ಮಾರುತಿ

ಜನ್ಮದ ಇತಿಹಾಸ

ರಾಜಾ ದಶರಥನು ಪುತ್ರಪ್ರಾಪ್ತಿಗಾಗಿ ‘ಪುತ್ರಕಾಮೇಷ್ಟಿ ಯಜ್ಞ’ವನ್ನು ಮಾಡಿದನು. ಆಗ ಯಜ್ಞದಿಂದ ಅಗ್ನಿದೇವನು ಪ್ರತ್ಯಕ್ಷನಾಗಿ ದಶರಥನ ರಾಣಿಯರಿಗಾಗಿ ಪಾಯಸ (ಖೀರು, ಯಜ್ಞದಲ್ಲಿನ ಉಳಿದ ಪ್ರಸಾದ) ವನ್ನು ನೀಡಿದನು. ದಶರಥನ ರಾಣಿಯರಂತೆಯೇ ತಪಸ್ಸನ್ನು ಮಾಡುವ ಅಂಜನೀಗೂ ಪಾಯಸವು ದೊರಕಿತ್ತು ಮತ್ತು ಅದರಿಂದಲೇ ಮಾರುತಿಯ ಜನ್ಮವಾಗಿತ್ತು. ಆ ದಿನ ಚೈತ್ರ ಪೌರ್ಣಿಮೆಯಾಗಿತ್ತು. ಈ ದಿನವನ್ನು ‘ಹನುಮಾನ್ ಜಯಂತಿ’ ಎಂದು ಆಚರಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ (ಕಿಷ್ಕಿಂಧಾಕಾಂಡ, ಅಧ್ಯಾಯ ೬೬)

ಹನುಮಂತ ಜಯಂತಿ

ತಿಥಿ : ಕೆಲವು ಪಂಚಾಂಗಗಳ ಪ್ರಕಾರ ಆಶ್ವಯುಜ ಕೃಷ್ಣ ಚತುರ್ದಶಿಯು ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ ಚೈತ್ರ ಹುಣ್ಣಿಮೆಯು ಹನುಮಂತನ ಜನ್ಮತಿಥಿಯಾಗಿದೆ. ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.

ಹನುಮಾನ ಜಯಂತಿಯ ಮಂತ್ರಸಹಿತ ಪೂಜಾವಿಧಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !

ಮಹತ್ವ : ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ‘ಶ್ರೀ ಹನುಮತೇ ನಮಃ|’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ : ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ.

ಶ್ರೀ ರಾಮದಾಸ ಸ್ವಾಮಿ ವಿರಚಿತ ಮಾರುತಿ ಸ್ತೋತ್ರ ಕೇಳಿ, ಪಠಿಸಲು – ಕ್ಲಿಕ್ ಮಾಡಿ !

ಕಾರ್ಯ ಮತ್ತು ವೈಶಿಷ್ಟ್ಯಗಳು

ಸರ್ವಶಕ್ತಿವಂತ : ಹುಟ್ಟಿದ ಕೂಡಲೇ ಮಾರುತಿಯು ಸೂರ್ಯನನ್ನು ನುಂಗಲು ಹಾರಿದನು ಎಂಬ ಕಥೆಯಿದೆ, ಇದರಿಂದ ವಾಯುಪುತ್ರ (ಅಂದರೆ ವಾಯುತತ್ತ್ವದಿಂದ ನಿರ್ಮಾಣವಾದ) ಮಾರುತಿಯು ಸೂರ್ಯನನ್ನು (ತೇಜತತ್ತ್ವ ವನ್ನು) ಜಯಿಸುವವನಾಗಿದ್ದನು ಎನ್ನುವುದು ತಿಳಿಯುತ್ತದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳಲ್ಲಿ ವಾಯುತತ್ತ್ವವು ತೇಜತತ್ತ್ವಕ್ಕಿಂತಲೂ ಹೆಚ್ಚು ಸೂಕ್ಷ್ಮ, ಅಂದರೆ ಹೆಚ್ಚು ಶಕ್ತಿಯುಳ್ಳದ್ದಾಗಿದೆ.

ಭೂತ ಮತ್ತು ಮಾರುತಿ : ಎಲ್ಲ ದೇವತೆಗಳಲ್ಲಿ ಕೇವಲ ಮಾರುತಿಗೆ ಮಾತ್ರ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದಿಲ್ಲ. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರು, ಆದರೆ ಅವರಿಗೆ ಮಾರುತಿಗೆ ತೊಂದರೆ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾರುತಿಗೆ ‘ಭೂತಗಳ ಸ್ವಾಮಿ’ ಎನ್ನುತ್ತಾರೆ. ಯಾರನ್ನಾದರೂ ಭೂತವು ಹಿಡಿದಿದ್ದರೆ, ಆ ವ್ಯಕ್ತಿಯನ್ನು ಮಾರುತಿಯ ದೇವಸ್ಥಾನಕ್ಕೆ ಒಯ್ಯುತ್ತಾರೆ ಅಥವಾ ಮಾರುತಿ ಸ್ತೋತ್ರವನ್ನು ಪಠಿಸುತ್ತಾರೆ. ಇದರಿಂದ ಅವನ ತೊಂದರೆಗಳು ಕಡಿಮೆಯಾಗದಿದ್ದರೆ ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸಿ ಮಾರುತಿಯ ದೇವಸ್ಥಾನದಲ್ಲಿ ಒಡೆಯುತ್ತಾರೆ. ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸುವುದರಿಂದ ಅವನಲ್ಲಿದ್ದ ಕೆಟ್ಟ ಶಕ್ತಿಯು ತೆಂಗಿನಕಾಯಿಯಲ್ಲಿ ಪ್ರವೇಶಿಸುತ್ತದೆ ಮತ್ತು ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದರಿಂದ ಅದರಲ್ಲಿರುವ ಕೆಟ್ಟ ಶಕ್ತಿಯು ಮಾರುತಿಯ ಸಾಮರ್ಥ್ಯದಿಂದ ನಾಶವಾಗುತ್ತದೆ. ನಂತರ ಆ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುತ್ತಾರೆ.

ಮಹಾಪರಾಕ್ರಮಿ : ರಾಮ-ರಾವಣರ ಯುದ್ಧದಲ್ಲಿ ಬ್ರಹ್ಮಾಸ್ತ್ರದಿಂದ ರಾಮ, ಲಕ್ಷ್ಮಣ, ಸುಗ್ರೀವ ಇತ್ಯಾದಿ ವೀರರು ಮೂರ್ಛೆ ಹೋದಾಗ ಜಾಂಬವಂತನು ಹನುಮಂತನ ಪರಾಕ್ರಮದ ಬಗ್ಗೆ ಹೀಗೆ ವರ್ಣನೆ ಮಾಡಿದ್ದನು – ವಾನರಶ್ರೇಷ್ಠ ಹನುಮಂತನು ಜೀವಂತವಾಗಿದ್ದಾಗ ಎಲ್ಲ ಸೈನ್ಯವು ಮರಣ ಹೊಂದಿದರೂ ಅವರು ಮರಣ ಹೊಂದದಂತೆ ಆಗಿದೆ; ಆದರೆ ಹನುಮಂತನು ಪ್ರಾಣತ್ಯಾಗ ಮಾಡಿದರೆ ನಾವು ಜೀವಂತವಾಗಿದ್ದರೂ ಮೃತರಾದಂತೆಯೇ ಆಗಿದೆ. ಹನುಮಂತನು ಜಂಬು-ಮಾಲಿ, ಅಕ್ಷ, ಧೂಮ್ರಾಕ್ಷ, ನಿಕುಂಭ ಇತ್ಯಾದಿ ಬಲಾಢ್ಯ ವೀರರನ್ನು ನಾಶ ಮಾಡಿದನು. ಅವನು ರಾವಣನನ್ನೂ ಮೂರ್ಛಿತಗೊಳಿಸಿದನು. ಸಮುದ್ರ ಉಡ್ಡಾಣ, ಲಂಕೆಯ ದಹನ, ದ್ರೋಣಗಿರಿ ಪರ್ವತವನ್ನು ತರುವುದು ಇತ್ಯಾದಿ ಘಟನೆಗಳು ಹನುಮಂತನ ಶೌರ್ಯದ ಪ್ರತೀಕವಾಗಿವೆ.

ಜಿತೇಂದ್ರಿಯ : ಸೀತೆಯನ್ನು ಶೋಧಿಸಲು ರಾವಣನ ಅಂತಃಪುರದೊಳಗೆ ಪ್ರವೇಶಿಸಿದ ಮಾರುತಿಯ ಮನಃಸ್ಥಿತಿಯು ಅವನ ಉಚ್ಚಚಾರಿತ್ರ್ಯದ ನಿದರ್ಶಕವಾಗಿದೆ. ಅವನು ಸ್ವತಃ ಹೇಳುತ್ತಾನೆ, ‘ನಿಶ್ಚಿಂತೆಯಿಂದ ಬಿದ್ದಿರುವ ಈ ಎಲ್ಲ ರಾವಣನ ಸ್ತ್ರೀಯರನ್ನು ನಾನು ಹೀಗೆ ನೋಡಿರುವುದು ನಿಜ, ಆದರೆ ಅವರನ್ನು ನೋಡಿ ನನ್ನ ಮನಸ್ಸಿನಲ್ಲಿ ವಿಕಾರವುಂಟಾಗಲಿಲ್ಲ’ (ಶ್ರೀವಾಲ್ಮೀಕಿರಾಮಾಯಣ, ಸುಂದರಕಾಂಡ, ಅಧ್ಯಾಯ ೧೧, ಶ್ಲೋಕ ೪೨, ೪೩) ಅನೇಕ ಸಂತರೂ ಈ ಜಿತೇಂದ್ರಿಯ ಮಾರುತಿಯ ಪೂಜೆಯನ್ನು ಮಾಡಿ ಅವನ ಆದರ್ಶವನ್ನು ಸಮಾಜದ ಮುಂದೆ ಇಟ್ಟಿದ್ದಾರೆ.

ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ : ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಹನುಮಂತನು ಧರಿಸಿರುವ ಜನಿವಾರವು ಬ್ರಾಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ. ಹನುಮಂತನಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಾಶ ಮಾಡುತ್ತಿದ್ದರು.

ಉಪಾಸನೆ

ಉದ್ದೇಶ : ಮಾರುತಿಯಲ್ಲಿನ ಪ್ರಕಟ ಶಕ್ತಿಯು (ಶೇ.೭೨) ಇತರ ದೇವತೆಗಳ ಪ್ರಕಟ ಶಕ್ತಿಯ (ಶೇ.೧೦) ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿರುವುದರಿಂದ ಮುಂದಿನ ಕಾರಣಗಳಿಗಾಗಿ ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ.

ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಉಪಾಸನೆ: ಸಮಾಜದಲ್ಲಿನ ಶೇ.೧೦೦ರಷ್ಟು ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವು ಬಾರಿ ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ. ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ಅಡಚಣೆಗಳನ್ನೂ ನಿರ್ಮಿಸುತ್ತವೆ; ಆದರೆ ದುರ್ದೈವದಿಂದ ಬಹುತೇಕ ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಸಮಾಜದಲ್ಲಿನ ಕೆಲವು ಜನರು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಂತ್ರಿಕ ಅಥವಾ ಭಗತರ ಕಡೆಗೆ ಹೋಗುತ್ತಾರೆ. ಆದರೆ ಅವರು ಮಾಡಿದ ಉಪಾಯವು ಹೆಚ್ಚಿನಾಂಶ ತಾತ್ಕಾಲಿಕವಾಗಿರುತ್ತದೆ. ಕೆಲವು ಸಮಯದ ನಂತರ ಕೆಟ್ಟ ಶಕ್ತಿಗಳು ಆ ವ್ಯಕ್ತಿಗೆ ಪುನಃ ತೊಂದರೆಗಳನ್ನು ಕೊಡಬಹುದು. ಹೆಚ್ಚಿನಾಂಶ ಮಾಂತ್ರಿಕ ಮತ್ತು ಭಗತರು ಮೋಸಗಾರರಾಗಿರುತ್ತಾರೆ. ಅವರು ಜನರನ್ನು ಮೋಸಗೊಳಿಸುತ್ತಾರೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಕಪಟ ಮಾಂತ್ರಿಕ ಮುಂತಾದವರ ಕೈಯಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮತ್ತು ಮುಗಿಯದ ಕರ್ಮಕಾಂಡಗಳನ್ನು ಮಾಡುವುದಕ್ಕಿಂತ ಸಾಧನೆ ಮಾಡುವುದೇ ಪ್ರಭಾವಿ ಉಪಾಯವಾಗಿದೆ.

ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯನ್ನು ಮಾಡುವ ದೇವತೆಗಳಲ್ಲಿ ಮಾರುತಿಯು ಒಬ್ಬನು. ಮಾರುತಿಯ ನಾಮಜಪದಿಂದ ಕೆಟ್ಟ ಶಕ್ತಿಗಳ ತೊಂದರೆಯಿಂದ ಶಾಶ್ವತವಾಗಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಸನಾತನ ಸಂಸ್ಥೆಯ ಸತ್ಸಂಗಗಳಲ್ಲಿ ಹೇಳಲಾಗುತ್ತದೆ.

ರೋಗನಿವಾರಣೆ : ರೋಗಿ ವ್ಯಕ್ತಿಗಳಿಗೆ ಒಳ್ಳೆಯದಾಗಲು ಅವರನ್ನು ಹನುಮಂತನ ದೇವಸ್ಥಾನಕ್ಕೆ ಕರೆದೊಯ್ಯುವ ಪದ್ಧತಿಯಿದೆ. ರೋಗಗಳಿಂದ ಮುಕ್ತರಾಗಲು ವೀರಹನುಮಂತನ ಮಂತ್ರವನ್ನೂ ಪಠಿಸುತ್ತಾರೆ.

ಮಾರುತಿಯ ಪೂಜೆ ಅಥವಾ ಉಪಾಸನೆಯ ಮೊದಲು ಬಿಡಿಸಬೇಕಾದ ರಂಗೋಲಿ

maruti_rangoli350.jpg

ಮಧ್ಯದ ಬಿಂದುವಿನಿಂದ ಅಷ್ಟದಿಕ್ಕುಗಳಲ್ಲಿ ೪ ಚುಕ್ಕಿಗಳನ್ನು ಹಾಕಬೇಕು.

ಈ ರಂಗೋಲಿಯು ಮಾರುತಿ ತತ್ತ್ವವನ್ನು ಆಕರ್ಷಿಸುತ್ತದೆ ಮತ್ತು ಪ್ರಕ್ಷೇಪಿಸುತ್ತದೆ

ಮಾರುತಿ ಗಾಯತ್ರಿ

ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|
ತನ್ನೋ ವೀರಃ ಪ್ರಚೋದಯಾತ್||

ಅರ್ಥ: ನಾವು ಅಂಜನೀಪುತ್ರ ಮಾರುತಿಯನ್ನು ಅರಿತಿದ್ದೇವೆ. ವಾಯುಪುತ್ರ ಮಾರುತಿಯ ಧ್ಯಾನವನ್ನು ಮಾಡುತ್ತೇವೆ. ಆ ವೀರ ಮಾರುತಿಯು ನಮ್ಮ ಬುದ್ಧಿಗೆ ಸತ್ಪ್ರೇರಣೆ ಕೊಡಲಿ.

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯ ಕಿರುಗ್ರಂಥ ‘ಮಾರುತಿ’ ಓದಿರಿ.)

ಮಾರುತಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

1331811339_maruti350.jpg

ಹೇ ಮಾರುತಿ, ನೀನು ಹೇಗೆ ಶ್ರೀರಾಮಚಂದ್ರನ ದಾಸ್ಯಭಕ್ತಿಯನ್ನು ಮಾಡಿದೆಯೋ, ಹಾಗೆಯೇ ನನಗೂ ಭಕ್ತಿಯನ್ನು ಮಾಡಲು ಕಲಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!

ಹೇ ಮಾರುತಿ, ರಾಷ್ಟ್ರರಕ್ಷಣೆ – ಧರ್ಮರಕ್ಷಣೆಗಾಗಿ ನೀನು ನನಗೆ ಭಕ್ತಿ ಮತ್ತು ಶಕ್ತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!

(ಪ್ರಾರ್ಥನೆಯ ಬಗೆಗಿನ ಸವಿಸ್ತಾರ ವಿವೇಚನೆ ಮತ್ತು ವಿವಿಧ ಪ್ರಸಂಗಗಳಲ್ಲಿ ಮಾಡಬೇಕಾದ ಪ್ರಾರ್ಥನೆಗಳನ್ನು ಸನಾತನ ಸಂಸ್ಥೆ ನಿರ್ಮಿಸಿದ ‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’ ಈ ಕಿರುಗ್ರಂಥದಲ್ಲಿ ಕೊಡಲಾಗಿದೆ.)

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ  ಕಿರುಗ್ರಂಥ ‘ಮಾರುತಿ’ ಓದಿರಿ.)

1 thought on “ಮಾರುತಿ”

Leave a Comment