ಸಾಧನಾವೃದ್ಧಿ ಸತ್ಸಂಗ (3)

ಒಳ್ಳೆಯ ಕಾರ್ಯಗಳಲ್ಲಿ ಅಥವಾ ಸಾಧನೆಯಲ್ಲಿ ಅಡಚಣೆಗಳು ಏಕೆ ಬರುತ್ತವೆ?

ಹೆಚ್ಚಾಗಿ ಒಳ್ಳೆಯ ಕೃತಿಗಳನ್ನು ಮಾಡುವಾಗ ಅದರಲ್ಲಿ ಅಡಚಣೆಗಳು ಬರುತ್ತವೆ. ಸಾಮಾನ್ಯ ಉದಾಹರಣೆ ಎಂದರೆ ನಾಮಜಪಿಸುವುದು. ಏಕಾಗ್ರತೆಯಿಂದ ಮತ್ತು ಭಾವಪೂರ್ಣ ನಾಮಜಪ ಮಾಡುವಾಗ ಅನೇಕ ಸಲ ನಮ್ಮ ಮನಸ್ಸು ಅಲೆದಾಡುತ್ತದೆ. ಜಪ ಮರೆತು ಹೋಗುತ್ತದೆ ಅಥವಾ ನಾಮಜಪಿಸಲು ಕುಳಿತುಕೊಳ್ಳುವ ಸಮಯದಲ್ಲಿ ಒಂದಲ್ಲ ಒಂದು ಕೆಲಸ ಬರುತ್ತದೆ, ಇದನ್ನೆಲ್ಲ ತಾವೆಲ್ಲರೂ ಅನುಭವಿಸಿರಬಹುದು ಅಲ್ಲವೇ? ಟಿವಿ ಸಿರಿಯಲ್ (ಧಾರಾವಾಹಿ) ನೋಡುವುದಿದ್ದಲ್ಲಿ ನಮ್ಮ ಮನಸ್ಸನ್ನು ಏಕಾಗ್ರಗೊಳಿಸಬೇಕಾಗುತ್ತದೆಯೇ? ಹೆಚ್ಚಿನವರು ತನ್ಮಯರಾಗಿ ನೋಡುತ್ತಿರುತ್ತಾರೆ. ಹೀಗೇಕಾಗುತ್ತದೆ? ಒಳ್ಳೆಯ ಕಾರ್ಯಗಳಲ್ಲಿ ಅಥವಾ ಸಾಧನೆಯಲ್ಲಿ ಅಡಚಣೆಗಳು ಏಕೆ ಬರುತ್ತವೆ? ಇದನ್ನು ನಾವಿಂದು ತಿಳಿದುಕೊಳ್ಳುವವರಿದ್ದೇವೆ.

ಅ. ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ

ಸಮಾಜದಲ್ಲಿ ಒಳ್ಳೆಯ – ಕೆಟ್ಟ ಪ್ರವೃತಿ ಇರುವಂತೆಯೇ ವಾತಾವರಣದಲ್ಲಿ ದೈವಿ ಅಥವಾ ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಸಮಾಜದಲ್ಲಿ ಕೆಟ್ಟ ಪ್ರವೃತಿಯು ಹೇಗೆ ಸ್ಥೂಲರೂಪದಲ್ಲಿ ಕಾರ್ಯನಿರತವಿರುವುದು ಕಾಣಿಸುತ್ತದೆಯೋ ಹಾಗೆಯೇ ವಾತಾವರಣದಲ್ಲಿ ಅವು ಸೂಕ್ಷ್ಮದಿಂದಲೂ ಕಾರ್ಯ ನಿರತವಾಗಿರುತ್ತವೆ. ಯಾವುದನ್ನು ನಾವು ಅಧ್ಯಾತ್ಮದ ಭಾಷೆಯಲ್ಲಿ ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿ ಎನ್ನುತ್ತೇವೆಯೋ ಅದನ್ನೇ ವೈಜ್ಞಾನಿಕ ಭಾಷೆಯಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಎನ್ನುತ್ತಾರೆ. ವಾತಾವರಣದಲ್ಲಿರುವ ಸಕಾರಾತ್ಮಕ ಅಥವಾ ದೈವೀ ಶಕ್ತಿಯು ಸಾಧನೆ ಮಾಡುವವರಿಗೆ ಸಹಾಯ ಮಾಡುತ್ತವೆ ಹಾಗೂ ನಕಾರಾತ್ಮಕ ಅಥವಾ ಕೆಟ್ಟ ಶಕ್ತಿಗಳು ಸಾಧನೆ ಮಾಡುವವರಿಗೆ ತೊಂದರೆ ಅಥವಾ ಸತ್ಕಾರ್ಯ ದಲ್ಲಿ ತೊಂದರೆಗಳನ್ನು ತಂದೊಡ್ಡುತ್ತವೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿ ಅಥವಾ ದೈವೀ ಮತ್ತು ಕೆಟ್ಟ ಶಕ್ತಿಗಳ ನಡುವೆ ಅನಾದಿ ಕಾಲದಿಂದ ಸಂಘರ್ಷವು ನಡೆಯುತ್ತಿದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಯಜ್ಞಯಾಗಾದಿ ವಿಧಿಗಳನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ರಾಕ್ಷಸರು ಅದಕ್ಕೆ ವಿಘ್ನಗಳನ್ನು ತರುತ್ತಿದ್ದರು, ಋಷಿಮುನಿಗಳನ್ನು ಕೊಲ್ಲುತ್ತಿದ್ದರು, ಹಸುಗಳನ್ನು ಕೊಂದು ತಿನ್ನುತ್ತಿದ್ದರು, ಈ ಇತಿಹಾಸವು ನಮಗೆಲ್ಲರಿಗೂ ಗೊತ್ತಿದೆ. ಅಸುರರು ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ದೇವತೆಗಳಿಗೆ ಹಾಗೂ ಪ್ರಭು ಶ್ರೀರಾಮಚಂದರ ಹಾಗೂ ಭಗವಂತ ಶ್ರೀಕೃಷ್ಣನಂತಹ ಸಾಕ್ಷಾತ್ ಅವತಾರಗಳಿಗೂ ತೊಂದರೆಯನ್ನು ನೀಡಿದ್ದರು. ಆದರೆ ದೇವತೆಗಳು ಮತ್ತು ಅವತಾರಗಳು ಅಸುರರೊಂದಿಗೆ ಯುದ್ಧವನ್ನು ಮಾಡಿ ಧರ್ಮ ವಿಜಯವನ್ನು ಗಳಿಸುತ್ತಿದ್ದರು. ಇಂದಿನ ತನಕ ನಡೆದ ಎಲ್ಲ ದೇವಾಸುರ ಯುದ್ಧಗಳಲ್ಲಿ ಕೊನೆಗೆ ದೇವತೆಗಳು, ಅವತಾರಗಳು ಮತ್ತು ದೇವತೆಗಳ ಪಕ್ಷದಲ್ಲಿ ಹೋರಾಡಿದವರೇ ವಿಜಯಿಯಾಗಿದ್ದಾರೆ. ಈ ದೇವಾಸುರ ಸಂಗ್ರಾಮವು ಕೇವಲ ಪ್ರಾಚೀನ ಕಾಲದಲ್ಲಿ ಮಾತ್ರ ನಡೆಯುತ್ತಿತ್ತು ಎಂದೇನಿಲ್ಲ. ಅದು ಯುಗಾನುಯುಗಗಳಿಂದ ನಡೆಯುತ್ತಲೇ ಇದೆ. ಸಾಧನೆಯಲ್ಲಿ ಬರುವ ಅಡಚಣೆಗಳು ಅಥವಾ ನಮ್ಮ ಸಾಧನೆಯಲ್ಲಾಗುವ ವಿರೋಧವು ಸಹ ಅದರದ್ದೇ ಭಾಗವಿರುವ ಸಾಧ್ಯತೆಯಿದೆ. ಹಾಗಾಗಿ ನಾವು ಸತರ್ಕರಾಗಿದ್ದುಕೊಂಡು ಆಧ್ಯಾತ್ಮಿಕ ಉಪಾಯಗಳನ್ನು (ಉಪಚಾರಗಳನ್ನು) ಮತ್ತು ಸಾಧನೆಯನ್ನು ಜಿಗುಟುತನದಿಂದ ಮಾಡುವುದರ ಕಡೆಗೆ ಗಮನವನ್ನು ನೀಡಬೇಕಾಗಿದೆ.

ಆ. ಕೆಟ್ಟ ಅಥವಾ ನಕಾರಾತ್ಮಕ ಶಕ್ತಿ ಎಂದರೇನು?

ಹಿಂದಿನ ಕಾಲದಲ್ಲಿ ಅಸುರೀ ಶಕ್ತಿಗಳು ರಾಕ್ಷಸ ರೂಪದಲ್ಲಿ ಸ್ಥೂಲದಿಂದ ಪ್ರಕಟವಾಗುತ್ತಿದ್ದವು. ರಾವಣ, ಶುಂಭ-ನಿಶುಂಭ, ಹಿರಣ್ಯಕಶ್ಯಪು, ಸಿಂದುರಾಸುರ ಇವರೆಲ್ಲರೂ ಮಾನವೀ ರೂಪದಲ್ಲಿದ್ದ ಆಸುರೀ ಶಕ್ತಿಗಳಾಗಿದ್ದರು. ಸದ್ಯದ ಕಾಲದಲ್ಲಿ ಈ ಅನಿಷ್ಟ ಶಕ್ತಿಗಳು ಸೂಕ್ಷ್ಮದಿಂದ ಕಾರ್ಯ ಮಾಡುತ್ತಿರುತ್ತವೆ. ಸಾಮಾನ್ಯವಾಗಿ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಯಿಂದ ವ್ಯಕ್ತಿಗೆ ಶಾರೀರಿಕ, ಮಾನಸಿಕ, ಕೌಟುಂಬಿಕ ಹೀಗೆ ವಿವಿಧ ಸ್ವರೂಪದ ತೊಂದರೆಗಳಾಗುತ್ತವೆ. ನಮಗೆ ಸ್ಪಂದನಗಳ ಮೂಲಕವೂ ಆ ವಿಷಯದ ಅರಿವಾಗಬಲ್ಲದು. ಒಂದು ಉದಾಹರಣೆಯ ಮೂಲಕ ನಾವು ಅದನ್ನು ಅನುಭವಿಸೋಣ.

ಇಲ್ಲಿ ೨ ಚಿತ್ರಗಳನ್ನು ನೀಡಲಾಗಿದೆ. ಆ ಚಿತ್ರಗಳನ್ನು ಒಂದೊಂದು ನಿಮಿಷ ಏಕಾಗ್ರತೆಯಿಂದ ನೋಡಿ ಅದರಲ್ಲಿ ಯಾವ ಚಿತ್ರವನ್ನು ನೋಡಿದರೆ ತಮಗೆ ಒಳ್ಳೆಯದೆನಿಸುತ್ತದೆ ಎಂದು ಅಧ್ಯಯನ ಮಾಡಿರಿ.

ಯಾವ ಚಿತ್ರವನ್ನು ನೋಡಿದಾಗ ತಮಗೆ ಒಳ್ಳೆಯದೆನಿಸಿತು? ಆಸ್ಪತ್ರೆಗಿಂತ ಮಂದಿರದ ಚಿತ್ರವನ್ನು ನೋಡಿದಾಗ ಒಳ್ಳೆಯದೆನಿಸುತ್ತದೆ. ಇದಕ್ಕೆ ಕಾರಣವೇನೇಂದರೆ ಆಸ್ಪತ್ರೆಯಲ್ಲಿ ತಮೋಗುಣ ಹಾಗೂ ಮಂದಿರದಲ್ಲಿ ಸತ್ತ್ವಗುಣ ಹೆಚ್ಚು ಇರುತ್ತದೆ. ಆಸ್ಪತ್ರೆಯಲ್ಲಿನ ಹೆಚ್ಚಿನ ವ್ಯಕ್ತಿಗಳು ಶಾರೀರಿಕ ಅಥವಾ ಮಾನಸಿಕ ವ್ಯಾಧಿಯಿಂದ ಪೀಡಿತರಾಗಿರುತ್ತಾರೆ ಅಂದರೆ ಅನಾರೋಗ್ಯಪೀಡಿತರಾಗಿರುತ್ತಾರೆ. ಅನಾರೋಗ್ಯ ಪೀಡಿತ ವ್ಯಕ್ತಿಯ ಪ್ರಾಣಶಕ್ತಿಯು ಅಲ್ಪವಾಗಿರುತ್ತದೆ. ಹಾಗೂ ಶಾರೀರಿಕ ತೊಂದರೆ, ವೇದನೆ, ದುಃಖ ಇವುಗಳಿಂದ ಅದರ ತಮೋಗುಣ ಹೆಚ್ಚಾಗಿರುತ್ತದೆ. ಹಾಗಾಗಿ ಆಸ್ಪತ್ರೆಯ ವಾತಾವರಣದಲ್ಲಿ ಒಟ್ಟು ತಮೋಗುಣವು ಹೆಚ್ಚಾಗುತ್ತದೆ. ತಮೋಗುಣದಿಂದ ಇಲ್ಲಿ ತೊಂದರೆದಾಯಕ ಸ್ಪಂದನಗಳು ಹರಡುತ್ತಿರುತ್ತದೆ. ಇದಕ್ಕೆ ವಿರುದ್ಧವಾಗಿ ದೇವಸ್ಥಾನಗಳು ಸಾತ್ತ್ವಿಕ ಮತ್ತು ಚೈತನ್ಯದಾಯಕ ಲಹರಿಗಳು ಶಕ್ತಿಯ ಸ್ರೋತಗಳಾಗಿರುತ್ತವೆ. ದೇವಾಲಯಗಳಲ್ಲಿ ದೇವತೆಯ ಮೂರ್ತಿಯಿರುತ್ತದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿತ ಶಕ್ತಿ ಒಟ್ಟಿಗೆ ಇರುತ್ತದೆ’ ಎಂಬ ಅಧ್ಯಾತ್ಮದ ತತ್ತ್ವಕ್ಕನುಸಾರ ದೇವಸ್ಥಾನದಲ್ಲಿ ದೇವತೆಯ ಸ್ಪಂದನಗಳು ಮತ್ತು ಶಕ್ತಿಯು ಕಾರ್ಯನಿರತವಾಗಿರುತ್ತದೆ. ಹಾಗಾಗಿ ದೇವಸ್ಥಾನಗಳಿಂದ ಚೈತನ್ಯ ಪ್ರಕ್ಷೇಪಿತವಾಗುತ್ತದೆ. ದೇವಸ್ಥಾನದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಮತ್ತು ಚೈತನ್ಯದಾಯಕ ಲಹರಿಗಳಿಂದ ದೇವಾಲಯಗಳತ್ತ ನೋಡಿದಾಗ ಪ್ರಸನ್ನವೆನಿಸುತ್ತದೆ. ತಾವೆಲ್ಲರೂ ಸಹ ಇದನ್ನು ಅನುಭವಿಸಿರಬಹುದು, ಒಂದೇ ಕಟ್ಟಡದಲ್ಲಿರುವ ಒಂದು ಮನೆಯಲ್ಲಿ ಅಂದರೆ ಫ್ಲಾಟ್ ನಲ್ಲಿ ಬಹಳ ಒಳ್ಳೆಯದೆನಿಸುತ್ತದೆ. ಆದರೆ ಇನ್ನೊಂದು ಫ್ಲಾಟ್ ನಲ್ಲಿ ವಾತಾವರಣದಲ್ಲಿ ಒತ್ತಡ ಅಂದರೆ ‘ಪ್ರೆಶರ್’ ಇದ್ದಂತೆ ಅನಿಸುತ್ತದೆ. ದೇವಸ್ಥಾನಗಳು, ಹಣ್ಣಿನ ತೋಟಗಳಂತಹ ಪರಿಸರಕ್ಕೆ ಹೋದಾಗ ಮನಸ್ಸು ಉತ್ಸಾಹಿಯಾಗುತ್ತದೆ. ಆದರೆ ಸ್ಮಶಾನ, ಆಸ್ಪತ್ರೆಗಳಂತಹ ಪರಿಸರಕ್ಕೆ ಹೋದಾಗ ಬೇಡ ಅನಿಸುತ್ತದೆ ಅಥವಾ ಮನಸ್ಸಿನ ಸ್ತರದಲ್ಲಿ ಅಸ್ವಸ್ಥವೆನಿಸುತ್ತದೆ. ಇದರ ಕಾರಣಗಳನ್ನು ವಿಜ್ಞಾನದ ಮೂಲಕ ಅಥವಾ ಬಾಹ್ಯ ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ಕಂಡುಹಿಡಿಯಲು ಆಗುವುದಿಲ್ಲ. ಏಕೆಂದರೆ ಹೆಚ್ಚಿನ ಸಲ ಆಧ್ಯಾತ್ಮಿಕ ಅಂದರೆ ಕೆಟ್ಟ ಶಕ್ತಿಗಳ ಅಥವಾ ನಕಾರಾತ್ಮಕ ಶಕ್ತಿಯ ಪ್ರಭಾವವು ಇದರ ಹಿಂದಿರುತ್ತದೆ.

ಇ. ಕೆಟ್ಟ ಶಕ್ತಿಗಳ ತೊಂದರೆಯನ್ನು ಹೇಗೆ ಗುರುತಿಸಬಹುದು?

ಇಂದಿನ ಕಾಲದಲ್ಲಿ ಹೆಚ್ಚಿನವರಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವರಿಗೆ ಅದು ತೀವ್ರ ಸ್ವರೂಪದಲ್ಲಿರುತ್ತದೆ. ಕೆಲವರಿಗೆ ಮಧ್ಯಮ, ಇನ್ನು ಕೆಲವರಿಗೆ ಮಂದ ಸ್ವರೂಪದಲ್ಲಿರುತ್ತದೆ. ಈ ತೊಂದರೆಗಳ ಕೆಲವು ಲಕ್ಷಣಗಳಿರುತ್ತವೆ. ಅದನ್ನು ನಾವೀಗ ತಿಳಿದುಕೊಳ್ಳೋಣ.

೧. ಶಾರೀರಿಕ : ಕೆಟ್ಟ ಶಕ್ತಿಗಳ ತೊಂದರೆಗಳ ಶಾರೀರಿಕ ಲಕ್ಷಣಗಳೇನೆಂದರೆ ವ್ಯಕ್ತಿಯಲ್ಲಿರುವ ಶಾರೀರಿಕ ಅನಾರೋಗ್ಯವು ಅನೇಕ ತಿಂಗಳು ಅಥವಾ ವರ್ಷಗಳ ಕಾಲ ಉಪಚಾರ ಮಾಡಿಯೂ ಗುಣಮುಖವಾಗದಿರುವುದು, ಉದಾಹರಣೆಗೆ ಆಹಾರ ಅಥವಾ ನೀರು ಜೀರ್ಣವಾಗದಿರುವುದು, ಹೊಟ್ಟೆಉಬ್ಬುವುದು, ಹೊಟ್ಟೆನೋವು, ಚರ್ಮರೋಗ, ಎಲುಬುಗಳು ದುರ್ಬಲವಾಗುವುದು, ರಕ್ತವಾಂತಿಯಾಗುವುದು, ಏನೂ ಕಾರಣವಿಲ್ಲದೇ ಸಮತೋಲನ ತಪ್ಪುವುದು, ದಮ್ಮುಕಟ್ಟುವುದು, ಮತ್ತು ಶಾರೀರಿಕ ಕ್ಷಮತೆ ಕಡಿಮೆಯಾಗುವುದು ಇತ್ಯಾದಿಗಳಿಗೆ ಉಪಚಾರ ಮಾಡಿದರೂ ಗುಣಮುಖರಾಗುವುದಿಲ್ಲ.

೨. ಮಾನಸಿಕ : ಮಾನಸಿಕ ಸ್ತರದಲ್ಲಿ ಏನು ಕಂಡುಬರುತ್ತದೆ ಎಂದರೆ ಒತ್ತಡ, ನಿರಾಶೆ, ಅತಿ ಭಯ, ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ತುಂಬುವುದು ಇತ್ಯಾದಿಗಳಿಂದ ಮನಸ್ಸು ಅಸ್ವಸ್ಥವಾಗುತ್ತದೆ.

೩: ಕೌಟುಂಬಿಕ : ಕೌಟುಂಬಿಕ ಸ್ತರದಲ್ಲಿ ಯಾವಾಗಲೂ ಚಿಕ್ಕದೊಡ್ಡ ಪ್ರಸಂಗದಲ್ಲಿಯೂ ಕುಟುಂಬದವರ ನಡುವೆ ಭಿನ್ನಾಭಿಪ್ರಾಯಗಳು ಅಥವಾ ತಪ್ಪುತಿಳುವಳಿಕೆಯಿರುತ್ತದೆ. ಇದರಿಂದ ಅಂತರ, ಸಂಶಯ ಅಥವಾ ವೈರತ್ವವು ಉಂಟಾಗಿರುತ್ತದೆ. ಕುಟುಂಬದ ಸದಸ್ಯರಿಗೆ ವ್ಯಸನ ತಗಲಿರುತ್ತದೆ; ಅಥವಾ ಒಬ್ಬರಲ್ಲ ಒಬ್ಬರು ಅನಾರೋಗ್ಯಕ್ಕೊಳಗಾಗುತ್ತಾರೆ. ಕುಟುಂಬದ ವ್ಯಕ್ತಿಗಳಿಗೆ ಚಿಕ್ಕ-ದೊಡ್ಡ ಅಪಘಾತಗಳಾಗುತ್ತವೆ. ಕೆಲವರು ಅಕಾಲದಲ್ಲಿ ಅಥವಾ ಅಪಘಾತದಲ್ಲಿ ನಿಧನ ಹೊಂದುತ್ತಾರೆ ಇವೇ ಮುಂತಾದ ತೊಂದರೆಗಳಾಗುತ್ತವೆ.

೪: ಆರ್ಥಿಕ : ಆರ್ಥಿಕ ಸ್ತರದಲ್ಲಿ ಏನು ಗಮನಕ್ಕೆ ಬರುತ್ತದೆ ಅಂದರೆ ಬಹಳ ಪ್ರಯತ್ನಿಸಿದ ನಂತರವೂ ನೌಕರಿ ಸಿಗದಿರುವುದು; ವ್ಯವಹಾರದಲ್ಲಿ ಯಶಸ್ಸು ಸಿಗದಿರುವುದು, ಮಿತವ್ಯಯ ಮಾಡಿಯೂ ಮನೆಯಲ್ಲಿ ಹಣ ಉಳಿಯದಿರುವುದು, ಹಣ ಜಮೆಯಾಗುತ್ತಲೇ ಅದು ವೈದ್ಯಕೀಯ ಉಪಚಾರ, ಅಪಘಾತದ ನಷ್ಟ ಪರಿಹಾರಕ್ಕೆ, ಸಾಲ ತೀರಿಸಲು ಇತ್ಯಾದಿಗಳಿಗಾಗಿ ರ‍್ಚಾಗುತ್ತದೆ.

೫. ಆಧ್ಯಾತ್ಮಿಕ : ಆಧ್ಯಾತ್ಮಿಕ ತೊಂದರೆಗಳ ಇತರ ಕೆಲವು ಲಕ್ಷಣಗಳಿರುತ್ತವೆ. ಉದಾ: ವಿವಾಹವಾಗದಿರುವುದು, ವೈವಾಹಿಕ ಸಮಸ್ಯೆಗಳು ಉಂಟಾಗುವುದು, ಮಕ್ಕಳಾಗದಿರುವುದು, ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಸಾವನ್ನಪ್ಪುವುದು, ಬಾವಿಯ ನೀರಿಗೆ ಕಪ್ಪು ಪದರ ಬರುವುದು, ನೀರಿನ ರುಚಿ ಅಕಸ್ಮಾತ್ತಾಗಿ ಬದಲಾಗುವುದು, ನೀರು ಅಕಸ್ಮಾತ್ತಾಗಿ ಬತ್ತಿ ಹೋಗುವುದು; ಮನೆಯಲ್ಲಿ ಬೇಯಿಸಿದ ಆಹಾರ ಸಾಕಾಗದಿರುವುದು, ಆಹಾರದಲ್ಲಿ ಮುಳ್ಳುಗಳು ಅಥವಾ ಮೊಳೆಗಳು ಕಂಡುಬರುವುದು, ಕೊಟ್ಟಿಗೆಯಲ್ಲಿರುವ ಹಸುವಿನ ಹಾಲು ಇದ್ದಕ್ಕಿದ್ದಂತೆ ಇಂಗಿ ಹೋಗುವುದು, ಹಸುವಿನ ಕರುಗಳು ಬದುಕದಿರುವುದು, ಮನೆಯಲ್ಲಿ ಕೆಂಪು ಇರುವೆಗಳು, ಬಲೆಗಳು, ಹಲ್ಲಿಗಳು, ಇಲಿಗಳು ಅಥವಾ ತಿಗಣೆಗಳ ತೊಂದರೆ ಪ್ರಾರಂಭವಾಗುವುದು, ಮನೆಯಲ್ಲಿ ಕಾಗೆ, ಪರಿವಾಳ, ಕಪ್ಪು ಹಾವು, ಗೂಬೇ ಅಥವಾ ಹದ್ದು ಬರುವುದು, ಮನೆಯಲ್ಲಿ ನೆಟ್ಟ ತುಳಸಿಯು ಕಾರಣವಿಲ್ಲದೇ ಕರಟಿಹೋಗುವುದು, ದಾಸವಾಳ ಹೂವಿನಲ್ಲಿ ಕಪ್ಪು ಕಲೆ ಅಥವಾ ತೂತು ಬೀಳುವುದು, ಮಾವಿನ ಹಣ್ಣಿನ ಚಿಗುರುಗಳು ಇದ್ದಕ್ಕಿದ್ದಂತೆ ಉದುರಿಹೋಗುವುದು, ಗಿಡಗಳಿಗೆ ಗೆದ್ದಲು ಹಿಡಿಯುವುದು, ಮರದ ಎಲೆಗಳು ಅಕಾಲದಲ್ಲಿ ಉದುರುವುದು, ಹಣ್ಣುಗಳಾಗದಿರುವುದು, ಹಣ್ಣುಗಳಾದರೂ ರೋಗಗ್ರಸ್ತ ಅಥವಾ ವಿಚಿತ್ರ ಬಣ್ಣದ ಹಣ್ಣುಗಳಾಗುವುದು. ರುಚಿಯಿಲ್ಲದ ಕಾಯಿಪಲ್ಲೆಗಳು ಮತ್ತು ಬೆಳೆ ಸರಿಯಾಗಿ ಬರದಿರುವುದು, ನಿದ್ದೆಯಲ್ಲಿ ಹೆದರಿ ಏಳುವುದು, ವ್ಯಕ್ತಿಗೆ ರಾಮರಕ್ಷೆಯನ್ನು ಹೇಳುವಾಗ ಆಕಳಿಕೆ ಬರುವುದು, ಕೆಟ್ಟ ಕನಸುಗಳು ಬೀಳುವುದು, ನಿದ್ದೆಯಲ್ಲಿ ಕಿರುಚಾಡುವುದು ಅಥವಾ ಹಲ್ಲುಗಳನ್ನು ಕಚ್ಚುವುದು, ಬಟ್ಟೆಗಳ ಮೇಲೆ ಅಕಸ್ಮಾತ್ತಾಗಿ ವಿಚಿತ್ರ ಕಲೆಗಳು ಬೀಳುವುದು, ಬಟ್ಟೆಗಳು ಕಾರಣವಿಲ್ಲದೇ ಹರಿದುಹೋಗುವುದು ಅಥವಾ ಸುಟ್ಟುಹೋಗುವುದು; ವಸ್ತು ಕಳೆದು ಹೋಗುವುದು, ಪರ್ಸನಲ್ಲಿರುವ ಹಣವೂ ತನ್ನಿಂದತಾನೇ ಕಮ್ಮಿಯಾಗುವುದು, ಹಾಸಿಗೆ, ಗೋಡೆಗಳ ಮೇಲೆ ರಕ್ತದ ಕಲೆಗಳು ಬೀಳುವುದು, ದೇವರಕೋಣೆಯಲ್ಲಿರುವ ದೀಪವು ತನ್ನಿಂದತಾನೇ ಆರಿಹೋಗುವುದು, ರಕ್ತ ತಾಗಿದ ಬಟ್ಟೆಗಳು ಕಂಡುಬರುವುದು, ಕಪ್ಪು ಗೊಂಬೆ, ಸೂಜಿ ಚುಚ್ಚಿದ ಅಥವಾ ಮಂತ್ರಿಸಿದ ಲಿಂಬೆಹಣ್ಣುಗಳು ಕಂಡುಬರುವುದು, ಮೆಣಸು ಸುಟ್ಟ ವಾಸನೆ ಬರುವುದು, ದುರ್ಗಂಧ ಬರುವುದು, ರಾತ್ರಿ ವಾಸ್ತುವಿನಲ್ಲಿ ಗೆಜ್ಜೆ ನಾದ, ಅಥವಾ ಕಿರುಚಾಟವು ಕೇಳಿ ಬರುವುದು ಇತ್ಯಾದಿ. ಇಂತಹ ರೀತಿಯ ಲಕ್ಷಣಗಳು ಕಂಡುಬರುತ್ತಿದ್ದಲ್ಲಿ ಅದರ ಹಿಂದೆ ‘ಕೆಟ್ಟ ಶಕ್ರಿಗಳ ತೊಂದರೆ’ಯೇ ಕಾರಣವಾಗಿರಬಹುದು.

ಬಾಹ್ಯತಃ ಇಂತಹ ಘಟನೆಗಳ ಹಿಂದಿನ ಕಾರಣಗಳು ಗಮನಕ್ಕೆ ಬರುವುದಿಲ್ಲ; ಆದರೆ ಆಧ್ಯಾತ್ಮಿಕ ಉಪಾಯಗಳನ್ನು ಅಥವಾ ಸಾಧನೆಯನ್ನು ಮಾಡಿದಾಗ ತೊಂದರೆಗಳು ದೂರವಾಗುತ್ತವೆ. ಈ ತೊಂದರೆಗಳ ಲಕ್ಷಣಗಳನ್ನು ನೋಡಿ ಯಾರಿಗಾದರೂ ಹೆದರಿಕೆ ಅಥವಾ ಚಿಂತೆಯಾಯಿತೇ? ಇದರ ಬಗ್ಗೆ ಏನೂ ಹೆದರುವ ಅಥವಾ ಚಿಂತೆ ಮಾಡುವ ಆವಶ್ಯಕತೆಯಿಲ್ಲ. ಏಕೆಂದರೆ ನಕಾರಾತ್ಮಕತೆಯ ತುಲನೆಯಲ್ಲಿ ಸಕಾರಾತ್ಮಕತೆಯ ಶಕ್ತಿಯು ಪ್ರಚಂಡವಾಗಿರುತ್ತದೆ. ನಾವು ಪ್ರತಿದಿನ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿದರೆ ಈ ತೊಂದರೆಗಳನ್ನು ಖಂಡಿತವಾಗಿಯೂ ನಿವಾರಣೆ ಮಾಡಿಕೊಳ್ಳಬಹುದು. ದೇವರ ಕೃಪೆಯಿಂದ ನಮಗೆ ಒಂದು ಹೊಸ ಮಜಲು ಕಲಿಯಲು ಸಿಗುತ್ತಿದೆ. ಅದು ತಿಳಿಯದೇ ಹೋಗಿದ್ದಲ್ಲಿ ನಾವು ಜೀವನವಿಡೀ ಆಧ್ಯಾತ್ಮಿಕ ತೊಂದರೆಗಳಿಗೆ ಬೌದ್ಧಿಕ ಅಥವಾ ಮಾನಸಿಕ ಸ್ತರದಲ್ಲಿಯೇ ಉಪಾಯ ಹುಡುಕಲು ಪ್ರಯತ್ನಿಸುತ್ತಿದ್ದೆವು ಮತ್ತು ತೊಂದರೆಯಲ್ಲಿಯೇ ಇರುತ್ತಿದ್ದೆವು! ಕೆಟ್ಟ ಶಕ್ತಿಗಳಿಂದ ಸಾಧನೆಯಲ್ಲಿ ತೊಂದರೆಗಳು ಬರುತ್ತವೆ. ಆಧ್ಯಾತ್ಮಿಕ ಉಪಾಯಗಳ ಮೂಲಕ ಆಧ್ಯಾತ್ಮಿಕ ತೊಂದರೆಗಳನ್ನು ನಿವಾರಿಸಬಹುದು. ಈ ಮಹತ್ವದ ಅಂಶವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು!

ಈ. ಆಧ್ಯಾತ್ಮಿಕ ಉಪಾಯಗಳ ಮಹತ್ವ

ಆಧ್ಯಾತ್ಮಿಕ ಉಪಾಯಗಳಿಂದ ನಮ್ಮ ಶರೀರ, ಮನಸ್ಸು, ಬುದ್ಧಿಗಳಮೇಲೆ ಬಂದಿರುವ ನಕಾರಾತ್ಮಕ ಮತ್ತು ಕೆಟ್ಟ ಶಕ್ತಿಗಳ ಆವರಣವು ದೂರವಾಗಲು ಸಹಾಯವಾಗುತ್ತದೆ. ಕೆಟ್ಟ ಶಕ್ತಿಗಳ ಮೇಲೆ ಪ್ರತೀಕಾರ ಮಾಡಲು ಸಾಧ್ಯವಾಗುತ್ತದೆ. ಆಧ್ಯಾತ್ಮಿಕ ಉಪಾಯಗಳಿಂದ ಸೂಕ್ಷ್ಮಸ್ತರದಲ್ಲಿ ಪರಿಣಾಮವಾಗಿ ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ ಮತ್ತು ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಯು ವ್ಯವಸ್ಥಿತವಾಗಿ ನಡೆಯುತ್ತದೆ.

ಆಧ್ಯಾತ್ಮಿಕ ಉಪಾಯಗಳು ವ್ಯಕ್ತಿಯ ಮೇಲೆ, ಹಾಗೂ ವಾಸ್ತು, ವಾಹನ ಮುಂತಾದವುಗಳ ಮೇಲೆಯೂ ಮಾಡಬಹುದು. ಈ ಆಧ್ಯಾತ್ಮಿಕ ಉಪಾಯಗಳು ಯಾವುವು? ದೃಷ್ಟಿ ತೆಗೆಯುವುದು, ನಾಮಜಪ-ಪ್ರಾರ್ಥನೆ ಮಾಡುವುದು, ವಾಸ್ತುವಿನಲ್ಲಿ ದೇವತೆಗಳ ನಾಮಪಟ್ಟಿಗಳನ್ನು ಹಚ್ಚುವುದು, ಸಾತ್ತ್ವಿಕ ಕರ್ಪೂರ-ಅತ್ತರು ಇವುಗಳಿಂದ ಉಪಾಯ ಮಾಡುವುದು, ಸ್ತೋತ್ರ ಮತ್ತು ಸಂತರು ಹಾಡಿದ ಭಜನೆಗಳನ್ನು ಹಾಕಿಡುವುದು..

ಉ. ಅತ್ಯಂತ ಸುಲಭ ಆಧ್ಯಾತ್ಮಿಕ ಉಪಾಯ – ಪ್ರಾರ್ಥನೆ

ನಾವು ಮುಂದಿನ ಸತ್ಸಂಗಗಳಲ್ಲಿ ಆಧ್ಯಾತ್ಮಿಕ ಉಪಾಯಗಳ ಬೇರೆ ಬೇರೆ ಪದ್ಧತಿಗಳ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯನ್ನು ಪಡೆದುಕೊಳ್ಳುವವರಿದ್ದೇವೆ. ಇಂದು ನಾವು ಸುಲಭವಾದ; ಆದರೆ ಪ್ರಭಾವಶಾಲಿಯಾದ ‘ಪ್ರಾರ್ಥನೆ’ ಈ ಆಧ್ಯಾತ್ಮಿಕ ಉಪಾಯದ ವಿಷಯದಲ್ಲಿ ತಿಳಿದುಕೊಳ್ಳೋಣ

೧. ನಾವು ದೇವಸ್ಥಾನಕ್ಕೆ ಹೋದಾಗ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಅಥವಾ ನಮಗೇನಾದರೂ ಸಂಕಟಗಳು ಬಂದಿದ್ದಲ್ಲಿ ನಾವು ಪ್ರಾರ್ಥನೆಯನ್ನು ಮಾಡುತ್ತೇವೆ; ಆದರೆ ಹೆಚ್ಚಾಗಿ ಈ ಪ್ರಾರ್ಥನೆಗಳು ನಮ್ಮ ಇಚ್ಛೆಯು ಪೂರ್ಣ ವಾಗಬೇಕೆಂದು ಅಥವಾ ಸಂಕಟವು ದೂರವಾಗಬೇಕೆಂಬ ಸಂದರ್ಭದ್ದಾಗಿರುತ್ತವೆ. ಸಾಧನೆಯನ್ನು ಮಾಡುವಾಗ ಏನು ಆವಶ್ಯಕವಿದೆ? ಕೆಲವು ವ್ಯಾವಹಾರಿಕ ವಿಷಯಗಳನ್ನು ದೇವರಲ್ಲಿ ಬೇಡುವುದಕ್ಕಿಂತ ಆಧ್ಯಾತ್ಮಿಕ ಸ್ತರದಲ್ಲಿ ಪ್ರಾರ್ಥನೆಯನ್ನು ಮಾಡುವುದು! ಆಧ್ಯಾತ್ಮಿಕ ಉಪಾಯಗಳ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಮಾಡುವುದು ಅಂದರೇನೆ? ನಾವು ಏನು ಮಾಡಬೇಕಾಗಿದೆ ಎಂದರೆ ನಮ್ಮ ಸುತ್ತಲೂ ಸಂರಕ್ಷಣಾ ಕವಚವು ನಿರ್ಮಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಬೇಕಾಗಿದೆ. ಅರ್ತ ಭಾವದಿಂದ ಮಾಡಿದ ಪ್ರಾರ್ಥನೆಯು ದೇವರ ಚರಣಗಳಿಗೆ ತಲುಪುತ್ತದೆ.

ನಾವು ನಮ್ಮ ಉಪಾಸ್ಯ ದೇವರಲ್ಲಿ ಸಂಪೂರ್ಣವಾಗಿ ಶರಣಾಗಿ ಪ್ರಾರ್ಥನೆಯನ್ನು ಮಾಡಬೇಕು – ಹೇ ಭಗವಂತಾ, ನನ್ನ (ನಮ್ಮ ಹೆಸರು ಹೇಳಬೇಕು) ಮನಸ್ಸು, ಬುದ್ಧಿ ಮತ್ತು ಶರೀರದ ಮೇಲೆ ಬಂದಿರುವ ನಕಾರಾತ್ಮಕ ಮತ್ತು ಕೆಟ್ಟ ಶಕ್ತಿಗಳ ಆವರಣವು ಆಮೂಲಾಗ್ರವಾಗಿ ನಾಶವಾಗಲಿ ಮತ್ತು ನಿನ್ನ ನಾಮಜಪದ ಚೈತನ್ಯದ ಸಂರಕ್ಷಣಾ ಕವಚವು ನನ್ನ ಸುತ್ತಲೂ ನಿರ್ಮಾಣವಾಗಲಿ.

ನಾವು ಹೊರಗಡೆ ಹೋಗುತ್ತಿರುವಾಗ ಅಥವಾ ಪ್ರತಿಯೊಂದು ಗಂಟೆಗೆ ಮನಸ್ಸಿನಲ್ಲಿಯೇ ಈ ರೀತಿ ಪ್ರಾರ್ಥನೆಯನ್ನು ಮಾಡಬಹುದು.

ಈ ವಾರದಲ್ಲಿ ನಾವೆಲ್ಲರೂ ಈಗ ಹೇಳಿದ ಪ್ರಾರ್ಥನೆಯನ್ನು ದಿನದಲ್ಲಿ ಕಡಿಮೆಪಕ್ಷ ೧೦ ಸಲವಾದರೂ ಮಾಡೋಣ. ಪ್ರಾರ್ಥನೆಯನ್ನು ಮಾಡಲು ದೇವರ ಎದುರು ಹೋಗಿಯೇ ನಿಂತು ಮಾಡಬೇಕು ಹೀಗೇನಿಲ್ಲ. ನಾವು ದೇವರನ್ನು ಸ್ಮರಿಸಿಕೊಂಡು ಕುಳಿತಲ್ಲಿಂದಲೇ ಪ್ರಾರ್ಥನೆಯನ್ನು ಮಾಡಬಹುದು. ನಾವು ಆರ್ತಭಾವದಿಂದ ಪ್ರಾರ್ಥನೆಯನ್ನು ಮಾಡಿ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಲು ಪ್ರಯತ್ನಿಸೋಣ.

Leave a Comment