ಚೌಲಕರ್ಮ (ಚೂಡಾಕರ್ಮ, ಜುಟ್ಟು ಇಡುವುದು)

ಅ. ವ್ಯಾಖ್ಯೆ

‘ಚೂಡಾ’ ಅಂದರೆ ಜುಟ್ಟು (ಶಿಖೆ). ತಲೆಯ ಮೇಲೆ ಜುಟ್ಟಿನ ಚಕ್ರದ ಜಾಗದಲ್ಲಿ ಸಹಸ್ರಾರಚಕ್ರವಿರುತ್ತದೆ. ಅಲ್ಲಿ ಜುಟ್ಟನ್ನು ಇಟ್ಟು ಉಳಿದ ಕೂದಲನ್ನು ತೆಗೆಯುವುದಕ್ಕೆ ‘ಚೌಲಕರ್ಮ’ / ‘ಚೂಡಾಕರ್ಮ’ ಎನ್ನುತ್ತಾರೆ. ಉಪನಯನ ಮತ್ತು ಇತರ ಪ್ರತಿಯೊಂದು ವಿಧಿಯಲ್ಲಿ ಜುಟ್ಟಿಗೆ ಬಹಳ ಮಹತ್ವವಿದೆ.
– ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜ

ಆ. ಉದ್ದೇಶ

೧. ಆಯುಷ್ಯ, ಬಲ ಮತ್ತು ತೇಜಸ್ಸುಗಳ ವೃದ್ಧಿಯಾಗಬೇಕೆಂದು ಚೌಲಕರ್ಮವನ್ನು ಮಾಡುತ್ತಾರೆ. ಜುಟ್ಟಿನಿಂದ ವಿಶ್ವದಲ್ಲಿನ ಸತ್ತ್ವಲಹರಿಗಳು ಬ್ರಹ್ಮರಂಧ್ರದಿಂದ ಒಳಗೆ ಬರಲು ಸಹಾಯವಾಗುತ್ತದೆ.  ಜುಟ್ಟು ದೂರದರ್ಶನದ (ಟಿ.ವಿ.ಯ) ಆಂಟೆನಾದಂತೆ ಕಾರ್ಯ ಮಾಡುತ್ತದೆ.

೨. ‘ಜುಟ್ಟಿನ ಜಾಗದಲ್ಲಿ ಮೇಧಾ (ಬುದ್ಧಿಶಕ್ತಿ) ಶಕ್ತಿಯು ಜಾಗೃತವಾದ ಮೇಲೆ ಅದು ಶಾಶ್ವತವಾಗಿ ಅಲ್ಲಿಯೇ ಉಳಿಯಬೇಕು (ನಮ್ಮ ವಿವೇಕವು ಯಾವಾಗಲೂ ಜಾಗೃತವಾಗಿರಬೇಕು) ಎಂಬುದೇ ಚೌಲಕರ್ಮವನ್ನು ಮಾಡುವುದರ ಉದ್ದೇಶವಾಗಿದೆ. ಇದರಿಂದಲೇ ‘ಗುರುತಿನ ಗಂಟು ಹಾಕುವುದು’ ಅಥವಾ ‘ಜುಟ್ಟಿಗೆ ಗಂಟು ಹಾಕುವುದು’, ಎಂದು ಹೇಳಲಾಗುತ್ತದೆ’. – ಪರಾತ್ಪರ ಗುರು ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

ಇ. ಮುಹೂರ್ತ

ಈ ಸಂಸ್ಕಾರವನ್ನು ಮೂರನೆಯ, ನಾಲ್ಕನೆಯ ಅಥವಾ ಐದನೆಯ (ಅಪವಾದ – ಮೊದಲನೆಯ, ಎರಡನೆಯ, ಮೂರನೆಯ ಅಥವಾ ಐದನೆಯ) ವರ್ಷದಲ್ಲಿ ಶುಭಘಳಿಗೆಯನ್ನು ನೋಡಿ ಮಾಡುವ ಪದ್ಧತಿಯಿದೆ. ಇತ್ತೀಚೆಗೆ ಈ ವಿಧಿಯನ್ನು ಬಹುಶಃ ಮುಂಜಿಯ ಸಮಯದಲ್ಲಿಯೇ ಮಾಡುತ್ತಾರೆ.

ಈ. ಸಂಕಲ್ಪ

‘ಬೀಜ ಮತ್ತು ಗರ್ಭಗಳಿಂದ ಉತ್ಪನ್ನವಾಗಿರುವ ಈ ಬಾಲಕನ ಪಾತಕಗಳು ನಾಶವಾಗಿ ಆತನಲ್ಲಿ ಬಲ, ಆಯುಷ್ಯ ಮತ್ತು ರೇತಸ್ಸು (ವೀರ್ಯ) ವೃದ್ಧಿಯಾಗಿ ಅವನು ಸಾಧನೆಗೆ ಅರ್ಹನಾಗಲಿ ಎಂದು ಶ್ರೀ ಪರಮೇಶ್ವರನ ಪ್ರೀತಿಗಾಗಿ ಚೌಲಸಂಸ್ಕಾರವನ್ನು ಮಾಡುತ್ತೇನೆ. ಅದಕ್ಕಿಂತ ಮೊದಲು ಶ್ರೀ ಗಣಪತಿಪೂಜೆ, ಪುಣ್ಯಾಹವಾಚನ, ಮಾತೃಕಾಪೂಜೆ ಮತ್ತು ನಾಂದೀಶ್ರಾದ್ಧವನ್ನು ಮಾಡುತ್ತೇನೆ.’

ಉ. ಚೌಲಕರ್ಮಕ್ಕೆ ಸಂಬಂಧಿಸಿದ ಒಂದು ಕೃತಿ – ಪ್ರಥಮ ಕೇಶ ಮುಂಡನ

ಶಾಸ್ತ್ರಕ್ಕನುಸಾರ ಪುತ್ರನಿದ್ದರೆ ೬, ೮, ೧೦ ಇತ್ಯಾದಿ ಸಮಮಾಸಗಳಲ್ಲಿ, ಪುತ್ರಿಯಾಗಿದ್ದ್ದರೆ ೧, ೩, ೫ ಇತ್ಯಾದಿ ಬೆಸಮಾಸಗಳಲ್ಲಿ ಪ್ರಥಮಕೇಶಮುಂಡನ ಮಾಡಿಸಬೇಕು. ಇದನ್ನು ರೂಢಿಯಂತೆ ಪುತ್ರನು ಒಂದು ವರ್ಷದವನಾದಾಗ ಮಾಡುತ್ತಾರೆ. ಆ ಸಮಯದಲ್ಲಿ ಆತನ ಮುಂದಲೆಯ ಸ್ವಲ್ಪ ಕೂದಲನ್ನು ಇಡುತ್ತಾರೆ. ಸ್ವಲ್ಪ ಕೂದಲನ್ನು ಬಿಡುವುದರ ಮಹತ್ವವು ವಿಷಯ ‘ಉದ್ದೇಶ’ ಇದರಿಂದ ಗಮನಕ್ಕೆ ಬರುವುದು. ಒಂದು ವರ್ಷದೊಳಗೆ ಜುಟ್ಟನ್ನು ತೆಗೆಯಬೇಕು, ಇಲ್ಲವಾದರೆ ಮೂರು ವರ್ಷಗಳವರೆಗೆ ತೆಗೆಯುವಂತಿಲ್ಲ, ಎನ್ನುವುದು ಹಲವರ ಅಭಿಪ್ರಾಯವಾಗಿದೆ; ಆದರೆ ಅದಕ್ಕೆ ಶಾಸ್ತ್ರಾಧಾರವಿಲ್ಲ. ಮೂರು ವರ್ಷಗಳ ವರೆಗೆ ಯಾವಾಗ ಬೇಕಾದರೂ ಸಮಮಾಸದಲ್ಲಿ ಯೋಗ್ಯ ದಿನವನ್ನು ನೋಡಿ ಕೂದಲನ್ನು ತೆಗೆಯಬಹುದು. ಪ್ರಥಮಕೇಶಮುಂಡನ ಅಂದರೆ ಚೌಲಕರ್ಮವಲ್ಲ. (ಪ್ರಥಮ ಕೇಶಮುಂಡನ ಮಾಡುವಾಗ ಜುಟ್ಟನ್ನಿಡುವುದಿಲ್ಲ.)

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು‘ ಗ್ರಂಥ)

Leave a Comment