ಸಾಧನಾವೃದ್ಧಿ ಸತ್ಸಂಗ (5)

ಭಾವಜಾಗೃತಿಯ ಪ್ರಯತ್ನಗಳು (ಮಾನಸಪೂಜೆ)

ಸಾಧನೆಯನ್ನು ಮಾಡುತ್ತಿರುವಾಗ ಭಾವಕ್ಕೆ ಅಪರಿಮಿತ ಮಹತ್ವವಿದೆ. ‘ಭಾವವಿದ್ದಲ್ಲಿ ದೇವ’ ಅಂದರೆ ಎಲ್ಲಿ ಭಾವವಿದೆಯೋ ಅಲ್ಲಿ ಭಗವಂತನ ಅಸ್ತಿತ್ವವಿರುತ್ತದೆ ಎಂದು ಹೇಳಲಾಗುತ್ತದೆ. ಭಾವ ಎಂದರೇನು? ಅದರ ಮಹತ್ವವೇನು ಮತ್ತು ಭಾವಜಾಗೃತಿಗಾಗಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು ಇದನ್ನು ತಿಳಿದುಕೊಳ್ಳೋಣ.

ಭಾವ ಈ ಶಬ್ದದ ಉತ್ಪತ್ತಿ ಮತ್ತು ಅರ್ಥ

ಭಾವ ಈ ಶಬ್ದ ಭಾ ಮತ್ತು ವ ಎಂಬ ೨ ಅಕ್ಷರಗಳಿಂದಾಗಿದೆ. ಇದರಲ್ಲಿ ‘ಭಾ’ ಎಂದರೆ ತೇಜ ಮತ್ತು ‘ವ’ ಎಂದರೆ ವೃದ್ಧಿ ಗೊಳಿಸುವಂತಹದ್ದು. ಯಾವುದರ ಜಾಗೃತಿಯಿಂದ ನಮ್ಮಲ್ಲಿ ತೇಜತತ್ತ್ವದ ವೃದ್ಧಿಯಾಗುತ್ತದೆಯೋ ಅದುವೇ ಭಾವ! ತೇಜತತ್ತ್ವವು ಈಶ್ವರನ ರೂಪದೊಂದಿಗೆ ಸಂಬಂಧಪಟ್ಟಿದೆ. ಭಾವ ಎಂದರೆ ಸತತವಾಗಿ ಈಶ್ವರನ ರೂಪದ ಅಂದರೆ ಅಸ್ತಿತ್ವದ ಅರಿವು ಇರುವುದು. ಸಂತರಿಗೆ ಈಶ್ವರನ ಅಸ್ತಿತ್ವದ ಅರಿವು ಇರುವುದರಿಂದ ಅವರು ಸತತವಾಗಿ ಭಾವಾವಸ್ಥೆಯಲ್ಲಿರುತ್ತಾರೆ. ಭಾವದಿಂದ ಸ್ಥೂಲ ದೇಹದ ಹಾಗೂ ಮನಸ್ಸಿನ ಶುದ್ಧಿಯಾಗುತ್ತದೆ. ದೇಹದ ರಜ-ತಮದ ಪ್ರಮಾಣವು ಕಡಿಮೆಯಾಗಿ ಸತ್ತ್ವಗುಣವು ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಉಪಾಯ ಮಾಡುವುದರಿಂದ ಎಷ್ಟು ಆಧ್ಯಾತ್ಮಿಕ ಲಾಭವಾಗುತ್ತದೆಯೋ ಅಷ್ಟೇ ಲಾಭವು ಭಾವಜಾಗೃತಿಯಿಂದಲೂ ಆಗುತ್ತದೆ. ಪರಿಸ್ಥಿತಿಯನ್ನು ಎದುರಿಸಲು ಆಧ್ಯಾತ್ಮಿಕ ಬಲವು ಭಾವದಿಂದ ಸಿಗುತ್ತದೆ. ಭಾವದಿಂದ ಸಂಪೂರ್ಣ ಜಗತ್ತನ್ನು ನೋಡುವ ದೃಷ್ಟಿಯೇ ಪ್ರೇಮಮಯ ಮತ್ತು ಸಕಾರಾತ್ಮಕವಾಗುತ್ತದೆ. ಭಾವವು ಕೇವಲ ಕಲ್ಪನೆಯಲ್ಲ, ಅದೊಂದು ಈಶ್ವರೀ ಶಕ್ತಿಯೇ ಆಗಿದೆ. ಹಾಗಾಗಿ ‘ಭಾವವಿದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ.

ಭಾವವು ಚಿತ್ತದ ಒಂದು ಅವಸ್ಥೆಯಾಗಿದೆ. ನಾವು ಅನೇಕ ಪೌರಾಣಿಕ ಅಥವಾ ಸಂತರ ಕಥೆಗಳಿಂದ ಅವರ ಉತ್ಕಟ ಭಾವದ ಉದಾಹರಣೆಗಳನ್ನು ಕೇಳಿರಬಹುದು. ಸಂತ ನಾಮದೇವರು ಚಿಕ್ಕವರಿದ್ದಾಗ ಒಮ್ಮೆ ದೇವರಿಗೆ ನೈವೇದ್ಯವನ್ನು ತೋರಿಸಲು ವಿಠ್ಠಲನ ದೇವಸ್ಥಾನಕ್ಕೆ ಹೋಗಿದ್ದರು. ದೇವರಿಗೆ ನೈವೇದ್ಯವನ್ನು ತೋರಿಸುತ್ತಿದ್ದರು. ದೇವರು ಅದನ್ನು ಪ್ರತ್ಯಕ್ಷವಾಗಿ ಬಂದು ತಿನ್ನಬೇಕು ಎಂದು ಅವರಿಗೆ ಅನಿಸುತ್ತಿತ್ತು. ಈ ಭಾವದಿಂದ ಅವರು ಭಗವಂತನು ನೈವೇದ್ಯವನ್ನು ಸ್ವೀಕರಿಸದಿದ್ದರೆ ನಾನು ಪ್ರಾಣತ್ಯಾಗ ಮಾಡುವೆನು ಎಂದು ದೇವರಿಗೆ ಹೇಳಿದರು. ಆದರೂ ದೇವರು ನೈವೇದ್ಯವನ್ನು ಸೇವಿಸಲಿಲ್ಲ. ಕೊನೆಗೆ ಸಂತ ನಾಮದೇವರು ನಿಜವಾಗಿಯೂ ಪ್ರಾಣತ್ಯಜಿಸಲು ಹೊರಟಾಗ ಮೂರ್ತಿಯಿಂದ ಪಾಂಡುರಂಗನು ಪ್ರತ್ಯಕ್ಷನಾದನು. ನಾಮದೇವರ ಭಕ್ತಿಯಿಂದ ದೇವರು ಪ್ರತ್ಯಕ್ಷರಾಗಿ ನೈವೇದ್ಯವನ್ನು ಸ್ವೀಕರಿಸಬೇಕಾಯಿತು. ಈ ರೀತಿ ಭಾವದ ಎಷ್ಟೊಂದು ಉದಾಹರಣೆಗಳಿವೆ.

ಸಾಧನಾಮಾರ್ಗದಲ್ಲಿ ಭಾವಜಾಗೃತಿಯು ಒಂದು ಮಹತ್ವದ ಹಂತವಾಗಿದೆ. ಕೆಲವೊಮ್ಮೆ ಭಾವ ಮತ್ತು ಭಾವನೆ ಇವುಗಳಲ್ಲಿ ಗೊಂದಲವಾಗುತ್ತದೆ. ಭಾವ ಮತ್ತು ಭಾವನೆ ಇವೆರಡೂ ಬೇರೆ ಬೇರೆಯಾಗಿವೆ. ಕಣ್ಣುಗಳಿಂದ ಅಶ್ರುಗಳು ಬರುವುದು, ಇದು ಭಾವನೆ ಮತ್ತು ಭಾವ ಇವೆರಡರಿಂದ ಅನುಭವಿಸುವುದರ ಒಂದು ಲಕ್ಷಣವಾಗಿದೆ. ಹಾಗಾಗಿ ಆ ಸಮಯದಲ್ಲಿ ಮನಸ್ಸಿನ ಸ್ಥಿತಿ ಹೇಗಿದೆ, ಎಂದು ನೋಡಬೇಕು. ಮನಸ್ಸಿಗೆ ದುಃಖವಾಗಿ ಅಳಲು ಬಂದರೆ ಅದು ಭಾವನೆಯಾಯಿತು ಮತ್ತು ಗುರುಗಳ ಅಥವಾ ದೇವರ ನೆನಪಿನಿಂದ ಜೀವವು ವ್ಯಾಕುಲಗೊಂಡು ಅದರಿಂದ ಕಣ್ಣುಗಳಲ್ಲಿ ಅಶ್ರುಗಳು ಬಂದಲ್ಲಿ ಅದು ಭಾವವಾಯಿತು.

‘ಭಾವವಿದ್ದಲ್ಲಿ ದೇವ’ ಎಂಬ ಉಕ್ತಿಯಂತೆ ‘ಭಾವ ಇರುವವರಿಗೆ ಈಶ್ವರನು ಸಹಾಯ ಮಾಡುತ್ತಾನೆ’. ಭಗವಂತನು ‘ನ ಮೇ ಭಕ್ತ ಪ್ರಣಶ್ಯತಿ’ ಎಂದರೆ ನನ್ನ ಭಕ್ತನ ನಾಶವಾಗುವುದಿಲ್ಲ. ಭಾವ ಇರುವವರೇ ಭಕ್ತರಾಗಬಲ್ಲರು. ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ದೇವರ ಬಗ್ಗೆ ಹೆಚ್ಚುಕಮ್ಮಿ ಪ್ರಮಾಣದಲ್ಲಿಯೇ ಭಾವ ಇರುತ್ತದೆ. ಹಾಗಾಗಿಯೇ ನಾವು ಸತ್ಸಂಗಕ್ಕೆ ಬಂದಿದ್ದೇವೆ. ದೇವರ ಕುರಿತು ನಮ್ಮಲ್ಲಿರುವ ಭಾವವು ಹೆಚ್ಚಿಸಬೇಕು. ಭಾವಜಾಗೃತಿಗಾಗಿ ಮಾಡಬೇಕಾದ ಅನೇಕ ಚಿಕ್ಕ ಚಿಕ್ಕ ಪ್ರಯತ್ನಗಳಿವೆ. ಅವುಗಳಲ್ಲಿ ಒಂದಾದ ಮಾನಸಪೂಜೆಯ ಬಗ್ಗೆ ತಿಳಿದುಕೊಳ್ಳೋಣ.

ಮಾನಸಪೂಜೆ ಅಂದರೇನು?

ದೇವತೆಗಳು ಅಥವಾ ಗುರುಗಳ ರೂಪವನ್ನು ಮನಸ್ಸಿನಿಂದ ಕಲ್ಪನೆಯನ್ನು ಮಾಡಿ ಎಲ್ಲ ಪೂಜೆ ಉಪಚಾರಗಳನ್ನು ಅರ್ಪಿಸಿ ಮಾಡಿದ ಪೂಜೆಗೆ ಮಾನಸಪೂಜೆ ಎನ್ನುತ್ತಾರೆ. ನಮ್ಮ ಇಷ್ಟಕ್ಕನುಸಾರವಾದ ದೇವರಿಗೆ ಏನೇನು ಅರ್ಪಣೆ ಮಾಡಬೇಕೆಂದು ಅನಿಸುತ್ತದೆಯೋ ಅದರ ಕಲ್ಪನೆಯನ್ನು ದೇವರಿಗೆ ಅರ್ಪಣೆ ಮಾಡಬಹುದು. ಎಷ್ಟು ಹೊತ್ತು ನಾವು ಮಾನಸಪೂಜೆಯನ್ನು ಮಾಡುತ್ತೇವೆಯೋ ಅಷ್ಟು ಹೊತ್ತು ನಮ್ಮ ಮನಸ್ಸಿನ ತ್ಯಾಗವಾಗುತ್ತದೆ. ಮಾನಸಪೂಜೆಗೆ ಸ್ಥಳ, ಕಾಲದ ಬಂಧನವಿರುವುದಿಲ್ಲ. ನಾವು ಪ್ರತಿದಿನ ಮಾಡುವ ದೇವರ ಪೂಜೆಯು ಸ್ಥೂಲದ ಪೂಜೆಯಾಗಿರುತ್ತದೆ. ಸ್ಥೂಲರೀತಿಯಿಂದ ಪೂಜೆಯನ್ನು ಮಾಡುತ್ತಿರುವಾಗ ಕೆಲವೊಮ್ಮೆ ಇತರ ವಿಷಯಗಳತ್ತ ನಮದಮ ಮನಸ್ಸಿನ ಗಮನ ಹೋಗುವ ಸಾಧ್ಯತೆಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಮಾನಸಪೂಜೆಯು ಸೂಕ್ಷ್ಮ ಸ್ತರದ್ದಾಗಿರುತ್ತದೆ. ನಾವು ಈ ಹಿಂದೆ ‘ಸ್ಥೂಲಕ್ಕಿಂತ ಸೂಕ್ಷ್ಮವು ಶ್ರೇಷ್ಠ’ ಎಂಬ ಸಾಧನೆಯ ಸಿದ್ಧಾಂತವನ್ನು ನೋಡಿದ್ದೆವು. ಈ ಸಿದ್ಧಾಂತಕ್ಕನುಸಾರ ಕರ್ಮಕಾಂಡದ ಅಂದರೆ ಸ್ಥೂಲ ಪೂಜೆಗಿಂತ ಮಾನಸಪೂಜೆಯು ಹೆಚ್ಚು ಶ್ರೇಷ್ಠವಾಗಿದೆ. ಕೆಲವು ಜನರಿಗೆ ನೌಕರಿ, ವ್ಯವಹಾರ ಇವುಗಳಂತಹ ಕಾರಣಗಳಿಂದ ದೇವರ ಪೂಜೆಯನ್ನು ಮಾಡುವ ಇಚ್ಛೆಯಿದ್ದರೂ ಅದನ್ನು ಮಾಡಲಾಗುವುದಿಲ್ಲ ಇಂತಹವರು ಪ್ರಯಾಣ ಮಾಡುತ್ತಿರುವಾಗ, ಹೋಗುತ್ತಾ ಬರುತ್ತಾ ಇತರ ಕಡೆಗಳಲ್ಲಿ ಮಾನಸಪೂಜೆಯನ್ನು ಮಾಡುವ ಅವಕಾಶವಿರುತ್ತದೆ. ಕೆಲವರು ದೇವರಕೋಣೆಯಲ್ಲಿ ಪ್ರತ್ಯಕ್ಷ ದೇವರ ಪೂಜೆಯನ್ನು ಮಾಡುತ್ತಿರಬಹುದು ಅವರು ಸಹ ಮಾನಸಪೂಜೆಯನ್ನು ಮಾಡಬಹುದು. ಮಾನಸಪೂಜೆಯಿಂದ ಏಕಾಗ್ರತೆಯನ್ನು ಸಹ ಸಾಧಿಸಬಹುದು. ಈಗ ನಾವು ಮಾನಸಪೂಜೆಯನ್ನು ಮಾಡಿ ದೇವರ ಅಸ್ತಿತ್ವವನ್ನು ಅನುಭವಿಸಲು ಪ್ರಯತ್ನಿಸೋಣ. ನಾವು ಶ್ರೀದುರ್ಗಾದೇವಿಯ ಮಾನಸಪೂಜೆಯನ್ನು ಮಾಡೋಣ. ಯಾರಿಗೆ ತಮ್ಮ ಕುಲದೇವಿ ಯಾರೆಂದು ಗೊತ್ತಿದೆಯೋ ಅವರು ಮಾನಸಪೂಜೆಯನ್ನು ಮಾಡುವಾಗ ತಮ್ಮ ಕುಲದೇವಿಯ ರೂಪವನ್ನು ನಮ್ಮ ಕಣ್ಣುಗಳೆದರು ತಂದುಕೊಳ್ಳಬಹುದು.

ಶ್ರೀದುರ್ಗಾದೇವಿಯ ಮಾನಸಪೂಜೆ

ಪೂಜೆಯನ್ನು ಆರಂಭಿಸುವ ಮೊದಲು ನಾವು ದೇವಿಗೆ ಸಂಪೂರ್ಣವಾಗಿ ಶರಣಾಗಿ ಪ್ರಾರ್ಥನೆಯನ್ನು ಮಾಡೋಣ. ‘ಹೇ ಮಾತೆ, ಈ ಅಜ್ಙಾನಿ ಮಗುವು ನಿನ್ನ ಮಾನಸಪೂಜೆಯನ್ನು ಮಾಡಲು ಇಚ್ಛಿಸುತ್ತಿದೆ. ಹೇ ದೇವಿ, ಈ ಪೂಜೆಯನ್ನು ಹೇಗೆ ಮಾಡಬೇಕು, ಅದು ಕೂಡ ನನಗೆ ತಿಳಿದಿಲ್ಲ. ಆದರೆ ಹೇ ದೇವಿ, ನೀನೇ ಈ ಪಾಮರ ಜೀವದ ಮೇಲೆ ಕೃಪೆ ತೋರಿಸು. ನನಗೆ ನಿನ್ನ ದರ್ಶನವನ್ನು ನೀಡು’ ನಾವು ಆರ್ತಭಾವದಿಂದ ಪ್ರಾರ್ಥನೆಯನ್ನು ಮಾಡಿದಾಗ ಶ್ರೀದುರ್ಗಾದೇವಿಯು ಪ್ರತ್ಯಕ್ಷವಾಗಿ ನಮ್ಮ ಮುಂದೆ ಅವತರಿಸುತ್ತಿದ್ದಾಳೆ. ಅಮ್ಮನ ಮುಖವು ಪ್ರಸನ್ನವಾಗಿದ್ದು ಅವಳು ನಮಗೆ ಆಶೀರ್ವಾದವನ್ನು ನೀಡುತ್ತಿದ್ದಾಳೆ. ದೇವಿಯ ಪೂಜೆಗಾಗಿ ನಾವು ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. ಸುವರ್ಣ ಸಿಂಹಾಸನ, ಚಿನ್ನದ ಹರಿವಾಣಗಳು, ಚಿನ್ನದ ತಟ್ಟೆಯಲ್ಲಿ ಹೂವುಗಳು, ರತ್ನಖಚಿತ ತಟ್ಟೆಯಲ್ಲಿ ಕಲಶ, ಚಿನ್ನದ ನೀಲಾಂಜನಗಳು ಮತ್ತು ದೊಡ್ಡ ತಟ್ಟೆಯಲ್ಲಿ ಅರಶಿಣ-ಕುಂಕುಮವನ್ನು ಇಟ್ಟಿದ್ದೇವೆ. ದೇವಿಯ ಪೂಜೆಯನ್ನು ಮಾಡುವ ಅವಕಾಶ ಸಿಕ್ಕಿದೆ ಎಂದು ನಮಗೆ ಅತ್ಯಂತ ಕೃತಜ್ಞತೆಯೆನಿಸುತ್ತಿದೆ.

ಈಗ ದೇವಿಯನ್ನು ಸುವರ್ಣ ಸಿಂಹಾಸನದಲ್ಲಿ ವಿರಾಜಮಾನರಾಗುವಂತೆ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ. ದೇವಿಯು ಸಿಂಹಾಸನದ ಮೇಲೆ ಆಸೀನಳಾಗುತ್ತಿದ್ದಾಳೆ. ನಾನು ದೇವಿಯ ಚರಣಗಳನ್ನು ಎರಡೂ ಕೈಗಳಿಂದ ಹಿಡಿದು ಹರಿವಾಣದಲ್ಲಿಡುತ್ತಿದ್ದೇನೆ. ಪ್ರತ್ಯಕ್ಷ ದೇವಿಯ ಚರಣಗಳ ಸ್ಪರ್ಶಿಸುವ ಭಾಗ್ಯವು ಸಿಕ್ಕಿದುದರಿಂದ ಗದ್ಗದಿತನಾಗುತ್ತಿದ್ದೇನೆ. ದೇವಿಯ ಚರಣಗಳಿಂದ ನನಗೆ ಬಹಳ ಚೈತನ್ಯವು ಸಿಕ್ಕಿ ನನ್ನ ಸುತ್ತಲೂ ಅನಿಷ್ಟ (ಕೆಟ್ಟ) ಆವರಣವು ನಾಶವಾಗುತ್ತಿದೆ. ನಾನು ಒಂದು ಚಿನ್ನದ ಕಲಶದಲ್ಲಿ ಉಗುರುಬೆಚ್ಚಗಿನ ಸುಗಂಧಿತ ಜಲವನ್ನು ತೆಗೆದುಕೊಂಡಿದ್ದೇನೆ. ಈ ಜಲದಿಂದ ನಾನು ದೇವಿಯ ಚರಣಗಳಿಗೆ ಅಭಿಷೇಕವನ್ನು ಮಾಡುತ್ತಿದ್ದೇನೆ. ನಂತರ ಪಂಚಾಮೃತದಿಂದ ಅಭಿಷೇಕ ಮಾಡುತ್ತಿದ್ದೇನೆ. ಅನಂತರ ಪುನಃ ಉಗುರು ಬೆಚ್ಚಗಿನ ನೀರಿನಿಂದ ದೇವಿಗೆ ಅಭಿಷೇಕ ಮಾಡುತ್ತಿದ್ದೇನೆ. ಈಗ ಹರಿವಾಣವನ್ನು ಬದಿಯಲ್ಲಿರಿಸಿ ಮೆದುವಾದ ರೇಷ್ಮೆ ವಸ್ತ್ರದಿಂದ ದೇವಿಯ ಚರಣಕಮಲಗಳನ್ನು ಮೆಲ್ಲಗೆ ಒರೆಸುತ್ತಿದ್ದೇನೆ. ಈಗ ದೇವಿಯ ಎರಡೂ ಚರಣಗಳ ಮೇಲೆ ನಾನು ಒದ್ದೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸುತ್ತಿದ್ದೇನೆ. ಅದರ ಮೇಲೆ ಅಕ್ಷತೆಯನ್ನು ಹಾಕುತ್ತಿದ್ದೇನೆ. ಸುವಾಸನೆಯುಕ್ತ ಊದುಬತ್ತಿಗಳನ್ನು ಹಚ್ಚಿದ್ದೇನೆ. ನೀಲಾಂಜನಗಳನ್ನು ಹಚ್ಚಿದ್ದೇನೆ. ದುರ್ಗಾದೇವಿಯು ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಉಟ್ಟಿದ್ದಾಳೆ. ಅದರ ಅಂಚು ಚಿನ್ನದ್ದಾಗಿದೆ. ಅವಳು ಹಳದಿ ಜರಿಯ ಶಾಲನ್ನು ಹೊದ್ದುಕೊಂಡಿದ್ದಾಳೆ. ಅದರ ಮೇಲೆ ಸುಂದರವಾದ ಕಸೂತಿಯನ್ನು ಮಾಡಲಾಗಿದೆ. ದೇವಿಯು ವಿವಿಧ ರೀತಿಯ ಆಭರಣಗಳನ್ನು ಧರಿಸಿರುವುದು ಕಾಣಿಸುತ್ತಿದೆ. ದೇವಿಯ ಈ ರೂಪವನ್ನು ನೋಡಿ ಮನಸ್ಸಿಗೆ ಬಹಳ ಆನಂದವೆನಿಸುತ್ತಿದೆ. ಚಿನ್ನದ ಹರಿವಾಣದಲ್ಲಿರುವ ಚಿನ್ನದ ಬಟ್ಟಲುಗಳಲ್ಲಿ ಅರಶಿಣ-ಕುಂಕುಮ ಕೇಸರಿ, ಅಷ್ಟಗಂಧ ಮತ್ತು ಕಸ್ತೂರಿ ಇದೆ. ಅದನ್ನು ನಾನು ದೇವಿಯ ಹಣೆಗೆ ಮೃದುವಾಗಿ ಹಚ್ಚುತ್ತಿದ್ದೇನೆ. ದೇವಿಗೆ ಕುಂಕುಮ ಹಚ್ಚುವಾಗ ಬೆರಳುಗಳಿಂದ ಪ್ರಚಂಡ ಪ್ರಮಾಣದಲ್ಲಿ ಶಕ್ತಿಯ ಸ್ರೋತವು ನನ್ನ ಶರೀರದೊಳಗೆ ಹೋಗುತ್ತಿದೆ. ದೇವಿಗೆ ಇಷ್ಟವಾದ ಮಲ್ಲಿಗೆ, ಕಮಲ, ಸಂಪಿಗೆ, ಬಕುಳ ಮುಂತಾದ ಸುವಾಸಿತ ಹೂವುಗಳನ್ನು ಅವಳ ಚರಣಗಳಲ್ಲಿ ಅರ್ಪಿಸಿ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ. ದೇವಿಗೆ ಹೂವುಗಳನ್ನು ಅರ್ಪಿಸಿದಾಗ ಸುಗಂಧವು ಹರಡುತ್ತಿದೆ. ಸಾಕ್ಷಾತ ದೇವಿಯ ಚರಣಗಳಿಗೆ ಅರ್ಪಣೆಯಾಗುತ್ತಿರುವುದರಿಂದ ಹೂವುಗಳೂ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿವೆ. ಈಗ ನಾನು ಪಂಚಾರತಿಯಿಂದ ದೇವಿಗೆ ಆರತಿಯನ್ನು ಬೆಳಗುತ್ತಿದ್ದೇನೆ. ಜ್ಯೋತಿಯ ಪ್ರಕಾಶದಲ್ಲಿ ದೇವಿಯ ರೂಪವು ಅತ್ಯಂತ ತೇಜಸ್ವಿಯಾಗಿ ಕಾಣಿಸುತ್ತಿದೆ. ಈಗ ನಾನು ದೇವಿಗೆ ಹೋಳಿಗೆಯ ನೈವೇದ್ಯವನ್ನು ತೋರಿಸುತ್ತಿದ್ದೇನೆ ಮತ್ತು ದೇವಿಗೆ ಆ ನೈವೇದ್ಯವನ್ನು ಸ್ವೀಕರಿಸಲು ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೇನೆ. ಈ ಅಜ್ಞಾನಿ ಮಗುವಿನ ಪ್ರಾರ್ಥನೆಯನ್ನು ಕೇಳಿ ದೇವಿಯು ಸ್ವಲ್ಪ ನೈವೇದ್ಯವನ್ನು ಸ್ವೀಕರಿಸುತ್ತಿದ್ದಾಳೆ. ಈಗ ಅತ್ಯಂತ ಉತ್ಕಟ ಭಾವದಿಂದ ನಾನು ತಾಯಿಗೆ ಆರತಿಯನ್ನು ಬೆಳಗುತ್ತಿದ್ದೇನೆ. ದೇವಿಯಲ್ಲಿ ವಿನಂತಿಸುತ್ತಿದ್ದೇನೆ, ಹೇ ದೇವಿ, ನನ್ನನ್ನು ಉದ್ಧರಿಸು, ಈ ಭವಸಾಗರದಿಂದ ನನ್ನನ್ನು ಪಾರು ಮಾಡು. ನನ್ನಲ್ಲಿ ನಿನ್ನ ಬಗ್ಗೆ ಭಕ್ತಿಭಾವವು ಉಂಟಾಗುವಂತೆ ಮಾಡು. ಒಂದು ಕ್ಷಣವೂ ನನಗೆ ನಿನ್ನ ಮರೆವು ಆಗದಿರಲಿ. ಸಾಧನೆಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಹಾಗು ಮನಃಪೂರ್ವಕವಾಗಿ ಮಾಡಲು ನೀನೇ ನನಗೆ ಶಕ್ತಿ, ಬುದ್ಧಿ ಮತ್ತು ಚೈತನ್ಯವನ್ನು ಪ್ರದಾನಿಸು. ಈ ಪ್ರಾರ್ಥನೆಯನ್ನು ಕೇಳಿ ದೇವಿಯು ವಾತ್ಸಲ್ಯಮಯ ದೃಷ್ಟಿಯಿಂದ ನನ್ನತ್ತ ನೋಡುತ್ತಿದ್ದಾಳೆ. ಅವಳ ಈ ಕೃಪಾಕಟಾಕ್ಷದಿಂದ ನನ್ನ ಎಲ್ಲ ದುಃಖಗಳು ನಾಶವಾಗುತ್ತಿವೆ. ಆ ತಾಯಿ ತನ್ನ ಪ್ರೇಮಮಯ ವರದಹಸ್ತ ನನ್ನ ತಲೆಯ ಮೇಲಿಟ್ಟು ನನಗೆ ಆಶೀರ್ವಾದವನ್ನು ನೀಡುತ್ತಿದ್ದಾಳೆ. ದೇವಿಯು ನನಗೆ ಮಲ್ಲಿಗೆಯ ಹೂವುಗಳ ವೇಣಿಯನ್ನು ಪ್ರಸಾದವೆಂದು ನೀಡುತ್ತಿದ್ದಾಳೆ. ಅದಾದ ನಂತರ ದೇವಿಯು ಅಂತರ್ಧಾನಳಾಗುತ್ತಿದ್ದಾಳೆ. ದೇವಿಯ ದರ್ಶನದಿಂದ ನನ್ನ ಮನಸ್ಸು ಕೃತಾರ್ಥ ಭಾವದಿಂದ ತುಂಬಿಹೋಗಿದೆ. ನನಗೆ ಮಾನಸಪೂಜೆಯನ್ನು ಮಾಡಲು ಅವಕಾಶ ನೀಡಿದ ಬಗ್ಗೆ ದೇವಿಯ ಚರಣಗಳಲ್ಲಿ ಅನನ್ಯ ಭಾವದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಇದೇ ರೀತಿ ನಾವು ನಮ್ಮ ಗುರುದೇವರ ಅಥವಾ ಇಷ್ಟದೇವರ ಮಾನಸಪೂಜೆಯನ್ನು ಪ್ರತಿದಿನ ಮಾಡಲು ಪ್ರಯತ್ನಿಸೋಣ. ಮಾನಸಪೂಜೆಯನ್ನು ಹೆಚ್ಚಿನ ಏಕಾಗ್ರತೆಯಿಂದ ಮಾಡಲಾಗುವುದರಿಂದ ನಮಗೆ ದೇವತೆಯ ಅಸ್ತಿತ್ವದ ಪ್ರಚೀತಿಯು ಬರಬಹುದು. ತಾವೆಲ್ಲರೂ ಇದೇ ರೀತಿ ಪ್ರಯತ್ನ ಮಾಡುವಿರಲ್ಲವೇ?

Leave a Comment