ಬಲಮುರಿ ಮತ್ತು ಎಡಮುರಿ ಗಣಪತಿಯ ವಿಶೇಷತೆ

ಬಲಗಡೆಯ ಸೊಂಡಿಲು

 

ಬಲಬದಿಗೆ ಸೊಂಡಿಲಿರುವ (ಬಲಮುರಿ) ಗಣಪತಿಯ ಮೂರ್ತಿ ಎಂದರೆ ದಕ್ಷಿಣಾಭಿಮುಖಿಮೂರ್ತಿ. ದಕ್ಷಿಣ ಎಂದರೆ ದಕ್ಷಿಣ ದಿಕ್ಕು ಅಥವಾ ಬಲಬದಿ. ದಕ್ಷಿಣ ದಿಕ್ಕು ಯಮಲೋಕದ ಕಡೆಗೆ ಕರೆದೊಯ್ಯುವುದಾಗಿದೆ ಮತ್ತು ಬಲಬದಿಯಲ್ಲಿ ಸೂರ್ಯನಾಡಿಯಿದೆ. ಯಾರು ಯಮಲೋಕದ ದಿಕ್ಕನ್ನು ಎದುರಿಸಬಲ್ಲರೋ ಅವರು ಶಕ್ತಿಶಾಲಿಯಾಗಿರುತ್ತಾರೆ. ಹಾಗೆಯೇ ಸೂರ್ಯನಾಡಿಯು ಕಾರ್ಯನಿರತವಾಗಿರುವವನು ತೇಜಸ್ವಿಯಾಗಿರುತ್ತಾನೆ. ಇವೆರಡೂ ಅರ್ಥಗಳಲ್ಲಿ ಬಲಗಡೆಗೆ ಸೊಂಡಿಲಿರುವ ಗಣಪತಿಯನ್ನು ‘ಜಾಗೃತ’ ಗಣಪತಿ ಎಂದು ಹೇಳುತ್ತಾರೆ. ದಕ್ಷಿಣ ದಿಕ್ಕಿನಲ್ಲಿರುವ ಯಮಲೋಕದಲ್ಲಿ ಪಾಪ-ಪುಣ್ಯಗಳ ಪರಿಶೋಧನೆ ಆಗುತ್ತದೆ, ಆದುದರಿಂದ ದಕ್ಷಿಣ ದಿಕ್ಕು ನಮಗೆ ಬೇಡವೆನಿಸುತ್ತದೆ. ಮೃತ್ಯುವಿನ ನಂತರ ದಕ್ಷಿಣ ದಿಕ್ಕಿಗೆ ಹೋದಾಗ ಯಾವ ರೀತಿಯ ಪರಿಶೋಧನೆಯಾಗುತ್ತದೆಯೋ, ಅದೇ ರೀತಿಯ ಪರಿಶೋಧನೆಯು ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತರೆ ಅಥವಾ ಕಾಲುಚಾಚಿ ಮಲಗಿದರೆ ಆಗುತ್ತದೆ. ದಕ್ಷಿಣಾಭಿಮುಖಿಮೂರ್ತಿಯ ಪೂಜೆಯನ್ನು ನಿತ್ಯದ ಪದ್ಧತಿಯಂತೆ ಮಾಡುವುದಿಲ್ಲ. ಏಕೆಂದರೆ, ದಕ್ಷಿಣದಿಂದ ‘ತಿರ್ಯಕ್’ (ರಜ-ತಮ) ಲಹರಿಗಳು ಬರುತ್ತವೆ. ಇಂತಹ ಮೂರ್ತಿಯ ಪೂಜೆಯನ್ನು, ಕರ್ಮಕಾಂಡದಲ್ಲಿನ ಎಲ್ಲ ಪೂಜಾವಿಧಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಡಬೇಕಾಗುತ್ತದೆ. ಅದರಿಂದ ಸಾತ್ತ್ವಿಕತೆಯು ಹೆಚ್ಚುತ್ತದೆ ಮತ್ತು ದಕ್ಷಿಣ ದಿಕ್ಕಿನಿಂದ ಬರುವ ರಜ-ತಮ ಲಹರಿಗಳಿಂದ ತೊಂದರೆಯಾಗುವುದಿಲ್ಲ.

ಎಡಗಡೆಯ ಸೊಂಡಿಲು

 

ಎಡಬದಿಗೆ ಸೊಂಡಿಲಿರುವ ಮೂರ್ತಿ (ಎಡಮುರಿ) ಎಂದರೆ ವಾಮಮುಖಿ ಗಣಪತಿ. ವಾಮ ಎಂದರೆ ಎಡಬದಿ ಅಥವಾ ಉತ್ತರದಿಕ್ಕು. ಎಡಬದಿಗೆ ಚಂದ್ರನಾಡಿಯು ಇರುತ್ತದೆ ಮತ್ತು ಅದು ಶೀತಲತೆಯನ್ನು ಕೊಡುತ್ತದೆ, ಹಾಗೆಯೇ ಉತ್ತರ ದಿಕ್ಕು ಅಧ್ಯಾತ್ಮಕ್ಕೆ ಪೂರಕವಾಗಿದೆ, ಆನಂದದಾಯಕವಾಗಿದೆ; ಆದುದರಿಂದಲೇ ವಾಮಮುಖಿ (ಎಡಮುರಿ) ಗಣಪತಿಯನ್ನು ಪೂಜೆಯಲ್ಲಿ ಇಡುತ್ತಾರೆ. ಈ ಗಣಪತಿಯ ಪೂಜೆಯನ್ನು ದಿನನಿತ್ಯದ ಪೂಜೆಯಂತೆ ಮಾಡುತ್ತಾರೆ.

(ಹೆಚ್ಚಿನ ಮಾಹಿತಿಗೆ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ’)

Leave a Comment

Download ‘Ganesh Puja and Aarti’ App