ಕೊರೋನಾ ಸಂಕಟದ ನಂತರ ಮೂರನೇ ಮಹಾಯುದ್ಧ ಆರಂಭವಾಗುವುದರ ಬಗ್ಗೆ ೯ ಪ್ರಬಲ ಸಂಕೇತಗಳು !

ಸದ್ಯ ಜಗತ್ತಿನಾದ್ಯಂತ ಕೊರೋನಾ ರೋಗವು ಹರಡಿದೆ. ಜಗತ್ತಿನ ಪ್ರತಿಯೊಂದು ದೇಶ ಕೊರೋನಾದಿಂದ ಮುಕ್ತಿಯನ್ನು ಪಡೆಯಲು ಹೋರಾಡುತ್ತಿದೆ. ಅಮೇರಿಕಾ ಮತ್ತು ಯುರೋಪ ದೇಶಗಳಲ್ಲಿ ಹಾಹಾಕಾರ ನಿರ್ಮಾಣವಾಗಿದೆ. ಅವುಗಳಿಗೆ ಈ ದುರ್ದೆಶೆಗೆ ಕೇವಲ ಚೀನಾ ಹೊಣೆಯಾಗಿದೆ, ಎಂದು ಅನಿಸುತ್ತದೆ. ಅವು ಈಗ ನಿರಂತರವಾಗಿ ಚೀನಾಕ್ಕೆ ಬೆದರಿಕೆಯೊಡ್ಡುತ್ತಿವೆ. ಮುಂಬರುವ ಸಂಕಟವನ್ನು ಗುರುತಿಸಿ ಈಗ ಚೀನಾ ಕೂಡ ತನ್ನ ಸಿದ್ಧತೆಯನ್ನು ಮಾಡುತ್ತಿದೆ; ಆದರೆ ಈ ಒತ್ತಡವು ಜಗತ್ತನ್ನು ಮೂರನೆಯ ಮಹಾಯುದ್ದದತ್ತ ಹೊರಳಿಸುವ ಸಾಧ್ಯತೆಯಿದೆ. ಪ್ರಸ್ತುತ ಲೇಖನದಲ್ಲಿ ಈ ವಿಷಯದ ಪ್ರಬಲ ಸಂಕೇತಗಳ ಬಗ್ಗೆ ವಿಮರ್ಷೆಯನ್ನು ಮಾಡಲಾಗಿದೆ.

೧. ಚೀನಾ ನಿರಂತರವಾಗಿ ಮಾಡುತ್ತಿರುವ ಅಣುಬಾಂಬ್ ಪರೀಕ್ಷಣೆ !

ಜಗತ್ತನ್ನು ಕೊರೋನಾ ರೋಗದಲ್ಲಿ ಸಿಕ್ಕಿಸಿ ಚೀನಾ ಪರಮಾಣು ಪರೀಕ್ಷಣೆಯನ್ನು ಮಾಡಿದೆ, ಎಂದು ಹೇಳಲಾಗುತ್ತಿದೆ. ಚೀನಾದಲ್ಲಿನ ಪರಮಾಣು ಸಂಸ್ಥೆಗಳು ಭೂಮಿಯ ಕೆಳಗೆ ಕಡಿಮೆ ತೀವ್ರತೆಯ ಸ್ಫೋಟವನ್ನು ಮಾಡಿವೆ. ಅಮೇರಿಕಾದ ಸಂಸ್ಥೆಗಳು ಚೀನಾದ ಈ ಪರಮಾಣು ಪರೀಕ್ಷಣೆಯ ಮಾಹಿತಿಯನ್ನು ನೀಡಿವೆ; ಆದರೆ ಅದರ ಬಗ್ಗೆ ಅವರ ಹತ್ತಿರ ಯಾವುದೇ ಸಾಕ್ಷಿಗಳಿಲ್ಲ; ಆದರೆ ಪರಿಸ್ಥಿತಿಜನ್ಯ ಪುರಾವೆಗಳ ಆಧಾರದಲ್ಲಿ ಚೀನಾವು ತನ್ನ ಲ್ಯಾಪ್ ನೂರ್ ಪರೀಕ್ಷಣೆಯ ಸ್ಥಳದಲ್ಲಿ ಪರೀಕ್ಷಣೆ ಮಾಡಿದೆ. ಮೊತ್ತ ಮೊದಲು ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಮುದ್ರಿಸಿದ ಈ ವಾರ್ತೆಯ ಆಧಾರದಲ್ಲಿ ಅಮೇರಿಕಾದ ವಿದೇಶಾಂಗ ಸಚಿವಾಲಯ ಚೀನಾವು ಲ್ಯಾಪ್ ನೂರ್‌ನಲ್ಲಿನ ಪರೀಕ್ಷಣಾ ಸ್ಥಳವನ್ನು ವರ್ಷವಿಡೀ ತೆರೆದಿಡುವ ಸಿದ್ಧತೆಯಲ್ಲಿದೆ ಎಂದು ಹೇಳಿದೆ. ಅಲ್ಲಿ ದೊಡ್ಡ ಸ್ಫೋಟಕ ಚೇಂಬರ್ಸ್‌ಗಳನ್ನು ತಯಾರಿಸಲಾಗಿದೆ. ಲ್ಯಾಪ್ ನೂರ್‌ನಲ್ಲಿನ ಅಣುಪರೀಕ್ಷಣೆಯ ವಿಷಯದಲ್ಲಿ ಚೀನಾವು ಪಾರದರ್ಶಕತೆಯನ್ನು ತೋರಿಸುವುದಿಲ್ಲ, ಎಂದಿದೆ.

೨. ಚೀನಾವು ದೊಡ್ಡ ಪ್ರಮಾಣದಲ್ಲಿ ತೈಲ ಸಂಗ್ರಹವನ್ನು ಮಾಡುತ್ತಿದೆ !

೨ ಅ. ಕಳೆದ ಕೆಲವು ದಿನಗಳಲ್ಲಿ ಹರಿದಾಡಿದ ಒಂದು ವಾರ್ತೆಯಲ್ಲಿ ಚೀನಾವು ಯುದ್ಧದ ಸಿದ್ಧತೆಯನ್ನು ಮಾಡುತ್ತಿದೆ, ಎಂದು ಹೇಳಲಾಗಿದೆ. ಚೀನಾ ಕಳೆದ ಒಂದು ತಿಂಗಳಿನಲ್ಲಿ ತನ್ನ ತೈಲ ಸಂಗ್ರಹವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದೆ. ಕಳೆದ ಅನೇಕ ದಿನಗಳಲ್ಲಿ ಕಚ್ಚಾ ತೈಲ ಅಗ್ಗವಾಗಿದೆ. ಅದರಿಂದಾಗಿ ಚೀನಾ ದೊಡ್ಡ ಪ್ರಮಾಣದಲ್ಲಿ ತೈಲನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಕಚ್ಚಾ ತೈಲದ ಬೇಡಿಕೆಯು ಬಹಳಷ್ಟು ಕುಸಿದಿರುವುದರಿಂದ ಹಾಗೂ ರಶ್ಯಾದೊಂದಿಗಿನ ಬೆಲೆಯ ಪೈಪೋಟಿಯಿಂದಾಗಿ ಸೌದಿ ಅರೇಬಿಯಾ ತೈಲ ಪೂರೈಕೆಯನ್ನು ಹೆಚ್ಚಿಸಿದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಯುಎಸ್ ಆಯಿಲ್ ಫ್ಯೂಚರ್ ಮತ್ತು ಬ್ರೆಂಟ್ ವ್ರೂಡ್ ಇವುಗಳ ಬೆಲೆಯು ಕಳೆದ ೧೮ ವರ್ಷಗಳಲ್ಲಿ ಮೊದಲ ಬಾರಿಗೆ ಅರ್ಧದಷ್ಟಾಗಿದೆ.

೨ ಆ. ಸಿ.ಎನ್.ಪಿ.ಸಿ.ಯ ಹೇಳಿಕೆಗನುಸಾರ, ೨೦೨೦ ರ ಕೊನೆಯವರೆಗೆ ಚೀನಾವು ತನ್ನ ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಉಪಯೋಗ ಮಾಡುವ ತೈಲ ಸಂಗ್ರಹವನ್ನು ೮.೫ ಕೋಟಿ ಟನ್‌ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಸಂಗ್ರಹವು ಅಮೇರಿಕಾ ತನ್ನ ಸ್ಟ್ರೇಟೆಜಿಕ್ ಪೆಟ್ರೋಲಿಯಮ್ ರಿಝರ್ವ್’ನಲ್ಲಿಡುವ (ತುರ್ತು ಪರಿಸ್ಥಿತಿಯಲ್ಲಿನ ಪೆಟ್ರೋಲ್ ಸಂಗ್ರಹ) ತೈಲ ಸಂಗ್ರಹಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ. ಅಮೇರಿಕಾದಲ್ಲಿ ಜಗತ್ತಿನಲ್ಲೇ ಎಲ್ಲಕ್ಕಿಂತ ದೊಡ್ಡ ತೈಲ ಸಂಗ್ರಹವಿದೆ.

೨ ಇ. ರೈಟರ್ಸ್ ಸುದ್ಧಿಸಂಸ್ಥೆಯು ನೀಡಿದ ಮಾಹಿತಿಗನುಸಾರ, ಮಾರ್ಚ್ ತಿಂಗಳಲ್ಲಿ ಚೀನಾ ಕಚ್ಚಾ ತೈಲದ ಆಮದನ್ನು ಶೇ. ೧೨ ರಷ್ಟು ಹೆಚ್ಚಿಸಿದ್ದು ಈಗ ಅದು ೪ ಕೋಟಿ ೩೦ ಲಕ್ಷ ಮಿಲಿಯನ್ ಟನ್‌ನಷ್ಟಾಗಿದೆ. ಕಳೆದ ವರ್ಷವಿಡೀ ಕಚ್ಚಾ ತೈಲದ ಬೆಲೆ ಶೇ. ೫೦ ಕ್ಕಿಂತಲೂ ಹೆಚ್ಚು ಕುಸಿದಿದೆ.

೩. ಚೀನಾವು ಸಮುದ್ರದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ !

ಕೋರೋನಾದ ಸಂಕಟದಲ್ಲಿ ಚೀನಾವು ಸಮುದ್ರದಲ್ಲಿ ತನ್ನ ಶಕ್ತಿಯನ್ನು ತೋರಿಸಲು ಪ್ರಾರಂಭಿಸಿದೆ.

೩ ಅ. ದಕ್ಷಿಣ ಚೀನಾ ಸಾಗರದಲ್ಲಿ ಚೀನಾವು ಮೀನು ಹಿಡಿಯುವ ವಿಯೇಟ್ನಾಮ್ ದೇಶದ ಒಂದು ದೋಣಿಯನ್ನು ಮುಳುಗಿಸಿತು. ಆ ದೋಣಿಯಲ್ಲಿ ೮ ಜನರಿದ್ದರು. ಅದರ ಹಿಂದೆಯೇ ಚೀನಾವು ವಿಯೇಟ್ನಾಮ್‌ನ ೨ ದೋಣಿಗಳನ್ನು ವಶಪಡಿಸಿಕೊಂಡಿತು.

೩ ಆ. ಜನವರಿ ತಿಂಗಳಿನಿಂದ ಫಿಲಿಪಿನ್ಸ್‌ನ ವಶದಲ್ಲಿದ್ದ ಪಗಾಸಾ ದ್ವೀಪದ ಸಮೀಪ ಚೀನಾದ ಸುಮಾರು ೧೩೦ ನೌಕೆಗಳು ಕಾಣಿಸಿವೆ.

೩ ಇ. ಚೀನಾವು ದಕ್ಷಿಣ ಚೀನಾ ಸಾಗರದಲ್ಲಿ ದೊಡ್ಡ ಮಾನವ ನಿರ್ಮಿತ ದ್ವೀಪಗಳಲ್ಲಿ ೨ ಹೊಸ ಸಂಶೋಧನಾ ಕೇಂದ್ರಗಳನ್ನು ಆರಂಭಿಸಿದೆ. ಇವೆರಡೂ ಸಂಶೋಧನಾ ಕೇಂದ್ರಗಳು ವಿವಾದಾತ್ಮಕ ದ್ವೀಪ ಸಮೂಹ ಕ್ಷೇತ್ರದಲ್ಲಿ ಫೀಲ್ಡ್ ನೇವಿಗೇಶನ್ ಮತ್ತು ಇತರ ಸಂಶೋಧನೆಗಳನ್ನು ಮಾಡುತ್ತಿವೆ, ಅವುಗಳನ್ನು ನಿಲ್ಲಿಸುವ ಅಮೇರಿಕಾ ಸದ್ಯ ಕೊರೋನಾದ ಸುಳಿಯಲ್ಲಿ ಸಿಲುಕಿದೆ.

ಚೀನಾ ಸಮುದ್ರದಲ್ಲಿ ತನ್ನ ವಿಸ್ತಾರ ಕಾರ್ಯದ ನೀತಿಯನ್ನು ಅನೇಕ ವರ್ಷಗಳಿಂದ ಪ್ರಾರಂಭಿಸಿದೆ; ಆದರೆ ಜಗತ್ತನ್ನು ಕೊರೋನಾದ ಸಂಕಟದಲ್ಲಿ ಸಿಲುಕಿಸಿದ ನಂತರ ಅದರ ಕಾರ್ಯ ಅನೇಕ ಪಟ್ಟುಗಳಷ್ಟು ಹೆಚ್ಚಾಗಿದೆ. ಮೊದಲು ಅಮೇರಿಕಾದ ನೌಕಾದಳ ಅದನ್ನು ವಿರೋಧಿಸುತಿತ್ತು; ಆದರೆ ಅಮೇರಿಕಾದಲ್ಲಿ ಕೊರೋನಾದ ಪ್ರಭಾವ ಹೆಚ್ಚಾಗಿರುವುದರಿಂದ ಚೀನಾದ ಕುಕೃತ್ಯಗಳಿಂದ ಅಮೇರಿಕಾದ ಗಮನ ಕೊರೋನಾದ ಕಡೆಗೆ ತಿರುಗಿದೆ. ದಕ್ಷಿಣ ಚೀನಾ ಸಾಗರ ಮತ್ತು ಪೂರ್ವ ಚೀನಾ ಸಾಗರ ಇವೆರಡೂ ಸ್ಥಳಗಳಲ್ಲಿ ಚೀನಾದ ವಿಸ್ತಾರವಾದಿ ನೀತಿ ನಡೆಯುತ್ತಿರುತ್ತದೆ. ದಕ್ಷಿಣ ಚೀನಾ ಸಾಗರದ ಮೇಲೆ ಕೇವಲ ತನ್ನ ಅಧಿಕಾರವಿರುವುದನ್ನು ಚೀನಾ ಪ್ರತಿಪಾದಿಸುತ್ತದೆ. ನಿಜವಾಗಿ ನೋಡಿದರೆ ಈ ಸಾಗರದ ಮೇಲೆ ವಿಯೇಟ್ನಾಮ್, ಮಲೇಶಿಯಾ, ಫಿಲಿಪಿನ್ಸ್, ಬ್ರೂನೈ ಮತ್ತು ತೈವಾನ್ ದೇಶಗಳ ಅಧಿಕಾರವೂ ಇದೆ. ಪೂರ್ವ ಚೀನಾ ಸಾಗರದಲ್ಲಿ ಚೀನಾ ಮತ್ತು ಜಪಾನ್ ಪರಸ್ಪರ ಎದುರುಬದುರಿಗಿವೆ. ದಕ್ಷಿಣ ಮತ್ತು ಪೂರ್ವ ಚೀನಾ ಸಾಗರಗಳು ಖನಿಜಗಳಿಂದ ಸಂಪದ್ಭರಿತವಾಗಿದೆ, ಎಂದು ಹೇಳಲಾಗುತ್ತದೆ. ಈ ಜಲಕ್ಷೇತ್ರವು ಜಗತ್ತಿನ ಕಾರುಬಾರಿನ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈಗ ಕೊರೋನಾದ ಸಂಕಟದ ಲಾಭ ಪಡೆದು ಚೀನಾವು ಈ ಪ್ರದೇಶವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.

೪. ಚೀನಾ ಪರಿಣಾಮವನ್ನು ಭೋಗಿಸಬೇಕಾಗುವುದು ಎಂದು ಬೆದರಿಸಿದ ಅಮೇರಿಕಾ !

ಅಮೇರಿಕಾದಲ್ಲಿ ಕೊರೋನಾ ಉಲ್ಬಣಿಸಲು ಚೀನಾ ಹೊಣೆಯಾಗಿದೆ ಎಂದು ಅಲ್ಲಿನ ರಾಷ್ಟ್ರಾಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಒಬ್ಬ ಪತ್ರಕರ್ತನು ‘ಚೀನಾ ಅದರ ಕುಕೃತ್ಯದ ಪರಿಣಾಮವನ್ನು ಭೋಗಿಸುವುದಿಲ್ಲವೇ ?’, ಎಂದು ಟ್ರಂಪ್‌ಗೆ ಪ್ರಶ್ನಿಸಿದನು. ಆಗ ಉದ್ರಿಕ್ತಗೊಂಡು ಟ್ರಂಪ್, “ಚೀನಾ ಪರಿಣಾಮವನ್ನು ಭೋಗಿಸಲ್ಲ ಎಂದು ನಿಮಗೆ ಹೇಗೆ ಗೊತ್ತು ?” ಎಂದರು. ಆಗ ಆ ಪತ್ರಕರ್ತನು ‘ಚೀನಾದ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ? ಚೀನಾ ಏನು ಪರಿಣಾಮ ಭೋಗಿಸವುದು ?’, ಎಂದು ಕೇಳಿದಾಗ ಟ್ರಂಪ್ ಇವರು, “ಚೀನಾ ಏನು ಪರಿಣಾಮವನ್ನು ಭೋಗಿಸುವುದು ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ. ಚೀನಾಗೆ ತಾನು ಮಾಡಿದ್ದು ಸರಿಯಲ್ಲ ಎಂದು ಅದಕ್ಕೇ ತಿಳಿಯುವುದು” ಎಂದರು. ಟ್ರಂಪ್ ಇವರ ಈ ಹೇಳಿಕೆಯಿಂದ ಅಮೇರಿಕಾವು ಚೀನಾದ ಬಗ್ಗೆ ಅಸಮಾಧಾನ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಅಮೇರಿಕಾ ಕ್ರಮ ತೆಗೆದುಕೊಳ್ಳಲು ಸೂಕ್ತ ಸಮಯವನ್ನು ಕಾಯುತ್ತಿದೆ.

೫. ಬ್ರಿಟನ್‌ಗೂ ಚೀನಾದ ಮೇಲೆ ಕೋಪವಿದೆ !

ಒಂದೆಡೆ ಅಮೇರಿಕಾಗೆ ಚೀನಾದ ಮೇಲೆ ಅಸಮಾಧಾನವಿದೆ ಇನ್ನೊಂದೆಡೆ ಬ್ರಿಟನ್ ಕೂಡ ಅದಕ್ಕಾದ ನಷ್ಟಕ್ಕೆ ಚೀನಾವೇ ಹೊಣೆ ಎಂದು ಹೇಳುತ್ತಿದೆ. ಕೊರೋನಾದ ವೈರಾಣುಗಳು ಹರಡಿರುವುದು ದೃಢಪಟ್ಟ ನಂತರ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಇವರು ಎಲ್ಲ ಬ್ರಿಟಿಷ ಕುಟುಂಬದವರಿಗೆ ಒಂದು ಪತ್ರವನ್ನು ಬರೆದರು. ಅದರಲ್ಲಿ ಅವರು ‘ನಿಮಗೆಲ್ಲ ಜೀವನೋಪಾಯದ ಬಗ್ಗೆ ಚಿಂತೆ ಇರಬಹುದು. ಆದರೆ ಪರಿಸ್ಥಿತಿ ಸುಧಾರಿಸುವ ಮೊದಲು ಇನ್ನಷ್ಟು ಹದೆಗೆಡಲಿದೆ’, ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಧಾನಮಂತ್ರಿಗಳು ಬರೆದಿರುವ ಪತ್ರವನ್ನು ಕೊರೋನಾ ವೈರಾಣುಗಳೊಂದಿಗೆ ಹೋರಾಡುವ ವಿಷಯದಲ್ಲಿ ಸರಕಾರ ಪ್ರಕಾಶಿಸಿದ ಪುಸ್ತಕದ ಜೊತೆಗೆ ಟಪಾಲಿನ ಮೂಲಕವೂ ೩ ಕೋಟಿ ಮನೆಗಳಿಗೆ ಕಳುಹಿಸಲಾಗಿದೆ. ಅದಕ್ಕೆ ಸುಮಾರು ೫೮ ಲಕ್ಷ ಪೌಂಡ್ (೫೪ ಕೋಟಿ ೭೨ ಲಕ್ಷ ೭ ಸಾವಿರದ ೭೧೯ ರೂಪಾಯಿಗಳು) ಖರ್ಚಾಗಿದೆ.

೬. ಚೀನಾದ ಮೇಲಿನ ಕ್ರಮವು ಯುದ್ಧದಲ್ಲಿ ರೂಪಾಂತರವಾಗುವುದು !

ಜಗತ್ತಿನಲ್ಲಿನ ಮಹಾಶಕ್ತಿಗಳೆಂದು ಪರಿಗಣಿಸಲ್ಪಡುವ ಅಮೇರಿಕಾ ಮತ್ತು ಯುರೋಪ್ ದೇಶಗಳು ತಮ್ಮ ವರ್ಚಸ್ಸು ಕಡಿಮೆಯಾಗುತ್ತಿದೆ ಎಂದು ಅಸ್ವಸ್ಥಗೊಂಡಿವೆ. ಇಂದಿನವರೆಗೆ ಅವುಗಳನ್ನು ಜಗತ್ತಿನ ಮಹಾಶಕ್ತಿ ಹಾಗೂ ಬಲಿಷ್ಠ ರಾಷ್ಟ್ರಗಳೆಂದು ಪರಿಗಣಿಸಲಾಗುತಿತ್ತು. ಅವುಗಳಿಗೆ ಯಾವುದಾದರೊಂದು ದೇಶವು ತಮ್ಮನ್ನು ದುರ್ಲಕ್ಷಿಸುತ್ತಿದೆ ಎಂದು ಅನಿಸಿದಾಗ ಅವುಗಳ ಮೇಲೆ ನಿರ್ಬಂಧ ಹೇರುತ್ತಿದ್ದವು; ಆದರೆ ಇಂದು ಅವು ಕೊರೋನಾದಿಂದಾಗಿ ಸೋತುಹೋಗಿವೆ. ಜಗತ್ತಿನ ಮೇಲೆ ಆರ್ಥಿಕ ನಿಯಂತ್ರಣವನ್ನಿಡುವ ಫ್ರಾನ್ಸ್, ಜರ್ಮನಿ, ಬ್ರಿಟನ್, ಸ್ಪೇನ್ ಮುಂತಾದ ಯುರೋಪ್ ಮತ್ತು ಪಶ್ಚಿಮದ ಎಲ್ಲ ದೇಶಗಳು ಇಂದು ಕೊರೋನಾದ ಪ್ರಭಾವದಿಂದ ನೆಲಕಚ್ಚಿವೆ. ಆದ್ದರಿಂದ ಯುರೋಪ್ ದೇಶಗಳ ಮತ್ತು ಅಮೇರಿಕಾದ ವರ್ಚಸ್ಸು ಈಗ ಚೀನಾದ ವಶವಾಗುತ್ತಿರುವುದು ಕಾಣಿಸುತ್ತಿದೆ. ಯಾವ ದೇಶಗಳು ಜಗತ್ತಿನ ವ್ಯವಸ್ಥೆ ಮತ್ತು ಹಣಕಾಸುನೀತಿಯ ಸಂಚಾಲನೆಯನ್ನು ಮಾಡುತ್ತಿದ್ದವೋ, ಅವು ಈಗ ನೆಲಕಚ್ಚುವ ಸ್ಥಿತಿಯಲ್ಲಿವೆ. ಆದ್ದರಿಂದ ಕೊರೋನಾದ ಸಂಕಟ ಮುಗಿದ ನಂತರ ಅಮೇರಿಕಾ ಮತ್ತು ಯುರೋಪ್ ಯಾವುದೇ ಕ್ಷಣ ಚೀನಾದ ವಿರುದ್ಧ ದಂಡಾತ್ಮಕ ಕ್ರಮ ತೆಗೆದುಕೊಳ್ಳಬಹುದು ಹಾಗೂ ಅದು ಯುದ್ದದಲ್ಲಿ ರೂಪಾಂತರವಾಗಬಹುದು.

೭. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾವನ್ನು ತಡೆಗಟ್ಟಲು ಅಮೇರಿಕಾದಿಂದ ಭಾರತಕ್ಕೆ ಕ್ಷಿಪಣಿ ಪೂರೈಕೆ !

ಕೊರೋನಾದ ಸಂಕಟವಿದ್ದರೂ ಚೀನಾದ ವಿಸ್ತಾರವಾದಿ ನೀತಿಯನ್ನು ನೋಡಿ ಯುರೋಪ್ ಮತ್ತು ಅಮೇರಿಕಾ ಇವುಗಳಿಗೆ ಭಾರತದಿಂದ ತುಂಬಾ ಅಪೇಕ್ಷೆಯಿದೆ. ಮಹಾಮಾರಿಯ ಸಂಕಟವಿದ್ದರೂ ಅಮೇರಿಕಾ ಭಾರತಕ್ಕೆ ೧ ಸಾವಿರದ ೧೭೮ ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ‘ಹಾರ್ಪೂನ್’ ಮತ್ತು ‘ಟಾರಪಿಡೊ’ ಕ್ಷಿಪಣಿಗಳನ್ನು ಮಾರಾಟ ಮಾಡಲು ನಿರ್ಣಯಿಸಿದೆ. ಚೀನಾದಿಂದ ಸಮುದ್ರದಲ್ಲಿ ನಿರ್ಮಾಣವಾಗುವ ಅಪಾಯವನ್ನು ಗಮನಿಸಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅಮೇರಿಕಾದ ವಿದೇಶಾಂಗ ಸಚಿವಾಲಯವು ಈ ಒಪ್ಪಂದಕ್ಕೆ ಸಮರ್ಥನೆ ನೀಡಿದೆಯೆಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ. ಅಮೇರಿಕಾದ ಪ್ರಸಾರಮಾಧ್ಯಮಗಳು ಮುದ್ರಿಸಿದ ಒಂದು ವರದಿಯಲ್ಲಿ, ಈ ಕ್ಷಿಪಣಿಗಳಿಂದ ಭಾರತಕ್ಕೆ ತನ್ನ ಕ್ಷೇತ್ರದಲ್ಲಿನ ಸವಾಲುಗಳನ್ನು ಎದುರಿಸಲು ಸಹಾಯವಾಗುವುದು ಎಂದು ಹೇಳಿದೆ. ಅಮೇರಿಕಾದ ‘ಡಿಫೆನ್ಸ್ ಸೆಕ್ಯುರಿಟಿ ಕಾರ್ಪೊರೇಶನ್ ಏಜನ್ಸಿ’ ತನ್ನ ಸಂಸತ್ತಿನಲ್ಲಿ ಈ ಒಪ್ಪಂದದ ಬಗ್ಗೆ ಮಾಹಿತಿಯನ್ನು ನೀಡಿದೆ. ೨೦೧೬ ರಲ್ಲಿ ಅಮೇರಿಕಾ ಭಾರತಕ್ಕೆ ರಕ್ಷಣೆಯ ವಿಷಯದಲ್ಲಿ ‘ಆಪ್ತಮಿತ್ರ’ನ ಸ್ಥಾನಮಾನವನ್ನು ನೀಡಿತ್ತು. ಅಮೇರಿಕಾದ ರಕ್ಷಣಾ ಸಚಿವಾಲಯದ ಹೇಳಿಕೆಗನುಸಾರ ಹಾರ್ಪೂನ್ ಕ್ಷಿಪಣಿ ಮೂಲಕ ಆಕಾಶದಿಂದ ಸಮುದ್ರದ ಗಡಿಯಲ್ಲಿ ಗಮನವನ್ನು ಇಡುವುದರೊಂದಿಗೆ ಯಾವುದೇ ಸಂದೇಹಾಸ್ಪದ ಹಡಗಿನ ಮೇಲೆ ಗುರಿಯಿಟ್ಟು ಆಕ್ರಮಣವನ್ನು ಮಾಡಬಹುದು. ಪೆಂಟಗನ್.ನ ಹೇಳಿಕೆಗನುಸಾರ ಇದರಿಂದ ಅಮೇರಿಕಾ ಮತ್ತು ಅದರ ಮಿತ್ರದೇಶಗಳಿಗೆ ಸಂವೇದನಾಶೀಲ ಸಮುದ್ರಕ್ಷೇತ್ರದ ಮೇಲೆ ಗಮನವನ್ನಿಡಲು ಮತ್ತು ಸಹಯೋಗವನ್ನು ಹೆಚ್ಚಿಸಲು ಸಹಾಯವಾಗುವುದು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ವಿಸ್ತಾರವಾದಿ ನೀತಿಯನ್ನು ತಡೆಗಟ್ಟುವುದು, ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ.

೮. ಭವಿಷ್ಯದಲ್ಲಿ ಸಂಭವಿಸಬಹುದಾದ ಮಹಾಯುದ್ಧದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿನ ನಾಗರಿಕರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಖರೀದಿ !

ಮುಂದೆ ಮಹಾಯುದ್ಧ ಸಂಭವಿಸಬಹುದೆಂಬ ಅನುಮಾನ ಬಂದಿರುವುದರಿಂದ ಅಮೇರಿಕಾದಲ್ಲಿನ ಜನರು ಅಸ್ವಸ್ಥರಾಗುತ್ತಿದ್ದಾರೆ. ಈ ಮಹಾಮಾರಿಯ ಕಾಲದಲ್ಲಿ ಅಮೇರಿಕಾ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ, ಎಂಬುದು ಅವರ ಅಸ್ವಸ್ಥೆಗೆ ಇನ್ನೊಂದು ಕಾರಣವಾಗಿದೆ. ಏಕೆಂದರೆ, ಅಮೇರಿಕಾ ಮಾರ್ಚ್ ತಿಂಗಳಲ್ಲಿ ಮಾಡಿದ ಖರೀದಿಯು ಕಳೆದ ೨೦ ವರ್ಷಗಳಲ್ಲಿನ ಅತೀ ಹೆಚ್ಚು ಖರೀದಿಯಾಗಿದೆ. ಎಫ್.ಬಿ.ಐ. (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್) ನೀಡಿದ ಸಂಖ್ಯೆಯಿಂದ, ಈ ವರ್ಷ ಮಾರ್ಚ್ ತಿಂಗಳಲ್ಲಿ ೨೦ ಲಕ್ಷಕ್ಕಿಂತಲೂ ಹೆಚ್ಚು ಆಯುಧಗಳನ್ನು (ಫಾಯರ್‌ಆರ್ಮ್ಸ್) ಖರೀದಿ ಮಾಡಲಾಗಿದೆ ಎಂಬುದು ತಿಳಿದಿದೆ.

ಅಮೇರಿಕಾದ ಕೆಲವು ಪ್ರಾಂತಗಳಲ್ಲಿ ಶಸ್ತ್ರಗಳ ಖರೀದಿಗಾಗಿ ಓಡಾಟ ಪ್ರಾರಂಭವಾಗಿದೆ. ಅಮೇರಿಕಾದ ಇಲಿನಾಯ ಪ್ರಾಂತದಲ್ಲಿ ಅತೀ ಹೆಚ್ಚು ಶಸ್ತ್ರಗಳ ಖರೀದಿ ಆಗಿದೆ. ಅನಂತರ ಟೆಕ್ಸಾಸ್, ಕೆಂಟುಕಿ, ಫ್ಲೋರಿಡಾ ಮತ್ತು ಕೆಲಿಫೋರ್ನಿಯಾ ಮೊದಲೈದು ಕ್ರಮಾಂಕದಲ್ಲಿವೆ. ಅಮೇರಿಕಾದಲ್ಲಿ ಕೊರೋನಾದ ಸಂಕಟ ನಿವಾರಣೆಯಾದ ನಂತರ ಮಹಾಯುದ್ಧದಂತಹ ಸಂಕಟದ ಸ್ಥಿತಿ ನಿರ್ಮಾಣವಾದರೆ ಅಲ್ಲಿನ ಸಿವಿಲ್‌ಸೋಸೈಟಿ ಅಂದರೆ ಅಗ್ನಿಶಾಮಕ, ಪೊಲೀಸ್ ಮತ್ತು ಆರೋಗ್ಯ ಸೇವೆ ಹಾಳಾಗಬಹುದು ಎಂಬುವುದು ಬಲ್ಲವರ ಅಭಿಪ್ರಾಯ. ಇದರಿಂದ ಅಮೇರಿಕಾದ ಕಾನೂನು ಮತ್ತು ಸುವ್ಯವಸ್ಥೆಗಳು ಹದಗೆಡಬಹುದು ಎಂದು ಅನಿಸುತ್ತಿದೆ.

೯. ಕೊರೋನಾದ ಸಂಕಟ ಮುಗಿದ ನಂತರ ಸಂಪೂರ್ಣ ಜಗತ್ತು ಚೀನಾದ ಮೇಲೆ ದಾಳಿ ಮಾಡಬಹುದು ಹಾಗೂ ಸಂಘರ್ಷವು ಮಹಾಯುದ್ಧದಲ್ಲಿ ರೂಪಾಂತರವಾಗಬಹುದು !

೯ ಅ. ವಿಶ್ವ ಸಂಸ್ಥೆ ಮತ್ತು ಜಾಗತಿಕ ಬ್ಯಾಂಕಿನ ಲೆಕ್ಕಾಚಾರದಂತೆ ಅಮೇರಿಕಾದ ನಂತರ ಚೀನಾ ಜಗತ್ತಿನ ಎರಡನೆಯ ಕ್ರಮಾಂಕದ ಅರ್ಥವ್ಯವಸ್ಥೆಯಾಗಿದೆ. ಚೀನಾದ ಮಹತ್ವಾಕಾಂಕ್ಷಿ ಸರಕಾರ ಮೊದಲ ಕ್ರಮಾಂಕಕ್ಕೆ ಬರುವ ಇಚ್ಛೆಯನ್ನಿಟ್ಟುಕೊಂಡಿದೆ, ಅದು ಚೀನಾದ ತುಂಬಾ ಹಳೆಯ ಕನಸಾಗಿದೆ. ಚೀನಾದಲ್ಲಿ ಕೊರೋನಾ ವಿಷಾಣುಗಳು ಇವೆ, ಎಂಬುದು ನವೆಂಬರ ೨೦೧೯ ರ ಕೊನೆಯಲ್ಲಿ ಎಲ್ಲರಿಗೂ ತಿಳಿಯಿತು; ಆದರೆ ಅದಕ್ಕೂ ಅನೇಕ ತಿಂಗಳು ಮೊದಲು ಚೀನಾ ಈ ವಿಷಯವನ್ನು ಅಡಗಿಸಿಟ್ಟಿತ್ತು, ಹಾಗೆಯೇ ಚೀನಾ ದೀರ್ಘಕಾಲದವರೆಗೆ ಈ ವಿಷಾಣು ಗಾಳಿಯಲ್ಲಿ ಹರಡುತ್ತದೆ ಎನ್ನುವ ಸತ್ಯವನ್ನು ನಿರಾಕರಿಸುತ್ತಿತ್ತು.

೯ ಆ. ವಿಶ್ವ ಸಂಸ್ಥೆಯ ಸುರಕ್ಷಾ ಪರಿಷತ್ತು ಕೊರೋನಾದ ಬಗ್ಗೆ ಪಾರದರ್ಶಕತೆಯನ್ನಿಡಲು ಸಭೆ ಕರೆಯಲು ನಿರ್ಣಯಿಸಿತು, ಆಗ ಚೀನಾ ತನ್ನ ವಿಟೋ (ನಕಾರಾಧಿಕಾರ) ಉಪಯೋಗಿಸಿ ಈ ಸಭೆಯನ್ನು ರದ್ದುಪಡಿಸಿತು.

೯ ಇ. ಕೊರೋನಾದ ಸೋಂಕು ಮೊದಲ ಹಂತದಲ್ಲಿರುವಾಗಲೇ, ಎಲ್ಲ ದೇಶಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಪ್ರವಾಸವನ್ನು ನಿಲ್ಲಿಸಲು ಯೋಗ್ಯ ಹೆಜ್ಜೆಯನ್ನಿಡಲು ಪ್ರಯತ್ನಿಸಿದುವು; ಆದರೆ ಚೀನಾ ಇದರಲ್ಲಿ ಅಡ್ಡಗಾಲಿಟ್ಟಿತು. ಈ ಸಂಕೇತದಿಂದ ಕೊರೋನಾದ ನಿಮಿತ್ತದಲ್ಲಿ ಚೀನಾ ತನ್ನ ವಿಸ್ತಾರವಾದಿ ನೀತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ಕೂಡ ಚೀನಾದ ಈ ಕುಟಿಲ ನೀತಿಯನ್ನು ಗುರುತಿಸಿವೆ; ಆದರೆ ಅವು ಸದ್ಯ ಕೊರೋನಾದೊಂದಿಗೆ ಹೋರಾಡುವುದರಲ್ಲಿವೆ. ಆದ್ದರಿಂದ ಕೊರೋನಾದ ಸಂಕಟ ನಿವಾರಣೆಯಾದ ನಂತರ ಇಡೀ ಜಗತ್ತು ಚೀನಾದ ಮೇಲೆ ದಂಡೆತ್ತಿ ಹೋಗುವವು ಹಾಗೂ ಈ ಸಂಘರ್ಷವು ಮಹಾಯುದ್ಧದಲ್ಲಿ ಪರಿವರ್ತನೆಯಾಗುವುದನ್ನು ಯಾರೂ ತಡೆಯಲಾರರು.