ಪುರಾಣದ ಕಥೆಗಳಿಂದ ಗಮನಕ್ಕೆ ಬಂದಂತಹ ದೇವಿಯ ವಿವಿಧ ಗುಣವೈಶಿಷ್ಟ್ಯಗಳು

ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತುತೇ ||

ಪಾರ್ವತಿದೇವಿ

ಅ. ಜಿಜ್ಞಾಸು ಮತ್ತು ಮುಮುಕ್ಷತ್ವದ ಪ್ರತೀಕವಾಗಿರುವ ಪಾರ್ವತಿದೇವಿ : ಪಾರ್ವತಿಮಾತೆಯು ಶಿವನ ಅರ್ಧಾಂಗಿನಿಯಾಗಿದ್ದರೂ ಶಿವನಿಂದ ಗೂಢಜ್ಞಾನವನ್ನು ಪಡೆದುಕೊಳ್ಳುವಾಗ ಪಾರ್ವತಿಯ ಭೂಮಿಕೆಯು ಓರ್ವ ಜಿಜ್ಞಾಸುವಿನಂತಿರುವುದು ಗಮನಕ್ಕೆ ಬರುತ್ತದೆ. ತೀವ್ರ ಜಿಜ್ಞಾಸೆಯಿಂದ ಪಾರ್ವತಿಮಾತೆಗೆ ಹಸಿವು-ನೀರಡಿಕೆ ಮತ್ತು ನಿದ್ರೆಯ ಅರಿವೂ ಇರುವುದಿಲ್ಲ. ಜ್ಞಾನಪ್ರಾಪ್ತಿಯ ತೀವ್ರ ಇಚ್ಛೆಯಿಂದ ಅವಳು ಶಿವನಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಇದರಿಂದಲೇ ಪ್ರಸಿದ್ಧ ಶಿವ-ಪಾರ್ವತಿಯರ ಸಂವಾದದ ಉಲ್ಲೇಖ ಪುರಾಣಗಳಲ್ಲಿರುವುದು ಕಂಡುಬರುತ್ತದೆ. ಪಾರ್ವತಿ ಸ್ವತಃ ಆದಿಶಕ್ತಿಯಾಗಿದ್ದರೂ, ಗುರುಸಮಾನವಿರುವ ಶಿವನಿಂದ ಜ್ಞಾನಾರ್ಜನೆಯನ್ನು ಮಾಡಲು ಅವಳು ಜಿಜ್ಞಾಸು ಮತ್ತು ಮುಮುಕ್ಷತ್ವದ ಮೂರ್ತಸ್ವರೂಪಗಳಾಗುತ್ತಾಳೆ. ಆದ್ದರಿಂದಲೇ ಶಿವನು ಪಾರ್ವತಿಗೆ ತಂತ್ರಶಾಸ್ತ್ರದ ಗೂಢ ಜ್ಞಾನವನ್ನು ನೀಡಿದನು.

ಆ. ಕಠೋರ ತಪಸ್ಸನ್ನು ಮಾಡಿರುವ ಪಾರ್ವತಿ ಮಾತೆಯು ಮಹಾನ್ ತಪಸ್ವಿನಿಯಾಗಿರುವುದರಿಂದಲೇ ಅವಳನ್ನು ಅಪರ್ಣಾ ಮತ್ತು ಬ್ರಹ್ಮಚಾರಿಣಿ ಎನ್ನುವ ಹೆಸರಿನಿಂದಲೂ ಸಂಬೋಧಿಸುವುದು : ಕಠೋರ ತಪಸ್ಸನ್ನು ಮಾಡಿ ಭಗವಂತನನ್ನು ಪ್ರಸನ್ನ ಮಾಡಿಕೊಳ್ಳುವ ಋಷಿ ಮುನಿಗಳಂತೆಯೇ, ಪಾರ್ವತಿ ಮಾತೆಯು ಶಿವಶಂಕರನನ್ನು ಪ್ರಸನ್ನ ಮಾಡಿಕೊಳ್ಳಲು ಕಠೋರ ತಪಸ್ಸನ್ನು ಮಾಡಿದ್ದಳು. ಕೇವಲ ಗಿಡಗಳ ಎಲೆಗಳನ್ನು ತಿಂದು ಬದುಕಿದ್ದರಿಂದ ಪಾರ್ವತಿಗೆ ಅಪರ್ಣಾ ಎಂಬ ಹೆಸರು ಪ್ರಾಪ್ತವಾಯಿತು.

ಪಾರ್ವತಿಯು ಹಿಮಾಲಯ ರಾಜನ ಕನ್ಯೆ ಮತ್ತು ರಾಜಕುಮಾರಿಯಾಗಿದ್ದಳು. ಅವಳು ಸುಕೋಮಲ ಸುಂದರಿಯಾಗಿದ್ದರೂ, ಶಿವನನ್ನು ಪ್ರಸನ್ನಗೊಳಿಸುವ ದೃಢ ನಿಶ್ಚಯ ಇರುವುದರಿಂದ ಅವಳು ದೇಹವನ್ನು ದಂಡಿಸಲು ಹಿಂಜರಿಯದೇ ಹಿಮದಿಂದ ಆವರಿಸಲ್ಪಟ್ಟಿದ್ದ ಪ್ರದೇಶದಲ್ಲಿ ವಿಶಿಷ್ಟ ಮುದ್ರೆಯನ್ನು ಧರಿಸಿ ದೀರ್ಘಕಾಲದ ವರೆಗೆ ತಪಸ್ಸನ್ನು ಮಾಡಿದಳು. ಅವಳ ತಪಸ್ಸು ಎಷ್ಟು ಉಗ್ರವಾಗಿತ್ತೆಂದರೆ ಅದರಿಂದ ನಿರ್ಮಾಣವಾದ ಜ್ವಾಲೆಯು ಸಂಪೂರ್ಣ ಬ್ರಹ್ಮಾಂಡದಲ್ಲಿ ಹರಡುತ್ತಿತ್ತು ಮತ್ತು ಸ್ವರ್ಗದ ಮೇಲೆ ಅಧಿಪತ್ಯ ಹೊಂದಿದ್ದ ತಾರಕಾಸುರನನ್ನು ಕೂಡ ಭಯಭೀತಗೊಳಿಸುವಂತಹದ್ದಾಗಿತ್ತು. ಪಾರ್ವತಿಯನ್ನು ವಧಿಸಲು ಅವಳ ಸಮೀಪ ಹೋದಂತಹ ತಾರಕಾಸುರನ ಸೈನಿಕರು ಅವಳ ಶಕ್ತಿಯನ್ನು ಸಹಿಸಲು ಸಾಧ್ಯವಾಗದೇ ಭಸ್ಮವಾದರು. ನವದುರ್ಗೆಯರಲ್ಲಿ ಬ್ರಹ್ಮಚಾರಿಣಿ ಈ ರೂಪವು ಕೈಯಲ್ಲಿ ಜಪಮಾಲೆಯನ್ನು ಹಿಡಿದು ಕೊಂಡು ತಪಸ್ಸಿನಲ್ಲಿ ನಿರತಳಾಗಿರುವ ಪಾರ್ವತಿಯ ಪ್ರತೀಕವಾಗಿದೆ. ಪಾರ್ವತಿಯನ್ನು ಅಪರ್ಣಾ ಮತ್ತು ಬ್ರಹ್ಮಚಾರಿಣಿಯೆಂದೂ ಸಂಬೋಧಿಸಲಾಗುತ್ತದೆ.

ಇ. ಸಮಸ್ಯೆಗೆ ಸ್ವತಃ ಉಪಾಯವನ್ನು ಕಂಡು ಹಿಡಿಯುವ ಸ್ವಯಂಪೂರ್ಣ ಪಾರ್ವತಿದೇವಿ : ಕೈಲಾಸದಲ್ಲಿ ವಾಸಿಸುತ್ತಿರುವಾಗ ಸ್ನಾನದ ಸಮಯದಲ್ಲಿ ಕಾವಲು ಕಾಯಲು ಪಾರ್ವತಿಯು ಅಂತಃಪ್ರೇರಣೆಯಿಂದ ಗಣಪತಿಯನ್ನು ನಿರ್ಮಿಸಿದಳು. ಸುರಕ್ಷತೆಯ ವೈಯಕ್ತಿಕ ಕಾರಣದಿಂದ ಗಣಪತಿಯನ್ನು ನಿರ್ಮಿಸಿದರೂ, ಪಾರ್ವತಿಯಿಂದ ಜಗತ್ತಿಗೆ ಆರಾಧ್ಯ ದೇವ ಶ್ರೀ ಗಣೇಶ ದೊರೆತಿರುವುದು ತ್ರಿವಾರ ಸತ್ಯವಾಗಿದೆ.

ದೇವಿ ಕೌಶಿಕಿಯ ನಿರ್ಮಿತಿ ಕೂಡ ಇಂತಹದೇ ಭಾವದಿಂದ ಆಗಿದೆ. ಸಮುದ್ರಮಂಥನದ ಸಮಯದಲ್ಲಿ ಮಂದರಾಚಲ ಪರ್ವತವು ತನ್ನಲ್ಲಿ ಹೀರಿಕೊಂಡಿದ್ದ ವಿಷದ ಪ್ರಭಾವದಿಂದ ಅದನ್ನು ಮುಕ್ತಗೊಳಿಸಲು ಶಿವನೊಂದಿಗೆ ಹೋದ ಪಾರ್ವತಿಯು ಮಂದರಾಚಲ ಪರ್ವತದ ಮೇಲೆ ತನ್ನ ಕರುಣಾಮಯ ಕೃಪಾದೃಷ್ಟಿಯನ್ನು ಬೀರಿದಳು. ಆಗ ಮಂದರಾಚಲದಿಂದ ಹೊರಸೂಸುವ ವಿಷಕಾರಿ ವಾಯುವನ್ನು ಶಿವಶಂಕರನು ಸ್ವತಃ ಹೀರಿಕೊಳ್ಳುತ್ತಿರುವಾಗ ಅದರ ಕೆಲವೊಂದು ಅಂಶಗಳು ಪಾರ್ವತಿಯ ಮೇಲೆ ಪರಿಣಾಮ ಬೀರಿ ಅವಳ ಬಣ್ಣವು ಕಪ್ಪಾಗುತ್ತದೆ. ಉಮೆಗೆ ಅವಳ ಗೌರವರ್ಣ ಅತ್ಯಂತ ಪ್ರಿಯವಾಗಿದ್ದ ಕಾರಣ, ಪುನಃ ಗೌರವರ್ಣ ಹೊಂದಲು ಬ್ರಹ್ಮದೇವನನ್ನು ಪ್ರಸನ್ನಗೊಳಿಸಲು ಕಠೋರ ತಪಸ್ಸನ್ನು ಪ್ರಾರಂಭಿಸುತ್ತಾಳೆ. ಅವಳ ತಪಶ್ಚರ್ಯೆಯಿಂದ ಪ್ರಸನ್ನರಾದ ಬ್ರಹ್ಮದೇವ ಅವಳಿಗೆ ಗೌರವರ್ಣವನ್ನು ಪುನಃ ದಯಪಾಲಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಅವಳ ಶ್ಯಾಮಲವರ್ಣದಿಂದ ‘ಕೌಶಿಕಿ’ ಹೆಸರಿನ ದೇವಿಯ ಉತ್ಪತ್ತಿ ಮಾಡಿದರು. ಈ ದೇವಿಯು ಮುಂದೆ ಶುಂಭ-ನಿಶುಂಭ ರಾಕ್ಷಸರನ್ನು ವಧಿಸಿದಳು. ಇದರಿಂದ ತನ್ನ ಶ್ಯಾಮಲವರ್ಣವನ್ನು ನಿಮಿತ್ತ ಮಾಡಿಕೊಂಡು ಪಾರ್ವತಿಯು ಸಂಪೂರ್ಣ ಜಗತ್ತಿಗೆ ತೊಂದರೆ ಕೊಡುತ್ತಿದ್ದ ಶುಂಭ-ನಿಶುಂಭ ರಾಕ್ಷಸರನ್ನು ಸಂಹರಿಸುವ ದೇವಿಯನ್ನು ನಿರ್ಮಿಸಿದಳು.

ಈ. ಅತಿ ಸಂವೇದನಶೀಲ ಮತ್ತು ಅತಿ ಕಠೋರ ಇವೆರಡೂ ವಿರುದ್ಧ ಗುಣಗಳನ್ನು ಹೊಂದಿರುವ ಪಾರ್ವತಿ : ಶ್ರೀ ಗಣೇಶನ ಶಿರಚ್ಛೇದ ಮಾಡಿರುವುದು ತಿಳಿದಾಗ ಪಾರ್ವತಿಯು ದುಃಖಿತಳಾಗಿ ಮರುಕ್ಷಣವೇ ನವದುರ್ಗೆಯ ಉಗ್ರ ರೂಪವನ್ನು ಧರಿಸಿ ದೇವತೆಗಳಿಗೆ ಕಠೋರವಾದ ಶಬ್ದಗಳನ್ನು ನುಡಿಯುತ್ತಾಳೆ. ಗಣಪತಿಗೆ ಆನೆಯ ಶಿರವನ್ನು ಜೋಡಿಸಿದ ಬಳಿಕ ಪಾರ್ವತಿಯ ಉಗ್ರ ರೂಪ ಶಾಂತವಾಗಿ ಅವಳು ಉಮೆಯ ರೂಪವನ್ನು ಧರಿಸುತ್ತಾಳೆ.

ದೇವಿ ಕೌಶಿಕಿಯ ಮೇಲೆ ಆಕ್ರಮಣ ಮಾಡಲು ಬಂದಂತಹ ಅಸುರರನ್ನು ದಂಡಿಸಲು ಪಾರ್ವತಿಯು ಚಂಡಿ, ಚಾಮುಂಡಾ ಮುಂತಾದ ಉಗ್ರ ರೂಪಗಳನ್ನು ಧರಿಸಿ ಅಸುರರನ್ನು ಸಂಹರಿಸುತ್ತಾಳೆ ಮತ್ತು ಮರುಕ್ಷಣವೇ ವಾತ್ಸಲ್ಯದ ಕಾರಣ ಪುತ್ರಿಯಂತಿರುವ ಕೌಶಿಕಿಯ ಕಾಳಜಿಯಿಂದ ವ್ಯಾಕುಲಳಾಗುತ್ತಾಳೆ. ಪಾರ್ವತಿಯಲ್ಲಿ ಅತಿ ಸಂವೇದನಶೀಲತೆ ಮತ್ತು ಅತಿ ಕಠೋರ ಈ ವಿರುದ್ಧ ಗುಣಗಳು ಒಂದೇ ಸಮಯದಲ್ಲಿ ಪ್ರಬಲವಾಗಿರುವುದು ಇದರಿಂದ ಅರಿವಾಗುತ್ತದೆ.

ಉ. ಎಲ್ಲರನ್ನೂ ಪೀಡಿಸುತ್ತಿದ್ದ ದುರ್ಗಮಾಸುರ ಮತ್ತು ಮಹಿಷಾಸುರರಂತಹ ದೈತ್ಯರನ್ನು ಆದಿಶಕ್ತಿಯ ಸ್ವರೂಪ ಪ್ರಕಟಗೊಳಿಸಿ ಸಂಹರಿಸುವುದು: ಯಾವಾಗಲೂ ಸೌಮ್ಯ ರೂಪವನ್ನು ಧರಿಸಿ ತಪಸ್ವಿನಿ ಜೀವನವನ್ನು ಜೀವಿಸುವ ಪಾರ್ವತಿದೇವಿಯು ಪ್ರಸಂಗ ಬಂದಲ್ಲಿ ಬ್ರಹ್ಮಾಂಡ ಮತ್ತು ದೇವತೆಗಳನ್ನು ಅಸುರಿ ಶಕ್ತಿಗಳ ತೊಂದರೆಯಿಂದ ರಕ್ಷಿಸಲು ಉಗ್ರ ರೂಪವನ್ನು ಧರಿಸಿರುವ ಅನೇಕ ಉದಾಹರಣೆಗಳು ಪುರಾಣದಲ್ಲಿ ಕಂಡುಬರುತ್ತದೆ.

ಬ್ರಹ್ಮದೇವರಿಂದ ಅಜೇಯತ್ವವನ್ನು ಪಡೆಯುವುದರೊಂದಿಗೆ ನಾಲ್ಕೂ ವೇದಗಳನ್ನು ತನ್ನದಾಗಿಸಿಕೊಂಡ ದುರ್ಗಮಾಸುರನಿಂದ ಧರ್ಮವು ಸಂಕಷ್ಟದಲ್ಲಿತ್ತು ಮತ್ತು ಎಲ್ಲೆಡೆಯೂ ಅಧರ್ಮ ಬಲವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ದೇವತೆಗಳ ಬಲವು ಕ್ಷೀಣಿಸಿತ್ತು. ಆಗ ದುರ್ಗಮಾಸುರನನ್ನು ಕೇವಲ ಸ್ತ್ರೀ ಶಕ್ತಿಯೇ ನಾಶಗೊಳಿಸ ಬಹುದಾಗಿತ್ತು. ಏಕೆಂದರೆ ದೇವತೆಗಳಿಂದ ಸಾವಿಲ್ಲದ ವರವನ್ನು ದುರ್ಗಮಾಸುರನು ಪಡೆದಿದ್ದನು. ಆಗ ಪಾರ್ವತಿಯು ಆದಿಶಕ್ತಿಯ ಸ್ವರೂಪವನ್ನು ಪ್ರಕಟಗೊಳಿಸುತ್ತ ಶ್ರೀ ದುರ್ಗಾದೇವಿಯ ರೂಪವನ್ನು ಧರಿಸಿದಳು ಮತ್ತು ದುರ್ಗಮಾಸುರನೊಂದಿಗೆ ಘನಘೋರ ಯುದ್ಧವನ್ನು ಮಾಡಿ ಅವನನ್ನು ವಧಿಸಿದಳು.

ಇದೇ ರೀತಿ ಸೋಲು ಕಾಣದ ಯೋಧ ಮತ್ತು ಬಲಾಢ್ಯ ರಾಕ್ಷಸ ಶಕ್ತಿಯನ್ನು ಹೊಂದಿದ್ದ ಮಹಿಷಾಸುರನನ್ನು ವಧಿಸಲು ಪಾರ್ವತಿ, ಲಕ್ಷ್ಮೀ ಮತ್ತು ಸರಸ್ವತಿ ಈ ಮೂರೂ ಶಕ್ತಿಗಳು ಒಂದಾಗಿ ಮಹಿಷಾಸುರಮರ್ದಿನಿ ದೇವಿ ನಿರ್ಮಾಣವಾದಳು. ಮಾಯಾವಿ ಶಕ್ತಿಯ ಸಹಾಯದಿಂದ ಯುದ್ಧ ಮಾಡುವ ಮಹಿಷಾಸುರನನ್ನು ಸೋಲಿಸಿ ದೇವಿಯು ಅವನ ಶಿರಚ್ಛೇದ ಮಾಡಿದಳು. ಅದೇ ರೀತಿ ಪಾರ್ವತಿಯು ಚಾಮುಂಡಾ ರೂಪವನ್ನು ಧರಿಸಿ ಚಂಡ-ಮುಂಡ ದೈತ್ಯರನ್ನು ಸಂಹರಿಸಿದಳು ಮತ್ತು ಕಾಳಿಯ ರೂಪವನ್ನು ಧರಿಸಿ ಅಸಂಖ್ಯಾತ ಅಸುರರನ್ನು ವಧಿಸಿ ದೇವತೆಗಳನ್ನು ರಕ್ಷಿಸಿದಳು.

ಊ. ಕರುಣಾಮಯಿ ದೇವಿಯು ಪೃಥ್ವಿಯ ಮೇಲಿರುವ ಎಲ್ಲ ಜೀವಿಗಳಿಗಾಗಿ ಶತಾಕ್ಷಿ ಮತ್ತು ಶಾಖಾಂಬರಿ ರೂಪವನ್ನು ಧರಿಸಿ ಕೃಪೆ ಮಾಡುವುದು : ದುರ್ಗಮಾಸುರನು ವೇದಗಳನ್ನು ಪಾತಾಳದಲ್ಲಿ ಅಡಗಿಸಿ ಇಟ್ಟಿದ್ದರಿಂದ ಧರ್ಮದ ಲೋಪವಾಯಿತು. ಯಜ್ಞಯಾಗ ಮತ್ತು ಉಪಾಸನೆಗಳಲ್ಲಿ ವ್ಯತ್ಯಯವುಂಟಾಗಿದ್ದರಿಂದ ದೇವತೆಗಳಿಗೆ ಅವರ ಪಾಲಿನ ಹವಿಸ್ಸು ದೊರೆಯದಂತಾಯಿತು. ಇದರಿಂದ ದೇವತೆಗಳ ಶಕ್ತಿಯೂ ಕ್ಷೀಣಿಸಿತು. ಇದರಿಂದ ದೇವತೆಗಳು ಪೃಥ್ವಿಗೆ ಮಾಡುತ್ತಿದ್ದ ಅವರ ಕೃಪಾಶೀರ್ವಾದ ನಿಂತಿದ್ದರಿಂದ ಪೃಥ್ವಿಯ ಮೇಲೆ ಭೀಕರ ಬರಗಾಲ ಬಂದಿತು. ನದಿ ನೀರಿನ ಮೂಲಗಳು ಬತ್ತಿ ಹೋದವು. ಆಗ ಪೃಥ್ವಿಯ ಮೇಲೆ ಮರಣೋನ್ಮುಖ ಸ್ಥಿತಿಯಲ್ಲಿದ್ದ ಜೀವಿಗಳ ದುರ್ದೆಶೆಯನ್ನು ನೋಡಿ ಮಹಿಷಾಸುರಮರ್ದಿನಿ ಮಾತೆಯ ಕಣ್ಣುಗಳಲ್ಲಿ ನೀರು ಚಿಮ್ಮಿತು ಮತ್ತು ಅವಳಿಂದ ಶತಾಕ್ಷಿದೇವಿಯ ನಿರ್ಮಿತಿಯಾಯಿತು. ನೂರು ಕಣ್ಣುಗಳುಳ್ಳ ಈ ದೇವಿಯ ಕಣ್ಣುಗಳಿಂದ ಹರಿಯುವ ಅಶ್ರುಧಾರೆ ಪೃಥ್ವಿಯ ಮೇಲೆ ಬಂದಿತು ಮತ್ತು ಅವುಗಳು ನದಿಯ ರೂಪವನ್ನು ಧರಿಸಿದವು. ಈ ರೀತಿ ಎಲ್ಲೆಡೆಯೂ ನೀರು ಲಭ್ಯವಾಯಿತು. ಬಳಿಕ ದೇವಿಯ ಅಂಶದಿಂದ ಶಾಕಾಂಬರಿದೇವಿಯ ನಿರ್ಮಾಣವಾಯಿತು. ತನ್ನ ಕೃಪೆಯಿಂದ ಪೃಥ್ವಿಯ ಮೇಲೆ ಎಲ್ಲೆಡೆಯೂ ಶಾಕ ಅಂದರೆ ಕಾಯಿಪಲ್ಲೆ ಮತ್ತು ಹಣ್ಣು ಹಂಪಲಗಳನ್ನು ನಿರ್ಮಾಣ ಮಾಡಿದಳು. ಈ ರೀತಿ ಪೃಥ್ವಿಯ ಮೇಲಿನ ಜೀವಿಗಳಿಗಾಗಿ ನೀರು ಮತ್ತು ಶಾಕ ದೊರೆಯುವಂತೆ ಮಾಡಿ ಪೃಥ್ವಿಯ ಮೇಲಿನ ಬರಗಾಲದ ಸಂಕಟ ನಿವಾರಣೆಯಾಯಿತು.

ಸರಸ್ವತಿಮಾತೆ

ಅ. ಬ್ರಹ್ಮದೇವರಿಂದ ವರದಾನವನ್ನು ಪಡೆಯುವಾಗ ಕುಂಭಕರ್ಣನಿಗೆ ಇಂದ್ರಾಸನವನ್ನು ಪಡೆಯುವ ಇಚ್ಛೆಯಿತ್ತು; ಆದರೆ ದೇವತೆಗಳ ಪ್ರಾರ್ಥನೆಯಿಂದ ಮಹಾಸರಸ್ವತಿ ದೇವಿಯು ಕುಂಭಕರ್ಣನ ನಾಲಿಗೆಯ ಮೇಲೆ ವಿರಾಜಮಾನಳಾದಳು. ಇದರಿಂದ ಕುಂಭಕರ್ಣನು ಇಂದ್ರಾಸನದ ಬದಲಾಗಿ ನಿದ್ರಾಸನದ ವರವನ್ನು ಕೇಳಿಕೊಂಡನು.

ಆ. ತಾರಕಾಸುರನ ಮೂರು ತಾರಕ ಪುತ್ರರನ್ನು ಹೇಗೆ ಸಂಹರಿಸಬೇಕು ? ಎನ್ನುವ ಪ್ರಶ್ನೆ ಎಲ್ಲ ದೇವತೆಗಳಿಗೆ ಎದುರಾದಾಗ ಶ್ರೀಹರಿ ವಿಷ್ಣು ಅವರಿಗೆ ಧರ್ಮದಿಂದ ವಿಮುಖವಾಗುವ ದಿಶೆಯಲ್ಲಿ ಪ್ರವೃತ್ತರನ್ನಾಗಿ ಮಾಡುವ ಉಪಾಯವನ್ನು ಹೇಳಿದನು. ಯಾವ ರೀತಿ ಧರ್ಮವಿಮುಖರನ್ನಾಗಿ ಮಾಡುವುದು ? ಎಂದು ಮಾತೆ ಸರಸ್ವತಿಯು ನಾರದ ಮುನಿಗಳಿಗೆ ಮಾರ್ಗದರ್ಶನ ಮಾಡಿ ದೇವತೆಗಳಿಗೆ ಸಹಾಯ ಮಾಡಿದಳು.

ಲಕ್ಷ್ಮೀ ದೇವಿ

ಶಿವನ ಅಂಶದಿಂದ ಮತ್ತು ಸಮುದ್ರದಿಂದ ಉತ್ಪನ್ನವಾಗಿದ್ದ ಜಾಲಂಧರ ರಾಕ್ಷಸನು ದೇವತೆಗಳನ್ನು ಪೀಡಿಸತೊಡಗಿದನು. ಲಕ್ಷ್ಮೀಯ ಜನ್ಮವೂ ಸಮುದ್ರ ಮಂಥನದಿಂದ ಆಗಿದ್ದರಿಂದ ಆ ಸಂಬಂಧದಿಂದ ಜಾಲಂಧರನು ಲಕ್ಷ್ಮೀದೇವಿಯ ತಮ್ಮನಾಗಿದ್ದನು. ಆದರೆ ಅವನು ದೇವತೆಗಳನ್ನು ಪೀಡಿಸುತ್ತಿದ್ದನಲ್ಲದೇ, ಅವನ ಮನಸ್ಸಿನಲ್ಲಿ ಪಾರ್ವತಿ ದೇವಿಯ ಬಗ್ಗೆ ಕಾಮವಾಸನೆಯ ಅಧರ್ಮಿ ವಿಚಾರವಿರುವುದರಿಂದ, ಅವನ ಸಂಹಾರವಾಗಬೇಕೆಂಬ ತನ್ನಿಚ್ಛೆಯನ್ನು ಲಕ್ಷ್ಮೀಯು ಶ್ರೀಹರಿ ವಿಷ್ಣುವಿನಲ್ಲಿ ವ್ಯಕ್ತಪಡಿಸಿದಳು. ಇದರಿಂದ ಲಕ್ಷ್ಮೀ ದೇವಿಯು ತತ್ತ್ವನಿಷ್ಠಳಾಗಿದ್ದು, ಅವಳು ಅಧರ್ಮದಿಂದ ನಡೆದುಕೊಳ್ಳುವ ತನ್ನ ಸ್ವಂತ ಸಹೋದರನನ್ನು ಬೆಂಬಲಿಸದೇ, ದೇವತೆಗಳ ಪರವಾಗಿ ನಿರ್ಣಯವನ್ನು ನೀಡಿ ತನ್ನ ಧರ್ಮಕರ್ತವ್ಯವನ್ನು ಪೂರೈಸಿ, ಆದರ್ಶ ಉದಾಹರಣೆಯನ್ನು ಜಗತ್ತಿನೆದುರಿಗೆ ಮಂಡಿಸಿದಳು.

ದುರ್ಗಾಮಾತೆ

ತ್ರೇತಾಯುಗದಲ್ಲಿ ಶ್ರೀರಾಮನು ನವರಾತ್ರಿಯ ಕಾಲಾವಧಿಯಲ್ಲಿ ದೇವಿಯ ಉಪಾಸನೆಯನ್ನು ಮಾಡಿದನು ಮತ್ತು ದೇವಿ ಕೃಪಾಶೀರ್ವಾದದಿಂದಲೇ ವಿಜಯದಶಮಿಯಂದು ರಾವಣನನ್ನು ವಧಿಸಿದನು.

ದ್ವಾಪರಯುಗದಲ್ಲಿಯೂ ಶ್ರೀಕೃಷ್ಣನ ಪ್ರೇರಣೆಯಿಂದ ಅರ್ಜುನನು ಮಹಾಭಾರತದ ಯುದ್ಧವನ್ನು ಪ್ರಾರಂಭಿಸುವ ಮೊದಲು ಶ್ರೀ ದುರ್ಗಾದೇವಿಗೆ ಶರಣಾಗಿ ಪ್ರಾರ್ಥಿಸಿದನು. ಶ್ರೀ ದುರ್ಗಾದೇವಿಯು ಪ್ರಸನ್ನಳಾಗಿ ಅರ್ಜುನನಿಗೆ ಜಯಶಾಲಿಯಾಗುವಂತೆ ಆಶೀರ್ವದಿಸಿದಳು. ಶ್ರೀ ದುರ್ಗಾ ದೇವಿಯ ಕೃಪೆಯ ಕವಚವನ್ನು ಧರಿಸಿಯೇ ಅರ್ಜುನನು ಮಹಾಭಾರತದ ಯುದ್ಧವನ್ನು ಮಾಡಿ ಜಯಶಾಲಿಯಾದನು.

Leave a Comment