ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವ ಅವಶ್ಯಕತೆ 

೧. ಮಾನವನಿಂದ ಆಗುವ ಎಲ್ಲ ಕೃತಿಗಳು ಅವನ ಮನಸ್ಸಿನಿಂದಾಗಿ ಘಟಿಸುತ್ತವೆ. ಶರೀರದಿಂದಾಗುವ ಪ್ರತಿಯೊಂದು ಕೃತಿಗೂ ಮನಸ್ಸೇ ಕಾರಣವಾಗಿರುತ್ತದೆ. ಮನಸ್ಸು ಉತ್ತಮವಾಗಿದ್ದರೆ, ಅಂದರೆ ಮನಸ್ಸಿನಲ್ಲಿ ಸ್ವಭಾವದೋಷ ಮತ್ತು ಅಹಂ ಇಲ್ಲದಿದ್ದರೆ ಶರೀರದಿಂದ ಯೋಗ್ಯ ಕೃತಿಯಾಗುತ್ತದೆ ಮತ್ತು ಸ್ವಭಾವದೋಷ ಹಾಗೂ ಅಹಂ ಇದ್ದರೆ ಶರೀರದಿಂದ ಅಯೋಗ್ಯ ಕೃತಿಯಾಗುತ್ತದೆ.

೨. ಯಾವುದೇ ಯೋಗಮಾರ್ಗದಿಂದ ಸಾಧನೆ ಮಾಡಿದರೂ ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಸ್ವಲ್ಪ ಪ್ರಮಾಣದಲ್ಲಾದರೂ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ, ಉದಾ. ಧ್ಯಾನಯೋಗದಿಂದ ಸಾಧನೆ ಮಾಡುವವನು ಧ್ಯಾನ ತಗಲಿಸಲು ಎಷ್ಟು ಪ್ರಯತ್ನಿಸಿದರೂ ಅವನಿಗೆ ಈ ದೋಷಗಳಿಂದಾಗಿ ವರ್ಷಗಟ್ಟಲೆ ಸಾಧ್ಯವಾಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯಾದಾಗ ಸಾಧನೆಯಲ್ಲಿ ನಿಜವಾದ ಅರ್ಥದಲ್ಲಿ ಪ್ರಗತಿಯಾಗುತ್ತದೆ.

೧. ಸ್ವಭಾವದೋಷ ನಿರ್ಮೂಲನೆ

ನಮ್ಮೆಲ್ಲರಲ್ಲಿ ಸಿಟ್ಟು, ಸಿಡಿಮಿಡಿಗೊಳ್ಳುವುದು, ಆಲಸ್ಯ, ಮರೆವು ಇತ್ಯಾದಿ ಸ್ವಭಾವ ದೋಷಗಳು ಹೆಚ್ಚು ಕಡಿಮೆ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ನಮ್ಮ ಮತ್ತು ಇತರರ ಸಾಧನೆಯು ಸ್ವಭಾವದೋಷಗಳಿಂದ ಹೇಗೆ ನಷ್ಟವಾಗುತ್ತದೆ ಎಂಬುದನ್ನು ಒಂದು ಉದಾಹರಣೆಯಿಂದ ತಿಳಿದುಕೊಳ್ಳೋಣ. ಒಬ್ಬನ ಸ್ವಭಾವವು ಕೋಪಿಷ್ಠವಾಗಿದೆ ಮತ್ತು ಚಿಕ್ಕಚಿಕ್ಕ ವಿಷಯಗಳಿಗೆ ಅವನು ಇತರರ ಮೇಲೆ ಕೋಪಗೊಳ್ಳುತ್ತಾನೆ ಎಂದು ತಿಳಿದುಕೊಳ್ಳೋಣ. ಇದರಿಂದ ಅವನ ಮನಃಸ್ಥಿತಿಯು ಹಾಳಾಗಿ ಅವನಿಗೆ ಸೇವೆ ಮಾಡುವಾಗ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಆಗುವುದಿಲ್ಲ ಮತ್ತು ಇದರಿಂದಾಗಿ ಅವನಿಂದ ತಪ್ಪುಗಳಾಗಿ ಅವನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಹಾಗೆಯೇ ಕೋಪಿಸಿಕೊಳ್ಳುವುದರಿಂದ ಅವನಿಗೆ ಸಾಧನೆಯಿಂದ ಸಿಗುವ ಸಮಾಧಾನವು ಹೆಚ್ಚು ಕಾಲ ಉಳಿಯುವುದಿಲ್ಲ. ಯಾವಾಗ ಇಂತಹ ವ್ಯಕ್ತಿಯು ಇತರರೊಂದಿಗೆ  ಕೋಪದಿಂದ ಮಾತನಾಡುತ್ತಾನೆಯೋ, ಆಗ ಇತರರಿಗೆ ಕೆಟ್ಟದೆನಿಸುತ್ತದೆ ಮತ್ತು ಅವರು ದುಃಖಿತರಾಗುತ್ತಾರೆ. ಇದರ ಪರಿಣಾಮದಿಂದ ಇತರರ ಮನಃಸ್ಥಿತಿಯೂ ಹಾಳಾಗುತ್ತದೆ. ಹಾಗೆಯೇ ಆತನೊಂದಿಗೆ ಮಾತನಾಡುವಾಗ ಇತರರಿಗೆ ಒಂದು ರೀತಿಯ ಒತ್ತಡವೆನಿಸುತ್ತದೆ. ಅಂದರೆ ಇತರರಿಗೆ ಅವನೊಂದಿಗೆ ಒಳ್ಳೆಯ ರೀತಿಯಿಂದ ಮಾತನಾಡಲು ಆಗುವುದಿಲ್ಲ. ಇದರ ಒಟ್ಟು ಪರಿಣಾಮವು ಸಮಷ್ಟಿಯ ಕಾರ್ಯದ ಮೇಲಾಗುತ್ತದೆ.

ಸ್ವಭಾವದೋಷದ ಇನ್ನೊಂದು ಹಾನಿಯೆಂದರೆ ಸ್ವಭಾವದೋಷಗಳ ಲಾಭವನ್ನು ಕೆಟ್ಟ ಶಕ್ತಿಗಳು ಪಡೆಯುತ್ತವೆ. ಆದುದರಿಂದ ಪ್ರತಿಯೊಬ್ಬರೂ ಸ್ವಭಾವದೋಷಗಳನ್ನು ದೂರಮಾಡಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಸ್ವಭಾವದೋಷ ನಿರ್ಮೂಲನೆಗಾಗಿ ಮಾಡಬೇಕಾದ ಕೆಲವು ಪ್ರಯತ್ನಗಳನ್ನು ಮುಂದೆ ಕೊಡಲಾಗಿದೆ.

ಅ. ಸ್ವಭಾವದೋಷಗಳನ್ನು ದೂರಮಾಡಲು ನಾವೇ ನಮ್ಮ ಮನಸ್ಸಿಗೆ ‘ಸ್ವಯಂಸೂಚನೆ’ ಗಳನ್ನು ಕೊಡಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಆ. ಸ್ವಭಾವದೋಷಗಳನ್ನು ದೂರಗೊಳಿಸಲು ನಾವು ನಮ್ಮ ಸಹಸಾಧಕರ, ಕುಟುಂಬದವರ, ಮಿತ್ರರ ಮುಂತಾದವರ ಸಹಾಯವನ್ನು ತೆಗೆದುಕೊಳ್ಳಬಹುದು. ನಾವು ಅವರಿಗೆ ನಮ್ಮ ಸ್ವಭಾವದೋಷಗಳನ್ನು ಹೇಳಲು ಮತ್ತು ನಮ್ಮಲ್ಲಿ ಯಾವುದಾದರೊಂದು ಸ್ವಭಾವ ದೋಷವು ಉಮ್ಮಳಿಸಿ ಬಂದರೆ ಕೂಡಲೇ ನೆನಪು ಮಾಡಿಕೊಡಲು ಹೇಳಬಹುದು.
ಇ. ವಾರದಲ್ಲಿ ಒಂದೆರಡು ದಿನ ಎಲ್ಲ ಸಾಧಕರು ಸೇರಿ ಗುಂಪುಚರ್ಚೆಯನ್ನು ಮಾಡಬಹುದು. ಗುಂಪುಚರ್ಚೆಯಿಂದ ಸ್ವಭಾವದೋಷ ನಿರ್ಮೂಲನಕ್ಕಾಗಿ ಇತರರು ಹೇಗೆ ಪ್ರಯತ್ನಿಸುತ್ತಾರೆ ಎಂಬುದು ತಿಳಿಯುತ್ತದೆ. ಯಾವುದಾದರೊಂದು ಪ್ರಸಂಗದಲ್ಲಿ ಯಾವುದಾದರೊಂದು ದೋಷವು ಉಮ್ಮಳಿಸಿದರೆ ಅದಕ್ಕೆ ಸ್ವಯಂಸೂಚನೆಯನ್ನು ಹೇಗೆ ಕೊಡಬೇಕು ಎಂಬುದರ ಅಧ್ಯಯನವೂ ಆಗುತ್ತದೆ. ನಾವು ಸಾಧನೆಯನ್ನು ಮಾಡುವಾಗ ಸಾಧನೆಯಲ್ಲಿನ ಮುಂದುಮುಂದಿನ ಹಂತಕ್ಕೆ ಹೋಗುತ್ತಿದ್ದರೂ ನಮ್ಮಲ್ಲಿನ ಸ್ವಭಾವದೋಷಗಳು ಸಂಪೂರ್ಣವಾಗಿ ದೂರವಾಗುವವರೆಗೆ ಅವುಗಳ ನಿರ್ಮೂಲನೆಗಾಗಿ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು.

೨.  ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವುದು

ಸಾಮಾನ್ಯ ವ್ಯಕ್ತಿಗಳಲ್ಲಿ ಮಾತ್ರವಲ್ಲದೇ ಸಾಧಕರಲ್ಲಿಯೂ ಒಂದಲ್ಲ ಒಂದು ರೀತಿಯ ಅಹಂಭಾವವು ಇದ್ದೇ ಇರುತ್ತದೆ. ಉದಾ. ಕೆಲವರಿಗೆ ‘ನಾನು ಇಷ್ಟೊಂದು ಧರ್ಮಗ್ರಂಥಗಳ ಅಧ್ಯಯನ ಮಾಡಿದ್ದೇನೆ’ ಎಂಬ ಅಹಂಭಾವವಿರುತ್ತದೆ. ಇನ್ನು ಕೆಲವರಿಗೆ ‘ನನಗೆ ಒಳ್ಳೆಯ ರೀತಿಯಲ್ಲಿ ಪ್ರವಚನ ನೀಡಲು ಬರುತ್ತದೆ’ ಎಂಬ ಅಹಂಭಾವವಿರುತ್ತದೆ. ಈಶ್ವರನ ಅಹಂ ಭಾವವು ಶೂನ್ಯವಾಗಿರುತ್ತದೆ. ನಮ್ಮಲ್ಲಿ ಅಹಂಭಾವದ ಸ್ವಲ್ಪ ಅಂಶವಿದ್ದರೂ ಕೂಡಾ ನಾವು ಈಶ್ವರನೊಂದಿಗೆ ಯಾವಾಗಲೂ ಏಕರೂಪವಾಗಲು ಸಾಧ್ಯವಿಲ್ಲ. ಆದುದರಿಂದ ಸಾಧನೆಯನ್ನು ಮಾಡುವಾಗ ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಇಂತಹ ಪ್ರಯತ್ನಗಳನ್ನು ಹೇಗೆ ಮಾಡಬೇಕು ಎಂಬುದರ ಸ್ವಲ್ಪ ಮಾಹಿತಿಯನ್ನು  ಮುಂದೆ ನೀಡಲಾಗಿದೆ.

ಅ. ಈಶ್ವರನಲ್ಲಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು.
೧. ಹೇ ಗುರುದೇವಾ / ಭಗವಂತಾ, ನನ್ನ ಅಹಂಭಾವವು ಯಾವುದರಿಂದ ಹೆಚ್ಚಾಗುತ್ತಿದೆ ಎನ್ನುವುದರ ಬಗ್ಗೆ ನನಗೆ ಅರಿವನ್ನು ಮಾಡಿಕೊಡು.
೨. ಹೇ ಗುರುದೇವಾ / ಭಗವಂತಾ, ನನ್ನ ಅಹಂಭಾವವು ಕಡಿಮೆಯಾಗಲು ಸಹಾಯವಾಗುವಂತಹ ವ್ಯಕ್ತಿಗಳ ಸಂಪರ್ಕದಲ್ಲಿಯೇ ನನ್ನನ್ನು ಇರಿಸು ಮತ್ತು ನನ್ನ ಜೀವನದಲ್ಲಿ ಇಂತಹ ಪ್ರಸಂಗಗಳನ್ನೇ ಘಟಿಸು.
ಆ. ಪರಮಾರ್ಥದಂತೆಯೇ ಪ್ರಪಂಚದಲ್ಲಿಯೂ ಪ್ರತಿಯೊಂದು ವಿಷಯವು ಈಶ್ವರನಿಂದಾಗಿಯೇ ನಡೆಯುತ್ತದೆ ಎಂಬ ಭಾವವನ್ನಿಟ್ಟುಕೊಳ್ಳಬೇಕು. ಉದಾ. ‘ನಾನು ಶಿಕ್ಷಣವನ್ನು  ಪಡೆದೆ’ ಎಂದು ಹೇಳದೇ ‘ಈಶ್ವರನು ನನಗೆ ಕಲಿಸಿದನು’, ‘ನಾನು ಮದುವೆ ಮಾಡಿಕೊಂಡೆ’ ಎನ್ನುವುದಕ್ಕಿಂತ ‘ಈಶ್ವರನಿಂದಾಗಿ ನನ್ನ ವಿವಾಹ ಜರುಗಿತು’ ಎಂಬ ಭಾವವನ್ನಿಟ್ಟುಕೊಳ್ಳಬೇಕು.
ಇ. ಸೇವೆ ಅಥವಾ ಇನ್ನೂ ಯಾವುದಾದರೂ ಕೃತಿಯನ್ನು ಮಾಡುವಾಗ ‘ನಾನು ಸೇವಕನಾಗಿದ್ದೇನೆ’ ಎಂಬ ಭಾವವನ್ನಿಟ್ಟುಕೊಳ್ಳಬೇಕು.
ಈ. ಶಾರೀರಿಕ ಸೇವೆ (ಉದಾ. ಪಾತ್ರೆ ತಿಕ್ಕುವುದು, ಸ್ವಚ್ಛತೆಯನ್ನು ಮಾಡುವುದು ಮುಂತಾದವುಗಳನ್ನು) ಮಾಡುವುದರಿಂದ ಅಹಂಭಾವವು ಬೇಗನೇ ಕಡಿಮೆಯಾಗುತ್ತದೆ.
ಉ. ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ಇತರರ ವಿಚಾರವನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಉದಾ. ಊಟಕ್ಕೆ ಕುಳಿತುಕೊಳ್ಳುವಾಗ ಕೇವಲ ತಮಗಾಗಿ ಮಾತ್ರ ನೀರನ್ನು ತಂದು ಇಟ್ಟುಕೊಳ್ಳದೇ ಇತರರಿಗೂ ನೀರನ್ನು ತಂದುಕೊಡಬೇಕು.

ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಹತ್ವದ್ದಾಗಿದೆ

ಹಿಂದಿನ ಯುಗಗಳಲ್ಲಿ ಇದರ ಪ್ರಮಾಣ ಕಡಿಮೆಯಿರುತ್ತಿತ್ತು. ಆದ್ದರಿಂದ ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಆವಶ್ಯಕತೆಯಿರಲಿಲ್ಲ. ಆಗ ವಿವಿಧ ಯೋಗಮಾರ್ಗಗಳಿಂದ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು. ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಹೆಚ್ಚಿರುವುದರಿಂದ ಅವುಗಳನ್ನು ಮೊದಲು ನಿರ್ಮೂಲನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ವ್ಯವಸ್ಥಿತವಾಗಿ ಸಾಧನೆಯಾಗುವುದಿಲ್ಲ.

ಯುಗಗಳಿಗನುಸಾರ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಮತ್ತು ಅವನ ಸ್ವಭಾವದೋಷ ಹಾಗೂ ಅಹಂಗಳ ಪ್ರಮಾಣ

ಯುಗ ಆಧ್ಯಾತ್ಮಿಕ ಮಟ್ಟ (ಶೇ.) ಸ್ವಭಾವದೋಷ (ಶೇ.) ಅಹಂ (ಶೇ.)
೧. ಸತ್ಯ ೯೦ ೧೦
೨. ತ್ರೇತಾ ೭೦ ೨೦ ೧೫
೩. ದ್ವಾಪರ ೫೦ ೩೦ ೨೦
೪. ಕಲಿ ೨೦ ೫೦ ೩೦

ಮೇಲಿನ ಕೋಷ್ಟಕದಿಂದ ಸದ್ಯದ ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯು ಎಷ್ಟು ಮಹತ್ವದ್ದಾಗಿದೆ ಎಂಬುದು ಗಮನಕ್ಕೆ ಬರುವುದು.
– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೭.೧೨.೨೦೧೫)

Leave a Comment