ಭಗವಂತನ ಭೇಟಿಗಾಗಿ ವ್ಯಾಕುಲರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಅಧ್ಯಾತ್ಮದ ಹಾದಿಯಲ್ಲಿರುವವರಿಗೆ ಮಾರ್ಗದರ್ಶನ ಮಾಡುವ, ಹಾಗೆಯೇ ಭವತಾಪದಿಂದ ನೊಂದುಬೆಂದಿರುವವರನ್ನು ತಾಪಮುಕ್ತಗೊಳಿಸುವ ಈಶ್ವರೀ ಕಾರ್ಯ ಮಾಡುತ್ತಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತನ ಬಗ್ಗೆ ಅವರ ಮನಸ್ಸಿನಲ್ಲಿ ಮೂಡಿದ ಆತ್ಮಚಿಂತನೆಯನ್ನು ಇಲ್ಲಿ ಎಲ್ಲರಿಗಾಗಿ ನೀಡುತ್ತಿದ್ದೇವೆ. ಸಂತರಲ್ಲಿ ಭಗವಂತನ ಬಗೆಗಿನ ಒಂದು ಬೇರೇ ರೀತಿಯ ಭಾವವಿಶ್ವವು ಹೇಗೆ ಇರುತ್ತದೆ, ಇದರ ಬಗ್ಗೆ ಈ ಮುಂದಿನ ಲೇಖನದಿಂದ ತಿಳಿಯುತ್ತದೆ.

ಶ್ರೀಕೃಷ್ಣನ ಪರಮಭಕ್ತೆ ರಾಧಾ. ಅವಳು ಜನ್ಮವಿಡೀ ಶ್ವಾಸದಷ್ಟು ಹರಿನಾಮವನ್ನು ಪಠಿಸಿದಾಗ ಆ ಕೃಷ್ಣನು ಅವಳಿಗೆ ಪ್ರಾಪ್ತನಾದನು. ನಾನು ನನ್ನ ಕ್ಷಣಭಂಗುರ ಜೀವನದ ಪ್ರತಿಯೊಂದು ಕ್ಷಣಗಳನ್ನೂ ನಿನ್ನ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ದೇವಾ, ನಿನ್ನ ಚಿಂತನ-ಮನನ ಇದೇ ನನ್ನ ನಿಜವಾದ ನಿತ್ಯ ಸಾಧನೆಯಾಗಿದೆ. ನಿನ್ನ ಧ್ಯಾನದಲ್ಲಿ ದೊರೆಯುವ ಬೇರೆ ಆನಂದ ಮತ್ತು ಮನಃಶಾಂತಿ ಇನ್ಯಾವುದರಲ್ಲಿಯೂ ಇಲ್ಲ. ಈ ಆತ್ಮಕ್ಕೆ ಈಗ ನಿನ್ನ ಅಖಂಡ ದರ್ಶನದ ಸೆಳೆತವುಂಟಾಗಿದೆ. ಬೇರೆ ಯಾವುದೇ ಅಸ್ತಿತ್ವ ಬೇಡ. ಮತ್ತೇನೂ ಬೇಡ ದೇವಾ.

೧. ನನಗೆ ನಿನ್ನ ವಿರಹವು ಈಗ ಸಹಿಸಲು ಆಗುತ್ತಿಲ್ಲ !

ಜೀವನವೆಂದರೇನು ಎನ್ನುವುದೇ ತಿಳಿಯುವುದಿಲ್ಲ. ನೀನು ಹೇಳುತ್ತಿಯಾ ‘ನಾನು ಸತತವಾಗಿ ನಿಮ್ಮೊಂದಿಗಿದ್ದೇನೆ, ನನ್ನ ಹೆಸರು ಜಪಿಸಿರಿ ಮತ್ತು ನಿಮ್ಮೆದುರಿಗೆ ನನ್ನನ್ನು ನೋಡಿರಿ !. ಹಾಗಾದರೆ ‘ನೀನೆಲ್ಲ್ಲಿದ್ದೀಯಾ ? ನಾನು ಸತತವಾಗಿ ನಿನ್ನ ಹೆಸರನ್ನೇ ಜಪಿಸುತ್ತಿದ್ದೇನೆ ದೇವಾ. ಈಗ ನಿನ್ನ ವಿರಹ ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಅಕ್ಕಪಕ್ಕದಲ್ಲಿ ನೋಡುವಾಗ ಅಲ್ಲಿಯೂ ನೀನೇ ಕಾಣಿಸುತ್ತೀಯಾ. ಸತತವಾಗಿ ನಿನ್ನ ಸಹವಾಸದಲ್ಲಿರಬೇಕು. ನಿನ್ನ ಚಿಂತನೆಯನ್ನೇ ಮಾಡಬೇಕು. ನಿನ್ನ ಹಾಡನ್ನು ಹಾಡಬೇಕು. ನೀನು ಬಿಟ್ಟರೇ ಬೇರೆ ಏನೂ ಬೇಡ ಎಂದೆನಿಸುತ್ತದೆ. ಏಕೆ ನನ್ನನ್ನು ನೀನು ಈ ಸಂಸಾರದ ಬಂಧನದಲ್ಲಿ, ಸಾಧಕರ ಸಂಕಷ್ಟದಲ್ಲಿ ಸಿಲುಕಿಸಿದ್ದೀಯಾ ? ನನಗೆ ಈಗ ಈ ಯಾವ ಬಂಧನಗಳು ಬೇಡವೆನಿಸುತ್ತದೆ. ನನಗೆ ಈಗ ಕೇವಲ ನೀನೇ ಮತ್ತು ನೀನೇ ಬೇಕೆನಿಸುತ್ತಿದೆ. ಯಾರೊಂದಿಗೂ ಮಾತನಾಡಬಾರದು, ನಗಬಾರದು ಎಂದೆನಿಸುತ್ತದೆ ಮತ್ತು ಹೀಗೆನಿಸುತ್ತಿರುವಾಗಲೂ ಮನಸ್ಸಿನಿಂದ ನಗುವ, ಮಾತನಾಡುವ ಅಭಿನಯ ಮಾಡಲೇ ಬೇಕಾಗುತ್ತಿದೆ. ಈ ಸಾಂಸಾರಿಕ ವಿಷಯಗಳಲ್ಲಿ ಮನಸ್ಸು ಆಸಕ್ತಿ ಹೊಂದುತ್ತಿಲ್ಲ. ಆದರೂ ‘ಮನಸ್ಸು ಆಸಕ್ತಿಯನ್ನು ಹೊಂದಿದೆ ಎಂದು ತೋರಿಸಲೇ ಬೇಕಾಗುತ್ತಿದೆ. ದತ್ತಾತ್ರೇಯ, ನಿನ್ನ ಸಹವಾಸದಲ್ಲಿ ಮಾತ್ರ ಗಂಟೆಗಳು ನಿಮಿಷಗಳಾಗುತ್ತವೆ. ಇತ್ತೀಚೆಗೆ ನಿಧಾನವಾಗಿ ತೆವಳುತ್ತ ಸಾಗುವ ಕಾಲವು ವೇಗವಾಗಿ ಹೋಗುತ್ತದೆ ಮತ್ತು ಯಾವಾಗ ನಿನ್ನ ಧ್ಯಾನ ತಗಲುವುದಿಲ್ಲವೋ ಆಗ ‘ಎಷ್ಟು ವರ್ಷಗಳು ಉರುಳಿತೋ ಯಾರಿಗೆ ಗೊತ್ತು ? ನಿನ್ನ ದರ್ಶನವಿಲ್ಲ ಎಂದೆನಿಸುತ್ತದೆ. ಕಣ್ಣುಗಳಿಗೆ ನಿನ್ನ ದರ್ಶನ ಬೇಕೆನಿಸುತ್ತದೆ ಮತ್ತು ಈ ಕಣ್ಣುಗಳಿಂದ ಇನ್ನೂ ಏನೂ ನೋಡಬೇಕು ಅಥವಾ ಜಪಿಸಬೇಕು ಎಂದೆನಿಸುವುದಿಲ್ಲ.

೨. ಪರಮೇಶ್ವರಾ, ನಿನ್ನ ದರ್ಶನವಿಲ್ಲದಿದ್ದರೆ, ಈ ದೇಹವೇ ಬೇಡವೆನಿಸುವುದು

ಈಗ ಮಾತ್ರ ಈ ದೇಹದ ಮೇಲಿನ ಮೋಹ ದೂರವಾಗಿದೆ. ಪರಮೇಶ್ವರಾ, ದತ್ತಗುರು ನಿನ್ನ ದರ್ಶನವಿಲ್ಲದಿದ್ದರೆ, ಈ ದೇಹವೇ ಬೇಡ. ಈ ಪಂಜರದೊಳಗಿನಿಂದ ಆತ್ಮ ಮುಕ್ತವಾಗಬೇಕೆನಿಸುತ್ತದೆ. ಕೇವಲ ಒಂದೇ ಒಂದು ಕಾರಣಕ್ಕಾಗಿ ಈ ದೇಹದ ಮೇಲೆ ಮೋಹವಿದೆ. ಅದೆಂದರೆ, ಈ ದೇಹದ ಮಾಧ್ಯಮದಿಂದಲೇ ನಿನ್ನ ದರ್ಶನವಾಗುತ್ತಿದೆ.

೩. ಪರಮೇಶ್ವರಾ, ಜೀವ ಚಡಪಡಿಸುತ್ತದೆ, ಆದಷ್ಟು ಬೇಗ ಬಾ ಮತ್ತು ನನಗೆ ದರ್ಶನ ನೀಡು

ಪರಮೇಶ್ವರಾ, ನನ್ನ ಜೀವವೇ, ನನಗೀಗ ಯಾವಾಗ ದರ್ಶನ ನೀಡುವೆ ? ಜೀವ ಚಡಪಡಿಸುತ್ತದೆ. ಆದಷ್ಟು ಬೇಗ ಬಾ ಮತ್ತು ನನಗೆ ದರ್ಶನವನ್ನು ನೀಡು. ಈಗ ಶ್ರೀ ಜ್ಞಾನೇಶ್ವರರ ಈ ಸಾಲುಗಳ ನಿಜವಾದ ಅರ್ಥವಾಗುತ್ತಿದೆ. ಚಂದನದಿಂದ ಮೈ ದಾಹ ಈಗ ಶಾಂತವಾಗುತ್ತಿಲ್ಲ. ಹುಣ್ಣಿಮೆಯ ಬೆಳದಿಂಗಳು ಶೀತಲವೆನಿಸುತ್ತಿಲ್ಲ. ಈ ಉರಿ ಯಾವುದರಿಂದಲೂ ಶಾಂತವಾಗುವುದಿಲ್ಲ. ವಿರಹದಲ್ಲಿ ಆಗುವಂತಹ ಈ ದಾಹವು ಹೀಗೆಯೇ ಇರಲಿದೆ. ನಿನ್ನ ಚರಣಗಳ ಮೇಲೆ ಶಿರವನ್ನು ಅಖಂಡವಾಗಿ ಇಡಬೇಕು ಎಂದು ಎಷ್ಟು ತೀವ್ರವಾಗಿ ಎನಿಸುತ್ತಿದೆಯೆಂದರೆ ಅದರ ಮುಂದೆ ಬೇರೇನೂ ಕಾಣಿಸುತ್ತಿಲ್ಲ.

೪. ಸೂರ್ಯನ ತೇಜಸ್ವಿ ಕಿರಣಗಳ ಮಧ್ಯೆಹಸಿರು ವನಸ್ಪತಿಯ ಮಧ್ಯದಲ್ಲಿ ಶರೀರದ ಅಣುರೇಣುಗಳಲ್ಲಿಯೂ ನೀನೇ ಇದ್ದೀಯಾ !

ನನ್ನ ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಜೀವಗಳಲ್ಲೆಲ್ಲ ನೀನೇ ಇರುವಿಯೆಂದು ನನಗೆ ತಿಳಿದಿದೆ. ಸೂರ್ಯನ ತೇಜಸ್ವಿ ಕಿರಣಗಳಲ್ಲಿ ನೀನೇ ಇರುವೆ. ಹಸಿರು ವನಸ್ಪತಿಗಳಲ್ಲಿಯೂ ನೀನಿರುವೆ. ವಾತಾವರಣವನ್ನು ಮೋಹಕಗೊಳಿಸುವ ಸುಗಂಧದ ಹೂಗಳಲ್ಲಿಯೂ ನೀನಿರುವೆ. ಇಷ್ಟೇ ಅಲ್ಲ, ನನ್ನ ಶರೀರದ ಅಣುರೇಣುಗಳಲ್ಲಿಯೂ ನೀನು ಇದ್ದೇ ಇದ್ದೀಯಾ. ಈ ಹೃದಯದ ಕಣಕಣದಲ್ಲಿಯೂ ನಿನ್ನ ಹೆಸರಿದೆ. ಕಣ್ಣಿನ ಬಿಂಬ ಗಳಲ್ಲಿಯೂ ನೀನು ಇರುವೆ ಎಂದು ನಾನು ತಿಳಿಯುತ್ತೇನೆ. ಇದೆಲ್ಲವೂ ಕಲ್ಪನೆಯ ಆಟವಾಗಿದ್ದರೂ ಅದರಲ್ಲಿ ಆನಂದವೇ ಆನಂದವಿದೆ. ನನಗೆ ಆ ಆನಂದ ಸತತವಾಗಿ ಸಿಗುತ್ತಿರುತ್ತದೆ. ಶರೀರವು ಸುಟ್ಟು ಹೋದಬಳಿಕವೂ ಎಲುಬುಗಳ ತುಂಡುಗಳಲ್ಲಿ ‘ವಿಠ್ಠಲ ವಿಠ್ಠಲ ಎನ್ನುವ ಧ್ವನಿ ಕೇಳಿ ಬರುವ ಚೋಖಾಮೇಳಾನಂತೆ ನನ್ನ ಶರೀರದ ಎಲ್ಲ ಅವಯವಗಳಲ್ಲಿ ನೀನೇ ಇದ್ದೀಯಾ. ನಿನ್ನದೇ ಚಿಂತನೆ, ಧ್ಯಾನವಿದೆ. ಆದರೆ ನಿನ್ನ ಅಂತರ ನನಗೀಗ ಅಸಹನೀಯವಾಗುತ್ತಿದೆ. ನೀರಿನಲ್ಲಿ ಕರಗುವ ಸಕ್ಕರೆಯಂತೆ ಈ ದೇಹ ನಿನ್ನ ನಾಮಸ್ಮರಣೆಯಲ್ಲಿ ಕರಗಬೇಕೆನಿಸುತ್ತದೆ. ಅದಕ್ಕಾಗಿ ನಾನು ಎಷ್ಟೇ ಕಠೋರ ಸಾಧನೆಯನ್ನು ಬೇಕಾದರೂ ಮಾಡುತ್ತೇನೆ.

೫. ಜಗತ್ತೆಲ್ಲ ಈಗ ಶೂನ್ಯವೆನಿಸುತ್ತದೆ. ಈಗ ‘ಜೀವ ಬೇಡುತ್ತಿದೆ ದರ್ಶನ ಎನ್ನುವ ಸ್ಥಿತಿಯಾಗಿದೆ. ಆದ್ದರಿಂದ ನಿನ್ನ ಬಳಿ ಮತ್ತೇನನ್ನು ಬೇಡಲಿ ? ಬೇಡಿದರೂ ಅದು ನನ್ನ ದತ್ತಾತ್ರೇಯನ ಮನಮೋಹಕ ವಿಶ್ವ ರೂಪವನ್ನೇ ಬೇಡುತ್ತೇನೆ. ಕೇವಲ ಅದೇ ಬೇಕಾಗಿದೆ.

೬. ನಿನ್ನ ದರ್ಶನದಲ್ಲಿಯ ಆನಂದವು ಇನ್ನು ಯಾವುದರಲ್ಲಿಯೂ ಇಲ್ಲ.

ಸತ್ಯ ಹೇಳುತ್ತೇನೆ. ನಿನ್ನ ದರ್ಶನದ ಆನಂದ ಇನ್ಯಾವುದರಲ್ಲಿಯೂ ಇಲ್ಲ. ಆ ಆನಂದವನ್ನು ಯಾರು ಅನುಭವಿಸುತ್ತಾನೆಯೋ, ಅವನಿಗೇ ಅರಿವಾಗುತ್ತದೆ. ಅದರ ವರ್ಣನೆಯನ್ನು ಶಬ್ದಗಳಲ್ಲಿ ಮಾಡುವುದು ಅಸಾಧ್ಯವಾಗಿದೆ ಮತ್ತು ನನಗೆ ‘ಈ ಆನಂದದಿಂದ ಹೊರಗೆ ಬರಲೇ ಬಾರದು. ಈ ಅವಸ್ಥೆ ಹೀಗೆಯೇ ಇರಬೇಕು ಅನಿಸುತ್ತದೆ ಭಗವಂತಾ ನನ್ನ ಚಡಪಡಿಕೆಯನ್ನು ಅರಿತುಕೋ ದೇವಾ. ಈ ಕ್ಷಣ ನಿನ್ನ ದರ್ಶನದ ನೆನಪಿನಿಂದ ಮನಸ್ಸು ತುಂಬಿ ಬಂದಿದೆ. ಕಣ್ಣುಗಳಲ್ಲಿ ನಿನ್ನ ಆ ತೇಜಃಪುಂಜ ಮೂರ್ತಿ ಕಾಣಿಸುತ್ತಿದೆ ಮತ್ತು ಅದರೆದುರು ಈ ನಶ್ವರ ಶರೀರ ತಲೆಬಾಗಿದೆ. ಕಲ್ಪನೆಯಿಂದಲೇ ನಾನು ನಿನ್ನ ದರ್ಶನವನ್ನು ಅನುಭವಿಸುತ್ತಿದ್ದೇನೆ ಮತ್ತು ಉಲ್ಲಸಿತನಾಗಿದ್ದೇನೆ. ಹೀಗಿರುವಾಗ ನಿನ್ನ ಪ್ರತ್ಯಕ್ಷ ಸಾನ್ನಿಧ್ಯದಲ್ಲಿ ಬರುವ ತಲ್ಲೀನತೆ ಎಷ್ಟಿರಬಹುದು.

– ಪ.ಪೂ. ಯೋಗತಜ್ಞ ದಾದಾಜಿ ವೈಶಂಪಾಯನ (ಇವರ ನಾಮಸ್ಮರಣ ವಹಿಯಲ್ಲಿ ಬರೆದ ಮನೋಗತ)

Leave a Comment