ನವರಾತ್ರಿ : ವ್ಯಾಪಾರೀಕರಣ ಮತ್ತು ಸಂಭವಿಸಬಹುದಾದ ಅಪಾಯಗಳು !

ಹಿಂದೂಗಳ ಉತ್ಸವಗಳಲ್ಲಿ ಪ್ರಸ್ತುತ ಅಯೋಗ್ಯ ಪ್ರವೃತ್ತಿಗಳು ಸೇರಿಕೊಂಡಿವೆ. ಉತ್ಸವಗಳ ವ್ಯಾಪಾರೀಕರಣವಾಗಿರುವುದರಿಂದ ಹಿಂದೂಗಳಿಗೆ ಮೂಲ ಶಾಸ್ತ್ರವು ಮರೆತುಹೋಗಿದೆ. ಹಿಂದೂಗಳ ಭಾವಿ ಪೀಳಿಗೆಯಂತೂ ಉತ್ಸವಗಳಲ್ಲಿ ನುಸುಳಿರುವ ಈ ಅಯೋಗ್ಯ ಪ್ರವೃತ್ತಿಗಳನ್ನೇ ಉತ್ಸವವೆಂದು ತಿಳಿದುಕೊಳ್ಳಲು ಆರಂಭಿಸಿದೆ. ಈ ಸ್ಥಿತಿಯು ಚಿಂತಾಜನಕವಾಗಿದೆ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ವೇದಮೂರ್ತಿ ಭೂಷಣ ದಿಗಂಬರ ಜೋಶಿ ಇವರಿಗೆ ಈ ವಿಷಯದಲ್ಲಿ ಕೆಲವು ಜಿಜ್ಞಾಸು ಮಹಿಳೆಯರು ಪ್ರಶ್ನೆ ಮತ್ತು ಸಂದೇಹಗಳನ್ನು ಕೇಳಿದರು. ಅದರ ಸಂದೇಹ ನಿವಾರಣೆ ಮಾಡುವ ಲೇಖನವನ್ನು ಅವರು ಇಲೆಕ್ಟ್ರಾನಿಕ್ ಪ್ರಸಾರಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಮೂಲ ಲೇಖನದಲ್ಲಿ ಯಾವುದೇ ಬದಲಾವಣೆ ಮಾಡದೆ ಕೆಲವು ಸಂಪಾದಕೀಯ ಸಂಸ್ಕರಣಸಹಿತ ಈ ಲೇಖನವನ್ನು ನಮ್ಮ ವಾಚಕರಿಗಾಗಿ ನೀಡುತ್ತಿದ್ದೇವೆ.

ಎಲ್ಲ ವಿದ್ವಾಂಸ ಗುರುಜನರಿಗೆ ವಂದಿಸಿ ಇಂದು ಒಂದು ಮಹತ್ವದ ಹಾಗೂ ವಿವಾದಾತ್ಮಕ ವಿಷಯವನ್ನು ಸ್ಪಷ್ಟ ಮಾಡಲಿಕ್ಕಿದ್ದೇನೆ. ಹಿಂದೂಗಳ ಹಬ್ಬ-ಉತ್ಸವಗಳಿಗೆ ಇತ್ತೀಚೆಗೆ ಅಂಟಿಕೊಂಡಿರುವ ವಿಕೃತಿಗೆ ಸಂಬಂಧಿಸಿದ ಮತ್ತು ಪೌರೋಹಿತ್ಯ ಮಾಡುವಾಗ ಮಾತೃವರ್ಗದ ಮೂಲಕ ಮಂಡಿಸಲ್ಪಡುವ ಸಮಸ್ಯೆಗಳಿವೆಯೋ, ಅದಕ್ಕೆ ಸಂಬಂಧಿಸಿದ ಈ ಲೇಖನವನ್ನು ಮಾಡಬೇಕೆಂದು ಅನಿಸುತ್ತದೆ. ಸೆಪ್ಟೆಂಬರ್ ೧೯ ರಂದು ಪ್ರಖ್ಯಾತ ಹಿಂದುತ್ವನಿಷ್ಠ ಲೇಖಕ, ಭಾಗವತ ಮತ್ತು ರಾಮಾಯಣದ ಅಭ್ಯಾಸಕ ಡಾ. ಸಚ್ಚಿದಾನಂದ ಶೇವಡೆ ಮತ್ತು ಗಣಪ್ರವರ ಸಿದ್ಧಾಂತಿಜ್ಯೋತಿಷ್ಯರತ್ನ ಡಾ. ಗೌರವ ದೇಶಪಾಂಡೆ ಈ ಇಬ್ಬರು ಗಣ್ಯರೊಂದಿಗೆ ಚರ್ಚೆ ಮಾಡಿಯೇ ಇಂದು ಈ ವಿಷಯವನ್ನು ಮಂಡಿಸುತ್ತಿದ್ದೇನೆ.

೧. ನವರಾತ್ರ್ಯುತ್ಸವದ ವ್ಯಾಪಾರೀಕರಣವಾಗಿರುವುದನ್ನು ತೋರಿಸುವ ಮಹಿಳೆಯರ ಪ್ರಶ್ನೆ !

ಅ. ೪ – ೫ ಮಹಿಳೆಯರು ದೂರವಾಣಿಯ ಮೂಲಕ ನನ್ನನ್ನು ಸಂಪರ್ಕಿಸಿ ಒಂದು ಪ್ರಶ್ನೆ ಕೇಳಿದರು. ‘ಗುರೂಜಿ, ನವರಾತ್ರಿಯಲ್ಲಿ ಪ್ರತಿದಿನ ವಿವಿಧ ಬಣ್ಣಗಳ ಸೀರೆ ಉಟ್ಟುಕೊಳ್ಳಬೇಕು ಹಾಗೂ ದೇವಿಯ ಮತ್ತು ನವಗ್ರಹಗಳ ಕೃಪೆಯನ್ನು ಪಡೆದುಕೊಳ್ಳಬೇಕು’ ಎಂಬ ಮೆಸ್ಸೆಜ್ ಸೋಷಿಯಲ್ ಮೀಡಿಯಾದ ಮೂಲಕ ಪ್ರಸಾರವಾಗುತ್ತಿದೆ. ಇದು ಸತ್ಯವೇ ?

ಆ. ಕೆಲವು ಮಹಿಳೆಯರಂತೂ ‘೯ ದಿನ ಯಾವ ಯಾವ ಮ್ಯಾಚಿಂಗ್ ಬಳೆಗಳು, ಓಲೆಗಳು, ಕೊರಳಿನ ಆಭರಣಗಳು ಬೇಕು ? ಯಾವ ಆಭರಣಗಳನ್ನು ತೊಡಬೇಕು ? ಹಾಗೂ ಅದರಿಂದ ದೇವಿಯ ಕೃಪೆ ಹೇಗೆ ಆಗುತ್ತದೆ ?’ ಎಂಬುದರ ಮೆಸ್ಸೆಜ್ ಕೂಡ ಬಂದಿದೆಯೆಂದು ಹೇಳಿದ್ದಾರೆ. ಧರ್ಮಶಾಸ್ತ್ರದಲ್ಲಿ ಹೀಗೇನಾದರೂ ಇದೆಯೇ ?, ಎಂದು ಕೇಳಿದ್ದಾರೆ.

ಇ. ಗರಬಾ ಮತ್ತು ದಾಂಡಿಯಾ ಆಡುವುದೇ ದೇವಿಗೆ ಇಷ್ಟವಾಗುತ್ತದೆ ಹಾಗೂ ಅದನ್ನು ಆಡಿದರೆ ಲಕ್ಷ್ಮೀ ಪ್ರಾಪ್ತಿಯಾಗುವುದು ಎಂದು ಕೂಡ ಚರ್ಚೆಯಾಗುತ್ತಿದೆ. ಇದು ನಿಜವೇ ? ಗುರೂಜಿ, ಧರ್ಮಶಾಸ್ತ್ರದಲ್ಲಿ ಹೀಗೆ ಇದೆಯೇ ?, ಎಂದು ಇಂದು ಮಹಿಳೆಯರು ಕೇಳುತ್ತಾರೆ.

ಈ. ಮುಂಬಯಿಯ ಸೌ. ಸಾವಂತ ಎಂಬ ಮಹಿಳೆಯೊಬ್ಬರು, ಆಫೀಸ್‌ನಲ್ಲಿ ೯ ದಿನ ೯ ಬಣ್ಣದ ಸೀರೆ, ಅದಕ್ಕನುಸಾರ ಮ್ಯಾಚಿಂಗ್ ಬಳೆಗಳು, ಕಿವಿಗಳ ಆಭರಣಗಳನ್ನು ಧರಿಸಬೇಕೆಂದು ನಿರ್ಧರಿಸಲಾಗುತ್ತಿದೆ. ನಾನು ಬಡವಳು, ಪೇದೆಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಪತಿ ಯಾವಾಗಲೂ ಅನಾರೋಗ್ಯವಾಗಿರುತ್ತಾರೆ, ನನಗೆ ಇಷ್ಟು ಖರ್ಚು ಮಾಡಲು ಸಾಧ್ಯವಿಲ್ಲ, ನಾನು ಏನು ಮಾಡಬೇಕು ? ದೇವಿ ನನ್ನ ಕುಟುಂಬದ ಮೇಲೆ ಕೋಪಿಸಿಕೊಳ್ಳುವಳೇ ?
ಸೌ. ಸಾಂವತ ಇವರ ಈ ಪ್ರಶ್ನೆಯನ್ನು ಕೇಳಿ ನಾನು ಭಯಭೀತನಾದೆ ಹಾಗೂ ಇದರ ಬಗ್ಗೆ ಒಂದು ಲೇಖನ ಬರೆಯಬೇಕೆಂದು ನಿರ್ಧರಿಸಿದೆನು.

(ಮಹಿಳೆಯರು ನವರಾತ್ರ್ಯುತ್ಸವ ಆಚರಿಸುವ ವಿಷಯದಲ್ಲಿ ಅವರ ಸಂದೇಹಗಳನ್ನು ಗುರೂಜಿಯವರಿಗೆ ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು ! – ಸಂಪಾದಕರು)

೨. ಗುರೂಜಿಯವರು ಮಾಡಿದ ಸಂದೇಹ ನಿವಾರಣೆ ಮತ್ತು ಗಮನಕ್ಕೆ ತಂದುಕೊಟ್ಟ ಸಂಭಾವ್ಯ ಅಪಾಯಗಳು !

೨ ಅ. ೯ ದಿನ ೯ ಬಣ್ಣದ ಸೀರೆಗಳನ್ನು ಧರಿಸಬೇಕೆಂಬುದು ಧರ್ಮಶಾಸ್ತ್ರದಲ್ಲಿ ಎಲ್ಲಿಯೂ ಇಲ್ಲ ಹಾಗೂ ಅದು ಮಾರ್ಕೇಟಿಂಗ್ ಕಂಪನಿಗಳು ಕಂಡುಹಿಡಿದ ಉಪಾಯವಾಗಿದೆ : ೪ ವೇದ ೪ ಉಪವೇದ, ೬ ಶಾಸ್ತ್ರಗಳು, ೧೮ ಪುರಾಣಗಳು ಮತ್ತು ಉಪಪುರಾಣಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ದುರ್ಗಾಸಪ್ತಶತಿ ಮತ್ತು ದುರ್ಗಾ ಉಪಾಸನೆಯ ಗ್ರಂಥ, ಹೀಗೆ ಸುಮಾರು ೬೦ ಸ್ಮೃತಿಗ್ರಂಥಗಳಲ್ಲಿ ಎಲ್ಲಿಯೂ ನವರಾತ್ರಿಯಲ್ಲಿ ೯ ದಿನ ೯ ಬಣ್ಣಗಳ ಸೀರೆ ಉಡಬೇಕೆಂದು ಉಲ್ಲೇಖವಿಲ್ಲ.

ಒಗೆದು ಸ್ವಚ್ಛ ಮಾಡಿದ ವಸ್ತ್ರ ಧರಿಸಿರಿ (ಸ್ವಚ್ಛ ಅಂದರೆ ೯ ಗಜದ ಸೀರೆ ಇದ್ದರೆ ಉತ್ತಮ) ಎಂದು ಹೇಳಲಾಗಿದೆ. ನಿಮ್ಮಲ್ಲಿ ಯಾವ ಆಭರಣ ಇದೆಯೊ, ಅದನ್ನು ಧರಿಸಿರಿ. ಮ್ಯಾಚಿಂಗ್ ಬೇಕೆಂದೇನೂ ಇಲ್ಲ. ಮಾರ್ಕೇಟಿಂಗ್ ಕಂಪನಿಗಳು ವಿವಿಧ ಕಾಲ್ಪನಿಕ ಕಥೆಗಳನ್ನು ಕಟ್ಟಿ ಇತ್ತೀಚೆಗೆ ಪ್ರತಿ ಕ್ಷೇತ್ರದಲ್ಲಿ ಕಾಲು ಚಾಚಲು ಆರಂಭಿಸಿವೆ. ಆದ್ದರಿಂದ ಹಬ್ಬಗಳ ಪಾವಿತ್ರ್ಯತೆ ಕಡಿಮೆಯಾಗಿ ಅದರಲ್ಲಿ ಅಶ್ಲೀಲತೆ ಬಂದಿದೆ.

೨ ಆ. ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳ ಹಸ್ತಕ್ಷೇಪ ! : ಪ್ರತಿಯೊಂದು ಪ್ರಾಂತದ ಸಂಸ್ಕೃತಿಯಲ್ಲಿ ಒಂದು ವಿಶೇಷತೆ ಇರುತ್ತದೆ, ಅದನ್ನು ಕಾಪಾಡಬೇಕು. ಮಹಾರಾಷ್ಟ್ರದಲ್ಲಿ ಘಟಸ್ಥಾಪನೆಯು ಪ್ರ್ರಮುಖವಾಗಿರುತ್ತದೆ. ಅದರೊಂದಿಗೆ ಅಖಂಡ ನಂದಾದೀಪ, ಕೆಲವರಲ್ಲಿ ತ್ರಿಕಾಲಪೂಜೆ, ಸಪ್ತಶತಿ ಪಾಠ ವಾಚನ, ಸುವಾಸಿನಿ ಕುಮಾರಿ ಪೂಜೆ ಮತ್ತು ಭೋಜನ ಮತ್ತು ಮಾಲೆ ಕಟ್ಟುವುದು, ಇತ್ಯಾದಿ ಪದ್ಧತಿಯಲ್ಲಿ ನವರಾತ್ರಿ ನಡೆಯುತ್ತದೆ. ಲಲಿತಾ ಪಂಚಮಿ, ಮಹಾಲಕ್ಷ್ಮೀ ಪೂಜೆ(ಕೊಡ ಊದುವುದು), ಅಷ್ಟಮಿಯ ಹೋಮಹವನ, ಸರಸ್ವತಿ ಆವಾಹನೆ-ಪೂಜೆ, ಮುಂತಾದ ಧಾರ್ಮಿಕ ವಿಧಿಗಳು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಇರುತ್ತವೆ. ಕರ್ನಾಟಕದಲ್ಲಿ ದಸರಾ (ವಿಜಯದಶಮಿ) ದೊಡ್ಡ ಪ್ರಮಾಣದಲ್ಲಿರುತ್ತದೆ. ಕಚ್ಛ್, ಸೌರಾಷ್ಟ್ರ, ಗುಜರಾತ್ ಈ ಪ್ರಾಂತಗಳಲ್ಲಿ ದೇವಿಯ ಪ್ರತಿಮೆಯ ಪೂಜೆ ಮಾಡಿ ರಾತ್ರಿ ಜಾಗರಣೆ, ಗರಬಾ ಹಾಗೂ ಹೋಮಹವನ ಇತ್ಯಾದಿ ಪದ್ಧತಿಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಬಂಗಾಲದಲ್ಲಿ ಈ ಉತ್ಸವ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.

ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ಇದರಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಮಾಡುತ್ತವೆ, ಕಲಬೆರಕೆ ಮಾಡುತ್ತವೆ ಹಾಗೂ ಹೊಸ ಪದ್ಧತಿಯನ್ನು ನಿರ್ಮಾಣ ಮಾಡುತ್ತವೆ. ಅದಕ್ಕೆ ಯಾವುದೇ ಅಡಿಪಾಯ ಇರುವುದಿಲ್ಲ, ಶಾಸ್ತ್ರೀಯ ಆಧಾರ ಇರುವುದಿಲ್ಲ ಹಾಗೂ ಅದರಲ್ಲಿ ದೇವಿಯ ಉಪಾಸನೆಗೆ ಸ್ವಲ್ಪವೂ ಮಹತ್ವ ಇರುವುದಿಲ್ಲ.

೨ ಇ. ನವರಾತ್ರಿಯು ಮಾತೃಶಕ್ತಿಯ ಉತ್ಸವ ಆಗಿದೆ, ಎಂಬುದು ತಿಳಿಯದಿದ್ದರೆ, ಮುಂದಿನ ಪೀಳಿಗೆಯ ಮತಾಂತರವಾಗುವುದು ! : ಪ್ರತಿಯೊಂದು ಪ್ರಾಂತದ ಒಂದು ವೈಶಿಷ್ಟ್ಯವಿರುತ್ತದೆ, ಪರಂಪರೆ ಇರುತ್ತದೆ, ಅವುಗಳನ್ನು ಜೋಪಾನ ಮಾಡಬೇಕು, ಇಲ್ಲದಿದ್ದರೆ, ಕೆಲವು ವರ್ಷಗಳಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು ನವರಾತ್ರಿಯೆಂದರೆ ಡಿಜೆಯೊಂದಿಗೆ ಗರಬಾ, ದಾಂಡಿಯಾ ಆಡುವುದು ಎಂದಷ್ಟೇ ತಿಳಿದುಕೊಳ್ಳುವರು. ನವರಾತ್ರಿಯು ಮಾತೃಶಕ್ತಿಯ ಉತ್ಸವವಾಗಿದೆ, ಎಂಬುದು ಅವರಿಗೆ ತಿಳಿಯುವುದೇ ಇಲ್ಲ.

ತಾನು ಹಿಂದೂ ಆಗಿದ್ದೇನೆ ಎಂಬುದನ್ನು, ತನ್ನ ಆಚಾರ ವಿಚಾರ, ಸಂಸ್ಕೃತಿ, ತನ್ನ ಧಾರ್ಮಿಕ ಪರಂಪರೆ ಇತ್ಯಾದಿಗಳ ಕುರಿತು ಒಮ್ಮೆ ಅವರಿಗೆ ಮರೆತು ಹೋದರೆ, ಕೊರಳಿಗೆ ಕ್ರಾಸ್ ಹಾಕಿರಿ ಅಥವಾ ಸುನ್ನತ್ ಮಾಡಿಸಿರಿ, ಏನೂ ವ್ಯತ್ಯಾಸವಿರುವುದಿಲ್ಲ. ಇವೆಂಟ್ ಮತ್ತು ಮಾರ್ಕೇಟಿಂಗ್ ಕಂಪನಿಗಳು ಈ ತಂತ್ರವನ್ನು ಚೆನ್ನಾಗಿ ತಿಳಿದುಕೊಂಡಿವೆ. ಇದರಲ್ಲಿ ಏನೇ ಆದರು ಲಾಭ ಆಗುವುದು ಬೇರೆ ಧರ್ಮದವರಿಗೆ. ಒಂದೊಮ್ಮೆ ಓರ್ವ ಬಡವಳು ಇಂದಿನ ಈ ಹೈಫೈ ನವರಾತ್ರಿ ಕೈಗೆ ಎಟುಕುವುದಿಲ್ಲವೆಂದು ಅವಳು ದೇವಿಯ ಪೂಜೆ ಮಾಡದೆ ಇದ್ದರೆ, ಕ್ರಮೇಣ ಅವಳು ನಾಸ್ತಿಕಳಾಗುವಳು. ಶ್ರೀಮಂತಿಕೆ ಮತ್ತು ಧರ್ಮಶಿಕ್ಷಣದ ಅಭಾವ ಮತ್ತು ಮನೋರಂಜನೆ ಮಾಡಲು ಸಿಗುವುದರಿಂದ ಯುವ ಪೀಳಿಗೆಯು ಈ ಡಿಜೆ ಮತ್ತು ಗರಬಾ-ದಾಂಡಿಯಾವನ್ನೇ ನವರಾತ್ರಿ ಎಂದು ತಿಳಿಯುವರು, ಏಕೆಂದರೆ ಅವರಿಗೆ ನವರಾತ್ರಿಯೆಂದರೆ ದೇವಿಯ ಉಪಾಸನೆ ಎಂಬುದು ತಿಳಿದಿರುವುದೇ ಇಲ್ಲ. ಆದ್ದರಿಂದ ಇವರನ್ನುಕೂಡ ಮತಾಂತರಗೊಳಿಸಲು ಸುಲಭವಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಹಿಂದೂಗಳದ್ದೆ ಪರಾಭವವಾಗುತ್ತದೆ ಹಾಗೂ ಇದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಂದೂ ಸಮಾಜವೇ ಕಾರಣವಾಗುವುದು.

೨ ಈ. ಡೇ ಸಂಸ್ಕೃತಿಯನ್ನು ಹೇರುವ ಕಂಪನಿಗಳು ಮತ್ತು ಅದಕ್ಕೆ ಆಹಾರವಾಗಿರುವ ಯುವಪೀಳಿಗೆ ! : ಕೆಲವು ವರ್ಷಗಳ ಹಿಂದೆ ‘ಡೇ ಸಂಸ್ಕೃತಿ’ ಭಾರತದಲ್ಲಿ ಇರಲಿಲ್ಲ. ಯಾವಾಗ ಗಿಫ್ಟ್ ವಸ್ತುಗಳ ಕಂಪನಿಗಳು ಮತ್ತು ಗ್ರೀಟಿಂಗ್ ಕಾರ್ಡ್ ತಯಾರಿಸುವ ಕಂಪನಿಗಳು ನಮ್ಮ ದೇಶಕ್ಕೆ ಬಂದವೋ, ಅಂದಿನಿಂದ ಈ ಡೇಗಳ ಹುಚ್ಚು ತಲೆಯೊಳಗೆ ನುಗ್ಗಿದೆ. ಈ ಕಂಪನಿಗಳು ಈ ದಿನಗಳಂದು ಕೋಟಿಗಟ್ಟಲೆ ರೂಪಾಯಿಗಳ ವ್ಯವಹಾರವನ್ನು ಮಾಡುತ್ತವೆ. ಇಂದಿನ ಅವಸ್ಥೆ ಹೇಗಿದೆಯೆಂದರೆ, ಮಕ್ಕಳಿಗೆ ಶ್ರೀಗಣೇಶ ಚತುರ್ಥಿ, ಗೋಕುಲಾಷ್ಟಮಿ ಯಾವಾಗ ಇದೆಯೆಂದು ಹೇಳಬೇಕಾಗುತ್ತದೆ, ಆದರೆ ‘ಡೇ’ ಮಾತ್ರ ನೆನಪಿನಲ್ಲಿರುತ್ತದೆ. ಗೋಕುಲಾಷ್ಟಮಿಯು ರಾಜಕೀಯ ನಾಯಕರ ಕೃಪೆಯಿಂದ ಡಿಜೆಮಯ ಹಾಗೂ ಮದ್ಯ-ಮಯವಾಗಿದೆ. ತಾಯಿಯ ಉತ್ಸವವಾದರೂ (ನವರಾತ್ರ್ಯುತ್ಸವ) ಹಾಗಾಗಬಾರದು, ಎಂದು ಅನಿಸುತ್ತದೆ.

೨ ಉ. ನವರಾತ್ರಿಯ ಸಮಯದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಈ ಮೂರೂ ಸ್ವರೂಪದ ದೇವಿಯ ಉಪಾಸನೆ ಮಾಡಬೇಕು ! : ಚಂಡ ಮುಂಡ, ಶುಂಭ ನಿಶುಂಭ, ರಕ್ತಬೀಜ ಮುಂತಾದ ರಾಕ್ಷಸರನ್ನು ವಧಿಸಿ ಅವರ ಉಪಟಳವನ್ನು ಶಮನಗೊಳಿಸಿ ಜಗದಂಬೆಯು ವಿಶ್ರಾಂತಿ ತೆಗೆದುಕೊಂಡಿರುವ ಸಮಯವೆಂದರೆ ನವರಾತ್ರಿ ಆಗಿದೆ. ಈ ಯುದ್ಧದ ದಣಿವನ್ನು ಆರಿಸಲು ದೇವಿ ನೃತ್ಯ ಮಾಡಿದಳು, ಎಂದು ಪುರಾಣದಲ್ಲಿ ಉಲ್ಲೇಖವಿದೆ. (ನಾವು ಯುದ್ಧ ಮಾಡುವುದೇ ಇಲ್ಲ, ಕೇವಲ ಕುಣಿಯುತ್ತೇವೆ.)

ಈ ಸಮಯದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಈ ಮೂರೂ ರೂಪದ ದೇವಿಯ ಸೇವೆ ಮಾಡುವುದು ನಮ್ಮ ಪರಂಪರೆಗನುಸಾರ ನಂದಾದೀಪ, ಮಾಲಾಬಂಧನ ಇತ್ಯಾದಿ ಮೂಲಕ ಆಚರಿಸಬೇಕು. ಮಕ್ಕಳಿಂದ ಸರಸ್ವತಿದೇವಿಯ ಉಪಾಸನೆಯನ್ನು ವಿದ್ಯೆ ಮತ್ತು ಬುದ್ಧಿ ಲಾಭಕ್ಕಾಗಿ ಮಾಡಿಸಿಕೊಳ್ಳಬೇಕು. ಧನಧಾನ್ಯ ಸಮೃದ್ಧಿಗಾಗಿ ಮಹಾಲಕ್ಷ್ಮೀಯ ಉಪಾಸನೆ ಮಾಡಬೇಕು ಹಾಗೂ ಶತ್ರುಸಂಹಾರಕ್ಕೆ ಸಾಮರ್ಥ್ಯಪ್ರಾಪ್ತಿಗಾಗಿ ಮಹಾಕಾಳಿಯ ಉಪಾಸನೆ ಮಾಡಬೇಕು.

೨ ಊ. ನಟಿಯರಂತೆ ಕುಣಿಯುವ ಬದಲು ಯುವತಿಯರು ಪರಾಕ್ರಮಿಗಳಾಗಲು ಪ್ರಯತ್ನಿಸಬೇಕು ! : ಹುಡುಗಿಯರು ದಾಂಡಿಯಾ ಆಡುವ ಕಡೆಗೆ ಹೆಚ್ಚು ಗಮನ ಹರಿಸದೆ ವಿದ್ಯೆಯನ್ನು ಸಂಪಾದಿಸಿ ಉತ್ತಮ ಮಾರ್ಗದಲ್ಲಿ ಧನಸಂಪಾದನೆ ಮಾಡುವ ಮತ್ತು ಚುಡಾಯಿಸುವ ಗೂಂಡಾಗಳಿಗೆ ನಾಲ್ಕು ಬಾರಿಸುವ ಸಾಮರ್ಥ್ಯವನ್ನು ಅಂಗೀಕರಿಸಬೇಕು, ಇದಕ್ಕಾಗಿ ದೇವಿಯ ಮಹಾತ್ಮೆ ಮತ್ತು ಪರಾಕ್ರಮವನ್ನು ಓದಬೇಕು, ಇದೇ ಇಂದಿನ ಅವಶ್ಯಕತೆಯಾಗಿದೆ. ನಟಿಗಳ ಹಾಗೆ ಕುಣಿಯುವ ಬದಲು ಮಹಾಕಾಳಿಯ ಹಾಗೆ, ಝಾನ್ಸಿಯ ರಾಣಿಯ ಹಾಗೆ, ಕಿತ್ತೂರಿನ ಚೆನ್ನಮ್ಮಾ, ಜೀಜಾಬಾಯಿ ಇವರಂತಹ ಪರಾಕ್ರಮವನ್ನು ತೋರಿಸುವಕಾಲ ಇದಾಗಿದೆ ಹಾಗೂ ಅದರದ್ದೇ ಅವಶ್ಯಕತೆಯಿದೆ. ಕುಣಿಯವವರು ಬಹಳಷ್ಟಾಗಿದ್ದಾರೆ; ಆದರೆ ಪರಾಕ್ರಮಿಗಳು ಮಾತ್ರ ಕಡಿಮೆಯಾಗುತ್ತಿದ್ದಾರೆ.

೨ ಎ. ಯುವಕ-ಯುವತಿಯರಿಗೆ ಅಪಾಯದ ಅರಿವು ಮೂಡಿಸುವುದು ಕರ್ತವ್ಯವಾಗಿದೆ ! : ಈ ದಾಂಡಿಯಾ ಮತ್ತು ಗರಬಾದ ಕಾಲದಲ್ಲಿ ಕುಟುಂಬನಿಯೋಜನೆಯ ಸಾಧನಗಳ ಮಾರಾಟದ ಪ್ರಮಾಣ ಎರಡು ಪಟ್ಟಾಗುತ್ತದೆ ಹಾಗೂ ನಂತರ ಶಾಲೆಗಳ ಮತ್ತು ಮಹಾವಿದ್ಯಾಲಯಗಳ ಯುವತಿಯರ ಗರ್ಭಪಾತದ ಪ್ರಮಾಣವೂ ಹೆಚ್ಚುತ್ತಿದೆ. ಲವ್ ಜಿಹಾದ್‌ ಈ ಕಾಲದಲ್ಲಿಯೇ ಹರಡುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಈ ಅಪಾಯಗಳ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಆಗ ಈ ಮಾರ್ಕೇಟಿಂಗ್ ಮತ್ತು ಇವೆಂಟ್‌ಗಳಿಗೆ ಬಲಿಯಾಗದೆ ಸಾತ್ತ್ವಿಕವಾದ ಆನಂದದಿಂದ, ತಮ್ಮ ಪರಿಸ್ಥಿತಿಗನುಸಾರ ಜಗದಂಬೆಯ ಸೇವೆ ಮಾಡಿ ಹಾಗೂ ದೇವಿಯ ಕೃಪೆಯನ್ನು ಸಂಪಾದಿಸಿರಿ, ಇದೇ ವಿನಂತಿ !

– ವೇದಮೂರ್ತಿ ಭೂಷಣ ದಿಗಂಬರ್ ಜೋಶಿ, ವೆಂಗುರ್ಲೆ, (ಮಹಾರಾಷ್ಟ್ರ)

Leave a Comment