ವಿವಾಹ ಸಂಸ್ಕಾರ

ಹದಿನಾರು ಸಂಸ್ಕಾರಗಳಲ್ಲಿನ ‘ವಿವಾಹ’ ಸಂಸ್ಕಾರದಲ್ಲಿನ ಮಹತ್ವದ ವಿಧಿಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿಯನ್ನು ಸ್ವಲ್ಪದರಲ್ಲಿ ಇಲ್ಲಿ ನೀಡಲಾಗಿದೆ.

ಅ. ಅರ್ಥ ಮತ್ತು ಸಮಾನಾರ್ಥಕ ಶಬ್ದ

ವಿವಾಹ ಅಥವಾ ಉದ್ವಾಹ ಎಂದರೆ ವಧುವನ್ನು ತಂದೆಯ ಮನೆಯಿಂದ ತನ್ನ ಮನೆಗೆ ಕರೆದೊಯ್ಯುವುದು.

೧. ಪಾಣಿಗ್ರಹಣ : ವಧುವನ್ನು ಪತ್ನಿಯನ್ನಾಗಿ ಮಾಡಿಕೊಳ್ಳಲು ವರನು ಆಕೆಯ ಕೈಯನ್ನು  ಹಿಡಿಯುವುದು. ಪುರುಷನು ಸ್ತ್ರೀಯ ಕೈಯನ್ನು ಹಿಡಿಯುತ್ತಾನೆ. ಆದುದರಿಂದ ವಿವಾಹದ ನಂತರ ಸ್ತ್ರೀಯು ಪುರುಷನ ಕಡೆಗೆ ಹೋಗಬೇಕು. ಪುರುಷನು ಸ್ತ್ರೀಯ ಕಡೆಗೆ ಹೋಗುವುದು ಸರಿಯಲ್ಲ.

೨. ಉಪಯಮ : ವಧುವಿನ ಹತ್ತಿರ ಹೋಗುವುದು ಅಥವಾ ಅವಳನ್ನು ಸ್ವೀಕರಿಸುವುದು.

೩. ಪರಿಣಯ : ವಧುವಿನ ಕೈ ಹಿಡಿದು ಅಗ್ನಿಯ ಸುತ್ತಲೂ ಪ್ರದಕ್ಷಿಣೆ ಹಾಕಬೇಕು.
ಸಾಂಪ್ರತ ಬ್ರಾಹ್ಮವಿವಾಹ ಪದ್ಧತಿಯಲ್ಲಿ ಈ ಎಲ್ಲ ವಿಧಗಳೂ ಇರುತ್ತವೆ.

ಆ. ಉದ್ದೇಶ ಮತ್ತು ಮಹತ್ವ

ನಮ್ಮ ವಿವಾಹಸಂಸ್ಥೆಯಲ್ಲಿ ಗೋಚರ, ಅಗೋಚರ, ಇಹ ಮತ್ತು ಪರಗಳ ವಿಚಾರವನ್ನೂ ಮಾಡಲಾಗಿದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕೂ ಪುರುಷಾರ್ಥಗಳನ್ನೂ ಪಡೆದುಕೊಳ್ಳುವ ವ್ಯವಸ್ಥೆಯಿದೆ.

– ಗುರುದೇವ ಡಾ. ಕಾಟೇಸ್ವಾಮೀಜಿ

ಇ. ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಎಷ್ಟನೆಯ ವರ್ಷದಲ್ಲಿ ವಿವಾಹ ಮಾಡ ಬೇಕು

ಎಂಟನೆಯ ವರ್ಷದಲ್ಲಿ ಉಪನಯನವಾದ ನಂತರ ಕನಿಷ್ಠಪಕ್ಷ ಹನ್ನೆರಡು ವರ್ಷಗಳ ಕಾಲ ಪುತ್ರನು ಗುರುಕುಲದಲ್ಲಿದ್ದು ಅಧ್ಯಯನ ಮಾಡುತ್ತಿದ್ದನು. ಅಂದರೆ ಸುಮಾರು ಇಪ್ಪತ್ತು ವರ್ಷದವನಾಗುವ ವರೆಗೂ ತಂದೆ-ತಾಯಿಯರು ಪುತ್ರನ ವಿವಾಹದ ಬಗ್ಗೆ ಆಲೋಚನೆ ಮಾಡುತ್ತಿರಲಿಲ್ಲ. ಅನಂತರದ ಸ್ನಾತಕ ಕಾಲದಲ್ಲಿ ಗೃಹಸ್ಥಾಶ್ರಮದಲ್ಲಿ ಪಾದಾರ್ಪಣೆ ಮಾಡುವ ಮೊದಲು ಹಣ ಸಂಪಾದನೆ ಮಾಡುವ ಕ್ಷಮತೆ ನಿರ್ಮಾಣವಾಗುವ ದೃಷ್ಟಿಯಿಂದ ನಾಲ್ಕೆ ದು ವರ್ಷಗಳ ಕಾಲ ಪ್ರಯತ್ನ ಮಾಡಲಾಗುತ್ತಿತ್ತು. ಹೀಗೆ ಇಪ್ಪತ್ತೈದರಿಂದ ಮೂವತ್ತು ವರ್ಷದ ವ್ಯಕ್ತಿಯನ್ನು ವಿವಾಹ ಯೋಗ್ಯನೆಂದು ಪರಿಗಣಿಸಲಾಗುತ್ತಿತ್ತು. ಕನ್ಯೆಯರ ಸಂದರ್ಭದಲ್ಲಿ ಬಾಲ್ಯಾವಸ್ಥೆ ಮುಗಿದ ನಂತರ ಐದಾರು ವರ್ಷಗಳು ಸಂಸಾರದ ಜವಾಬ್ದಾರಿಗಳನ್ನು ಪಾಲಿಸುವ ಶಿಕ್ಷಣವನ್ನು ಪಡೆಯುತ್ತಿದ್ದ ಕಾರಣ ಇಪ್ಪತ್ತರಿಂದ ಇಪ್ಪತ್ತೈದರ ವಯಸ್ಸನ್ನು ವಿವಾಹಕ್ಕೆ ಯೋಗ್ಯವೆಂದು ಪರಿಗಣಿಸಲಾಗುತ್ತಿತ್ತು. ಇತ್ತೀಚೆಗೆ ಇದೇ ವಿಷಯವು ಸರ್ವಮಾನ್ಯವಾಗಿದೆ.

ಈ. ವಿವಾಹಪೂರ್ವ ವಿಧಿಗಳು

ಗಣಯಾಗ, ತೈಲಹರಿದ್ರಾರೋಪಣವಿಧಿ (ಅರಿಶಿನ-ಎಣ್ಣೆ ಹಚ್ಚುವುದು) ಮತ್ತು ಗಡಿಗೆಸ್ನಾನ ಎಂಬ ವಿಧಿಯನ್ನು ಮಾಡುತ್ತಾರೆ.

ವಿವಾಹಪೂರ್ವ ದಿನದ ಕಾರ್ಯಗಳು : ವಿವಾಹದ ಹಿಂದಿನ ದಿನ, ಯೋಗ್ಯ ಸಮಯದಲ್ಲಿ ಜಾತಕರ್ಮಾದಿ ಸಂಸ್ಕಾರಗಳನ್ನು ವಿಧಿವತ್ತಾಗಿ ಮಾಡದಿದ್ದರೆ ಸಂಸ್ಕಾರಲೋಪ- ಪ್ರಾಯಶ್ಚಿತ್ತ, ವಿವಾಹಸಂಕಲ್ಪ, ಶ್ರೀ ಗಣಪತಿ ಪೂಜೆ, ಸ್ವಸ್ತಿವಾಚನ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದೀಶ್ರಾದ್ಧ, ಗ್ರಹಯಜ್ಞ, ಮಂಟಪದೇವತಾಪ್ರತಿಷ್ಠಾಪನೆ, ಕುಲದೇವತೆಯ ಸ್ಥಾಪನೆ ಮತ್ತು ತೈಲಹರಿದ್ರಾದೇವತೆಯ ಪೂಜೆ, ಮಾಂಗಲಿಕ ಸ್ನಾನ, ವಸೋರ್ಧಾರಾಪೂಜೆ, ಆಯುಷ್ಯಮಂತ್ರ ಜಪ ಇತ್ಯಾದಿ ಕರ್ಮಗಳನ್ನು ಮಾಡಬೇಕಾಗುತ್ತದೆ. ಇವುಗಳಿಗೆ ‘ವಿವಾಹಪೂರ್ವ ದಿನದ ಕಾರ್ಯಗಳು’ ಎನ್ನುತ್ತಾರೆ.

ಉ. ವಿವಾಹದಿನ

೧. ವಿವಾಹಪೂರ್ವ ವಿಧಿಗಳು 

ಮುಹೂರ್ತಘಟಿಕಾಸ್ಥಾಪನೆ, ಮುಂಡಾಸು (ಬಾಸಿಂಗ) ಕಟ್ಟುವುದು, ರೂಖವತ (ಮದುಮಗಳ ಮನೆಗೆ ಹೋಗುವ ಮೊದಲು ವರನಿಗೆ ಕೊಡುವ ಊಟ), ವರಪ್ರಸ್ಥಾನ (ವಧುಗೃಹಕ್ಕೆ ವರನ ಆಗಮನ), ಸೀಮಾಂತಪೂಜೆ (ವರನು ವಧುವಿನ ಊರಿನ ಸೀಮೆಗೆ ಬಂದಾಗ ಅವನ ಸತ್ಕಾರ ಮಾಡುವುದು), ಮಧುಪರ್ಕಪೂಜೆ (ಜೇನುತುಪ್ಪ ಮತ್ತು ಮೊಸರಿನ ಮಿಶ್ರಣದಿಂದ ವರನನ್ನು ಪೂಜಿಸುವುದು) ಮತ್ತು ಯಜ್ಞೋಪವೀತಧಾರಣೆ (ಈ ವಿಧಿಗಳ ಬಗೆಗಿನ ಸವಿಸ್ತಾರ ಮಾಹಿತಿಯನ್ನು ಸನಾತನದ ‘ವಿವಾಹ ಸಂಸ್ಕಾರ’ ಎಂಬ  ಗ್ರಂಥದಲ್ಲಿ ನೀಡಲಾಗುತ್ತದೆ.)

೨. ಲಗ್ನ ಮುಹೂರ್ತದ ವೇಳೆಗೆ ಮಾಡುವ ವಿಧಿಗಳು

ಅ. ಅಂತಃಪಟಧಾರಣವಿಧಿ : ವಧು ಮತ್ತು ವರರ ನಡುವೆ ಶಲ್ಯದಿಂದ (ಶಾಲು) ದಕ್ಷಿಣದಿಂದ ಉತ್ತರದೆಡೆಗೆ ಅಡ್ಡವಾಗಿ ಹಿಡಿಯುವಂತಹ ಪರದೆಗೆ ‘ಅಂತಃಪಟ’ ಅಥವಾ ‘ಅಂತರ್ಪಾಟ’ ಎನ್ನುತ್ತಾರೆ. ಅಕ್ಕಿಯ ಎರಡು ರಾಶಿಗಳನ್ನು ಮಾಡಿ ಅದರಲ್ಲಿನ ಪೂರ್ವದ ಕಡೆಯಿರುವ ರಾಶಿಯ ಮೇಲೆ ವರನನ್ನು ಪಶ್ಚಿಮಕ್ಕೆ ಮುಖ ಮಾಡಿಸಿ ನಿಲ್ಲಿಸಬೇಕು ಮತ್ತು ಪಶ್ಚಿಮದ ಕಡೆಯಲ್ಲಿರುವ ರಾಶಿಯ ಮೇಲೆ ವಧುವನ್ನು ಪೂರ್ವಕ್ಕೆ ಮುಖ ಮಾಡಿಸಿ ನಿಲ್ಲಿಸಬೇಕು. ಅನಂತರ ಇಬ್ಬರ ಕೈಯಲ್ಲಿಯೂ ಸ್ವಲ್ಪ ಅಕ್ಕಿ, ಸ್ವಲ್ಪ ಬೆಲ್ಲ ಮತ್ತು ಸ್ವಲ್ಪ ಜೀರಿಗೆಯನ್ನು ಒಟ್ಟಿಗೆ ಸೇರಿಸಿ ಕೊಡಬೇಕು. ವಧುವರರ ವೈಯಕ್ತಿಕ ಸಂಸ್ಕಾರದಲ್ಲಿ ಇದು ಕೊನೆಯ ವಿಧಿಯಾಗಿದೆ.

ಆ. ಪರಸ್ಪರನಿರೀಕ್ಷಣವಿಧಿ ಮತ್ತು ಪುಷ್ಪಹಾರ ಹಾಕುವುದು : ಮಂಗಲವಾದ್ಯಗಳನ್ನು ಬಾರಿಸಿದ ನಂತರ ನಂತರ ‘ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷಿ ಪತೇ ತೇಂಘ್ರಿಯುಗಂ ಸ್ಮರಾಮಿ || (ಅರ್ಥ : ಹೇ ಲಕ್ಷಿ ಪತಿ ಭಗವಾನ ಶ್ರೀವಿಷ್ಣು, ನಿನ್ನ ಚರಣಗಳ ಸ್ಮರಣೆ ಎಂದರೇನೆ ಲಗ್ನ, ಶುಭಮುಹೂರ್ತ, ತಾರಾಬಲ, ಚಂದ್ರಬಲ, ವಿದ್ಯಾಬಲ ಮತ್ತು ದೈವಬಲವಾಗಿದೆ.)’ ಈ ಮಂತ್ರವನ್ನು ಹೇಳಿ ಅಂತರ್‌ಪಟವನ್ನು ಉತ್ತರ ದಿಕ್ಕಿನಿಂದ ತೆಗೆಯುತ್ತಾರೆ. ಅನಂತರ ಪುರೋಹಿತರು ವಧೂ-ವರರ ಕೈಯಲ್ಲಿರುವ ಅಕ್ಕಿ, ಬೆಲ್ಲ ಮತ್ತು ಜೀರಿಗೆಗಳನ್ನು ಪರಸ್ಪರರ ತಲೆಯ ಮೇಲೆ ಹಾಕಲು ಹೇಳುತ್ತಾರೆ. (ಇತ್ತೀಚೆಗೆ ಅಕ್ಕಿ, ಬೆಲ್ಲ, ಜೀರಿಗೆಗಳನ್ನು ಉಪಯೋಗಿಸುವುದಿಲ್ಲ.) ಇಬ್ಬರಿಗೂ ಪರಸ್ಪರರನ್ನು ಪ್ರೇಮಭಾವದಿಂದ ನೋಡಲು ಹೇಳುತ್ತಾರೆ ಮತ್ತು ಪರಸ್ಪರರಿಗೆ ಪುಷ್ಪಹಾರವನ್ನು ಹಾಕಲು ಹೇಳು ತ್ತಾರೆ. ಮೊದಲು ವಧೂವು ವರನಿಗೆ, ಅನಂತರ ವರನು ವಧುವಿಗೆ ಪುಷ್ಪಹಾರವನ್ನು ಹಾಕುತ್ತಾನೆ.

ಕೆಲವು ಕಡೆಗಳಲ್ಲಿ ವಿವಾಹದ ಸಮಯದಲ್ಲಿ ಹಾರ ಹಾಕುವಾಗ ವರನಿಗೆ ಸಹಜವಾಗಿ ಹಾರ ಹಾಕಲು ಆಗಬಾರದೆಂದು ಮತ್ತು ತಮಾಷೆಗೆಂದು ವಧುವನ್ನು ಮೇಲಕ್ಕೆ ಎತ್ತುತ್ತಾರೆ. ಕೆಲವೊಮ್ಮೆ ವರನನ್ನೂ ಮೇಲಕ್ಕೆ ಎತ್ತುತ್ತಾರೆ. ಈ ಅಯೋಗ್ಯ ಕೃತಿಯಿಂದ ಮುಹೂರ್ತದ ಸಮಯವು ಆಗಿ ಹೋಗಬಹುದು ಮತ್ತು ವಿವಾಹದ ಸ್ಥಳದಲ್ಲಿ ಆಕರ್ಷಿಸುವ ದೇವತೆಗಳ ಸ್ಪಂದನಗಳಿಗೆ ಅಡಚಣೆಯುಂಟಾಗುತ್ತದೆ. ಹಾಗೆಯೇ ಈ ಕೃತಿಯಿಂದ ವಾತಾವರಣದಲ್ಲಿ ತಮೋಗುಣಿ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಇದರ ಲಾಭವನ್ನು ಪಡೆದು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳು ವಿವಾಹದ ಸ್ಥಳದಲ್ಲಿ ತ್ರಾಸದಾಯಕ ಶಕ್ತಿಯ ಸ್ಪಂದನಗಳನ್ನು ಪ್ರಕ್ಷೇಪಿಸುತ್ತವೆ. ಇದರಿಂದ ವರ ಮತ್ತು ವಧುವಿನ ಮೇಲೂ ಪರಿಣಾಮವಾಗಬಹುದು.

ಇ. ಅಕ್ಷತಾರೋಪಣವಿಧಿ

ವಧೂ-ವರರು ಪರಸ್ಪರ ಪುಷ್ಪಹಾರವನ್ನು ಹಾಕಿದ ನಂತರ ವರನುಪೂರ್ವಕ್ಕೆ ಮತ್ತು ವಧೂವು ಪಶ್ಚಿಮಕ್ಕೆ ಮುಖ ಮಾಡಿಕೊಂಡು ಎದುರುಬದುರು ಆಸನದ ಮೇಲೆ ಕುಳಿತುಕೊಳ್ಳಬೇಕು. ಇಬ್ಬರೂ ಕೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು, ಮೊದಲು ವಧೂವು ವರನ ತಲೆಯ ಮೇಲೆ ಮತ್ತು ನಂತರ ವರನು ವಧುವಿನ ತಲೆಯಮೇಲೆ ಅಕ್ಷತೆಗಳನ್ನು ಹಾಕಬೇಕು. ಹೀಗೆ ಮೂರು ಅಥವಾ ಐದು ಸಲ ಮಾಡಬೇಕು. ಆಗ ಪುರೋಹಿತರು ‘ಋಕ್ಚವಾ ಇದಮಗ್ರೇ೦’ ಎಂಬ ಭಾಗವನ್ನು ಪಠಿಸಬೇಕು. ಪರಸ್ಪರರ ಧರ್ಮ, ಅರ್ಥ, ಕಾಮ, ಸಂತತಿ ಇತ್ಯಾದಿ ಇಚ್ಛೆಗಳು ಪೂರ್ಣವಾಗಲು ವಧೂ-ವರರು ಪರಸ್ಪರರ ಮೇಲೆ ಅಕ್ಷತೆಗಳನ್ನು ಹಾಕಬೇಕು. ಅಕ್ಷತೆಯ ಅಕ್ಕಿಯು ಸಮೃದ್ಧಿಯ ಪ್ರತೀಕವಾಗಿದೆ. ಹಾಗೆಯೇ ಅದರಲ್ಲಿ ಭೂತ, ಮಾಟ ಇತ್ಯಾದಿ ಕೆಟ್ಟ ಶಕ್ತಿಗಳನ್ನು ನಿವಾರಿಸುವ ಶಕ್ತಿಯೂ ಇರುವುದರಿಂದ ಅವುಗಳನ್ನು ಉಪಯೋಗಿಸುತ್ತಾರೆ.
ಅನಂತರ ವಧೂ-ವರರು ಆಸನದ ಮೇಲೆ ಪರಸ್ಪರರ ಸಮೀಪ ಕುಳಿತುಕೊಳ್ಳಬೇಕು. ಪತ್ನಿಯು ಪತಿಯ ಎಡಬದಿಯಲ್ಲಿ ಕುಳಿತುಕೊಳ್ಳಬೇಕು. ವಧೂ-ವರರ ಮಾತಾ-ಪಿತರು, ದಿಬ್ಬಣದವರು ಮತ್ತು ಉಪಸ್ಥಿತರು ಸಾಲಾಗಿ ಬಂದು ವಧೂ-ವರರ ಮೇಲೆ ಅಕ್ಷತೆಗಳನ್ನು ಹಾಕಿ ಸುಲಗ್ನವನ್ನು ಮಾಡಬೇಕು. ಆ ಸಮಯದಲ್ಲಿ ವಧೂ-ವರರು ಎದ್ದು ನಿಂತು ಎಲ್ಲರ ಆಶೀರ್ವಾದ ಪಡೆಯಬೇಕು.

ಈ. ಕನ್ಯಾದಾನ ವಿಧಿ

ವ್ಯಾಖ್ಯೆ : ವಧುವನ್ನು (ಕನ್ಯೆಯನ್ನು) ವರನಿಗೆ ದಾನವೆಂದು ಕೊಡುವುದನ್ನು ಕನ್ಯಾದಾನ ಎನ್ನುತ್ತಾರೆ. ವಿವಾಹಸಂದರ್ಭದಲ್ಲಿ ವಧು- ವರರು ಪರಸ್ಪರರಿಗೆ ಹಾರ ಹಾಕುತ್ತಾರೆ. ಇದು ಸಂಕಲ್ಪಕ್ಕನುಸಾರ ವಿಧಿಯಾಯಿತು. ಅನಂತರ ಸಂಕಲ್ಪಪೂರ್ತಿಯ ವಿಧಿಯೇ ಕನ್ಯಾದಾನ. ಆದುದರಿಂದ ಅದನ್ನು ವಧು-ವರರು ಪರಸ್ಪರರನ್ನು ವರಿಸಿದ ನಂತರ ಮಾಡುತ್ತಾರೆ.

ಸಂಕಲ್ಪ : ಬ್ರಾಹ್ಮವಿವಾಹದ ವಿಧಿಯಿಂದ ವಧುಪಿತನು ಕನ್ಯಾದಾನದ ಸಂಕಲ್ಪ ಮಾಡುತ್ತಾನೆ.

ವಿಧಿ : ಒಂದು ಹೊಸ ಕಂಚಿನ ಪಾತ್ರೆಯನ್ನಿಟ್ಟು ಅದರ ಮೇಲೆ ಕನ್ಯೆಯ ಬಲಗೈ, ಅದರ ಮೇಲೆ ವರನ ಬಲಗೈ ಮತ್ತು ಅದರ ಮೇಲೆ ವಧುಪಿತನು ತನ್ನ ಬಲಗೈ ಹಿಡಿಯಬೇಕು. ಬಳಿಕ ವಧುಪಿತನು ಕನ್ಯಾದಾನಕ್ಕೆಂದು ಮೊದಲೇ ಅಭಿಮಂತ್ರಿಸಿ ಸಿದ್ಧಪಡಿಸಿಟ್ಟಿರುವ ನೀರಿನ ಕಲಶವನ್ನು ತನ್ನ ಬಲಗಡೆಗೆ ಇರುವ ತನ್ನ ಪತ್ನಿಯ ಕೈಗೆ ಕೊಡಬೇಕು. ಅವಳು ಆ ನೀರನ್ನು ಸತತ ಧಾರೆಯಾಗಿ ಪತಿಯ ಕೈ ಮೇಲೆ ಬಿಡಬೇಕು. ಆ ನೀರು ವಧುಪಿತನ ಕೈಯಿಂದ ಇಳಿದು ವರನ ಕೈಮೇಲೆ ಬಿದ್ದು, ಅಲ್ಲಿಂದ ವಧುವಿನ ಕೈಯಿಂದ ಕಂಚಿನ ಪಾತ್ರೆಯೊಳಗೆ ಬೀಳುತ್ತದೆ.
ಈ ಸಮಯದಲ್ಲಿ ‘ಧರ್ಮ ಮತ್ತು ಪ್ರಜೆಗಳ ಸಿದ್ಧಿಗಾಗಿ ನಾನು ಈ ಕನ್ಯೆಯನ್ನು ಸ್ವೀಕರಿಸುತ್ತೇನೆ. ಧರ್ಮ, ಅರ್ಥ ಮತ್ತು ಕಾಮ ಇವುಗಳ ಆಚರಣೆಯಲ್ಲಿ ಇವಳನ್ನು ಮೀರಿ ಹೋಗುವುದಿಲ್ಲ. ಎಲ್ಲ ಆರ್ಥಿಕ ವ್ಯವಹಾರಗಳನ್ನು ಇವಳ ಅನುಮತಿಯಿಂದಲೇ ಮಾಡುವೆನು ಹಾಗೂ ಇವಳ ಹೊರತು ಬೇರೆ ಸ್ತ್ರೀಯ ಬಗ್ಗೆ ನನ್ನ ಮನಸ್ಸಿನಲ್ಲಿ ಕಾಮವಾಸನೆಯು ಬರಲು ಬಿಡುವುದಿಲ್ಲ’ ಎಂದು ವರನು ಹೇಳುತ್ತಾನೆ.

ಉ. ಸೂತ್ರಬಂಧನ (ದಾರವನ್ನು ಸುತ್ತುವುದು)

‘ವಧು ಮತ್ತು ವರ ಇವರು ಒಂದು ಜೀವವಾಗಿದ್ದಾರೆ’ ಎಂಬುದನ್ನು ತೋರಿಸಲು ವಿವಾಹವಿಧಿಯಲ್ಲಿ ‘ಸೂತ್ರಬಂಧನವಿಧಿ’ಯಿದೆ. ಈ ದಾರವನ್ನು ಈಶಾನ್ಯ (ಈಶ್ವರ) ದಿಕ್ಕಿನಿಂದ ಸುತ್ತಲು ಪ್ರಾರಂಭಿಸಿ ಅದರ ೫ ಸುತ್ತುಗಳನ್ನು ಸುತ್ತುತ್ತಾರೆ, ಏಕೆಂದರೆ ಶರೀರವು ಪಂಚಮಹಾಭೂತ ಗಳಿಂದಲೇ ತಯಾರಾಗಿದೆ.

ಊ. ಕಂಕಣಬಂಧನ

ಸೂತ್ರಬಂಧನದಲ್ಲಿ ವಧು ವರರ ಕುತ್ತಿಗೆಯ ಸುತ್ತಲೂ ಸುತ್ತಿದ ಸೂತ್ರಕ್ಕೆ ಕುಂಕುಮವನ್ನು ಹಚ್ಚಿ ಹುರಿಹಾಕಬೇಕು ಮತ್ತು ಈ ಸೂತ್ರದಲ್ಲಿ ಅರಿಸಿನಬೇರು, ಊರ್ಣಾಸ್ತುಕವನ್ನು (ಉಣ್ಣೆಯ ತುಂಡು) ಕಟ್ಟಬೇಕು. ವರನು ಈ ಸೂತ್ರವನ್ನು ವಧುವಿನ ಎಡ ಮಣಿಕಟ್ಟಿಗೆ ಕಟ್ಟಬೇಕು. ಅನಂತರ ಸೊಂಟದ ಸುತ್ತಲೂ ಸುತ್ತಿದ ಸೂತ್ರಕ್ಕೆ ಉಣ್ಣೆಯ ತುಂಡು ಮತ್ತು ಅರಿಸಿನದ ಬೇರನ್ನು ಕಟ್ಟಿ ವಧುವು ಆ ಸೂತ್ರವನ್ನು ವರನ ಬಲಗೈಯ ಮಣಿಕಟ್ಟಿಗೆ ಕಟ್ಟಬೇಕು.

ಎ. ಮಾಂಗಲ್ಯಧಾರಣೆ

ಮಂಗಳಸೂತ್ರಕ್ಕೆ ಸಂಸ್ಕ ತದಲ್ಲಿ ‘ಮಾಂಗಲ್ಯತಂತು’ ಎಂದೂ ಹೇಳುತ್ತಾರೆ. ಇದರಲ್ಲಿ ಎರಡು ಎಳೆಗಳುಳ್ಳ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರುತ್ತಾರೆ. ಮಧ್ಯಭಾಗದಲ್ಲಿ ೪ ಚಿಕ್ಕ ಮಣಿಗಳು ಮತ್ತು ೨ ಚಿಕ್ಕ ಬಟ್ಟಲುಗಳಿರುತ್ತವೆ. ಎರಡು ದಾರಗಳೆಂದರೆ ಪತಿ-ಪತ್ನಿಯ ಬಂಧನ, ೨ ಬಟ್ಟಲುಗಳೆಂದರೆ ಪತಿ-ಪತ್ನಿ ಮತ್ತು ೪ ಕಪ್ಪು ಮಣಿಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕು ಪುರುಷಾರ್ಥಗಳು.

ಏ. ವಿವಾಹಹೋಮ

ವಿವಾಹವಿಧಿಯಿಂದ ಸ್ವೀಕರಿಸಿದ ಈ ವಧುವಿನಲ್ಲಿ ಪತ್ನಿತ್ವವು ನಿರ್ಮಾಣವಾಗಲು ಮತ್ತು ಗೃಹ್ಯಾಗ್ನಿಯನ್ನು ಸಿದ್ಧಗೊಳಿಸಲು ವಿವಾಹಹೋಮವನ್ನು ಮಾಡುತ್ತಾರೆ.

ಐ. ಪಾಣಿಗ್ರಹಣ

ಐದೂ ಬೆರಳುಗಳ ಸಹಿತ ವಧುವಿನ ಅಂಗೈಯನ್ನು ವರನು ತನ್ನ ಕೈಯಲ್ಲಿ ತೆಗೆದುಕೊಳ್ಳುವುದಕ್ಕೆ ‘ಪಾಣಿಗ್ರಹಣ’ ಎನ್ನುತ್ತಾರೆ.

ಒ. ಲಾಜಾಹೋಮ

ಲಾಜಾ ಎಂದರೆ ಅರಳು. ಅರಳು (ಹಾಗೆಯೇ ಅಕ್ಕಿ) ಇದು ಅರಳಿರುವ ಯೋನಿಯ ಅಂದರೆ ಬಹುಪ್ರಸವತೆಯ ಪ್ರತೀಕವಾಗಿದೆ.

ಓ. ಸಪ್ತಪದಿ

‘ಏಳು ಹೆಜ್ಜೆಗಳನ್ನು ಒಟ್ಟಿಗೆ ನಡೆಯುವುದರಿಂದ ಸ್ನೇಹವಾಗುತ್ತದೆ’ ಎಂಬ ಶಾಸ್ತ್ರವಚನವಿದೆ – ಆದುದರಿಂದಲೇ ವಿವಾಹಸಂಸ್ಕಾರದಲ್ಲಿ ಸಪ್ತಪದಿಗೆ ವಿಶೇಷ ಮಹತ್ವವಿದೆ. ವರನು ವಧುವಿನ ಕೈ ಹಿಡಿದು ಹೋಮದ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ ಅಕ್ಕಿಯ ಏಳೂ ರಾಶಿಗಳ ಮೇಲಿನಿಂದ ಅವಳನ್ನು ನಡೆಸಿಕೊಂಡು ಹೋಗಬೇಕು. ಇದಕ್ಕೆ ‘ಸಪ್ತಪದಿ’ ಎನ್ನುತ್ತಾರೆ. ವಧು-ವರರು ಒಂದೊಂದು ಹೆಜ್ಜೆಯನ್ನಿಟ್ಟಾಗ ಪುರೋಹಿತರು ಪ್ರತಿಯೊಂದು ಹೆಜ್ಜೆಗೂ ಒಂದೊಂದು ಮಂತ್ರಗಳನ್ನು ಹೇಳುತ್ತಾರೆ.

ಔ. ವಿವಾಹೋತ್ತರ ವಿಧಿ

ಇದರಲ್ಲಿ ಮುಂದಿನ ವಿಧಿಗಳಿರುತ್ತವೆ. ಗೃಹಪ್ರವೇಶ  ಹೋಮ, ನಾಣ್ಯ, ಅಡಿಕೆ ಅಥವಾ ಅರಿಸಿನಬೇರನ್ನು ಬಿಡಿಸುವುದು, ವಧು-ವರ ವ್ರತ, ಸೂನಮುಖ, ಏರಿಣಿದಾನ (ಕನ್ಯಾಪಿತನು ಪೂಜೆಯ ಸಾಮಾನುಗಳಿರುವ ಬಿದರಿನ ಬುಟ್ಟಿಯನ್ನು ದಾನ ಕೊಡುವುದು) ಮತ್ತು ಅನ್ನಪೂರ್ಣಾ ಮೂರ್ತಿಯನ್ನು ತೆಗೆದುಕೊಳ್ಳುವುದು.

ಇಲ್ಲಿ ನೀಡಿರುವ ವಿಧಿಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಸನಾತನದ ‘ವಿವಾಹ ಸಂಸ್ಕಾರ’ ಎಂಬ ಗ್ರಂಥದಲ್ಲಿ ನೀಡಲಾಗಿದೆ.

3 thoughts on “ವಿವಾಹ ಸಂಸ್ಕಾರ”

  1. ಇದರಲ್ಲಿ ಕಾಶಿ ಯಾತ್ರೆಯ ಉದ್ದೇಶ ಮತ್ತು ಮಹತ್ವ ತಿಳಿಸಿಲ್ಲಾ. ಧಾರೆಯೆರೆಯುವಾಗ ಹೇಳುವ ಮಂತ್ರ ಮತ್ತು ಅರ್ಥ ತಿಳಿಸಿ. ಧಾರೆಯೆರೆಯುವಾಗ ವಧುವಿನ ಪಿತ ಹೀಗೆ ಹೆಳುತ್ತಾನೆ ಎಂದು ಕೇಳಿದ್ದೇನೆ “ನನ್ನ ಮಗಳನ್ನು ನಾನು ಸುರಕ್ಷಿತವಾಗಿ ಮತು ಸಂಸ್ಕಾರಯುತ ಶಿಕ್ಷಣ ನೀಡಿದ್ದೇನೆ ಮುಖ್ಯವಾಗಿ ಸಂಪೂರ್ಣ ಜವಾಬ್ದಾರಿಯಿಂದ ನೋಡಿಕೂಂಡಿದ್ದೇನೆ ಇನ್ನು ಮುಂದೆ ನಿನ್ನ ಜವಾಬ್ದಾರಿಯು ನಿನ್ನ ಹೆಗಲ ಮೇಲೆ ಇದೆ ಆದರೆ ತಾಯಿ ಮನೆಯ ಸಂಬಂಧ ಕಳಚುವುದಿಲ್ಲ ” ಇದು ನಿಜವೆ ಇದರ ಸಂಸ್ಕೃತ ಮಂತ್ರ ತಿಳಿಸಿ

    Reply
    • ನಮಸ್ಕಾರ,

      ಲೇಖನದಲ್ಲಿ ಆಸಕ್ತಿ ತೋರಿಸಿರುವುದಕ್ಕೆ ಧನ್ಯವಾದಗಳು. ಹದಿನಾರ ಸಂಸ್ಕಾರಗಳಲ್ಲಿ ಒಂದಾದ ವಿವಾಹ ಸಂಸ್ಕಾರದ ಸಂಕ್ಷಿಪ್ತ ಮಾಹಿತಿ ನೀಡಿ, ಈ ಸಂಸ್ಕಾರವನ್ನು ಸಾಧನೆ ಎಂದು ಪಾಲಿಸುವ ಮಹತ್ವ ತಿಳಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಸ್ಥಳೀಯ ಪುರೋಹಿತರನ್ನು ಸಂಪರ್ಕಿಸಬಹುದು. ಅಂತೆಯೇ ಸಮಾರಂಭಗಳಲ್ಲಿ ಪುರೋಹಿತರಿಂದ ಸಂಸ್ಕಾರಗಳ ಮಹತ್ವವನ್ನು ಎಲ್ಲರಿಗೂ ತಿಳಿಸುವಂತೆ ವಿನಂತಿಸಿ ಧರ್ಮಕರ್ತವ್ಯವನ್ನು ಪಾಲಿಸಬಹುದು.

      Reply

Leave a Comment