ಹೋಳಿ ಬಣ್ಣಗಳನ್ನು ತೆಗೆಯಲು ೧೦ ಉಪಾಯಗಳು

ಹೋಳಿ ಹಬ್ಬದ ದಿನ ಗುಲಾಲ್ ಆಡುವುದರಿಂದ ಚರ್ಮಕ್ಕೆ ಹಚ್ಚಿದ ಬಣ್ಣವನ್ನು ತೆಗೆಯುವುದು ಕಷ್ಟ. ಬಣ್ಣ ಉಜ್ಜಿ ತೆಗೆದ ನಂತರ, ಚರ್ಮವು ಒರಟಾಗಿ ಒಣಗುತ್ತದೆ, ಇದರೊಂದಿಗೆ ದೇಹದ ತೆರೆದ ಭಾಗಗಳಲ್ಲಿ ಸುಟ್ಟಂತೆ ಅನುಭವವಾಗುತ್ತದೆ. ಅಂತಹ ಸಮಯದಲ್ಲಿ, ಚರ್ಮಕ್ಕೆ ಹಾನಿಯಾಗದಂತೆ ಹೋಳಿ ಬಣ್ಣಗಳನ್ನು ತೆಗೆಯುವ ಕೆಲವು ಸುಲಭ ಪರಿಹಾರಗಳ ಬಗ್ಗೆ ತಿಳಿದುಕೊಳ್ಳುವುದು ಉಪಯುಕ್ತವಾಗಿದೆ.

೧. ಬೇಳೆ ಹಿಟ್ಟು ಅಥವಾ ಗೋಧಿ ಹಿಟ್ಟಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಮಿಶ್ರಣವನ್ನು ತಯಾರಿಸಿ. ನಂತರ ಈ ಮಿಶ್ರಣವನ್ನು ದೇಹದ ಮೇಲೆ ನಿಧಾನವಾಗಿ ಸವರಿ ಬಣ್ಣವನ್ನು ತೆಗೆದುಹಾಕಿ. ಬೇಳೆ ಹಿಟ್ಟು ಅಥವಾ ಗೋಧಿ ಹಿಟ್ಟಿಗೆ ತೆಂಗಿನ ಎಣ್ಣೆ ಅಥವಾ ಮೊಸರನ್ನು ಸೇರಿಸುವ ಮೂಲಕವೂ ಚರ್ಮವನ್ನು ಸ್ವಚ್ಛಗೊಳಿಸಬಹುದು.

೨. ಸ್ವಲ್ಪ ಹಸಿ ಪಪ್ಪಾಯಿಯನ್ನು ಹಾಲಿನಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಮುಲ್ತಾನಿ ಮಿಟ್ಟಿ ಮತ್ತು ಬಾದಾಮ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಿರಿ.

೩. ಕೂದಲಿನಿಂದ ಬಣ್ಣವನ್ನು ತೆಗೆಯಲು, ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಇದು ಕೂದಲಿನಿಂದ ಒಣ ಬಣ್ಣವನ್ನು ತೆಗೆದುಹಾಕುತ್ತದೆ. ಅದರ ನಂತರ ಕೂದಲನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.

೪. ಬೇಳೆ ಹಿಟ್ಟು, ಮೊಸರು ಅಥವಾ ನೆಲ್ಲಿಕಾಯಿ ಹುಡಿಯಿಂದ ತಲೆಯನ್ನು ತೊಳೆಯಬಹುದು. ನೆಲ್ಲಿಕಾಯಿ ಹುಡಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಅದರ ನಂತರ ಅದನ್ನು ತಲೆಗೆ ಹಚ್ಚಿ ಕೂದಲನ್ನು ಚೆನ್ನಾಗಿ ತೊಳೆಯಿರಿ.

೫. ಬೇಳೆ ಹಿಟ್ಟಿನಲ್ಲಿ ನಿಂಬೆ ಮತ್ತು ಹಾಲಿನ ಮಿಶ್ರಣ ಮಾಡಿ ತ್ವಚೆಗೆ ಹಚ್ಚಿ. ನಂತರ ೨೦ ನಿಮಿಷಗಳ ಕಾಲ ಹಾಗೆ ಬಿಡಿ. ಅದರ ನಂತರ ನೀರಿನಿಂದ ತೊಳೆಯಿರಿ.

೬. ಮಸೂರ್ ಬೇಳೆಯನ್ನು ರಾತ್ರಿಯಿಡೀ ನೆನೆಸಿ, ಬೆಳಗ್ಗೆ ಅದನ್ನು ನುಣ್ಣಗೆ ರುಬ್ಬಿಸಿ ಹಾಲಿನಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ಸ್ವಲ್ಪ ಸಮಯದವರೆಗೆ ತಿಕ್ಕಿ. ಅದರ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

೭. ಸೌತೆಕಾಯಿಯ ರಸವನ್ನು ಹಿಂಡಿ, ಅದಕ್ಕೆ ಸ್ವಲ್ಪ ಪನ್ನೀರು (ಗುಲಾಬಿಯ ನೀರನ್ನು, ರೋಸ್ ವಾಟರ್) ಮತ್ತು ಒಂದು ಚಮಚ ವಿನೆಗರ್ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.

೮. ಮಾಗಿದ ಬಾಳೆಹಣ್ಣಿನಲ್ಲಿ ನಿಂಬೆ ರಸವನ್ನು ಬೆರೆಸಿ ಕಲಸಿಕೊಳ್ಳಿ. ನಂತರ ಇದನ್ನು ತ್ವಚೆಯ ಮೇಲೆ ಸ್ವಲ್ಪ ಸಮಯ ತಿಕ್ಕಿ. ಅದು ಒಣಗಿದ ನಂತರ, ನೀರಿನಿಂದ ತೊಳೆದುಹಾಕಿ.

೯. ಮೂಲಂಗಿಯ ರಸವನ್ನು ಹಿಂಡಿ, ಅದರಲ್ಲಿ ಹಾಲು ಮತ್ತು ಬೇಳೆ ಹಿಟ್ಟು ಅಥವಾ ಹಿಟ್ಟನ್ನು ಬೆರೆಸಿ ತಯಾರಾದ ಮಿಶ್ರಣವನ್ನು ಮುಖಕ್ಕೆ ಹಚ್ಚಿ.

೧೦. ಗೋಧಿ ಹಿಟ್ಟು ಮತ್ತು ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಮಿಶ್ರಣವನ್ನು ತಯಾರಿಸಿ ನಂತರ ಈ ಮಿಶ್ರಣವನ್ನು ತ್ವಚೆಗೆ ಹಚ್ಚಿ, ಬಣ್ಣವನ್ನು ತೆಗೆಯಿರಿ.

(ಆಧಾರ : ಅಧ್ಯಾತ್ಮ ಅಮೃತ, ಮಾರ್ಚ ೨೦೧೭)

Leave a Comment