ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 3)

Article also available in :

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ  ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಮೂರನೇ ಮಹಾಯುದ್ಧದಲ್ಲಿ ಶತ್ರು ರಾಷ್ಟ್ರಗಳಿಂದ ಜೈವಿಕ ಅಸ್ತ್ರಗಳ ಬಳಕೆಯಾಗಬಹುದು, ಅಥವಾ ನೈಸರ್ಗಿಕವಾಗಿ ಸಾಂಕ್ರಾಮಿಕ ರೋಗಗಳು ಹರಡಬಹುದು. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

ಭಾಗ 2

1 ಆ. ಜೈವಿಕ ಅಸ್ತ್ರಗಳಿಂದ ಆಕ್ರಮಣ

1 ಆ 1. ‘ಜೈವಿಕ ಅಸ್ತ್ರ’ ಎಂದರೇನು? : ಮಾನವರು, ಪ್ರಾಣಿಗಳು ಮತ್ತು ಬೆಳೆಗಳಿಗೆ ರೋಗ ಹರಡಲು ಅಸ್ತ್ರವಾಗಿ ಬಳಸುವ ವಿಷಾಣುಗಳನ್ನು (ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳನ್ನು) ಜೈವಿಕ ಅಸ್ತ್ರಗಳು ಎಂದು ಕರೆಯಲಾಗುತ್ತದೆ. ಜಾನುವಾರುಗಳಿಗೆ ತಗಲುವ ಸೋಂಕು (ಆಂಥ್ರಾಕ್ಸ್), ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ತಗಲುವ ಗ್ಲ್ಯಾಂಡರ್ಸ, ಎರಡು ದಿನಕ್ಕೊಮ್ಮೆ ಕಾಣಿಸು ಜ್ವರ (ಬ್ರೂಸೆಲೋಸಿಸ್), ಕಾಲರಾ, ಪ್ಲೇಗ್, ಮೆಲಿಯೊಯ್ಡೋಸಿಸ್ ಇತ್ಯಾದಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ‘ಜೈವಿಕ ಅಸ್ತ್ರಗಳಾಗಿ’ ಬಳಸಲಾಗುತ್ತದೆ.

1 ಆ 2. ಜೈವಿಕ ಅಸ್ತ್ರಗಳ ದಾಳಿಯ ಸ್ವರೂಪ

1. ಜೈವಿಕ ಅಸ್ತ್ರಗಳಿಂದ ದಾಳಿ ನಡೆಸಲು ಪ್ರಾಣಿಗಳು, ಪಕ್ಷಿಗಳು, ಮಾನವರು, ವಾಯು, ಅನಿಲ ಇತ್ಯಾದಿಗಳ ಬಳಕೆ : ಜೈವಿಕ ಅಸ್ತ್ರಗಳ ದಾಳಿಯ ಸಮಯದಲ್ಲಿ, ಕಾಲರಾದಂತಹ ಮೇಲೆ ತಿಳಿಸಲಾದ ರೋಗಗಳ ವೈರಸ್‌ಗಳನ್ನು ಗಾಳಿಯ ಮೂಲಕ ಅಥವಾ ಸೋಂಕಿತರಾದ ಪ್ರಾಣಿ, ಪಕ್ಷಿ, ಮಾನವರನ್ನು ಶತ್ರು ರಾಷ್ಟ್ರದಲ್ಲಿ ಬಿಡಲಾಗುತ್ತದೆ. ಈ ಕಾಯಿಲೆಯಿಂದ ಶತ್ರು ರಾಷ್ಟ್ರದ ಜೀವ, ಆಸ್ತಿ ಇತ್ಯಾದಿಗಳ ಅಪಾರ ಹಾನಿಯಾಗುತ್ತದೆ.

2. ಜೈವಿಕ ಅಸ್ತ್ರಗಳ ದಾಳಿಯನ್ನು ಗುರುತಿಸುವುದು ಕಷ್ಟ : ಈ ದಾಳಿ ಸಾಮಾನ್ಯ ಬಾಂಬ್, ಕ್ಷಿಪಣಿ ಅಥವಾ ವಾಯುದಾಳಿಯಂತೆ ಆಗಿರುವದಿಲ್ಲ. ಆದ್ದರಿಂದ, ಜೈವಿಕ ಅಸ್ತ್ರಗಳಿಂದ ತಮ್ಮ ಮೇಲೆ ದಾಳಿ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ತಿಳಿಯುವುದು ಕಷ್ಟ. ದೇಶದಲ್ಲಿ ಎಲ್ಲೋ ಒಂದು ಕಡೆ ಅಥವಾ ದೇಶದಲ್ಲಿ ಏಕಕಾಲಕ್ಕೆ ಎಲ್ಲೆಡೆ ಒಂದು ರೋಗ ಹಠಾತ್ತನೆ ಹರಡಿದರೆ, ಅದು ಶತ್ರು ರಾಷ್ಟ್ರದ ಆಕ್ರಮಣದಿಂದಾಗಿರಬಹುದು.

3. ಜೈವಿಕ ಅಸ್ತ್ರಗಳಿಂದ ದಾಳಿ ಮಾಡುವ ಶತ್ರು ರಾಷ್ಟ್ರಗಳನ್ನು ಗುರುತಿಸುವುದು ಸಹ ಕಷ್ಟ : ‘ಜೈವಿಕ ಅಸ್ತ್ರಗಳನ್ನು ಬಳಸಿ ಶತ್ರುಗಳು ದಾಳಿಯನ್ನು ನಡೆಸಿದ್ದಾರೆ’ ಎಂದು ಗುರುತಿಸುವುದು ಸಹ ಕಷ್ಟ. ಕೊರೋನಾ ವೈರಸ್ ಅನ್ನು ಚೀನಾ ಜೈವಿಕ ಅಸ್ತ್ರವಾಗಿ ಅಭಿವೃದ್ಧಿಪಡಿಸಿ ಶತ್ರು ರಾಷ್ಟ್ರಗಳಲ್ಲಿ ಹರಡಿತು ಎಂದು ಆರೋಪಿಸಲಾಗಿದೆ.

4. ಸರ್ಕಾರದ ಪ್ರಕಟಣೆಯಿಲ್ಲದೆ ಜೈವಿಕ ಅಸ್ತ್ರಗಳ ದಾಳಿಯ ನಂತರ ಏನು ಮಾಡಬೇಕೆಂದು ತೀರ್ಮಾಕ್ಕೆ ಬರಲು ಸಾಧ್ಯವಿಲ್ಲ : ಜೈವಿಕ ಅಸ್ತ್ರಗಳ ದಾಳಿಯು ಹೆಚ್ಚಾಗಿ ಸಾಂಕ್ರಾಮಿಕವಾಗಿರುತ್ತದೆ. ‘ಜೈವಿಕ ಆಕ್ರಮಣ ನಡೆದಿದೆ ಮತ್ತು ಅದು ಯಾವ ರೀತಿಯದ್ದಾಗಿದೆ’ ಎಂದು ಸರ್ಕಾರ ಅಧಿಕೃತವಾಗಿ ಹೇಳದೇ ‘ಇದರ ಬಗ್ಗೆ ಯಾವ ಕಾಳಜಿ ವಹಿಸಬೇಕು?’ ಎಂದು ತೀರ್ಮಾಕ್ಕೆ ಬರಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ.

5. ಜೈವಿಕ ಅಸ್ತ್ರಗಳ ಬಳಕೆಯಾಗದೆ ಹಠಾತ್ತನೆ ಹರಡುವ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವುದರಿಂದ ಆಗುವ ಅಪಾರ ಹಾನಿ : ಯಾವುದೇ ಶತ್ರುಗಳು ಜೈವಿಕ ಅಸ್ತ್ರಗಳಿಂದ ದಾಳಿ ಮಾಡದೇ ಕೇವಲ ಸಾಂಕ್ರಾಮಿಕ ರೋಗಗಳು ಮಾತ್ರ ಹರಡಿದರೂ, ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿಯ ಹಾನಿಯಾಗುತ್ತದೆ. ಇಂದಿನ ವರೆಗೆ ಪ್ಲೇಗ್ ವಿಶ್ವದಲಗಲಿ ಅತಿಹೆಚ್ಚು ಅಂದರೆ ಅನೇಕ ಕೋಟಿ ಜನರ ಪ್ರಾಣವನ್ನು ಬಲಿ ಪಡೆದಿದೆ. ಕಾಲರಾ, ಮಲೇರಿಯಾ, ಇನ್ಫ್ಲುಯೆನ್ಜಾ (ಶೀತ ಜ್ವರ), ಚಿಕನ್ ಪಾಕ್ಸ್, ವೂಪಿಂಗ್ ಕಾಫ್, ಡಿಪ್ತೀರಿಯ, ಕ್ಷಯ, ಕುಷ್ಠರೋಗ ಸಾಂಕ್ರಾಮಿಕ ರೋಗಗಳ ಕೆಲವು ಉದಾಹರಣೆಗಳು. ‘ಕೋವಿಡ್ 19’ ಅಂದರೆ ‘ಕೊರೋನಾ’ ಇದಕ್ಕೆ ಇತ್ತೀಚಿಗೆ ಸೇರ್ಪಡೆಯಾದ ಉದಾಹರಣೆಯಾಗಿದೆ. ಫೆಬ್ರವರಿ 12, 2021 ರ ವರೆಗೆ, ವಿಶ್ವದಾದ್ಯಂತ 10 ಕೋಟಿ 82 ಲಕ್ಷ 98 ಸಾವಿರ ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದು ಮತ್ತು ಅವರಲ್ಲಿ 23 ಲಕ್ಷ 78 ಸಾವಿರ 873 ಜನರು ಸಾವನ್ನಪ್ಪಿದ್ದಾರೆ.

1 ಆ 3. ಜೈವಿಕ ಅಸ್ತ್ರಗಳು ಅಥವಾ ಇತರ ವಿಧಾನಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಲವು ಮುಂಜಾಗ್ರತೆಯ ಕ್ರಮಗಳು

ಜೈವಿಕ ಅಸ್ತ್ರಗಳ ಮೂಲಕ ಯಾವ ವಿಷಾಣುವಿನ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದುಬಂದರೆ ಸೂಕ್ತ ಪ್ರತಿಜೀವಕಗಳನ್ನು (antibiotics) ಬಳಸುವ, ಲಸಿಕೆಗಳನ್ನು ತಯಾರಿಸುವ ಮುಂತಾದ ಮುಂಜಾಗ್ರತೆಯ ಕ್ರಮಗಳನ್ನು ವಹಿಸಬಹುದು. ಆದರೆ ಜೈವಿಕ ಅಸ್ತ್ರಗಳಿಂದ ದಾಳಿ ನಡೆದಿದೆ ಎಂದು ತಿಳಿಯುವಷ್ಟರಲ್ಲಿ ಅಪಾರ ಪ್ರಮಾಣದಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ. ಆದ್ದರಿಂದ, ಯಾವುದೇ ಒಂದು ರೋಗವು ಹೆಚ್ಚಾಗುತ್ತಿದೆ ಎಂದು ಗಮನಕ್ಕೆ ಬಂದ ತಕ್ಷಣ, ಸಾಂಕ್ರಾಮಿಕ ರೋಗಗಳಿಂದ ರಕ್ಷಣೆಯಾಗಲು ವಹಿಸಬೇಕಾದ ಕ್ರಮಗಳನ್ನು ಮುಂಜಾಗ್ರತೆಯಾಗಿ ಕೂಡಲೇ ಜಾರಿಗೊಳಿಸಲಾಗುತ್ತದೆ. ಕೊರೋನಾ ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಜೈವಿಕ ಅಸ್ತ್ರಗಳ ಆಕ್ರಮಣವಾಗಿರಲಿ ಅಥವಾ ಸಾಂಕ್ರಾಮಿಕ ರೋಗವಾಗಿರಲಿ, ಅವುಗಳ ವಿರುದ್ಧ ರಕ್ಷಣೆ ಪಡೆಯಲು ಮುಂಜಾಗ್ರತೆಯ ಕ್ರಮಗಳು ಮಾರ್ಗದರ್ಶಕವಾಗುತ್ತವೆ.

1 ಆ 3 ಅ. ಕೊರೋನಾದಂತಹ ವಿಷಾಣುಗಳ ಸೋಂಕಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ – ಕೊರೋನಾ ಸೋಂಕಿನ ಲಕ್ಷಣಗಳು : ಸೋಂಕು ತಗುಲಿದಾಗ ಕೊರೋನಾ ವೈರಸ್ ಶ್ವಾಸಕೋಶಗಳಲ್ಲಿ ಹಬ್ಬುತ್ತದೆ. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

1. ಜ್ವರ

2. ಒಣಕೆಮ್ಮು

3. ಗಂಟಲು ಕೆರತ

4. ಉಸಿರಾಟದ ತೊಂದರೆಗಳು, ಜೊತೆಗೆ ದಮ್ಮು ಮತ್ತು ಆಯಾಸ

5. ತಲೆನೋವು, ಸ್ನಾಯುಗಳಲ್ಲಿ ನೋವು ಮುಂತಾದ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ

1 ಆ 3 ಆ. ಕೊರೋನಾ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ತೆಗೆದುಕೊಳ್ಳಬೇಕಾದ ಸರ್ವೇಸಾಮಾನ್ಯ ಕಾಳಜಿ

1 ಆ 3 ಆ 1. ಮನೆಯಲ್ಲಿದ್ದಾಗ ವಹಿಸಬೇಕಾದ ಕಾಳಜಿ

ಅ. ಉಗುರುಗಳನ್ನು ಉದ್ದ ಬೆಳೆಸದೆ, ನಿಯಮಿತವಾಗಿ ಕತ್ತರಿಸಬೇಕು.

ಆ. ಗಾಯಗಳನ್ನು ಮುಚ್ಚಿಡಬೇಕು.

ಇ. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು.

ಈ. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು

ಈ 1. ಸಾಬೂನಿನಿಂದ ಕೈ ತೊಳೆಯದೆ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು.

ಈ 2. ಅಡುಗೆ ಮಾಡುವ ಮೊದಲು, ಅಡುಗೆ ಮಾಡುವಾಗ ಮತ್ತು ಅಡುಗೆ ಮಾಡಿದ ನಂತರ, ತಿನ್ನುವ ಮೊದಲು, ಶೌಚಾಲಯಕ್ಕೆ ಹೋಗಿ ಬಂದ ನಂತರ, ಕೈಗಳಿಗೆ ಧೂಳು ತಾಗಿದಾಗ, ಹರಿಯುವ ನಳ್ಳಿ ನೀರಿನ ಕೆಳಗೆ, ಸಾಬೂನಿನಿಂದ ಕೈ ತೊಳೆಯಬೇಕು ಅಥವಾ ‘ಆಲ್ಕೋಹಾಲ್’ ಇರುವ ಹ್ಯಾಂಡ್ ಸ್ಯಾನಿಟೈಜರ್ ಬಳಸಬೇಕು.

ಈ 3. ಪ್ರಾಣಿಗಳ ಸಂಪರ್ಕದಲ್ಲಿ ಬಂದರೆ, ಪಶುಗಳ ಆಹಾರ ಅಥವಾ ಉಗುಳಿನ ಸಂಪರ್ಕದಲ್ಲಿ ಬಂದರೆ, ಇತರರ ಕೈಕುಲುಕಿದ ನಂತರ, ಹಾಗೆಯೇ ಕೆಮ್ಮಿದ ಅಥವಾ ಸೀನಿದ ನಂತರ, ರೋಗಿಗಳನ್ನು ಉಪಚರಿಸಿದ ಬಳಿಕ ಕೈ ತೊಳೆಯಬೇಕು.

ಉ. ಕೆಮ್ಮುವಾಗ ಅಥವಾ ಸೀನುವಾಗ ಟಿಶ್ಯೂ ಪೇಪರ್, ಕರವಸ್ತ್ರ ಅಥವಾ ಅಂಗಿಯ ತೋಳನ್ನು ಉಪಯೋಗಿಸಿ ಮೂಗು-ಬಾಯಿ ಮುಚಿಕೊಳ್ಳಬೇಕು. ಬಳಸಿದ ‘ಟಿಶ್ಯೂ ಪೇಪರ್’ ಅನ್ನು ತಕ್ಷಣ ಕಸದ ತೊಟ್ಟಿಯಲ್ಲಿ ಎಸೆದು ಅದರ ಮುಚ್ಚಳವನ್ನು ತಕ್ಷಣ ಮುಚ್ಚಬೇಕು.

ಊ. ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಶೀತ, ಜ್ವರ ಇದ್ದಲ್ಲಿ, ತಕ್ಷಣ ಆಧುನಿಕ ವೈದ್ಯರ ಸಲಹೆ ಪಡೆಯಬೇಕು.

ಋ. ದಿನವಿಡೀ ನಿಯಮಿತ ಅಂತರದಲ್ಲಿ ಕೋಷ್ಣ (ಉಗುರು ಬೆಚ್ಚಗಿನ) ನೀರನ್ನು ಕುಡಿಯಬೇಕು. ಬಾಯಿ ಒಣಗದಂತೆ ನೋಡಿಕೊಳ್ಳಬೇಕು.

ಎ. ತಂಪು ಪಾನೀಯಗಳು ಮತ್ತು ಆಹಾರಗಳು ಉದಾ. ಶರಬತ್ತು, ಐಸ್ ಕ್ರೀಮ್, ಲಸ್ಸಿ ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಿ.

ಐ. ಉಪಯೋಗಿಸಿದ ಉಣ್ಣೆಯ ಬಟ್ಟೆಗಳನ್ನು (ಸ್ವೆಟರ್, ಮಫ್ಲರ್‌ ಇತ್ಯಾದಿಗಳನ್ನು) ಪ್ರತಿದಿನ ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇಡಬೇಕು. ಅಲ್ಲದೆ, ಪ್ರತಿದಿನ ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಮೈಯೊಡ್ಡಿ ನಿಂತುಕೊಳ್ಳಬೇಕು.

1 ಆ 3 ಆ 2. ಮನೆಯಿಂದ ಹೊರಗಿರುವಾಗ ವಹಿಸಬೇಕಾದ ಕಾಳಜಿ

1 ಆ 3 ಆ 2 ಅ. ಜಂತುನಿರೋಧಕ ಮುಖವಾಡವನ್ನು (ಮಾಸ್ಕ್) ಧರಿಸಿ : ಕೊರೋನಾ ವೈರಸ್‌ಗಳು ಬಾಯಿ ಮತ್ತು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಆದ್ದರಿಂದ, ದೇಹದ ಆ ಭಾಗಗಳು ವೈರಸ್ ಸಂಪರ್ಕಕ್ಕೆ ಬರಲು ಅವಕಾಶ ನೀಡಬಾರದು. ಆದುದರಿಂದ, ಜಂತುನಿರೋಧಕ ಮುಖವಾಡವನ್ನು (ಮಾಸ್ಕ್) ಬಳಸಿ. ಮಾಸ್ಕ್ ಬಳಸುವಾಗ ಇಲ್ಲಿ ನೀಡಿರುವಂತಹ ಕಾಳಜಿ ವಹಿಸಬೇಕು.

1. ಮಾಸ್ಕ್ ಮೂಗು, ಬಾಯಿ ಮತ್ತು ಗದ್ದದವನ್ನು ಸಂಪೂರ್ಣ ಮುಚ್ಚುವಂತಿರಬೇಕು.

2. ಮಾಸ್ಕ್ ಹಾಕುವಾಗ ಅಥವಾ ತೆಗೆಯುವಾಗ ಅದರ ಮುಂದಿನ ಭಾಗವನ್ನು ಸ್ಪರ್ಶಿಸಬಾರದು. ಕೈಯ ಸ್ಪರ್ಶದಿಂದ ಮಾಸ್ಕ್‌ನ ಮೇಲೆ ಜಂತುವಿನ ಸಂಕ್ರಮಣವಾಗಿ ಅದು ಹೆಚ್ಚು ಆಪಾಯಕಾರಿಯಾಗಬಹುದು.

3. ಮಾಸ್ಕ್ ಹಿಂದಿನಿಂದ ಅದರ ದಾರವನ್ನು ಹಿಡಿದು ಹಾಕಬೇಕು ಅಥವಾ ತೆಗೆಯಬೇಕು.

4. ಮಾಸ್ಕ್‌ನ ಉಪಯೋಗವಾದ ನಂತರ ಅದನ್ನು ಎಲ್ಲೆಂದರಲ್ಲಿ ಎಸೆಯಬಾರದು. ಅದನ್ನು ಯೋಗ್ಯ ರೀತಿಯಲ್ಲಿ ವಿಲೇವಾರಿ ಮಾಡುವ ಆವಶ್ಯಕತೆಯಿದೆ.

5. ಮಾಸ್ಕ್‌ಗಳನ್ನು 5% ಬ್ಲೀಚ್ ಅಥವಾ 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಲ್ಲಿ ಅದ್ದಿ ನಂತರ ಮಣ್ಣಿನಲ್ಲಿ ಆಳವಾಗಿ ಹೂತುಹಾಕಬೇಕು ಅಥವಾ ಸುಟ್ಟು ಹಾಕಬೇಕು.

6. ಜನಸಂದಣಿಯಿರುವ ಸ್ಥಳಗಳಿಗೆ ಹೋಗಬೇಕಾದರೆ, ‘ಸರ್ಜಿಕಲ್ ಮಾಸ್ಕ್’ ಅನ್ನು ಬಳಸಬೇಕು.

1 ಆ 3 ಆ 2 ಆ. ಸಾಮಾಜಿಕ ಅಂತರವನ್ನು ಕಾಪಾಡುವುದು : ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು, ಎರಡು ವ್ಯಕ್ತಿಗಳ ನಡುವೆ ಕನಿಷ್ಠ 1 – 2 ಮೀಟರ್ ಅಂತರವನ್ನು ಇಡುವುದನ್ನು ‘ಸಾಮಾಜಿಕ ಅಂತರ’ (ಸೋಶಿಯಲ್ ಡಿಸ್ಟಂಸಿಂಗ್) ಎಂದು ಕರೆಯಲಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಈ ಕೆಳಗಿನವುಗಳನ್ನು ಸಹ ಮಾಡಬೇಕು.

1. ಕೈಕುಲುವುದನ್ನು ತಪ್ಪಿಸಬೇಕು.

2. ಜನಸಂದಣಿಯನ್ನು ತಪ್ಪಿಸಲು ಸರಕಾರವು ಹೆಚ್ಚಿನ ಜನರು ಸೇರುವ ಸ್ಥಳಗಳನ್ನು, ಉದಾ. ವಾಣಿಜ್ಯ ಸಂಕೀರ್ಣಗಳು, ಚಿತ್ರಮಂದಿರಗಳು, ಶಾಲೆಗಳು, ಸರ್ಕಾರಿ ಕಚೇರಿಗಳು ಇತ್ಯಾದಿಗಳನ್ನು ಮುಚ್ಚುವಂತೆ ಹೇಳುತ್ತದೆ.

1 ಆ 3 ಆ 2 ಇ. ಸಾರ್ವಜನಿಕ ಸ್ಥಳಗಳು, ಕಟ್ಟಡಗಳು ಇತ್ಯಾದಿಗಳಲ್ಲಿ ವಸ್ತುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ : ಉಕ್ಕು, ಗಾಜು ಇತ್ಯಾದಿ ವಸ್ತುಗಳ ಮೇಲೆ ಕೊರೋನಾ ವೈರಸ್‌ 2 ಗಂಟೆಗಳಿಂದ ಕೆಲವು ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಆದ್ದರಿಂದ ಆಸ್ಪತ್ರೆಗಳು, ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಎಲಿವೇಟರ್‌ಗಳು (ಲಿಫ್ಟ್) ಇತ್ಯಾದಿಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ವಸ್ತುಗಳು, ಗೋಡೆಗಳು, ಗ್ರಿಲ್‌ ಇತ್ಯಾದಿಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಸೂಕ್ತ.

1 ಆ 3 ಆ 2 ಈ. ಸಾಬೂನಿನಿಂದ ಕೈ ತೊಳೆಯುವುದು ಅಥವಾ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು : ಹೆಚ್ಚು ಸಮಯದವರೆಗೆ ಮನೆಯಿಂದ ಹೊರಗುಳಿಯಬೇಕಾದರೆ, ಕೈಗಳನ್ನು ಸಾಬೂನಿನಿಂದ ತೊಳೆಯಬೇಕು ಅಥವಾ ಕಾಲಕಾಲಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಸಬೇಕು. ಮಾಲ್, ಅಂಗಡಿ ಅಥವಾ ಬ್ಯಾಂಕಿಗೆ ಹೋದಾಗ ಅಲ್ಲಿ ಕೆಲವು ವಸ್ತುಗಳನ್ನು ಸ್ಪರ್ಶಿಸುವುದು ಅನಿವಾರ್ಯವಾಗಿರುತ್ತದೆ, ಹಾಗಾಗಿ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸಬೇಕು. “ಸಬೂನು ಅಥವಾ ಹ್ಯಾಂಡ್ ಸ್ಯಾನಿಟೈಜರ್ ಲಭ್ಯವಿಲ್ಲದಿದ್ದರೆ, ನಿಂಬೆ ರಸ ಮತ್ತು ನೀರಿನ ಮಿಶ್ರಣದಿಂದ ಕೈ ತೊಳೆಯುವುದು ರೋಗಗಳಿಂದ ರಕ್ಷಿಸುತ್ತದೆ” ಎಂದು ಸಂಶೋಧಕರು ಹೇಳುತ್ತಾರೆ.

1 ಆ 3 ಆ 3. ಅನಿವಾರ್ಯ ಕಾರಣಗಳಿಗಾಗಿ ವಾಹನದಲ್ಲಿ ಪ್ರಯಾಣಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ : ಪ್ರಯಾಣ ಮಾಡುವಾಗ ಇತರ ವ್ಯಕ್ತಿಗಳ ಸಂಪರ್ಕ ಅನಿವಾರ್ಯವಾಗುತ್ತದೆ. ಅದರಿಂದ ಸಾಂಕ್ರಾಮಿಕ ರೋಗಗಳು ತಗಲುವ ಸಾಧ್ಯತೆ ಹೆಚ್ಚಾಗುತ್ತವೆ. ಆದ್ದರಿಂದ, ಪ್ರತಿಯೊಬ್ಬರೂ ಸಾಂಕ್ರಾಮಿಕ ರೋಗಗಳು ಹರಡಿರುವ ಸಮಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಕೆಲವು ಅನಿವಾರ್ಯ ಕಾರಣಗಳಿಗಾಗಿ ಪ್ರಯಾಣಿಸಬೇಕಾದರೆ, ಹೆಚ್ಚಿನ ಕಾಳಜಿ ವಹಿಸಬೇಕು.

1 ಆ 3 ಆ 3 ಅ. ವಾಹನದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ

1. ಸ್ವಂತ ವಾಹನ ಅಥವಾ ಆದಷ್ಟು ಕಡಿಮೆ ಪ್ರಯಾಣಿಕರಿರುವ ವಾಹನದಲ್ಲಿ ಪ್ರಯಾಣಿಸುವುದು.

2. ಹವಾನಿಯಂತ್ರಿತ (air-conditioned) ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಸ್ವಂತ ವಾಹನದಲ್ಲಿ ಹವಾನಿಯಂತ್ರಕವನ್ನು ಬಳಸುವುದನ್ನು ತಪ್ಪಿಸಬೇಕು.

3. ರೈಲು ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ, ಸುತ್ತಮುತ್ತಲು ಶೀತ, ಕೆಮ್ಮು ಅಥವಾ ಜ್ವರದ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯಿರುವುದು ತಿಳಿದುಬಂದರೆ, ಅವರಿಂದ ಕನಿಷ್ಠಪಕ್ಷ 1 ಮೀಟರ್‌ಗಿಂತಲೂ ಹೆಚ್ಚು ಅಂತರವನ್ನು ಕಾಪಾಡಬೇಕು ಅಥವಾ ಸಾಧ್ಯವಾದರೆ ಪ್ರಯಾಣಿಸುವ ಮತ್ತೊಂದು ವಿಧಾನವನ್ನು ಆರಿಸಬೇಕು, ಉದಾ. ಇನ್ನೊಂದು ಬಸ್.

4. ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದ ಮೇಲೆಯೇ ಮುಖವನ್ನು ಸ್ಪರ್ಶಿಸಬೇಕು.

5. ಸಾಧ್ಯವಾದರೆ ಪ್ರಯಾಣಿಸುವಾಗ ಆಗಿಂದಾಗ್ಗೆ ಸೋಪ್ ಅಥವಾ ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಕೈ ತೊಳೆದುಕೊಳ್ಳಬೇಕು.

1 ಆ 3 ಆ 4. ಪ್ರಯಾಣದಲ್ಲಿ ಬಳಸುವ ಬಟ್ಟೆಗಳಿಗೆ ಸಂಬಂಧಿಸಿದಂತೆ ವಹಿಸಬೇಕಾದ ಕಾಳಜಿ

ಅ. ಸಾಮಾನ್ಯವಾಗಿ ಜೀವಾಣುಗಳು 12 ಗಂಟೆಗಳವರೆಗೆ ಪ್ರಯಾಣಕ್ಕೆ ಬಳಸುವ ಬಟ್ಟೆಗಳ ಮೇಲೆ ಸಕ್ರಿಯವಾಗಿರುತ್ತವೆ. ಇದರರ್ಥ ಪ್ರವಾಸದಿಂದ ಮನೆಗೆ ಬಂದಾಗ, ಆ ಬಟ್ಟೆಗಳನ್ನು ಧರಿಸಿ ಮನೆಯಲ್ಲಿ ಓಡಾಡದೆ ನೇರವಾಗಿ ಬಚ್ಚಲುಮನೆಗೆ ಹೋಗಬೇಕು.

ಆ. ಮೈಮೇಲಿರುವ ಬಟ್ಟೆಗಳನ್ನು ಬಿಚ್ಚಿಟ್ಟು, ಮುಖವನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು ಅಥವಾ ಸಾಧ್ಯವಾದರೆ ಬಿಸಿನೀರಿನಿಂದ ಸ್ನಾನ ಮಾಡಬೇಕು.

ಇ. ಪ್ರಯಾಣದಲ್ಲಿ ಉಪಯೋಗಿಸಿರುವ ಬಟ್ಟೆಗಳನ್ನು ಒಗೆಯದೆ ಮರುಬಳಕೆ ಮಾಡಬೇಕಾದರೆ, ಇತರ ವಸ್ತು ಅಥವಾ ಬಟ್ಟೆಗಳಿಗೆ ಅವುಗಳ ಸ್ಪರ್ಶವಾಗದಂತೆ ಅವುಗಳನ್ನು ಹ್ಯಾಂಗರ್‌ಗಲ್ಲಿ ಪ್ರತ್ಯೇಕವಾಗಿ ನೇತುಹಾಕಬೇಕು. ಪ್ರಯಾಣದ ಸಮಯದಲ್ಲಿ ಬಳಸುವ ಬಟ್ಟೆಗಳನ್ನು ಮುಟ್ಟಿದರೆ, ತಕ್ಷಣ ನಿಮ್ಮ ಕೈಗಳನ್ನು ತೊಳೆಯಬೇಕು. ಸಾಧ್ಯವಾದರೆ, ಈ ಬಟ್ಟೆಗಳನ್ನು ಕಡುಬಿಸಿಲಿನಲ್ಲಿ ಇಡಬೇಕು.

ಈ. ಪ್ರಯಾಣದಲ್ಲಿ ಉಪಯೋಗಿಸಿರುವ ಬಟ್ಟೆಗಳನ್ನು ಮುಟ್ಟದೆ ನಂತರ ಮನೆಯಲ್ಲಿ ಉಪಯೋಗಿಸುವ ಬಟ್ಟೆಗಳನ್ನು ಧರಿಸಬೇಕು.

ಉ. ಪ್ರಯಾಣದಲ್ಲಿ ಬಳಸುವ ಬಟ್ಟೆಗಳನ್ನು ತೊಳೆಯಬೇಕಾದರೆ, ಎಂದಿನಂತೆ  ಒಗೆದು ಬಿಸಿಲಿನಲ್ಲಿ ಒಣಗಿಸಬೇಕು.

1 ಆ 3 ಆ 5. ಹೊರಗಡೆಯಿಂದ ಮನೆಗೆ ಹಿಂದಿರುಗಿದ ಮೇಲೆ ವಹಿಸಬೇಕಾದ ಕಾಳಜಿ

ಅ. ಪಾದರಕ್ಷೆಗಳನ್ನು ಮನೆಯ ಹೊರಗೆ ಇಡಬೇಕು.

ಆ. ಹೊರಗಡೆಯಿಂದ ತಂದಿರುವ ವಸ್ತುಗಳನ್ನು ಪ್ರತ್ಯೇಕಿಸಿ ಇಡಬೇಕು (ಕ್ವಾರಂಟೈನ್). ಕನಿಷ್ಠ 24 ಗಂಟೆಗಳು ಕಳೆದ ನಂತರ ಅವುಗಳನ್ನು ಬಳಸಬೇಕು.

ಇ. ‘ಮಾಸ್ಕ್’ ಮತ್ತು ಧರಿಸಿರುವ ಬಟ್ಟೆಗಳ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ಮೇಲೆ ತಿಳಿಸಿರುವಂತೆ ಪಾಲಿಸಬೇಕು.

ಈ. ಕೊರೋನಾ ವೈರಸ್ 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ನಿಷ್ಕ್ರಿಯವಾಗುತ್ತದೆ, ಆದ್ದರಿಂದ ಬಿಸಿನೀರಿನಲ್ಲಿ ಸ್ನಾನ ಮಾಡಿ.

ಉ. ಮೂಗಿನಲ್ಲಿ ವೈರಸ್ ಗಳು ಪ್ರವೇಶಿಸಿದ್ದರೆ, ಅವು ಕೂಡ ನಾಶವಾಗಬೇಕೆಂದು ನೀರಿನ ಆವಿಯನ್ನು ಸೇವಿಸಬೇಕು (steam inhalation).

1 ಆ 3 ಆ 6. ಆಯುರ್ವೇದದ ಪ್ರಕಾರ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಯಗಳು

1 ಆ 3 ಆ 6 ಅ. ಆಯುಷ್ ಮಂತ್ರಾಲಯ ಸೂಚಿಸಿರುವ ಕ್ರಮಗಳು

1. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಮಾನ್ಯ ಸೂಚನೆಗಳು

ಅ. ದಿನಚರಿಯು ಕನಿಷ್ಠ ಪಕ್ಷ 30 ನಿಮಿಷಗಳ ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿರಬೇಕು.

ಆ. ಆಹಾರದಲ್ಲಿ ಅರಿಶಿನ, ಜೀರಿಗೆ, ಕೊತ್ತಂಬರಿ ಮತ್ತು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಬಳಸಬೇಕು.

2. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಯಗಳು

ಅ. ಪ್ರತಿದಿನ ಬೆಳಗ್ಗೆ ಒಂದು ಚಹಾ ಚಮಚ ಚ್ಯವನಪ್ರಾಶ ಸೇವಿಸಬೇಕು. ಮಧುಮೇಹಿಗಳು ಸಕ್ಕರೆ ಮುಕ್ತ ಚ್ಯವನಪ್ರಾಶ ಸೇವಿಸಬೇಕು.

ಆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಗಿಡಮೂಲಿಕೆಗಳಿರುವ ಚಹಾವನ್ನು ಕುಡಿಯಬೇಕು. ಜೊತೆಗೆ ತುಳಸಿ, ದಾಲ್ಚಿನ್ನಿ ಚಕ್ಕೆ, ಕರಿಮೆಣಸು, ಶುಂಠಿ ಮತ್ತು ಒಣದ್ರಾಕ್ಷಿಗಳಿಂದ ಮಾಡಿದ ಕಷಾಯವನ್ನು ಕುಡಿಯಬೇಕು. ಇದರಲ್ಲಿ ರುಚಿಗೆ ಬೇಕಾದಷ್ಟು ಬೆಲ್ಲ ಮತ್ತು / ಅಥವಾ ನಿಂಬೆ ರಸ ಸೇರಿಸಬಹುದು.

ಇ. 150 ಮಿಲಿ ಬಿಸಿ ಹಾಲಿನಲ್ಲಿ ಅರ್ಧ ಚಹಾ ಚಮಚ ಅರಿಶಿನ ಪುಡಿಯನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಬೇಕು.

1 ಆ 3 ಆ 6 ಆ. ವೈದ್ಯ ಸುವಿನಯ ದಾಮ್ಲೆ (ಮಹಾರಾಷ್ಟ್ರ) ಯವರು ತಿಳಿಸಿರುವ ಆಯುರ್ವೇದದ ಉಪಚಾರಗಳು

1. ‘ಧೂಪನ’ ಚಿಕಿತ್ಸೆ

ಅ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮನೆಯಲ್ಲಿ ಧೂಪ ಹಾಕಬೇಕು.

ಆ. ಧೂಪದ್ರವ್ಯ ಲಭ್ಯವಿಲ್ಲದಿದ್ದರೆ ಬೇವಿನ ಎಲೆ, ಅರಿಶಿನದ ಪುಡಿ, ಕರ್ಪೂರ, ಗುಗ್ಗುಳ, ಲವಂಗ, ಏಲಕ್ಕಿ ಸಿಪ್ಪೆ, ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆ, ಮೆಣಸಿನಕಾಯಿ ಕಾಂಡ, ತುಪ್ಪ, ಅಕ್ಷತೆ, ಹಾಗೆಯೇ ಹಸುವಿನ ಸೆಗಣಿಯ ಬೆರಣಿ, ತೆಂಗಿನಕಾಯಿ ಚಿಪ್ಪು (ಕರಟ) ಮತ್ತು ಇದ್ದಿಲು ಇವುಗಳಲ್ಲಿ ಲಭ್ಯವಿರುವುದನ್ನು ಬಳಸಿ ಧೂಪ ಹಾಕಬೇಕು.

2. ದೃಷ್ಟಿ ನಿವಾಳಿಸುವುದು : ಮುಸ್ಸಂಜೆಯ ಸಮಯದಲ್ಲಿ ಮಕ್ಕಳ ಮತ್ತು ವೃದ್ಧರ ದೃಷ್ಟಿ ನಿವಾಳಿಸಬೇಕು. (ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನದ ಗ್ರಂಥಗಳು ‘ಉಪ್ಪು-ಸಾಸಿವೆ, ತೆಂಗಿನಕಾಯಿ, ಲಿಂಬೆ ಇತ್ಯಾದಿಗಳಿಂದ ದೃಷ್ಟಿ ಹೇಗೆ ತೆಗೆಯಬೇಕು ?‘ ಮತ್ತು ‘ಕರ್ಪೂರ, ಕಪ್ಪು ಉದ್ದು, ವೀಳ್ಯದೆಲೆ, ಇತ್ಯಾದಿಗಳಿಂದ ದೃಷ್ಟಿ ಹೇಗೆ ತೆಗೆಯಬೇಕು ?‘)

3. ಔಷಧಿಗಳ ಸಿಂಪಡನೆ : ಮನೆ ಮತ್ತು ಹೊಲದಲ್ಲಿ ಗೋಮೂತ್ರವನ್ನು ಸಿಂಪಡಿಸಿ. ಗೋಮೂತ್ರ ಲಭ್ಯವಿಲ್ಲದಿದ್ದರೆ, ಗೋವಿನ ಸೆಗಣಿ ನೀರಿನಲ್ಲಿ ಕರಗಿಸಿ ಎಲ್ಲೆಡೆ ಸಿಂಪಡಿಸಬೇಕು. ಅಲ್ಲದೆ, ಬೇವು, ಹೊಂಗೆ, ಅರಿಶಿನ, ತುಳಸಿ ಮುಂತಾದ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸಿದ ನಂತರ ಮನೆಯ ಸುತ್ತಲೂ ನೀರನ್ನು ಸಿಂಪಡಿಸಿ. (ನೀರಿನಲ್ಲಿ ಗಿಡಮೂಲಿಕೆಗಳ ಅರ್ಕ ಇಳಿದ ನಂತರ ನೀರಿನ ಬಣ್ಣವು ಗಾಢವಾಗುತ್ತದೆ.)

4. ಪ್ರತ್ಯೇಕವಾಗಿರುವುದು (ಕ್ವಾರಂಟೈನ್) : ಸಂಪರ್ಕದಿಂದ ಸೋಂಕು ಹರಡುತ್ತವೆ ಎಂದು ಆಯುರ್ವೇದದಲ್ಲೂ ಹೇಳಲಾಗಿದೆ.

ಪ್ರಸಙ್ಗಾದ್ಗಾತ್ರಸಂಸ್ಪರ್ಶಾನ್ನಿಃಶ್‍ವಾಸಾತ್ ಸಹಭೋಜನಾತ್ ।
ಸಹಶಯ್ಯಾಸನಾಚ್ಚಾಪಿ ವಸ್ತ್ರಮಾಲ್ಯಾನುಲೇಪನಾತ್ ॥
ಕುಷ್ಠಂ ಜ್ವರಶ್‍ಚ ಶೋಷಶ್‍ಚ ನೇತ್ರಾಭಿಷ್ಯನ್ದ ಏವ ಚ ।
ಔಪಸರ್ಗಿಕರೋಗಾಶ್‍ಚ ಸಙ್ಕ್ರಾಮನ್ತಿ ನರಾನ್ನರಮ್ ॥
– ಸುಶ್ರುತಸಂಹಿತಾ, ನಿದಾನಸ್ಥಾನ, ಅಧ್ಯಾಯ ೫, ಶ್‍ಲೋಕ ೩೩ ಆಣಿ ೩೪

ಅರ್ಥ : ಒಟ್ಟಿಗೆ ಕೆಲಸ ಮಾಡುವುದು, ಪರಸ್ಪರ ಸ್ಪರ್ಶಿಸುವುದು, ಇತರರ ಉಸಿರನ್ನು ಉಸಿರಾಡುವುದು, ಒಟ್ಟಿಗೆ ತಿನ್ನುವುದು, ಒಂದೇ ಆಸನದ ಮೇಲೆ ಒಟ್ಟಿಗೆ ಕುಳಿತುಕೊಳ್ಳುವುದು, ಒಂದೇ ಹಾಸಿಗೆಯ ಮೇಲೆ ಮಲಗುವುದು, ಪರಸ್ಪರರ ಬಟ್ಟೆಗಳನ್ನು ಧರಿಸುವುದು, ಇತರರು ಮೂಸಿ ನೋಡಿರುವ ಹೂವುಗಳನ್ನು ಆಘ್ರಾಣಿಸುವುದು, ಇತರರು ಬಳಸಿರುವ ಗಂಧ (ಚಂದನ) ತಾನು ಹಚ್ಚಿಕೊಳ್ಳುವುದು ಮುಂತಾದ ಕೃತಿಗಳನ್ನು ಮಾಡುವುದರಿಂದ ಚರ್ಮದ ಸಮಸ್ಯೆಗಳು, ಜ್ವರ, ಕ್ಷಯರೋಗ (ಟಿಬಿ), ಮತ್ತು ಕೆಂಗಣ್ಣಿನಂತಹ (conjunctivitis) ಪ್ರಕಾರಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಸಂಪರ್ಕ ಸೀಮಿತಗೊಳಿಸುವುದೊಂದೇ ಮುಖ್ಯ ಉಪಾಯವಾಗಿದೆ. ಪ್ರತ್ಯೇಕವಾಗಿರುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು.

5. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಷಾಯವನ್ನು ಸೇವಿಸುವುದು : 6 ಕಪ್ ನೀರಿನಲ್ಲಿ 5-6 ತುಳಸಿ ಹೂವುಗಳು (ತುಳಸಿ ಪುಡಿ ಬೇಡ), 4 ಕರಿಮೆಣಸು ಮತ್ತು 4 ಲವಂಗ ಸೇರಿಸಿ ಮತ್ತು ಅದು 2 ಕಪ್ ಗೆ ಇಳಿಯುವವರೆಗೆ ಕುದಿಸಬೇಕು. ಅದನ್ನು ಸೋಸಿ ಥರ್ಮಸ್‌ನಲ್ಲಿ ಹಾಕಿಟ್ಟು ದಿನಕ್ಕೆ 3-4 ಬಾರಿ ಕುಡಿಯಬೇಕು.

1 ಆ 3 ಆ 6 ಇ. ಆಯುರ್ವೇದದ ಪ್ರಕಾರ ಇತರ ಉಪಾಯಗಳು

1. ಎಣ್ಣೆ ಮುಕ್ಕಳಿಸಿ ಉಗುಳುವುದು: ಒಂದು ಚಮಚ ಎಳ್ಳು ಅಥವಾ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ತೆಗೆದುಕೊಳ್ಳಬೇಕು; ಆದರೆ ಅದನ್ನು ಕುಡಿಯದೆ, ಅದನ್ನು 2 ರಿಂದ 3 ನಿಮಿಷಗಳ ಕಾಲ ಮುಕ್ಕಳಿಸಬೇಕು. ನಂತರ ಎಣ್ಣೆ ಉಗುಳಿ, ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾಡಬೇಕು.

2. ನಸ್ಯ : ಮೂಗಿಗೆ ತುಪ್ಪ ಅಥವಾ ಎಣ್ಣೆ ಹಾಕಬೇಕು. ಮೂಗಿನ ಹೊಳ್ಳೆಗಳಲ್ಲಿ ದಿನಕ್ಕೆ 2-3 ಬಾರಿ ತುಪ್ಪ ಅಥವಾ ಎಣ್ಣೆಯನ್ನು ಕಿರುಬೆರಳಿನಿಂದ ಹಚ್ಚಬೇಕು.

3. ಇಡೀ ದೇಹಕ್ಕೆ ಎಣ್ಣೆ ಹಚ್ಚುವುದು : ಸ್ನಾನ ಮಾಡುವ ಮೊದಲು ಪ್ರತಿದಿನ ಬೆಳಗ್ಗೆ ದೇಹಕ್ಕೆ ಎಣ್ಣೆ ಹಚ್ಚಬೇಕು.

4. ಒಣ ಕೆಮ್ಮು ಅಥವಾ ಗಂಟಲು ನೋಯುತ್ತಿದ್ದರೆ, ಏನು ಮಾಡಬೇಕು?

ಅ. ದಿನಕ್ಕೆ ಒಮ್ಮೆ ತಾಜಾ ಪುದೀನ ಎಲೆಗಳು ಅಥವಾ ಓಮ ಹಾಕಿರುವ ಬಿಸಿನೀರಿನ ಆವಿಯನ್ನು ಸೇವಿಸಬೇಕು.

ಆ. ಕೆಮ್ಮು ಅಥವಾ ಗಂಟಲು ನೋಯುತ್ತಿದ್ದರೆ, ಅರ್ಧ ಚಹಾ ಚಮಚ ಲವಂಗ ಪುಡಿಯನ್ನು ಬೆಲ್ಲ ಅಥವಾ 1 ಚಹಾ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಇಟ್ಟುಕೊಳ್ಳಬೇಕು. ಕೆಮ್ಮು ಬಂದಾಗ ಈ ಮಿಶ್ರಣದ 1 ಹನಿ ನೆಕ್ಕಬೇಕು.

ಮೇಲಿನ ಉಪಾಯಗಳಿಂದ ಸಾಮಾನ್ಯ ಒಣ ಕೆಮ್ಮು ಅಥವಾ ಗಂಟಲು ನೋವು ಶಮನವಾಗುತ್ತದೆ; ಆದಾಗ್ಯೂ, ಈ ಲಕ್ಷಣಗಳು ಮುಂದುವರಿದರೆ, ವೈದ್ಯಕೀಯ ಸಲಹೆಯನ್ನು ಪಡೆಯಬೇಕು.

5. ಮನೆಮದ್ದು ಎಷ್ಟು ದಿನಗಳ ವರೆಗೆ ಸೇವಿಸಬಹುದು ? : ಸಾಮಾನ್ಯವಾಗಿ, ಯಾವುದೇ ಔಷಧಿ ಒಮ್ಮೆ ಸೇವಿಸಿದರೆ, ಅದರ ಪರಿಣಾಮವನ್ನು (ಒಳ್ಳೆಯದೋ ಕೆಟ್ಟದೋ) ತೋರಿಸಲು 24 ಗಂಟೆಗಳ ಕಾಲವಾದರೂ ಬೇಕಾಗುತ್ತದೆ; ಆದರೆ ಒಂದು ದಿನದಲ್ಲಿ ಈ ಸೂಕ್ಷ್ಮ ಪರಿಣಾಮವನ್ನು ಗಮನಿಸುವುದು ಕಷ್ಟವಾದರೆ, ಮುಂದಿನ 3 ದಿನಗಳವರೆಗೆ ಔಷಧಿಯನ್ನು ಮುಂದುವರಿಸಬೇಕು. ಹೇಗಾದರೂ, ನಿಮಗೆ ಏನೂ ತಿಳಿಯದಿದ್ದರೆ, ಔಷಧಿಯನ್ನು ಗರಿಷ್ಠ 7 ದಿನಗಳವರೆಗೆ ಮುಂದುವರಿಸಬೇಕು. 7 ದಿನಗಳ ಚಿಕಿತ್ಸೆಯ ನಂತರವೂ ಯಾವುದೇ ಪ್ರಯೋಜನವಿಲ್ಲದಿದ್ದರೆ ಅಥವಾ ಔಷಧಿಯ ಅಡ್ಡಪರಿಣಾಮಗಳು ಕಂಡುಬಂದರೆ, ಆ ಔಷಧಿಯನ್ನು ಸೇವಿಸುವುದು ನಿಲ್ಲಿಸಬೇಕು ಮತ್ತು ತಜ್ಞ ವೈದ್ಯರ ಮಾರ್ಗದರ್ಶನ ಪಡೆಯಬೇಕು.

– ವೈದ್ಯ ಮೇಘರಾಜ್ ಪರಾಡ್ಕರ್, ಸನಾತನ ಆಶ್ರಮ, ರಾಮನಾಥಿ , ಗೋವಾ. (24.6.2017)

6. ವಿರೇಚನ : ಯಾವುದೇ ಶಾರೀರಿಕ ತೊಂದರೆಯಿಲ್ಲದವರು, ಸತತವಾಗಿ 4 ದಿನಗಳವರೆಗೆ ಬೆಳಗ್ಗೆ 4 ಗಂಟೆಗೆ, 4 ಚಹಾ ಚಮಚ ಹರಳೆಣ್ಣೆ (ಕ್ಯಾಸ್ಟರ್ ಆಯಿಲ್) ಸೇವಿಸಬೇಕು. ಇದರಿಂದ 3-4 ಬಾರಿ ಜುಲಾಬು (ಭೇದಿ) ಆಗಿ ಹೊಟ್ಟೆ ಸ್ವಚ್ಛವಾಗುತ್ತದೆ. ಇದರಿಂದ ಹಸಿವು ಕೂಡ ಹೆಚ್ಚಾಗುತ್ತದೆ.

7. ಇತರ : ಯಾವುದೇ ವಿಷಾಣುಗಳಿಂದ ಉಂಟಾಗುವ ರೋಗ ಮುಗಿದ ನಂತರ ಪಂಚಕರ್ಮವನ್ನು ಮಾಡುವ ತಜ್ಞ ವೈದ್ಯರಿಂದ ವಮನ, ಬಸ್ತಿ ಮತ್ತು ರಕ್ತಮೋಕ್ಷಣ ಮಾಡಿಸಿಕೊಳ್ಳಬೇಕು.

(ಆಧಾರ : ದೈನಿಕ ‘ಸನಾತನ ಪ್ರಭಾತ’, 26.4.2020)

1 ಆ 3 ಆ 7. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆಧ್ಯಾತ್ಮಿಕ ಪರಿಹಾರಗಳು : ಸಮಾಜದಲ್ಲಿ ಹೆಚ್ಚುತ್ತಿರುವ ಅನಾಚಾರದಿಂದ (ಉದಾ. ಅನ್ಯಾಯ, ಅತ್ಯಾಚಾರ, ಸ್ವೇಚ್ಛಾಚಾರ, ಕೊಲೆ ಇತ್ಯಾದಿಗಳಿಂದಾಗಿ), ಅಂದರೆ ಸಮಷ್ಟಿ ಪಾಪ ಹೆಚ್ಚಾಗುತ್ತಿರುವುದರಿಂದ ಸಮಾಜದ ಪ್ರಾರಬ್ಧ ಕಠಿಣವಾಗುತ್ತಿದೆ. ‘ಇದರ ಪರಿಣಾಮವು ಸೃಷ್ಟಿ ಅಥವಾ ಸಮಾಜದ ಮೇಲೆ ಅತೀವೃಷ್ಟಿ, ಅನಾವೃಷ್ಟಿ, ಭೂಕಂಪಗಳು, ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮುಂತಾದ ವಿಪತ್ತುಗಳ ರೂಪದಲ್ಲಿ ಕಾಣಸಿಗುತ್ತದೆ’ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ‘ಈ ವಿಪತ್ತುಗಳಲ್ಲಿ ಒಂದಾದ ‘ಸಾಂಕ್ರಾಮಿಕ ರೋಗ’ ಹರಡುತ್ತಿದ್ದರೆ, ಅದನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಹೇಗೆ ತಡೆಯಬಹುದು?’, ಎಂದು ನೋಡೋಣ.

ಸಾಂಕ್ರಾಮಿಕ ರೋಗಗಳು ಹರಡುವ ಹಿಂದಿನ ಸೂಕ್ಷ್ಮ, ಆಧ್ಯಾತ್ಮಿಕ ಕಾರಣಗಳನ್ನು ತೊಡೆದುಹಾಕಲು, ಔಷಧಿಗಳ ಜೊತೆಗೆ ‘ಆಧ್ಯಾತ್ಮಿಕ ಪರಿಹಾರ’ ಮಾಡುವುದೂ ಅಗತ್ಯವಿದೆ. ಆಧ್ಯಾತ್ಮಿಕ ಪರಿಹಾರಗಳು ಅಂದರೆ ಸೂಕ್ಷ್ಮ ಅಡೆತಡೆಗಳಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು ಮಾಡುವ ಪರಿಹಾರಗಳು! ಆಧ್ಯಾತ್ಮಿಕ ಪರಿಹಾರಗಳಲ್ಲಿ ಮಂತ್ರಗಳನ್ನು ಪಠಿಸುವುದು, ಸ್ತೋತ್ರಗಳನ್ನು ಪಠಿಸುವುದು, ನಾಮಜಪಿಸುವುದು ಇತ್ಯಾದಿಗಳು ಸೇರಿವೆ. ಸಾಂಕ್ರಾಮಿಕ ರೋಗವಾದ ಕೊರೋನಾ ಇಂದಿಗೂ ವಿಶ್ವದಾದ್ಯಂತ ಹಬ್ಬುತ್ತಿದೆ ಮತ್ತು ಇಲ್ಲಿಯವರೆಗೆ ಲಕ್ಷಾಂತರ ಜನರು ಅದರಿಂದ ಸಾವನ್ನಪ್ಪಿದ್ದಾರೆ. ಎಲ್ಲಿಯವರೆಗೆ ಸಾಂಕ್ರಾಮಿಕ ಕಾಯಿಲೆಗಳಿಗೆ ಪರಿಣಾಮಕಾರಿ ಔಷಧಿಗಳು ಅಥವಾ ಲಸಿಕೆ ಲಭ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ಅಂತಹ ಬಿಕ್ಕಟ್ಟು ಎದುರಿಸಲು ಆಧ್ಯಾತ್ಮಿಕ ಪರಿಹಾರಗಳತ್ತ ಗಮನಹರಿಸುವುದು ಬಹಳ ಆವಶ್ಯಕವಾಗಿದೆ. ಈ ಉಪಾಯಗಳನ್ನು ಮುಂದೆ ನೀಡಲಾಗಿದೆ.

ಅ. ಮಂತ್ರಪಠಣೆ : ಸಾಂಕ್ರಾಮಿಕ ರೋಗಗಳ ಪರಿಣಾಮಗಳನ್ನು ಕಡಿಮೆ ಮಾಡಲು, ಸಂತರು ಮತ್ತು ಮಂತ್ರಗಳ ಅಧ್ಯಯನಕಾರರು ಈ ಕೆಳಗಿನ ಮಂತ್ರಜಪಗಳನ್ನು ಹುಡುಕಿ ನೀಡಿದ್ದಾರೆ. ಆ ಎಲ್ಲ ಮಂತ್ರಗಳನ್ನು ಜಪಿಸುವ ಮೊದಲು, ‘ಹೇ ಸೂರ್ಯದೇವರೇ, ಕ್ರಿಮಿಗಳಿಂದ ನನಾಗಾಗಿರುವ ತೊಂದರೆ ಮತ್ತು ನನ್ನ ಶರೀರದಲ್ಲಿ ಹರಡಿರುವ ವಿಷವು ನಿಮ್ಮ ಸೌಮ್ಯ ಕಿರಣಗಳಿಂದ ನಾಶವಾಗಲಿ. ಒಳ್ಳೆಯ ಸಾಧನೆಯನ್ನು ಮಾಡಲು ನನ್ನ ದೇಹವು ಆರೋಗ್ಯವಾಗಿರಲಿ ಎಂದು ನಾನು ನಿಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಪ್ರಾರ್ಥನೆಯನ್ನು ಸಲ್ಲಿಸಬೇಕು. ಅದರ ನಂತರ, ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಹೀಗೆ ದಿನಕ್ಕೆ ಮೂರು ಬಾರಿ, 21 ಸಲ ಮುಂದಿನ ಮಂತ್ರ ಜಪವನ್ನು ಭಾವಪೂರ್ಣವಾಗಿ ಕೇಳಬೇಕು. ಈ ಮೂರು ಮಂತ್ರಗಳು ‘ಸನಾತನ ಚೈತನ್ಯವಾಣಿ’ ‘ಆಂಡ್ರಾಯ್ಡ್ ಆ್ಯಪ್‘ ನಲ್ಲಿ ಲಭ್ಯವಿವೆ.

ಅ 1. ಸನಾತನದ ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜರು ಹೇಳಿರುವ ‘ವಿಷಾಣು ನಾಶಕ ಮಂತ್ರ’

ಅ. ಅತ್ತ್ರಿವದ್ ವಃ ಕ್ರಿಮಯೋ ಹನ್ಮಿ ಕಣ್ವವಜ್ಜಮದ್ ಅಗ್ನಿವತ್ ।
ಅಗಸ್ತ್ಯಸ್ಯ ಬ್ರಹ್ಮಣಾ ಸಂ ಪಿನಷ್ಮ್ಯಹಂ ಕ್ರಿಮೀನ್ ॥
– ಅಥರ್ವವೇದ, ಕಾಂಡ ೨, ಸೂಕ್ತ ೩೨, ಖಂಡ ೩

ಅರ್ಥ: ಋಷಿಗಳು ಹೇಳುತ್ತಾರೆ, ‘ಎಲೈ ಕ್ರಿಮಿಗಳೇ (ರೋಗ ಉಂಟುಮಾಡುವ ಸೂಕ್ಷ್ಮ ಜೀವಿಗಳೇ)! ಅತ್ರಿ, ಕಣ್ವ ಮತ್ತು ಜಮದಗ್ನಿ ಋಷಿಗಳು ನಿಮ್ಮನ್ನು ನಾಶಪಡಿಸಿದಂತೆಯೇ ನಾನು ನಿಮ್ಮನ್ನು ನಾಶಮಾಡುತ್ತೇನೆ. ಅಗಸ್ತ್ಯ ಋಷಿಗಳ ಮಂತ್ರದೊಂದಿಗೆ, ‘ರೋಗವನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳು ಮತ್ತೆ ಹರಡದಂತೆ’ ನಾನು ವ್ಯವಸ್ಥೆ ಮಾಡುತ್ತೇನೆ’.

ಆ. ಹತಾಸೋ ಅಸ್ಯ ವೇಶಸೋ ಹತಾಸಃ ಪರಿವೇಶಸಃ ।
ಅಥೋ ಯೇ ಕ್ಷುಲ್ಲಕಾಃ ಇವ ಸರ್ವೇ ತೇ ಕ್ರಿಮಯೋ ಹತಾಃ ॥
– ಅಥರ್ವವೇದ, ಕಾಂಡ ೨, ಸೂಕ್ತ ೩೨, ಖಂಡ ೫

ಅರ್ಥ : ಈ ಕ್ರಿಮಿಗಳ ಮೂಲ ಸ್ಥಾನ (ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿಗಳಿರುವ ಸ್ಥಾನ) ನಾಶವಾಯಿತು, ಆ ಸ್ಥಾನದ ಸಮೀಪವಿರುವ ಸ್ಥಾನಗಳೂ ನಾಶವಾದವು ಮತ್ತು ಯಾವ ಕ್ರಿಮಿಗಳು ಸಣ್ಣ ಬೀಜಗಳ ರೂಪದಲ್ಲಿದ್ದವೋ, ಅವು ಸಹ ನಾಶವಾದವು.

ಅ 2. ಮಂತ್ರ-ಉಪಚಾರ ತಜ್ಞ ಡಾ. ಮೋಹನ್ ಫಡ್ಕೆ ತಿಳಿಸಿರುವ ಮಂತ್ರ

ಓಂ ಭೂಃ । ಓಂ ಭುವಃ । ಓಂ ಸ್ವಃ । ಓಂ ತತ್ಸವಿತುರ್ವರೇಣ್ಯಮ್ ।
ಓಂ ಭರ್ಗೋ ದೇವಸ್ಯ ಧೀಮಹಿ । ಓಂ ಧಿಯೋ ಯೋ ನಃ ಪ್ರಚೋದಯಾತ್ ॥
– ಋಗ್ವೇದ, ಮಂಡಲ ೩, ಸೂಕ್ತ ೬೨, ಋಚಾ ೧೦

ಅರ್ಥ : ನಾವು ದೈದೀಪ್ಯಮಾನ ಭಗವಾನ ಸಾವಿತಾ (ಸೂರ್ಯ) ದೇವರ ಆ ತೇಜದ ಧ್ಯಾನವನ್ನು ಮಾಡುತ್ತೇವೆ. ಅದು (ತೇಜವು) ನಮ್ಮ ಪ್ರೇರಣೆ ನೀಡಲಿ.

ಆರು ಬಾರಿ ‘ಓಂಕಾರ’ವಿರುವ ಈ ಗಾಯತ್ರಿ ಮಂತ್ರವು ಸಾಂಕ್ರಾಮಿಕದ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು  ಉಸಿರಾಟದ ಎಲ್ಲ ಕಾಯಿಲೆಗಳಿಗೆ ಉಪಯುಕ್ತವಾಗಿದೆ.

ಆ. ಸ್ತೋತ್ರಪಠಣೆ : ಆಪತ್ಕಾಲದಲ್ಲಿ ರೋಗಗಳಿಂದ ದೇಹದ ರಕ್ಷಣೆಯಾಗಲು, ಪ್ರತಿದಿನ ಬೆಳಗ್ಗೆ ‘ಚಂಡೀಕವಚ್ (ದೇವಿಕವಚ್)’ ಮತ್ತು ಸಂಜೆ ‘ಬಗಲಾಮುಖಿ ದಿಗ್ಬಂಧನ ಸ್ತೋತ್ರ’ ಕೇಳಬೇಕು. ಈ ಸ್ತೋತ್ರಗಳು ‘ಸನಾತನ ಚೈತನ್ಯವಾಣಿ’ ‘ಆಂಡ್ರಾಯ್ಡ್ ಅಪ್ಲಿಕೇಶನ್’ ನಲ್ಲಿ ಲಭ್ಯವಿವೆ.

ಇ. ಸನಾತನದ ಸದ್ಗುರು ಡಾ. ಮುಕುಲ ಗಾಡಗೀಳ ‘ಕೊರೋನಾ’ ಸಾಂಕ್ರಾಮಿಕದ ಸಂದರ್ಭದಲ್ಲಿ ಹೇಳಿರುವ ಜಪ : ‘ಕೊರೋನಾ’ ಸಾಂಕ್ರಾಮಿಕ ಸಮಯದಲ್ಲಿ, ಸನಾತನದ ಸಂತರಾದ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಂಕ್ರಾಮಿಕದ ಸಮಯದಲ್ಲಿ ಆಧ್ಯಾತ್ಮಿಕ ಬಲ ಹೆಚ್ಚಿಸಲು ನಾಮಜಪವನ್ನು ಕಂಡುಹಿಡಿದಿದ್ದರು. ಇದರ ಲಾಭವನ್ನು ಸನಾತನದ ಸಾಧಕರು ಪಡೆದಿದ್ದಾರೆ.

1. ನಾಮಜಪ : ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ಗುರುದೇವ ದತ್ತ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಶ್ರೀ ದುರ್ಗಾದೇವ್ಯೈ ನಮಃ | – ಓಂ ನಮಃ ಶಿವಾಯ |

ಈ ನಾಮಜಪವು ‘ಸನಾತನ ಚೈತನ್ಯವಾಣಿ’ ‘ಆಂಡ್ರಾಯ್ಡ್ ಆ್ಯಪ್’ ನಲ್ಲಿ ಲಭ್ಯವಿದೆ.

2. ಪ್ರಾರ್ಥನೆ : ‘ಕೊರೋನಾ ವಿಷಾಣು ವಿರುದ್ಧ ನನ್ನ ದೇಹದ ರೋಗನಿರೋಧಕ ಶಕ್ತಿಯು ಹೆಚ್ಚಾಗಲಿ ಮತ್ತು ನನಗೆ ಆಧ್ಯಾತ್ಮಿಕ ಬಲವು ಪ್ರಾಪ್ತವಾಗಲಿ’ ಎಂದು ನಾಮಜಪ ಮಾಡುವ ಮೊದಲು ದೇವರನ್ನು ಪ್ರಾರ್ಥಿಸಿ.

3. ಅವಧಿ : ಕೊರೋನಾ ಸೋಂಕು ತಗುಲದಂತೆ ಈ ನಾಮಜಪವನ್ನು ದಿನಕ್ಕೆ 108 ಬಾರಿ (ಅಥವಾ 1 ಗಂಟೆ) ಮಾಡಬೇಕು.

ಯಾರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ ಅಥವಾ ರೋಗ ತಗುಲಿದೆ, ಅಂತಹವರು ಅವರ ತೊಂದರೆಯ ಪ್ರಮಾಣ (ಅಲ್ಪ ಅಥವಾ ಅಧಿಕ) ನೋಡಿ ಪ್ರತಿದಿನ 2 ರಿಂದ 4 ತಾಸು ನಾಮಜಪ ಮಾಡಬೇಕು. ಕೊರೋನಾ ವಿಷಾಣು ಸಂಪೂರ್ಣವಾಗಿ ನಿರ್ನಾಮವಾಗಲು 21 ದಿನಗಳ ವರೆಗೆ ನಾಮ ಜಪಿಸುವುದು ಒಳ್ಳೆಯದು.

1 ಆ 3 ಆ 8. ಕೊರೋನಾ ವಿರುದ್ಧ ಹೋರಾಡುವಲ್ಲಿ ಯೋಗ ಮತ್ತು ಧ್ಯಾನದ ಮಹತ್ವ : ಅಮೇರಿಕಾದ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಆರೋಗ್ಯ ಮಾರ್ಗಸೂಚಿ ಪ್ರಕಟಿಸಿದೆ. ‘ಕೊರೋನಾ’ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉಸಿರಾಟವನ್ನು ನಿಯಂತ್ರಿಸಬೇಕು ಎಂದು ಅದು ಹೇಳುತ್ತದೆ. ಅದಕ್ಕೆ ಯೋಗ ಮತ್ತು ಧ್ಯಾನ ಸಹಕಾರಿಯಾಗಿದೆ. ಈ ಮಾರ್ಗಸೂಚಿಯ ಪ್ರಕಟಣೆಯ ನಂತರ, ಅಮೆರಿಕಾದ ಅಲಬಾಮಾದ ಶಾಲೆಗಳಲ್ಲಿ ಯೋಗಾಸನಗಳ ಮೇಲಿನ 27 ವರ್ಷಗಳ  ನಿಷೇಧವನ್ನು ತೆಗೆದುಹಾಕಲಾಯಿತು. (ಆಧಾರ : ದೈನಿಕ ‘ಸನಾತನ ಪ್ರಭಾತ’, 17.3.2020)

ಸೂಚನೆ : ರಾಜ್ಯ ಮತ್ತು ಕೇಂದ್ರ ಸರಕಾರಗಳು, ತಜ್ಞ ವೈದ್ಯರು ಕೊರೋನಾ ಸೋಂಕು ಹರಡುವುದನ್ನು ತಡೆಯಲು ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಕೊರೋನಾ ರೋಗಾಣುಗಳ ವಿರುದ್ಧ ತಮ್ಮಲ್ಲಿ ನಿರೋಧಕ ಕ್ಷಮತೆಯು ನಿರ್ಮಾಣವಾಗಲು ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆದು ಅವುಗಳನ್ನು ಪಾಲಿಸಿ. ಆಧ್ಯಾತ್ಮಿಕ ಉಪಾಯಗಳು ಯಾವುದೇ ವೈದ್ಯಕೀಯ ಉಪಚಾರಕ್ಕೆ ಪರ್ಯಾಯವಾಗಿರದೇ, ವೈದ್ಯಕೀಯ ಉಪಾಯಗಳನ್ನು ಮಾಡುವಾಗ ಅವುಗಳೊಂದಿಗೆ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಉಪಯುಕ್ತವಾಗಿವೆ. ಆಧ್ಯಾತ್ಮಿಕ ಬಲ ಹೆಚ್ಚಾಗಲೆಂದು ಈ ಜಪವನ್ನು ಮಾಡುವುದರ ಬಗ್ಗೆ ವಾಚಕರು ಸ್ವತಃ ನಿರ್ಧರಿಸಬೇಕು ಎಂದು ಸೂಚಿಸುತ್ತೇವೆ.

1 ಆ 4. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಅ. ಸಮಾಜದಲ್ಲಿ ಸಾಂಕ್ರಾಮಿಕ ರೋಗವು ಹರಡುತ್ತಿದೆ ಎಂದು ತಿಳಿದ ನಂತರ ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು.

ಆ. ತರಕಾರಿ ಮತ್ತು ಆಹಾರವನ್ನು ಸೇವಿಸುವಾಗ ಕಾಳಜಿ ವಹಿಸಬೇಕು. ಹಳಸಿದ ಆಹಾರವನ್ನು ಸೇವಿಸಬಾರದು.

ಇ. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆಗಳಂತಹ ಸಾಮಾನ್ಯ ಸೋಂಕಿನ ಯಾವುದೇ ಪ್ರಾಥಮಿಕ ಲಕ್ಷಣಗಳು ನಿಮ್ಮಲ್ಲಿದ್ದರೆ ಒಂದು ಕೋಣೆಯಲ್ಲಿ (ಹೋಮ್ ಕ್ವಾರಂಟೈನ) ಏಕಾಂತದಲ್ಲಿರಬೇಕು. ನೀವು ಬಳಸುವ ಪಾತ್ರೆಗಳು, ಕರವಸ್ತ್ರ, ಬಟ್ಟೆ ಇತ್ಯಾದಿ ಇತರ ಕುಟುಂಬದವರ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು.

ಈ. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಹೆಚ್ಚಾಗುವುದನ್ನು ನೀವು ಗಮನಿಸಿದರೆ, ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ರೋಗಲಕ್ಷಣಗಳು ತೀವ್ರವಾಗಿದ್ದರೆ, ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿ, ಸರ್ಕಾರ ನಡೆಸುವ ಕ್ವಾರಂಟೈನ್ ಸೆಂಟರ್ ಗೆ ಸೇರಿ ಚಿಕಿತ್ಸೆ ಪಡೆಯಬೇಕು.

1 ಆ 5. ‘ಕೊರೋನಾ’ ನಂತಹ ರೋಗಗಳು ಹರಡುವುದನ್ನು ತಡೆಯಲು ಹಿಂದೂ ಸಂಸ್ಕೃತಿಯಂತೆ ಆಚರಿಸುವುದು ಅಗತ್ಯ!
– ಶ್ರೀ. ರಮೇಶ್ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಅ. ‘ಕೈಜೋಡಿಸಿ ನಮಸ್ಕರಿಸುವ’ ಮಹತ್ವವನ್ನು ಗುರುತಿಸಿದ ಜಗತ್ತು! : ಕೊರೋನಾ ಹಠಾತ್ತನೆ ಅನೇಕ ದೇಶಗಳ ಮೇಲೆ ವಿಪರೀತ ಪರಿಣಾಮ ಬೀರಿತು. ಅನೇಕ ಪಾಶ್ಚಿಮಾತ್ಯ ದೇಶಗಳು ‘ಕೈಕುಲುಕುವುದು, ತಬ್ಬಿಕೊಳ್ಳುವುದು ಮತ್ತು ಪರಸ್ಪರ ಚುಂಬಿಸುವ’ ಅಭ್ಯಾಸವೂ ರೋಗದ ಹರಡುವಿಕೆಗೆ ಕಾರಣವಾಗಿದೆ ಎಂದು ಕಂಡುಹಿಡಿದವು. ಈಗ ‘ನಮಸ್ತೆ’ ಎಂದು ಹೇಳುವುದು ವಾಡಿಕೆ. ಇಂಗ್ಲೆಂಡ್‌ನ ರಾಜಕುಮಾರ ಚಾರ್ಲ್ಸ್ ಮತ್ತು ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ, ಅಮೆರಿಕಾದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜರ್ಮನಿಯ ಚಾನ್ಸಲರ್ ಅಂಗೆಲಾ ಮರ್ಕೆಲ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಐರ್ಲೆಂಡ್ ಅಂದಿನ ಪ್ರಧಾನಿ ಲಿಯೋ ವರಾಡ್ಕರ್ ಸೇರಿದಂತೆ ಅನೇಕ ನಾಯಕರು ಕೈಜೋಡಿಸಿ ನಮಸ್ಕಾರ ಸಲ್ಲಿಸಲು ಪ್ರಾರಂಭಿಸಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು “ಕೊರೋನಾದಿಂದ ನಮ್ಮನ್ನು ರಕ್ಷಿಸಲು ಭಾರತೀಯ ಆಚರಣೆಗಳನ್ನು ಪಾಲಿಸಿ” ಎಂದು ಕರೆ ನೀಡಿದರು. ಭಾರತದ ಪ್ರಧಾನಿ ಶ್ರೀ. ನರೇಂದ್ರ ಮೋದಿಯವರು ‘ಜಗತ್ತು ಕೈಜೋಡಿಸಿ ನಮಸ್ಕರಿಸುವುದನ್ನು ರೂಢಿಸಿಕೊಳ್ಳಬೇಕೆಂದು’ ಮನವಿ ಮಾಡಿದರು. ಇದರಿಂದ ಹಿಂದೂ ಸಂಸ್ಕೃತಿಗೆ ಅನುಗುಣವಾಗಿ ವರ್ತಿಸುವುದು ಕಾಲದ ಆವಶ್ಯಕತೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಆ. ಪ್ರಾಚೀನ ‘ಚರಕ ಸಂಹಿತಾ’ದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಪರಿಹಾರಗಳನ್ನು ನೀಡಲಾಗಿದೆ : ಪ್ರಾಚೀನ ಹಿಂದೂ ಗ್ರಂಥವಾದ ‘ಚರಕ ಸಂಹಿತಾ’ದಲ್ಲಿ ‘ಜನಪದೋಧ್ವಂಸ’ ಅಂದರೆ ‘ಮಹಾಮಾರಿ’ಗಳ ಬಗ್ಗೆ ಉಲ್ಲೇಖಿಸುವುದಲ್ಲದೆ, ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಸಹ ನೀಡಲಾಗಿದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ದೈನಂದಿನ ಕ್ರಮಗಳ ಬಗ್ಗೆಯೂ ಇದು ವಿವರಿಸುತ್ತದೆ. ಇಂದು ಸಾಂಕ್ರಾಮಿಕ ರೋಗಗಳಿಗೆ ಅವು ನಿಖರವಾಗಿ ಅನ್ವಯಿಸುತ್ತವೆ. ಇತರರ ಎಂಜಲನ್ನವನ್ನು ತಿನ್ನಬಾರದು, ಹೊರಗಿನಿಂದ ಬಂದ ನಂತರ ಮುಖ, ಕೈ ಕಾಲುಗಳನ್ನು ತೊಳೆದ ಬಳಿಕವೇ ಮನೆ ಪ್ರವೇಶಿಸುವುದು ಮುಂತಾದ ಅನೇಕ ವಿಷಯಗಳನ್ನು ಹಿಂದೂ ಸಂಸ್ಕೃತಿ ನಮಗೆ ಕಲಿಸಿದೆ.

ಇ. ಹಿಂದೂ ಧರ್ಮದ ಆಚಾರಗಳು ಒಂದು ರೀತಿಯಲ್ಲಿ ವೈಜ್ಞಾನಿಕವಾದ್ದರಿಂದ, ಅವುಗಳನ್ನು ಆಚರಿಸುವ ಮೂಲಕ ಆರೋಗ್ಯವಂತರಾಗಿ ಮತ್ತು ಸಂತೋಷವಾಗಿರಿ ! : ಹಿಂದೂ ಸಂಸ್ಕೃತಿಯ ಪ್ರಕಾರ ಪ್ರತಿದಿನ ಮಾಡಬೇಕಾದ ಧರ್ಮಾಚರಣೆ ಉದಾ. ಧೂಪವನ್ನು ತೋರಿಸುವುದು, ಊದುಬತ್ತಿ ಹಚ್ಚುವುದು, ತುಪ್ಪದ ದೀಪವನ್ನು ಬೆಳಗಿಸುವುದು, ತುಳಸಿ ವೃಂದಾವನವನ್ನು ಪೂಜಿಸುವುದು, ಗೋಮಯದಿಂದ ನೆಲ ಸಾರಿಸುವುದು, ಕರ್ಪೂರದ ಆರತಿ ಬೆಳಗುವುದು, ಅಗ್ನಿಹೋತ್ರವನ್ನು ಮಾಡುವುದು ಇತ್ಯಾದಿಗಳು ವಾತಾವರಣ ಮತ್ತು ವಾಸ್ತು ಎರಡೂ ಶುದ್ಧೀಕರಿಸುತ್ತವೆ. ಅಂತಹ ವಾಸ್ತುವಿನಲ್ಲಿ ಸಾಂಕ್ರಾಮಿಕ ರೋಗಗಳ ವಿಷಾಣುಗಳು ಹರಡುವ ಪ್ರಮಾಣವೂ ವಿರಳವಾಗಿರುತ್ತದೆ. ಇದರಿಂದ ಹಿಂದೂ ಸಂಸ್ಕೃತಿಯಲ್ಲಿ ತಿಳಿಸಿರುವ ಧರ್ಮಾಚರಣೆಯು ಉಪಯುಕ್ತ ಮತ್ತು ವೈಜ್ಞಾನಿಕವಾಗಿಯೂ ಸರಿಯಾಗಿದೆ ಎಂಬುದು ಸಾಬೀತಾಗುತ್ತದೆ. ನಮ್ಮ ಪೂರ್ವಜರ ಅಚರಿಸಿ ಬಂದಿರುವ ವಿವಿಧ ಧಾರ್ಮಿಕ ಕೃತಿಗಳನ್ನು ಅನುಸರಿಸಿದರೆ ನಾವು ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

Leave a Comment