ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 4)

Article also available in :

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ  ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಈ ಲೇಖನಲ್ಲಿ ಭೂಕಂಪಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಭೂಕಂಪ ಸಂಭವಿಸುವ ಮುಂಚೆ ವಹಿಸಬೇಕಾದ ಮುನ್ನೆಚ್ಚರಿಕೆ, ಭೂಕಂಪ ಸಂಭವಿಸುವಾಗ ಮತ್ತು ಆಗಿಹೋದ ನಂತರ ಪಾಲಿಸಬೇಕಾದ ಸೂಚನೆಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಭಾಗ 3

2. ನೈಸರ್ಗಿಕ ವಿಕೋಪಗಳು

2 ಅ. ಭೂಕಂಪ

2 ಅ 1. ಭೂಕಂಪದ ಸಾಮಾನ್ಯ ಲಕ್ಷಣಗಳು

ಭೂಕಂಪದ ಸಮಯದಲ್ಲಿ ಕೆಳಗೆ ನೀಡಿರುವುದರಲ್ಲಿ ಒಂದು ಅಥವಾ ಹೆಚ್ಚಿನ ಲಕ್ಷಣಗಳು ಕಂಡುಬರುತ್ತವೆ.

ಅ. ಭೂಮಿಯಿಂದ ಗುರ್ ಗುರ್ ಸದ್ದು ಕೇಳಿಬರುತ್ತದೆ.

ಆ. ಜೊಡಿಸಿಟ್ಟಿರುವ ಪಾತ್ರೆಗಳು ಅಲುಗಾಡುತ್ತವೆ.

ಇ. ಗೋಡೆಯ ಪ್ಲ್ಯಾಸ್ಟರ್ ಬಿರುಕುಬಿದ್ದು, ಅದರ ತೆಳುವಾದ ತುಣುಕುಗಳು ಕೆಳಗೆ ಬೀಳುತ್ತದೆ.

ಈ. ಗೋಡೆಗಳಿಗೆ ಬಿರುಕು ಬಿಟ್ಟು, ಅನೇಕ ದುರ್ಬಲ ಮನೆಗಳು ಮತ್ತು ಗೋಡೆಗಳು ಕುಸಿಯುತ್ತವೆ.

ಉ. ಭೌಗೋಳಿಕ ಬದಲಾವಣೆಗಳು, ಸ್ಥಾನಪಲ್ಲಟ ಸಂಭವಿಸುತ್ತವೆ. ಭೂಕಂಪನಗಳು ಭೂಮಿಯ ಮೇಲ್ಮೈಯಲ್ಲಿ ಅಲುಗಾಟವನ್ನು, ಏರುಪೇರನ್ನು ಉಂಟುಮಾಡುತ್ತವೆ.

ಊ. ರಸ್ತೆಗಳು ಕುಸಿಯುತ್ತವೆ, ಜೊತೆಗೆ ಭೂಕುಸಿತವಾಗುತ್ತದೆ, ಮತ್ತು ಸೇತುವೆಗಳು ಕುಸಿಯುತ್ತವೆ.

ಋ. ರೈಲು ಹಳಿಗಳು ಬಾಗುತ್ತವೆ ಅಥವಾ ವಕ್ರವಾಗುತ್ತವೆ.

ಎ. ಅಣೆಕಟ್ಟುಗಳ ಬಲವಾದ ಗೋಡೆಗಳಿಗೂ ಬಿರುಕು ಬೀಳುತ್ತದೆ.

ಏ. ಸಮುದ್ರದಲ್ಲಿ ಉದ್ಭವಿಸುವ ಭೂಕಂಪಗಳಿಂದ ಸುನಾಮಿ ಅಲೆಗಳು ಉಂಟಾಗುತ್ತವೆ. ಈ ನೂರಾರು ಅಡಿ ಎತ್ತರದ ಅಲೆಗಳು ಕಡಲತೀರವನ್ನು ಅಪ್ಪಳಿಸಿದಾಗ ಅಪಾರ ಹಾನಿಯಾಗುತ್ತದೆ.

2 ಅ 2. ಭೂಕಂಪ ಸಂಭವಿಸುವ ಮೊದಲು ವಹಿಸಬೇಕಾದ ಮುನ್ನೆಚ್ಚರಿಕೆ

ಅ. ಜಾಗರೂಕತೆ, ಸಮಯಪ್ರಜ್ಞೆ ಮತ್ತು ತಾಳ್ಮೆಯ ಮಹತ್ವ : ಭೂಕಂಪ ಯಾವಾಗ, ಎಲ್ಲಿ ಮತ್ತು ಎಷ್ಟು ಪ್ರಬಲವಾಗಿ ಬರುತ್ತದೆ ಎಂದು ಮುಂಚಿತವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ನಾವು ಯಾವಾಗಲೂ ಎಚ್ಚರಿಕೆ, ಸಮಯಪ್ರಜ್ಞೆ ಮತ್ತು ತಾಳ್ಮೆಯಿಂದ ವರ್ತಿಸಿದರೆ, ಜೀವ ಮತ್ತು ಆಸ್ತಿಯ ನಷ್ಟವನ್ನು ತಪ್ಪಿಸಬಹುದು ಅಥವಾ ಕಡಿಮೆ ಮಾಡಬಹುದು. ಆದ್ದರಿಂದ, ಭೂಕಂಪಗಳು ಅಥವಾ ಯಾವುದೇ ನೈಸರ್ಗಿಕ ವಿಪತ್ತುಗಳ ಬಗ್ಗೆ ವೈಜ್ಞಾನಿಕವಾಗಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಭೂಕಂಪಗಳು ಸಂಭವಿಸಿದಾಗ ಭೂ ಮತ್ತು ಕಟ್ಟಡ ಕುಸಿತ, ಭಯ ಮತ್ತು ಕೋಲಾಹಲದಿಂದ ಅತಿ ಹೆಚ್ಚು ಜನರು ಸಾಯುತ್ತಾರೆ.

ಆ. ಭೂಕಂಪದ ತೀವ್ರತೆಯನ್ನು ಅಳೆಯಲು ಮನೆಯಲ್ಲಿ ಸಣ್ಣ ಗಂಟೆಯನ್ನು ನೇತುಹಾಕಿ. ಭೂಕಂಪದ ಸಮಯದಲ್ಲಿ ಗಂಟೆ ಎಷ್ಟು ಜೋರಾಗಿ ಅಲುಗಾಡುತ್ತದೆ ಎನ್ನುವುದರ ಮೇಲೆ, ಭೂಕಂಪ ಎಷ್ಟು ಪ್ರಬಲವಾಗಿದೆ ಎಂದು ಅಳೆಯಬಹುದು.

ಇ. ಭೂಕಂಪ ಬಂದಾಗ ಅಡಗಿಕೊಳ್ಳಲು ಸುರಕ್ಷಿತ ಸ್ಥಳವನ್ನು ಈಗಲೇ ಗುರುತಿಸಿಟ್ಟುಕೊಳ್ಳಿ : ಈ ಸಮಯದಲ್ಲಿ ಮನೆಯ ಮೂಲೆಗಳು, ಬಲಿಷ್ಠ ಮೇಜಿನ ಅಡಿಯಲ್ಲಿ, ಕಾಪಾಟುಗಳು ಸುರಕ್ಷಿತ ಸ್ಥಳಗಳಾಗಿವೆ. ಅಲ್ಲದೆ, ಭೂಕಂಪಗಳ ಸಮಯದಲ್ಲಿ ಅಪಾಯಕಾರಿ ಸ್ಥಳಗಳನ್ನು ಆರಿಸಿ ಮತ್ತು ಅವುಗಳಿಂದ ದೂರವಿರಿ.

ಈ. ಎತ್ತರದಲ್ಲಿರುವ ಮತ್ತು ಭಾರವಾದ ಸಾಮಾನುಗಳ ಬಗ್ಗೆ ಇದನ್ನು ಮಾಡಿ! : ಮನೆಯಲ್ಲಿ ಭಾರವಾದ ಸಾಮಾನುಗಳನ್ನು ಎತ್ತರದಲ್ಲಿ ಇಡಬಾರದು; ಏಕೆಂದರೆ ಅದು ನಮ್ಮ ಮೇಲೆ ಬಿದ್ದು ಅಪಾಯವನ್ನುಂಟು ಮಾಡಬಹುದು. ಭೂಕಂಪದ ಸಮಯದಲ್ಲಿ ಗೋಡೆಗೆ ಅಳವಡಿಸಿದ ಮರದ ಹಲಗೆಯ ಮೇಲೆ ಇರಿಸಲಾದ ವಸ್ತುಗಳು, ಬೀರುಗಳು ಅಥವಾ ಅಂತಹ  ಪೀಠೋಪಕರಣಗಳು ಬಿದ್ದುಹೋಗುವ ಸಾಧ್ಯತೆಯಿದೆ, ಆದ್ದರಿಂದ ಸಾಧ್ಯವಾದರೆ ಅವುಗಳನ್ನು ಗೋಡೆಗಳಿಗೆ ಆಣಿ ಹೊಡೆದು ಕಟ್ಟಿಹಾಕಬೇಕು.

ಉ. ಗಾಜಿನ ಸಾಮಾನುಗಳನ್ನು ಬೀರುವಿನಲ್ಲಿ ಇಟ್ಟು ಬೀಗ ಹಾಕಿ ! : ದೊಡ್ಡ ವಸ್ತುಗಳನ್ನು ಅಥವಾ ನಾಜೂಕಾದ ಮತ್ತು ಬೆಲೆಬಾಳುವ ವಸ್ತುಗಳನ್ನು ಕಡಿಮೆ ಎತ್ತರದಲ್ಲಿ ಇಡಬೇಕು. ಗಾಜಿನ ಅಥವಾ ಒಡೆದುಹೋಗುವಂತಹ ವಸ್ತುಗಳನ್ನು ಬೀರುವಿನಲ್ಲಿ ಬೀಗ ಹಾಕಿ ಇಡಬೇಕು. ಗಾಜಿನ ಬಾಗಿಲು ಇರುವ ಬೀರುಗಳು, ಕನ್ನಡಿಗಳು, ಚಿತ್ರಗಳು ಇತ್ಯಾದಿಗಳನ್ನು ಸಾಧ್ಯವಾದಷ್ಟು ಕೆಳಗೆ ಇಡಬೇಕು.

ಊ. ಛಾವಣಿಯಿಂದ ನೇತಾಡುವ ವಸ್ತುಗಳು, ಉದಾ. ಗೊಂಚಲುದೀಪ ಕೆಳಗೆ ಬೀಳಬಾರದೆಂದು ಅದನ್ನು ಹೆಚ್ಚು ದೃಡವಾಗಿ ಕಟ್ಟಿಡಬೇಕು ಅಥವಾ ಸಾಧ್ಯವಾದರೆ ಕೆಳಗಿಳಿಸಬೇಕು.

ಋ. ಛಾವಣಿಯಲ್ಲಿ ಸಣ್ಣ ಅಥವಾ ದೊಡ್ಡ ಬಿರುಕುಗಳು ಇದ್ದರೆ, ಅವುಗಳನ್ನು ತಕ್ಷಣ ದುರುಸ್ತಿಪಡಿಸಬೇಕು.

ಎ. ಭೂಕಂಪದ ನಂತರ ಗ್ಯಾಸ್ ಸಿಲಿಂಡರ್ ಗೆ ಅಳವಡಿಸಿರುವ ನಳಿಕೆ (ಪೈಪ್) ತುಂಡಾಗಿ ಬೆಂಕಿ ಅನಾಹುತ ಸಂಭವಿಸಬಹುದು, ಆದ್ದರಿಂದ ಈಗಾಗಲೇ ಮುರಿಯದ ಹೊಂದಿಕೊಳ್ಳುವ ನಮ್ಯ ನಳಿಜೆಯನ್ನು ಅಳವಡಿಸಬೇಕು.

2 ಅ 3. ಭೂಕಂಪದ ಸಮಯದಲ್ಲಿ ಇದನ್ನು ಮಾಡಿ!

ಅ. ಭೂಕಂಪದ ಸಮಯದಲ್ಲಿ ಕಟ್ಟಡವು ತುಂಬಾ ಅಲುಗಡುತ್ತಿದ್ದರೆ, ಅದರಿಂದ ಹೊರಬರುವಾಗ ಅಪಾಯವು ಹೆಚ್ಚು ಗಂಭೀರವಾಗಿರಬಹುದು. ಆದ್ದರಿಂದ, ಕಟ್ಟಡದ ಒಳಗೆ ಒಂದು ದಪ್ಪ ಹಲಗೆಯ ಕೆಳಗೆ (ಮೇಜಿನ ಕೆಳಗೆ) ಬಚ್ಚಿ ಕುಳಿತುಕೊಳ್ಳಬೇಕು ಅಥವಾ ಅದು ಸಾಧ್ಯವಾಗದಿದ್ದರೆ, ಕುತ್ತಿಗೆ ಮತ್ತು ತಲೆಯನ್ನು ಕೈಗಳಿಂದ ಮುಚ್ಚಿ ಸಾಧ್ಯವಿದ್ದಲ್ಲಿ ರಕ್ಷಣೆ ಪಡೆಯಬೇಕು.

ಆ. ಕಟ್ಟಡದಿಂದ ಹೊರಬರುವಾಗ ಅವಸರ ಮಾಡಬೇಡಿ : ನೀವು ಮನೆ, ಕಚೇರಿ ಅಥವಾ ಯಾವುದಾದರೊಂದು ಕಟ್ಟಡದಲ್ಲಿದ್ದರೆ, ಗಡಿಬಿಡಿಯಲ್ಲಿ ಅಥವಾ ಆತುರ ಮಾಡದೇ ಆದಷ್ಟು ಬೇಗ ಹೊರಬನ್ನಿ. ಈ ಸಮಯದಲ್ಲಿ ಲಿಫ್ಟ್ ಅನ್ನು ಬಳಸಬಾರದು.

ಇ. ಸುರಕ್ಷಿತ ಸ್ಥಳದಲ್ಲಿ ನಿಂತುಕೊಳ್ಳಿ : ಬಲವಾದ ಭೂಕಂಪ ಬಂದಾಗ ಕಚೇರಿ ಅಥವಾ ಮನೆಯಲ್ಲಿದ್ದರೆ ಅಲ್ಲಿ ಇರಬೇಕು. ಈ ಹಿಂದೆಯೇ ಆಯ್ಕೆ ಮಾಡಿದ ಸುರಕ್ಷಿತ ಸ್ಥಳದಲ್ಲಿ ಹೋಗಿ ನಿಂತುಕೊಳ್ಳಿ. ದೊಡ್ಡ ಮೇಜಿನ ಕೆಳಗೆ ಕುಳಿತುಕೊಳ್ಳಿ. ತಲೆ ಮತ್ತು ಕುತ್ತಿಗೆಯನ್ನು ರಕ್ಷಿಸಲು ದಿಂಬನ್ನು ಬಳಸಬಹುದು. ಕಿಟಕಿ ಮತ್ತು ಬಾಗಿಲುಗಳ ಬಳಿ ನಿಲ್ಲುವುದನ್ನು ತಪ್ಪಿಸಿ.

ಈ. ವಿದ್ಯುತ್ ಪ್ರವಾಹವನ್ನು ತಕ್ಷಣ ಬಂದು ಮಾಡಿ. ಗ್ಯಾಸ್ ಸಿಲಿಂಡರ್, ಸ್ಟೌವ್ ಇತ್ಯಾದಿಗಳನ್ನು ಬಂದು ಮಾಡಿ.

ಉ. ಕಟ್ಟಡದ ಹೊರಗೆ ಅಥವಾ ತೆರೆದ ಜಾಗದಲ್ಲಿದ್ದರೆ, ಅಲ್ಲಿ ನಿಂತುಕೊಳ್ಳಿ. ಕಟ್ಟಡಗಳು, ಮರಗಳು, ಬೀದಿ ದೀಪಗಳು, ವಿದ್ಯುತ್ ತಂತಿಗಳಿಂದ ದೂರವಿರಬೇಕು.

ಊ. ಭೂಕಂಪದ ಸಮಯದಲ್ಲಿ ವಾಹನದಲ್ಲಿದ್ದರೆ, ಅದನ್ನು ತೆರೆದ ಮತ್ತು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿ ಮತ್ತು ವಾಹನದಿಂದ ಹೊರಬರಬೇಡಿ.

ಋ. ಸಮುದ್ರ ತೀರ ಅಥವಾ ನದಿಯ ಸಮೀಪದಲ್ಲಿದ್ದರೆ, ಎತ್ತರದ ಸ್ಥಳಕ್ಕೆ ಹೋಗಿ ನಿಂತುಕೊಳ್ಳಿ.

ಎ. ಬೆಟ್ಟದ ಮೇಲೆ ಅಥವಾ ಇಳಿಜಾರಿನಲ್ಲಿದ್ದರೆ, ಜಾರುವ ಕಲ್ಲು, ಬೀಳುವ ದೊಡ್ಡ ಬಂಡೆಗಳು ಇತ್ಯಾದಿಗಳಿಂದ ರಕ್ಷಿಸಿಕೊಳ್ಳಿ.

2 ಅ 4. ಭೂಕಂಪದ ನಂತರದ ಪರಿಸ್ಥಿತಿಗಳು

ಎಲ್ಲೆಂದರಲ್ಲಿ ಕಟ್ಟಡಗಳು ಕುಸಿಯುತ್ತವೆ. ಗಾಯಗೊಂಡವರು ಸಹಾಯಕ್ಕಾಗಿ ದಿಕ್ಕುದೆಸೆಯಿಲ್ಲದೆ ಓಡುತ್ತಿರುತ್ತಾರೆ. ಧೂಳಿನ  ಮೋಡಗಳು ಕವಿದಿರುತ್ತವೆ. ಹಲವರು ಕಟ್ಟಡಗಳ ಅವಶೇಷಗಳ ಕೆಳಗೆ ಹೂತು ಹೋಗಿದ್ದರೆ, ಸಾವಿರಾರು ಜನರು ಸತ್ತಿರುತ್ತಾರೆ. ಭಾಗಶಃ ಕುಸಿದ ಕಟ್ಟಡದಲ್ಲಿ ಸಿಲುಕಿರುವವರ ಮನೋಬಲ ಕ್ಷಣಕ್ಷಣಕ್ಕೆ ಕುಸಿಯುತ್ತಿರುತ್ತದೆ. ಗಾಯಗೊಂಡವರು ಮತ್ತು ಜೀವಂತ ಉಳಿದಿರುವವರು ಸಹಾಯಕ್ಕಾಗಿ ಕರೆ ಮಾಡಲು ಪ್ರಯತ್ನಿಸುತ್ತಾರೆ; ಆದರೆ ಕೆಲವು ಪ್ರದೇಶಗಳಲ್ಲಿ ದೂರವಾಣಿ ಮತ್ತು ಮೊಬೈಲ್ ಫೋನ್‌ಗಳು ಕಾರ್ಯ ಮಾಡುವುದಿಲ್ಲ. ವಿದ್ಯುತ್ ಕಡಿತ ಮತ್ತು ರಸ್ತೆಗಳು ಮುಚ್ಚಿ ಹೋಗುವುದರಿಂ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳಗಳು ಮತ್ತು ಸ್ವಯಂಸೇವಿ ಸಂಸ್ಥೆಗಳ ವಾಹನಗಳು ಸಮಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ.

2 ಅ 5. ಭೂಕಂಪದ ನಂತರ ಇದನ್ನು ಮಾಡಿ!

ಅ. ಭೂಕಂಪದ ನಂತರ ಮೊದಲಿಗೆ ಸ್ವತಃ ಗಾಯಗಳಗಿವೆಯೇ ಎಂದು ನೋಡಬೇಕು. ಆವ‌ಶ್ಯಕತೆಗನುಸಾರ ಪ್ರಥಮ ಚಿಕಿತ್ಸೆ ಪಡೆದುಕೊಳ್ಳಬೇಕು.

ಆ. ನೀವಿರುವ ಕಟ್ಟಡವು ಅಸುರಕ್ಷಿತವಾಗಿದ್ದರೆ ಅಲ್ಲಿಂದ ಹೊರಬರಬೇಕು : ಮನೆ ಮತ್ತು ಕಟ್ಟಡವನ್ನು ಕೂಲಂಕಷವಾಗಿ ಪರೀಕ್ಷಿಸಿ. ಕಟ್ಟಡದ ಸ್ಥಿತಿ ಉತ್ತಮವಾಗಿರದಿದ್ದರೆ, ಅಸುರಕ್ಷಿತವಾಗಿದ್ದರೆ ಮನೆಯಲ್ಲಿ ಅಥವಾ ಕಟ್ಟಡದಲ್ಲಿರುವ ಪ್ರತಿಯೊಬ್ಬರೂ ಹೊರಬರಬೇಕು. ದೊಡ್ಡ ಭೂಕಂಪದ ನಂತರ, ಸಣ್ಣ-ಪುಟ್ಟ ಕಂಪನಗಳು (ಆಫ್ಟರ್ ಶಾಕ್ಸ) ಮರುಕಳಿಸಬಹುದು. ಇದರಿಂದ ಮನೆ ಮತ್ತು ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

ಇ. ಭೂಕಂಪದ ಸ್ಥಿತಿಯ ಪೂರ್ವತಯಾರಿಗೆಂದು ತಯಾರಿಸಿರುವ ತುರ್ತುಪರಿಸ್ಥಿಯ ಸಂಚಿಯಲ್ಲಿ (ಎಮರ್ಜೆನ್ಸಿ ಕಿಟ್) ಇರುವ ಟಾರ್ಚ ನಿಮ್ಮ ಕೈಯಲ್ಲಿಯೇ ಇರಬೇಕು. ಆದ್ದರಿಂದ ವಿದ್ಯುತ್ ಇಲ್ಲದಿದ್ದಾಗ, ದಾರಿ ಕಾಣದೆ ಗೊಂದಲಕ್ಕೀಡಾಗುವುದಿಲ್ಲ ಮತ್ತು ಸಂಚಿಯಿಂದ ಯಾವುದಾದರೂ ವಸ್ತು ಅಥವಾ ಇತರ ಅಗತ್ಯ ವಸ್ತುಗಳನ್ನು ಸುಲಭವಾಗಿ ಹುಡುಕಬಹುದು.

ಈ. ಅನಿಲ ಸೋರಿಕೆ ಅಥವಾ ದಹ್ಯ ವಸ್ತುಗಳು ಚಹೆಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು ! : ಅಡುಗೆಮನೆಯಲ್ಲಿ ಅನಿಲ ಸೋರಿಕೆ ಆಗಿದೆಯೇ ಎಂಬುವುದನ್ನು ಪರಿಶೀಲಿಸಿ. ಇದರೊಂದಿಗೆ ಸೀಮೆಎಣ್ಣೆ ಮತ್ತು ಅಡುಗೆ ಎಣ್ಣೆಯಂತಹ ದಹ್ಯ ವಸ್ತುಗಳು ಅಡುಗೆಮನೆಯಲ್ಲಿ ಅಥವಾ ಮನೆಯಲ್ಲಿ ಬೇರೆಲ್ಲಿಯೂ ಚೆಲ್ಲಿ ಹೋಗಿಲ್ಲವಲ್ಲ ಎಂದು ಪರಿಶೀಲಿಸಿ. ವಿದ್ಯುತ್ ದೀಪದ ಬಟನ್, ಬೆಂಕಿಪೊಟ್ಟಣ, ಲೈಟರ್ ಅಥವಾ ಗ್ಯಾಸ್ ಸ್ಟೌವ್ ಅನ್ನು ಪರಿಶೀಲಿಸದೆ ಬೆಳಗಿಸಬೇಡಿ.

ಉ. ಕಾಲಿಗೆ ಚಪ್ಪಲಿ ಮತ್ತು ತಲೆಗೆ ಹೆಲ್ಮೆಟ್ ಧರಿಸಿ : ಸಾಧ್ಯವಾದರೆ ಚಪ್ಪಲಿ ಅಥವಾ ಬೂಟುಗಳನ್ನು ಧರಿಸಿ; ಏಕೆಂದರೆ, ಪಾದರಕ್ಷೆಗಳನ್ನು ಬಳಸದೆ ನಡೆಯುವಾಗ, ಭೂಕಂಪದಿಂದ ಬಿದ್ದು ಹರಡಿರುವ ಗಾಜಿನ ತುಂಡುಗಳು, ಹೆಂಚು, ಶೀಟ್ ಇತ್ಯಾದಿಗಳು ತಾಗಿ ಗಾಯವಾಗಬಹುದು. ಸಾಧ್ಯವಾದರೆ ತಲೆಯ ಮೇಲೆ ಹೆಲ್ಮೆಟ್ ಧರಿಸಿ.

ಊ. ಶೌಚಾಲಯಕ್ಕೆ ಹೋಗುವ ಮೊದಲು ಒಳಚರಂಡಿ ವ್ಯವಸ್ಥೆಗಳು ಸುಸ್ಥಿತಿಯಲ್ಲಿದೆಯೇ ಎಂದು ಪರಿಶೀಲಿಸಿ.

ಋ. ಸಾಕುಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿಡಬೇಕು ! : ಸಾಕು ಸಾಕುಪ್ರಾಣಿಗಳು, ನಾಯಿಗಳು ಮತ್ತು ಬೆಕ್ಕುಗಳಿಗೆ ದಿಗಿಲಾಗಿ ಕಿರುಚಲು ಪ್ರಾರಂಭಿಸುತ್ತವೆ. ಅಂತಹ ಸಂದರ್ಭಗಳಲ್ಲಿ, ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿಡಬೇಕು. ಇಲ್ಲದಿದ್ದರೆ ಈ ಪ್ರಾಣಿಗಳು ಯದ್ವಾತದ್ವಾ ಓಡಿಹೋಗಬಹುದು, ಮತ್ತು ಈ ಪರಿಸ್ಥಿತಿಯಲ್ಲಿ ಕಳೆದುಹೋಗಬಹುದು.

ಎ. ವಿದ್ಯುತ್ ಇಲ್ಲದಿದ್ದರೆ, ಬ್ಯಾಟರಿ ಚಾಲಿತ ರೇಡಿಯೋದಲ್ಲಿ ಸೂಚನೆಗಳನ್ನು ಆಲಿಸಿ : ಭೂಕಂಪದ ನಂತರ ವಿದ್ಯುತ್ ಪೂರೈಕೆ ಮರಳಿ ಬರಲು ಬಹಳ ಸಮಯ ತೆಗೆದುಕೊಳ್ಳಬಹುದು. ಈ ಸಂದರ್ಭದಲ್ಲಿ, ಮನೆಯಲ್ಲಿ ಬ್ಯಾಟರಿ ಚಾಲಿತ ರೇಡಿಯೋ ತುಂಬಾ ಉಪಯುಕ್ತವಾಗುತ್ತದೆ. ರೇಡಿಯೋ ಇದ್ದಲ್ಲಿ ಕಾಲಕಾಲಕ್ಕೆ ನೀಡಲಾಗುವ ಸುದ್ದಿ ಮತ್ತು ಸಲಹೆಗಳನ್ನು ತಿಳಿದುಕೊಳ್ಳಬಹುದು.

ಏ. ಅತ್ಯಗತ್ಯವಿಲ್ಲದಿದ್ದರೆ ವಾಹನಗಳನ್ನು ರಸ್ತೆಗಿಳಿಸಬೇಡಿ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸುರಕ್ಷೆ ಮತ್ತು ಪರಿಹಾರ ಕಾರ್ಯಗಳಿಗೆ, ಹಾಗೆಯೇ ಇತರ ಮಹತ್ವದ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಗಳಲ್ಲಿ ಆದಷ್ಟು ಸಂಚಾರ ಕಡಿಮೆ ಇಡಬೇಕಾಗುತ್ತದೆ.

ಐ. ಸರ್ಕಾರಕ್ಕೆ ಸಹಾಯ ಮಾಡಿ : ಸುತ್ತಮುತ್ತಲಿನ ಕಟ್ಟಡಗಳು ಕುಸಿದು ಅನೇಕ ಜನರು ಸಾವನ್ನಪ್ಪಿರುತ್ತಾರೆ. ಕೆಲವರು ಅವಶೇಷಗಳ ಕೆಳಗೆ ಸಿಲುಕಿ ಅವರ ದೇಹ ನಜ್ಜುಗುಜ್ಜಾಗಿರುವುದರಿಂದ ಕಾರಣ ಮೃತರನ್ನು ಗುರುತಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ, ಅವರ ಕುಟುಂಬದ ಸದಸ್ಯರ ಮನಸ್ಥಿತಿ ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಸತ್ತವರನ್ನು ಗುರುತಿಸುವಲ್ಲಿ ನಾವು ಸ್ವಯಂಸೇವಕರು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಹಾಯ ಮಾಡಬೇಕು.

ಒ. ಕುಸಿದ ಕಟ್ಟಡಗಳನ್ನು ಸಾಧ್ಯವಾದಷ್ಟು ಯಾರೂ ಪ್ರವೇಶಿಸಬಾರದು.

ಓ. ಸಮುದ್ರ ತೀರದಿಂದ ದೂರವಿರಿ. ಭೂಕಂಪಗಳು ಬಂದ ನಂತರ ಸುನಾಮಿ ಉದ್ಭವಿಸಬಹುದು.

ಔ. ನೀವು ಮನೆ ಖಾಲಿ ಮಾಡಬೇಕಾದರೆ, ನೀವು ಎಲ್ಲಿದ್ದೀರಿ ಎಂದು ತಿಳಿಸುವ ಸಂದೇಶವನ್ನು ಬರೆದಿಟ್ಟುಹೋಗಿ.

ಅಂ. ಸೇತುವೆ / ಮೇಲ್ಸೇತುವೆ (ಫ್ಲೈಓವರ್) ದಾಟಲು ಪ್ರಯತ್ನಿಸಬೇಡಿ, ಅವು ಹಾನಿಗೊಳಗಾಗಿರಬಹುದು ಮತ್ತು ಕುಸಿಯಬಹುದು.

2 ಅ 6. ಕಟ್ಟಡದ ಅವಶೇಷಗಳಲ್ಲಿ ಸಿಲುಕಿಕೊಂಡರೆ ಏನು ಮಾಡಬೇಕು

ಕಟ್ಟಡದ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದರೆ, ಬೆಂಕಿಪೊಟ್ಟಣವನ್ನು ಬಳಸಬೇಡಿ. ಕಟ್ಟಡ ಕುಸಿತದಿಂದ ಅನಿಲ ಸೋರಿಕೆಯಾಗಿದ್ದರೆ, ಬೆಂಕಿ ಅನಾಹುತ ಸಂಭವಿಸಬಹುದು. ಸಾಧ್ಯವಾದರೆ, ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ಸಹಾಯಕ್ಕಾಗಿ ಪೈಪ್ ಅಥವಾ ಗೋಡೆ ಬಡಿದು ಶಬ್ದ ಮಾಡಿ, ಶಿಳ್ಳು ಊದಿ, ಕೊನೆಯ ಉಪಾಯವಾಗಿ ಮಾತ್ರ ಕೂಗಿ. ಇದರಿಂದ ನಿಮ್ಮ ಶಕ್ತಿ ಉಳಿಯುತ್ತದೆ.

Leave a Comment