ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮಾರ್ಗದರ್ಶನ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರಿಗೆ ‘ಸಾಧನೆಯಲ್ಲಿ ಪ್ರಗತಿ ಮಾಡುವುದು ಹೇಗೆ, ಅದಕ್ಕಾಗಿ ಹೇಗೆ ಪ್ರಯತ್ನಿಸಬೇಕು, ಅದರಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಹತ್ವವೇನು ? ಅದನ್ನು ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಮಾಡುವುದು ಹೇಗೆ ?’ ಎಂಬುವುದರ ಬಗ್ಗೆ ಮಾಡಿದ ಮಾರ್ಗದರ್ಶನದ ಸಾರಾಂಶ.

1. ವ್ಯಷ್ಟಿ ಸಾಧನೆಯ ಮಹತ್ವ

ವ್ಯಷ್ಟಿ ಸಾಧನೆಯು ಆಪತ್ಕಾಲದಲ್ಲಿನ ನಮ್ಮ ರಕ್ಷಣಾಕವಚವಾಗಿದೆ. ನಿತ್ಯ ನೇಮದಿಂದ ನಮಗೆ ಹೇಳಿದಂತಹ ನಾಮಜಪಾದಿ ಉಪಾಯಗಳನ್ನು ಹಾಗೂ ಸ್ವಭಾವದೋಷ ನಿರ್ಮೂಲನೆಯನ್ನು ಮಾಡಿದರೆ ನಮ್ಮಲ್ಲಿರುವ ನಕಾರಾತ್ಮಕ ಸಂಸ್ಕಾರಗಳು ಆಮೂಲಾಗ್ರವಾಗಿ ನಾಶವಾಗಿ ನಾವು ಪರಿಶುದ್ಧರಾಗುತ್ತೇವೆ. ಅದಕ್ಕಾಗಿ ಸಾಧಕರು ವ್ಯಷ್ಟಿಯನ್ನು ಮಾಡಿ ತಮ್ಮ ಸುತ್ತಲೂ ಈ ರಕ್ಷಣಾಕವಚ ನಿರ್ಮಿಸಿಕೊಳ್ಳಬೇಕು.

2. ಸೇವೆಯನ್ನು ಯಾರೂ ಮಾಡಬಹುದು, ಆದರೆ ವ್ಯಷ್ಟಿಯನ್ನು ನಾವೇ ಪೂರ್ಣ ಮಾಡಬೇಕು !

ಹೊರಗೆ ಸಮಾಜದ ಸ್ಥಿತಿಯು ಅತ್ಯಂತ ವಿಷಮವಾಗಿದೆ. ಸಾಧಕರಾದ ನಮ್ಮೆಲ್ಲರಿಗಾಗಿ ಸಂತರಂತಹ ವಟವೃಕ್ಷದ ನೆರಳು ಇರುವುದರಿಂದ ನಾವು ಆಪತ್ಕಾಲದಲ್ಲಿಯೂ ಸುರಕ್ಷಿತರಾಗಿದ್ದೇವೆ. ಆದರೆ ನಮಗೆ ಇದು ತಿಳಿದಿಲ್ಲದ ಕಾರಣ ನಾವು ಆಪತ್ಕಾಲವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನು ಮುಂದಿನ 3-4 ವರ್ಷಗಳು ಬಹಳ ಭೀಕರವಾಗಿರಲಿವೆ. ಹೊರಗೆ ಹೋದರೆ ನಾವು ವ್ಯಷ್ಟಿ ಕವಚ ಧಾರಣೆ ಮಾಡಬೇಕು. ಅದಕ್ಕಾಗಿ ವ್ಯಷ್ಟಿ ಕವಚವನ್ನು ಸುದೃಢಗೊಳಿಸುವುದು ಮಹತ್ವದ್ದಾಗಿದೆ. ಅದಕ್ಕಾಗಿ ಗುರುಗಳು ಹೇಳಿದ ವ್ಯಷ್ಟಿ ಸಾಧನೆಯ ಎಲ್ಲ ಹಂತಗಳನ್ನು ಪರಿಪೂರ್ಣ ಹಾಗೂ ಭಾವಪೂರ್ಣವಾಗಿ ಮಾಡೋಣ. ಪ್ರತಿದಿನ ಶೇ. 100 ರಷ್ಟು ವ್ಯಷ್ಟಿಯನ್ನು ಎಲ್ಲರೂ ಮಾಡಲೇಬೇಕು. ಇದರಿಂದ ಗುರುಗಳ ಆಜ್ಞಾಪಾಲನೆಯೂ ಆಗುತ್ತದೆ.

3. ಹೇಗೆ ಸ್ವಭಾವದೋಷಗಳು ಅಡಚಣೆಗಳನ್ನು ತಂದು ನಮ್ಮನ್ನು ವ್ಯಷ್ಟಿಯಿಂದ ದೂರಗೊಳಿಸುತ್ತವೆ !

ಆಧ್ಯಾತ್ಮಿಕ ಉಪಾಯಗಳಿಂದ ಆಧ್ಯಾತ್ಮಿಕ ತೊಂದರೆಯು ಕಡಿಮೆಯಾಗುತ್ತದೆ ಮತ್ತು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯಿಂದ ಸೂಕ್ಷ್ಮ-ಅಹಂನ ನಿರ್ಮೂಲನೆಯಾಗುತ್ತದೆ. ಆಲಸ್ಯದಿಂದ ಮತ್ತು ಗಂಭೀರ್ಯದ ಅಭಾವದಿಂದ ನಮ್ಮಿಂದ ವ್ಯಷ್ಟಿ ಆಗುತ್ತಿಲ್ಲ. ಪ್ರತಿಯೊಂದನ್ನು ಸ್ವೀಕರಿಸುವುದು ಎಂದರೆ ಪರೇಚ್ಛೆಗೆ ಹೋಗುವ ಮೆಟ್ಟಿಲಾಗಿದೆ. ಏಕೆಂದರೆ ಸಾಧನೆಯಲ್ಲಿ ಈಶ್ವರೇಚ್ಛೆಯು ಅಂತಿಮ ಮೆಟ್ಟಿಲಾಗಿದೆ. ಸ್ವೀಕರಿಸಲು ಕಲಿತರೆ ನಾವು ಎರಡನೆಯ ಹಂತಕ್ಕೆ ಅಂದರೆ ಪರೇಚ್ಛೆಗೆ ಹೋಗಲು ಕಲಿಯುತ್ತೇವೆ. ಇತರರು ಹೇಳಿದ್ದು ತಪ್ಪು (ಸರಿಯಿಲ್ಲ) ಅನಿಸಿದರೆ ಕೇಳಿಕೊಂಡು ಮಾಡಬೇಕು. ನಾವು ವ್ಯಷ್ಟಿ ಸಾಧನೆಯನ್ನು ಮಾಡದಿದ್ದರೆ ಗುರುಗಳ ಶಕ್ತಿ ಖರ್ಚಾಗುವುದು.

4. ಪರೇಚ್ಛೆ ಎಂದರೆ ಜ್ಞಾನ ಪಡೆಯುವ ಅವಕಾಶ

ಪರೇಚ್ಛೆಯಿಂದ ನಾವು ಸಾಧನೆಯ ಮುಂದಿನ ಹಂತಕ್ಕೆ ಹೋಗಬಹುದು. ಇದು ನಮಗೆ ಜ್ಞಾನ ಪಡೆಯಲು ಈಶ್ವರನು ನೀಡಿದಂತಹ ಒಂದು ಅವಕಾಶವಾಗಿದೆ. ಎದುರಿನವರು ಸರಿಯಿರಲಿ ಅಥವಾ ತಪ್ಪಿರಲಿ ನಾನು ಯಾವಾಗ ಅದನ್ನು ಒಪ್ಪಿಕೊಳ್ಳುತ್ತೇನೆಯೋ ಆಗ ನನಗೆ ಅದರಿಂದ ಜ್ಞಾನವು ಸಿಗುತ್ತದೆ.

5. ಮೋಕ್ಷಕ್ಕೆ ಹೋಗುವ ವಾಹನದ ನಿಲ್ದಾಣಗಳು

ಕೇವಲ ಗುರುಗಳು ಮಾತ್ರ ಪರಿಪೂರ್ಣ ಆಗಿದ್ದಾರೆ. ನಾವೆಲ್ಲರೂ ಅಪೂರ್ಣರಾಗಿದ್ದು ಪರಿಪೂರ್ಣತೆಯೆಡೆಗೆ ಪಯಣಿಸುತ್ತಿದ್ದೇವೆ. ನಾವು ಮೋಕ್ಷದ ವಾಹನದಲ್ಲಿದ್ದು ಮೋಕ್ಷದ ವರೆಗೆ ತಲುಪುವುದಿದೆ. ಶೇ. 60 ಮಟ್ಟ, ಶೇ. 70 ಮಟ್ಟ ಇವೆಲ್ಲವೂ ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುವ ವಾಹನದ ನಿಲ್ದಾಣಗಳಾಗಿವೆ. ಅಲ್ಲಿ ನಿಲ್ಲದೇ ನಾವು ಮುಂದಿನ ನಿಲ್ದಾಣಕ್ಕೆ ಹೋಗಲು ಪ್ರಯತ್ನಿಸಬೇಕು. ಇತರರ ಜೊತೆಗೆ ತುಲನೆಯನ್ನು ಮಾಡಿಕೊಳ್ಳದೇ ನಾವು ನಮ್ಮೊಂದಿಗೇ ಸ್ಪರ್ಧಿಸಬೇಕು. ಅದೇ ರೀತಿ ಹೇಳಿದ್ದನ್ನು ತಕ್ಷಣ ಕೃತಿಯಲ್ಲಿ ತರಲು ಪ್ರಯತ್ನಿಸಬೇಕು. ಅಲ್ಲಿ ಮನಸ್ಸು ಬುದ್ಧಿಯ ಅಡಚಣೆಯನ್ನು ತಂದುಕೊಳ್ಳಬಾರದು.

6. ಚಿಂತೆಯಲ್ಲ, ಚಿಂತನೆಯನ್ನು ಮಾಡಬೇಕು

ರಾತ್ರಿ ಮಲಗುವಾಗ ಸಂತರು ಹೇಳಿದಂತೆ ನಾನು ಮಾಡಿದ್ದೇನಾ ? ಎಂದು ನಮ್ಮ ವರದಿಯನ್ನು ನಾವೇ ತೆಗೆದುಕೊಳ್ಳಬೇಕು. ನಿನ್ನೆ ನಾನು ಹೇಗಿದ್ದೆ, ಈಗ ಹೇಗಿದ್ದೇನೆ, ಇನ್ನು ಮುಂದೆ ಹೇಗಾಗಬೇಕು, ಪ್ರತಿಯೊಂದು ಕ್ಷಣ ಮೃತ್ಯುವು ಕಣ್ಣೆದುರಿನಲ್ಲಿದೆ ಎಂಬಂತಹ ವಿಚಾರವನ್ನಿಟ್ಟುಕೊಂಡು ಈಗ ನಮ್ಮಲ್ಲಿದ್ದ ಸಮಯವನ್ನು ಪೂರ್ಣವಾಗಿ ಚೈತನ್ಯ ಪಡೆಯಲು ಸಾಧನೆಗಾಗಿ ವ್ಯಯಿಸಬೇಕು. ನಾವು ಸಾಧನೆ ಮಾಡುವಾಗ ನನ್ನ ಶ್ವಾಸ ಎಷ್ಟು ಉಳಿದಿದೆ ತಿಳಿದಿಲ್ಲ. ಹಾಗಾಗಿ ಈ ಕ್ಷಣವೇ ಕೊನೆಯದು ಎಂದು ವಿಚಾರ ಮಾಡಿ ಪ್ರತಿದಿನ ಅದರ ಅರಿವಿಟ್ಟು ಪ್ರಯತ್ನ ಮಾಡಬೇಕು.

7. ದೈವೀ ಬಾಲಕರ ವೈಶಿಷ್ಟ್ಯಗಳು

ನಮ್ಮಲ್ಲಿನ ಅನೇಕ ದೈವೀ ಮಕ್ಕಳು ಹೇಳಿದ ತಕ್ಷಣ ಕೃತಿಯನ್ನು ಮಾಡುತ್ತಾರೆ. ಅವರು ಹುಟ್ಟಿನಿಂದಲೇ ಅತ್ಯಂತ ಪ್ರಬುದ್ಧರಾಗಿರುತ್ತಾರೆ. ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಂತಹ ಬಾಲಕರು ಕೊಡುವ ಉತ್ತರಗಳಿಂದ ಸಹ ಇದು ಗಮನಕ್ಕೆ ಬರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ದೈವೀ ಬಾಲಕರಲ್ಲಿ, ‘ತಾವೆಲ್ಲ ಏಕೆ ಪದೇ ಪದೇ ಜನ್ಮ ತಳೆದು ಬರುತ್ತೀರಿ ? ನೇರವಾಗಿ ಮೋಕ್ಷಕ್ಕೆ ಹೋಗಬಹುದಿತ್ತಲ್ಲ’, ಎಂದು ಕೇಳಿದಾಗ ಮಕ್ಕಳು ತಕ್ಷಣ, ‘ನೀವು ಪದೇಪದೇ ಅವತಾರ ತಾಳುತ್ತೀರಲ್ಲ. ಅದಕ್ಕಾಗಿ ನಾವು ಸಹ ನಿಮ್ಮ ಜೊತೆಗಿರಲು ಪದೇ ಪದೇ ಬರುತ್ತೇವೆ’, ಎಂದು ಉತ್ತರಿಸಿದಾಗ ಅವರಲ್ಲಿರುವ ವಾಗ್ಮಿತೆ ಗಮನಕ್ಕೆ ಬರುತ್ತದೆ.

8. ಗುರುದೇವರ ಇಚ್ಛೆಯನ್ನು ಪೂರ್ಣಗೊಳಿಸುವುದು

ಗುರುದೇವರು ಸತತ ನಮ್ಮ ಜೊತೆಯಲ್ಲಿದ್ದಾರೆ. ‘ಆದಷ್ಟು ಬೇಗನೇ ಎಲ್ಲರ ಮನಸ್ಸು ಸ್ವಚ್ಛವಾಗಬೇಕು’ ಎಂಬುವುದೇ ಗುರುಗಳ, ಸದ್ಗುರುಗಳ ಇಚ್ಛೆಗಾಗಿದೆ. ಪ್ರತಿದಿನ ಮನೆ ಸ್ವಚ್ಛತೆ ಮಾಡಿದಂತೆ ನಮ್ಮ ಮನಸ್ಸಿನ ಸ್ವಚ್ಛತೆಯನ್ನು ಮಾಡಬೇಕು. ನಮ್ಮಲ್ಲಿರುವ ಜನ್ಮಜನ್ಮಾಂತರಗಳ ಸಂಸ್ಕಾರಗಳನ್ನು ದೂರಗೊಳಿಸಲು ಗುರುಗಳು ಕಟಿಬದ್ಧರಾಗಿ ನಮ್ಮ ಜೊತೆಯಲ್ಲಿದ್ದು ಸಹಾಯ ಮಾಡುತ್ತಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಸಂತರಾದಾಗ ಖಂಡಿತವಾಗಿಯೂ ರಾಮರಾಜ್ಯವು ಬಂದೇ ಬರುವುದು. ನಮಗೆ ರಾಮರಾಜ್ಯ ಹೊರಗೆ ಸ್ಥಾಪನೆಯಲ್ಲ, ಸಾಧಕರ ಉನ್ನತಿಯೇ ರಾಮರಾಜ್ಯವಾಗಿದೆ.

9. ಭಾವದಿಂದ ಮನಸ್ಸು, ಬುದ್ಧಿ ಶುದ್ಧವಾಗುತ್ತದೆ

ನಮ್ಮಲ್ಲಿ ಭಾವವು ಹೆಚ್ಚಾದಂತೆ ಮನಸ್ಸು ಮತ್ತು ಬುದ್ಧಿಗಳು ಮಿತ್ರರಾಗುತ್ತಾರೆ. ಅದಕ್ಕಾಗಿ ಸಾಧನೆಯು ನಮ್ಮ ನಿತ್ಯಕರ್ಮವಾಗಬೇಕು. ಅದಕ್ಕಾಗಿ ಭಗವಂತನ ಹಿಂದೆ ಓಡುತ್ತಿರಬೇಕು. ಅದರಿಂದ ನಮ್ಮಲ್ಲಿ ತೇಜವು ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕಾಗಿ ವ್ಯಷ್ಟಿಯ ಉಪಾಯ ಮತ್ತು ಪ್ರಕ್ರಿಯೆಯು ಮಹತ್ವದ್ದಾಗಿದೆ.

10. ಸಂತರಲ್ಲಿರುವ ಗುಣಗಳು

ಪೂ. ರಮಾನಂದ ಅಣ್ಣನವರು ಅತ್ಯಂತ ನಮ್ರತೆಯಿಂದ ಇರುತ್ತಾರೆ, ಪ್ರತಿಯೊಂದನ್ನು ಕೇಳಿ ಕೇಳಿ ಮಾಡುತ್ತಾರೆ. ಅವರ ಮಾತಿನಲ್ಲಿ ಸಹ ಮುಗ್ಧತೆಯಿರುತ್ತದೆ ಹಾಗೂ ಅದನ್ನು ಕೇಳಿ ನಮಗೆ ಸಹ ಭಾವಜಾಗೃತಿಯಾಗುತ್ತದೆ. ಅಂತಹ ಸಂತರ ಒಡನಾಟದಲ್ಲಿದ್ದು ನಾವು ಅವರಿಂದ ಚೈತನ್ಯವನ್ನು ಪಡೆದುಕೊಳ್ಳಬೇಕು. ನಾವು ಪ್ರತಿಯೊಬ್ಬ ಸಂತರಿಂದ, ಸಾಧಕರಿಂದ ಚೈತನ್ಯದ ಕೊಡಕೊಳ್ಳುವಿಕೆ ಮಾಡಿಕೊಳ್ಳಬೇಕು. ಸಂತರ ಮನಸ್ಸು-ಬುದ್ಧಿ ಲಯವಾಗಿದ್ದರಿಂದ ಅವರ ಸಂಕಲ್ಪ ಶಕ್ತಿಯೇ ಕಾರ್ಯ ಮಾಡುತ್ತದೆ. ಇದು ಗ್ರಂಥ ಅಭಿಯಾನದಂತಹ ಅನೇಕ ಕಾರ್ಯಗಳ ಮಾಧ್ಯಮದಿಂದ ಗುರುಕಾರ್ಯವು ವೇಗವಾಗಿ ಹೆಚ್ಚುತ್ತಿರುವುದು ಕಣ್ಣೆದುರು ಗೋಚರಿಸುತ್ತಿದೆ.

11. ದೃಢವಾದ ಭಕ್ತಿ ಹೇಗಿರಬೇಕು ?

ನಮ್ಮ ಭಕ್ತಿಯು ಎಷ್ಟಿರಬೇಕು ಎಂದರೆ ನನಗೊಬ್ಬಳಿಗಾಗಿ ಈಶ್ವರನು ಬರಬೇಕು. ಬಾಲಕ ಪ್ರಹ್ಲಾದನಂತಹ ಒಬ್ಬ ಭಕ್ತನಿಗಾಗಿ ಈಶ್ವರನು ನರಸಿಂಹ ಅವತಾರ ತಾಳಿದ್ದನು. ನಾವೂ ಪ್ರಹ್ಲಾದನಾಗಬೇಕು ಅಂದರೆ ಅಷ್ಟು ಭಕ್ತಿ ಮಾಡಬೇಕು.

12. ಜ್ಞಾನಶಕ್ತಿ ಅಭಿಯಾನದ ಮಹತ್ವ

ಮುಂದೆ ನಮ್ಮ ಗ್ರಂಥಗಳೇ ಪ್ರಸಾರ ಕಾರ್ಯ ಮಾಡಲಿಕ್ಕಿವೆ ಎಂದು ಗುರುದೇವರು ಹೇಳಿದ್ದರು. ಅದು ಈಗ ಸತ್ಯವಾಗುತ್ತಿದೆ. ಗ್ರಂಥ ಅಭಿಯಾನದಿಂದಾಗುತ್ತಿರುವ ಪ್ರಚಂಡ ಕಾರ್ಯವನ್ನು ನೋಡಿದಾಗ ಗುರುಗಳ ತ್ರಿಕಾಲದರ್ಶಿತ್ವವು ಗಮನಕ್ಕೆ ಬರುತ್ತದೆ.

13. ಪಾಪ-ಪುಣ್ಯಗಳ ನೋಂದಣಿ

ಚಿತ್ರಗುಪ್ತನು ಪ್ರತಿಯೊಂದನ್ನು ಚಿತ್ರೀಕರಿಸುತ್ತಾನೆ. ಅವನ ಬಳಿ ಶ್ರವಣ ಹಾಗೂ ಶ್ರಾವಣಿ ಎಂಬ ಇಬ್ಬರು ಸಹಾಯಕರಿದ್ದು ಅವರು ಅನುಕ್ರಮವಾಗಿ ಪುರುಷರು ಹಾಗೂ ಸ್ತ್ರೀಯರು ಯಾರಿಗೂ ಹೇಳದೆ ಮುಚ್ಚಿಟ್ಟಂತಹ ತಪ್ಪುಗಳ ನೊಂದಣಿಯನ್ನು ಮಾಡುತ್ತಾರೆ. ನಾವು ನಮ್ಮ ಮನಸ್ಸಿನಿಂದಲೂ ತಪ್ಪು ಮಾಡುವಾಗ ಇದರ ಅರಿವಿರಬೇಕು. ನಾವು ಭಗವಂತನಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಹಾಗಾಗಿ ಮಾಡಿದ ಕೆಲಸವನ್ನು ಭಾವದಿಂದ ಮಾಡಿ ಗುರುಕೃಪೆಗೆ ಪಾತ್ರರಾಗೋಣ.

ಗುರುಗಳ ಅಪಾರ ಕೃಪೆಯಿಂದಲೇ ನಮಗೆಲ್ಲರಿಗೂ ಈ ಭಾವಪೂರ್ಣ ಮಹಾಸತ್ಸಂಗವು ಲಭಿಸಿತು. ಅದಕ್ಕಾಗಿ ನಾವು ಪ.ಪೂ. ಗುರುದೇವರ ಚರಣಗಳಲ್ಲಿ ಶತಶತ ಕೃತಜ್ಞರಾಗಿದ್ದೇವೆ.

ಸಂಕಲಕರು : ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು

Leave a Comment