

ಮನಮುಕ್ತವಾಗಿ ಮಾತನಾಡದಿರಲು ಕಾರಣಗಳೇನು ಎಂದು ಈಗ ನಾವು ತಿಳಿದುಕೊಳ್ಳೋಣ.

೪ ಅ. ಸ್ವಭಾವದೋಷ

ಮನಮುಕ್ತವಾಗಿ ಮಾತನಾಡದಿರುವುದರ ಹಿಂದೆ ‘ಸ್ವಭಾವದೋಷ’ವು ಅತಿ ಮಹತ್ವದ ಘಟಕವಾಗಿರುತ್ತದೆ. ಹೆಚ್ಚಿನ ಬಾರಿ ಅಲಿಪ್ತ ಸ್ವಭಾವದ ವ್ಯಕ್ತಿಗಳು ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ಹಿಂಜರಿಕೆ, ಪ್ರತಿಷ್ಠೆ ಕಾಪಾಡುವುದು ಮತ್ತು ಆತ್ಮವಿಶ್ವಾಸದ ಅಭಾವ ಇತ್ಯಾದಿ ದೋಷಗಳಿಂದಾಗಿಯೂ ಮನಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ.

೪ ಆ. ಅಡಚಣೆಗಳ ಮೇಲಿನ ಉಪಾಯಗಳ ಬಗ್ಗೆ ಅಪೇಕ್ಷೆ ಇರುವುದು

ಮನಮುಕ್ತವಾಗಿ ಮಾತನಾಡದಿರುವ ಹಿಂದೆ ಅಪೇಕ್ಷೆ ಇಟ್ಟುಕೊಳ್ಳುವುದು, ಈ ದೋಷವು ಸಹ ಸ್ವಲ್ಪ ಪ್ರಮಾಣದಲ್ಲಿ ಕಾರಣವಾಗಿರುತ್ತದೆ. ವಿಶೇಷವಾಗಿ ಸಾಧನೆಯ ಬಗ್ಗೆ ಅಥವಾ ಸಮಷ್ಟಿ ಕಾರ್ಯದಲ್ಲಿನ ಅಡಚಣೆಗಳನ್ನು ಹೇಳುವಾಗ ‘ಆ ಅಡಚಣೆಗಳಿಗೆ ತಮಗೆ ಅಪೇಕ್ಷಿತವಾದ ದಿಶೆ ಸಿಗಲಿ’, ಎಂಬ ಅಪೇಕ್ಷೆ ಮನಸ್ಸಿನಲ್ಲಿರುವುದರಿಂದ ಮತ್ತು ‘ಆ ಅಪೇಕ್ಷೆ ಪೂರ್ಣವಾಗುವುದಿಲ್ಲ’, ಎಂಬ ವಿಚಾರ ಪ್ರಬಲವಾಗಿರುವುದರಿಂದ ಸಾಧಕರು ಆ ಅಡಚಣೆಗಳ ಬಗ್ಗೆ ಮನಮುಕ್ತವಾಗಿ ಮಾತನಾಡುವುದಿಲ್ಲ. ಇದು ಅನೇಕ ಸ್ಥಳಗಳಲ್ಲಿ ಕಂಡು ಬಂದಿದೆ.

೫. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡದಿದ್ದರೆ ಆಗುವ ಹಾನಿ

ಅ. ನಿರಾಶೆ ಬರುವುದು

ಆ. ನಿರುತ್ಸಾಹ ಹೆಚ್ಚಾಗುವುದು

ಇ. ಸಾಧನೆಯಲ್ಲಿನ ಅಡಚಣೆಗಳು ದೂರವಾಗದಿರುವುದು

ಈ. ವಿಕಲ್ಪ ಬರುವುದು

ಉ. ಸಾಧನೆಯ ಫಲಶೃತಿ ಕಡಿಮೆಯಾಗುವುದು

ಈ ಎಲ್ಲ ಕಾರಣಗಳಿಂದ ಸಾಧನೆಯಲ್ಲಿ ಉನ್ನತಿಯಾಗುವುದಿಲ್ಲ ಅಥವಾ ಒಂದು ರೀತಿ ಅಧೋಗತಿಯಾಗುತ್ತದೆ.

೬. ಸಾಧನೆಯ ಬಗ್ಗೆ ಮನಮುಕ್ತವಾಗಿ ಮಾತನಾಡದಿರುವ ಅಪಾಯಕಾರಿ ಅಂಶಗಳು

೬ ಅ. ಸಂತರು ಮತ್ತು ಗುರುಗಳೊಂದಿಗೆ ಮನಮುಕ್ತತೆಯಿಂದ ಮಾತನಾಡದಿರುವುದು

ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲು ಪ್ರತಿಯೊಂದು ಸ್ಥಳದಲ್ಲಿ ಸನಾತನ ಸಂಸ್ಥೆಯ ಸಮಷ್ಟಿ ಸಂತರು ಲಭ್ಯರಿದ್ದಾರೆ. ಅನೇಕ ಸ್ಥಳಗಳಲ್ಲಿ, ಜವಾಬ್ದಾರ ಸಾಧಕರು ಸಾಧನೆಯಲ್ಲಿನ ಅಡಚಣೆ-ಅಡೆತಡೆಗಳ ಬಗ್ಗೆ ಸಂತರೊಂದಿಗೆ ಮನಮುಕ್ತವಾಗಿ ಮಾತನಾಡುವುದಿಲ್ಲ ಎಂದು ಗಮನಕ್ಕೆ ಬಂದಿದೆ. ಇದು ಸಾಧನೆಯಲ್ಲಿ ದೊಡ್ಡ ಅಡಚಣೆಯಾಗಿದೆ.

ನಿಜವಾಗಿಯೂ ಯಾವ ಸಾಧಕನಿಗೆ ಶಿಷ್ಯನಾಗಬೇಕಾಗಿರುತ್ತದೆಯೋ ಅಥವಾ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬೇಕಾಗಿರುತ್ತದೆಯೋ, ಅವನು ಸಾಧನೆಯಲ್ಲಿನ ಅಡಚಣೆಗಳ ಬಗ್ಗೆ ಸಂತರೊಂದಿಗೆ ಆಗಾಗ ಮನಮುಕ್ತವಾಗಿ ಮಾತನಾಡಲೇಬೇಕು. ನಾವು ಯಾರಿಂದ ಸಾಧನೆಯನ್ನು ಕಲಿಯುತ್ತೇವೆಯೋ, ಅವರೊಂದಿಗೇ ಮನಸ್ಸುಬಿಚ್ಚಿ ಮಾತನಾಡದಿದ್ದರೆ ಸಾಧನೆಯಲ್ಲಿ ದಿಶೆ ಸಿಗುವುದಿಲ್ಲ ಮತ್ತು ದಿಶೆ ಸಿಗದಿದ್ದರೆ, ಸಾಧನೆಯಲ್ಲಿ ಹೇಗೆ ಉನ್ನತಿಯಾಗುವುದು ?

ಅನೇಕ ಜವಾಬ್ದಾರ ಸಾಧಕರ ಮನಸ್ಸಿನಲ್ಲಿ ‘ನಮ್ಮ ಅಡಚಣೆಗಳಿಗಾಗಿ ಸಂತರ ಸಮಯ ವ್ಯರ್ಥ ಹೋಗಬಾರದೆಂಬ’ ವಿಚಾರ ಪ್ರಬಲವಾಗಿರುತ್ತದೆ. ಸಂತರ ಬಗೆಗಿನ ಈ ಭಾವ ಒಂದು ರೀತಿಯಲ್ಲಿ ಯೋಗ್ಯವಾಗಿದ್ದರೂ ಸಾಧನೆಯ ವಿಷಯದಲ್ಲಿ ಅಪಾಯಕಾರಿಯಾಗಿರುತ್ತದೆ. ಹಾಗೆಯೇ ಈ ರೀತಿ ವಿಚಾರ ಮಾಡುವುದೆಂದರೆ ಸಾಧನೆಯಲ್ಲಿ ಯಾವ ಸ್ಥಿತಿಯಲ್ಲಿರುವೆವೋ ಅದೇ ಸ್ಥಿತಿಯಲ್ಲಿರುವ ಅಲ್ಪಸಂತುಷ್ಟತೆಯಾಗಿದೆ. ಯಾರಿಗೆ ಆಧ್ಯಾತ್ಮಿಕ ಉನ್ನತಿಯ ಅಥವಾ ಸಮಷ್ಟಿ ಸಾಧನೆಯ ತುಡಿತವಿರುತ್ತದೆಯೋ, ಆ ಸಾಧಕನು ಈ ರೀತಿಯ ವಿಚಾರವನ್ನು ಎಂದಿಗೂ ಮಾಡಬಾರದು.

೬ ಆ. ವ್ಯಷ್ಟಿ ಸಾಧನೆಯ ವರದಿಯನ್ನು ನೀಡುವಾಗ ಮನಮುಕ್ತತೆಯಿಂದ ಮಾತನಾಡದಿರುವುದು

ಇದು ಅನೇಕ ಸಾಧಕರ ವಿಷಯದಲ್ಲಿ ನಡೆಯುವ ಸರ್ವಸಾಧಾರಣ ತಪ್ಪಾಗಿದೆ. ವ್ಯಷ್ಟಿ ಸಾಧನೆಯ ವರದಿಯನ್ನು ನೀಡುವಾಗ ಎಷ್ಟು ಪ್ರಯತ್ನವಾಗಿರುತ್ತದೆಯೋ, ಅಷ್ಟನ್ನೇ ಮನಮುಕ್ತವಾಗಿ ಹೇಳಲು ಬರಬೇಕು, ಉದಾಹರಣೆಗೆ ಯಾವುದಾದರೊಂದು ದಿನ ಸ್ವಭಾವದೋಷಗಳ ತಖ್ತೆಯನ್ನು ಬರೆದಿಲ್ಲ, ಎಂದು ಸ್ಪಷ್ಟವಾಗಿ ಹೇಳಲು ಬರಬೇಕು. ಸಾಧನೆಯಲ್ಲಿನ ಅಡಚಣೆಗಳನ್ನು-ಅಡೆತಡೆಗಳನ್ನು ಯಾವುದೇ ಪ್ರತಿಷ್ಠೆಯನ್ನು ಕಾಪಾಡದೇ ಮನಸ್ಸು ಬಿಚ್ಚಿ ಹೇಳಬೇಕು. ಈ ರೀತಿ ಪ್ರಯತ್ನಿಸಿದರೆ ಮಾತ್ರ ವ್ಯಷ್ಟಿ ವರದಿಯ ನಿಜವಾದ ಲಾಭವಾಗುತ್ತದೆ. ನಿಜವಾಗಿಯೂ ಪ್ರಾಥಮಿಕ ಹಂತದಲ್ಲಿನ ಸಾಧಕನಿಗೆ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡಲು ವ್ಯಷ್ಟಿ ವರದಿ ಸೇವಕನಿಗೆ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಆದರೆ ಅವರೊಂದಿಗೆ ಮನಮುಕ್ತತೆಯಿಂದ ಮಾತನಾಡದಿದ್ದರೆ ಸಾಧನೆಯಲ್ಲಿನ ಪ್ರಾಥಮಿಕ ಅಡಚಣೆಯನ್ನು ದೂರ ಮಾಡುವ ಮಾರ್ಗವೂ ಮುಚ್ಚಲ್ಪಡುತ್ತದೆ.

೬ ಇ. ಕಾರ್ಯಾತ್ಮಕ ಅಡಚಣೆಗಳ ಬಗ್ಗೆ ಮನಮುಕ್ತವಾಗಿ ಮಾತನಾಡದಿರುವುದು

ಈ ಅಂಶವು ಸಮಷ್ಟಿ ಸಾಧನೆಯಲ್ಲಿ ಎಲ್ಲಕ್ಕಿಂತ ಅಪಾಯಕಾರಿ ಅಂಶವಾಗಿದೆ. ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಮಾಡುವಾಗ ಅನೇಕ ಸಲ ಸ್ಥಳೀಯ ಅಡಚಣೆಗಳಿರುತ್ತವೆ. ಆ ಅಡಚಣೆಗಳನ್ನು ವೈಯಕ್ತಿಕ ಸ್ತರದಲ್ಲಿ ದೂರ ಮಾಡಲು ಜವಾಬ್ದಾರ ಸಾಧಕರಿಗೆ ಮಿತಿ ಇರಬಹುದು; ಆದರೆ ಇಂತಹ ಅಡಚಣೆಗಳ ಬಗ್ಗೆ ಜವಾಬ್ದಾರ ಸಾಧಕರಿಗೆ ಹೇಳದಿದ್ದರೆ, ಅವು ಎಂದಿಗೂ ದೂರವಾಗುವುದಿಲ್ಲ ಎಂದು ಗಮನದಲ್ಲಿಡಬೇಕು. ಕಾರ್ಯಾತ್ಮಕ ಅಡಚಣೆಗಳನ್ನು ಆಗಾಗ ಮನಮುಕ್ತವಾಗಿ ಹೇಳಿದರೆ ಅದಕ್ಕೆ ಉಪಾಯಯೋಜನೆಯನ್ನು ಕಂಡು ಹಿಡಿಯಲು ಹೊಸ ಹೊಸ ಪರ್ಯಾಯಗಳು ಸಿಗುತ್ತವೆ. ಹೊಸ ಪ್ರಯತ್ನಗಳಿಗೆ ದಿಶೆ ಸಿಗುತ್ತದೆ.

೭. ಸಹಸಾಧಕರ ಮನಮುಕ್ತತೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನೀಡಿದ ದೃಷ್ಟಿಕೋನ.

ಪರಾತ್ಪರ ಗುರು ಡಾ. ಆಠವಲೆಯವರು ಒಂದು ಸತ್ಸಂಗದಲ್ಲಿ, ‘ಒಟ್ಟಿಗೆ ಸೇವೆಯನ್ನು ಮಾಡುವ ಇಬ್ಬರು ಸಹಸಾಧಕರು ತಮ್ಮ ಸೇವೆಯ ಬಗ್ಗೆ ಮಾತನಾಡುವುದು, ಪರಸ್ಪರರ ವೈಯಕ್ತಿಕ ವಿಷಯದಲ್ಲಿ ಮಾತನಾಡುವುದು ಅಥವಾ ಹಾಸ್ಯವಿನೋದ ಮಾಡುವುದು, ಎಂದರೆ ಸಾಧನೆಯ ಮನಮುಕ್ತತೆ ಅಲ್ಲ. ಸಾಧನೆಯಲ್ಲಿ ಪರಸ್ಪರರಿಗೆ ಸಹಾಯ ಮಾಡುವ ಉದ್ದೇಶದಿಂದ ಸಹಸಾಧಕರು ಮನಮುಕ್ತವಾಗಿ ಮಾತನಾಡಬೇಕು’, ಎಂದು ಹೇಳಿದ್ದರು.

೮. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡಲು ಮಾಡಬೇಕಾದ ಕೆಲವು ಪ್ರಯತ್ನಗಳು

ಅ. ಸಾಧನೆಯ ಬಗ್ಗೆ ಮನಮುಕ್ತವಾಗಿ ಮಾತನಾಡದಿರುವ ಹಿಂದಿನ ದೋಷಗಳ ವ್ಯಾಪ್ತಿಯನ್ನು ತೆಗೆದು ವ್ಯಷ್ಟಿ ವರದಿ ಸೇವಕರಿಗೆ ಹೇಳಬೇಕು. ಆ ದೃಷ್ಟಿಯಿಂದ ವರದಿ ಸೇವಕರು ಸಾಧಕನಿಗೆ ಸಹಾಯ ಮಾಡಬಹುದು.

ಆ. ಹಿಂಜರಿಕೆ ಮತ್ತು ಆತ್ಮವಿಶ್ವಾಸ ಕಡಿಮೆ ಇರುವುದು, ಈ ದೋಷಗಳಿಂದ ಮನಮುಕ್ತವಾಗಿ ಮಾತನಾಡಲು ಸಾಧ್ಯವಾಗದಿದ್ದರೆ ‘ಪ್ರಸಂಗದ ಅಭ್ಯಾಸ’ ಈ ಪದ್ಧತಿಯ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು.

ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವ ಲಾಭ ದೀರ್ಘಕಾಲೀನ, ಅಂದರೆ ಜೀವನದುದ್ದಕ್ಕೂ ಇದೆ ಎಂದು ಗಮನದಲ್ಲಿಟ್ಟು ಇಂದಿನಿಂದಲೇ ಸಾಧನೆಯಲ್ಲಿನ ಅಡಚಣೆಗಳ ಬಗ್ಗೆ ಮಾರ್ಗದರ್ಶಕ ಸಂತರು, ಉನ್ನತ ಸಾಧಕರು, ಜವಾಬ್ದಾರ ಸಾಧಕರು, ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕರು, ಆಧ್ಯಾತ್ಮಿಕ ಮಿತ್ರ, ಸಮಷ್ಟಿ ಸಾಧನೆಯಲ್ಲಿನ ಸಹಸಾಧಕರು ಮೊದಲಾದವರೊಂದಿಗೆ ಮಾತನಾಡಲು ಆರಂಭಿಸಿ !

೯. ಮನಮುಕ್ತವಾಗಿ ಸ್ವೀಕರಿಸುವುದು

ಸಾಧನೆಯಲ್ಲಿ ಮನಮುಕ್ತವಾಗಿ ಮಾತನಾಡುವುದಕ್ಕೆ ಎಷ್ಟು ಮಹತ್ವವಿರುತ್ತದೆಯೋ, ಅಷ್ಟೇ ಮಹತ್ವ ಮನಮುಕ್ತವಾಗಿ ಸ್ವೀಕರಿಸುವುದಕ್ಕೂ ಇರುತ್ತದೆ. ಇತರರು ನೀಡಿದ ಸೂಚನೆ, ಗಮನಕ್ಕೆ ತಂದುಕೊಟ್ಟ ತಪ್ಪು, ಹೇಳಿದ ಸತ್ಸೇವೆ, ಹಾಗೆಯೇ ವ್ಯಷ್ಟಿ ಸಾಧನೆಯ ವರದಿಯಲ್ಲಿ ನೀಡಿದ ಸಾಧನೆಯ ದೃಷ್ಟಿಕೋನವನ್ನು ಮನಮುಕ್ತವಾಗಿ ಸ್ವೀಕರಿಸುವುದು ಮಹತ್ವದ್ದಾಗಿರುತ್ತದೆ. ಉದಾಹರಣೆಗೆ ಜವಾಬ್ದಾರ ಸಂತರು ಅಥವಾ ಸಾಧಕರೊಂದಿಗೆ ಸಾಧನೆಯ ಬಗ್ಗೆ ಮನಮುಕ್ತವಾಗಿ ಮಾತನಾಡಿದ ನಂತರ ಅವರು ಆ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಹೇಳುತ್ತಾರೆ. ಈ ಮಾರ್ಗದರ್ಶಕ ಅಂಶಗಳನ್ನು ಕೇಳಿದ ನಂತರ ತಕ್ಷಣ ಮನಸ್ಸಿನಲ್ಲಿ ವಿಚಾರಗಳು, ಸಂದೇಹಗಳು, ಅಡಚಣೆಗಳು ಉದ್ಭವಿಸಬಹುದು. ಈ ಬಗ್ಗೆ ಅವರಿಗೆ ಮತ್ತೊಮ್ಮೆ ಮನಮುಕ್ತವಾಗಿ ಕೇಳುವುದು ಮತ್ತು ಆ ಬಗ್ಗೆ ಮಾರ್ಗದರ್ಶನವನ್ನು ಪಡೆದ ನಂತರ ಅದನ್ನು ಸಂಪೂರ್ಣವಾಗಿ ಸ್ವೀಕರಿಸುವುದು ಅಪೇಕ್ಷಿತವಿರುತ್ತದೆ. ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು ಮತ್ತು ಸ್ವೀಕರಿಸುವುದು ಇವೆರಡೂ ಸಾಧ್ಯವಾಗತೊಡಗಿದರೆ ನಮ್ಮ ಆಧ್ಯಾತ್ಮಿಕ ಉನ್ನತಿಯಾಗತೊಡಗಿದೆ ಎಂದು ತಿಳಿಯಬೇಕು.

೯ ಅ. ಮನಮುಕ್ತವಾಗಿ ಸ್ವೀಕರಿಸುವುದು, ಈ ಅಂಶವನ್ನು ಹೆಚ್ಚಿಸಲು ಮಾಡಬೇಕಾದ ಕೆಲವು ಪ್ರಯತ್ನಗಳು

೧. ಇತರರು ನೀಡಿದ ಸೂಚನೆಯನ್ನು ಜಿಜ್ಞಾಸೆಯಿಂದ ಸ್ವೀಕರಿಸುವುದು ಮತ್ತು ಅವುಗಳ ಬಗ್ಗೆ ಮನಮುಕ್ತವಾಗಿ ಚರ್ಚಿಸುವುದು

೨. ಇತರರು ಗಮನಕ್ಕೆ ತಂದು ಕೊಟ್ಟ ತಪ್ಪುಗಳನ್ನು ಮನಃಪೂರ್ವಕ ಸ್ವೀಕರಿಸುವುದು ಮತ್ತು ಆ ಬಗ್ಗೆ ಕ್ಷಮಾಯಾಚನೆ ಮಾಡುವುದು

೩. ಹೇಳಲಾದ ಸೇವೆಯನ್ನು ಸ್ವಂತ ಇಷ್ಟಾನಿಷ್ಟಗಳನ್ನು ಕಾಪಾಡದೇ ಭಾವಪೂರ್ಣ ಮತ್ತು ಪರಿಪೂರ್ಣ ಮಾಡಲು ಪ್ರಯತ್ನಿಸುವುದು

೪. ಮಾರ್ಗದರ್ಶಕ ಸಂತರು, ಉನ್ನತ ಸಾಧಕರು, ಜವಾಬ್ದಾರ ಸಾಧಕರು, ವ್ಯಷ್ಟಿ ವರದಿಯನ್ನು ತೆಗೆದುಕೊಳ್ಳುವ ಸಾಧಕರು, ಆಧ್ಯಾತ್ಮಿಕ ಮಿತ್ರ, ಸಮಷ್ಟಿ ಸಾಧನೆಯಲ್ಲಿನ ಸಹಸಾಧಕರು ಇತ್ಯಾದಿ ನೀಡಿದ ಸಾಧನೆಯ ದೃಷ್ಟಿಕೋನಗಳನ್ನು ಸ್ವೀಕರಿಸುವುದು, ಹಾಗೆಯೇ ಅದರಲ್ಲಿರುವ ಸಂದೇಹಗಳನ್ನು ಮುನಮುಕ್ತವಾಗಿ ಕೇಳುವುದು

೧೦. ವ್ಯಷ್ಟಿ ಸಾಧನೆಯ ವಿಷಯದಲ್ಲಿ ಮನಮುಕ್ತತೆ ಬೇಕು, ಆದರೆ ಸಮಷ್ಟಿ ಸಾಧನೆಯ ವಿಷಯದಲ್ಲಿ ಮುಕ್ತತೆ ಬೇಕು !

ಸಾಧನೆಯ ವಿಷಯದಲ್ಲಿ ಮನಮುಕ್ತವಾಗಿ ಮಾತನಾಡುವುದು ಎಂದರೆ ಮನಸ್ಸಿನಲ್ಲಿನ ವಿಚಾರ, ಪ್ರಕ್ರಿಯೆಯ ಬಗ್ಗೆ ಸಾಧನೆಯಲ್ಲಿನ ಉನ್ನತ ಸಾಧಕರೊಂದಿಗೆ ಮಾತನಾಡುವುದಾಗಿರುತ್ತದೆ. ಸಮಷ್ಟಿ ಸಾಧನೆಯಲ್ಲಿ ಅಂತರ್ಮನಸ್ಸಿನ ಪ್ರಕ್ರಿಯೆಯನ್ನು ಹೇಳಬಾರದು; ಏಕೆಂದರೆ ಅಲ್ಲಿ ಧೋರಣಾತ್ಮಕ ಸಂವಾದವನ್ನು ಸಾಧಿಸಬೇಕಾಗಿರುತ್ತದೆ. ಈ ಸಂವಾದವನ್ನು ಸಾಧಿಸುವಾಗ ಮುಕ್ತತೆ ಇರಬೇಕು, ಅಂದರೆ ಇತರರೊಂದಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಮಾತನಾಡುವವರಾಗಿರಬೇಕು. ಈ ವಿಷಯದಲ್ಲಿ ಕೆಲವು ಅಂಶಗಳನ್ನು ನಾವು ತಿಳಿದುಕೊಳ್ಳೋಣ.

೧೦ ಅ. ಸತ್ಸಂಗದಲ್ಲಿ ತಿಳಿಯದ ಪ್ರಶ್ನೆಗೆ ಉತ್ತರ ನೀಡುವಾಗ ಮುಕ್ತತೆ ಬೇಕು !

ಸತ್ಸಂಗದಲ್ಲಿ ಕೇಳಿದ ಯಾವುದಾದರೊಂದು ಪ್ರಶ್ನೆಗೆ ಉತ್ತರ ಗೊತ್ತಿರದಿದ್ದರೆ ಸತ್ಸಂಗ ಸೇವಕನಿಗೆ ನನಗೆ ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲವೆಂದು ಸತ್ಸಂಗದಲ್ಲಿ ಮುಕ್ತತೆಯಿಂದ ಹೇಳಲು ಸಾಧ್ಯವಾಗಬೇಕು. ನಾನು ಈ ಬಗ್ಗೆ ಅಧ್ಯಯನ ಮಾಡಿ ಅಥವಾ ಉನ್ನತ ಸಾಧಕರನ್ನು ಕೇಳಿ ಮುಂದಿನ ಸತ್ಸಂಗದಲ್ಲಿ ಉತ್ತರವನ್ನು ನೀಡುವೆನು ಎಂದು ಹೇಳಬೇಕು.

೧೦ ಆ. ಹಿಂದುತ್ವವಾದಿಗಳೊಂದಿಗೆ ಮಾತನಾಡುವಾಗ ಮುಕ್ತತೆ ಬೇಕು !

ಕೆಲವು ಸಾಧಕರು ಸಮವಿಚಾರಿ ಸಂಘಟನೆಗಳ ಪದಾಧಿಕಾರಿ, ಹಿಂದುತ್ವವಾದಿ ಇವರೆಲ್ಲರೊಂದಿಗೆ ಮುಕ್ತತೆಯಿಂದ ಮಾತನಾಡುವುದಿಲ್ಲ. ಈ ಬಗ್ಗೆ ಅಧ್ಯಯನ ಮಾಡಿದಾಗ ಸಾಧಕರ ಮನಸ್ಸಿನಲ್ಲಿ ಸಂಬಂಧಿತ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿತ್ತು ಎಂದು ಗಮನಕ್ಕೆ ಬಂತು. ಪೂರ್ವಗ್ರಹವಿದ್ದರೆ ಮುಕ್ತತೆಯಿಂದ ಮಾತನಾಡಲಾಗುವುದಿಲ್ಲ. ಸಮವಿಚಾರಿ ಸಂಘಟನೆಗಳೊಂದಿಗೆ ಭವಿಷ್ಯದಲ್ಲಿ ಒಂದಿಲ್ಲೊಂದು ದಿನ ಸೇರಿ ಕಾರ್ಯ ಮಾಡುವ ಪ್ರಸಂಗ ಬರಲಿದೆ ಎಂದು ಈ ಪೂರ್ವಗ್ರಹವನ್ನು ತ್ಯಜಿಸಬೇಕು.

೧೦ ಇ. ಮುಕ್ತತೆಯಿಂದ ಮಾತನಾಡಲು ಸಂಘಟನೆಯ ಶ್ರೇಷ್ಠತೆಯ ಅಹಂಕಾರ ಬೇಡ !

ಕೆಲವು ಸಾಧಕರ ಮನಸ್ಸಿನಲ್ಲಿ ‘ನಮ್ಮ ಸಂಘಟನೆ ಶ್ರೇಷ್ಠವಿದ್ದು ಬೇರೆ ಸಂಘಟನೆ ಸಾಮಾನ್ಯವಾಗಿದೆ ಅಥವಾ ಭಾವನೆಯ ಸ್ತರದಲ್ಲಿ ಕಾರ್ಯ ಮಾಡುವುದಾಗಿದೆ’ ಎಂಬ ಅಹಂಕಾರದ ವಿಚಾರವಿರುತ್ತದೆ. ಸಮಷ್ಟಿಕಾರ್ಯವನ್ನು ಮಾಡುವಾಗ ಎಲ್ಲ ವಿಧಗಳ ಸ್ವಭಾವವಿರುವ ಸಂಘಟನೆಗಳೊಂದಿಗೆ ಸಂಪರ್ಕ ಬರುತ್ತದೆ ಆಗ ಸಂಘಟನೆಗೆ ಸಂಬಂಧಿಸಿದ ಅಹಂಕಾರವನ್ನು ಬದಿಗಿಟ್ಟು ಎಲ್ಲರೊಂದಿಗೆ ಸ್ನೇಹವನ್ನಿಟ್ಟುಕೊಳ್ಳುವ ದೃಷ್ಟಿಯಿಂದ ಸಂವಾದವನ್ನು ನಡೆಸಬೇಕು.

೧೦ ಈ. ನಮ್ಮ ಕ್ಷಮತೆಗಿಂತ ಬುದ್ಧಿವಂತವಾಗಿರುವ ಸಮಾಜದೊಂದಿಗೆ ಸಂವಾದವನ್ನು ಸಾಧಿಸುವಾಗ ಮುಕ್ತತೆ ಇಲ್ಲದಿರುವುದು

ಈ ಅಡಚಣೆಯನ್ನು ಅನೇಕ ಸ್ಥಳಗಳ ಸಾಧಕರು ಹೇಳಿದ್ದಾರೆ. ನಾವು ಸಮಾಜದಲ್ಲಿ ‘ಅಧ್ಯಾತ್ಮ-ಸಾಧನೆ’ ಮತ್ತು ‘ಹಿಂದೂ ರಾಷ್ಟ್ರ’ ಹೀಗೆ ಎರಡು ವಿಷಯಗಳನ್ನು ತೆಗೆದುಕೊಂಡು ಹೋಗುತ್ತಿರುತ್ತೇವೆ. ನಮ್ಮಲ್ಲಿ ಈ ವಿಷಯಗಳ ಗ್ರಂಥಗಳಿರುವುದರಿಂದ ಈ ಬಗ್ಗೆ ನಮ್ಮ ಅಧ್ಯಯನ ಚೆನ್ನಾಗಿರುತ್ತದೆ. ಸಂಕ್ಷಿಪ್ತವಾಗಿ ನಮ್ಮ ಗುರುಗಳು ನೀಡಿರುವ ವಿಷಯಗಳ ಜ್ಞಾನವು ನಮ್ಮ ಬಳಿ ಇರುತ್ತದೆ. ಸಮಾಜದಲ್ಲಿನ ಬುದ್ಧಿವಂತ ಸಮಾಜವು ತನ್ನ ಕ್ಷೇತ್ರದೊಂದಿಗೆ ಸಂಬಂಧಿಸಿದ ವಿಷಯದಲ್ಲಿ ತಜ್ಞವಿರುತ್ತದೆ. ಸಾಧಕನು ಅವರೊಂದಿಗೆ ‘ಅಧ್ಯಾತ್ಮ-ಸಾಧನೆ’ ಮತ್ತು ‘ಹಿಂದೂ ರಾಷ್ಟ್ರ’ ಈ ಎರಡು ವಿಷಯಗಳನ್ನು ಪ್ರಾಧಾನ್ಯತೆಯಿಂದ ಹೇಳಬೇಕಾಗಿರುವುದರಿಂದ ಈ ವಿಷಯಗಳ ಅಧ್ಯಯನ ಮಾಡಿ ಹೋಗುವುದು ಮತ್ತು ಮುಕ್ತವಾಗಿ ಅವರೊಂದಿಗೆ ಸಂವಾದ ಸಾಧಿಸುವುದು ಅಪೇಕ್ಷಿತವಿರುತ್ತದೆ.

೧೦ ಉ. ಕುಟುಂಬ, ಕಾರ್ಯಾಲಯ ಮತ್ತು ಸಮಾಜ ಹೀಗೆ ಎಲ್ಲ ಸ್ಥಳಗಳಲ್ಲಿ ಮುಕ್ತತೆ ಬೇಕು !

ವೈಯಕ್ತಿಕ ಜೀವನ, ವ್ಯವಹಾರ, ಸಂಬಂಧಿಕರು ಅಥವಾ ಸಹೋದ್ಯೋಗಿಗಳೊಂದಿಗೆ ನಾವಾಗಿಯೇ ಮಾತನಾಡಲು ಪ್ರಯತ್ನಿಸಬೇಕು. ಈ ಮುಕ್ತತೆ ನಮ್ಮ ಸಮಷ್ಟಿ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ. ಮುಕ್ತ ಸಂವಾದವಿದ್ದರೆ ಕುಟುಂಬಗಳಲ್ಲಿಯೂ ಜಗಳ-ರಗಳೆಗಳಾಗದೇ ಸಂವಾದವಾಗುತ್ತದೆ.

– ಶ್ರೀ. ಚೇತನ ರಾಜಹಂಸ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸನಾತನ ಆಶ್ರಮ, ರಾಮನಾಥಿ, ಗೋವಾ.

Leave a Comment