ವಿವಾಹಕ್ಕೆ ಸಂಬಂಧಿಸಿ ಕೆಲವು ವಿಷಯಗಳ ಹಿನ್ನೆಲೆಯ ಶಾಸ್ತ್ರ

ವಿವಾಹಕ್ಕೆ ಅನುಕೂಲವಾದ ವಯಸ್ಸು ಯಾವುದು?

ಎಂಟನೆಯ ವರ್ಷದಲ್ಲಿ ಉಪನಯನವಾದ ನಂತರ ಕನಿಷ್ಠ ಪಕ್ಷ ಹನ್ನೆರಡು ವರ್ಷಗಳ ಕಾಲ ಪುತ್ರನು ಗುರುಕುಲದಲ್ಲಿದ್ದು ಅಧ್ಯಯನ ಮಾಡುತ್ತಿದ್ದನು. ಅಂದರೆ ಸುಮಾರು ಇಪ್ಪತ್ತು ವರ್ಷದವನಾಗುವವರೆಗೂ ತಂದೆ-ತಾಯಿಯರು ಪುತ್ರನ ವಿವಾಹದ ಬಗ್ಗೆ ಆಲೋಚನೆ ಮಾಡುತ್ತಿರಲಿಲ್ಲ. ಅನಂತರದ ಸ್ನಾತಕ ಕಾಲದಲ್ಲಿ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡುವ ಮೊದಲು ಹಣ ಸಂಪಾದನೆ ಮಾಡುವ ಕ್ಷಮತೆ ನಿರ್ಮಾಣವಾಗುವ ದೃಷ್ಟಿಯಿಂದ ನಾಲ್ಕೈದು ವರ್ಷಗಳ ಕಾಲ ಪ್ರಯತ್ನ ಮಾಡಲಾಗುತ್ತಿತ್ತು. ಹೀಗೆ ಇಪ್ಪತ್ತೈದರಿಂದ ಮೂವತ್ತು ವರ್ಷದ ವ್ಯಕ್ತಿಯನ್ನು ವಿವಾಹ ಯೋಗ್ಯ ನೆಂದು ಪರಿಗಣಿಸಲಾಗುತ್ತಿತ್ತು. ಕನ್ಯೆಯರ ಸಂದರ್ಭದಲ್ಲಿ ಬಾಲ್ಯಾವಸ್ಥೆ ಮುಗಿದ ನಂತರ ಐದಾರು ವರ್ಷಗಳು ಸಂಸಾರದ ಜವಾಬ್ದಾರಿಗಳನ್ನು ಪಾಲಿಸುವ ಶಿಕ್ಷಣವನ್ನು ಪಡೆಯುತ್ತಿದ್ದ ಕಾರಣ ಇಪ್ಪತ್ತರಿಂದ ಇಪ್ಪತ್ತೈದರ ವಯಸ್ಸನ್ನು ವಿವಾಹಕ್ಕೆ ಯೋಗ್ಯವೆಂದು ಪರಿಗಣಿಸಲಾಗುತ್ತಿತ್ತು. ಇತ್ತೀಚೆಗೆ ಇದೇ ವಿಷಯವು ಸರ್ವಮಾನ್ಯವಾಗಿದೆ.

ಕುಟುಂಬದವರು ಯಾರಾದರೂ ಮರಣ ಹೊಂದಿದರೆ ವಿವಾಹವನ್ನು ಯಾವಾಗ ಮಾಡಬೇಕು?

ತಂದೆತಾಯಿಯರ ಅಥವಾ ತತ್ಸಮ ನೆಂಟರ ನಿಧನವಾದರೆ ಒಂದು ವರ್ಷದೊಳಗೆ ವಿವಾಹಯೋಗ್ಯರಾದ ಹೆಣ್ಣುಮಕ್ಕಳ ಅಥವಾ ಹುಡುಗರ ವಿವಾಹವನ್ನು ಮಾಡಬೇಕು ಮತ್ತು ಹಾಗೆ ಮಾಡದಿದ್ದರೆ ಮುಂದೆ ಮೂರು ವರ್ಷಗಳವರೆಗೆ ಅವರ ವಿವಾಹವನ್ನು ಮಾಡಬಾರದೆಂಬ ರೂಢಿಯು ಸಮಾಜದಲ್ಲಿ ಪ್ರಚಲಿತವಾಗಿದೆ. ಈ ಪದ್ಧತಿಗೆ ಎಷ್ಟರ ಮಟ್ಟಿಗೆ ಶಾಸ್ತ್ರಾಧಾರವಿದೆ?
ಧರ್ಮಶಾಸ್ತ್ರ, ವೈಚಾರಿಕ ಪರಂಪರೆ ಮತ್ತು ಸಂಸ್ಕೃತಿಯ ಯಾವ ಆಧಾರವೂ ಇಲ್ಲದೆ ಕೆಲವು ಘಾತಕ ಪದ್ಧತಿಗಳು ಸಮಾಜದಲ್ಲಿ ಪ್ರಚಲಿತ ವಾಗಿವೆ. ಇದರಲ್ಲಿ ಮೇಲಿನ ರೂಢಿಯೂ ಒಳಗೊಂಡಿದೆ. ವಾಸ್ತವದಲ್ಲಿ ಮರಣ ಹೊಂದಿರುವ ವ್ಯಕ್ತಿಗೆ ಕನಿಷ್ಠ ಪಕ್ಷ ಒಂದು ವರ್ಷ ಪ್ರೇತತ್ವವಿರುವುದ ರಿಂದ ಪಿತೃತ್ವದ ಅಧಿಕಾರವು ಬರುವುದಿಲ್ಲ. ಆದುದರಿಂದ ಈ ವರ್ಷವನ್ನು ಅಶೌಚ (ಸೂತಕ) ವೆಂದು ಪರಿಗಣಿಸುವುದು ಸೂಕ್ತವಾಗಿದೆ ಮತ್ತು ಈಗ ಅದನ್ನು ಹಾಗೆಯೇ ಪರಿಗಣಿಸಲಾಗುತ್ತದೆ. ಈ ಕಾಲಾವಧಿಯಲ್ಲಿ ನಿತ್ಯ, ನೈಮಿತ್ತಿಕ, ಕುಲಾಚಾರ ಮತ್ತು ಕುಲಧರ್ಮದ ಪಾಲನೆಯನ್ನು ಮಾಡುವುದು ಮತ್ತು ವ್ರತಗಳನ್ನು ಆಚರಿಸುವುದು ಅನಿವಾರ್ಯವಾಗಿದೆ. ಆದರೆ ಯಾವ ಕಾರ್ಯಗಳಿಗಾಗಿ ಪುಣ್ಯಾಹವಾಚನ, ನಾಂದೀಶ್ರಾದ್ಧ (ವೃದ್ಧಿಶ್ರಾದ್ಧ)ವನ್ನು ಮಾಡಬೇಕಾಗಿರುತ್ತದೆಯೋ ಅಂತಹ ಕಾರ್ಯಗಳನ್ನು ಒಂದು ವರ್ಷದವರೆಗೆ ಮಾಡಬಾರದು. ಅದರಲ್ಲಿಯೂ ಅಗತ್ಯವಿದ್ದರೆ ನಡುವೆ ಚೈತ್ರಮಾಸವನ್ನು ಬರಲು ಬಿಡಬೇಕು; ಅಂದರೆ ಸಂವತ್ಸರ ಭೇದದಿಂದ ಆ ಕಾರ್ಯವನ್ನು ಮಾಡಬಹುದು. ಅದರಲ್ಲಿಯೂ ಅತಿ ಹೆಚ್ಚಿನ ಅಗತ್ಯವಿದ್ದರೆ ಮತ್ತು ಚೈತ್ರ ಮಾಸವು ಸಮೀಪದಲ್ಲಿ ಇಲ್ಲದಿದ್ದರೆ ಮರಣ ಹೊಂದಿರುವ ವ್ಯಕ್ತಿಯ ಷೋಡಶಮಾಸಿಕ ಶ್ರಾದ್ಧಗಳನ್ನು ಮತ್ತು ಅಬ್ದಪೂರ್ತಿಶ್ರಾದ್ಧವನ್ನು ಮಾಡಬೇಕು. ನಂತರ ವಿವಾಹ, ಉಪನಯನ, ವಾಸ್ತುಶಾಂತಿ, ನೂತನವ್ರತಾರಂಭ ಇತ್ಯಾದಿ ಕಾರ್ಯಗಳನ್ನು ಮಾಡಬಹುದು. ಒಂದು ವರ್ಷ ಪೂರ್ಣವಾದ ನಂತರ ಈ ಕಾರ್ಯಗಳನ್ನು ಅಗತ್ಯವಾಗಿ ಮಾಡಬಹುದು. ಮೂರು ವರ್ಷಗಳು ಕಳೆಯುವ ವರೆಗೂ ಕಾಯುವ ಪದ್ಧತಿಯು ಸಂಪೂರ್ಣ ತಪ್ಪು ಮತ್ತು ಶಾಸ್ತ್ರಕ್ಕೆ ವಿರುದ್ಧವಾಗಿದೆ.

ವಿವಾಹವು ಪ್ರತಿಕೂಲವಾಗುವುದು ಎಂದರೇನು?

‘ನಿಶ್ಚಿತಾರ್ಥವಾಗಿ ವಿವಾಹದ ದಿನವು ನಿಶ್ಚಯವಾಗಿ ವಿವಾಹಕಾರ್ಯ ಆಗುವವರೆಗಿನ ಕಾಲದಲ್ಲಿ ಮೂರು ಪೀಳಿಗೆಗಳಲ್ಲಿನ ಯಾರಾದರೂ ವ್ಯಕ್ತಿಯು ಮರಣ ಹೊಂದಿದರೆ ಆ ವಿವಾಹವು ಪ್ರತಿಕೂಲವಾಗುತ್ತದೆ ಎನ್ನುವ ಭಾವನೆಯಿದೆ. ಆದರೆ ಇಂತಹ ನಂಬಿಕೆಯು ರೂಢಿಗೆ ಬಂದ ಕಾಲದಲ್ಲಿ ಯಾವುದಾದರೊಂದು ಗೊಂದಲ ಆಗಿರಬಹುದೆಂದು ಅನಿಸುತ್ತದೆ. ಏಕೆಂದರೆ ನಿಶ್ಚಿತಾರ್ಥ ವಿಧಿಯು ಇತ್ತೀಚಿನ ನೂರು-ನೂರೈವತ್ತು ವರ್ಷಗಳ ಕಾಲದಲ್ಲಿಯೇ ಪ್ರಚಲಿತಕ್ಕೆ ಬಂದಿದೆ. ವಾಸ್ತವದಲ್ಲಿ ವಾಂಗ್ನಿಶ್ಚಯದ ನಂತರ ದುರ್ಘಟನೆಯು ನಡೆದರೆ ವಿವಾಹದ ಪ್ರತಿಕೂಲತ್ವವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಲ್ಲಿ ನಿಶ್ಚಿತಾರ್ಥದ ಸಂಕಲ್ಪನೆಯು ಒಳಗೊಂಡಿಲ್ಲ. ವಾಂಗ್ನಿಶ್ಚಯವು ವಿವಾಹದ ಒಂದು ಅಂಗವಾಗಿದ್ದು ಅದನ್ನು ವಿವಾಹದ ಹಿಂದಿನ ದಿನ ಮಾಡುತ್ತಾರೆ. ಇಂತಹ ಸಮಯದಲ್ಲಿ ಮೇಲೆ ಹೇಳಿದ ದುರ್ಘಟನೆಯು ನಡೆದರೆ ಅದು ಪ್ರತಿಕೂಲವಾಗಬಹುದು. ಆದರೆ ವಿವಾಹವು ಆರು-ಆರು, ಎಂಟು-ಎಂಟು ತಿಂಗಳು ಮೊದಲೇ ನಿಶ್ಚಿತ ವಾಗಿರುತ್ತದೆ. ಸಾಮಾಜಿಕ ಸಂದರ್ಭಗಳು, ಅಡೆತಡೆಗಳು, ಕಛೇರಿಯ ರಜಾದಿನಗಳು ಇತ್ಯಾದಿಗಳನ್ನು ಅನುಸರಿಸಿ ಕೆಲವೊಂದು ತಿಂಗಳು ಮೊದಲೇ ವಿವಾಹ ನಿಶ್ಚಯವನ್ನು ಮಾಡುವುದು ಸೂಕ್ತವಾಗಿರುತ್ತದೆ. ಇಂತಹ ಸಮಯ ದಲ್ಲಿ ಯಾರಾದರೂ ದೂರದ ನೆಂಟರು ಮರಣ ಹೊಂದಿದರೆ ಆ ವಿವಾಹವನ್ನು ಪ್ರತಿಕೂಲವೆಂದು ಪರಿಗಣಿಸಿ ನಿಲ್ಲಿಸುವುದು ಸೂಕ್ತವಲ್ಲ. ಆದರೆ ತುಂಬಾ ಹತ್ತಿರದವರು ಅಂದರೆ ತಂದೆ-ತಾಯಿ, ಅಜ್ಜ-ಅಜ್ಜಿ, ಮುತ್ತಜ್ಜ -ಮುತ್ತಜ್ಜಿ ಅಥವಾ ಚಿಕ್ಕಪ್ಪ, ದೊಡ್ಡಪ್ಪ ಇವರಲ್ಲಿ ಯಾರಾದರೂ ಮರಣ ಹೊಂದಿದರೆ ವಿವಾಹವು ಪ್ರತಿಕೂಲವೆಂದು ಮನಸ್ಸು ಅಸ್ವಸ್ಥವಾಗುತ್ತದೆ. ಆದರೆ ವಿವಾಹವನ್ನು ನಿಲ್ಲಿಸುವುದೂ ಕಠಿಣ. ಏಕೆಂದರೆ ಮಹತ್ ಪ್ರಯತ್ನಗಳಿಂದ ವಿವಾಹವು ಕೂಡಿಬಂದಿರುತ್ತದೆ. ಇಂತಹ ಸಂದರ್ಭದಲ್ಲಿ, ವಿನಾಯಕಶಾಂತಿ ಮತ್ತು ಶ್ರೀಪೂಜನ ಇಂತಹ ವಿಧಿಗಳನ್ನು ಮಾಡಿ ವಿವಾಹ ಮಾಡಬಹುದು. ಇಂತಹ ಘಟನೆಗಳು ಪ್ರತಿಕೂಲ ಸೂಚಕವೇ ಆಗಿರುತ್ತವೆ ಎಂದೇನಿಲ್ಲ, ಅವು ಯೋಗಾಯೋಗಾನುಸಾರವೂ ಘಟಿಸಿರಬಹುದು; ಆದರೆ ಒಂದರ ಹಿಂದೆ ಒಂದಾಗಿ, ಮೇಲ್ಕಂಡಂತಹ ಘಟನೆಗಳು ಘಟಿಸ ತೊಡಗಿದಲ್ಲಿ ಆ ವಿವಾಹವನ್ನು ಮಾಡದಿರುವುದು ಸೂಕ್ತ. ಸಾಮಾನ್ಯವಾಗಿ ಅಶುಭ ಸೂಚನೆಗಳ ಕುರಿತು ನಿಸರ್ಗದ ನಿಯಮವು ಹೀಗಿದೆ; ಅಶುಭ ಸೂಚನೆಯನ್ನು ಕೊಡುವುದಿದ್ದರೆ ನಿಸರ್ಗವು ಅದನ್ನು ಒಮ್ಮೆ ಮಾತ್ರ ಕೊಟ್ಟು ಸುಮ್ಮನಿರುವುದಿಲ್ಲ; ಕನಿಷ್ಠ ಎರಡು-ಮೂರು ಬಾರಿಯಾದರೂ ಪುನರಾವರ್ತನೆ ಮಾಡುತ್ತದೆ. ಆದುದರಿಂದ ಇಂತಹ ಘಟನೆಗಳು ಪ್ರತಿಕೂಲವಾಗಿವೆ ಎಂದು ನಿರ್ಧರಿಸುವಾಗ ಎಂದಿಗೂ ಅವಿಚಾರ ಮಾಡಬಾರದು.

ನೋಂದಣಿ ವಿವಾಹಕ್ಕಿಂತ (‘ರಿಜಿಸ್ಟರ್ ಮ್ಯಾರೇಜ್’ಗಿಂತ) ಧಾರ್ಮಿಕ ಪದ್ಧತಿಯ ವಿವಾಹವು ಶ್ರೇಯಸ್ಕರವಾಗಿದೆ

ಅ. ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಲ್ಲದ ‘ನೋಂದಣಿ ವಿವಾಹ’ : ‘ನೋಂದಣಿ ವಿವಾಹ’ದ ಪದ್ಧತಿಯು ೧೮೭೨ ರಲ್ಲಿ ಆಂಗ್ಲರ ಆಡಳಿತದಲ್ಲಿ ಪ್ರಾರಂಭವಾಯಿತು. ಈ ಮಾಧ್ಯಮದಿಂದ ಸಿಗುವ ತೆರಿಗೆಯಿಂದ ಸರಕಾರದ ಉತ್ಪನ್ನವನ್ನು ಹೆಚ್ಚಿಸುವುದು ಬ್ರಿಟಿಷರ ಮುಖ್ಯ ಉದ್ದೇಶವಾಗಿತ್ತು. ಹಿಂದೂಸ್ಥಾನದಲ್ಲಿ ಈಗಲೂ ಈ ಪದ್ಧತಿಯನ್ನು ಪಾಶ್ಚಾತ್ಯರ ಅಂಧಾನುಕರಣೆಯ ಅಭ್ಯಾಸದಿಂದ ಅಥವಾ ಮಿತವ್ಯಯವೆಂದು ಪಾಲಿಸಲಾಗುತ್ತದೆ. ಈ ವಿವಾಹದಲ್ಲಿ ಯಾವುದೇ ವಿಧಿಯನ್ನು ಮಾಡದೇ, ಮುಹೂರ್ತ ಇತ್ಯಾದಿಯನ್ನು ನೋಡದೇ ಕಾಗದಪತ್ರದಲ್ಲಿ ವಿವಾಹವನ್ನು ಮಾಡಲಾಗುತ್ತದೆ.

ಹಿಂದೂ ಧರ್ಮಕ್ಕನುಸಾರ ಮನುಷ್ಯನ ಜನ್ಮವು ಈಶ್ವರ ಪ್ರಾಪ್ತಿಗಾಗಿ ಇದೆ. ಗರ್ಭಧಾರಣೆಯಿಂದ ವಿವಾಹದವರೆಗಿನ ಕಾಲ ದಲ್ಲಿ ಜೀವನದಲ್ಲಿ ಘಟಿಸುವ ಪ್ರಮುಖ ೧೬ ಪ್ರಸಂಗಗಳಲ್ಲಿ ಮಾಡಲಾಗುವ ಧಾರ್ಮಿಕ ಸಂಸ್ಕಾರಗಳಿಂದ ಮನುಷ್ಯನು ಈಶ್ವರನ ಸಮೀಪ ಹೋಗುತ್ತಾನೆ ಎಂದು ಹಿಂದೂ ಧರ್ಮಶಾಸ್ತ್ರವು ಹೇಳುತ್ತದೆ. ಧಾರ್ಮಿಕ ಪದ್ಧತಿಯಿಂದ ವಿವಾಹವಾದ ಅನೇಕರಿಗೆ ಇದರ ಬಗ್ಗೆ ಅನುಭೂತಿಗಳೂ ಬಂದಿವೆ. ನೋಂದಣಿ ವಿವಾಹದಲ್ಲಿ ಯಾವುದೇ ಧಾರ್ಮಿಕ ವಿಧಿಯನ್ನು ಮಾಡದಿರುವುದರಿಂದ ವಧೂ-ವರರ ಮೇಲೆ ಧರ್ಮಸಂಸ್ಕಾರವಾಗುವುದಿಲ್ಲ. ಆದುದರಿಂದ ಇಂತಹ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ, ಈ ವಿವಾಹವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗುವುದಿಲ್ಲ. ಆದುದರಿಂದ ಅಲ್ಪ ಖರ್ಚಿನ ನೋಂದಣಿ ವಿವಾಹದಂತಹ ಧರ್ಮವಿರೋಧಿ ಪರ್ಯಾಯವನ್ನು ಆರಿಸದೇ ಅತ್ಯಂತ ಸರಳ ಪದ್ಧತಿಯಿಂದ, ಆದರೆ ಎಲ್ಲ ಧಾರ್ಮಿಕ ವಿಧಿಗಳೊಂದಿಗೆ ವಿವಾಹ ಮಾಡುವುದು ಹೆಚ್ಚು ಯೋಗ್ಯವಾಗಿದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ಹದಿನಾರು ಸಂಸ್ಕಾರಗಳು’, ಕಿರುಗ್ರಂಥ ‘ವಿವಾಹಸಂಸ್ಕಾರ’)

ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದಲ್ಲಿ ಆಚರಿಸಬೇಡಿರಿ!

ವಿವಾಹಕ್ಕೆ ಹಿಂದೂ ಸಂಸ್ಕೃತಿಯಲ್ಲಿ ಹದಿನಾರು ಸಂಸ್ಕಾರಗಳಲ್ಲಿನ ಕೊನೆಯ ಸಂಸ್ಕಾರದ ಮಹತ್ವವಿದೆ. ಆದುದರಿಂದ ಹಿಂದಿನ ಕಾಲದಲ್ಲಿ ಹಿಂದೂಗಳು ವಿವಾಹಗಳನ್ನು ಧಾರ್ಮಿಕ ಪದ್ಧತಿಯಿಂದ ಆಚರಿಸುತ್ತಿದ್ದರು. ಅಲ್ಲದೇ ವಧು-ವರರಿಗೆ ದೇವಸ್ಥಾನಗಳಲ್ಲಿನ ಚೈತನ್ಯದ ಲಾಭವು ಸಿಗಬೇಕೆಂದು ವಿವಾಹ ಸಂಸ್ಕಾರಗಳನ್ನು ದೇವಸ್ಥಾನಗಳಲ್ಲಿ ಮಾಡುವ ಪದ್ಧತಿಯಿತ್ತು; ಆದರೆ ಇತ್ತೀಚೆಗೆ ಹಿಂದೂಗಳಿಗೆ ವಿವಾಹವೆಂದರೆ ಒಂದು ಮೋಜು ಮಾಡುವ ಮನೋರಂಜನೆಯ ಕಾರ್ಯಕ್ರಮವಾಗಿದೆ ಎಂದು ಅನಿಸುತ್ತಿದೆ. ಆದುದರಿಂದ ವಿವಾಹದ ವಿಧಿಗಳು ನಡೆಯುತ್ತಿರುವಾಗ ಅಲ್ಲಿ ಸೇರಿದ ಜನರು ಹರಟೆ ಹೊಡೆಯುವುದರಲ್ಲಿ ಮಗ್ನರಾಗಿರುತ್ತಾರೆ. ಅಲ್ಲದೇ ಅಲ್ಲಿ ಸಿನಿಮಾ ಹಾಡುಗಳನ್ನು ಹಾಕುತ್ತಾರೆ ಮತ್ತು ಬ್ಯಾಂಡ್‌ಗಳೂ ಸಹ ಇರುತ್ತವೆ. ಈ ಗಲಾಟೆಯಿಂದಾಗಿ ವಿಧಿಗಳಲ್ಲಿನ ಸಾತ್ತ್ವಿಕತೆಯು ಉಳಿಯುವುದಿಲ್ಲ, ಬದಲಾಗಿ ಅದು ಕಡಿಮೆಯಾಗುತ್ತದೆ. ಕೆಲವರು ವಧು-ವರರು ಪರಸ್ಪರರ ಕೊರಳಿಗೆ ಮಾಲೆಯನ್ನು ಹಾಕಿದ ನಂತರ ಹೊರಗೆ ಪಟಾಕಿಗಳನ್ನು ಸಿಡಿಸುತ್ತಾರೆ. ಇದರಿಂದಾಗಿಯೂ ಅಲ್ಲಿನ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ. ಇಂತಹ ಧಾರ್ಮಿಕವಲ್ಲದ ಮತ್ತು ಸಾಮಾಜಿಕ ಪದ್ಧತಿಯ ವಿವಾಹವನ್ನು ದೇವಸ್ಥಾನದ ಸಭಾಗೃಹದಲ್ಲಿ ಆಚರಿಸಿದರೆ ದೇವಸ್ಥಾನದ ಚೈತನ್ಯದ ಲಾಭವು ಯಾರಿಗೂ ಸಿಗುವುದಿಲ್ಲ. ಇದರ ಬದಲಾಗಿ ದೇವಸ್ಥಾನದಲ್ಲಿ ರಜ-ತಮವು ಹರಡುತ್ತದೆ. ಆದುದರಿಂದ ಹಿಂದೂಗಳೇ, ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಿಕೊಂಡು ಅಲ್ಲಿ ವಿವಾಹ ಸಂಸ್ಕಾರವನ್ನು ನೆರವೇರಿಸಿರಿ. ವಿವಾಹವನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುವುದಿದ್ದರೆ ಅದನ್ನು ದೇವಸ್ಥಾನದ ಹೊರಗೆ ಆಚರಿಸಿರಿ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

Leave a Comment