ಗಂಗೆಯ ಮಹತ್ವ

ಅ. ಧರ್ಮಗ್ರಂಥಗಳು ವರ್ಣಿಸಿದ ಗಂಗೆಯ ಮಹಾತ್ಮೆ

ಅ ೧. ಋಗ್ವೇದ : ಇದರಲ್ಲಿನ ಪ್ರಸಿದ್ಧ ನದಿಸೂಕ್ತದಲ್ಲಿ ಮೊದಲು ಗಂಗೆಯ ಆವಾಹನೆ ಮತ್ತು ಸ್ತುತಿ ಮಾಡಲಾಗಿದೆ.

ಅ ೨. ಪದ್ಮಪುರಾಣ : ವಿಷ್ಣುವು ಎಲ್ಲ ದೇವತೆಗಳನ್ನು ಪ್ರತಿನಿಧಿಸುತ್ತಾನೆ ಮತ್ತು ಗಂಗೆ ವಿಷ್ಣುವನ್ನು ಪ್ರತಿನಿಧಿಸುತ್ತಾಳೆ ! ಇದರಲ್ಲಿ ಗಂಗೆಯ ಮಹತ್ವವನ್ನು ವರ್ಣಿಸುವಾಗ, ಪಿತಾ, ಪತಿ, ಮಿತ್ರ ಮತ್ತು ಸಂಬಂಧಿಕರು ವ್ಯಭಿಚಾರೀ, ಪತಿತ, ದುಷ್ಟ, ಚಾಂಡಾಲ ಮತ್ತು ಗುರುಘಾತಕರಾದರೆ ಕ್ರಮವಾಗಿ ಪುತ್ರ, ಪತ್ನಿ, ಮಿತ್ರ ಮತ್ತು ಸಂಬಂಧಿಕರು ಅವರನ್ನು ತ್ಯಜಿಸುತ್ತಾರೆ; ಆದರೆ ಗಂಗೆಯು ಎಂದಿಗೂ ಅವರನ್ನು ತ್ಯಜಿಸುವುದಿಲ್ಲ.

ಅ ೩. ಮಹಾಭಾರತ : ‘ಹೇಗೆ ದೇವತೆಗಳಿಗೆ ಅಮೃತವಿದೆಯೋ, ಹಾಗೆ ಮನುಷ್ಯರಿಗೆ ಗಂಗಾಜಲ (ಅಮೃತ) ವಿದೆ.’

ಅ ೪. ಶ್ರೀಮದ್ಭಗವದ್ಗೀತಾ : ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ (ಅಧ್ಯಾಯ ೧೦, ಶ್ಲೋಕ ೩೧ ರಲ್ಲಿ) ವಿಭೂತಿಯೋಗವನ್ನು ಹೇಳುವಾಗ ‘ಸ್ರೋತಸಾಮಸ್ಮಿ ಜಾಹ್ನವಿ |’ ಅಂದರೆ ‘ಎಲ್ಲ ಪ್ರವಾಹಗಳಲ್ಲಿ ನಾನು ಗಂಗೆಯಾಗಿದ್ದೇನೆ’, ಎಂದು ಹೇಳಿದ್ದಾನೆ.

ಆ. ಎಲ್ಲ ಸಂಪ್ರದಾಯಗಳಿಗೆ ವಂದನೀಯ

ಭಾರತದಲ್ಲಿನ ಎಲ್ಲ ಸಂತರು, ಆಚಾರ್ಯರು ಮತ್ತು ಮಹಾಪುರುಷರು, ಹಾಗೆಯೇ ಎಲ್ಲ ಸಂಪ್ರದಾಯದ ಭಕ್ತರು ಗಂಗಾಜಲದ ಪಾವಿತ್ರ್ಯವನ್ನು ಒಪ್ಪಿಕೊಂಡಿದ್ದಾರೆ. ಶಂಕರನು ಗಂಗೆಯನ್ನು ಮಸ್ತಕದಲ್ಲಿ ಧರಿಸಿರುವುದರಿಂದ ಶೈವರಿಗೆ ಮತ್ತು ವಿಷ್ಣುವಿನ ಚರಣಕಮಲಗಳಿಂದ ಉತ್ಪನ್ನವಾಗಿದ್ದರಿಂದ ವೈಷ್ಣವರಿಗೆ ಅವಳು ಪರಮ ಪಾವನೆಯೆನಿಸುತ್ತಾಳೆ. ಶಾಕ್ತರೂ ಗಂಗೆಯನ್ನು ಆದಿಶಕ್ತಿಯ ಒಂದು ರೂಪವೆಂದು ಪರಿಗಣಿಸಿ ಅವಳ ಆರಾಧನೆಯನ್ನು ಮಾಡಿದ್ದಾರೆ.

ಇ. ಮಹಾಪುರುಷರು ಮಾಡಿದ ಗಂಗೆಯ ಸ್ತುತಿ

ಇ ೧. ವಾಲ್ಮೀಕಿಋಷಿಗಳು : ವಾಲ್ಮೀಕಿಋಷಿಗಳು ರಚಿಸಿದ ‘ಗಂಗಾಷ್ಟಕ’ ಸ್ತೋತ್ರವು ಪ್ರಸಿದ್ಧವಾಗಿದೆ. ಸಂಸ್ಕೃತ ಬರುವ ಭಕ್ತರು ಸ್ನಾನದ ಸಮಯದಲ್ಲಿ ಅದನ್ನು ಪಠಿಸುತ್ತಾರೆ. ಆಗ ಅವರಿಗೆ ‘ಗಂಗಾಸ್ನಾನ ಮಾಡಿದೆ’, ಎಂಬ ಶ್ರದ್ಧೆಯಿರುತ್ತದೆ.

ಇ ೨. ಆದಿಶಂಕರಾಚಾರ್ಯರು : ಇವರು ಗಂಗಾಸ್ತೋತ್ರವನ್ನು ರಚಿಸಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ –

ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ |
ಅಥವಾ ಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ || (ಶ್ಲೋಕ ೧೧)

ಅರ್ಥ : ಹೇ ಗಂಗೆ, ನಿನ್ನಿಂದ ದೂರ ಹೋಗಿ ಕುಲೀನ ರಾಜನಾಗುವ ಬದಲಿಗೆ ನಿನ್ನ ಈ ನೀರಿನಲ್ಲಿನ ಆಮೆ ಅಥವಾ ಮೀನಾಗುವುದು ಅಥವಾ ನಿನ್ನ ತೀರದಲ್ಲಿರುವ ಹರಿದಾಡುವ ಕ್ಷುದ್ರ ಪ್ರಾಣಿ ಅಥವಾ ದೀನ-ದುರ್ಬಲ ಚಾಂಡಾಲನಾಗುವುದು, ಎಂದಿಗೂ ಶ್ರೇಷ್ಠವಾಗಿದೆ.

ಇ ೩. ಗೋಸ್ವಾಮಿ ತುಲಸೀದಾಸ : ಇವರು ಅವರ ‘ಕವಿತಾವಲೀ’ಯ ಉತ್ತರಕಾಂಡದಲ್ಲಿ ಮೂರು ಛಂದಸ್ಸುಗಳಲ್ಲಿ ‘ಶ್ರೀಗಂಗಾಮಹಾತ್ಮೆ’ಯನ್ನು ವರ್ಣಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗಂಗಾದರ್ಶನ, ಗಂಗಾಸ್ನಾನ, ಗಂಗಾಜಲಸೇವನೆ ಮುಂತಾದವುಗಳ ಮಹತ್ವವನ್ನು ಹೇಳಿದ್ದಾರೆ.

ಇ ೪. ಪಂಡಿತರಾಜ ಜಗನ್ನಾಥರು (ಕ್ರಿ.ಶ. ೧೫೯೦ ರಿಂದ ೧೬೬೫) : ಇವರು ‘ಗಂಗಾಲಹರಿ’ (‘ಪೀಯೂಷಲಹರಿ’) ಎಂಬ ೫೨ ಶ್ಲೋಕಗಳ ಕಾವ್ಯವನ್ನು ಬರೆದಿದ್ದಾರೆ. ಅದರಲ್ಲಿ ಗಂಗೆಯ ಆಸಾಧಾರಣ (ಶ್ರೇಷ್ಠ) ವಿವಿಧ ಗುಣಗಳ ವರ್ಣನೆ ಮತ್ತು ತಮ್ಮ ಉದ್ಧಾರದ ಬಗ್ಗೆ ಕಳಕಳಿಯಿಂದ ಪ್ರಾರ್ಥನೆ ಮಾಡಿದ್ದಾರೆ.

– ಗುರುದೇವ ಡಾ. ಕಾಟೇಸ್ವಾಮೀಜಿ

ಇ ೪ ಅ. ‘ಗಂಗಾಲಹರಿ’ ಕಾವ್ಯದಲ್ಲಿನ ಕೆಲವು ಪ್ರಾರ್ಥನೆಗಳು

೧. ಹೇ ಗಂಗೇ, ‘ಜಗತ್ತಿನ ಎಲ್ಲ ಪಾಪಿಗಳು ಒಂದಾಗಿದ್ದಾರೆ ಮತ್ತು ಅವರು ಪರಾಕಾಷ್ಠೆಯ ಪಾಪವನ್ನು ಮಾಡಿದ್ದಾರೆ, ಎಲ್ಲ ಪರಾಕಾಷ್ಠೆಯ ಪಾಪಗಳು ಒಂದಾಗಿವೆ; ಆದರೂ ಆ ಪಾಪಗಳನ್ನು ಕ್ಷಣಾರ್ಧದಲ್ಲಿ ನಾಶಗೊಳಿಸುವ ಕ್ಷಮತೆಯು ನಿನ್ನ ಸ್ನಾನಪಾನ ಮತ್ತು ಚಿಂತನೆಯಲ್ಲಿದೆ’ ಎಂದು ಶಾಸ್ತ್ರಕಾರರು ಹೇಳುತ್ತಾರೆ. ನನಗದು ತಿಳಿಯುವುದಿಲ್ಲ; ಆದರೆ ‘ಅವರು ಏನೋ ಬರೆದುಬಿಡುತ್ತಾರೆ’ ಹೀಗಾಗಲೂ ಸಾಧ್ಯವಿಲ್ಲ.

೨. ನಾನು ಮಹಾ (ಬಹಳ ದೊಡ್ಡ) ಪಾಪಿಯಾಗಿದ್ದೇನೆ ! ಪೃಥ್ವಿಯ ಮೇಲೆ ನನ್ನಂತಹ ಪಾಪಿ ಬೇರೆ ಯಾರೂ ಇಲ್ಲ; ನನ್ನನ್ನು ಉದ್ಧಾರ ಮಾಡಿ ತೋರಿಸು, ಅದರಲ್ಲಿಯೇ ನಿನ್ನ ಗೌರವವಿದೆ ! ಹಾಗಾದರೆ ಮಾತ್ರ ನಿನ್ನ ನೀರು (ಗಂಗಾಜಲವು) ನಿಜವಾಗುವುದು ! ಹಾಗಾಗದಿದ್ದರೆ ನಾನು ಗೆಲ್ಲುತ್ತೇನೆ ಮತ್ತು ನೀನು ಸೋಲುತ್ತೀ !

೩. ನಿನ್ನ ಪಾವನಗೊಳಿಸುವ ಕ್ಷಮತೆಗಿಂತ ನನ್ನ ಪಾಪಶಕ್ತಿಯು ಅಧಿಕವಾಗಿದೆ. ನಾನು ನಿನಗಿಂತ ಹೆಚ್ಚು ಶಕ್ತಿವಂತನಾಗಿದ್ದೇನೆ. ನನ್ನಲ್ಲಿ ಸಾಕಷ್ಟು ದುರ್ಗುಣಗಳಿವೆ. ಅಧಿಕಾರ, ಸಂಪತ್ತು, ವಿದ್ಯಾಸಂಪನ್ನತೆ ಮಾತ್ರವಲ್ಲ, ಚಾರಿತ್ರ್ಯ, ಸದ್ಗುಣ ಇಂತಹ ಯಾವುದೇ ಆಧಾರವನ್ನು ನನಗೆ ಪಡೆಯಲು ಆಗುವುದಿಲ್ಲ. ನಾನು ಸಂಪೂರ್ಣ ನಿರಾಶ್ರಿತನಾಗಿದ್ದೇನೆ. ಆದುದರಿಂದಲೇ ಪ್ರತೀಕ್ಷಣ ನಿನ್ನ ಪ್ರೇಮದ ರುಚಿಯು ಏರುತ್ತಾ ಹೋಗುತ್ತಿದೆ. ಗಂಗಾ ಭಗವತೀ, ನಾನು ನಿನ್ನ ಕೃಪಾದೃಷ್ಟಿಯನ್ನು ಪ್ರತೀಕ್ಷಣ ಅನುಭವಿಸುತ್ತಿದ್ದೇನೆ.

– ಗುರುದೇವ ಡಾ. ಕಾಟೇಸ್ವಾಮೀಜಿ (೧೨)

Leave a Comment