ಯುಗಗಳಿಗನುಸಾರ ಶ್ರೀ ಗಣೇಶನ ಅವತಾರಗಳು

gan_murti1.jpg

ಪ್ರತಿಯೊಂದು ದೇವತೆಯು ಒಂದು ತತ್ತ್ವವಾಗಿದೆ. ಈ ತತ್ತ್ವವು ಯುಗಾನುಯುಗ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಾದ ಸಗುಣ ರೂಪದಲ್ಲಿ ಪ್ರಕಟವಾಗುತ್ತದೆ, ಉದಾ.ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ಧರಿಸಿದ ಒಂಬತ್ತು ಅವತಾರಗಳು. ಕಾಲಾನುಸಾರ ಶ್ರೀ ಗಣಪತಿಯ ಯಾವ ಯಾವ ವಿವಿಧ ಅವತಾರಗಳಾದವು ಎಂಬುದನ್ನು ಮುಂದೆ ನೀಡಲಾಗಿದೆ.

ಮಹೋತ್ಕಟ-ವಿನಾಯಕ

ಇವನು ಕೃತಯುಗ, ಎಂದರೆ ಸತ್ಯಯುಗದಲ್ಲಿ ಕಶ್ಯಪ ಮತ್ತು ಅದಿತಿಯರಿಗೆ ಜನಿಸಿದನು. ಅವನು ದೇವಾಂತಕ ಮತ್ತು ನರಾಂತಕರೆಂಬ ರಾಕ್ಷಸರನ್ನು ವಧಿಸಿ ಧರ್ಮಸಂಸ್ಥಾಪನೆ ಮಾಡಿದನು ಮತ್ತು ಅವತಾರವನ್ನು ಸಮಾಪ್ತಿಗೊಳಿಸಿದನು.

ಗುಣೇಶ (ಅಪವಾದ – ಗಜಾನನ)

ತ್ರೇತಾಯುಗದಲ್ಲಿ ಗಣಪತಿಯು ಭಾದ್ರಪದ ಶುಕ್ಲ ಚತುರ್ಥಿಯ ದಿನ ಉಮಾಳ ಉದರದಿಂದ ಗುಣೇಶನೆಂಬ (ಅಪವಾದ – ಗಜಾನನ) ಹೆಸರಿನಿಂದ ಜನ್ಮ ತಾಳಿದನು. ಈ ಅವತಾರದಲ್ಲಿ ಅವನು ಸಿಂಧುದೈತ್ಯನನ್ನು ವಧಿಸಿ ಬ್ರಹ್ಮದೇವರ ಕನ್ಯೆಯರಾದ ಸಿದ್ಧಿ ಮತ್ತು ಬುದ್ಧಿಯರೊಂದಿಗೆ ವಿವಾಹ ಮಾಡಿಕೊಂಡನು.

ಗಜಾನನ

ದ್ವಾಪರಯುಗದಲ್ಲಿ ಪಾರ್ವತಿಯ ಉದರದಿಂದ ಶ್ರೀ ಗಣಪತಿಯು ಗಜಾನನ ಎಂಬ ಹೆಸರಿನಿಂದ ಮತ್ತೆ ಜನ್ಮ ತಾಳಿದನು. ಈ ಅವತಾರದಲ್ಲಿ ಗಜಾನನನು ಸಿಂದುರಾಸುರನನ್ನು ವಧಿಸಿದನು ಮತ್ತು ಅವನ ಬಂಧೀವಾಸದಲ್ಲಿದ್ದ ಅನೇಕ ರಾಜರನ್ನು ಮತ್ತು ವೀರರನ್ನು ಮುಕ್ತ ಗೊಳಿಸಿದನು. ಇದೇ ಅವತಾರದಲ್ಲಿ ಗಜಾನನನು ವರೇಣ್ಯರಾಜನಿಗೆ ಯೋಗ ಮಾರ್ಗಪ್ರಕಾಶಕ, ಸರ್ವಸಿದ್ಧಿದಾಯಕ, ಅಜ್ಞಾನನಾಶಕ ಮತ್ತು ಮನುಷ್ಯ ಜೀವನದ ಉದ್ದೇಶವನ್ನು ಹೇಳುವ ‘ಗಣೇಶಗೀತೆ’ಯನ್ನು ಹೇಳಿದನು.

ಧೂಮ್ರಕೇತು

ಕಲಿಯುಗದಲ್ಲಿ ಧೂಮ್ರಕೇತು ಅಥವಾ ಧೂಮ್ರವರ್ಣ ಎಂಬ ಹೆಸರಿನ ಗಣಪತಿಯ ನಾಲ್ಕನೆಯ ಅವತಾರವಾಗಲಿದೆ ಮತ್ತು ಅವನು ಮ್ಲೇಂಚ್ಫರನ್ನು (ದುರ್ಜನರ) ನಾಶ ಮಾಡಲಿದ್ದಾನೆ ಎಂದು ಭವಿಷ್ಯಪುರಾಣದಲ್ಲಿ ಹೇಳಲಾಗಿದೆ.

(ಆಧಾರ ಗ್ರಂಥ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರೀ ಗಣಪತಿ’)

Leave a Comment