ಅಕ್ಷಯ ತೃತೀಯಾದ ಬಗ್ಗೆ ನಿಮಗಿವು ತಿಳಿದಿದೆಯೇ ?

೧. ಮಹತ್ವ

ಅ. ಅಕ್ಷಯ ತೃತೀಯಾದಂದು ಇಡೀ ದಿನ ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.

ಆ. ಈ ದಿನದಂದು ಹಯಗ್ರೀವ ಅವತಾರ, ನರನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ.

ಇ. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಯ ಮೇಲೆ ಬರುತ್ತವೆ. ಆದುದರಿಂದ ಪೃಥ್ವಿಯ ಮೇಲಿನ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲಮಹಾತ್ಮೆಯಿಂದಾಗಿ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮಕಾರ್ಯಗಳನ್ನು ಮಾಡಿದರೆ ಅವು ಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

ಈ. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ) ವಾಗುತ್ತವೆ. (ಆಧಾರ : ‘ಮದನರತ್ನ’)

೨. ಅಕ್ಷಯ ತೃತೀಯಾದಂದು ಮಾಡಬೇಕಾದ ಕೃತಿಗಳು

ಅ. ಪವಿತ್ರ ಜಲದಲ್ಲಿ ಸ್ನಾನ : ಈ ದಿನ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಬೇಕು, ಸಾಧ್ಯವಿಲ್ಲದಿದ್ದರೆ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.

ಆ. ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ : ಅಕ್ಷಯ ತೃತೀಯಾ ದಂದು ಸತತವಾಗಿ ಸುಖ-ಸಮೃದ್ಧಿಯನ್ನು ಪ್ರಾಪ್ತ ಮಾಡಿ ಕೊಡುವ ದೇವತೆಯ ಮೇಲೆ ಕೃತಜ್ಞತೆಯ ಭಾವವನ್ನಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವತೆಯ ಕೃಪಾದೃಷ್ಟಿಯು ಯಾವತ್ತೂ ಕ್ಷಯವಾಗುವುದಿಲ್ಲ. ಈ ದಿನ ಶ್ರೀವಿಷ್ಣುವಿನೊಂದಿಗೆ ವೈಭವ ಲಕ್ಷ್ಮೀಯ ಪ್ರತಿಮೆಯನ್ನು ಕೃತಜ್ಞತೆಯ ಭಾವವನ್ನಿಟ್ಟು ಭಕ್ತಿಭಾವದಿಂದ ಪೂಜಿಸಬೇಕು. ಈ ದಿನವನ್ನು ಹೋಮ ಹವನ ಮತ್ತು ಜಪ ಮಾಡುತ್ತ ಕಳೆಯಬೇಕು.

ಇ. ಅಕ್ಷಯ ತೃತೀಯಾದಂದು ಶ್ರೀವಿಷ್ಣುವಿನ ತತ್ತ್ವವನ್ನು ಆಕರ್ಷಿ ಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು.

೩. ಎಳ್ಳುನೀರಿನಿಂದ ತರ್ಪಣ ಏಕೆ ಮಾಡುತ್ತಾರೆ ?

ಅ. ಎಳ್ಳುನೀರಿನ ತರ್ಪಣವೆಂದರೆ ದೇವತೆಗಳು ಮತ್ತು ಪೂರ್ವಜ ರಿಗೆ ಎಳ್ಳು ಮತ್ತು ನೀರನ್ನು ಅರ್ಪಿಸುವುದು. ಎಳ್ಳು ಸಾತ್ತ್ವಿಕತೆಯ ಪ್ರತೀಕವಾಗಿದೆ ಮತ್ತು ನೀರು ಬ್ರಹ್ಮಾಂಡದಲ್ಲಿನ ಶುದ್ಧ ಸ್ರೋತದ ಪ್ರತೀಕವಾಗಿದೆ.

ಆ. ಎಳ್ಳಿನಂತಹ ಸಾತ್ತ್ವಿಕ ಘಟಕದ ಮಾಧ್ಯಮದಿಂದ ತರ್ಪಣ ಕೊಡುವುದರಿಂದ ದೇವತೆಗಳು ಮತ್ತು ಪಿತೃಗಳು ಸಂತುಷ್ಟರಾಗುತ್ತಾರೆ ಮತ್ತು ಅವರ ಆಶೀರ್ವಾದ ಸಿಗುತ್ತದೆ.

ಇ. ನೀರು ಶುದ್ಧತೆಯ ಪ್ರತೀಕವಾಗಿರುವುದರಿಂದ ಜಲ ತರ್ಪಣ ಮಾಡುವವರ ಪಾಪ ನಾಶವಾಗುತ್ತದೆ. (ಆವಶ್ಯಕತೆ ಅನಿಸಿದರೆ ಎಳ್ಳುನೀರಿನ ತರ್ಪಣ ವಿಧಿಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪುರೋಹಿತರಲ್ಲಿ ಕೇಳಿಕೊಳ್ಳಬೇಕು.)

೪. ದಾನ

ಅಕ್ಷಯ ತೃತೀಯಾದಂದು ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅದಕ್ಕೆ ತಕ್ಕ ಫಲ ಖಂಡಿತವಾಗಿಯೂ ಸಿಗುತ್ತದೆ.

೪ ಅ. ಸತ್ಪಾತ್ರೆ ದಾನವನ್ನು ಏಕೆ ಮಾಡಬೇಕು ? : ಅಕ್ಷಯ ತೃತೀಯಾದಂದು ಮಾಡಿದ ದಾನದಿಂದ ವ್ಯಕ್ತಿಯ ಪುಣ್ಯಸಂಗ್ರಹ ಹೆಚ್ಚಾಗುತ್ತದೆ. ಪುಣ್ಯದಿಂದ ವ್ಯಕ್ತಿಗೆ ಸ್ವರ್ಗಪ್ರಾಪ್ತಿಯಾಗುತ್ತದೆ; ಆದರೆ ಸ್ವರ್ಗ ಸುಖವನ್ನು ಭೋಗಿಸಿದ ನಂತರ ಪುನಃ ಪೃಥ್ವಿಯ ಮೇಲೆ ಜನಿಸ ಬೇಕಾಗುತ್ತದೆ. ಮನುಷ್ಯನ ನಿಜವಾದ ಧ್ಯೇಯವು ‘ಪುಣ್ಯವನ್ನು ಗಳಿಸಿ ಸ್ವರ್ಗಪ್ರಾಪ್ತಿ ಮಾಡುವುದಲ್ಲ’, ‘ಪಾಪ-ಪುಣ್ಯಗಳ ಆಚೆಗೆ ಹೋಗಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಾಗಿದೆ’. ಆದ್ದರಿಂದ ಮನುಷ್ಯನು ಸತ್ಪಾತ್ರರಿಗೆ ದಾನ ಮಾಡುವುದು ಆವಶ್ಯಕವಾಗಿದೆ. ಸತ್ಪಾತ್ರೆ ದಾನ ಮಾಡುವುದರಿಂದ ದಾನದ ಕರ್ಮವು ಅಕರ್ಮ ಕರ್ಮ (ಅಕರ್ಮ ಕರ್ಮವೆಂದರೆ ಪಾಪ-ಪುಣ್ಯದ ಲೆಕ್ಕಾಚಾರ ಅನ್ವಯವಾಗದಿರುವುದು.) ವಾಗುವುದರಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ, ಅಂದರೆ ಅವನು ಸ್ವರ್ಗಲೋಕಕ್ಕೆ ಹೋಗದೇ ಅದಕ್ಕಿಂತಲೂ ಮುಂದಿನ ಉಚ್ಚ ಲೋಕಗಳಿಗೆ ಹೋಗುತ್ತಾನೆ. ಸಂತರಿಗೆ, ಧಾರ್ಮಿಕ ಕಾರ್ಯವನ್ನು ಮಾಡುವ ವ್ಯಕ್ತಿಗಳಿಗೆ, ಸಮಾಜದಲ್ಲಿ ಧರ್ಮ ಪ್ರಸಾರವನ್ನು ಮಾಡುವ ಆಧ್ಯಾತ್ಮಿಕ ಸಂಸ್ಥೆಗಳಿಗೆ ಮತ್ತು ರಾಷ್ಟ್ರ ಮತ್ತು ಧರ್ಮ ಜಾಗೃತಿಗಾಗಿ ಕಾರ್ಯ ಮಾಡುವ ಧರ್ಮಾಭಿಮಾನಿಗಳಿಗೆ ಅರ್ಪಣೆ ನೀಡುವುದು (ದಾನ ಕೊಡುವುದು) ‘ಸತ್ಪಾತ್ರೇ ದಾನ’ವಾಗಿದೆ.

೫. ಮೃತ್ತಿಕಾಪೂಜೆ, ಮಣ್ಣಿನಲ್ಲಿ ಹೊಂಡಗಳನ್ನು ಮಾಡುವುದು, ಬೀಜಗಳ ಬಿತ್ತನೆ ಮತ್ತು ಗಿಡಗಳನ್ನು ನೆಡುವುದು.

‘ಯುಗಾದಿ’ಯ ಶುಭಮುಹೂರ್ತದಂದು ಊಳಿದ ಹೊಲದ ಸಾಗುವಳಿಯ ಕೆಲಸವನ್ನು ಅಕ್ಷಯ ತೃತೀಯಾದ ಒಳಗೆ ಪೂರ್ಣ ಗೊಳಿಸಬೇಕು. ಅಕ್ಷಯ ತೃತೀಯಾದಂದು ಸಾಗುವಳಿ ಮಾಡಿದ ಜಮೀನಿನಲ್ಲಿರುವ ಮಣ್ಣನ್ನು ಕೃತಜ್ಞತೆಯ ಭಾವದಿಂದ ಪೂಜಿಸಬೇಕು. ಅನಂತರ ಪೂಜಿಸಿದ ಮಣ್ಣಿನಲ್ಲಿ ಹೊಂಡಗಳನ್ನು ಮಾಡಬೇಕು ಮತ್ತು ಆ ಹೊಂಡಗಳಲ್ಲಿ ಬೀಜಗಳನ್ನು ಬಿತ್ತಬೇಕು. ಅಕ್ಷಯ ತೃತೀಯಾದ ಮುಹೂರ್ತದಲ್ಲಿ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರೆ ಆ ದಿನ ವಾತಾವರಣದಲ್ಲಿ ಕಾರ್ಯನಿರತವಾಗಿರುವ ದೈವೀ ಶಕ್ತಿಯು ಬೀಜಗಳಲ್ಲಿ ಬರುವುದರಿಂದ ಸಮೃದ್ಧವಾದ ಫಸಲು ಬರುತ್ತದೆ. ಇದೇ ರೀತಿಯಲ್ಲಿ ಅಕ್ಷಯ ತೃತೀಯಾದಂದು ಹೊಂಡಗಳನ್ನು ಮಾಡಿ ಗಿಡಗಳನ್ನು ನೆಟ್ಟರೆ ಹಣ್ಣಿನ ತೋಟವೂ ಹೇರಳವಾದ ಉತ್ಪಾದನೆಯನ್ನು ನೀಡುತ್ತದೆ.

೬. ಅರಿಶಿನ ಕುಂಕುಮ

ಸ್ತ್ರೀಯರಿಗೆ ಈ ದಿನವು ಮಹತ್ವದ್ದಾಗಿರುತ್ತದೆ. ಚೈತ್ರದಲ್ಲಿ ಪ್ರತಿಷ್ಠಾಪಿಸಿದ ಚೈತ್ರಗೌರಿಯನ್ನು ಅವರಿಗೆ ವಿಸರ್ಜಿಸಬೇಕಾಗಿರುತ್ತದೆ. ಇದಕ್ಕಾಗಿ ಅವರು ಅರಿಶಿನ ಕುಂಕುಮದ ಕಾರ್ಯಕ್ರಮವನ್ನು ಮಾಡುತ್ತಾರೆ.

 

(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು)

ಈ ದಿನ ಅಂದರೆ ವೈಶಾಖ ಶುಕ್ಲ ಪಕ್ಷ ತೃತೀಯಾದಂದು “ಪರಶುರಾಮ ಜಯಂತಿ”ಯೂ ಇರುತ್ತದೆ. ಈ ಲೇಖನವನ್ನೂ ವಿವರವಾಗಿ ಇಲ್ಲಿ ಓದಿ – sanatan.org/kannada

Leave a Comment