ಗಂಗಾ ನದಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳು

೧. ಪಾಪವಿನಾಶಿನಿ

ಗಂಗೆಯು ‘ದಶಹರಾ’ ಆಗಿದ್ದಾಳೆ. ಅವಳು ಶಾರೀರಿಕ, ವಾಚಿಕ ಮತ್ತು ಮಾನಸಿಕ ಪಾಪಗಳನ್ನೊಳಗೊಂಡ ಮುಂದಿನ ಹತ್ತು ಪಾಪಗಳನ್ನು ನಾಶ ಮಾಡುತ್ತಾಳೆ.

೧ ಅ. ಶಾರೀರಿಕ ಪಾಪಗಳು : ೧. ಕಳ್ಳತನ, ೨. ಹಿಂಸೆ, ೩. ಪರಸ್ತ್ರೀಗಮನ

೧ ಆ. ವಾಚಿಕ ಪಾಪಗಳು : ೧. ಕಠೋರವಾಗಿ ಮಾತನಾಡುವುದು, ೨. ಸುಳ್ಳು ಹೇಳುವುದು, ೩. ಚಾಡಿ ಅಥವಾ ನಿಂದನೆ ಮಾಡುವುದು ಮತ್ತು ೪. ಅಸಂಬದ್ಧ, ಅಕಾರಣ ಬಡಬಡಿಸುವುದು

೧ ಇ. ಮಾನಸಿಕ ಪಾಪಗಳು : ೧. ಪರಾಪಹಾರ (ಇತರರ ಧನವನ್ನು ಅಪಹರಿಸುವ ಬಗ್ಗೆ ಮನಸ್ಸಿನಲ್ಲಿ ವಿಚಾರ ಬರುವುದು), ೨. ಅನಿಷ್ಟಚಿಂತನ (ಮನಸ್ಸಿನಲ್ಲಿ ಇನ್ನೊಬ್ಬರ ಬಗ್ಗೆ ಕೆಟ್ಟ ವಿಚಾರ ಮಾಡುವುದು) ಮತ್ತು ೩. ದುರಾಗ್ರಹ (ಸುಳ್ಳು ಸ್ವಾಭಿಮಾನವಿರುವುದು)’

– ಗುರುದೇವ ಡಾ. ಕಾಟೇಸ್ವಾಮೀಜಿ 

(ಗಂಗೆಯು ಪಾಪವಿನಾಶಿನಿಯಾಗಿದ್ದಾಳೆಂದು ‘ಸಾಕಷ್ಟು ಪಾಪಗಳನ್ನು ಮಾಡಿ ಅದನ್ನು ಒಂದು ಗಂಗಾಸ್ನಾನದಿಂದ ನಾಶ ಮಾಡಬಹುದು’ ಎಂದಿರುವುದಿಲ್ಲ. ಪಾಪ ಮಾಡಿದ ಬಗ್ಗೆ ಮನಸ್ಸಿನಲ್ಲಿ ತೀವ್ರ ಖೇದವೆನಿಸುವುದು, ಹಾಗೆಯೇ ‘ಅಂತಹ ಪಾಪವು ಪುನಃ ನಮ್ಮಿಂದ ಆಗಬಾರದು’ ಎಂಬುದರ ದಕ್ಷತೆಯನ್ನು ತೆಗೆದುಕೊಳ್ಳುವ ಗಾಂಭೀರ್ಯತೆ ನಿರ್ಮಾಣವಾಗುವುದು ಆವಶ್ಯಕವಾಗಿದೆ. – ಸಂಕಲನಕಾರರು)

೧ ಈ. ಪಾಪಸ್ಮೃತಿಗಳಿಂದ ಮುಕ್ತಿ : ಒಂದು ಅಭಿಪ್ರಾಯಕ್ಕನುಸಾರ ಗಂಗೆಯು ಪಾಪಗಳಿಂದ ಮುಕ್ತಗೊಳಿಸುವುದಿಲ್ಲ, ಪಾಪಗಳ ಸ್ಮೃತಿಗಳನ್ನು ಮುಕ್ತಗೊಳಿಸುತ್ತಾಳೆ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

೨. ಪವಿತ್ರತಮ

೨ ಅ. ಎಲ್ಲಕ್ಕಿಂತ ಪವಿತ್ರ ನದಿ

೧. ಭಾರತದ ಏಳು ಪವಿತ್ರ ನದಿಗಳಲ್ಲಿ ಗಂಗಾ ಮೊದಲ, ಅಂದರೆ ಪವಿತ್ರತಮ ನದಿಯಾಗಿದೆ. ಯಾವ ಪದಾರ್ಥದಲ್ಲಿ ಅಲೌಕಿಕ ಸತ್‌ಶಕ್ತಿ ಅಥವಾ ಪುಣ್ಯವಿರುತ್ತದೆಯೋ, ಆ ಪದಾರ್ಥವು ಪವಿತ್ರವಾಗಿರುತ್ತದೆ. ಪವಿತ್ರ ಪದಾರ್ಥದ ಸ್ವಲ್ಪ ಅಂಶವನ್ನು ತೆಗೆದುಕೊಂಡರೂ, ಅದರಲ್ಲಿ ಸಂಪೂರ್ಣ ಪದಾರ್ಥದಷ್ಟೇ ಪಾವಿತ್ರ್ಯವಿರುತ್ತದೆ, ಉದಾ. ಗಂಗಾಜಲದ ಒಂದು ಹನಿಯು ಸಂಪೂರ್ಣ ಗಂಗೆಯಷ್ಟೇ ಪವಿತ್ರವಾಗಿರುತ್ತದೆ.

೨. ಗಂಗಾ ನದಿಯಲ್ಲಿ ಆಧ್ಯಾತ್ಮಿಕ ಗಂಗೆಯ ಅಂಶಾತ್ಮಕ ತತ್ತ್ವವಿರುವುದರಿಂದ ಮಾಲಿನ್ಯದಿಂದ ಅದು ಸಾಕಷ್ಟು ಅಶುದ್ಧವಾದರೂ, ಅದರ ಪಾವಿತ್ರ್ಯವು ಚಿರಕಾಲ ಉಳಿಯುತ್ತದೆ; ಆದುದರಿಂದ ‘ವಿಶ್ವದಲ್ಲಿನ ಯಾವುದೇ ಜಲಕ್ಕೆ ಹೋಲಿಸಿದರೂ ಗಂಗಾಜಲವು ಎಲ್ಲಕ್ಕಿಂತ ಪವಿತ್ರವಾಗಿದೆ’ ಎಂಬುದು ಸೂಕ್ಷ  ತಿಳಿಯುವವರಿಗೆ (ಟಿಪ್ಪಣಿ ೧) ಮಾತ್ರವಲ್ಲ, ವಿಜ್ಞಾನಿಗಳಿಗೂ ತಿಳಿಯುತ್ತದೆ.

೩. ಗಂಗೆಯ ನೀರು ಸ್ವತಃ ಪವಿತ್ರವಾಗಿದೆ ಮತ್ತು ಅದು ಇತರರನ್ನೂ ಪವಿತ್ರಗೊಳಿಸುತ್ತದೆ. ಗಂಗಾಜಲವನ್ನು ಯಾವುದೇ ವ್ಯಕ್ತಿ, ವಸ್ತು, ವಾಸ್ತು ಅಥವಾ ಸ್ಥಾನದ ಮೇಲೆ ಸಿಂಪಡಿಸಿದರೆ ಅದು ಪವಿತ್ರವಾಗುತ್ತದೆ.

ಟಿಪ್ಪಣಿ ೧ – ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ಉಪಯೋಗಿಸದೇ ಯಾವುದಾದರೊಂದು ವಿಷಯ ತಿಳಿಯುವುದೆಂದರೆ ‘ಸೂಕ್ಷ ದ ವಿಷಯ ತಿಳಿಯುವುದು’. ಸಾಧನೆ ಯನ್ನು ಮಾಡುತ್ತಾ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ಸೂಕ್ಷ ವನ್ನು ತಿಳಿಯುವ ಕ್ಷಮತೆಯೂ ಹೆಚ್ಚಾಗುತ್ತದೆ.

೨ ಆ. ಸರ್ವಶ್ರೇಷ್ಠ ತೀರ್ಥ :

ಗಂಗಾನದಿಯು ಪೃಥ್ವಿಯ ಮೇಲಿನ ಸರ್ವಶ್ರೇಷ್ಠ ತೀರ್ಥವಾಗಿದೆ.

೧. ಗಂಗಾಸದೃಶಂ ತೀರ್ಥಂ ನ ದೇವಃ ಕೇಶವಾತ್ ಪರಃ |
ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಏವಮಾಹ ಪಿತಾಮಹಃ ||

– ಮಹಾಭಾರತ, ಪರ್ವ ೩, ಅಧ್ಯಾಯ ೮೩, ಶ್ಲೋಕ ೯೬

ಅರ್ಥ : ಗಂಗೆಯಂತಹ ತೀರ್ಥವಿಲ್ಲ, ವಿಷ್ಣುವಿನಂತಹ ದೇವರಿಲ್ಲ, ಬ್ರಾಹ್ಮಣರಿಗಿಂತ ಯಾರೂ ಶ್ರೇಷ್ಠರಿಲ್ಲ ಎಂದು ಬ್ರಹ್ಮದೇವನು ಹೇಳಿದ್ದಾನೆ.

೨. ಸತ್ಯಯುಗದಲ್ಲಿ ಎಲ್ಲ ಸ್ಥಳಗಳು ಪವಿತ್ರವೇ ಆಗಿದ್ದವು. ತ್ರೇತಾಯುಗದಲ್ಲಿ ‘ಪುಷ್ಕರ’ ಮತ್ತು ದ್ವಾಪರಯುಗದಲ್ಲಿ ‘ಕುರುಕ್ಷೇತ್ರ’ವು ಎಲ್ಲಕ್ಕಿಂತ ಪವಿತ್ರ ತೀರ್ಥವಾಗಿತ್ತು ಮತ್ತು ಕಲಿಯುಗದಲ್ಲಿ ಗಂಗಾ ನದಿಯು ಪರಮಪವಿತ್ರ ತೀರ್ಥವಾಗಿದೆ.

೩. ಗಂಗೆಯಲ್ಲಿ ಎಲ್ಲಿ ಸ್ನಾನ ಮಾಡಿದರೂ ಗಂಗೆಯು ಕುರುಕ್ಷೇತ್ರಕ್ಕೆ ಸಮಾನ (ದ್ವಾಪರಯುಗದಲ್ಲಿ ಸರಸ್ವತಿ ನದಿಯ ತೀರದಲ್ಲಿ ಕುರುಕ್ಷೇತ್ರವೆಂಬ ಪವಿತ್ರ ತೀರ್ಥವಿತ್ತು.) ಪವಿತ್ರಳಾಗಿದ್ದಾಳೆ; ಆದರೆ ಹರಿದ್ವಾರದ ಕನಖಲ ತೀರ್ಥಕ್ಕೆ ಬೇರೆಯೇ ಆದ ಒಂದು ವೈಶಿಷ್ಟ್ಯವಿದೆ. ಪ್ರಯಾಗ ತೀರ್ಥದ ಮಹಿಮೆಯಂತೂ ಅದಕ್ಕಿಂತಲೂ ಹೆಚ್ಚಿದೆ. ನೂರಾರು ಪಾಪಕರ್ಮಗಳನ್ನು ಮಾಡಿದ ವ್ಯಕ್ತಿಯು ಕನಖಲ ತೀರ್ಥದಲ್ಲಿ ಗಂಗಾಜಲದಿಂದ ಸ್ನಾನ ಮಾಡಿದರೆ, ಅಗ್ನಿಯು ಇಂಧನವನ್ನು ನಾಶಗೊಳಿಸುವ ಹಾಗೆ ಗಂಗಾಜಲವು ಆ ವ್ಯಕ್ತಿಯ ಪಾಪಗಳನ್ನು ನಾಶಗೊಳಿಸುತ್ತದೆ.’ (ಮಹಾಭಾರತ, ಪರ್ವ ೩, ಅಧ್ಯಾಯ ೮೩)

೩. ಜ್ಞಾನಮಯಿ ಮತ್ತು ಜ್ಞಾನದಾಯಿನಿ

ಜ್ಞಾನಂ ಮಹೇಶ್ವರಾತ್ ಇಚ್ಛೇತ್ ಮೋಕ್ಷಮ್ ಇಚ್ಛೇತ್ ಜನಾರ್ದನಾತ್ |‘ ಅಂದರೆ ‘ಮಹೇಶ್ವರನಿಂದ (ಶಿವನಿಂದ) ಜ್ಞಾನವನ್ನು ಮತ್ತು ‘ಜನಾರ್ದನನಿಂದ (ಶ್ರೀವಿಷ್ಣುವಿನಿಂದ) ಮೋಕ್ಷವನ್ನು ಇಚ್ಛಿಸಬೇಕು.’ ಶಂಕರನು ಜ್ಞಾನಮಯನಾಗಿರುವುದರಿಂದ ಅವನ ಜಟೆಯಿಂದ ಹೊರಟ ಗಂಗಾ ನದಿಯೂ ಸರಸ್ವತಿ ನದಿಯಂತೆ ಜ್ಞಾನಮಯಿ ಮತ್ತು ಜ್ಞಾನದಾಯಿಯಾಗಿದೆ.’ – (ಪರಾತ್ಪರ ಗುರು) ಡಾ. ಜಯಂತ ಆಠವಲೆ

೪. ಗಂಗಾತತ್ತ್ವಪ್ರದಾಯಿನಿ

೪ ಅ. ಪ್ರತಿ ೧೨ ವರ್ಷಗಳಿಗೊಮ್ಮೆ ಬೇರೆಬೇರೆ ತೀರ್ಥಗಳಲ್ಲಿ ಗಂಗಾತತ್ತ್ವವು ಜಾಗೃತವಾಗುತ್ತದೆ : ‘ಹಿಂದೂಸ್ಥಾನದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿನ ಹಿಂದೂಗಳಿಗೆ ಗಂಗಾ ಒಂದು ತಪದಲ್ಲಿ (ಪ್ರತೀ ೧೨ ವರ್ಷಗಳಿಗೊಮ್ಮೆ) ಒಮ್ಮೆಯಾದರೂ ದರ್ಶನ ಕೊಡುತ್ತಾಳೆ. ಗುರು ಗ್ರಹವು ಯಾವ ಯಾವ ರಾಶಿಯಲ್ಲಿ ಬರುತ್ತಿರುತ್ತದೆಯೋ, ಆಯಾಯ ಸಮಯದಲ್ಲಿ ಗಂಗೆಯು ವಿಶಿಷ್ಟ ತೀರ್ಥದ ಸ್ಥಳದಲ್ಲಿ ಗುಪ್ತರೂಪದಲ್ಲಿ ಬರುತ್ತಾಳೆ, ಅಂದರೆ ಆಗ ಆ ತೀರ್ಥದಲ್ಲಿ ಗಂಗಾತತ್ತ್ವವು ಜಾಗೃತವಾಗುತ್ತದೆ. ಆ ಕಾಲದಲ್ಲಿ ಭಕ್ತರಿಗೆ ಆಯಾ ಸ್ಥಳದಲ್ಲಿ ಗಂಗಾಪೂಜೆ, ಸ್ನಾನ ಮತ್ತು ಪಿತೃತರ್ಪಣ ಮಾಡಲು ಸಾಧ್ಯವಾಗುತ್ತದೆ. ಇದರ ಉಲ್ಲೇಖವು ‘ಧರ್ಮಸಿಂಧು’ ಗ್ರಂಥದಲ್ಲಿ ಕಂಡುಬರುತ್ತದೆ.

೪ ಆ. ಗಂಗಾದರ್ಶಕ ನದಿಗಳು : ಭಾರತದಲ್ಲಿ ೮೪ ಗಂಗಾದರ್ಶಕ ನದಿಗಳಿವೆ. ಅವುಗಳಲ್ಲಿನ ಗಂಗಾ, ಗೋದಾವರಿ, ಕಾವೇರಿ, ತಾಮ್ರಪರ್ಣಿ, ಸಿಂಧೂ, ಶರಯೂ ಮತ್ತು ನರ್ಮದಾ ಈ ಏಳು ನದಿಗಳನ್ನು ಸಪ್ತಗಂಗಾ ಎಂದು ಗುರುತಿಸಲಾಗುತ್ತದೆ. ಉತ್ತರಾಂಚಲದಲ್ಲಿ ಗಂಗೆಯನ್ನು ಕೂಡಿಕೊಳ್ಳುವ ಕೇದಾರಗಂಗಾ, ರಾಮಗಂಗಾ ಇತ್ಯಾದಿ, ಹಾಗೆಯೇ ಮುಂಬೈಯಲ್ಲಿನ ಬಾಣಗಂಗಾ, ರಾಜಾಪುರದ (ರತ್ನಾಗಿರಿ ಜಿಲ್ಲೆ, ಮಹಾರಾಷ್ಟ್ರ) ಪ್ರತೀ ೩ ವರ್ಷಗಳಿಗೊಮ್ಮೆ ತಾನಾಗಿಯೇ ಪ್ರಕಟಗೊಳ್ಳುವ ಗಂಗಾ ಇತ್ಯಾದಿ ಗಂಗಾದರ್ಶಕ ನದಿಗಳು ಹೆಸರುವಾಸಿಯಾಗಿವೆ.

೫. ಮೋಕ್ಷದಾಯಿನಿ

ಪುರಾಣಾದಿ ಧರ್ಮಗ್ರಂಥಗಳಲ್ಲಿ ಗಂಗೆಯನ್ನು ‘ಮೋಕ್ಷದಾಯಿನಿ’ ಎಂದು ಕರೆಯಲಾಗಿದೆ. ಕಲಿಯುಗದಲ್ಲಿ ಮನುಷ್ಯನಿಗೆ ಸುಲಭ ರೀತಿಯಲ್ಲಿ ಮೋಕ್ಷವನ್ನು ಕೊಡುವ ಗಂಗೆಯ ಮಹತ್ವವು ಅಸಾಧಾರಣವಾಗಿದೆ.

೬. ಪಾರಲೌಕಿಕ ವೈಶಿಷ್ಟ ಗಳು

೬ ಅ. ತ್ರಿಪಥಗಾಮಿನಿ : ಸ್ವರ್ಗ, ಪೃಥ್ವಿ ಮತ್ತು ಪಾತಾಳ ಈ ಮೂರೂ ಲೋಕಗಳಲ್ಲಿ ಹರಿಯುವ ಏಕೈಕ ನದಿಯೆಂದರೆ ಗಂಗಾ.

೬ ಆ. ಅಧೋಗಾಮಿನಿ : ಗಂಗಾ ನದಿಯು ಸ್ವರ್ಗದಿಂದ ಪಾತಾಳಕ್ಕೆ ಹೋಗುತ್ತದೆ, ಅಂದರೆ ಉಚ್ಚಲೋಕದಿಂದ ಅಧೋಲೋಕದೆಡೆಗೆ ಹರಿಯುತ್ತದೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಗಂಗಾಮಹಾತ್ಮೆ’ ಗ್ರಂಥ)

3 thoughts on “ಗಂಗಾ ನದಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳು”

  1. ಗಂಗಾ ಮಾತೆಯ ಬಗ್ಗೆ ಮಾಹಿತಿ ತಿಳಿದು ನನ್ನ ಜನ್ಮ ಪಾವನವಾಯಿತು

    Reply

Leave a Comment