ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನದಂದು ಉಗುರುಗಳನ್ನು ಕತ್ತರಿಸಬಾರದು ?

ಸೌ. ಪ್ರಾಜಕ್ತಾ ಜೋಶಿ

ಆಂಗ್ಲ ಭಾಷೆಯಲ್ಲಿ ‘ಉಗುರು ಬೆಳೆದಾಗ ಉಗುರು ಕತ್ತರಿಸುತ್ತೇವೆ ಹೊರತು, ಬೆರಳಲ್ಲ; ಮನಸ್ತಾಪ ಬೆಳೆದಾಗ ಅಹಂನ್ನು ಕಡಿಯಿರಿ, ಸಂಬಂಧಗಳನ್ನಲ್ಲ’ ಎಂಬ ಉಕ್ತಿಯಿದೆ. ಅಂದರೆ ಇಲ್ಲಿ ಉಗುರುಗಳನನ್ನು ಅಹಂ ಜೊತೆಗೆ ಹೋಲಿಸಲಾಗಿದೆ. ಯಾವಾಗ ಅಹಂ ಬೆಳೆಯುತ್ತದೆಯೋ ಆಗ ವಿಚಾರ ಮಾಡುವ ಕ್ಷಮತೆಯು ಕ್ಷೀಣಿಸುತ್ತದೆ. ಹಾಗಾಗಿ ನಾವು ಸತತವಾಗಿ ನಮ್ಮ ಅಹಂನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಕು. ಅಹಂ ಅನ್ನೋದು ರಜ-ತಮ ಪ್ರಧಾನವಾಗಿರುವುದರಿಂದ ಅದನ್ನು ಕಡಿಮೆ ಮಾಡಲು ನಮ್ಮಲ್ಲಿ ಸಾತ್ವಿಕತೆ ಹೆಚ್ಚಾಗಬೇಕು. ಅದಕ್ಕಾಗಿ ನಮ್ಮ ಶಾಸ್ತ್ರಗಳಲ್ಲಿ ಪ್ರತಿಯೊಂದು ಕೃತಿಯನ್ನು ಮಾಡುವಾಗ ಅದರಿಂದ ಸಾತ್ವಿಕತೆಯನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಅದೇ ರೀತಿ ನಾವು ನಡೆದುಕೊಂಡರೆ ಅದರ ಒಳ್ಳೆಯ ಪರಿಣಾಮವು ಖಂಡಿತವಾಗಿಯೂ ಆಗುವುದು.

ಆಯುರ್ವೇದಕ್ಕನುಸಾರ ಉಗುರಿನ ಬಣ್ಣದಿಂದ ದೇಹದ ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಮಾತ್ರವಲ್ಲ, ಉಗುರುಗಳನ್ನು ನಿಯಮಿತವಾಗಿ ಕತ್ತರಿಸುವುದರಿಂದ ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ ಎಂದು ಕೂಡ ಹೇಳಲಾಗಿದೆ. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ನಮಗೆ ಇಂತಹ ದಿನದಂದೇ ಉಗುರುಗಳನ್ನು ಕತ್ತರಿಸಲು ಸಮಯ ಸಿಗದೇ ಇರಬಹುದು. ಅನೇಕರಿಗೆ ರವಿವಾರದಂದು ಬಿಡುವಿನ ದಿನ ಇರುವುದರಿಂದ ಆ ದಿನಂದಂದೇ ಉಗುರುಗಳನ್ನು ಕತ್ತರಿಸುತ್ತಾರೆ. ಕೆಲವೊಮ್ಮೆ ಮನೆಯಲ್ಲಿನ ಹಿರಿಯರು ಇಂತಹ ದಿನದಂದು ಉಗುರು ಕತ್ತರಿಸಬಾರದು ಎಂದು ಹೇಳಿರುವುದನ್ನು ನೆನಪಿಸಿಕೊಂಡ ನಾವು ಆ ದಿನದಂದು ಉಗುರುಗಳನ್ನು ಕತ್ತರಿಸದೆ ಇರುವುದುಂಟು. ಆದರೆ ಯಾವ ದಿನದಂದು ಕತ್ತರಿಸಬಹುದು ಎಂಬ ಕುತೂಹಲ ಇರಬಹುದು. ಅದಕ್ಕೆ ಉತ್ತರ ಮುಂದೆ ನೀಡಲಾಗಿದೆ.

ಪಂಚಾಂಗದಲ್ಲಿ ಒಂದು ದಿನದಲ್ಲಿ ೨೪ ಹೋರಾ ಇರುತ್ತವೆ. ಪ್ರತಿಯೊಂದು ಹೋರಾ ಒಂದು ಗ್ರಹಕ್ಕೆ ಸಂಬಂಧಪಟ್ಟಿದೆ. ವಾರದ ಆಯಾ ದಿನದಂದು ಸೂರ್ಯೋದಯಕ್ಕೆ ಯಾವ ಹೋರಾ ಇದೆಯೋ, ಆ ಗ್ರಹದ ಹೆಸರನ್ನು ಆ ದಿನಕ್ಕೆ ನೀಡಲಾಗಿದೆ. ಉದಾ. ರವಿವಾರದಂದು ಸೂರ್ಯೋದಯದ ಸಮಯದಲ್ಲಿ ಹೋರಾ ರವಿ ಆಗಿರುವುದರಿಂದ ಆ ದಿನಕ್ಕೆ ರವಿವಾರ ಎಂದು ಕರೆಯುತ್ತೇವೆ. ಪ್ರತಿಯೊಂದು ಹೋರಾದಲ್ಲಿ ಯಾವ ಕೃತಿಯನ್ನು ಮಾಡಿದರೆ ಅದರ ಉತ್ತಮ ಫಲ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಂತೆಯೇ ಉಗುರುಗಳನ್ನು ಕೂಡ ಕತ್ತರಿಸಲು ನಾವು ಹೋರಾ ಮತ್ತು ದಿನವನ್ನು ನಿರ್ಧರಿಸಬಹುದು. ಆಗಲೇ ತಿಳಿದುಕೊಂಡಿರುವಂತೆ ಉಗುರುಗಳನ್ನು ಬೆಳೆಸುವುದರಿಂದ ನಮ್ಮಲ್ಲಿ ತಮೋಗುಣ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಯಾವ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಯಾವ ಲಾಭವಾಗಬಹುದು ಎಂದು ಮುಂದಿನ ತಖ್ತೆಯಲ್ಲಿ ನೀಡಲಾಗಿದೆ.

ದಿನ ಈ ಹೋರಾದಲ್ಲಿ ಮಾಡಬಹುದಾದ ಕೃತಿಗಳು ಉಗುರುಗಳನ್ನು ಕತ್ತರಿಸುವುದರಿಂದ ಆಗಬಹುದಾದ ಲಾಭ ಉಗುರುಗಳನ್ನು ಕತ್ತರಿಸುವುದರ ವಿಮರ್ಶೆ
ಸೋಮಾವರ ಎಲ್ಲ ಕೃತಿಗಳು ಒಳ್ಳೆಯ ಅರೋಗ್ಯ ಲಭಿಸುವುದು ಸೋಮವಾರ ಎಂದರೆ ಸೋಮ (ಚಂದ್ರ) + ವಾರ. ಚಂದ್ರನು ಮನಸ್ಸಿಗೆ ಸಂಬಂಧಿಸಿದ ಗ್ರಹವಾಗಿದೆ. ನಮ್ಮ ಆರೋಗ್ಯವು ನಮ್ಮ ಮನಸ್ಸಿನ ಮೇಲೆ ಅವಲಂಬಿಸಿರುತ್ತದೆ. ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ನಮ್ಮ ಮನಸ್ಸಿನ ಸುತ್ತಲಿರುವ ತಮಸ್ಸಿನ ಆವರಣವನ್ನು ನಷ್ಟ ಮಾಡುವಲ್ಲಿ ಸಹಾಯವಾಗಬಹುದು.
ಮಂಗಳವಾರ ಯುದ್ಧ ಮತ್ತು ಚರ್ಚೆಗಳು ಋಣಮುಕ್ತರಾಗಲು ಪೂರಕ ಋಣ ತೀರಿಸುವುದರಿಂದ ಮುಂದೆ ಆಗುವಂತಹ ವಾದಗಳನ್ನು ತಪ್ಪಿಸಲು ಮಂಗಳವಾರದಂದು ಉಗುರುಗಳನ್ನು ಕತ್ತರಿಸಬಹುದು.
ಬುಧವಾರ ಜ್ಞಾನಾರ್ಜನೆ ಸನ್ಮಾರ್ಗದಿಂದ ಧನಪ್ರಾಪ್ತಿಯಾಗುವುದು ಬುಧನು ವೈಶ್ಯ ವರ್ಣದ ಬೌದ್ಧಿಕ ಗ್ರಹವಾಗಿದ್ದಾನೆ. ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಬೌದ್ಧಿಕ ಯಶಸ್ಸು ಲಭಿಸಿ, ಉದ್ಯೋಗ ಅಥವಾ ವ್ಯವಸಾಯದಲ್ಲಿ ಧನಪ್ರಾಪ್ತಿಯಾಗಬಹುದು.
ಗುರುವಾರ ಮಂಗಳ ಕಾರ್ಯಗಳು ಮನೆಯಲ್ಲಿ ಘಟಿಸುವ ಅಪ್ರಿಯ ಘಟನೆಗಳನ್ನು ತಡೆಯುವುದು ಮತ್ತು ಗುರುಗಳ ಉಪಾಸನೆಯತ್ತ ಚಿತ್ತವನ್ನು ಹೊರಳಾಡಿಸುವುದು ಗುರು ಗ್ರಹವು ಆಧ್ಯಾತ್ಮಿಕ ಗ್ರಹವಾಗಿರುವುದರಿಂದ ಉಪಾಸನೆಗೆ ಪೂರವಾಗಿದೆ. ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಸತ್ವಗುಣ ಹೆಚ್ಚಾಗಲು ಸಹಾಯವಾಗಬಹುದು.
ಶುಕ್ರವಾರ ಪ್ರವಾಸ ಪ್ರೀತಿಯ ಅಥವಾ ಹತ್ತಿರದ ವ್ಯಕ್ತಿಯನ್ನು ಭೇಟಿಯಾಗುವುದು ಕಲೆ ಹಾಗು ಪ್ರೀತಿಗೆ ಸಂಬಂಧಪಟ್ಟಿರುವ ಗ್ರಹ ಶುಕ್ರ. ಈ ದಿನದಂದು ಉಗುರುಗಳನ್ನು ಕತ್ತರಿಸುವುದರಿಂದ ಹತ್ತಿರದ ವ್ಯಕ್ತಿಯನ್ನು ಭೇಟಿಯಾಗಲು ಪ್ರವಾಸ ಮಾಡುವಂತಾಗಬಹುದು
ಶನಿವಾರ ದ್ರವ್ಯ ಸಂಪಾದನೆ (ಸಂಪತ್ತನ್ನು ಗಳಿಸುವುದು) ಆಸಕ್ತಿ ಹೆಚ್ಚಾಗುವುದು ಮತ್ತು ಮಾನಸಿಕ ಸ್ಥೈರ್ಯ ಕಡಿಮೆಯಾಗುವುದು ಸಾಧನೆಯಲ್ಲಿ ತ್ಯಾಗಕ್ಕೆ ತುಂಬಾ ಮಹತ್ವವಿದೆ. ಹಣ ಗಳಿಕೆಯ ಹಿಂದೆ ಹೋಗುವುದರಿಂದ ಧ್ಯೇಯದಿಂದ ವಿಚಲಿತರಾಗಬಹುದು. ಆದುದರಿಂದ ಸಾಧಕರು ಶನಿವಾರದಂದು ಉಗುರುಗಳನ್ನು ಕತ್ತರಿಸಬಾರದು.
ರವಿವಾರ ರಾಜಸೇವೆ ರಜೋಗುಣ ಹೆಚ್ಚಾಗುವುದು ಮತ್ತು ಕೆಲಸಗಳಲ್ಲಿ ಅಡಚಣೆಗಳು ಉಂಟಾಗುವುದು ರಾಜಸೇವೆಯ ಸಮಯ ಕಡಿಮೆಯಾಗಬಾರದು ಎಂದಿದ್ದರೆ ರವಿವಾರದಂದು ಉಗುರುಗಳನ್ನು ಕತ್ತರಿಸಬಾರದು. ಸಾಧಕರಿಗೆ ರಾಜಸೇವೆ ಎಂದರೇನು? ಅದು ಸಮಷ್ಟಿ ಸೇವೆ.

ಕತ್ತರಿಸಿದ ಉಗುರುಗಳ ಬಗ್ಗೆ ಕಾಳಜಿ ವಹಿಸಿ. ಅವು ಅಲ್ಲಿ ಇಲ್ಲಿ ಬಿದ್ದಿರದೇ, ಉಗುರುಗಳನ್ನು ಹೆಕ್ಕಿ, ಕಾಗದದಲ್ಲಿ ಸುತ್ತಿ, ಯಾರಿಗೂ ಕೈಗೆ ಸಿಗದ ಹಾಗೆ ಅವುಗಳ ವಿಲೇವಾರಿ ಮಾಡಿ.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದೆ, ಸನಾತನ ಆಶ್ರಮ.

2 thoughts on “ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನದಂದು ಉಗುರುಗಳನ್ನು ಕತ್ತರಿಸಬಾರದು ?”

Leave a Comment