ನಾಮಕರಣ

ಶಾಸ್ತ್ರಾನುಸಾರ ಪುತ್ರನ ಅಥವಾ ಪುತ್ರಿಯ ನಾಮಕರಣವನ್ನು ೧೧ ನೆಯ, ೧೨ ನೆಯ ಅಥವಾ ೧೩ ನೆಯ ದಿನ ಮಾಡಬೇಕು. ಈ ದಿನಗಳಲ್ಲಿ ನಾಮಕರಣವನ್ನು ಮಾಡಲು ಸ್ತ್ರೀಯು ಶುದ್ಧಳಾಗಿರುತ್ತಾಳೆ. ನಾಮಕರಣವನ್ನು ಮಾಡುವಾಗ ಶ್ರೀ ಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ, ನಾಂದಿಶ್ರಾದ್ಧ, ಹೋಮ ಇವುಗಳನ್ನು ಮಾಡುತ್ತಾರೆ ಮತ್ತು ಹಿತ್ತಾಳೆಯ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಮಗುವಿನ ಹೆಸರನ್ನು ಬರೆಯುತ್ತಾರೆ.

ಅ. ಉದ್ದೇಶ

೧. ಮಗುವನ್ನು ಗುರುತಿಸಲು ಸಾಧ್ಯವಾಗಬೇಕೆಂದು

೨. ಬಾಲಕನ ಬೀಜ ಮತ್ತು ಗರ್ಭಗಳಿಂದ ನಿರ್ಮಾಣವಾದ ಪಾಪದ ನಿವಾರಣೆಗಾಗಿ, ಆಯುಷ್ಯವೃದ್ಧಿ ಮತ್ತು ಇತರ ಎಲ್ಲ ವ್ಯವಹಾರಗಳು ಆಗಬೇಕೆಂದು ಮತ್ತು ಪರಮೇಶ್ವರನ ಮೇಲೆ ಪ್ರೀತಿಯು ನಿರ್ಮಾಣವಾಗಬೇಕೆಂದು

ಆ. ಜನ್ಮದಿಂದ ಬಂದಿರುವ ಹೆಸರು ಮತ್ತು ವ್ಯಾವಹಾರಿಕ ಹೆಸರು

ಸಂಧ್ಯಾವಂದನೆಯ ಸಮಯದಲ್ಲಿ ಪುತ್ರನು ತನ್ನ ಜನ್ಮ ಹೆಸರನ್ನು (ಜನನವಾದಾಗ ಇಟ್ಟ ಹೆಸರು) ಉಚ್ಚರಿಸಬೇಕಾಗುತ್ತದೆ. ಹಾಗೆಯೇ ಜನ್ಮಕುಂಡಲಿಯನ್ನು (ಜಾತಕ) ತಯಾರಿಸಲು ಸಹ ಜನ್ಮದಿಂದ ಬಂದಿರುವ ಹೆಸರಿನ ಅವಶ್ಯಕತೆ ಇರುತ್ತದೆ. ಪ್ರತಿಯೊಂದು ವಿಧಿಯ ಸಮಯದಲ್ಲಿ ಜನ್ಮ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. ಬಾಕಿ ವ್ಯವಹಾರಕ್ಕಾಗಿ ವ್ಯಾವಹಾರಿಕ ಹೆಸರು ಪ್ರಚಲಿತವಾಗಿರುತ್ತದೆ.
– ಪರಾತ್ಪರ ಗುರು ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಇ. ಅಧ್ಯಾತ್ಮಶಾಸ್ತ್ರಕ್ಕನುಸಾರ ಹೆಸರು 

ಗರ್ಭಾಶಯದಲ್ಲಿರುವಾಗ ಮಗುವಿನ ಲಿಂಗವು ನಿರ್ಧರಿಸಲ್ಪಡುತ್ತದೆ, ಹಾಗೆಯೇ ಅದರ ಹೆಸರೂ ಕೂಡ ಮೊದಲೇ ನಿರ್ಧರಿಸಲ್ಪಡುತ್ತದೆ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಘಟಕಗಳು ಯಾವಾಗಲೂ ಒಟ್ಟಿಗಿರುತ್ತವೆ. ಆದುದರಿಂದ ಮಗುವಿನ ರೂಪದಂತೆಯೇ ಹೆಸರು ಇರುತ್ತದೆ. ಆದರೆ ಅದು ನಮಗೆ ತಿಳಿಯುವುದಿಲ್ಲ, ಉನ್ನತರಿಗೆ ತಿಳಿಯುತ್ತದೆ. ಉನ್ನತರು ಸಿಗದಿದ್ದಲ್ಲಿ ಮಗುವಿಗೆ ಯಾವ ಹೆಸರು ಅನುರೂಪವಾಗಿದೆ ಎನ್ನುವುದರ ಬಗ್ಗೆ ಜ್ಯೋತಿಷ್ಯಶಾಸ್ತ್ರವು ಮಾರ್ಗದರ್ಶನ ನೀಡಬಲ್ಲದು.

‘ವ್ಯಕ್ತಿಯ ಹೆಸರು ಕೇವಲ ಅವನ ಶರೀರದ್ದಾಗಿರದೇ, ಆತ್ಮಚೈತನ್ಯಾಧಿಷ್ಠಿತ ಶರೀರದ್ದಾಗಿರುತ್ತದೆ.’
– ಗುರುದೇವ ಡಾ. ಕಾಟೇಸ್ವಾಮೀಜಿ

ಈ. ಹೆಸರನ್ನು ಆರಿಸುವುದು

೧. ಬಾಲಕನಿಗೆ ಇಡಬೇಕಾಗಿರುವ ಹೆಸರು ಮುಂದಿನ ನಿಯಮಗಳಿಗನುಸಾರವಾಗಿ ಇರಬೇಕು – ಹೆಸರಿನ ಪ್ರಥಮ ಅಕ್ಷರವು ಘೋಷ (ಮೃದುವರ್ಣ) ಅರ್ಥಾತ್ ಕಕಾರಾದಿ ಪಂಚವರ್ಗಗಳ ಪ್ರಾರಂಭದ ಎರಡೆರಡು ವರ್ಣಗಳನ್ನು ಬಿಟ್ಟು ಮಿಕ್ಕ ಗ, ಘ, ಙ, ಜ, ಝ, ಞ, ಡ, ಢ, ಣ, ದ, ಧ, ನ, ಬ, ಭ, ಮ ಮತ್ತು ಯ, ರ, ಲ, ವ ಈ ಹತ್ತೊಂಬತ್ತು ವರ್ಣಗಳಲ್ಲಿ ಇರಬೇಕು. ಕಕಾರಾದಿ ಪಂಚವರ್ಗಗಳ ಪ್ರಥಮ ಎರಡೆರಡು ವರ್ಣಗಳೆಂದರೆ ಕ, ಖ, ಚ, ಛ, ಟ, ಠ, ತ, ಥ ಮತ್ತು ಪ, ಫ ಈ ವರ್ಣಗಳು ಪೃಥ್ವಿ ಮತ್ತು ಆಪತತ್ತ್ವ ಪ್ರಧಾನ ಹಾಗೂ ತಮೋಗುಣ ಪ್ರಧಾನವಾಗಿರುವುದರಿಂದ ಹೆಸರಿನ ಪ್ರಥಮ ಅಕ್ಷರವು ಅವುಗಳಲ್ಲಿರಕೂಡದು.

೨.  ಅಂತ್ಯದ ಅಕ್ಷರವು ದೀರ್ಘವಾದದ್ದು ಅಥವಾ ವಿಸರ್ಗಯುಕ್ತವಾದದ್ದು (ಒತ್ತಕ್ಷರ ಇರುವಂತಹದ್ದು) ಆಗಿರಬೇಕು.

೩. ಬಾಲಕನ ಹೆಸರು ಎರಡು ಅಥವಾ ನಾಲ್ಕು ಅಕ್ಷರಗಳದ್ದಾಗಿರಬೇಕು. ಉದಾಹರಣೆಗೆ ಭದ್ರ, ದೇವ, ದೇವದತ್ತ, ಭವ, ಭವನಾಥ, ನಾಗದೇವ ಇತ್ಯಾದಿ. ಬಾಲಕಿಯ ಹೆಸರು ಬೆಸ  ಸಂಖ್ಯೆಯದ್ದು (೩-೫-೭ ಅಕ್ಷರಗಳದ್ದು ) ಆಗಿರಬೇಕು. ಬೆಸಸಂಖ್ಯೆಯ ಅಕ್ಷರಗಳ ಹೆಸರುಗಳು ಶಕ್ತಿಪ್ರಧಾನವಾಗಿರುತ್ತವೆ ಮತ್ತು ಸಮಸಂಖ್ಯೆಯ ಅಕ್ಷರಗಳ ಹೆಸರುಗಳು ಶಿವಪ್ರಧಾನವಾಗಿರುತ್ತವೆ.

೪.  ಸ್ತ್ರೀಯರ ಹೆಸರಿನ ಮೊದಲನೆಯ ಅಕ್ಷರದಲ್ಲಿ ಒತ್ತಕ್ಷರವು ಇರಬಾರದು. ಸ್ತ್ರೀಯರು ಶಕ್ತಿಪ್ರಧಾನವಾಗಿರುತ್ತಾರೆ. ಮೊದಲನೆಯ ಅಕ್ಷರದಲ್ಲಿ ಒತ್ತಕ್ಷರ ಇದ್ದರೆ ಅದು ಪುರುಷ ಪ್ರಧಾನ ವಾಗುತ್ತದೆ. ಹಾಗಾಗಿ ಮೊದಲನೆಯ ಅಕ್ಷರದಲ್ಲಿ ಒತ್ತಕ್ಷರ ಇದ್ದರೆ ಸ್ತ್ರೀಯ ಮೇಲೆ ಕೆಟ್ಟ ಪರಿಣಾಮವಾಗುವ ಸಾಧ್ಯತೆಯಿರುತ್ತದೆ.

೫. ಮಗನು ಕೀರ್ತಿ ಹೊಂದಬೇಕೆನ್ನುವ ಇಚ್ಛೆಯಿದ್ದರೆ ಎರಡು ಅಕ್ಷರಗಳ ಹೆಸರನ್ನು ಇಡಬೇಕು.

೬. ಬ್ರಹ್ಮವರ್ಚಸ್ಸು, ಅಧ್ಯಯನ ಮತ್ತು ಆಚಾರ ಇವುಗಳ ಸಮೃದ್ಧಿಯಾಗಬೇಕೆಂದರೆ ನಾಲ್ಕು ಅಕ್ಷರಗಳುಳ್ಳ ಹೆಸರನ್ನು ಇಡಬೇಕು. ನಾಲ್ಕು ಅಕ್ಷರಗಳು ಧರ್ಮ, ಅರ್ಥ, ಕಾಮ, ಮೋಕ್ಷ ಈ ಪುರುಷಾರ್ಥಗಳ ಪ್ರತೀಕವಾಗಿವೆ.

೭. ಮಕ್ಕಳ ಹೆಸರನ್ನು ಇಡುವಾಗ ತಮ್ಮ ಇಷ್ಟಕ್ಕನುಸಾರ ಇಡದೇ ನಕ್ಷತ್ರಚರಣದ ಅಕ್ಷರಕ್ಕನುಸಾರ ಆಧ್ಯಾತ್ಮಿಕ ಅರ್ಥವಿರುವುದನ್ನು ಇಡಬೇಕು, ಉದಾ. ಚೈತನ್ಯ, ಭಕ್ತಿ, ಕೃಪಾ.

ಉ. ಹೆಸರುಗಳ ವೈವಿಧ್ಯಗಳು

ಅ. ನಕ್ಷತ್ರನಾಮ : ಯಾವ ನಕ್ಷತ್ರದಂದು ಶಿಶುವಿನ ಜನ್ಮವಾಗಿದೆಯೋ ಅದನ್ನಾಧರಿಸಿ ನಕ್ಷತ್ರನಾಮ

ಆ. ಮಾಸನಾಮ : ಮಾಸನಾಮವನ್ನು ಆಯಾ ಮಾಸದ ಅಧಿಷ್ಠಾನ ದೇವರ ಹೆಸರಿನಿಂದ ನಿರ್ಧರಿಸಲಾಗುತ್ತದೆ.

ಇ. ಕುಲದೇವತಾನಾಮ : ಈ ಹೆಸರನ್ನು ಕುಲದೇವರ / ದೇವಿಯ ಹೆಸರಿನ ಮುಂದೆ ದಾಸ, ಶರಣ ಇತ್ಯಾದಿ ಉಪಪದವನ್ನು ಸೇರಿಸಿ ಇಡುತ್ತಾರೆ. ಕುಲದೇವತೆ ಅಥವಾ ಇಷ್ಟದೇವತೆಯು ಸ್ತ್ರೀಲಿಂಗವಾಗಿದ್ದರೆ ಆ ಸ್ತ್ರೀಲಿಂಗ ನಾಮವನ್ನೇ ಪುತ್ರನಿಗೂ ಇಡುವ ಪದ್ಧತಿಯು ಕೆಲವೆಡೆ ಇದೆ. ಇಂತಹ ಸಮಯದಲ್ಲಿ ಸ್ತ್ರೀವಾಚಕ ನಾಮದ ಮುಂದೆ ಯಾವುದಾದರೊಂದು ಉಪಪದವನ್ನು ಸೇರಿಸಿ ಅದನ್ನು ಪುರುಷವಾಚಕವಾಗುವಂತೆ ಮಾಡುತ್ತಾರೆ. ಉದಾಹರಣೆಗೆ ಶಿವಾನಿಯಿಂದ ಶಿವಾಜಿ, ಬನಶಂಕರಿಯಿಂದ ಬನಶಂಕರಪ್ಪ, ಭವಾನಿಯಿಂದ ಭವಾನಿರಾವ್.

ಈ. ಲೌಕಿಕ ನಾಮ : ಇದನ್ನು ಸಾಮಾಜಿಕ ವ್ಯವಹಾರಗಳಿಗಾಗಿ ಇಡುತ್ತಾರೆ. ಇದು ಬಹಳ ಮಹತ್ವದ್ದಾಗಿರುತ್ತದೆ. ಈ ಹೆಸರು ಮುಖ್ಯವಾಗಿ ಕುಲದ ಸಂಸ್ಕ ತಿ ಹಾಗೂ ಪ್ರತಿಷ್ಠೆಗಳಿಗೆ ಶೋಭಿಸುವಂತಹದ್ದು, ಮಂಗಳಕರ, ಉಚ್ಚರಿಸಲು ಸುಲಭವಾದದ್ದು ಹಾಗೂ ಶ್ರುತಿಸುಖದಾಯಕ (ಕೇಳಲು ಚೆನ್ನಾಗಿರುವ) ಆಗಿರುವಂತೆ ಇಡುವ ಪದ್ಧತಿಯಿದೆ.

ಉ. ರಾಶಿಗನುಸಾರವಾಗಿ ನಾಮ : ಚಂದ್ರರಾಶಿಗನುಸಾರವಾಗಿ, ಸೂರ್ಯರಾಶಿಗನುಸಾರವಾಗಿ

ಊ. ಇತರ :

೧. ಕುತ್ಸಿತನಾಮ : ಕುತ್ಸಿತ ಎಂದರೆ ತುಚ್ಛತಾದರ್ಶಕ. ಯಾರದ್ದಾದರೂ ಮಕ್ಕಳು ಬದುಕಿ ಉಳಿಯದಿದ್ದಲ್ಲಿ, ಯಾವುದಾದರೊಂದು ತುಚ್ಛತಾದರ್ಶಕ ಹೆಸರನ್ನಿಡುವ ಪದ್ಧತಿ ಇದೆ. ಉದಾಹರಣೆಗೆ ಗುಂಡಪ್ಪ, ಹುಚ್ಚಪ್ಪ ಇತ್ಯಾದಿ. ಇಂತಹ ಹೆಸರನ್ನಿಡುವುದರಿಂದ ಆ ಮಗುವು ಬದುಕಿ ಉಳಿಯುವುದು ಮತ್ತು ಅದರ ಆಯುಷ್ಯ ಹೆಚ್ಚುವುದು ಎನ್ನುವ ನಂಬಿಕೆಯಿದೆ.

೨. ಬುಡಕಟ್ಟು ಜನಾಂಗದಲ್ಲಿನ ಹೆಸರು : ‘ಪೂರ್ವ ಭಾರತದಲ್ಲಿನ ಬುಡಕಟ್ಟು ಜನಾಂಗ ದವರು ಮೃತರಾದ ತಮ್ಮ ಪೂರ್ವಜರ ಹೆಸರುಗಳನ್ನು ಮಕ್ಕಳಿಗೆ ಇಡುತ್ತಾರೆ. ಆ ಪೂರ್ವಜರ ಆತ್ಮವು ಆ ನವಜಾತ ಶಿಶುವಿನಲ್ಲಿ ಬಂದಿರುತ್ತದೆ ಎನ್ನುವುದು ಅವರ ಭಾವನೆಯಾಗಿರುತ್ತದೆ. ಕೆಲವರು ಯಾವ ಮರದ ಅಥವಾ ಗಿಡದ ಕೆಳಗೆ ಬಾಲಕನ ಜನ್ಮವಾಯಿತೋ ಆ ಮರದ ಹೆಸರನ್ನು ಅಥವಾ ಗುಡ್ಡ / ಬೆಟ್ಟದ ಹೆಸರನ್ನು ಆ ಬಾಲಕನಿಗೆ ಇಡುತ್ತಾರೆ. ಕೆಲವರು ವಾರದ ಹೆಸರನ್ನಾಧಾರಿಸಿ ಮಕ್ಕಳಿಗೆ ಹೆಸರನ್ನಿಡುತ್ತಾರೆ. ಉದಾಹರಣೆಗೆ ಸೋಮ, ಬುಧ, ಶುಕ್ರಯ್ಯ ಇತ್ಯಾದಿ.

ಊ. ಪುತ್ರಿಯ ಜನನೇಂದ್ರಿಯಗಳ ಮೇಲೆ ಪರಿಣಾಮವಾಗಬಾರದೆಂದು ಅವಳ ನಾಮಕರಣವನ್ನು ಮಂತ್ರರಹಿತವಾಗಿ ಮಾಡಲಾಗುತ್ತದೆ 

ಮಂತ್ರದಲ್ಲಿ ‘ಓಂ’ನ ಉಚ್ಚಾರವು ಪದೇಪದೇ ಬರುತ್ತದೆ. ‘ಓಂ’ನಿಂದ ನಿರ್ಮಾಣವಾಗುವ ಸ್ಪಂದನಗಳಿಂದ ಶರೀರದಲ್ಲಿ ಬಹಳಷ್ಟು ಶಕ್ತಿಯು (ಉಷ್ಣತೆ) ನಿರ್ಮಾಣವಾಗುತ್ತದೆ. ಪುರುಷರ ಜನನೇಂದ್ರಿಯಗಳು ಶರೀರದ ಹೊರಗೆ ಇರುತ್ತವೆ. ಇದರಿಂದ ನಿರ್ಮಾಣವಾಗುವ ಉಷ್ಣತೆಯಿಂದ ಅವರ ಜನನೇಂದ್ರಿಯಗಳ ಮೇಲೆ ಪರಿಣಾಮವಾಗುವುದಿಲ್ಲ. ಸ್ತ್ರೀಯರ ಜನನೇಂದ್ರಿಯಗಳು ಅವರ ಕಿಬ್ಬೊಟ್ಟೆಯಲ್ಲಿರುವುದರಿಂದ ಈ ಉಷ್ಣತೆಯ ಪರಿಣಾಮದಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಮುಂದೆ ಅವಳು ದೊಡ್ಡವಳಾದ ಮೇಲೆ ಮಾಸಿಕ ಸರದಿಯು ಹೆಚ್ಚಾಗುವುದು, ಮಾಸಿಕ ಸರದಿ ಬರದಿರುವುದು, ಸರದಿಯ ಸಮಯದಲ್ಲಿ ವೇದನೆಯಾಗುವುದು ಮುಂತಾದ ವಿವಿಧ ರೀತಿಯ ವ್ಯಾಧಿಗಳಾಗಬಹುದು. ಆದುದರಿಂದ ಪುತ್ರಿಯ ನಾಮಕರಣವನ್ನು ಮಂತ್ರರಹಿತವಾಗಿ ಮತ್ತು ಪುತ್ರನ ನಾಮಕರಣವನ್ನು ಮಂತ್ರಸಹಿತ ಮಾಡುತ್ತಾರೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು‘ ಗ್ರಂಥ)

Leave a Comment