ಸಾಧನಾವೃದ್ಧಿ ಸತ್ಸಂಗ (9)

ಶಿಷ್ಯನ ಗುಣಗಳು ಹಾಗೂ ಗುರು-ಶಿಷ್ಯ ಪರಂಪರೆಯ ಧರ್ಮಸಂಸ್ಥಾಪನೆಯ ಕಾರ್ಯ

ನಾವು ಕಳೆದ ಲೇಖನದಲ್ಲಿ ಜೀವನದಲ್ಲಿ ಗುರುಗಳ ಮಹತ್ವ, ಗುರುಕೃಪಾಯೋಗದ ಶ್ರೇಷ್ಠತ್ವ, ಗುರುಕೃಪೆಯು ಹೇಗೆ ಕಾರ್ಯ ಮಾಡುತ್ತದೆ, ಹಾಗೂ ಅಖಂಡವಾಗಿ ಗುರುಕೃಪೆಯಾಗಬೇಕಾದರೆ ಏನು ಮಾಡುವುದು ಅಪೇಕ್ಷಿತವಿದೆ ಎಂದು ಅರಿತುಕೊಂಡಿದ್ದೆವು. ಈಗ ನಾವು ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಗುರು-ಶಿಷ್ಯ ಪರಂಪರೆಯ ಯೋಗದಾನ, ಹಾಗೂ ಆದರ್ಶ ಶಿಷ್ಯನ ಗುಣಗಳು ಈ ವಿಷಯವನ್ನು ತಿಳಿದುಕೊಳ್ಳೋಣ. ಗುರುಗಳ ಮಹಾತ್ಮೆಯು ಸರ್ವಶ್ರೇಷ್ಠವಾಗಿದೆ; ಆದರೆ ನಮ್ಮ ದೃಷ್ಟಿಯಿಂದ ಸಾಧನೆಯೆಂದು ಶಿಷ್ಯನಾಗಲು ಪ್ರಯತ್ನಿಸುವುದು ಹೆಚ್ಚು ಮಹತ್ವದ್ದಾಗಿದೆ. ನಾವಾಗಿ ನಮಗೆ ಬೇಕಾದ ಗುರುಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ, ಬದಲಾಗಿ ಶ್ರೀಗುರುಗಳೇ ನಮ್ಮನ್ನು ಶಿಷ್ಯನೆಂದು ಸ್ವೀಕರಿಸಬೇಕು ಎಂದು ನಾವು ಶಿಷ್ಯರಾಗಲು ಪ್ರಯತ್ನಿಸಬೇಕಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಶಿಷ್ಯನಾಗಬೇಕಾದರೆ ನಾವು ಯಾವ್ಯಾವ ಗುಣಗಳನ್ನು ನಮ್ಮಲ್ಲಿ ಅಂಗೀಕರಿಸಬೇಕು ಎಂದು ನಾವು ಈಗ ತಿಳಿದುಕೊಳ್ಳುವವರಿದ್ದೇವೆ.

ಶಿಷ್ಯನ ಗುಣಗಳು

ಅ. ಶ್ರದ್ಧೆ

ಶಿಷ್ಯನಲ್ಲಿ ಅನೇಕ ಸದ್ಗುಣಗಳಿರುತ್ತವೆ; ಯಾವಾಗ ಸಾಧಕನಲ್ಲಿರುವ ಸ್ವಭಾವದೋಷ ಮತ್ತು ಅಹಂಕಾರಗಳು ಕಡಿಮೆಯಾಗಿ ಗುಣಗಳ ಸಂವರ್ಧನೆಯಾಗುತ್ತದೆಯೋ ಆಗಲೇ ಅವನು ಶಿಷ್ಯನಾಗುತ್ತಾನೆ. ನಮ್ರತೆ, ಸೇವಾಭಾವ, ಗುರುಕಾರ್ಯದ ತಳಮಳ, ತತ್ಪರತೆ, ಜಿಗುಟುತನ, ಸಕಾರಾತ್ಮಕತೆ, ಮುಂತಾದ ಅನೇಕ ಗುಣಗಳ ಆವಿಷ್ಕರಣ ನಿಜವಾದ ಶಿಷ್ಯನ ವರ್ತನೆಯಲ್ಲಿ ನೋಡಲು ಸಿಗುತ್ತದೆ. ಈ ಸದ್ಗುಣಗಳಲ್ಲಿ ಮಹತ್ವದ ಗುಣವೆಂದರೆ – ಶ್ರದ್ಧೆ! ಶಿಷ್ಯನಲ್ಲಿ ಗುರುಗಳ ಬಗ್ಗೆ ವಿಶ್ವಾಸ, ಶ್ರದ್ಧೆ ಮತ್ತು ಭಾವ-ಭಕ್ತಿಯಿರಬೇಕು. ಶ್ರೀಗುರುಗಳು ನಮಗೇನೆಲ್ಲವನ್ನು ಹೇಳುತ್ತಾರೆಯೋ ಅದು ನಮ್ಮ ಒಳಿತಿಗಾಗಿಯೇ ಇರುತ್ತದೆ, ಎಂಬ ದೃಢವಾದ ಅರಿವಿರುವುದು ಎಂದರೆ ವಿಶ್ವಾಸ! ಶ್ರದ್ಧೆ ಎಂದರೇನು? ಶ್ರದ್ಧೆ ಎಂದರೆ ನಮ್ಮ ಜೀವನದಲ್ಲಿ ಏನೆಲ್ಲ ಘಟಿಸುತ್ತದೆಯೋ ಅದೆಲ್ಲವೂ ಒಳಿತಿಗಾಗಿಯೇ ಎಂದು ಒಪ್ಪಿಕೊಳ್ಳುವುದು. ಯಾವುದಾದರೊಂದು ಒಳ್ಳೆಯ ವಿಷಯ ನಡೆದರೆ ಅದು ಗುರುಗಳ ಕೃಪೆ ಮತ್ತು ಅಪ್ರಿಯವಾದುದೇನಾದರೂ ನಡೆದಲ್ಲಿ ಶ್ರೀಗುರುಗಳು ನನಗೆ ಅದರಿಂದ ಏನೋ ಕಲಿಸುವವರಿದ್ದಾರೆ ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಎಂದರೆ ಶ್ರದ್ಧೆ. ಅಧ್ಯಾತ್ಮದಲ್ಲಿ ಶ್ರದ್ಧೆಯೇ ಚಲಾವಣೆಯ ನಾಣ್ಯವಾಗಿದೆ.

೧. ಶ್ರದ್ಧೆಯು ಹೇಗಿರಬೇಕು, ಇದರ ಉಚ್ಚ ಆದರ್ಶಗಳು ಇತಿಹಾಸದಲ್ಲಿ ನೋಡಲು ಸಿಗುತ್ತವೆ. ಇಂತಹ ಒಂದು ಪ್ರಸಂಗ ಹೀಗಿದೆ – ಮಹಾರಾಷ್ಟ್ರದಲ್ಲಿ ಸಮರ್ಥ ರಾಮದಾಸ ಸ್ವಾಮಿ ಎಂಬ ಹೆಸರಿನ ಶ್ರೇಷ್ಠ ಸಂತರೊಬ್ಬರಿದ್ದರು. ಅವರಿಗೆ ಅಂಬಾದಾಸನೆಂಬ ಹೆಸರಿನ ಶಿಷ್ಯನೊಬ್ಬನಿದ್ದನು. ಒಂದು ಸಲ ಸಮರ್ಥ ರಾಮದಾಸ ಸ್ವಾಮಿಗಳು ಅಂಬಾದಾಸನಿಗೆ ಬಾವಿಯ ಬದಿಯಲ್ಲಿದ್ದ ಒಂದು ಮರದ ತುದಿಯಲ್ಲಿ ಕುಳಿತು ಆ ಗೆಲ್ಲನ್ನು ಕಡಿಯಲು ಹೇಳಿದರು. ಗುರುಗಳಲ್ಲಿ ಪೂರ್ಣ ಶ್ರದ್ಧೆಯಿದ್ದ ಕಾರಣ ಅಂಬಾದಾಸರು ಗೆಲ್ಲನ್ನು ಕಡಿಯಲು ಪ್ರಾರಂಭಿಸಿದರು. ಗೆಲ್ಲನ್ನು ಕಡಿದಾಗ ಏನಾಗಬೇಕಿತ್ತೋ ಅದೇ ನಡೆಯಿತು! ಅಂಬಾದಾಸರು ಬಾವಿಯೊಳಗೆ ಬಿದ್ದರು. ೩ ದಿನಗಳ ನಂತರ ಸಮರ್ಥರು ಅವನಲ್ಲಿ, ಹೇಗಿದ್ದಿ? ಎಂದು ವಿಚಾರಿಸಿದರು. ಆಗ ಅಂಬಾದಾಸನು, ತಮ್ಮ ಕೃಪೆಯಿಂದ ಚೆನ್ನಾಗಿದ್ದೇನೆ’ ಎಂದುತ್ತರಿಸಿದನು. ಅನಂತರ ಸಮರ್ಥರು ಅವರನ್ನು ಬಾವಿಯಿಂದ ಹೊರಗೆ ತೆಗೆದರು ಮತ್ತು ಅವನ ಹೆಸರನ್ನು ಕಲ್ಯಾಣ ಎಂದು ನಾಮಕರಣ ಮಾಡಿದರು. ಗೆಲ್ಲಿನ ತುದಿಯಲ್ಲಿ ಕುಳಿತು ಅದನ್ನು ಕಡಿದರೆ ಬಾವಿಯೊಳಗೆ ಬೀಳುತ್ತೇನೆ ಎಂದು ಅಂಬಾದಾಸನಿಗೂ ಗೊತ್ತಿತ್ತು. ಆದರೂ ಗುರುಗಳಲ್ಲಿ ಪೂರ್ಣ ಶ್ರದ್ಧೆಯನ್ನಿರಿಸಿ ಗುರುಗಳ ಆಜ್ಞೆಯನ್ನು ಪಾಲಿಸಿದರು ಮತ್ತು ಬಾವಿಯಲ್ಲಿ ಬಿದ್ದ ನಂತರ ಅಂಬಾದಾಸರಿಗೆ ಸಾಕ್ಷಾತ್ ಶ್ರೀರಾಮರಾಯರ ದರ್ಶನವಾಯಿತು; ಇದುವೇ ಶ್ರದ್ಧೆ! ಗುರುವಚನವು ಬ್ರಹ್ಮವಾಕ್ಯವಾಗಿದೆ. ಗುರುಗಳು ನಮಗೆ ಯಾವತ್ತೂ ಅಹಿತವನ್ನು ಮಾಡಲಾರರು! ಇದನ್ನು ಅರಿತು ಅವರು ಹೇಳಿದುದನ್ನು ಶ್ರದ್ಧೆಯಿಂದ ಮಾಡುವುದರಲ್ಲಿಯೇ ನಮ್ಮ ಕಲ್ಯಾಣವಿರುತ್ತದೆ.

೨. ಶ್ರದ್ಧೆ ಹೆಚ್ಚಿಸಲು ಮಾಡಬೇಕಾಗಿರುವ ಪ್ರಯತ್ನ : ನಾವು ಕೂಡ ಶ್ರೀ ಗುರುಗಳ ಮೇಲೆ ದೃಢ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ನಮಗೆ ಅದನ್ನು ಹೆಚ್ಚಿಸ ಬೇಕಾಗಿದೆ. ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಬೇಕಾದರೆ ಘಟಿಸುವಂತಹ ಪ್ರತಿಯೊಂದು ಪ್ರಸಂಗವೂ ಶ್ರೀಗುರುಗಳ ಪ್ರಸಾದವಾಗಿದೆ, ಎಂದು ಅದನ್ನು ಸ್ವೀಕರಿಸುವುದು, ಅದರಿಂದ ಕಲಿತುಕೊಳ್ಳುವುದು ಹಾಗೂ ನಾಮದೊಂದಿಗೆ ಸಂಪೂರ್ಣ ಅನುಸಂಧಾನವಿಟ್ಟುಕೊಳ್ಳುವುದು, ಈ ರೀತಿಯಲ್ಲಿ ಪ್ರಯತ್ನಿಸೋಣ. ಶ್ರದ್ಧೆಯನ್ನು ಹೆಚ್ಚಿಸಲು ದೇವರಿಗೆ ‘ಹೇ ಭಗವಂತಾ, ಈ ಮೋಹಮಾಯೆಯಲ್ಲಿ ಈಗ ನನಗೆ ಸಿಲುಕಿಕೊಳ್ಳಲಿಕ್ಕಿಲ್ಲ, ನನಗೆ ನಿನ್ನ ಮೇಲೆ ದೃಢ ಶ್ರದ್ಧೆಯು ಮೂಡಲಿ. ನನ್ನಲ್ಲಿ ಈಶ್ವರಪ್ರಾಪ್ತಿಯ ಹಂಬಲ ತಗಲಲಿ. ನಾವು ಎಷ್ಟು ಶ್ರದ್ಧೆಯಿಂದ ಗುರುಗಳ ಸಂಕೀರ್ತನೆ ಮಾಡುವೆವೋ, ಎಷ್ಟು ಸಾಧನೆ ಮಾಡುವೆವೋ, ಎಷ್ಟು ಸತ್ಸಂಗದಲ್ಲಿರುತ್ತೇವೆಯೋ ಅಷ್ಟು ಶ್ರದ್ಧೆಯು ದೃಢವಾಗುತ್ತಾ ಹೋಗುತ್ತದೆ.

ಆ. ಸತತವಾಗಿ ಕಲಿಯುತ್ತಿರುವುದು

ಶಿಷ್ಯನ ಮತ್ತೊಂದು ಮಹತ್ವವಾದ ಗುಣವೆಂದರೆ ಸತತವಾಗಿ ಕಲಿಯುತ್ತಿರುವುದು ! ಕಲಿಯುವುದು ಅಂದರೆ ಶೈಕ್ಷಣಿಕ ಅಭ್ಯಾಸಕ್ರಮ (ವಿದ್ಯಾಭ್ಯಾಸ) ಎಂಬ ಅರ್ಥವಲ್ಲ; ಬದಲಾಗಿ ಯಾವುದಾದರೂ ಒಂದು ಪ್ರಸಂಗದಿಂದ ದೇವರು ನಮಗೆ ಏನನ್ನು ಕಲಿಸಿಕೊಡಲಿದ್ದಾರೆ ಎಂಬುದನ್ನು ಶೋಧಿಸುವುದು ಹಾಗೂ ಅಂಗೀಕರಿಸುವುದು ! ಕಲಿಯುವುದರಲ್ಲಿ ಆನಂದವಿದೆ. ನಾವೆಲ್ಲರೂ ಕೂಡ ಅದನ್ನು ಅನುಭವಿಸಿದ್ದೇವೆ. ಯಾವುದಾದರೂ ಒಂದು ಹೊಸ ವಿಷಯವನ್ನು ಕಲಿತುಕೊಂಡಾಗ ಅದರಿಂದ ನಮಗೆ ಆನಂದ ಸಿಗುತ್ತದೆ ಅಲ್ಲವೇ ! ಆದರೆ ನಾವು ದೊಡ್ಡವರಾಗುತ್ತಿದ್ದಂತೆ ನಮ್ಮ ಕಲಿತುಕೊಳ್ಳುವ ವೃತ್ತಿ ಕಡಿಮೆಯಾಗುತ್ತದೆ. ನಾವು ಒಳ್ಳೆಯ ವ್ಯಕ್ತಿಯಾಗಬೇಕೆಂದರೆ ನಾವು ಯಾವಗಲೂ ಕಲಿಯುವ ಸ್ಥಿತಿಯಲ್ಲಿರಬೇಕು.

ಶಿಷ್ಯಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ : ಇಂದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಪರಾತ್ಪರ ಗುರುಪದವಿಯಲ್ಲಿದ್ದಾರೆ; ಆದರೆ ಅವರು ಯಾವಾಗಲೂ ಶಿಷ್ಯಭಾವದಲ್ಲಿಯೇ ಇರುತ್ತಾರೆ. ಉದಾ. ಅವರ ಬಳಿ ಯಾವಾಗಲೂ ಪುಸ್ತಕ-ಪೆನ್ ಇರುತ್ತದೆ. ಯಾರನ್ನಾದರೂ ಭೇಟಿಯಾಗಲು ಹೋದಾಗ ಅವರಿಗೆ ಹೊಸತೇನಾದರೂ ತಿಳಿದರೆ ಆ ಅಂಶಗಳನ್ನು ಅವರು ಬರೆದಿಡುತ್ತಾರೆ. ಮಾತ್ರವಲ್ಲ ಅವರು ಮಲಗುವಾಗ ಸಹ ಅವರ ದಿಂಬಿನ ಬಳಿ ಸಣ್ಣ ಪುಸ್ತಕ-ಪೆನ್ ಇರುತ್ತದೆ, ಒಂದು ವೇಳೆ ರಾತ್ರಿ ಮಲಗಿದಾಗ ಅವರಿಗೇನಾದರೂ ಒಳ್ಳೆಯ ಅಂಶವೇನಾರೂ ಗಮನಕ್ಕೆ ಬಂದರೆ ಅದನ್ನು ತಕ್ಷಣ ಬರೆದಿಡಬೇಕೆಂಬುದು ಅದರ ಹಿಂದಿನ ವಿಚಾರವಿರುತ್ತದೆ. ಯಾವುದಾದರೂ ವಾರ್ತಾಪತ್ರಿಕೆ ಅಥವಾ ನಿಯತಕಾಲಿಕೆಯನ್ನು ಓದುವಾಗ ಕೈಯ್ಯಲ್ಲಿ ಪೆನ್ಸಿಲ್ ತೆಗೆದುಕೊಂಡು ಅದರಲ್ಲಿ ಮಹತ್ವದ್ದಾಗಿರುವ ಲೇಖನವನ್ನು ಗುರುತು ಹಾಕಿಟ್ಟುಕೊಂಡು ಅದರ ವರ್ಗೀಕರಣ ಮಾಡುತ್ತಾರೆ. ಅವರು ತಮ್ಮ ಸೇವೆಯನ್ನು ಬೇರೆ ಸಾಧಕರಿಗೆ ಮಾಡಲು ಬಿಡುವುದಿಲ್ಲ. ಅವರಿಗೆ ಎಷ್ಟು ಸಾಧ್ಯವಿದೆಯೋ ಅದೆಲ್ಲವನ್ನೂ ಅವರು ಸ್ವತಃ ಮಾಡುತ್ತಾರೆ. ನಮಗೆ ಶಿಷ್ಯನಾಗಬೇಕೆಂದಾದರೆ ನಾವು ಸತತವಾಗಿ ಕಲಿಯುವ ಸ್ಥಿತಿಯಲ್ಲಿರಬೇಕು. ಎಷ್ಟೋ ಸಲ ಯಾವುದಾದರೂ ಒಂದು ಅಪ್ರಿಯ ಘಟನೆ ಘಟಿಸಿದಾಗ ನಮ್ಮ ಮನಸ್ಸು ಅದರಲ್ಲಿ ಸಿಲುಕಿಕೊಳ್ಳುತ್ತದೆ. ಒಂದು ವೇಳೆ ನಮ್ಮಿಂದ ಏನಾದರೂ ತಪ್ಪಾದರೆ ಆಗ ನಮಗೆ ಅದರಿಂದ ಒತ್ತಡವಾಗುತ್ತದೆ; ಆದರೆ ದೇವರಿಗೆ ಏನು ಅಪೇಕ್ಷಿತವಿದೆ ಎಂದರೆ ಅದರಿಂದ ಕಲಿಯುವುದು ಹಾಗೂ ಮುಂದೆ ಹೋಗುವುದು ! ಆದ್ದರಿಂದ ನಾವು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರೋಣ.

ಇ. ಆಜ್ಞಾಪಾಲನೆ

ಶಿಷ್ಯನ ದೃಷ್ಟಿಯಿಂದ ಎಲ್ಲದ್ದಕ್ಕಿಂತ ಮಹತ್ವವಾದ ಗುಣವೆಂದರೆ ಆಜ್ಞಾಪಾಲನೆ ! ಗುರುವಾಜ್ಞಾಪಾಲನೆಯು ಎಲ್ಲಾ ಗುಣಗಳ ರಾಜನಾಗಿದೆ ಎಂದು ಹೇಳಲಾಗುತ್ತದೆ. ಗುರುವಾಜ್ಞಾಪಾಲನೆಯಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಯೋಗಮಾರ್ಗದಲ್ಲಿ ದೀರ್ಘಕಾಲ ಮಾಡಿದ ಕಠಿಣ ತಪಶ್ಚರ್ಯೆಯ ನಂತರವೇ ಕುಂಡಲಿನಿಯಲ್ಲಿನ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ ಹಾಗೂ ವಿಶುದ್ಧ ಚಕ್ರಗಳ ಭೇದಿಸಿದ ಬಳಿಕ ಆಜ್ಞಾಚಕ್ರದ ಭೇದವಾಗುತ್ತದೆ, ಆದರೆ ಗುರುವಾಜ್ಞಾಪಾಲನೆಯಿಂದ ಒಂದೇ ಬಾರಿ ಆಜ್ಞಾಚಕ್ರದ ಭೇದವಾಗುತ್ತದೆ; ಅಂದರೆ ಆಜ್ಞಾಚಕ್ರವು ಜಾಗೃತವಾಗುತ್ತದೆ. ಆದ್ದರಿಂದ ಶೀಘ್ರ ಪ್ರಗತಿಯಾಗುತ್ತದೆ. ಕೆಲವೊಮ್ಮೆ ಗುರುಗಳು ನೀಡಿದ ಆಜ್ಞೆಯ ಹಿಂದಿನ ಕಾರಣವು ಶಿಷ್ಯನ ಗಮನಕ್ಕೆ ಬರುವುದಿಲ್ಲ; ಆದರೆ ನಿಜವಾದ ಶಿಷ್ಯನು ವಿಕಲ್ಪರಹಿತನಾಗಿ ಗುರುವಾಜ್ಞೆಯನ್ನು ಪಾಲಿಸುತ್ತಾನೆ; ಏಕೆಂದರೆ ಗುರುಗಳು ಎಂದಿಗೂ ಅಹಿತವನ್ನು ಮಾಡುವುದಿಲ್ಲ ಎಂಬುದರ ಖಾತ್ರಿ ಅವನಿಗಿರುತ್ತದೆ. ಆಜ್ಞಾಪಾಲನೆಯಿಂದಾಗುವ ಅತ್ಯಂತ ದೊಡ್ಡ ಲಾಭವೇನೆಂದರೆ ಗುರುಗಳು ಹೇಳಿದ್ದನ್ನು ಮಾಡಿದ್ದರಿಂದ ಮನಸ್ಸು, ಬುದ್ಧಿ ಹಾಗೂ ಅಹಂಕಾರವು ನಾಶವಾಗುತ್ತದೆ. ಅಧ್ಯಾತ್ಮದಲ್ಲಿ ಅಂತಿಮವಾಗಿ ಮನೋಲಯ ಹಾಗೂ ಬುದ್ಧಿಲಯ ಮಾಡಲಿಕ್ಕಿರುತ್ತದೆ.

೧. ಗುರುವಾಜ್ಞಾಪಾಲನೆಯಿಂದ ಮನೋಲಯವಾಗುವುದು : ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಉದಾಹರಣೆಯನ್ನು ನೋಡೋಣ. ಪ.ಪೂ. ಡಾಕ್ಟರರಿಗೆ ಪ.ಪೂ. ಭಕ್ತರಾಜ ಮಹಾರಾಜರು ಗುರುವಾಗಿ ಸಿಕ್ಕಿದ ನಂತರ ಅವರು ಸಂಪೂರ್ಣವಾಗಿ ಗುರುಗಳ ಸೇವೆಯನ್ನು ಅತ್ಯಂತ ತಲ್ಲೀನರಾಗಿ ಮಾಡಿದರು. ಒಮ್ಮೆ ಪ.ಪೂ. ಭಕ್ತರಾಜ ಮಹಾರಾಜರು ಅಂದರೆ ಬಾಬಾರವರು ಕೋಣೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಆಗ ಚಳಿಗಾಲವಿತ್ತು. ಪ.ಪೂ. ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರಿಗೆ ಚಳಿಯಾಗುವುದು ಬೇಡ ಎಂದು ಪಂಖ ಆರಿಸಿ ಆ ಕೋಣೆಯ ಹೊರಗಿದ್ದರು. ಅಷ್ಟರಲ್ಲಿ ಪ.ಪೂ.ಭಕ್ತರಾಜ ಮಹಾರಾಜರು ಅಂದರೆ ಬಾಬಾರವರು ಪ.ಪೂ. ಡಾಕ್ಟರರನ್ನು ಕರೆದು ಅವರನ್ನು ‘ಪಂಖ ಏಕೆ ಆರಿಸಿದೆ? ನೀನೇನಾದರೂ ವಿದ್ಯುತ್ ಬಿಲ್ ಕಟ್ಟಬೇಕಾಗಿದೆಯೇ’ ಎಂದು ಬೈದರು. ಬಾಬಾರವರು ಬೈದದ್ದರಿಂದ ಪ.ಪೂ.ಡಾಕ್ಟರ್‌ರವರು ಕೋಣೆಯಲ್ಲಿ ಪಂಖ ಪ್ರಾರಂಭಿಸಿ ಕೊಣೆಯ ಹೊರಗೆ ನಿಂತರು. ಆಗ ಬಾಬಾರವರು ಮತ್ತೆ ಪ.ಪೂ. ಡಾಕ್ಟರರನ್ನು ಕರೆದು ‘ಇಷ್ಟು ಚಳಿಯಲ್ಲಿ ಪಂಖ ಏಕೆ ಹಾಕಿದೆ ! ನನ್ನ ಮೇಲೆ ನಿಮ್ಮ ಗಮನವಿದೆಯೋ ಇಲ್ಲವೋ’ ಎಂದು ಮತ್ತೆ ಬೈದರು! ಪ.ಪೂ. ಡಾಕ್ಟರ್‌ರವರು ಮತ್ತೆ ಆ ಪಂಖ ಆರಿಸಿದರು. ಪಂಖ ಪ್ರಾರಂಭಿಸಲು ಹೇಳಿದಾಗ ಹಾಗೂ ತಕ್ಷಣ ಆರಿಸಲು ಹೇಳಿದರೂ ಕೂಡ ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಯಾವುದೇ ರೀತಿಯ ವಿಕಲ್ಪ ಬರಲಿಲ್ಲ; ಏಕೆಂದರೆ ಗುರುಗಳು ಆ ಮಾಧ್ಯಮದಿಂದ ಮನೋಲಯ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ತಿಳಿದಿತ್ತು. ಯಾವಾಗ ನಮ್ಮ ಮನೋಲಯ ಹಾಗೂ ಬುದ್ಧಿಲಯವಾಗುತ್ತದೋ, ಆಗ ವಿಶ್ವಮನಸ್ಸು ಹಾಗೂ ವಿಶ್ವಬುದ್ಧಿಯ ವಿಚಾರಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ.

೨. ನಮ್ಮ ದೃಷ್ಟಿಯಲ್ಲಿ ಗುರುವಾಜ್ಞಾಪಾಲನೆ : ಈಗ ನಮ್ಮ ದೃಷ್ಟಿಯಿಂದ ಗುರುವಾಜ್ಞಾಪಾಲನೆಯನ್ನು ಹೇಗೆ ಮಾಡಬೇಕು? ಈಗಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಜೀವನದಲ್ಲಿಯೂ ದೇಹಧಾರಿ ಗುರುಗಳು ಬರುತ್ತಾರೆ ಅಥವಾ ನಮಗೆ ಅವರ ಸತ್ಸಂಗ ಸಿಗುತ್ತದೆ, ಹಾಗೂ ಅವರು ನಮಗೋಸ್ಕರ ಏನಾದರೂ ಹೇಳುತ್ತಾರೆ ಹಾಗೂ ನಾವು ಅವರ ಆಜ್ಞೆ ಪಾಲಿಸುತ್ತೇವೆ ಎಂಬುದಷ್ಟೇ ಅಪೇಕ್ಷಿತವಲ್ಲ. ನಾವು ಆಗಲೇ ಗುರು ಎಂಬುದು ಒಂದು ವ್ಯಾಪಕ ಪರಿಕಲ್ಪನೆಯಾಗಿದ್ದು ಅದು ತತ್ತ್ವಸ್ವರೂಪದಲ್ಲಿ ನಿರಂತರವಾಗಿ ನಮ್ಮೊಂದಿಗೆ ಇರುತ್ತದೆ ಎಂದು ತಿಳಿದುಕೊಂಡಿದ್ದೇವೆ. ತತ್ತ್ವಸ್ವರೂಪದಲ್ಲಿ ಗುರುಗಳು ಈಗಾಗಲೇ ನಮ್ಮ ಜೀವನದಲ್ಲಿ ಬಂದಿದ್ದಾರೆ. ಈ ಸತ್ಸಂಗದಲ್ಲಿ ಕೂಡ ಗುರುತತ್ತ್ವವು ಕಾರ್ಯನಿರತವಾಗಿದೆ. ಆದ್ದರಿಂದ ಈ ಸತ್ಸಂಗದಲ್ಲಿ ಸಾಧನೆಯ ವಿಷಯದಲ್ಲಿ ನೀಡಲಾಗುವ ಮಾರ್ಗದರ್ಶನ ಹಾಗೂ ಸಾಧನೆಯ ವಿಷಯದಲ್ಲಿನ ಪ್ರಯತ್ನಗಳನ್ನು ಹೇಳಿದಂತೆ ಪ್ರತ್ಯಕ್ಷವಾಗಿ ಕೃತಿ ಮಾಡುವುದು ಅಂದರೆ ಒಂದು ರೀತಿ ಗುರುವಾಜ್ಞಾಪಾಲನೆಯೇ ಆಗಿದೆ. ಉದಾ: ಕುಲದೇವಿ ಹಾಗೂ ದತ್ತಗುರುಗಳ ನಾಮಜಪವನ್ನು ಪೂರ್ತಿ ಮಾಡುವುದು, ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದು, ಸ್ವಯಂಸೂಚನೆಯ ಸತ್ರವನ್ನು ಮಾಡುವುದು, ತಖ್ತೆಯನ್ನು ಬರೆಯುವುದು, ಆಧ್ಯಾತ್ಮಿಕ ಉಪಾಯವನ್ನು ಮಾಡುವುದು, ಈ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ; ಅಂದರೆ ಗುರುತತ್ತ್ವದ ಆಜ್ಞಾಪಾಲನೆಯನ್ನು ಮಾಡಿದಂತೆ ಆಗುತ್ತದೆ. ಗುರುತತ್ತ್ವದ ಮೇಲೆ ಶ್ರದ್ಧೆಯಿಟ್ಟುಕೊಂಡು ಯಾರು ಸಾಧನೆಯ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುವರೋ ಅವರಿಗೆ ಗುರುತತ್ತ್ವವು ತಮ್ಮ ಜೊತೆಗೆ ಇರುವ ಅನುಭೂತಿ ಹೆಜ್ಜೆ ಹೆಜ್ಜೆಯಲ್ಲೂ ಸಿಗುತ್ತದೆ ಹಾಗೂ ಸಾಧನೆಯಲ್ಲಿ ಶೀಘ್ರವಾಗಿ ಪ್ರಗತಿಯಾಗುತ್ತದೆ. ಕುಂಬಾರನ ಕೈಯ್ಯಲ್ಲಿ ಮಣ್ಣಿನ ಉಂಡೆ ನಿಶ್ಚಿಂತವಾಗಿರುವಂತೆ ನಾವು ಶ್ರೀಗುರುಗಳ ಚರಣಗಳಲ್ಲಿದ್ದರೆ, ಆಗ ಶ್ರೀಗುರುಗಳು ನಮಗೆ ಸರಿಯಾದ ಆಕಾರವನ್ನು ನೀಡಬಹುದು. ಈ ಸಂದರ್ಭದಲ್ಲಿ ಒಂದು ಒಳ್ಳೆಯ ಉದಾಹರಣೆಯಿದೆ.

ಒಮ್ಮೆ ಸ್ವಾಮೀ ವಿವೇಕಾನಂದರು ಪ್ರವಾಸ ಮಾಡಲು ಒಂದು ನೌಕೆಯಲ್ಲಿ ಹತ್ತಿದ್ದರು. ಇನ್ನೂ ಆ ನೌಕೆ ಹೊರಡಲು ಸಮಯವಿತ್ತು. ಅಷ್ಟರಲ್ಲಿ ಅವರಿಗೆ ಅವರ ಗುರು ರಾಮಕೃಷ್ಣರ ಧ್ವನಿ ಅಂತರ್ಮನಸ್ಸಿನಲ್ಲಿ ಸಾಕಷ್ಟು ಸ್ಪಷ್ಟವಾಗಿ ಕೇಳಿಸತೊಡಗಿತು. ಅವರು ವಿವೇಕಾನಂದರಿಗೆ ‘ನೀನು ತಕ್ಷಣ ಕೆಳಗೆ ಇಳಿ. ಈ ನೌಕೆಯಲ್ಲಿ ಹೋಗಬೇಡ ಎಂದು ಹೇಳಿದರು. ಗುರುಗಳ ಆಜ್ಞೆಯೆಂದು ವಿವೇಕಾನಂದರು ತಕ್ಷಣ ಕೆಳಗೆ ಇಳಿದರು ಹಾಗೂ ಆ ನೌಕೆ ಹೊರಟಿತು. ಅವರಿಗೆ ಗುರುಗಳು ಅವರನ್ನು ಏಕೆ ಆ ನೌಕೆಯಿಂದ ಇಳಿಸಿದರು ಎಂಬುದು ಕಾಲಾಂತರದಲ್ಲಿ ತಿಳಿಯಿತು, ಆ ನೌಕೆ ಮುಂದೆ ಹೋಗಿ ಮುಳುಗಿ ಹೋಯಿತು ಹಾಗೂ ಪ್ರವಾಸಿಗರೆಲ್ಲರೂ ತಮ್ಮ ಪ್ರಾಣಗಳನ್ನು ಕಳೆದುಕೊಂಡರು ಎಂಬುದು ತಿಳಿಯಿತು. ವಿವೇಕಾನಂದರಿಗೆ ಇದರಿಂದ ತುಂಬಾ ಬೇಸರವಾಯಿತು. ಅವರು ರಾಮಕೃಷ್ಣರನ್ನು ಮತ್ತೆ ಭೇಟಿಯಾದಾಗ ‘ಗುರುಗಳೇ, ನೀವು ನನಗೆ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡಿ ನನ್ನ ಪ್ರಾಣಗಳನ್ನು ಉಳಿಸಿದಿರಿ ನಿಜ, ಆದರೆ ಬೇರೆ ಪ್ರವಾಸಿಗರೂ ಕೂಡ ಮನುಷ್ಯರೇ ಅಲ್ಲವೇ ! ನೀವಂತು ವಿಶ್ವಸ್ವರೂಪರಾಗಿರುವಿರಿ ! ಹಾಗಾದರೆ ಅದೇ ಪ್ರೇಮ ಎಲ್ಲಾ ಪ್ರವಾಸಿಗರಲ್ಲಿ ಹಾಗೂ ನಾವಿಕರ ವಿಷಯವಾಗಿ ಏಕೆ ತೋರಿಸಲಿಲ್ಲ? ಅವರನ್ನು ಏಕೆ ಕರೆಯಲಿಲ್ಲ? ಅವರೆಲ್ಲರಿಗೂ ಏಕೆ ಎಚ್ಚರಿಕೆ ನೀಡಲಿಲ್ಲ’ ಎಂದು ಕೇಳಿದರು. ಅದಕ್ಕೆ ರಾಮಕೃಷ್ಣರು ಕೇವಲ ಮುಗುಳುನಕ್ಕರು. ಅವರು ‘ನಾನು ಹಾಗೆ ಮಾಡಲು ಸಾಧ್ಯವೇ? ಅವರು ಕೂಡ ನನ್ನವರೇ ಆಗಿದ್ದರು. ನಾನು ಅವರಿಗೂ ಕೂಡ ಕೂಗಿ ಹೇಳಿದೆ; ಆದರೆ ಅವರಿಗೆ ಮಾತ್ರ ನನ್ನ ಧ್ವನಿ ಕೇಳಿಸಲೇ ಇಲ್ಲ. ಅವರೆಲ್ಲರೂ ತಮ್ಮ ಅಹಂಕಾರದಲ್ಲಿ ಮುಳುಗಿದ್ದರು. ನಿನ್ನ ಅಂತಃಕರಣ ಶುದ್ಧವಾಗಿದೆ, ಆದ್ದರಿಂದ ನಿನಗೆ ನನ್ನ ಕೂಗು ಕೇಳಿಸಿತು’.

ಪರಮೇಶ್ವರನಾಗಿರಲಿ ಅಥವಾ ಸದ್ಗುರುಗಳಾಗಿರಲಿ, ಅವರು ನಮ್ಮ ಹೃದಯದಲ್ಲಿಯೇ ವಾಸಿಸುತ್ತಾರೆ. ಅವರು ಸತತವಾಗಿ ನಮಗೆ ಯೋಗ್ಯ-ಅಯೋಗ್ಯವೇನು ಎಂಬುದನ್ನು ಹೇಳುತ್ತಿರುತ್ತಾರೆ; ಆದರೆ ನಾವು ನಮ್ಮದರಲ್ಲೇ ಎಷ್ಟು ಮುಳುಗಿರುತ್ತೇವೆಂದರೆ, ವಿಷಯ ವಸ್ತುಗಳ ಸಂಸಾರದಲ್ಲಿ ಎಷ್ಟು ವ್ಯಸ್ತವಾಗಿರುತೇವೆ ಎಂದರೆ, ಅವರ ಧ್ವನಿಯು ಕೇಳಿಸುವುದೇ ಇಲ್ಲ ಹಾಗೂ ಅದು ಒಳ್ಳೆಯ-ಕೆಟ್ಟ ಫಲವನ್ನು ಅನುಭವಿಸಲೇ ಬೇಕಾಗುತ್ತದೆ; ಆದ್ದರಿಂದ ಅಂತಃಕರಣ ಶುದ್ಧವಾಗಿರಬೇಕು. ಅಂತಃಕರಣದ ಶುದ್ಧಿಗೋಸ್ಕರ ಸೇವೆ, ಸತ್ಸಂಗ ಹಾಗೂ ಸಾಧನೆಯಿರುತ್ತದೆ. ಈ ಗುರುಪೂರ್ಣಿಮೆಯ ನಿಮಿತ್ತ ನಾವು ನಮ್ಮ ಸಾಧನೆಯನ್ನು ಇನ್ನೂ ತಳಮಳದಿಂದ ಮನಸಾರೆ ಹಾಗೂ ತಲ್ಲೀನರಾಗಿ ಮಾಡಲು ಪ್ರಯತ್ನಿಸೋಣ. ಗುರುಪೂರ್ಣಿಮೆಯಂದು ಗುರುತತ್ತ್ವವು ೧ ಸಾವಿರ ಪಟ್ಟಿನಷ್ಟು ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ನಾವು ಯಾವೆಲ್ಲಾ ಸೇವೆ-ಸಾಧನೆ ಮಾಡುತ್ತೇವೆ, ಅದಕ್ಕೆ ಆಧ್ಯಾತ್ಮಿಕ ದೃಷ್ಟಿಯಿಂದ ೧೦೦೦ ಪಟ್ಟು ಲಾಭವಾಗುತ್ತದೆ. ನಿಜವಾದ ಶಿಷ್ಯರ ಜೀವನದಲ್ಲಂತೂ ಪ್ರತಿಯೊಂದು ದಿನವೂ ಗುರುಪೂರ್ಣಿಮೆಯೇ ಆಗಿರುತ್ತದೆ. ಈ ಅವಕಾಶದ ಲಾಭವನ್ನು ಪಡೆದುಕೊಳ್ಳೋಣ.

ಧರ್ಮಸಂಸ್ಥಾಪನೆ

ಗುರು-ಶಿಷ್ಯ ಪರಂಪರೆಯ ಕಾರ್ಯ

ನಮಗೆ ಕೇವಲ ನಮ್ಮ ಸಾಧನೆಯ ದೃಷ್ಟಿಯಿಂದ ಅಷ್ಟೇ ಅಲ್ಲದೆ ಸಮಷ್ಟಿ ಸಾಧನೆಯ ದೃಷ್ಟಿಯಿಂದಲೂ ಕೂಡ ಪ್ರಯತ್ನಿಸಬೇಕಾಗಿದೆ; ಏಕೆಂದರೆ ಧರ್ಮಸಂಸ್ಥಾಪನೆಯು ಗುರು-ಶಿಷ್ಯ ಪರಂಪರೆಯ ಕಾರ್ಯವಾಗಿದೆ. ಸಮಾಜವನ್ನು ಸಾಧನೆಯ ಕಡೆ ಹೊರಳಿಸುವುದು, ನಿಜವಾದ ಶಿಷ್ಯನನ್ನು ಮೋಕ್ಷಕ್ಕೆ ಕರೆದೊಯ್ಯುವುದು, ಹೇಗೆ ಗುರುಗಳ ಕಾರ್ಯವಾಗಿದೆಯೋ ಅದೇ ರೀತಿ ರಾಷ್ಟ್ರ ಹಾಗೂ ಧರ್ಮ ರಕ್ಷಣೆಗೋಸ್ಕರ ಪ್ರಸಂಗ ಬಂದಾಗ ಧರ್ಮಸಂಸ್ಥಾಪನೆಗೋಸ್ಕರ ಸಮಾಜವನ್ನು ಜಾಗೃತಗೊಳಿಸುವುದು ಕೂಡ ಗುರುಗಳ ಕಾರ್ಯವೇ ಆಗಿರುತ್ತದೆ. ಒಮ್ಮೆ ವಿದೇಶಿ ವ್ಯಕ್ತಿಯೊಬ್ಬರು ಸ್ವಾಮೀ ವಿವೇಕಾನಂದರಲ್ಲಿ ‘ಭಾರತವನ್ನು ಒಂದೇ ವಾಕ್ಯದಲ್ಲಿ ವರ್ಣಿಸಬೇಕಾದಲ್ಲಿ ಹೇಗೆ ಮಾಡುವಿರಿ’ ಎಂದು ಕೇಳಿದರು. ಅದಕ್ಕೆ ಸ್ವಾಮೀ ವಿವೇಕಾನಂದರು ಅವರಿಗೆ, ‘ಗುರು-ಶಿಷ್ಯ ಪರಂಪರೆ !’ ಎಂದುತ್ತರಿಸಿದರು. ಗುರು-ಶಿಷ್ಯ ಪರಂಪರೆಯು ಕೇವಲ ಭಾರತದಲ್ಲಿ ಮಾತ್ರ ನೋಡಲು ಸಿಗುತ್ತದೆ. ಆ ವೈಭವಶಾಲೀ ಗುರು-ಶಿಷ್ಯ ಪರಂಪರೆಯು ಹಿಂದೂ ಸಮಾಜದ ಜೀವನವನ್ನು ನೈತಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ಅಂದರೆ ಸಮೃದ್ಧವಾಗಿಸಿದೆ. ಗುರು-ಶಿಷ್ಯ ಪರಂಪರೆಯಿಂದಲೇ ಭಾರತಕ್ಕೆ ಆಧ್ಯಾತ್ಮಿಕ ರಾಷ್ಟ್ರವೆಂಬ ಪರಿಚಯವಿದೆ. ಇಂದಿಗೂ ಅಧ್ಯಾತ್ಮದ ಶಿಕ್ಷಣವನ್ನು ಪಡೆದುಕೊಳ್ಳಲು ಭಾರತಕ್ಕೆ ಹೋಗಬೇಕು, ಎಂದು ಜಗತ್ತಿನಾದ್ಯಂತದ ಜನರಿಗೆ ಅನಿಸುತ್ತದೆ. ಇಂತಹ ವೈಭವಯುತ ಪರಂಪರೆಯು ರಾಷ್ಟ್ರವನ್ನು ಕೇವಲ ಆಧ್ಯಾತ್ಮದ ಕಡೆ ಹೊರಳಿಸದೆ ಅದರ ಜೊತೆಗೆ ರಾಷ್ಟ್ರದ ಮೇಲೆ ಹಾಗೂ ಧರ್ಮದ ಮೇಲೆ ಸಂಕಟ ಬಂದಾಗಲೆಲ್ಲ ಧರ್ಮದ ಪುನರ್ಸ್ಥಾಪನೆ ಹಾಗೂ ರಾಷ್ಟ್ರವನ್ನು ಕಟ್ಟಲು ಮುಂದಾಳತ್ವ ವಹಿಸಿತು. ಗುರುಗಳ ಸ್ಥೂಲದೇಹವೆಂದರೆ ವ್ಯಷ್ಟಿ ಸ್ವರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ಸ್ವರೂಪವಾಗಿದೆ. ಗುರುಕಾರ್ಯದ ದಿಶೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಹಿಡಿದು ಸಮಾಜ, ರಾಷ್ಟ್ರ ಹಾಗೂ ಧರ್ಮದ ಅಭ್ಯುದಯದ ತನಕದಷ್ಟು ಅಗಲವಾಗಿರುತ್ತದೆ. ಅದಕ್ಕೆ ಅನೇಕ ಉದಾಹರಣೆಗಳಿವೆ.

ಧರ್ಮಸಂಸ್ಥಾಪನೆ ಮಾಡಿದ ಗುರು-ಶಿಷ್ಯರ ಜೋಡಿ

ದ್ವಾಪರಯುಗದಲ್ಲಿ ಜಗದ್ಗುರು ಭಗವಾನ್ ಶ್ರೀಕೃಷ್ಣನು ಧನುರ್ಧಾರಿ ಅರ್ಜುನನ ಮಾಧ್ಯಮದಿಂದ ಅಧರ್ಮಿಗಳನ್ನು ನಾಶ ಮಾಡಿದನು ಹಾಗೂ ಧರ್ಮರಾಜ್ಯವನ್ನು ಸ್ಥಾಪಿಸಿದನು. ಆರ್ಯ ಚಾಣಕ್ಯರು ಚಂದ್ರಗುಪ್ತ ಮೌರ್ಯರಿಗೆ ಮಾರ್ಗದರ್ಶನ ಮಾಡಿದರು ಹಾಗೂ ಬಲಶಾಲಿಯಾದ ರಾಷ್ಟ್ರವನ್ನು ನಿರ್ಮಿಸಿದರು. ಅವೈದಿಕ ಮತಗಳ ಪ್ರಭಾವ ಹೆಚ್ಚಾದ್ದರಿಂದ ಹಿಂದೂ ಧರ್ಮವು ಸಂಕಟಕ್ಕೆ ಒಳಗಾಗಿತ್ತು, ಆಗ ಆದಿ ಶಂಕರಾಚಾರ್ಯರು ದ್ವಾರಕಾ, ಗೋವರ್ಧನ, ಶೃಂಗೇರಿ ಹಾಗೂ ಜ್ಯೋತಿರ್ಮಠ ಎಂಬ ನಾಲ್ಕು ಪೀಠಗಳನ್ನು ಸ್ಥಾಪಿಸಿ ಭಾರತವನ್ನು ಒಂದು ಸೂತ್ರದಡಿ ಕಟ್ಟಿದರು ಹಾಗೂ ಭಾರತದಲ್ಲಿ ಮತ್ತೊಮ್ಮೆ ವೈದಿಕ ಹಿಂದೂ ಧರ್ಮವನ್ನು ಸ್ಥಾಪಿಸಿದರು. ವಿದ್ಯಾರಣ್ಯಸ್ವಾಮಿಗಳು ಈಗಿನ ಕರ್ನಾಟಕ ಪ್ರಾಂತ್ಯದಲ್ಲಿ ಹರಿಹರ ಹಾಗೂ ಬುಕ್ಕ ಸಹೋದರರ ಮೂಲಕ ವಿಜಯನಗರದ ಧರ್ಮನಿಷ್ಠ ಸಾಮ್ರಾಜ್ಯದ ಅಡಿಪಾಯವನ್ನು ರಚಿಸಿದರು ಹಾಗೂ ಈ ನಗರವು ಮುಂದೆ ೩೦೦ ವರ್ಷಗಳವರೆಗೂ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ಸಂವರ್ಧನೆ ಮಾಡಿತು. ಛತ್ರಪತಿ ಶಿವಾಜೀ ಮಹಾರಾಜರು ಸಮರ್ಥ ರಾಮದಾಸ ಸ್ವಾಮಿ ಹಾಗೂ ಸಂತ ತುಕಾರಾಮ ಮಹಾರಾಜರ ಮಾರ್ಗದರ್ಶನದಲ್ಲಿ ಐದು ಮೊಘಲ ಬಾದಶಹರನ್ನು ಸೋಲಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಇತ್ತೀಚಿನ ಕಾಲದಲ್ಲಿ ಸ್ವಾಮೀ ವಿವೇಕಾನಂದರು ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಸನಾತನ ವೈದಿಕ ಧರ್ಮದ ಪತಾಕೆಯನ್ನು ಜಗತ್ತಿನಾದ್ಯಂತ ಹಾರಿಸಿದರು. ಗುರು-ಶಿಷ್ಯ ಪರಂಪರೆಯ ಆದರ್ಶವನ್ನು ಮುಂದಿಟ್ಟುಕೊಂಡು ವ್ಯಷ್ಟಿ ಸಾಧನೆಯ ಜೊತೆಗೆ ಧರ್ಮ ಹಾಗೂ ರಾಷ್ಟ್ರ ರಕ್ಷಣೆಯ ಕಾರ್ಯವನ್ನು ಮಾಡಬೇಕಾಗಿದೆ.

ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತಗಳ ಸದ್ಯದ ಸ್ಥಿತಿ

ಇಂದು ನಮಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ರಾಷ್ಟ್ರಜೀವನದಲ್ಲಿ ಹಾಗೂ ಸಮಾಜಜೀವನದಲ್ಲಿ ಧರ್ಮದ ಅಧಿಷ್ಠಾನವೇ ಲುಪ್ತವಾಗಿದೆ. ಸೋಶಲ್ ಮೀಡಿಯಾ, ನಿಯತಕಾಲಿಕೆಗಳು, ಹೀಗೆ ಅನೇಕ ಸ್ತರದಲ್ಲಿ ಹಿಂದೂ ಧರ್ಮದ ವಿಷಯದಲ್ಲಿ ಅಪಪ್ರಚಾರಗಳು ನಡೆಯುತ್ತಿದೆ. ಆಧುನಿಕತೆಯ ಹೆಸರಿನಲ್ಲಿ ಹಿಂದೂ ಸಂಸ್ಕಾರವನ್ನು ಬಿಟ್ಟುಬಿಡುವ ಭಾಗ ಹೆಚ್ಚಾಗಿದೆ. ಹಿಂದೂಗಳನ್ನು ಬಲವಂತವಾಗಿ ಅಥವಾ ಆಮಿಷವನ್ನು ಒಡ್ಡಿ ಮತಾಂತರಿಸಲಾಗುತ್ತಿದೆ. ಸರಕಾರಿ-ಶಾಸಕೀಯ ಮಟ್ಟದಲ್ಲಿ ಭ್ರಷ್ಟಾಚಾರವು ತುಂಬಿ ತುಳುಕುತ್ತಿದೆ. ಕುಟುಂಬದಲ್ಲಿ ಸಂಸ್ಕಾರ ಹಾಗೂ ಶಿಸ್ತು ಕಡಿಮೆಯಾಗತೊಡಗಿದೆ.

ಈ ಎಲ್ಲಾ ಚಿತ್ರಣವು ಬದಲಾವಣೆಯಾಗಲು ರಾಮರಾಜ್ಯದಂತಹ, ಹಿಂದವೀ ಸ್ವರಾಜ್ಯದಂತಹ ಒಂದು ಸಮರ್ಥ ರಾಷ್ಟ್ರವನ್ನು ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ನಾವು ಭವ್ಯ-ದಿವ್ಯವಾಗಿ ಏನಾದರೂ ಮಾಡಬೇಕು, ಎಂದೇನಿಲ್ಲ; ಆದರೆ ನಮ್ಮ ಕೈಲಾದದನ್ನು ಮಾತ್ರ ಖಂಡಿತ ಮಾಡಲೇಬೇಕು. ಗುರುತತ್ತ್ವಕ್ಕೂ ಅದೇ ಅಪೇಕ್ಷಿತವಿದೆ. ಈ ಕಾರ್ಯದಲ್ಲಿ ತಮ್ಮ ಕ್ಷಮತೆಗೆ ಅನುಸಾರವಾಗಿ ತನು-ಮನ-ಧನದಿಂದ ಭಾಗವಹಿಸುವುದು ಕಾಲಾನುಸಾರ ನಿಜವಾದ ಗುರುದಕ್ಷಿಣೆಯಾಗುವುದು. ಈ ಗುರುಪೂರ್ಣಿಮೆಯ ನಿಮಿತ್ತ ನಾವೂ ಕೂಡ ಆ ರೀತಿ ಸಂಕಲ್ಪ ಮಾಡೋಣ.

ಗುರುಪೂರ್ಣಿಮೆಗಾಗಿ ಧ್ಯೇಯವಿಟ್ಟುಕೊಂಡು ಪ್ರಯತ್ನಿಸುವುದು

ಆಧ್ಯಾತ್ಮಿಕ ಮಟ್ಟದಲ್ಲಿ ಗುರುಪೂರ್ಣಿಮೆಯ ಲಾಭವಾಗಲು ನಾವು ಧ್ಯೇಯವಿಟ್ಟುಕೊಂಡು ಪ್ರಯತ್ನಿಸೋಣ. ಧ್ಯೆಯವಿಟ್ಟುಕೊಂಡರೆ, ಪ್ರಯತ್ನಗಳಿಗೆ ವೇಗ ಬರುತ್ತದೆ. ಧ್ಯೇಯವೆಂದರೆ ಏನು, ಪ್ರತಿದಿನ ನಾವು ಯಾವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂಬುದನ್ನು ನಾವು ನಿರ್ಧರಿಸಬೇಕು ! ಉದಾ. ಪ್ರತಿದಿನ ಅರ್ಧಗಂಟೆ ನಾಮಸ್ಮರಣೆ ಮಾಡುವೆನು, ಪಟ್ಟಿಯಲ್ಲಿ ಕಡಿಮೆಪಕ್ಷ ೫ ತಪ್ಪುಗಳನ್ನಾದರೂ ಬರೆಯುವೆನು ಅಥವಾ ೫ ಸ್ವಯಂಸೂಚನೆಗಳ ಸತ್ರವನ್ನು ಮಾಡುವೆನು. ಆಧ್ಯಾತ್ಮಿಕ ಉಪಾಯ ಮಾಡುವೆನು, ಸತ್ಸೇವೆಗೋಸ್ಕರ ಕಡಿಮೆಪಕ್ಷ ೧ ಗಂಟೆ ಸಮಯ ನೀಡುವೆನು. ಈ ರೀತಿ ನಾವು ಯಾವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಅದಕ್ಕಿಂತ ಸ್ವಲ್ಪ ಹೆಚ್ಚು ಪ್ರಯತ್ನಗಳನ್ನು ಮಾಡಲು ಧ್ಯೇಯವಿಟ್ಟುಕೊಂಡು ನಾವು ನಮ್ಮ ಮಟ್ಟದಲ್ಲಿ ಸಾಧ್ಯವಾದ ಧ್ಯೇಯವಿಟ್ಟುಕೊಂಡು ಅದರಂತೆ ಮಾಡಲು ಪ್ರಯತ್ನಿಸಬೇಕು. ಕೆಲವರದ್ದು ಕೇವಲ ಅರ್ಧ ತಾಸು ಜಪವಾಗುತ್ತಿದ್ದರೆ, ಅವರು ಒಂದು ತಾಸು ಮಾಡಲು ಪ್ರಯತ್ನಿಸೋಣ. ಯಾರಾದರೂ ಸ್ವಯಂಸೂಚನೆಯ ಎರಡೇ ಸತ್ರಗಳಾಗುತ್ತಿದ್ದರೆ, ಅವರು ೫ ಮಾಡಲು ಪ್ರಯತ್ನಿಸೋಣ. ಭಾವಜಾಗೃತಿಯ ಪ್ರಯತ್ನಗಳಾಗದೆ ಇದ್ದಲ್ಲಿ ಆಗ ಕಡಿಮೆಪಕ್ಷ ೧೦ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ಪ್ರಯತ್ನಿಸೋಣ. ಈಗ ಹೇಗೆ ವ್ಯಾವಹಾರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಅಭ್ಯಾಸ ಮಾಡಬೇಕಾಗುತ್ತದೆ, ಕಾರ್ಯಾಲಯದಲ್ಲಿ ವಿಭಿನ್ನ ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಹೋಗಬೇಕಾಗುತ್ತದೆ, ಅಧ್ಯಾತ್ಮದಲ್ಲಂತೂ ಜನ್ಮ-ಮರಣದ ಚಕ್ರದಿಂದ ಮುಕ್ತವಾಗುವ ವಿಷಯವಿದೆ. ಅದಕ್ಕಾಗಿ ನಮಗೆ ಎಷ್ಟು ಪ್ರಯತ್ನಿಸಬೇಕಾಗುವುದಲ್ಲ !

ಪ.ಪೂ. ಭಕ್ತರಾಜ ಮಹಾರಾಜರು ಸಮರ್ಪಣೆಯ ಭಾವದಿಂದ ಮಾಡಿದ ಗುರುಸೇವೆ

ಈ ಸಂದರ್ಭದಲ್ಲಿ ನಮಗೆಲ್ಲರಿಗೂ ಕಲಿತುಕೊಳ್ಳಲು ಒಂದು ಒಳ್ಳೆಯ ಉದಾಹರಣೆಯಿದೆ. ಪ.ಪೂ. ಭಕ್ತರಾಜ ಮಹಾರಾಜರು ತಮ್ಮ ಗುರು ಪ.ಪೂ. ಅನಂತಾನಂದ ಸಾಯೀಶರವರ ಸೇವೆಯನ್ನು ಎಷ್ಟು ಸಮರ್ಪಣೆ ಭಾವದಿಂದ ಮಾಡಿದರು ಎಂಬುದಕ್ಕೆ ಒಂದು ಪ್ರೇರಕ ಪ್ರಸಂಗವಿದೆ. ಪ.ಪೂ. ಭಕ್ತರಾಜ ಮಹಾರಾಜರ ಪೂರ್ವಾಶ್ರಮದ ಹೆಸರು ದಿನಕರ ಎಂದಿತ್ತು. ಪ.ಪೂ. ಅನಂತಾನಂದ ಸಾಯೀಶರು ಕುದುರೆ ಗಾಡಿಯಲ್ಲಿ ಎಲ್ಲಾದರೂ ಹೊರಟಾಗ ಅವರು ದಿನಕರನಿಗೆ ಟಾಂಗದಲ್ಲಿ ಕುಳಿತುಕೋ ಎಂದು ಹೇಳುತ್ತಿದ್ದರು, ಆಗಲೂ ಕೂಡ ಗುರುಗಳ ಪಕ್ಕದಲ್ಲಿ ಕುಳಿತುಕೊಳ್ಳುವುದು ಹೇಗೆ; ಎಂದು ದಿನಕರನು ಕುಳಿತುಕೊಳ್ಳುತ್ತಿರಲಿಲ್ಲ. ಆಗ ಗುರುಗಳು ಹಿಂಬಾಲಿಸು ಎಂದು ಹೇಳುತ್ತಿದ್ದರು. ಆಗ ಗುರುಗಳೇನಾದರೂ ಅವರು ಹೋಗುವ ಸ್ಥಳದಲ್ಲಿ ಮೊದಲೇ ತಲುಪಿದರೆ ಹಾಗೂ ಗುರುಸೇವೆಯಲ್ಲಿ ವ್ಯತ್ಯಯ ಬರುವುದು ಬೇಡ ; ಎಂದು ದಿನಕರನು ಟಾಂಗಾದ ಹಿಂದೆ ಓಡುತ್ತಾ ಹೋಗುತ್ತಿದ್ದರು. ಯಾವ ನಗರದಲ್ಲಿ ನಾವು ಗೌರವ-ಪ್ರತಿಷ್ಠೆಯಿಂದ ಜೀವಿಸುತ್ತೇವೆಯೋ ಅಲ್ಲಿ ರಸ್ತೆಯಲ್ಲಿ ಟಾಂಗಾದ ಹಿಂದೆ ಓಡಲು ಎಷ್ಟು ಕಷ್ಟ ಪಡಬೇಕಾಗಿತ್ತಲ್ಲ ! ಆದರೆ ದಿನಕರನು ಯಾವುದೇ ರೀತಿಯ ವಿಚಾರ ಮಾಡದೆ ಅದನ್ನು ಮಾಡಿದನು. ಒಮ್ಮೆ ಓಡುವಾಗ ದಿನಕರನ ಕಾಲಿಗೆ ಮುಳ್ಳು ಚುಚ್ಚಿತು; ಆಗ ಅದನ್ನು ತೆಗೆಯಲು ಸಮಯ ನೀಡಿದರೆ ತಡವಾಗುತ್ತದೆ; ಎಂದು ದಿನಕರನು ಹಾಗೆಯೇ ಓಡುತ್ತಿದ್ದನು. ಅವನ ಕಾಲೆಲ್ಲಾ ರಕ್ತಮಯವಾದರೂ ನಿಲ್ಲಲಿಲ್ಲ. ಓಡುತ್ತಾ ಓಡುತ್ತಾ ಅವರ ಕಾಲು ಸಗಣಿಯಲ್ಲಿ ಸಿಲುಕಿತು ಹಾಗೂ ಮುಂದಿನ ಕ್ಷಣದಲ್ಲಿ ಅವರ ಕಾಲಿನಲ್ಲಿದ್ದ ಮುಳ್ಳು ತಕ್ಷಣ ಹೊರಗೆ ಬಂತು. ಅದು ಗುರುಕೃಪೆಯಾಗಿತ್ತು. ಒಮ್ಮೆ ಗುರುಗಳು ಟಾಂಗಾದಲ್ಲಿ ಕುಳಿತುಕೊಂಡ ಬಳಿಕ ಟಾಂಗಾ ಶುರುವಾಯಿತು ಹಾಗೂ ದಿನಕರನಿಗೆ ಚಪ್ಪಲಿ ಹಾಕಿಕೊಳ್ಳಲು ಸಮಯವಿರಲಿಲ್ಲ; ಆದ್ದರಿಂದ ಅವರು ಟಾಂಗಾದ ಹಿಂದೆ ಬರಿಗಾಲಿನಲ್ಲಿಯೇ ಓಡತೊಡಗಿದರು. ಅದನ್ನು ನೋಡಿ ಗುರುಗಳು ತಮ್ಮ ಚಪ್ಪಲಿಯನ್ನು ಅವರ ಕಡೆ ಎಸೆದರು; ಆದರೆ ಗುರುಗಳ ಚಪ್ಪಲಿಯನ್ನು ತೊಡುವುದು ಹೇಗೆ, ಎಂಬ ವಿಚಾರದಿಂದ ದಿನಕರನು ಅದನ್ನು ತಮ್ಮ ಎದೆಗೆ ಅಪ್ಪಿಕೊಂಡು ಬರಿಗಾಲಿನಲ್ಲಿಯೇ ಟಾಂಗಾದ ಹಿಂದೆ ಓಡತೊಡಗಿದರು. ಅವರ ಭಕ್ತಿ ಎಷ್ಟು ಉಚ್ಚಸ್ತರದ್ದಾಗಿದೆಯಲ್ಲವೇ ! ಎಷ್ಟು ಸಮರ್ಪಣೆಯ ಭಾವ !

ನಾವು ಕೂಡ ಸಾಧನೆ ಮಾಡಬೇಕಾಗಿದೆ, ಇದೇ ಜನ್ಮದಲ್ಲಿ ಮೋಕ್ಷಪ್ರಾಪ್ತಿಯಾಗಿ ಜೀವನ-ಮರಣದ ಚಕ್ರದಿಂದ ಮುಕ್ತವಾಗಬೇಕಾಗಿದೆಯಲ್ಲವೇ ! ಹಾಗಾದರೆ ಸೇವೆ-ಸಾಧನೆ ಮಾಡಲು ಎಷ್ಟು ಕಷ್ಟ ಪಡಬೇಕು, ಸಂಘರ್ಷ ಮಾಡಲು ತಯಾರಾಗಿರಬೇಕು. ನಾಮಜಪಕ್ಕೆ ಸಮಯ ಸಿಗಲಿಲ್ಲ; ಆದ್ದರಿಂದ ಪೂರ್ತಿ ಮಾಡಲಿಲ್ಲ ಅಥವಾ ಬೇಸರವಾಯಿತು ಎಂದು ಪಟ್ಟಿ ಬರೆಯಲಿಲ್ಲ; ಸ್ವಯಂಸೂಚನೆಯ ಅವಧಿ ಮಾಡುವ ವಿಚಾರ ಬಂದರೂ ಅದನ್ನು ಅಲಕ್ಷ್ಯ ಮಾಡಿದೆವು ಅಥವಾ ಅದನ್ನು ಮಾಡಲು ರಿಯಾಯತಿ ಪಡೆದುಕೊಂಡೆವು ಹೀಗೆ ಮಾಡದೆ ನಮ್ಮ ಸಾಧನೆಯಾಗಲು ಸ್ವಲ್ಪ ಶ್ರಮವಹಿಸೋಣ. ಗುರುಪೂರ್ಣಿಮೆಗೆ ಕೆಲವು ದಿನಗಳಷ್ಟೇ ಬಾಕಿಯಿದೆ. ನಾವು ಇಂದಿನಿಂದ ಅಲ್ಲ, ಈಗಿನಿಂದಲೇ ಯಾವುದೇ ಒತ್ತಡ ತೆಗೆದುಕೊಳ್ಳದೆ ಹುಮ್ಮಸ್ಸಿನಿಂದ ಪ್ರಯತ್ನಿಸೋಣ. ಎಲ್ಲರೂ ಪ್ರಯತ್ನಿಸುವಿರಿ ತಾನೆ?

ಶ್ರೀಗುರುಗಳ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆ ಮಾಡೋಣ, ‘ಹೇ ಗುರುದೇವ, ನಿಮಗೆ ಅಪೇಕ್ಷಿತವಾಗಿರುವಂತಹ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯನ್ನು ನೀವೇ ನಮ್ಮಿಂದ ಮಾಡಿಸಿಕೊಳ್ಳಿರಿ. ತಮ್ಮ ಕೃಪಾದೃಷ್ಟಿ ನಮ್ಮ ಮೇಲೆ ಸತತವಾಗಿರಲಿ. ಸಾಧನೆಯ ತೀವ್ರ ಹಂಬಲ ನಮ್ಮಲ್ಲಿ ನಿರ್ಮಾಣವಾಗಲಿ. ನಮ್ಮನ್ನು ಉದ್ಧಾರ ಮಾಡಿ, ಭಗವಂತಾ! ನಾವು ನಿಮ್ಮ ಚರಣಗಳಲ್ಲಿ ಸಂಪೂರ್ಣವಾಗಿ ಶರಣಾಗಿದ್ದೇವೆ!’

Leave a Comment