ಭಕ್ತಾದಿಗಳು ಗಂಗೆಯ ಸಂದರ್ಭದಲ್ಲಿ ಮಾಡಬೇಕಾದ ವ್ಯಷ್ಟಿ ಸಾಧನೆ (ಉಪಾಸನೆ)

ಅ. ಗಂಗಾಸ್ಮರಣೆ

೧. ನೂರಾರು ಯೋಜನಗಳಷ್ಟು (೧ ಯೋಜನ ಎಂದರೆ ೧೨ ಕಿ.ಮೀ.) ದೂರದಿಂದಲೂ ಯಾವನು ‘ಗಂಗಾ, ಗಂಗಾ, ಗಂಗಾ’, ಎಂದು ಗಂಗೆಯನ್ನು ಸ್ಮರಿಸುತ್ತಾನೆಯೋ, ಅವನು ಎಲ್ಲ ಪಾಪಗಳಿಂದ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.’ (ಬ್ರಹ್ಮವೈವರ್ತಪುರಾಣ, ಪ್ರಕೃತಿಖಂಡ, ಅಧ್ಯಾಯ ೧೦, ಶ್ಲೋಕ ೭೧)

೨. ‘ಓಡಾಡುವಾಗ, ಸ್ಥಿರವಾಗಿರುವಾಗ, ಭೋಜನ ಮಾಡುವಾಗ, ಧ್ಯಾನದಲ್ಲಿ, ಜಾಗೃತಾವಸ್ಥೆಯಲ್ಲಿ ಮತ್ತು ಉಸಿರಾಡುವಾಗ ನಿರಂತರವಾಗಿ ಗಂಗಾಸ್ಮರಣೆಯನ್ನು ಮಾಡುವ ವ್ಯಕ್ತಿಯು ಬಂಧನಮುಕ್ತನಾಗುತ್ತಾನೆ.’ (ಭವಿಷ್ಯಪುರಾಣ)

೩. ಗಂಗಾಸಹಸ್ರನಾಮಸ್ತೋತ್ರದ ಮಹತ್ವ : ಒಮ್ಮೆ ಅಗಸ್ತಿಋಷಿಗಳು, ‘ಗಂಗಾಸ್ನಾನ ಮಾಡದೇ ಮನುಷ್ಯ ಜನ್ಮವು ನಿರರ್ಥಕವಾಗುವುದಾದರೆ ದೂರ ದೇಶಗಳಲ್ಲಿರುವ ಜನರಿಗೆ ಗಂಗಾಸ್ನಾನದ ಫಲ ಹೇಗೆ ಸಿಗುತ್ತದೆ ?’ ಎಂದು ಕೇಳಿದರು. ಆಗ ಶಿವಪುತ್ರ ಕಾರ್ತಿಕೇಯನು ಗಂಗಾಸಹಸ್ರನಾಮವನ್ನು ಹೇಳಿದನು ಮತ್ತು ಅದನ್ನು ಪಠಿಸುವುದರ ಮಹಿಮೆಯನ್ನು ಹೇಳಿದನು. (ಸ್ಕಂದಪುರಾಣ, ಕಾಶೀಖಂಡ, ಅಧ್ಯಾಯ ೩೯)

ಇಂದಿಗೂ ಗಂಗೋಪಾಸಕರು ಪ್ರತಿದಿನ ‘ಗಂಗಾಸಹಸ್ರನಾಮ’ವನ್ನು ಪಠಿಸುತ್ತಾರೆ.

ಆ. ಗಂಗಾದರ್ಶನ

ಅನಾದಿ ಕಾಲದಿಂದ ‘ಗಂಗೇ ತವ ದರ್ಶನಾತ್ ಮುಕ್ತಿಃ |’ ಅಂದರೆ ‘ಗಂಗೆ, ನಿನ್ನ ದರ್ಶನದಿಂದ ಮುಕ್ತಿ ಸಿಗುತ್ತದೆ’ ಎಂದು ಹೇಳಲಾಗುತ್ತದೆ.

ಇ. ಗಂಗಾಸ್ನಾನವಿಧಿ ಮತ್ತು ಗಂಗಾಪೂಜೆ

ಈ ವಿಧಿಯನ್ನು ಗಂಗಾದಶಹರಾ ತಿಥಿಯಂದು (ಜ್ಯೇಷ್ಠ ಶುಕ್ಲ ಪಕ್ಷ ದಶಮಿಯಂದು) ಅಥವಾ ಇತರ ದಿನಗಳಂದೂ ಮಾಡಬಹುದು.

ಅ. ಗಂಗಾದರ್ಶನಕ್ಕೆ ಹೋಗುವ ಮೊದಲು ಮನೆಯಲ್ಲಿ ಸ್ನಾನ ಮಾಡಬೇಕು. ನಂತರ ಗಂಗಾತೀರಕ್ಕೆ ಹೋಗಿ ಕುಲಾಚಾರ ಮತ್ತು ಪರಂಪರೆಗನುಸಾರ ಪ್ರತ್ಯಕ್ಷ ಗಂಗೆಯಲ್ಲಿ ನಿಂತುಕೊಂಡು ‘ಗಂಗಾಸ್ನಾನ’ ಮತ್ತು ‘ಗಂಗಾಪೂಜೆ’ಯನ್ನು ಮಾಡಬೇಕು.

ಆ. ಕುಲಾಚಾರಕ್ಕನುಸಾರ ಮಣ್ಣಿನ ಹಣತೆಗಳಲ್ಲಿ ದೀಪಗಳನ್ನು ಪ್ರಜ್ವಲಿಸಿ ಗಂಗೆಯಲ್ಲಿ ಬಿಡಬೇಕು.

ಇ. ಗಂಗಾ ಸ್ನಾನ ಮಾಡುವಾಗ ಹೇಳಬೇಕಾದ ಶ್ಲೋಕಗಳು

ಗಂಗೆಯ (ತೀರ್ಥದ) ಸ್ಮರಣೆ

ತ್ವಂ ರಾಜಾ ಸರ್ವತೀರ್ಥಾನಾಂ ತ್ವಮೇವ ಜಗತಃ ಪಿತಾ |

ಯಾಚಿತಂ ದೇಹಿ ಮೇ ತೀರ್ಥಂ ತೀರ್ಥರಾಜ ನಮೋಸ್ತು ತೇ ||

ತೀರ್ಥರಾಜಾಯ ನಮಃ | ನಮಸ್ಕಾರಾನ್ ಸಮರ್ಪಯಾಮಿ ||

(ಮೇಲಿನ ಶ್ಲೋಕವನ್ನು ಹೇಳಿ ಗಂಗಾ ನದಿಗೆ ನಮಸ್ಕರಿಸಿ ಸ್ನಾನಕ್ಕಾಗಿ ನದಿಯನ್ನು ಪ್ರವೇಶಿಸಬೇಕು. ನಂತರ ಪ್ರವಾಹಾಭಿಮುಖವಾಗಿ ಅಥವಾ ಸೂರ್ಯಾಭಿಮುಖವಾಗಿ (ಪ್ರವಾಹದ ದಿಕ್ಕಿಗೆ ಅಥವಾ ಸೂರ್ಯನ ದಿಕ್ಕಿಗೆ ಮುಖ ಮಾಡಿ) ಮೊಣಕಾಲಿನ ವರೆಗಿನ ನೀರಿನಲ್ಲಿ ನಿಲ್ಲಬೇಕು. ನದಿಯಲ್ಲಿ ಮೂರು ಬಾರಿ ಮುಳುಗೇಳಬೇಕು ಮತ್ತು ಮೈಯುಜ್ಜಿಕೊಂಡು ಸ್ನಾನ ಮಾಡಬೇಕು. ಸ್ನಾನದ ಸಮಯದಲ್ಲಿ ಮುಂದಿನ ಶ್ಲೋಕವನ್ನು ಹೇಳಬೇಕು.)

೧. ಹರಿರ್ನಾರಾಯಣೋ ಗಂಗಾ ಗಂಗಾ ನಾರಾಯಣೋ ಹರಿಃ | ಹರಿರ್ವಿಶ್ವೇಶ್ವರೋ ಗಂಗಾ ಗಂಗಾ ವಿಶ್ವೇಶ್ವರೋ ಹರಿಃ ||

೨. ನಂದಿನೀ ನಲಿನೀ ಸೀತಾ ಮಾಲತೀ ಚ ಮಲಾಪಹಾ | ವಿಷ್ಣುಪಾದಾಬ್ಜಸಂಭೂತಾ ಗಂಗಾ ತ್ರಿಪಥಗಾಮಿನೀ ||

೩. ಭಾಗೀರಥೀ ಭೋಗವತೀ ಜಾಹ್ನವೀ ತ್ರಿದಶೇಶ್ವರೀ | ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ | ಆಗಚ್ಛಂತು ಪವಿತ್ರಾಣಿ ಸ್ನಾನಕಾಲೇ ಸದಾ ಮಮ ||

೪. ನಮಾಮಿ ಗಂಗೇ ತವ ಪಾದಪಂಕಜಂ ಸುರಾಸುರೈರ್ವಂದಿತದಿವ್ಯರೂಪಾಮ್ | ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾ ನರಾಣಾಮ್ ||

೫. ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ | ತ್ರಾಹಿ ಮಾಂ ಕೃಪಯಾ ಗಂಗೇ ಸರ್ವಪಾಪಹರಾ ಭವ ||

೬. ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ | ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ||

(ಸ್ನಾನ ಮಾಡಿದ ನಂತರ ಮೇಲೆ ಹೇಳಿದಂತೆ ನದಿಯಲ್ಲಿ ನಿಂತು ಎರಡು ಬಾರಿ ಆಚಮನ ಮಾಡಬೇಕು ಮತ್ತು ಮುಂದಿನ ಮಂತ್ರವನ್ನು ಹೇಳಿ ಗಂಗೆಯ ನೀರನ್ನು ತುಳಸಿ ಎಲೆಯಿಂದ ಮೂರು ಬಾರಿ ತಿರುಗಿಸಬೇಕು.)

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |

ನರ್ಮದೇ ಸಿಂಧುಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

ಈ. ಗಂಗೆಗೆ ಅರ್ಘ್ಯಸಮರ್ಪಣೆ (ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಮುಂದಿನ ಮಂತ್ರವನ್ನು ಹೇಳಬೇಕು.)

‘ಭಾಗೀರಥಿ ನಮಸ್ತುಭ್ಯಂ ಸರ್ವಪಾಪಪ್ರಣಾಶಿನೀ |

ಭಕ್ತಾ  ತುಭ್ಯಂ ಮಯಾ ದತ್ತಂ ಗೃಹಾಣಾರ್ಘ್ಯಂ ನಮೋಸ್ತುತೇ ||

ಗಂಗಾಯೈ ನಮಃ | ಇದಮ್ ಅರ್ಘ್ಯಂ ಸಮರ್ಪಯಾಮಿ |’

(ಬೊಗಸೆಯಲ್ಲಿ ತೆಗೆದುಕೊಂಡ ನೀರನ್ನು ‘ಸಮರ್ಪಯಾಮಿ’ ಎನ್ನುವಾಗ ಬೆರಳುಗಳ ಅಗ್ರಭಾಗದಿಂದ ನದಿಯಲ್ಲಿ ಬಿಡಬೇಕು. ಅನಂತರ ನದಿಯಿಂದ ಹೊರಗೆ ಬಂದು ಬೇರೆ ಬಟ್ಟೆಗಳನ್ನು ಧರಿಸಬೇಕು ಮತ್ತು ಮುಂದಿನ ಮಂತ್ರವನ್ನು ಹೇಳಿ ಒದ್ದೆ ವಸ್ತ್ರಗಳನ್ನು ಹಿಂಡಬೇಕು.)

ಯನ್ಮಯಾ ದೂಷಿತಂ ತೋಯಂ ಶಾರೀರಮಲಸಂಭವಾತ್ |

ತದ್ದೋಷಪರಿಹಾರಾರ್ಥಂ ಯಕ್ಷಾ ಣಂ ತರ್ಪಯಾಮ್ಯಹಮ್ ||

ಉ. || ಶ್ರೀ ಗಂಗಾಪೂಜೆ ||

ಗಂಗಾಸ್ನಾನದ ನಂತರ ಗಂಗೆಯ ಪೂಜೆಯನ್ನು ಮಾಡಬೇಕು. ಶ್ರೀ ಗಂಗಾದೇವಿಯ ಸಹಸ್ರನಾಮದಲ್ಲಿ ‘ಕದಂಬಕುಸುಮಪ್ರಿಯಾ’ (ಕದಂಬ ಹೂವುಗಳೆಂದರೆ ಪ್ರಿಯವಾಗಿರುವವಳು) ಎಂಬ ಹೆಸರಿದೆ. ಆದ್ದರಿಂದ ಗಂಗಾಪೂಜೆಯನ್ನು ಮಾಡುವಾಗ ಕದಂಬದ ಹೂವುಗಳನ್ನು ಅರ್ಪಿಸುತ್ತಾರೆ.

ಪ್ರತ್ಯಕ್ಷ ನದಿಯಲ್ಲಿ ನಿಂತು ಗಂಗೆಯ ಪೂಜೆಯನ್ನು ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಮೆಟ್ಟಿಲಿನ ಮೇಲೆ ಮಣೆ ಅಥವಾ ಎಲೆಯ ಮೇಲೆ ಗಂಗೆಯಲ್ಲಿನ ಮಣ್ಣನ್ನಿಟ್ಟು ಆ ಮಣ್ಣಿನ ಮೇಲೆ ಅಥವಾ ಅಡಿಕೆಯ ಮೇಲೆ ಮುಂದಿನ ಮಂತ್ರವನ್ನು ಹೇಳಿ ಆವಾಹನೆ ಮಾಡಿ ಗಂಗಾಪೂಜೆ ಮಾಡಬೇಕು.

ಊ. ಪ್ರಾರ್ಥನೆ

ಜಯ ಗಂಗೇ ನಮೋ ಗಂಗೇ ಗೋದಾವರಿ ನಮೋಸ್ತು ತೇ |
ಭೂತಂ ಭವ್ಯಂ ಚ ಯತ್ಪಾಪಂ ಭವಿಷ್ಯತಿ ಚ ಗೌತಮಿ ||
ವಿನಾಶಂ ಯಾತು ತತ್ಸರ್ವಂ ಪ್ರಸಾದಾತ್ ತವದುಃಖಹೇ ||
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರಿ |
ಯತ್ಕ ತಂ ತು ಮಯಾ ದೇವಿ ಪರಿಪೂರ್ಣಂ ತದಸ್ತು ಮೇ ||
ಶ್ರೀ ಗಂಗಾದೇವ್ಯೆ  ನಮಃ | ಪ್ರಾರ್ಥನಾಂ ಸಮರ್ಪಯಾಮಿ |
ಅನೇನ ಕೃತಪೂಜನೇನ ಶ್ರೀ ಗಂಗಾದೇವೀ ಪ್ರೀಯತಾಮ್ |

(ಗಂಗಾಸ್ನಾನವಿಧಿಗಾಗಿ ಬೇಕಾಗುವ ಪೂಜಾಸಾಮಾಗ್ರಿಗಳ ಪಟ್ಟಿ, ಮಾಡಬೇಕಾದ ಕೃತಿಗಳ ಅರ್ಥಸಹಿತ ಸವಿಸ್ತಾರ ಮಾಹಿತಿಯನ್ನು ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥದಲ್ಲಿ ನೀಡಲಾಗಿದೆ.)

ಈ. ಶ್ರೀ ಗಂಗಾದೇವಿಯ ಆರತಿ

ಗಂಗೆಯ ದಡದ ಮೇಲೆ ಪ್ರತಿದಿನ ಶ್ರೀ ಗಂಗಾದೇವಿಯ ಆರತಿ ನಡೆಯುತ್ತದೆ.

ದೇವತೆಗೆ ಆರತಿ ಮಾಡುವ ಯೋಗ್ಯ ಪದ್ಧತಿ

ಅ. ಆರತಿ ಮಾಡುವ ಮೊದಲು ಮೂರು ಬಾರಿ ಶಂಖನಾದ ಮಾಡಬೇಕು.

ಆ. ಆರತಿ ಮಾಡುವಾಗ ದೇವತೆಗೆ ಪಂಚಾರತಿಯಿಂದ ಪೂರ್ಣ ವರ್ತುಲಾಕೃತಿಯಲ್ಲಿ ಬೆಳಗಬೇಕು. ಆಗ ನಾವು ‘ಶ್ರೀ ಗಂಗಾದೇವಿಯ ಎದುರಿಗೆ ನಿಂತು ಅವಳನ್ನು ಕರೆಯುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು.

ಇ. ಆರತಿಯಲ್ಲಿನ ಶಬ್ದಗಳ ಅರ್ಥವನ್ನು ಗಮನದಲ್ಲಿಟ್ಟುಕೊಂಡು ಮಂದ ಸ್ವರದಲ್ಲಿ, ಮಧ್ಯಮ ವೇಗದಲ್ಲಿ, ಆರ್ತತೆಯಿಂದ ಮತ್ತು ಭಾವಪೂರ್ಣವಾಗಿ ಆರತಿಯನ್ನು ಹಾಡಬೇಕು. ಚಪ್ಪಾಳೆ ಮತ್ತು ವಾದ್ಯಗಳನ್ನು ನಿಧಾನವಾಗಿ ಬಾರಿಸಬೇಕು.

ಈ. ನೀಲಾಂಜನದ ಮೇಲೆ ಎರಡೂ ಕೈಗಳ ಅಂಗೈಗಳನ್ನು ಹಿಡಿದು ನಂತರ ಬಲಗೈ ಅಂಗೈಯನ್ನು ತಲೆಯ ಮೇಲೆ ಮುಂಭಾಗದಿಂದ ಹಿಂದೆ ಕುತ್ತಿಗೆಯ ವರೆಗೆ ಸವರಬೇಕು.

ಉ. ದೇವತೆಯ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಬೇಕು, ಸಾಧ್ಯವಿಲ್ಲದಿದ್ದರೆ ತಮ್ಮ ಸುತ್ತಲೂ ೩ ಪ್ರದಕ್ಷಿಣೆಗಳನ್ನು ಹಾಕಬೇಕು.

ಊ. ದೇವತೆಗೆ ಪ್ರಾರ್ಥನೆ ಮಾಡಿ ನಮಸ್ಕಾರ ಮಾಡಬೇಕು ಮತ್ತು ತೀರ್ಥಪ್ರಾಶನ ಮಾಡಬೇಕು.

(ಆರತಿಯ ಶಾಸ್ತ್ರದ ಬಗ್ಗೆ ಮಾಹಿತಿಗಾಗಿ ಓದಿ ಸನಾತನದ ಕಿರುಗ್ರಂಥ ‘ಆರತಿಯನ್ನು ಹೇಗೆ ಮಾಡಬೇಕು ?’)

ಉ. ಗಂಗೆಗೆ ಸಂಬಂಧಿಸಿದ ಉತ್ಸವಗಳು, ಅನುಷ್ಠಾನ ಮತ್ತು ವ್ರತಗಳು

ಉ ೧. ಗಂಗೋತ್ಸವ : ‘ಜ್ಯೇಷ್ಠ ಶುಕ್ಲ ಪಕ್ಷ ದಶಮಿಯಂದು ಭೂಲೋಕದಲ್ಲಿ ಗಂಗಾವತರಣವಾಯಿತು; ಆದುದರಿಂದ ಜ್ಯೇಷ್ಠ ಶುಕ್ಲ ಪಕ್ಷ ಪ್ರತಿಪದೆಯಿಂದ ದಶಮಿಯವರೆಗೆ ಗಂಗಾತೀರದಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಗಂಗೋತ್ಸವವನ್ನು ಆಚರಿಸುತ್ತಾರೆ. ಜ್ಯೇಷ್ಠ ಶುಕ್ಲ ಪಕ್ಷ ದಶಮಿಯಂದು ಗಂಗಾಸ್ನಾನ ಮಾಡುವುದರಿಂದ ಹತ್ತು ಪಾಪಗಳು ನಾಶವಾಗುತ್ತವೆ. ಆದ್ದರಿಂದ ಈ ದಿನಕ್ಕೆ ‘ಗಂಗಾದಶಹರಾ’ ಎಂದೂ ಹೇಳುತ್ತಾರೆ.’ ಗಂಗೋತ್ಸವದಲ್ಲಿ ಗಂಗೆಯ ಎಲ್ಲ ಘಟ್ಟಗಳಲ್ಲಿ ಭಕ್ತಾದಿಗಳು ‘ಗಂಗಾಲಹರಿ’ಯ ಪಠಣ ಮಾಡುತ್ತಾರೆ.’
– ಗುರುದೇವ ಡಾ. ಕಾಟೇಸ್ವಾಮೀಜಿ

ಕೃಷ್ಣಾ, ಗೋದಾವರಿ ನದಿಗಳಿಗೂ ‘ಗಂಗಾ’ ಎನ್ನುತ್ತಾರೆ. ಆದ್ದರಿಂದ ಹರದ್ವಾರ (ಹರಿದ್ವಾರ), ಪ್ರಯಾಗ ಮುಂತಾದ ಕ್ಷೇತ್ರಗಳಂತೆ ವಾಯಿ (ಸಾತಾರಾ, ಮಹಾರಾಷ್ಟ್ರ), ನಾಸಿಕ್‌ನಲ್ಲಿಯೂ ಗಂಗೋತ್ಸವವನ್ನು ಆಚರಿಸುತ್ತಾರೆ.

ಉ ೨. ಕಾರ್ತಿಕ ಹುಣ್ಣಿಮೆ : ಅಕ್ಷಯ ತೃತೀಯಾದಿಂದ ಕಾರ್ತಿಕ ಹುಣ್ಣಿಮೆಯವರೆಗೆ ಗಂಗೋತ್ರಿಗೆ ಯಾತ್ರಿಕರು ಬರುತ್ತಾರೆ. ಗಂಗೋತ್ರಿಯಲ್ಲಿ ವರ್ಷದಲ್ಲಿ ಆರು ತಿಂಗಳು ಯಾತ್ರೆ ನಡೆಯುತ್ತದೆ. ಇಲ್ಲಿಂದ ಗಂಗೆಯ ನೀರನ್ನು ಕಲಶದಲ್ಲಿ ಹಾಕಿ ಭಾರತದೆಲ್ಲೆಡೆ ತೀರ್ಥವೆಂದು ಒಯ್ಯುತ್ತಾರೆ. ಕಾರ್ತಿಕ ಮಾಸದಲ್ಲಿ ಅಲ್ಲಿ ಹಿಮ ಬೀಳತೊಡಗುವುದರಿಂದ ಕಾರ್ತಿಕ ಹುಣ್ಣಿಮೆಗೆ ಗಂಗಾದ್ವಾರವು ಮುಚ್ಚುತ್ತದೆ. ಕಾರ್ತಿಕ ಹುಣ್ಣಿಮೆಯ ನಂತರ ಇಲ್ಲಿನ ಗಂಗಾಮಂದಿರವು ಹಿಮಚ್ಛಾದಿತವಾಗುವುದರಿಂದ ಅರ್ಚಕರು ಗಂಗೆಯ ಮೂರ್ತಿಯನ್ನು ತೆಗೆದುಕೊಂಡು ೨೩ ಕಿ.ಮೀ. ಮೇಲಿರುವ ಮಾರ್ಕಂಡೇಯಕ್ಷೇತ್ರ-ಮಖವ್ಯಾಸಕ್ಕೆ ಹೋಗುತ್ತಾರೆ. ಅಲ್ಲಿ ಆರು ತಿಂಗಳು ಗಂಗೆಯ ಪೂಜಾರ್ಚನೆಗಳು ನಡೆಯುತ್ತವೆ. ವೈಶಾಖ ಮಾಸದಲ್ಲಿ ಅಕ್ಷಯ ತೃತೀಯಾದಂದು ಪುನಃ ಆ ಮೂರ್ತಿಯನ್ನು ಗಂಗೋತ್ರಿಗೆ ಒಯ್ದು ಗಂಗಾದ್ವಾರವನ್ನು ತೆರೆಯುತ್ತಾರೆ.

ಉ ೩. ಗಂಗಾಸಪ್ತಮಿ : ವೈಶಾಖ ಶುಕ್ಲ ಪಕ್ಷ ಸಪ್ತಮಿಯಂದು ಉಚ್ಚ ಲೋಕದಲ್ಲಿ ಗಂಗೆಯ ಉತ್ಪತ್ತಿಯಾಯಿತು. ಈ ದಿನ ಹಳ್ಳಿಯ ಜನರ ಸಮುದಾಯಗಳು ಗಂಗೆಯ ಗೀತೆಯನ್ನು ಹಾಡುತ್ತಾ ಕಾಶಿಗೆ ಬರುತ್ತಾರೆ. ಈ ಪ್ರಸಂಗದಲ್ಲಿ ಕಾಶಿಯಲ್ಲಿ ದೊಡ್ಡ ಸ್ನಾನಯಾತ್ರೆ ನಡೆಯುತ್ತದೆ. ಈ ದಿನ ಸ್ತ್ರೀಯರು ‘ಗಂಗಾವ್ರತ’ವನ್ನು ಮಾಡುತ್ತಾರೆ. ‘ಗಂಗಾಸ್ನಾನ, ಸೂರ್ಯಪೂಜೆ ಮತ್ತು ಹತ್ತು ಜನ ಬ್ರಾಹ್ಮಣರಿಗೆ ಅನ್ನವಸ್ತ್ರದಾನ’ ಎಂಬುದು ಈ ವ್ರತದ ವಿಧಿಯಾಗಿದೆ. ಪಾಪನಾಶ ಮತ್ತು ಇಪ್ಪತ್ತೊಂದು ಪೀಳಿಗೆಗಳ ಉದ್ಧಾರವಾಗುತ್ತದೆ ಎಂದು ಈ ವ್ರತದ ಫಲವನ್ನು ಹೇಳಲಾಗಿದೆ.

ಉ ೪. ಕುಂಭಮೇಳಗಳು : ಪ್ರಯಾಗದ ಮಹಾಕುಂಭಮೇಳ, ಮಾಘಮೇಳ ಮತ್ತು ಅರ್ಧಕುಂಭಮೇಳ, ಹರದ್ವಾರ (ಹರಿದ್ವಾರ) ಕುಂಭಮೇಳದಲ್ಲಿ ವಿವಿಧ ಸಮುದಾಯಗಳು ಭಾಗವಹಿಸುತ್ತಾರೆ, ಅವುಗಳ ಮೆರವಣಿಗೆ (ಶೋಭಾಯಾತ್ರೆ), ಸಂತ-ಮಹಂತರ ದರ್ಶನ, ಗಂಗೆ ಅಥವಾ ಸಂಗಮದಲ್ಲಿ ಭಕ್ತಿಭಾವದಿಂದ ಸ್ನಾನ ಮಾಡಲು ಬಂದ ಹಿಂದೂಗಳ ಮುಖದ ಮೇಲಿನ ಉತ್ಕಟ ಭಾವ, ಹಿಂದೂ ಧರ್ಮದ ಖ್ಯಾತಿಯನ್ನು ಕೇಳಿ ಸಪ್ತಸಮುದ್ರಗಳಾಚೆಯಿಂದ ಬರುವ ವಿದೇಶಿ ಜನರ ಸಹಭಾಗ ಕುಂಭಮೇಳಗಳ ವೈಶಿಷ್ಟ್ಯ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)

Leave a Comment