ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ

ಜೀವನದ ಧ್ಯೇಯವೇನು ?

ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ.

ಸುಖ ಮತ್ತು ಆನಂದದಲ್ಲಿರುವ ವ್ಯತ್ಯಾಸ

ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ ದುಃಖ. ಏಕೆಂದರೆ ನಮಗೆ ಸಿಗುವ ಸುಖವು ಒಂದು ಭಾಗದಷ್ಟಿದ್ದರೆ, ದುಃಖವು ಅದರ ಮೂರು ಭಾಗ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಸುಖಕ್ಕೆ ದುಃಖದ ಜೊತೆ ಇದ್ದೇ ಇರುತ್ತದೆ. ಅದರ ಅನುಭವ ಕ್ಷಣಿಕ- ದುಃಖದ ಅನುಭವ ಅಧಿಕ. ಉದಾ: ತೀರಾ ಸೆಕೆಗೆ ಫ್ಯಾನ್ ಹಾಕಿ ಕುಳಿತಾಗ ವಿದ್ಯುತ್ ಪೂರೈಕೆ ನಿಂತು ಹೋದರೆ ದುಃಖ ಆವರಿಸುತ್ತದೆ.

ಆನಂದವೆಂದರೇನು ?

ಆನಂದವೆಂದರೆ ದುಃಖದ ಜೊತೆಯಿಲ್ಲದ, ನಿರಂತರವಾಗಿ ಸಿಗುವ ಅತ್ಯುಚ್ಚ ಮಟ್ಟದ ಸುಖ. ಪ್ರಾಣಿಮಾತ್ರರು ಬಯಸುತ್ತಿರುವುದು ಇದನ್ನೇ – ಅಂದರೆ ಆನಂದವನ್ನೇ. ಆದರೆ ಕ್ಷಣಿಕ ಸುಖವನ್ನೇ ಆನಂದವೆಂದು ಭ್ರಮಿಸಿ ರಮಿಸುತ್ತಾರೆ. ಆನಂದವನ್ನು ಪಡೆಯುವುದು ಹೇಗೆ ಎಂಬುದನ್ನು ಯಾವುದೇ ಶಾಲಾ ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ಕಲಿಸುವುದಿಲ್ಲ. ಏಕೆಂದರೆ ವಿಜ್ಞಾನವು ಈ ವಿಷಯವನ್ನು ಕಲಿಸಲಾರದು. ಬದಲಾಗಿ ಆಧ್ಯಾತ್ಮಿಕ ವಿಶ್ವವಿದ್ಯಾಲಯವು ಮಾತ್ರ ಇದನ್ನು ಕಲಿಸಬಲ್ಲದು.

ಕುಪ್ರಭಾತವಾಗುವ ಸುಪ್ರಭಾತ

ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದೊಡನೆ ಇಂದಿನ ದಿನವು ಆನಂದದಾಯಕವಾಗಿರಬೇಕು ಎಂದು ಆಶಿಸುತ್ತಾರೆ. ಆದರೆ ಮುಂಜಾನೆ  ಮನೆ ಬಾಗಿಲಿಗೆ ಬರುವ ಪತ್ರಿಕೆಯನ್ನು ಓದಿದಾಗ ಅಥವಾ ಟಿ.ವಿ.ಯಲ್ಲಿನ ವಾರ್ತೆ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮೋಸ, ವಂಚನೆ, ಮಹಿಳೆಯರ ಮೇಲಿನ ಅತ್ಯಾಚಾರ, ಆತ್ಮಹತ್ಯೆ ಇತ್ಯಾದಿಗಳ ದೃಶ್ಯಗಳು ಕಣ್ಣ ಮುಂದೆ ಸುಳಿದಾಗ ನಾವು ಹತಾಶರಾಗಿ ದುಃಖಿತರಾಗುತ್ತೇವೆ. ಸುಪ್ರಭಾತದಿಂದ ಆರಂಭವಾಗಬೇಕಾದ ದಿನವು ಕುಪ್ರಭಾತದಿಂದಲೇ ಪ್ರಾರಂಭವಾಗುತ್ತದೆ. ಅನಂತರ ನಡೆಯುವ ಘಟನೆಗಳಿಂದ, ಅನುಭವಿಸುವ ಯಾತನೆಗಳಿಂದ ಮನಸ್ಸು ದಿನವಿಡೀ ದುಃಖಮಯವಾಗುತ್ತದೆ.

ನಮ್ಮನ್ನು ದುಃಖವು ಯಾವ ರೀತಿಯಲ್ಲಿ ಆವರಿಸಿದೆ ?

ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಪ್ರಸಂಗಗಳು ನಡೆಯುತ್ತವೆ. ಉದಾಹರಣೆಗೆ ನಮ್ಮ ಆಪ್ತರು ಆಕಸ್ಮಾತ್ತಾಗಿ ಅಪಮೃತ್ಯುವಿಗೀಡಾಗುತ್ತಾರೆ, ಎಷ್ಟೇ ಪ್ರಯತ್ನಿಸಿದರೂ ಕೆಲವು ಮಂದಿಗೆ ಮದುವೆಯೇ ಆಗುವುದಿಲ್ಲ. ಮದುವೆಯಾದವರಿಗೆ ಸಂತಾನ ಭಾಗ್ಯವೇ ಲಭಿಸುವುದಿಲ್ಲ. ಕೆಲವರು ಚಿನ್ನ ಹಿಡಿದರೂ ಅದೆಲ್ಲ ಮಸಿಯಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸೋಲೇ ಕಾದಿರುತ್ತದೆ. ಇಂತಹ ಘಟನೆಗಳ ಹಿಂದಿರುವ ‘ಕಾರ್ಯಕಾರಣಭಾವ’ ತಿಳಿಯದ ವಿಜ್ಞಾನದಿಂದ ಈ ದುಃಖವನ್ನು ನಿವಾರಿಸಲು ಸಾಧ್ಯವಿಲ್ಲ. ಹೀಗಿರುವಾಗ ದುಃಖಿತರಾಗದೆ ಆನಂದಮಯ ಜೀವನವನ್ನು ಹೇಗೆ ನಡೆಸುವುದು, ಎಂಬುದನ್ನು ವಿಜ್ಞಾನವು ಕಲಿಸಲಾರದು. ಬದಲಾಗಿ ಅಧ್ಯಾತ್ಮವು ಮಾತ್ರ ಕಲಿಸಬಲ್ಲದು.  ಅಂದರೆ ಈ ಶಾಸ್ತ್ರವು ಸೀಮಿತ ಮಂದಿಗಲ್ಲ- ಎಲ್ಲರಿಗೂ ಅವಶ್ಯಕವಾಗಿದೆ ಎಂಬುದನ್ನು ತಿಳಿಯಬಹುದು.

ಅಧ್ಯಾತ್ಮವು ಕಹಿಗುಳಿಗೆಯಲ್ಲ !

ಅಧ್ಯಾತ್ಮ ಅಂದರೆ ಏನು? ಅಧಿ+ಆತ್ಮ ಅಂದರೆ ಪರಮಾತ್ಮನ ಅಂಶವಾದ ಆತ್ಮನ ಬಗೆಗಿನ ಶಾಸ್ತ್ರ. ಜಗತ್ತಿನ ಎಲ್ಲ ಜೀವಿಗಳಲ್ಲಿ ಶ್ರೇಷ್ಠವೆನಿಸಿದ ಮಾನವನ ಜನ್ಮವು ಕೇವಲ ವ್ಯಾಪಾರ, ವ್ಯವಹಾರ, ನೌಕರಿ, ಸಂಪಾದನೆಗಾಗಿ ಅಲ್ಲ. ಬದಲಾಗಿ ಪರಮಾತ್ಮನ ಮನೆಯಿಂದ ಬಂದ ನಾವು ನಮ್ಮ ಪ್ರಾರಬ್ಧವನ್ನು ಭೋಗಿಸಿ ಆಧ್ಯಾತ್ಮಿಕ ಸಾಧನೆ ಮಾಡಿ ನಿರಾತಂಕವಾಗಿ ಪರಮಾತ್ಮನ ಮನೆಗೇ ಹಿಂದಿರುಗಬೇಕೆಂಬುದು ನಮ್ಮ ಸೃಷ್ಟಿಕರ್ತನ ಸಂಕಲ್ಪವಾಗಿದೆ. ’ಅಲ್ಲಿರುವುದು ಅದು ನನ್ನ ಮನೆ- ಇಲ್ಲಿಗೆ (ಈ ಜಗತ್ತಿಗೆ) ಬಂದೆ ಸುಮ್ಮನೆ’ ಎಂಬುದು ದಾಸವಾಣಿ. ಎಲ್ಲ ಜೀವಿಗಳಿರುವಂತೆ ನಿದ್ರೆ, ಆಹಾರ, ಭಯ, ಮೈಥುನ ಇವುಗಳೊಂದಿಗೆ ಬುದ್ಧಿ (ವಿವೇಕ) ಎಂಬ ವಿಶೇಷ ಶಕ್ತಿಯನ್ನು ಹೊಂದಿರುವ ಮನುಷ್ಯನು ಮಾತ್ರ ಈಶ್ವರ ಪ್ರಾಪ್ತಿಯನ್ನು ಮಾಡಿಕೊಳ್ಳಬಲ್ಲನು. ಆನಂದವು ಪರಮಾತ್ಮನ ಗುಣಧರ್ಮವೇ ಆಗಿರುವುದರಿಂದ ಈಶ್ವರ ಪ್ರಾಪ್ತಿಯನ್ನು ಅಂದರೆ ಆನಂದ ಪ್ರಾಪ್ತಿಯನ್ನು ಮಾಡಿಕೊಳ್ಳುವ ವಿಶೇಷ ಅವಕಾಶವು ಇತರ ಜೀವಿಗಳಿಗಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ಇದೆ. ಮಾನವನ ಮನಸ್ಸು ಕ್ಷಣಕ್ಷಣವೂ ಯಾವುದೇ ವಿಚಾರದಲ್ಲಿ ಸಂಕಲ್ಪ-ವಿಕಲ್ಪ (ಬೇಕು, ಬೇಡ ಎಂಬ ವಿಚಾರ) ಮಾಡಿದರೆ ಬುದ್ಧಿಯು (ವಿವೇಕವು) ಈ ಬಗ್ಗೆ ವಿಮರ್ಶೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಬಲ್ಲುದು. ಆದುದರಿಂದ ನಮಗೂ ಪರಮಾತ್ಮನು ನೀಡಿರುವ ಬುದ್ಧಿಯನ್ನು ಉಪಯೋಗಿಸಿ ಅವನ ಸಂಕಲ್ಪದಂತೆ ಆಧ್ಯಾತ್ಮಿಕ ಸಾಧನೆ ಮಾಡಿ ಆನಂದ ಪ್ರಾಪ್ತಿಮಾಡಿಕೊಳ್ಳಬೇಕು.

ಹೊರ ಮನಸ್ಸು, ಒಳಮನಸ್ಸು, ಬುದ್ಧಿ, ಚಿತ್ತ ಎಂದರೆ ಏನು?

ನಮ್ಮ ಮನಸ್ಸಿನಲ್ಲಿ ಹೊರಮನಸ್ಸು, ಒಳಮನಸ್ಸು (ಚಿತ್ತ) ಎಂಬ ಎರಡು ಭಾಗಗಳಿವೆ. ಚಿತ್ತದೊಳಗೆ ಹಿಂದಿನ ಜನ್ಮಜನ್ಮಾಂತರಗಳ ಸುಖ-ದುಃಖ, ಬೇಕು ಬೇಡಗಳು, ಆಸೆ ಆಕಾಂಕ್ಷೆಗಳು ಅಭ್ಯಾಸಗಳು, ಸ್ವಭಾವಗಳು ಇತ್ಯಾದಿಗಳ ಸಂಸ್ಕಾರ (ಪಡಿಯಚ್ಚು)ಗಳ ಕೇಂದ್ರಗಳಿದ್ದು. ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ-ಈ ಪಂಚಜ್ಞಾನೇಂದ್ರಿಯಗಳಿಂದ ಬರುವ ಸಂವೇದನೆಗಳನ್ನು ಹೊರಮನಸ್ಸು ಸ್ವೀಕರಿಸಿ, ಬುದ್ಧಿಯ ಮಾಧ್ಯಮದಿಂದ ಅವುಗಳನ್ನು ವರ್ಗೀಕರಿಸಿ, ಒಳಮನಸ್ಸಿಗೆ ವರ್ಗಾಯಿಸಿದಾಗ ಚಿತ್ತದಲ್ಲಿರುವ ಆಯಾಯ ಕೇಂದ್ರದಲ್ಲಿ ಅವುಗಳು ಸಂಗ್ರಹವಾಗುತ್ತವೆ. ಅಲ್ಲಿಂದ ಅವು ಪುನಃ ಹೊರಮನಸ್ಸಿಗೆ – ಹೀಗೆ ಪಯಣಿಸುತ್ತಿರುತ್ತವೆ. ಹೀಗೆ ನಮ್ಮ ಮನಸ್ಸಿನಲ್ಲಿ ದಿನದ ೨೪ ಗಂಟೆಯ ಕಾಲವೂ ವಿಚಾರ ತರಂಗಗಳು ಏಳುತ್ತಿರುತ್ತವೆ. ಆದುದರಿಂದ ನಮ್ಮ ಮನಸ್ಸು ಸದಾ ಕಾರ್ಯನಿರತವಾಗಿದ್ದು ನಮ್ಮ ಸೃಷ್ಟಿಕರ್ತನ ಸ್ಮರಣೆ ಮಾಡಲೂ ಸಮಯವಿಲ್ಲದೆ ಅಶಾಂತಿಯಿಂದ ಚಡಪಡಿಸುತ್ತಿರುತ್ತದೆ. ಚಿತ್ತವು ಶುದ್ಧಿಯಾದಾಗ (ನಿರ್ವಿಚಾರ ಸ್ಥಿತಿಗೆ ಹೋದಾಗ) ಮಾತ್ರ ಶಾಂತಿ ನೆಲೆಸುತ್ತದೆ. ಚಿತ್ತ ಶುದ್ಧಿಗೆ ನಾವೇನು ಮಾಡಬಹುದು? ನೋಡೋಣ. ಚಿತ್ತದೊಳಗಿನ ಕೋಟ್ಯಂತರ ಸಂಸ್ಕಾರಗಳನ್ನು ನಾಶಪಡಿಸಲು ಪರಮಾತ್ಮನ ನಾಮಸ್ಮರಣೆಯೆಂಬ ಅಮೂಲ್ಯ ಬೀಜವನ್ನು ಚಿತ್ತದೊಳಗೆ ಬಿತ್ತಿ, ಆಧ್ಯಾತ್ಮಿಕ ಸಾಧನೆಯೆಂಬ ನೀರು ಗೊಬ್ಬರವನ್ನುಣಿಸಿ ನಾಮ ಸ್ಮರಣೆಯ ಕೇಂದ್ರವು ಚಿತ್ತವನ್ನು ಪೂರ್ತಿ ವ್ಯಾಪಿಸಿದಾಗ ನಿರ್ವಿಚಾರ ಸ್ಥಿತಿಯು ನಿರ್ಮಾಣವಾಗಿ ಮನಸ್ಸು ಶಾಂತವಾಗುತ್ತದೆ. ಶಾಯಿ ತುಂಬಿದ ಬಾಟಲಿಯೊಳಗೆ ಶುದ್ಧ ನೀರನ್ನು ನಿರಂತರವಾಗಿ ತುಂಬಿಸುತ್ತಿದ್ದಂತೆ ಶಾಯಿಯೆಲ್ಲವೂ ಹೊರಗೆ ಹರಿದು ಬಾಟಲಿಯಲ್ಲಿ ಶುದ್ಧ ನೀರು ತುಂಬಿಕೊಳ್ಳುವಂತೆಯೇ ಇದು ನಡೆಯುತ್ತದೆ.

ಆನಂದ ಪ್ರಾಪ್ತಿಗೆ ಇರುವ ಇತರ ಅಡಚಣೆಗಳು

ಪ್ರಾರಬ್ಧ – ನಾವು ಮನುಷ್ಯ ಜನ್ಮಕ್ಕೆ ಬರಬೇಕಾದರೆ ಅನೇಕ ಜನ್ಮಗಳನ್ನು ದಾಟಿ ಬಂದಿದ್ದೇವೆ. ಆ ಜನ್ಮಗಳ ಅವಧಿಯಲ್ಲಿ ನಾವು ಮಾಡಿದ ಒಳ್ಳೆಯ – ಕೆಟ್ಟ ಕರ್ಮಗಳ ಫಲವು ಬೇರೆ ಬೇರೆಯಾಗಿ ಒಟ್ಟು ಸೇರಿ ಸಂಚಿತವೆನಿಸುತ್ತದೆ. (ಸಂಚಿತ ಠೇವಣಿ ಇದ್ದಂತೆ). ಅದರ ಒಂದು ಭಾಗವನ್ನು ಪಡೆದು ಈ ಜನ್ಮದಲ್ಲಿ ಭೋಗಿಸಬೇಕಾಗುತ್ತದೆ. ಅದುವೇ ಪ್ರಾರಬ್ಧ. ಯೋಗ್ಯವಾದ ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಹೋದಂತೆ ಪ್ರಾರಬ್ಧವು ಹಾಗೂ ಸಂಚಿತವು ನಶಿಸುತ್ತದೆ. ತದ್ವಿರುದ್ಧವಾಗಿ ವರ್ತಿಸಿದರೆ ಸಂಚಿತದ ಮೂಟೆ ದೊಡ್ಡದಾಗುತ್ತ ಮುಂದಿನ ಅನೇಕ ಜನ್ಮಗಳನ್ನು ದುಃಖದಿಂದ ಕಳೆಯಬೇಕಾಗುತ್ತದೆ. ಇದಕ್ಕಾಗಿ ನಿರಂತರವಾಗಿ ಸಾಧ್ಯವಾಗದಿದ್ದರೂ ಆದಷ್ಟು ಹೆಚ್ಚು ನಾಮಸ್ಮರಣೆ (ನಾಮಜಪ) ಮಾಡಬೇಕು.

ನಾಮಜಪ ಎಂದರೇನು?

ನಾಮವೆಂದರೆ ದೇವರ ಹೆಸರು. ಜಪವೆಂದರೆ ಪದೇ ಪದೇ ಅದನ್ನು ಉಚ್ಚರಿಸುವುದು. ಜಕಾರೋ ಜನ್ಮ ವಿಚ್ಛೇದಕ: ಪಕಾರೋ ಪಾಪನಾಶಕಃ || ಅಂದರೆ ನಮ್ಮ ಜನ್ಮಜನ್ಮಾಂತರಗಳ ಪಾಪವನ್ನು ನಾಶಮಾಡಿ ನಮ್ಮನ್ನು ಜನನ – ಮರಣಗಳ ಚಕ್ರದಿಂದ ಮುಕ್ತಗೊಳಿಸುವಂತಹದ್ದೇ ಜಪ

ನಾಮಜಪದ ಲಾಭಗಳು
ಅ) ನಾಮಜಪದಿಂದ ಮನಸ್ಸು ಶಾಂತವಾಗುವುದರಿಂದ ಮಾನಸಿಕ ಒತ್ತಡದಿಂದ ನಿರ್ಮಾಣವಾಗುವ ಶಾರೀರಿಕ ರೋಗಗಳು ಬರುವುದಿಲ್ಲ.
ಆ) ಮನಸ್ಸಿನ ಏಕಾಗ್ರತೆ ಹೆಚ್ಚುವುದು.(ಏಕೆಂದರೆ ನಾಮಜಪದಲ್ಲಿ ಮನಸ್ಸು ತಲ್ಲೀನವಾಗಿರುವುದು)
ಇ) ನಾವು ಮಾಡುವ ಕರ್ಮಗಳ ಫಲವು ಈಶ್ವರನಿಗೆ ಅರ್ಪಿತವಾಗಿ ಕರ್ಮವು ಅಕರ್ಮ ಕರ್ಮವಾಗುತ್ತದೆ.
ಈ) ಅನೇಕ ತೀರ್ಥಕ್ಷೇತ್ರಗಳ ದರ್ಶನದ ಮತ್ತು ಯಜ್ಞಗಳ ಫಲವು ಕೇವಲ ನಾಮಜಪದಿಂದ ಸಿಗುವುದು
ಉ) ಮೃತ್ಯುವಿನ ನಂತರವೂ ನಾಮ ಜಪದ ಲಾಭವು ಸಿಗುವುದು.

ಯಾವ ದೇವತೆಯ ಜಪ ಮಾಡಬೇಕು?

ಹಿಂದುಗಳಿಗೆ ೩೩ ಕೋಟಿ ದೇವತೆಗಳಿದ್ದಾರೆ. ಗುರುಪ್ರಾಪ್ತಿಯಾಗಿದ್ದರೆ ಗುರುಗಳು ಕೊಟ್ಟ ಜಪವನ್ನು ಮಾಡಬೇಕು. ಇಲ್ಲವಾದರೆ ಕುಲದೇವತೆಯ ನಾಮಸ್ಮರಣೆ ಮಾಡಬೇಕು. ಕುಲದೇವರು ಗಣಪತಿಯಾಗಿದ್ದರೆ  ಶ್ರೀ ಗಣೇಶಾಯ ನಮಃ ವೆಂಕಟ್ರಮಣ ಆಗಿದ್ದರೆ “ಶ್ರೀ ವೆಂಕಟೇಶಾಯ ನಮಃ”, ಲಕ್ಷ್ಮಿ ಆಗಿದ್ದರೆ “ಶ್ರೀ ಲಕ್ಷ್ಮೀದೇವ್ಯೈ ನಮಃ”;  ಶಿವ ಆಗಿದ್ದರೆ “ನಮಃ ಶಿವಾಯ” ಹೀಗೆ.

ಕುಲದೇವರ ಹೆಸರು ಗೊತ್ತಿಲ್ಲವಾದರೆ “ಶ್ರೀ ಕುಲದೇವತಾಯೈ ನಮಃ” ಹೀಗೆ.

ಕ್ರಿಶ್ಚಿಯನ್ನರು ‘ನಮೋ ಮರಿಯೇ, ನಮೋ ಯೇಸುವೇ’ ಹೀಗೆ. ಮುಸಲ್ಮಾನರು ಯಾ ಅಲ್ಲಾ, ಅಲ್ಲಾಹು ಅಕ್ಬರ್ ಹೀಗೆ. ಜೈನರು ನವಕಾರ ಮಂತ್ರ (ಓಂ ನಮೋ ಅರಿಹಂತಾಣಾಂ…) ಹೇಳಬೇಕು.

ದಿನದಲ್ಲಿ ಸ್ಥಳ, ಕಾಲ, ಮಡಿಮೈಲಿಗೆಗಳ ಯಾವುದೇ ನಿಬಂಧನೆಯಿಲ್ಲದೆ ದೈನಂದಿನ ಎಲ್ಲ ಕೆಲಸ ಕಾರ್ಯಗಳೊಂದಿಗೆ ಯಾರು ಬೇಕಾದರೂ ಎಷ್ಟು ಬೇಕಾದರೂ ನಾಮ ಜಪಿಸಬಹುದು. ಮಹಿಳೆಯರು ತಿಂಗಳ ಎಲ್ಲಾ ದಿನಗಳಲ್ಲೂ ನಾಮಸ್ಮರಣೆ ಮಾಡಬಹುದು.

ಎರಡನೆಯ ಅಡಚಣೆಯೆಂದರೆ ಪಿತೃಗಳ ಅವಕೃಪೆ – ಪ್ರಸ್ತುತ ಕಾಲದಲ್ಲಿ ಹೆಚ್ಚಿನವರು ಪಿತೃಗಳ ಆತ್ಮಗಳ ಸದ್ಗತಿಗಾಗಿ ಶ್ರಾದ್ಧ, ಮಹಾಲಯ, ಪಕ್ಷ ಇವುಗಳನ್ನು ಮಾಡುವುದಿಲ್ಲ. ಆದ್ದರಿಂದ ಅವರ ಆತ್ಮಗಳು ಅತೃಪ್ತವಾಗಿರುತ್ತವೆ. ಆದುದರಿಂದ ಕುಟುಂಬದಲ್ಲಿ ಮದುವೆಯಾಗದಿರುವುದು, ಪತಿಪತ್ನಿಯಲ್ಲಿ ಹೊಂದಾಣಿಕೆ ಇಲ್ಲದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಪಾತವಾಗುವುದು, ಪೂರ್ತಿ ಸಮಯವಾಗದೇ ಅವಧಿಪೂರ್ವ ಹೆರಿಗೆಯಾಗುವುದು, ಅಂಗವಿಕಲ ಅಥವಾ ಬುದ್ಧಮಾಂದ್ಯ ಮಕ್ಕಳು ಹುಟ್ಟುವುದು, ಮಕ್ಕಳು ಚಿಕ್ಕ ಪ್ರಾಯದಲ್ಲೇ ತೀರಿ ಹೋಗುವುದು, ಯಾವುದೇ ವ್ಯಾಪಾರ ವ್ಯವಹಾರಗಳಲ್ಲಿ ಸೋಲುಂಟಾಗುವುದು, ವ್ಯಸನಗಳು ಹಿಡಿಯುವುದು, ಮಾನಸಿಕ ರೋಗಗಳು ಉಂಟಾಗುವುದು- ಇವೆಲ್ಲ ಸಂಭವಿಸುತ್ತದೆ. ಆದ್ದರಿಂದ ನಮ್ಮ ನಮ್ಮ ಪದ್ಧತಿಯಂತೆ ಶ್ರಾದ್ಧ, ಮಹಾಲಯ, ಪಕ್ಷ ಇಂತಹ ವಾರ್ಷಿಕ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಪ್ರತಿದಿನ ಶ್ರೀ ಗುರುದತ್ತಾತ್ರೇಯರ ಜಪವನ್ನು || ಶ್ರೀ ಗುರುದೇವ ದತ್ತ || ಈ ರೀತಿಯಲ್ಲಿ ದಿನಾಲೂ ಸುಮಾರು ಒಂದು ಗಂಟೆಯಷ್ಟಾದರೂ ಹೊತ್ತು ಮಾಡಬೇಕು.

ದತ್ತ ಜಪದಿಂದಾಗುವ ಲಾಭಗಳು
ಅ) ಪಿತೃಗಳಿಗೆ ಸದ್ಗತಿ ಸಿಗುತ್ತದೆ.
ಆ) ಪಿತೃ ಋಣ ತೀರುತ್ತದೆ
ಇ) ಪಿತೃಗಳ ಆಶೀರ್ವಾದ ದೊರೆತು, ಆಧ್ಯಾತ್ಮಿಕ ಉನ್ನತಿ ಸುಗಮವಾಗುತ್ತದೆ.

ಇವು ಪ್ರಾರಂಭಿಕ ಹಂತದ ಸಾಧನೆಗಳು ಮಾತ್ರ. ಮುಂದಿನ ಹಂತದಲ್ಲಿ ಸ್ವಭಾವದೋಷ ನಿರ್ಮೂಲನ, ಅಹಂ ನಿರ್ಮೂಲನ, ಗುಣವೃದ್ಧಿಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ (ನಿರಪೇಕ್ಷ ಪ್ರೇಮ) – ಈ ಹಂತಗಳಿವೆ. ಅನೇಕದಿಂದ ಏಕಕ್ಕೆ, ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು, ಮಟ್ಟಾನುಸಾರ, ವರ್ಣಾನುಸಾರ, ಆಶ್ರಮಾನುಸಾರ, ಕಾಲಾನುಸಾರ ಸಾಧನೆ ಮಾಡಲು ಗುರುಗಳು ಮುಂದುಮುಂದಿನ ಮಾರ್ಗದರ್ಶನ ಮಾಡುತ್ತಾರೆ. ಅವರ ಮಾರ್ಗದರ್ಶನದಂತೆ ಸಾಧನೆ ಮಾಡಿ ಎಲ್ಲರೂ ಗುರು ಕೃಪೆಯನ್ನು ಗಳಿಸಿ ಈಶ್ವರ ಪ್ರಾಪ್ತಿ (ಆನಂದ ಪ್ರಾಪ್ತಿ) ಮಾಡಿಕೊಳ್ಳುವಂತಾಗಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.

(ಹೆಚ್ಚಿನ ಮಾಹಿತಿಗೆ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥಗಳು – ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ, ಅಧ್ಯಾತ್ಮ, ನಾಮಸಂಕೀರ್ತನಯೋಗದ ಮಹತ್ವ ಇವುಗಳನ್ನು ಓದಿರಿ.)

Leave a Comment