ಹದಿನಾರು ಸಂಸ್ಕಾರಗಳು

ಮಹತ್ವ

ಅ. ಹಿಂದೂ ಧರ್ಮದಲ್ಲಿನ ಹದಿನಾರು ಸಂಸ್ಕಾರಗಳೆಂದರೆ, ಈಶ್ವರನು ಜೀವಗಳಿಗೆ ದೈನಂದಿನ ಜೀವನದಲ್ಲಿ ಸಹಜವಾಗಿ ಚೈತನ್ಯವನ್ನು ನಿರ್ಮಿಸಲು ನೀಡಿದ ಸಾಧನಗಳಾಗಿವೆ.

ಆ. ಹದಿನಾರು ಸಂಸ್ಕಾರಗಳಿಂದ ಜೀವದ ಮನಸ್ಸು ವ್ಯಾಪಕವಾಗಲು ಸಹಾಯವಾಗಿ ಅದಕ್ಕೆ ಭಾವನೆಯಿಂದ ಭಾವದಲ್ಲಿ ಪ್ರವೇಶಿಸಲು ಸುಲಭವಾಗುತ್ತದೆ.

ಇ. ಚೈತನ್ಯದಿಂದಲೇ ಸಂಸ್ಕಾರದ ಬೀಜಗಳನ್ನು ಜೀವದ ಚಿತ್ತದಲ್ಲಿ ಬಿತ್ತಲಾಗುತ್ತದೆ. ಅನೇಕ ಜನ್ಮಗಳಿಂದ ಜೀವದಲ್ಲಿದ್ದ ರಜ-ತಮಾತ್ಮಕ ಸಂಸ್ಕಾರಬೀಜಗಳ ಪ್ರಕ್ಷೇಪಣೆಯ ಪ್ರಕ್ರಿಯೆಯನ್ನು ಧರ್ಮದಲ್ಲಿ ಹೇಳಿದ ಹದಿನಾರು ಸಂಸ್ಕಾರಗಳ ಪ್ರಕ್ರಿಯೆಯಿಂದ ತಡೆಗಟ್ಟಿ ಆಯಾಯ ವಿಚಾರಗಳನ್ನು ಉಚ್ಚಾಟಿಸಲಾಗುತ್ತದೆ.

ಮನುಷ್ಯನ ಜನ್ಮವು ಕೇವಲ ಈಶ್ವರಪ್ರಾಪ್ತಿಗಾಗಿಯೇ ಇದೆ ಎಂದು ಧರ್ಮದ ಬೋಧನೆಯಾಗಿದೆ. ಆದುದರಿಂದ ಜನ್ಮದಿಂದ ಮೃತ್ಯುವಿನವರೆಗೆ ಘಟಿಸುವ ಎಲ್ಲ ಪ್ರಸಂಗಗಳಿಂದಲೂ ಈಶ್ವರನ ಸಮೀಪ ಹೋಗಲು ಬರಬೇಕೆಂದು ಅವಶ್ಯಕವಾದ ಉಪಾಸನೆಗಳನ್ನು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಜನ್ಮದಿಂದ ವಿವಾಹದವರೆಗೆ ಜೀವನದ ಒಂದು ಚಕ್ರವು ಪೂರ್ಣವಾಗುತ್ತದೆ. ಹೀಗೆಯೇ ಇನ್ನೊಂದು ಚಕ್ರವು ಪುತ್ರನ / ಕನ್ಯೆಯ ಜನ್ಮದಿಂದ ಅವನ / ಅವಳ ವಿವಾಹದವರೆಗೂ ಇರುತ್ತದೆ. ಹೀಗೆ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಯವರೆಗೆ ನಡೆಯುತ್ತಲೇ ಇರುತ್ತದೆ. ಗರ್ಭಧಾರಣೆಯಿಂದ ವಿವಾಹದವರೆಗಿನ ಕಾಲದಲ್ಲಿ ಜೀವನದಲ್ಲಿ ಘಟಿಸುವ ಪ್ರಮುಖ ಹದಿನಾರು ಪ್ರಸಂಗಗಳಲ್ಲಿ ಈಶ್ವರನ ಸಮೀಪಕ್ಕೆ ಹೋಗಲು ಯಾವ ಸಂಸ್ಕಾರಗಳನ್ನು ಮಾಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇದರಿಂದ ಸಂಸ್ಕಾರಗಳ ಹಿಂದಿನ ಶಾಸ್ತ್ರವು ತಿಳಿಯಲು ಸಹಾಯವಾಗುವುದು. ವರ್ಣ, ಜಾತಿ, ಉಪಜಾತಿ ಇತ್ಯಾದಿಗಳ ಸಂಸ್ಕಾರಗಳಲ್ಲಿನ ವಿಧಿಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ವಿಧಿಗಳ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳಲು ಆಡಚಣೆ ಬರುವುದಿಲ್ಲ.

೧. ವ್ಯುತ್ಪತ್ತಿ ಮತ್ತು ಅರ್ಥ

ಗರ್ಭಧಾರಣೆಯಿಂದ ವಿವಾಹದ ವರೆಗಿನ ಕಾಲದಲ್ಲಿ ತಂದೆ, ತಾಯಿ ಮತ್ತು ಆಚಾರ್ಯರು ಪುತ್ರ ಅಥವಾ ಪುತ್ರಿಯರಿಗೆ ಅವರಿಂದ ಸಮ್ಯಕ್ (ಸಾತ್ತ್ವಿಕ) ಕೃತಿಗಳಾಗಬೇಕೆಂದು ವೈದಿಕ ಪದ್ಧತಿಗನುಸಾರ ಮಾಡುವ ವಿಧಿಗಳನ್ನು ಸಂಸ್ಕಾರ ಎನ್ನುತ್ತಾರೆ. ಇವುಗಳಲ್ಲಿ ಹದಿನಾರು ಪ್ರಮುಖ ಸಂಸ್ಕಾರಗಳಿವೆ.

೧. ಗರ್ಭಾಧಾನ (ಋತುಶಾಂತಿ)
೨. ಪುಂಸವನ (ಪುತ್ರಪ್ರಾಪ್ತಿ)
೩. ಸೀಮಂತೋನ್ನಯನ
೪. ಜಾತಕರ್ಮ (ಜನ್ಮವಿಧಿ)
೫. ನಾಮಕರಣ
೬. ನಿರ್ಗಮನ (ಮನೆಯಿಂದಾಚೆ ಕರೆದುಕೊಂಡು ಹೋಗುವುದು)
೭. ಅನ್ನಪ್ರಾಶನ
೮. ಚೌಲಕರ್ಮ (ಚೂಡಾಕರ್ಮ, ಜುಟ್ಟು ಇಡುವುದು)
೯. ಉಪನಯನ (ವ್ರತಬಂಧ, ಮುಂಜಿ)
೧೦. ಮೇಧಾಜನನ
೧೧. ಮಹಾನಾಮ್ನೀವ್ರತ
೧೨. ಮಹಾವ್ರತ
೧೩. ಉಪನಿಷದ್‌ವ್ರತ
೧೪. ಗೋದಾನವ್ರತ (ಕೇಶಾಂತ ಸಂಸ್ಕಾರ)
೧೫. ಸಮಾವರ್ತನ
೧೬. ವಿವಾಹ

ಆದರೆ ಇತ್ತೀಚೆಗೆ ೧. ಉಪನಯನ (ಮುಂಜಿ) ೨. ಸಮಾವರ್ತನ ಮತ್ತು ೩. ವಿವಾಹ ಈ ಮೂರು ಸಂಸ್ಕಾರಗಳು ಮಾತ್ರ ಪ್ರಚಲಿತವಾಗಿವೆ. ಮಿಕ್ಕ ಸಂಸ್ಕಾರಗಳನ್ನು ಪ್ರಾಯಶ್ಚಿತ್ತ ಮಾಡಿಯೇ ಮುಗಿಸಲಾಗುತ್ತದೆ. ಪ್ರಾಯಶ್ಚಿತ್ತವೆಂದರೆ ಸಂಸ್ಕಾರವನ್ನು ಮಾಡದಿರುವುದಕ್ಕಾಗಿ ಮಾಡಬೇಕಾದ ವಿಧಿ.

೨. ಮಹತ್ವ 

ಹಿಂದಿನ ಕಾಲದಲ್ಲಿನ ಋಷಿಗಳು ಮಾನವಜಾತಿಯ ಉನ್ನತಿಗಾಗಿ ಪ್ರತಿಯೊಬ್ಬ ಮಾನವನಿಗೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಮಾನವನಿಗೆ ಸಂಸ್ಕಾರಗಳನ್ನು ಮಾಡಿ ಉನ್ನತಿಯನ್ನು ಮಾಡಿದರೆ ಅವನಿಗೆ ಲಾಭವಾಗುತ್ತದೆ. ಅವನು ಸರ್ವಸಂಪನ್ನನಾಗಿ ತನ್ನ ಜೀವನವನ್ನು ಒಳ್ಳೆಯ ರೀತಿಯಿಂದ ಮತ್ತು ಆನಂದದಿಂದ ಕಳೆಯುತ್ತಾನೆ ಹಾಗೂ ಸಮಾಜದ ಉನ್ನತಿಗೂ ಸಹಾಯ ಮಾಡುತ್ತಾನೆ. ಇದರಿಂದ ಸಮಾಜವು ಸುದೃಢವಾಗಿ ರಾಷ್ಟ್ರವು ಸಮರ್ಥವಾಗುವುದು. ಈ ಪ್ರಕ್ರಿಯೆಯು ಸತತವಾಗಿ ಸಮಾಜದಲ್ಲಿ ನಡೆದರೆ ಸಮಾಜವು ವ್ಯಕ್ತಿಗೆ ಪೂರಕವಾಗುವುದು. ಈ ಚಕ್ರವು ಸತತವಾಗಿ ನಡೆಯುತ್ತಿರಬೇಕೆಂದು ಸಂಸ್ಕಾರಗಳ ಆಯೋಜನೆಯನ್ನು ಮಾಡಲಾಗಿದೆ. ಜನ್ಮದಿಂದ ಮರಣದವರೆಗಿನ ಈ  ಸಂಸ್ಕಾರಗಳು ಆಯಾ ವಯಸ್ಸಿಗನುಸಾರ ಮತ್ತು ಪರಿಸ್ಥಿತಿಗನುಸಾರ ಯೋಗ್ಯವಾಗಿವೆ. ಈ ಸಂಸ್ಕಾರಗಳ ಸಹಾಯದಿಂದ ಜೀವದ ವಿಚಾರಗಳಲ್ಲಿ ಪರಿವರ್ತನೆಯನ್ನು ಮಾಡಲು ಆಗುತ್ತದೆ. ಇದರಿಂದ ಅವನ ಶರೀರ, ಮನಸ್ಸು ಮತ್ತು ಆತ್ಮವು ಶುದ್ಧವಾಗುತ್ತವೆ. ಯಾವ ಜೀವದ ಮೇಲೆ ಇಂತಹ ಸಂಸ್ಕಾರಗಳು ಆಗುವುದಿಲ್ಲವೋ, ಅವನು ಉಗ್ರಗಾಮಿ, ಭ್ರಷ್ಟಾಚಾರಿ ಮತ್ತು ವ್ಯಭಿಚಾರಿಯಾಗುತ್ತಾನೆ. ಇದರಿಂದ ಅವನು ಸ್ವಂತದ ಮತ್ತು ಇತರರ ಜೀವನವನ್ನೂ ದುಃಖಿಯನ್ನಾಗಿ ಮಾಡುತ್ತಾನೆ.’

-ಪರಾತ್ಪರ ಗುರು ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

೩. ಅಧಿಕಾರ (ಯಾರಿಗೆ ಸಂಸ್ಕಾರಗಳನ್ನು ಮಾಡುತ್ತಾರೆ?)

‘ಪ್ರಾಚೀನ ಕಾಲದಲ್ಲಿ ಪುತ್ರರಂತೆ ಕನ್ಯೆಯರಿಗೂ ಸಂಸ್ಕಾರಗಳನ್ನು ಮಾಡುತ್ತಿದ್ದರು. ಅವರ ಉಪನಯನವೂ ಆಗುತ್ತಿತ್ತು. ಆದರೆ ವೇದಕಾಲದಲ್ಲಿ ಕನ್ಯೆಯರ ಸಂಸ್ಕಾರಗಳು ಹಿಂದುಳಿಯುತ್ತಾ ಹೋದವು ಮತ್ತು ಪತ್ನಿ ಎಂದು ಮಾಡಲಾಗುವ ಮಂತ್ರಸಹಿತ ವಿವಾಹ ಸಂಸ್ಕಾರಗಳು ಮಾತ್ರ ಮುಂದುವರೆದವು. ‘ಸಂಸ್ಕಾರಗಳನ್ನು ಪ್ರಮುಖವಾಗಿ ತ್ರಿವರ್ಣದವರಿಗೆ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಹೇಳಲಾಗಿದೆ. ಶೂದ್ರರಿಗೆ ಯೋಗ್ಯವಾದ ಹತ್ತು ಸಂಸ್ಕಾರಗಳನ್ನು ಮತ್ತು ಕನ್ಯೆಯರ ಸಂಸ್ಕಾರ ಗಳನ್ನು ಮಂತ್ರೋಚ್ಚಾರವಿಲ್ಲದೆ ಮಾಡಲು ಹೇಳಲಾಗಿದೆ. ಹುಚ್ಚರಿಗೆ ಮತ್ತು ಮೂಕರಿಗೆ ಸಂಸ್ಕಾರಗಳನ್ನು ಮಾಡಬಾರದೆಂದು ಶಂಖಸ್ಮ  ತಿಯಲ್ಲಿ ಹೇಳಲಾಗಿದೆ.’

ಕೇವಲ ಗರ್ಭಾಧಾನ, ಪುಂಸವನ ಮತ್ತು ಸೀಮಂತೋನ್ನಯನ ಈ ಮೂರು ಸಂಸ್ಕಾರಗಳು ಸ್ತ್ರೀದೇಹಕ್ಕೆ ಸಂಬಂಧಿಸಿವೆ.

೪. ಆಚರಿಸುವ ವಿಧಾನ 

ಸಂಸ್ಕಾರ ಕಾರ್ಯದ ಎರಡು-ಮೂರು ದಿನಗಳ ಮೊದಲು ಮನೆಗೆ ಸುಣ್ಣ-ಬಣ್ಣ ಹಚ್ಚಬೇಕು. ಹಾಗೆಯೇ ಮನೆಯ ಪ್ರವೇಶದ್ವಾರದ ಮೇಲೆ ಗಣಪತಿಯ ಚಿತ್ರವನ್ನು ಹಾಕಬೇಕು. ಮನೆಯ ಮುಂದೆ ಬಯಲು ಜಾಗ, ಅಂಗಳ ಇತ್ಯಾದಿ ಇದ್ದಲ್ಲಿ ಮಂಟಪ ವನ್ನು ಕಟ್ಟಬೇಕು. ನೆಲವನ್ನು ಗುಡಿಸಿ-ಸಾರಿಸಿ ಸ್ವಸ್ತಿಕ, ಕಮಲ ಇತ್ಯಾದಿ ಶುಭಚಿಹ್ನೆಗಳ ರಂಗೋಲಿ ಯನ್ನು ಹಾಕಬೇಕು. ಸಂಸ್ಕಾರ ಕಾರ್ಯವನ್ನು ಆರಂಭಿಸುವ ಮೊದಲು ಸಂಸ್ಕಾರ್ಯ ವ್ಯಕ್ತಿ (ಯಾರಿಗೆ ಸಂಸ್ಕಾರವನ್ನು ಮಾಡಬೇಕಾಗಿದೆಯೋ ಆ ವ್ಯಕ್ತಿ ) ಹಾಗೂ ಇತರ ಸಂಬಂಧಿಕರು ಹೊಸಬಟ್ಟೆ ಮತ್ತು ಆಭರಣಗಳನ್ನು ಧರಿಸಬೇಕು. ಆಪ್ತರು ಸಂಸ್ಕಾರ್ಯ ವ್ಯಕ್ತಿಗೆ ಉಡುಗೊರೆಗಳನ್ನು ಕೊಡಬೇಕು.

ಬದಲಾಗುತ್ತಿರುವ ಕಾಲಕ್ಕನುಸಾರ ಇತ್ತೀಚೆಗೆ ‘ಉಪನಯನ’ ಮತ್ತು ‘ವಿವಾಹ’ ಸಂಸ್ಕಾರಗಳ ಮಹತ್ವವು ಕಡಿಮೆಯಾಗಿ, ಸಂಸ್ಕಾರದ ಬದಲು ಸಮಾರಂಭದ ಆಡಂಬರ ಮತ್ತು ಪ್ರತಿಷ್ಠೆಗಳ ಅತಿರೇಕವಾಗುತ್ತಿದೆ. ಆದುದರಿಂದ ಈ ಸಂಸ್ಕಾರಗಳ ನಿಜವಾದ ಲಾಭವು ಸಿಗುವುದಿಲ್ಲ. ಇಂತಹವರು ಆತ್ಮಚಿಂತನೆಯನ್ನು ಮಾಡಿ ‘ಇವು ಸಮಾರಂಭಗಳಲ್ಲ, ಸಂಸ್ಕಾರಗಳಾಗಿವೆ’ ಎಂಬುದನ್ನು ಅರಿತುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.

೫.  ಕೆಟ್ಟ ಶಕ್ತಿಗಳ ಪರಿಣಾಮಗಳನ್ನು ನಾಶಮಾಡುವ ಪದ್ಧತಿ

೧. ‘ಸಂಸ್ಕಾರದ ಕಾರ್ಯವನ್ನು ಮಾಡುವಾಗ ಅಸುರೀ ಶಕ್ತಿಗಳು ಸಂಸ್ಕಾರ್ಯ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದೆಂದು ಅವುಗಳನ್ನು ಸಂತೋಷಪಡಿಸಲು ಬಲಿಕೊಟ್ಟು ಅವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

೨. ಮುಂಡನ ಸಂಸ್ಕಾರದಲ್ಲಿ ಕತ್ತರಿಸಿದ ಕೂದಲುಗಳನ್ನು ಗೋಮಯದಲ್ಲಿ ಹಾಕಿ ಕೊಟ್ಟಿಗೆಯಲ್ಲಿ ಹೂಳುತ್ತಾರೆ ಅಥವಾ ನದಿಯಲ್ಲಿ ಎಸೆಯುತ್ತಾರೆ. ಹೀಗೆ ಮಾಡುವುದರಿಂದ ಭೂತಪಿಶಾಚಿಗಳು ಆ ಕೂದಲಿನ ಮಾಧ್ಯಮದಿಂದ ಆ ವ್ಯಕ್ತಿಗೆ ತೊಂದರೆ ಕೊಡಲಾರವು.

೩. ಭೂತಗಳನ್ನು ಓಡಿಸುವ ಒಂದು ಉಪಾಯವೆಂದರೆ ಅವುಗಳ ನಿಂದೆ ಮಾಡುವುದು.

೪. ‘ಯದತ್ರಸಂಸ್ಥಿತಂ ಭೂತಂ’ ಇತ್ಯಾದಿ ಮಂತ್ರಗಳಿಂದ ‘ಭೂತಗಳೇ, ನೀವು ಈ ಸ್ಥಾನದಿಂದ ಹೊರಟು ಹೋಗಿರಿ’ ಎಂದು ಬೆದರಿಸುತ್ತಾರೆ. ಬ್ರಹ್ಮಚಾರಿಗಳು ಮತ್ತು ಸ್ನಾತಕರು ಇದಕ್ಕಾಗಿಯೇ ಕೈಯಲ್ಲಿ ದಂಡವನ್ನು ಹಿಡಿಯುತ್ತಾರೆ.

೫. ಸಾಸಿವೆಗೆ ಭೂತಗಳು ಹೆದರುತ್ತವೆ ಎಂಬ ನಂಬಿಕೆಯಿದೆ. ಆದುದರಿಂದ ಸಂಸ್ಕಾರಸ್ಥಳದ ಸುತ್ತಲೂ ಸಾಸಿವೆಗಳನ್ನು ಚೆಲ್ಲುತ್ತಾರೆ.

೬. ಕೆಲವೊಮ್ಮೆ ಜನರು ತಮ್ಮ ಸ್ವಾರ್ಥಕ್ಕಾಗಿ ಸಂಸ್ಕಾರ್ಯ ವ್ಯಕ್ತಿಗೆ ತೊಂದರೆ ಕೊಡುವ ಭೂತಪ್ರೇತಗಳನ್ನು ಇತರರ ಮೇಲೆ ತಳ್ಳಿ ಬಿಡುತ್ತಾರೆ.

೭. ಭೂತಪ್ರೇತಗಳಿಗೆ ವಧುವಿನ ವೈವಾಹಿಕ ವಸ್ತ್ರಗಳ ಮಾಧ್ಯಮದಿಂದ ಅವಳ ಮೇಲೆ ದಾಳಿ ಮಾಡಲು ಸುಲಭವಾಗುತ್ತದೆ. ಯಾವುದೇ ಭೂತಪ್ರೇತಗಳು ಬ್ರಾಹ್ಮಣರಿಗೆ ತೊಂದರೆ ಕೊಡಲಾರವು. ಹಾಗಾಗಿ ಆ ವಸ್ತ್ರಗಳನ್ನು ಅವರಿಗೆ ದಾನ ಮಾಡುತ್ತಾರೆ ಅಥವಾ ಅವುಗಳನ್ನು ವೃಕ್ಷದ ಮೇಲೆ ಅಥವಾ ಕೊಟ್ಟಿಗೆಯಲ್ಲಿ ತೂಗು ಹಾಕುತ್ತಾರೆ.

೬. ಸಂಸ್ಕಾರ ಮತ್ತು ಆಧಾರವಿಧಿ 

ಎಲ್ಲ ಸಂಸ್ಕಾರಗಳ ಆರಂಭದಲ್ಲಿ ೧. ಶ್ರೀ ಗಣಪತಿಪೂಜೆ, ೨. ಪುಣ್ಯಾಹವಾಚನ, ೩. ಮಾತೃಕಾಪೂಜೆ, ೪. ನಾಂದೀಶ್ರಾದ್ಧ ಮತ್ತು ೫. ಆಚಾರ್ಯವರಣ ಈ ವಿಧಿಗಳನ್ನು ಮಾಡುತ್ತಾರೆ. ಅನಂತರ ಆಯಾ ವಿಶಿಷ್ಟವಾದ ಸಂಸ್ಕಾರವನ್ನು ಮಾಡುತ್ತಾರೆ.

(ಆಧಾರ ವಿಧಿಗಳ ಬಗ್ಗೆ ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನದ ಗ್ರಂಥ ‘ಹದಿನಾರು ಸಂಸ್ಕಾರಗಳು’.)

೭. ಸಂಕಲ್ಪದ ಮಹತ್ವ

 ಪ್ರತಿಯೊಂದು ವಿಧಿಯ ಪ್ರಾರಂಭದಲ್ಲಿ ಸಂಕಲ್ಪವು ಇದ್ದೇ ಇರುತ್ತದೆ. ಏಕೆಂದರೆ ವಿಧಿಯು ಪರಿಣಾಮಕಾರಿಯಾಗಬೇಕಾದರೆ ಅದರಲ್ಲಿ ಸಂಕಲ್ಪದ ಪಾಲು ಶೇ. ೭೦ ರಷ್ಟು ಮತ್ತು ಪ್ರತ್ಯಕ್ಷ ಕೃತಿಯ ಪಾಲು ಕೇವಲ ಶೇ. ೩೦ ರಷ್ಟು ಇರುತ್ತದೆ. ಹೀಗಿದ್ದರೂ ಪ್ರತ್ಯಕ್ಷ ಕೃತಿಯು ಮಹತ್ವದ್ದೇ ಆಗಿದೆ. ಏಕೆಂದರೆ ಕೇವಲ ಸಂಕಲ್ಪದಿಂದ ಆನಂದವು ಸಿಗುವುದಿಲ್ಲ. ಆನಂದವು ಕೃತಿಯಿಂದಲೇ ಸಿಗುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)

Leave a Comment