ದಣಿವನ್ನು ದೂರಗೊಳಿಸುವ ಸುಲಭ ಉಪಾಯ : ಉಪ್ಪು ನೀರಿನಲ್ಲಿ ಕಾಲಿಟ್ಟು ನಾಮಜಪ ಮಾಡುವುದು

ಆಧ್ಯಾತ್ಮಿಕ ಉಪಾಯಗಳನ್ನು ಮಾಡುವ ಅವಶ್ಯಕತೆ

ನಿಯಮಿತವಾಗಿ ಆಧ್ಯಾತ್ಮಿಕ ಸಾಧನೆಯನ್ನು (ನಾಮಜಪ ಇತ್ಯಾದಿ) ಮಾಡುತ್ತಿದ್ದಲ್ಲಿ ಆಧ್ಯಾತ್ಮಿಕ (ಕೆಟ್ಟ ಶಕ್ತಿಗಳ) ತೊಂದರೆಗಳಿಂದ ನಮಗೆ ಆಗಾಗಲೇ ರಕ್ಷಣೆಯಾಗುತ್ತದೆ. ಆದರೆ ಹಲವಾರು ಜನರು ಈಗಿನ ಗಡಿಬಿಡಿಯ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಿಲ್ಲ ಅಥವಾ ಅದರ ಮೇಲೆ ವಿಶ್ವಾಸವನ್ನೂ ಇಡುವುದಿಲ್ಲ. ಅಧ್ಯಾತ್ಮದ ಮೇಲೆ ವಿಶ್ವಾಸವಿರುವವರಿಗೆ ಈ ರೀತಿಯ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳಿಗೆ ದೃಷ್ಟಿ ತೆಗೆಯುವುದು, ನಿವಾಳಿಸುವುದು, ಧೂಪ ಹಾಕುವುದು, ಮಾರುತಿಗೆ ಎಳ್ಳು-ಉದ್ದು ಅರ್ಪಿಸುವುದು ಮುಂತಾದ ಅನೇಕ ಉಪಾಯಗಳಿವೆ. ಅದರಲ್ಲಿ ಒಂದು ಮಹತ್ವದ ಉಪಾಯವೆಂದರೆ ಉಪ್ಪು ನೀರಿನಲ್ಲಿ ಕಾಲುಗಳನ್ನಿಟ್ಟು ೧೫ ನಿಮಿಷ ಉಪಾಸ್ಯದೇವರ ನಾಮಜಪ ಮಾಡುವುದು. ಅನೇಕರು ಈ ಉಪಾಯವನ್ನು ಕೇಳಿರುವುದಿಲ್ಲ. ಆದುದರಿಂದ ಇದನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ವಿವರವಾಗಿ ಕೊಡುತ್ತಿದ್ದೇವೆ.

ಕಲ್ಲುಪ್ಪಿನ ನೀರಿನಲ್ಲಿ ಎರಡೂ ಕಾಲುಗಳನ್ನಿಟ್ಟು ಕುಳಿತುಕೊಳ್ಳುವುದು

೧. ಕೃತಿ

ಅ. ಒಂದು ಬಾಲ್ದಿಯಲ್ಲಿ ಅಥವಾ ಬಾಲ್ದಿಯಂತಹ ಪಾತ್ರೆಯಲ್ಲಿ, ನಮ್ಮ ಕಾಲುಗಳ ಗಂಟುಗಳ ತನಕದ ಭಾಗವು ಮುಳುಗುವಷ್ಟು ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಳ್ಳಬೇಕು.
ಆ. ಆ ನೀರಿನಲ್ಲಿ ಚಹಾ ಚಮಚದಿಂದ ೨ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪು ಹಾಕಬೇಕು.
ಇ. ಕಲ್ಲುಪ್ಪಿನ ನೀರಿನಲ್ಲಿ ಕಾಲುಗಳನ್ನು ಮುಳುಗಿಸುವ ಮೊದಲು ಉಪಾಸ್ಯ ದೇವತೆಯಲ್ಲಿ, ‘ನನ್ನ ಶರೀರದಲ್ಲಿನ ತ್ರಾಸದಾಯಕ ಶಕ್ತಿಯು ಈ ಕಲ್ಲುಪ್ಪಿನ ನೀರಿನಲ್ಲಿ ಸೆಳೆಯಲ್ಪಡಲಿ’ ಎಂದು ಪ್ರಾರ್ಥನೆ ಮಾಡಬೇಕು.
ಈ. ಉಪ್ಪಿನ ನೀರಿನಲ್ಲಿ ಕಾಲುಗಳನ್ನು ಮುಳುಗಿಸಿಟ್ಟ ನಂತರ ಕಾಲುಗಳ ನಡುವೆ ಸಾಧಾರಣ ೨-೩ ಸೆಂ.ಮೀ. ನಷ್ಟು ಅಂತರವಿರಿಸಬೇಕು.
ಉ. ಉಪಾಯ ಮಾಡುವಾಗ ನೇರವಾಗಿ ಕುಳಿತುಕೊಳ್ಳಬೇಕು ಮತ್ತು ಉಪಾಸ್ಯದೇವತೆಯ ನಾಮಜಪ ಮಾಡಬೇಕು.
ಊ. ಉಪಾಯ ಮಾಡುವಾಗ ಮಧ್ಯದಲ್ಲಿ ಏಳಬಾರದು. ಕಾರಣಾಂತರದಿಂದ ಏಳಬೇಕಾಗಿ ಬಂದಲ್ಲಿ ವಾಪಾಸು ಬಂದ ನಂತರ ಉಪ್ಪಿನ ನೀರನ್ನು ಬದಲಾಯಿಸದೇ ಅದನ್ನೇ ಉಪಯೋಗಿಸಬೇಕು.
ಎ. ೧೫ ನಿಮಿಷಗಳ ಕಾಲ ಈ ಉಪಾಯವನ್ನು ಮಾಡಬೇಕು. ಅನಂತರ ನೀರಿನಿಂದ ಕಾಲುಗಳನ್ನು ಹೊರತೆಗೆದು ಹತ್ತಿಯ ಬಟ್ಟೆಯಿಂದ ಒರೆಸಿಕೊಳ್ಳಬೇಕು.
ಏ. ಉಪಾಸ್ಯದೇವತೆಯ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಹಾಗೆಯೇ ಸ್ವಂತದ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಲು ಪ್ರಾರ್ಥನೆ ಮಾಡಿ ೨-೩ ನಿಮಿಷ ನಾಮಜಪ ಮಾಡಬೇಕು.
ಒ. ‘ಈ ನೀರಿನಲ್ಲಿರುವ ಎಲ್ಲ ತ್ರಾಸದಾಯಕ ಶಕ್ತಿ ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಿ ಉಪಾಯದ ನೀರನ್ನು ಶೌಚಾಲಯದಲ್ಲಿ ಎಸೆಯಬೇಕು.
ಔ. ಉಪಾಯಕ್ಕಾಗಿ ಉಪಯೋಗಿಸಿದ ಬಾಲ್ದಿಯನ್ನು ವಿಭೂತಿ ಹಾಕಿ ನೀರಿನಿಂದ ಸ್ವಚ್ಛವಾಗಿ ತೊಳೆಯಬೇಕು.
ಅಂ. ಕೊನೆಗೆ ಒಳ್ಳೆಯ ನೀರಿನಿಂದ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು.

ಟಿಪ್ಪಣಿ
ಉಪಾಸ್ಯದೇವತೆ ಎಂದರೆ ನಮ್ಮ ಕುಲದೇವಿ/ಕುಲದೇವರು ಅಥವಾ ಇಷ್ಟದೇವರು ಅಥವಾ ಹಿಂದಿನಿಂದ ಉಪಾಸನೆ ಮಾಡಿಕೊಂಡ ಬಂದ ದೇವರು, ಹೀಗೆ ಯಾವುದಾದರೊಂದು ದೇವರು.
ಈ ಉಪಾಯವನ್ನು ದಿನಕ್ಕೆರಡು ಸಲ ಮಾಡಬೇಕು. ತೊಂದರೆ ಜಾಸ್ತಿ ಇದ್ದು ಉಪಾಯ ಮಾಡಿದ ನಂತರ ಅದರ ಪರಿಣಾಮ ಪುನಃ ಕಡಿಮೆಯಾದಲ್ಲಿ 3-4 ಗಂಟೆಗಳಿಗೊಮ್ಮೆ ಮಾಡಬಹುದು.

೨. ಪ್ರಯೋಗಗಳ ಮೂಲಕ ದೃಢಪಟ್ಟಿರುವ ಕಲ್ಲುಪ್ಪಿನ ನೀರಿನ ಉಪಾಯದ ಮಹತ್ವ

ಅ. ತೇಲುವ ವಸ್ತುವಿನ ಪ್ರಯೋಗ : ಚೈತನ್ಯದ ಲಹರಿಗಳು ಯಾವಾಗಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತವೆ ಮತ್ತು ರಜ-ತಮ ಲಹರಿಗಳು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತವೆ ಎಂದು ನಾನು ಓದಿದ್ದೆ. ಅದನ್ನು ನೋಡಲು ೨೫.೯.೨೦೦೬ ರಂದು ನಾನು ಆಧ್ಯಾತ್ಮಿಕ ಉಪಾಯಕ್ಕಾಗಿ ಕಲ್ಲುಪ್ಪಿನ ನೀರಿನಲ್ಲಿ ಕಾಲುಗಳನ್ನಿಡುವ ಮೊದಲು ಅದರಲ್ಲಿ ಒಂದು ತೇಲುವ ವಸ್ತುವನ್ನು ಇಟ್ಟೆ. ಆಗ ಆ ವಸ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗತೊಡಗಿತು. ಅನಂತರ ಕಲ್ಲುಪ್ಪಿನ ನೀರಿನಿಂದ ಉಪಾಯ ಮಾಡಿದ ನಂತರ ಆ ನೀರಿನಲ್ಲಿ ನಾನು ಅದೇ ವಸ್ತುವನ್ನು ಮತ್ತೊಮ್ಮೆ ಹಾಕಿದೆ. ಆಗ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗತೊಡಗಿತು. ಈ ಪ್ರಯೋಗವನ್ನು ನಾನು ಎರಡು ಬಾರಿ ಮಾಡಿದೆ. ಎರಡೂ ಬಾರಿ ಹೀಗೆಯೇ ಆಯಿತು.
– ಶ್ರೀ.ಸಂಜೋಗ ಸಾಳಸಕರ, ಕುಡಾಳ, ಮಹಾರಾಷ್ಟ್ರ.

ಆ. ಲೋಲಕದ ಪ್ರಯೋಗ : ಅಂತರರಾಷ್ಟ್ರೀಯ ಮಾನ್ಯತೆಯನ್ನು ಪಡೆದ ‘ಲೋಲಕ ಚಿಕಿತ್ಸಾ ಪದ್ಧತಿ’ಯ ಮೂಲಕ ವಿವಿಧ ವಸ್ತು, ವಾತಾವರಣ, ವ್ಯಕ್ತಿ ಮುಂತಾದವುಗಳಲ್ಲಿರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯ ಅಸ್ತಿತ್ವವನ್ನು ಗುರುತಿಸಬಹುದು. ಸಕಾರಾತ್ಮಕ ಶಕ್ತಿಯಿದ್ದಲ್ಲಿ ಲೋಲಕವು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗುತ್ತದೆ, ನಕಾರಾತ್ಮಕ ಶಕ್ತಿಯಿದ್ದಲ್ಲಿ ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ.

೧. ಆಧ್ಯಾತ್ಮಿಕ ಉಪಾಯವನ್ನು ಪ್ರಾರಂಭಿಸುವ ಮೊದಲು ಬಾಲ್ದಿಯಲ್ಲಿರುವ ಕಲ್ಲುಪ್ಪಿನ ನೀರಿನ ಮೇಲೆ ಲೋಲಕವನ್ನು ಹಿಡಿದಾಗ ಅದು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗಿತು.

೨.ಕಲ್ಲುಪ್ಪಿನ ನೀರಿನಲ್ಲಿ ಕಾಲು ಮುಳುಗಿಸಿಡುವ ಉಪಾಯ ಮಾಡಿದ ನಂತರ ಆ ನೀರಿನ ಮೇಲೆ ಲೋಲಕವನ್ನು ಹಿಡಿದಾಗ ಅದು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ತಿರುಗಿತು.
– ಶ್ರೀ. ಪ್ರಕಾಶ ಕರಂದೀಕರ, ಮಾಲಾಡ, ಮುಂಬೈ.

ಇದನ್ನು ತೊಂದರೆಯಾಗುತ್ತಿರುವವರು ಅಥವಾ ತೊಂದರೆಯಾಗಬಾರದೆಂದು ಅನಿಸುವವರು ಖಂಡಿತ ಮಾಡಿ ನೋಡಿ. ಇಂತಹ ಆಧ್ಯಾತ್ಮಿಕ ಉಪಾಯಗಳ ಬಗ್ಗೆ ನಂಬಿಕೆ ಇದ್ದರೂ ಇಲ್ಲದಿದ್ದರೂ (ನಾಸ್ತಿಕರೂ) ಕೇವಲ ಒಂದು ಸಲ ಮಾಡಿದರೂ ಬಹಳ ಪರಿಣಾಮ ಕಾಣಿಸುತ್ತದೆ. ನೀವೇ ಅನುಭವಿಸಿ ನೋಡಿ…

ಈ ಉಪಾಯವನ್ನು ಮಾಡಿದಾಗ ಸೂಕ್ಷ್ಮಸ್ತರದಲ್ಲಿ ಯಾವ ರೀತಿ ಪರಿಣಾಮವಾಗುತ್ತದೆ ಎಂದು ಓದಿ

ಅ. ಕಾರ್ಯ / ಉಪಯುಕ್ತತೆ

ಕೇವಲ ಕಲ್ಲುಪ್ಪಿನಿಂದ ಉಪಾಯವಾಗುವುದಿಲ್ಲ, ಕಲ್ಲುಪ್ಪು ನೀರಿನ ಸಂಪರ್ಕಕ್ಕೆ ಬರುವುದರಿಂದ ಉಪಾಯವಾಗುತ್ತದೆ. ಕಲ್ಲುಪ್ಪಿನಲ್ಲಿ ರಜ-ತಮಾತ್ಮಕ ಲಹರಿಗಳನ್ನು ಸೆಳೆದುಕೊಂಡು ಅವುಗಳನ್ನು ಘನೀಕೃತಗೊಳಿಸುವ ಕ್ಷಮತೆಯಿರುತ್ತದೆ. ಕಲ್ಲುಪ್ಪಿನ ಸುತ್ತಲಿರುವ ಆಪತತ್ತ್ವಾತ್ಮಕ ಸೂಕ್ಷ್ಮ ಕೋಶವು ಬಾಹ್ಯ ವಾತಾವರಣದಲ್ಲಿನ ರಜ-ತಮವನ್ನು ಸೆಳೆದುಕೊಳ್ಳುವಲ್ಲಿ ಅಗ್ರೇಸರವಾಗಿದೆ. ಉಪ್ಪುನ್ನು ನೀರಿನಲ್ಲಿ ಹಾಕುವುದರಿಂದ ಉಪ್ಪಿನ ಸಂಪರ್ಕದಿಂದ ದೇಹದಿಂದ ಸೆಳೆದುಕೊಂಡ ರಜ-ತಮಾತ್ಮಕ ಲಹರಿಗಳು ಕೂಡಲೇ ನೀರಿನಲ್ಲಿ ವಿಸರ್ಜನೆಯಾಗುತ್ತವೆ ಮತ್ತು ರಜ-ತಮಾತ್ಮಕ ಲಹರಿಗಳ ಕಾರ್ಯ ಮಾಡುವ ತೀವ್ರತೆಯು ಕೂಡಲೇ ಕಡಿಮೆಯಾಗುತ್ತದೆ. ನೀರಿನ ಸಂಪರ್ಕದಿಂದ ಉಪ್ಪಿನಲ್ಲಿರುವ ರಜ-ತಮವು ಕೂಡಲೇ ನೀರಿನಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಈ ಪ್ರಕ್ರಿಯೆಯಿಂದ ದೇಹದ ಜಡತ್ವವೂ ಕೂಡಲೇ ಕಡಿಮೆಯಾಗುತ್ತದೆ.

ನೀರು ಸರ್ವಸಮಾವೇಶಕವಾಗಿದೆ, ಅಂದರೆ ಅದು ಪುಣ್ಯದಾಯಕ ಫಲವನ್ನು ಎಲ್ಲೆಡೆ ತಲುಪಿಸುತ್ತದೆ, ಹಾಗೆಯೇ ಪಾಪವನ್ನು ವಿಸರ್ಜಿಸಿಕೊಳ್ಳುತ್ತದೆ; ಆದುದರಿಂದ ಉಪ್ಪಿನ ಗುಣಧರ್ಮವನ್ನು ಉಪಯೋಗಿಸಿಕೊಂಡು ದೇಹದಿಂದ ಸೆಳೆದುಕೊಂಡ ರಜ-ತಮವನ್ನು ಕೂಡಲೇ ನೀರು ತನ್ನಲ್ಲಿ ವಿಸರ್ಜಿಸಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ನೀರು ಆಧ್ಯಾತ್ಮಿಕ ಉಪಾಯಕ್ಕೆ ಉಪಯುಕ್ತವಾಗಿದೆ. ಇದರಲ್ಲಿ ಶೇ.೩೦ರಷ್ಟು ಪ್ರಮಾಣದಲ್ಲಿ ಕಲ್ಲುಪ್ಪು ರಜ-ತಮವನ್ನು ಸೆಳೆದುಕೊಳ್ಳುವ ಕಾರ್ಯವನ್ನು ಮಾಡುತ್ತದೆ ಮತ್ತು ಶೇ.೭೦ರಷ್ಟು ನೀರು ಈ ಸ್ಪಂದನಗಳನ್ನು ತನ್ನಲ್ಲಿ ವಿಸರ್ಜಿಸಿಕೊಳ್ಳುವ ಕಾರ್ಯವನ್ನು ಮಾಡಿ ವ್ಯಕ್ತಿಯನ್ನು ಪೃಥ್ವಿತತ್ತ್ವಜನ್ಯ ತ್ರಾಸದಾಯಕ ಜಡತ್ವದಿಂದ ಮುಕ್ತಗೊಳಿಸುತ್ತದೆ.
– ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೧೨, ಬೆಳಗ್ಗೆ ೮.೩೨

(ಆಧಾರ : ಸನಾತನ ಸಂಸ್ಥೆಯ ಗ್ರಂಥ ” “ಜೀವನದಲ್ಲಿ ಅಸುರೀ ಶಕ್ತಿಗಳಿಂದಾಗುತ್ತಿರುವ ತೊಂದರೆಗಳಿಂದ ರಕ್ಷಣೆ ಪಡೆಯುವ ಉಪಾಯಗಳು! (ವಾಸ್ತು ಮತ್ತು ವಾಹನಶುದ್ಧಿಸಹಿತ) – ಭಾಗ ೨”)