ಹಿಂದಿನ ಲೇಖನದಲ್ಲಿ ವ್ಯಕ್ತಿಯ ಮರಣದ ನಂತರ ಅಂತ್ಯಯಾತ್ರೆಯ ವರೆಗಿನ ಕ್ರಿಯಾಕರ್ಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೀರಿ. ಈಗ ಅಲ್ಲಿಂದ ೧೩ನೇ ದಿನದ ವರೆಗೆ ಮಾಡುವಂತಹ ಕರ್ಮಗಳ ಬಗ್ಗೆ ತಿಳಿದುಕೊಳ್ಳೋಣ.
Contents
ದಹನವಿಧಿ
ಮೃತದೇಹಕ್ಕೆ ಅಗ್ನಿ ಕೊಡುವುದು
1. ದಹನಸಂಸ್ಕಾರವನ್ನು ವಿದ್ಯುತ್‍ಚಿತಾಗಾರದಲ್ಲಿ ಮಾಡದೇ ಚಿತೆಗೆ ಅಗ್ನಿಯನ್ನು ಕೊಟ್ಟು ವಿಧಿವತ್ತಾಗಿ ಮಾಡಬೇಕು !
ಆದರೆ ವಿಧಿವತ್ ದಹನಸಂಸ್ಕಾರಕ್ಕಾಗಿ ಸ್ಮಶಾನಭೂಮಿ ಸಿಗದಿದ್ದಲ್ಲಿ ದತ್ತಗುರುಗಳಿಗೆ ಪ್ರಾರ್ಥನೆ ಮಾಡಿ ನಮ್ಮ ಅಡಚಣೆಗಳನ್ನು ಹೇಳಬೇಕು ಮತ್ತು ‘ಶ್ರೀ ಗುರುದೇವ ದತ್ತ’ ಜಪವನ್ನು ಮಾಡುತ್ತಾ ವಿದ್ಯುತ್‍ಚಿತಾಗಾರದಲ್ಲಿ ದಹನಸಂಸ್ಕಾರ ಮಾಡಬೇಕು.
ಧರ್ಮಶಾಸ್ತ್ರವನ್ನು ಪಾಲಿಸುವ ಮಹತ್ವ ಓದಲು ಇಲ್ಲಿ ಕ್ಲಿಕ್ ಮಾಡಿ!
2. ಮೃತದೇಹವನ್ನು ಚಿತೆಯ ಮೇಲಿಡುವುದು
ಅ. ಸ್ಮಶಾನವನ್ನು ತಲುಪಿದಾಗ ಚಟ್ಟದೊಂದಿಗೆ ಮೃತದೇಹವನ್ನು ಚಿತೆಯ ಮೇಲಿಡುವಾಗ ಮೃತನ ಕಾಲುಗಳು ಉತ್ತರ ದಿಕ್ಕಿಗೆ ಮತ್ತು ತಲೆಯು ದಕ್ಷಿಣ ದಿಕ್ಕಿಗೆ ಬರುವಂತೆ ಇಡಬೇಕು.
ಆ. ಚಟ್ಟವನ್ನು ಕಟ್ಟಲು ಬಳಸಿದ ನಾರಿನ ಹಗ್ಗ ಮತ್ತು ಬಿದಿರು (ಅಥವಾ ಇತರ ಕಟ್ಟಿಗೆಗಳು) ಗಳನ್ನು ಬಿಡಿಸಬೇಕು. ಈ ಸಾಮಗ್ರಿಗಳನ್ನು ಸ್ಥಳೀಯ ಪರಂಪರೆಗನುಸಾರ ವಿಲೇವಾರಿ ಮಾಡಬೇಕು.
ಇ. ಮೃತದೇಹದ ಕಟ್ಟಿರುವ ಕೈ-ಕಾಲುಗಳ ಹೆಬ್ಬೆರಳುಗಳನ್ನು ಬಿಡಿಸಬೇಕು.
3. ಚಿತೆಯನ್ನು ಪ್ರಜ್ವಲಿಸುವ ಮೊದಲು ಮಾಡಬೇಕಾದ ವಿಧಿಗಳು
ಅ. ಕ್ರಮವಾಗಿ ಮೃತ ವ್ಯಕ್ತಿಯ ಬಾಯಿ, ಎರಡೂ ಮೂಗಿನ ಹೊಳ್ಳೆಗಳು, ಕಣ್ಣುಗಳ ಮೇಲೆ ಮತ್ತು ಎರಡೂ ಕಿವಿಗಳಲ್ಲಿ ಚಿನ್ನದ ತುಂಡುಗಳನ್ನು ಹಾಕಬೇಕು / ಇಡಬೇಕು. ಚಿನ್ನದ ತುಂಡುಗಳಿಲ್ಲದಿದ್ದರೆ ತುಪ್ಪದ ಹನಿಗಳನ್ನು ಹಾಕಬೇಕು.
ಆ. ಪುರೋಹಿತರು ಹೇಳಿದಂತೆ ಮಂತ್ರೋಚ್ಚಾರ ಮಾಡುತ್ತಾ ತುಪ್ಪದ ಆಹುತಿ ನೀಡಬೇಕು.
ಇ. ಮೃತ ವ್ಯಕ್ತಿಯ ಹಣೆ, ಬಾಯಿ, ಎರಡೂ ರಟ್ಟೆ ಮತ್ತು ಎದೆ ಈ ಕಡೆಗಳಲ್ಲಿ ಜವೆಗೋಧಿಯ / ಅಕ್ಕಿ ಹಿಟ್ಟಿನ ಉಂಡೆಗಳನ್ನು ಇಡಬೇಕು. ಪ್ರತಿಯೊಂದು ಉಂಡೆಯ ಮೇಲೆ ತುಪ್ಪವನ್ನು ಹಾಕಬೇಕು.
ಈ. ಕೆಲವು ಪ್ರಾಂತ್ಯಗಳಲ್ಲಿ ಅಂತ್ಯಯಾತ್ರೆಗೆ ಬಂದ ಜನರು ಶವದ ಮೇಲೆ ಶ್ರೀಗಂಧದ ಕಟ್ಟಿಗೆ ಅಥವಾ ಇತರ ಕಟ್ಟಿಗೆ, ಊದುಬತ್ತಿ ಅಥವಾ ಕರ್ಪೂರವನ್ನು ಇಡುತ್ತಾರೆ. ಈ ಕೃತಿಯು ಧರ್ಮಶಾಸ್ತ್ರದಲ್ಲಿಲ್ಲದೇ ರೂಢಿಯಿಂದ ಬಂದಿದ್ದಾಗಿದೆ.
4. ಚಿತೆಗೆ ಅಗ್ನಿ ಕೊಡುವುದು
ಅ. ಕರ್ತನು ಮಡಕೆಯಲ್ಲಿ ತಂದಿರುವ ಅಗ್ನಿಯ ಸಹಾಯದಿಂದ ಪುರೋಹಿತರು ಹೇಳಿದಂತೆ ಚಿತೆಗೆ ಮಂತ್ರೋಚ್ಚಾರಸಹಿತ ಅಗ್ನಿಯನ್ನು ಕೊಡಬೇಕು.
ಆ. ಮೊದಲು ಮೃತದೇಹದ (ಪುರುಷನಾಗಿದ್ದರೆ) ತಲೆಯೆಡೆಗೆ ಅಥವಾ (ಸ್ತ್ರೀಯಾಗಿದ್ದರೆ) ಕಾಲಿನೆಡೆಗೆ ಮತ್ತು ಅನಂತರ ಅಪ್ರದಕ್ಷಿಣಾಕಾರವಾಗಿ (ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ) ತಿರುಗುತ್ತಾ ನಾಲ್ಕೂ ಬದಿಗಳಿಂದ ಚಿತೆಯನ್ನು ಪ್ರಜ್ವಲಿಸಬೇಕು. ಅದಕ್ಕಾಗಿ ಮಡಕೆಯಲ್ಲಿ ತಂದ ಅಗ್ನಿಯ ಮೇಲೆ ಮಡಲಿನ (ಸೋಗೆ) ಗರಿಗಳ ದೀವಟಿಗೆಯನ್ನು (ತೆಂಗಿನ ಮರದ ಮಡಲಿನ ಗರಿಗಳನ್ನು) ಉರಿಸಿಕೊಳ್ಳಬೇಕು.
ಇ. ಚಿತೆ ಚೆನ್ನಾಗಿ ಉರಿಯಲು ಟಾಯರ್, ಸೀಮೆಎಣ್ಣೆಯಂತಹ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬಾರದು. ಇದರ ಬದಲು ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಉಪಯೋಗಿಸಬೇಕು.
ಈ. ಆದಷ್ಟು ಚಿತೆಯ ಹೊಗೆ ತಮ್ಮ ಮೈಗೆ ತಾಗಲು ಬಿಡಬಾರದು.
ಉ. ಮೃತದೇಹದ ಕಪಾಳಮೋಕ್ಷವಾದ ನಂತರ (ತಲೆ ಬುರುಡೆ ಒಡೆದ ಶಬ್ದ ಕೇಳಿಸಿದ ನಂತರ) ಕರ್ತನು ಹೆಗಲ ಮೇಲೆ ನೀರಿನ ಮಡಕೆಯನ್ನು ತೆಗೆದುಕೊಂಡು ಮೃತ ವ್ಯಕ್ತಿಯ ಕಾಲಿನ ಬಳಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ಇನ್ನೊಬ್ಬ ವ್ಯಕ್ತಿಯು ಕರ್ತನ ಹಿಂದೆ ನಿಂತು, ಸ್ಮಶಾನದಲ್ಲಿನ ಚಿಕ್ಕ ಕಲ್ಲಿನಿಂದ (ಅಶ್ಮ) ಆ ಮಡಕೆಯ ಕುತ್ತಿಗೆಯ ಕೆಳಗೆ ಒಂದು ತೂತು ಮಾಡಬೇಕು. ಕರ್ತನು ಮಡಕೆಯಲ್ಲಿರುವ ನೀರನ್ನು ಚೆಲ್ಲುತ್ತಾ ಚಿತೆಯ ಸುತ್ತಲೂ ಅಪ್ರದಕ್ಷಿಣೆಯನ್ನು (ಪ್ರದಕ್ಷಿಣೆಯ ವಿರುದ್ಧ) ಹಾಕಬೇಕು. ನಂತರ ಪುನಃ ಮಡಕೆಯ ಮೊದಲ ತೂತಿನ ಕೆಳಗೆ ಇನ್ನೊಂದು ತೂತು ಮಾಡಬೇಕು. ಅನಂತರ ಕರ್ತನು ಮೊದಲಿನಂತೆಯೇ ಇನ್ನೊಂದು ಅಪ್ರದಕ್ಷಿಣೆಯನ್ನು ಹಾಕಬೇಕು. ಅನಂತರ ಪುನಃ ಮಡಕೆಯ ಎರಡನೇ ತೂತಿನ ಕೆಳಗೆ ಮೂರನೇ ತೂತನ್ನು ಮಾಡಬೇಕು. ಕರ್ತನು ಮೊದಲಿನಂತೆಯೇ ಮೂರನೇ ಅಪ್ರದಕ್ಷಿಣೆಯನ್ನು ಹಾಕಬೇಕು.
ಮೂರನೆಯ ಅಪ್ರದಕ್ಷಿಣೆಯ ನಂತರ ಕರ್ತನು ಮೃತ ವ್ಯಕ್ತಿಯು ಪುರುಷನಾಗಿದ್ದರೆ ಅವನ ತಲೆಯ ಬಳಿ ಮೃತದೇಹದ ಕಡೆಗೆ ಬೆನ್ನುಮಾಡಿ ಮತ್ತು ಮೃತ ವ್ಯಕ್ತಿಯು ಸ್ತ್ರೀಯಾಗಿದ್ದರೆ ಅವಳ ಕಾಲುಗಳ ಬಳಿ ಮೃತದೇಹದ ಕಡೆಗೆ ಬೆನ್ನುಮಾಡಿ ನಿಲ್ಲಬೇಕು ಮತ್ತು ಹಿಂದೆ ನೋಡದೇ ಮಡಕೆಯನ್ನು ಹೆಗಲ ಮೇಲಿನಿಂದ ಹಿಂದಿನ ಬದಿಗೆ ಬಿಟ್ಟು ಅದನ್ನು ಒಡೆಯಬೇಕು.
ಊ. ಮಡಕೆಗೆ ತೂತು ಮಾಡಲು ಉಪಯೋಗಿಸಿದ ಅಶ್ಮವನ್ನು ಕರ್ತನು ನೆನಪಿನಿಂದ ಮನೆಗೆ ತರಬೇಕು.
ದಹನವಿಧಿಯ ನಂತರ ಮಾಡಬೇಕಾದ ಕೃತಿಗಳು
1. ಧರ್ಮಶಾಸ್ತ್ರವು ಹೇಳಿದ ವಿಧಾನ
ಅ. ದಹನವಿಧಿಯ ನಂತರ ಕೂಡಲೇ ಕರ್ತನೊಂದಿಗೆ ಕುಟುಂಬದವರೂ ನದಿ, ಕೆರೆ ಅಥವಾ ಬಾವಿಯ ಬಳಿ ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು.
ಆ. ಕುಟುಂಬದವರು ಪುರೋಹಿತರು ಹೇಳಿದಂತೆ ಅಶ್ಮದ ಮೇಲೆ ತಿಲಾಂಜಲಿ ಕೊಡಬೇಕು. ತಂದೆ ಜೀವಂತವಾಗಿರುವವರು ತಿಲಾಂಜಲಿ ನೀಡಬಾರದು.
ಇ. ಸ್ಮಶಾನದಿಂದ ಮನೆಗೆ ಬಂದ ನಂತರ ಮೊದಲು ಅಶ್ಮವನ್ನು ಮನೆಯ ಹೊರಗೆ ಸುರಕ್ಷಿತ ಜಾಗದಲ್ಲಿಡಬೇಕು.
ಈ. ಸ್ಮಶಾನದಿಂದ ಹಿಂತಿರುಗಿದವರು ಮನೆಯನ್ನು ಪ್ರವೇಶಿಸುವ ಮೊದಲು ಬೇವಿನ ಎಲೆಯನ್ನು ಕಚ್ಚಿ ಉಗುಳಬೇಕು, ನುಂಗಬಾರದು. ನಂತರ ಆಚಮನ ಮಾಡಿ ಕಲ್ಲು, ಗೋಮಯ, ಅಕ್ಷತೆ, ದೂರ್ವೆ, ಎತ್ತು, ಬಿಳಿ ಸಾಸಿವೆ ಇವುಗಳಲ್ಲಿ ಲಭ್ಯವಿರುವುದನ್ನು ಬಲಗೈಯಿಂದ ಸ್ಪರ್ಶಿಸಬೇಕು. ಅನಂತರ ಮನೆಯ ಪ್ರವೇಶದ್ವಾರದಲ್ಲಿರುವ ಕಲ್ಲಿನ ಮೇಲೆ (ಮನೆಗೆ ಕಲ್ಲಿನ ಹೊಸ್ತಿಲಿದ್ದರೆ ಅದರ ಮೇಲೆ) ಮೊದಲು ಬಲಗಾಲಿಡಬೇಕು. ನಂತರ ಬಲಗಾಲನ್ನು ಮನೆಯ ಒಳಗಿಟ್ಟು ನಿಧಾನವಾಗಿ ಮನೆಯನ್ನು ಪ್ರವೇಶಿಸಬೇಕು. ಮನೆಯ ಪ್ರವೇಶದ್ವಾರದಲ್ಲಿ ಕಲ್ಲು ಇಲ್ಲದಿದ್ದರೆ ಅಥವಾ ಮನೆಯ ಹೊಸ್ತಿಲು ಕಲ್ಲಿನದ್ದಾಗಿರದಿದ್ದರೆ ಮೊದಲು ಬಲಗಾಲನ್ನು ಮನೆಯ ಒಳಗಿಟ್ಟು ನೇರವಾಗಿ ಮನೆಯನ್ನು ಪ್ರವೇಶಿಸಬೇಕು.
2. ಧರ್ಮಶಾಸ್ತ್ರಕ್ಕನುಸಾರವಾಗಿ ಹೊರಗೆ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಆಚರಿಸಬೇಕಾದ ವಿಧಾನ
ಅ. ಕುಟುಂಬದ ಸದಸ್ಯರು ಪುರೋಹಿತರು ಹೇಳಿದಂತೆ ಕಲ್ಲಿನ ಮೇಲೆ (ಅಶ್ಮ) ತಿಲಾಂಜಲಿ ನೀಡಬೇಕು. ತಂದೆಯು ಜೀವಂತವಾಗಿರುವವರು ತಿಲಾಂಜಲಿ ನೀಡಬಾರದು.
ಆ. ಆ ಕಲ್ಲನ್ನು ಮನೆಯ ಹೊರಗೆ ಸುರಕ್ಷಿತ ಸ್ಥಳದಲ್ಲಿ ಇಡಬೇಕು.
ಇ. ಮನೆಯೊಳಗೆ ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ತಮ್ಮ ಮೇಲೆ ಗೋಮೂತ್ರ ಅಥವಾ ಗೋಮೂತ್ರ-ಅರ್ಕ ಮಿಶ್ರಿತ ನೀರನ್ನು ಸಿಂಪಡಿಸಿ ಶುದ್ಧೀಕರಣ ಮಾಡಿಕೊಳ್ಳಬೇಕು.
ಈ. ಮನೆಯಲ್ಲಿ ಬೇರೆ ಏನನ್ನೂ ಸ್ಪರ್ಶಿಸದೆ ‘ಶ್ರೀ ಗುರುದೇವ ದತ್ತ’ ಎಂದು ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು.
ಉ. ಬೇವಿನ ಎಲೆಯನ್ನು ಜಗಿದು ಉಗಿಯಬೇಕು; ನುಂಗಬಾರದು.
ಊ. ನಂತರ ಆಚಮನ ಮಾಡಿ, ಕಲ್ಲು, ಗೋಮಯ, ಅಕ್ಷತೆ, ದೂರ್ವ, ಎತ್ತು, ಬಿಳಿ ಸಾಸಿವೆ ಇವುಗಳಲ್ಲಿ ಇವುಗಳಲ್ಲಿ ಲಭ್ಯವಿರುವುದನ್ನು ಬಲಗೈಯಿಂದ ಸ್ಪರ್ಶಿಸಬೇಕು.
3. ದಹನವಿಧಿಯ ದಿನದಂದು ಊಟವನ್ನು ಯಾರು ತಯಾರಿಸಬೇಕು ಮತ್ತು ಅದು ಹೇಗಿರಬೇಕು ?
ಮೃತ ವ್ಯಕ್ತಿಯ ಮನೆಯ ಸದಸ್ಯರು ಬೇರೆ ಕುಲದ ನೆರೆಹೊರೆಯವರ ಅಥವಾ ಸ್ನೇಹಿತರ ಮನೆಯಲ್ಲಿ ತಯಾರಿಸಿದ ಆಹಾರವನ್ನು (ಉದಾ. ಅನ್ನ-ಸಾರು, ಬೇಳೆ-ಅಕ್ಕಿ ಮಿಶ್ರಿತ ಖಿಚಡಿ, ರೊಟ್ಟಿಗಳಂತಹ ಸರಳ ಆಹಾರ) ಸೇವಿಸಬೇಕು. ಅದು ಸಾಧ್ಯವಾಗದಿದ್ದರೆ, ಮನೆಯಲ್ಲಿಯೇ ಬೇರೆ ಕುಲದ ಸ್ತ್ರೀಯಿಂದ ಆಹಾರವನ್ನು ತಯಾರಿಸಿಕೊಳ್ಳಬೇಕು. ಪರಿಸ್ಥಿತಿಗನುಗುಣವಾಗಿ ಹೊರಗಿನಿಂದ ಆಹಾರವನ್ನು ಖರೀದಿಸಿ ತಂದರೂ ನಡೆಯುತ್ತದೆ; ಆದರೆ ಮೃತ ವ್ಯಕ್ತಿಯ ಮನೆಯಲ್ಲಿ ಆತನ ಕುಲದವರ್ಯಾರೂ ಆಹಾರವನ್ನು ತಯಾರಿಸಬಾರದು.
ಅಸ್ಥಿಸಂಚಯ
ಅ. ದಹನಸಂಸ್ಕಾರವನ್ನು ಮಾಡಿದ ದಿನ ಅಥವಾ ಅದರ ಮಾರನೇ ದಿನ, ಮೂರನೇ, ನಾಲ್ಕನೇ, ಏಳನೇ ಅಥವಾ ಒಂಬತ್ತನೇ ದಿನ ಅಸ್ಥಿ ಒಟ್ಟು ಮಾಡಬೇಕು.
ಆ. ದ್ವಿಪಾದ ನಕ್ಷತ್ರ, ತ್ರಿಪಾದ ನಕ್ಷತ್ರ, ಅಂತೆಯೇ ಕರ್ತನ ಜನ್ಮನಕ್ಷತ್ರ – ಈ ನಕ್ಷತ್ರಗಳಿರುವ ದಿನದಂದು ಅಸ್ಥಿ ಒಟ್ಟು ಮಾಡಬಾರದು.
ಇ. ಸಾಧ್ಯವಿದ್ದಲ್ಲಿ ರವಿವಾರ, ಮಂಗಳವಾರ, ಮತ್ತು ಶನಿವಾರದಂದು ಅಸ್ಥಿ ಒಟ್ಟು ಮಾಡಬಾರದು.
ಈ. ಸಾಧ್ಯವಿದ್ದಲ್ಲಿ ಪ್ರತಿಪದೆ (ಪಾಡ್ಯ), ಷಷ್ಠಿ, ಮತ್ತು ಏಕಾದಶಿಯ ತಿಥಿಗಳಂದು ಅಸ್ಥಿ ಒಟ್ಟು ಮಾಡಬಾರದು.
ಇದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಪುರೋಹಿತರ ಮಾರ್ಗದರ್ಶನ ಪಡೆಯಿರಿ.
ಅಸ್ಥಿವಿಸರ್ಜನೆ
ಅಸ್ಥಿಸಂಚಯ ಮಾಡಿದ ನಂತರ ಅದೇ ದಿನ ಅಥವಾ ವ್ಯಕ್ತಿಯು ಮೃತಪಟ್ಟ ಹತ್ತು ದಿವಸಗಳ ಒಳಗಡೆ ಅಥವಾ ಹತ್ತನೇ ದಿನ ಹರಿಯುವ ನೀರಿನಲ್ಲಿ ಅಸ್ಥಿಗಳನ್ನು ವಿಸರ್ಜಿಸಬೇಕು. (ಅಲ್ಲಿಯ ವರೆಗೆ ಅಸ್ಥಿ ಎಲ್ಲಿ ಇಡಬಹುದು ಎಂದು ನಿಮ್ಮ ಪುರೋಹಿತರ ಮಾರ್ಗದರ್ಶನ ಪಡೆಯಿರಿ.)
ಯಾವುದೇ ಕಾರಣಕ್ಕೆ ಹತ್ತು ದಿನಗಳ ನಂತರ ಅಸ್ಥಿವಿಸರ್ಜನೆ ಮಾಡುವುದಿದ್ದರೆ ಅದಕ್ಕಾಗಿ ಸೂಕ್ತ ದಿನ ಮತ್ತು ಮಾಡಬೇಕಾದ ಆವಶ್ಯಕ ವಿಧಿಗಳ ಬಗ್ಗೆ ಪುರೋಹಿತರನ್ನು ಕೇಳಿ ಆದರಂತೆಯೇ ಮಾಡಿ.
ಪಿಂಡದಾನ
1. ಧರ್ಮಶಾಸ್ತ್ರದ ಪ್ರಕಾರ ಮೊದಲ ದಿನದಿಂದ ಹತ್ತನೇ ದಿನದವರೆಗೆ ಪ್ರತಿದಿನ ತಿಲಾಂಜಲಿ, ಪಿಂಡದಾನ, ಹಾಗೂ ವಿಷಮ ಸಂಖ್ಯೆಯ ದಿನಗಳಲ್ಲಿ ವಿಷಮ ಶ್ರಾದ್ಧಗಳನ್ನು ಮಾಡಬೇಕು. ಪಿಂಡದಾನವನ್ನು ಎಲ್ಲಿ ಮಾಡಬೇಕೆಂಬುದು ಯಾರು ಮೃತಪಟ್ಟಿದ್ದಾರೆ, ಯಾವ ರೀತಿಯ ಶ್ರಾದ್ಧ, ಶ್ರಾದ್ಧದ ಯಾವ ವಿಧಾನವನ್ನು ಅನುಸರಿಸಲಾಗಿದೆ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಅಂತ್ಯಕ್ರಿಯೆಯ ಪಿಂಡದಾನವನ್ನು ಸಾಮಾನ್ಯವಾಗಿ ತೀರ್ಥಕ್ಷೇತ್ರಗಳಲ್ಲಿ, ನದಿ ದಂಡೆಯಲ್ಲಿ, ಕಟ್ಟಗಳಲ್ಲಿ, ಸ್ಮಶಾನದಲ್ಲಿ ಅಥವಾ ಮನೆಯ ಹೊರಗೆ ಮಾಡಲಾಗುತ್ತದೆ.
10 ನೇ ದಿನ ಮಾಡುವ ಪಿಂಡದಾನ ವಿಧಿಯಲ್ಲಿ, ವಾಯಸ ಪಿಂಡವನ್ನು ಕಾಗೆ ಸ್ಪರ್ಶಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಪುರೋಹಿತರು ಲಭ್ಯವಿಲ್ಲದಿದ್ದರೆ, ಕರ್ತನ ವಯಸ್ಸಿನ ಕಾರಣದಿಂದ ಅಥವಾ ಇತರ ಯಾವುದೇ ಕಾರಣದಿಂದ ಪ್ರತಿದಿನ ಎಲ್ಲ ವಿಧಿಗಳನ್ನು ಮಾಡುವುದು ಸಾಧ್ಯವಾಗದಿದ್ದರೆ, ಪುರೋಹಿತರ ಸಲಹೆಯ ಮೇರೆಗೆ 9ನೇ ಅಥವಾ 10ನೇ ದಿನದಂದು ವಿಧಿಗಳನ್ನು ಪ್ರಾರಂಭಿಸಬಹುದು.
2. ಹತ್ತನೇ ದಿನದ ಪಿಂಡದಾನ ವಿಧಿ ಮುಗಿದ ನಂತರ, ಅಶ್ಮದ ಮೇಲೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.
11 ನೇ ದಿನ ಮತ್ತು 12 ನೇ ದಿನ ಮಾಡಬೇಕಾದ ಕೃತಿಗಳು
1. 11 ನೇ ದಿನ ಸ್ನಾನವಾದ ನಂತರ ವಾಸ್ತುವಿನಲ್ಲಿ ಪಂಚಗವ್ಯ ಹೋಮ ಮಾಡಿ ಮನೆಯಲ್ಲಿ ಪಂಚಗವ್ಯವನ್ನು ಸಿಂಪಡಿಸಬೇಕು. ಎಲ್ಲರೂ ಪಂಚಗವ್ಯದ ಪ್ರಾಶನ ಮಾಡಬೇಕು (ಸೇವಿಸಬೇಕು).
2. 11ನೇ ಅಥವಾ 12ನೇ ದಿನದಂದು ಕರ್ತನು ಮೃತನಿಗಾಗಿ ವೃಷೋತ್ಸರ್ಗ, ಏಕೋದ್ದಿಷ್ಟ ಶ್ರಾದ್ಧ, ರುದ್ರಗಣಶ್ರಾದ್ಧ, ವಸುಗಣಶ್ರಾದ್ಧ, ಹಾಗೆಯೇ ಸಪಿಂಡೀಕರಣಶ್ರಾದ್ಧ ಮಾಡುವ ಅಧಿಕಾರ ಬರಲು ಷೋಡಶಮಾಸಿಕ ಶ್ರಾದ್ಧ (ಟಿಪ್ಪಣಿ), ವಿವಿಧ ದಾನಗಳು ಇತ್ಯಾದಿಗಳನ್ನು ಪುರೋಹಿತರ ಸಲಹೆಯ ಮೇರೆಗೆ ಮಾಡಬೇಕು.
3. 12ನೇ ದಿನ ಸಪಿಂಡೀಕರಣ ಶ್ರಾದ್ಧ (ಟಿಪ್ಪಣಿ) ಮಾಡಬೇಕು. ಸಪಿಂಡೀಕರಣ ಶ್ರಾದ್ಧ ಮಾಡುವುದರಿಂದ ಮೃತ ಜೀವಕ್ಕೆ ‘ಪಿತೃ’ ಎಂಬ ಸಂಜ್ಞೆ ಪ್ರಾಪ್ತವಾಗಿ ಅದಕ್ಕೆ ಪಿತೃಲೋಕದಲ್ಲಿ ಸ್ಥಾನ ಸಿಗುತ್ತದೆ.
ಟಿಪ್ಪಣಿ – ವಾಸ್ತವವಾಗಿ, 16 ಮಾಸಿಕ ಶ್ರಾದ್ಧಗಳನ್ನು ಆಯಾ ತಿಂಗಳಲ್ಲಿ ಮಾಡುವುದು ಮತ್ತು ಸಪಿಂಡೀಕರಣ ಶ್ರಾದ್ಧವನ್ನು ವರ್ಷಶ್ರಾದ್ಧದ ಹಿಂದಿನ ದಿನ ಮಾಡುವುದು ಸೂಕ್ತವಾಗಿರುತ್ತದೆ; ಆದರೆ ಈಗಿನ ಸಮಯದಲ್ಲಿ ವರ್ಷಪೂರ್ತಿ ಉತ್ತರೀಯದೊಂದಿಗೆ ಎಲ್ಲ ನಿಯಮಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ, ಹಾಗೆಯೇ ಮನೆಯಲ್ಲಿ ಆ ಸಮಯದಲ್ಲಿ ಇತರ ಶುಭ ಕಾರ್ಯಕ್ರಮಗಳನ್ನು ಮಾಡುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ವಿಧಿಗಳನ್ನು 11ನೇ ಅಥವಾ 12ನೇ ದಿನದಂದು ಮಾಡಲಾಗುತ್ತದೆ.
13 ನೇ ದಿನ ಮಾಡಬೇಕಾದ ವಿಧಿ
13ನೇ ದಿನ ನಿಧನ ಶಾಂತಿವಿಧಿ (ಶಾಂತೋದಕ) ಮಾಡಬೇಕು ಮತ್ತು ಎಲ್ಲರನ್ನೂ ಕರೆದು ಸಿಹಿ ಊಟ ಹಾಕಿಸಬೇಕು.
ಸೂತಕ (ಮರಣಾಶೌಚ)
ವ್ಯಕ್ತಿಯು ಮೃತನಾದ ನಂತರ ಆ ಗೋತ್ರದವರಿಗೆ ಮತ್ತು ಅವನ ಸಂಬಂಧಿಕರಿಗೆ ತಗಲುವ ವಿಶಿಷ್ಟ ಕಾಲಾವಧಿಯ ಅಶುಚಿತ್ವವೆಂದರೆ ‘ಸೂತಕ’.
ಮೃತನ ಇತರ ಸಂಬಂಧಿಕರು (ಉದಾ. ಮಾವ, ಸೋದರಳಿಯ, ಅತ್ತೆ ಇವರು) ಎಷ್ಟು ದಿನ ಸೂತಕವನ್ನು ಪಾಲಿಸಬೇಕು ಎಂಬುದು ಕೌಟುಂಬಿಕ ಸಂಬಂಧವನ್ನು ಅವಲಂಬಿಸಿರುತ್ತದೆ ಮತ್ತು ಅದರ ಮಾಹಿತಿಯನ್ನು ಪಂಚಾಂಗದಲ್ಲಿ, ಹಾಗೆಯೇ ಧರ್ಮಶಾಸ್ತ್ರದಲ್ಲಿ ಕೊಡಲಾಗಿರುತ್ತದೆ.
Àೂತಕದಲ್ಲಿ ಪಾಲಿಸಬೇಕಾದ ಬಂಧನಗಳು : ಸೂತಕವಿರುವ ವ್ಯಕ್ತಿಯು ಇತರರನ್ನು ಸ್ಪರ್ಶಿಸಬಾರದು, ಯಾವುದೇ ಧಾರ್ಮಿಕ ಕೃತಿ ಅಥವಾ ಮಂಗಲಕರ ಕೃತಿಗಳನ್ನು ಮಾಡಬಾರದು, ಸಾಮಾಜಿಕ ಕೃತಿಗಳಲ್ಲಿ ಭಾಗವಹಿಸಬಾರದು ಮತ್ತು ಇತರರೊಂದಿಗೆ ಭೋಜನಕ್ಕೆ ಕುಳಿತುಕೊಳ್ಳಬಾರದು.
6 ಇ. ಶುದ್ಧಿ : ಸೂತಕ ಮುಗಿದ ನಂತರ ಸ್ನಾನ ಮಾಡಿ ಮತ್ತು ಪಂಚಗವ್ಯವನ್ನು ಸೇವಿಸಿ ಶುದ್ಧರಾಗಬೇಕು.
ಈ ಕೃತಿಗಳ ಹೆಚ್ಚಿನ ಮಾಹಿತಿಗಾಗಿ ಹಾಗೆಯೇ ಶಾಸ್ತ್ರವನ್ನು ತಿಳಿದುಕೊಳ್ಳಲು ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರ ತರಿಸಿಕೊಳ್ಳಿ…
ಆಷಾಢ ಏಕಾದಶಿ
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)
ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧಗಳು