ಅಹಂ ದೂರಗೊಳಿಸುವ ಉಪಾಯಗಳು

ಅ. ಮನಃಶಾಸ್ತ್ರಕ್ಕನುಸಾರ ಅಹಂ ದೂರಗೊಳಿಸುವ ಉಪಾಯಗಳು

ಅ ೧. ಸ್ವಭಾವದೋಷಗಳನ್ನು ಕಡಿಮೆ ಮಾಡುವುದು

ಪ್ರತಿಯೊಬ್ಬನಲ್ಲಿಯೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸ್ವಭಾವದೋಷಗಳು ಇದ್ದೇ ಇರುತ್ತವೆ. ಸ್ವಭಾವದೋಷಗಳು ಅಹಂಭಾವದ ಒಂದು ಭಾಗವೇ ಆಗಿದೆ. ಸ್ವಭಾವದೋಷಗಳನ್ನು ಕಡಿಮೆ ಮಾಡಲು ಕೆಳಗಿನಂತೆ ಮೂರು ಹಂತಗಳಲ್ಲಿ ಪ್ರಯತ್ನ ಮಾಡಬೇಕು.

ಅ. ಮೊದಲನೆಯ ಹಂತ : ಬಹಳಷ್ಟು ಸಲ ನಮ್ಮ ಗಮನವು ಇತರರ ತಪ್ಪುಗಳ ಕಡೆಗೆ, ಇತರರ ದೋಷಗಳ ಕಡೆಗೆ ಹೋಗುತ್ತದೆ. ಇನ್ನೊಬ್ಬರನ್ನು ದೋಷಿ ಅಥವಾ ಅಪರಾಧಿ ಎಂದು ತಿಳಿಯುವುದೆಂದರೆ ನಮಗೆ ಇತರರಲ್ಲಿರುವ ಬ್ರಹ್ಮನನ್ನು ನೋಡಲು ತಿಳಿಯದಿರುವುದು. ಇತರರ ತಪ್ಪುಗಳನ್ನು ಅಥವಾ ದೋಷಗಳನ್ನು ನೋಡುವ ಬದಲು ಅವರ ಒಳ್ಳೆಯ ಗುಣಗಳ ಕಡೆಗೆ ನೋಡುವುದು ಸಾಧನೆಯ ದೃಷ್ಟಿಯಿಂದ ಹೆಚ್ಚು ಉಪಯುಕ್ತವಾಗಿದೆ. ಈ ಹಂತದಲ್ಲಿ ಇತರರ ದೋಷಗಳ ಕಡೆಗೆ ನೋಡದೆ ತನ್ನಲ್ಲಿರುವ ದೋಷಗಳನ್ನು ಹುಡುಕಬೇಕು. ಇದಕ್ಕಾಗಿ, ಸಾಧ್ಯವಾದಲ್ಲಿ ಇತರರ ಸಹಾಯವನ್ನು ತೆಗೆದುಕೊಳ್ಳಬೇಕು. ಮೊದಲು ಸಾಧನೆಯಲ್ಲಿ ಅಡಚಣೆಯಾಗಿರುವ ಪ್ರಮುಖ ದೋಷಗಳನ್ನು ದೂರಗೊಳಿಸಲು ಪ್ರಯತ್ನಿಸಬೇಕು.

ಆ. ಎರಡನೆಯ ಹಂತ : ನಮ್ಮ ದೋಷಗಳನ್ನು ಸಾಧನೆಗೆ ಸಂಬಂಧಿಸಿದ ಅಥವಾ ಈಶ್ವರನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅಥವಾ ಕೃತಿಗಳಲ್ಲಿ ರೂಪಾಂತರಿಸಿಕೊಳ್ಳಬೇಕು. ಮುಂದಿನ ಉದಾಹರಣೆಯಿಂದ ಇದು ತಿಳಿಯಬಹುದು. ಬೇರೆಯವರ ಮೇಲೆ ಬೇಗನೆ ಕೋಪ ಬರುವ ಸ್ವಭಾವದೋಷವಿದ್ದಲ್ಲಿ ಕೋಪ ಬಂದಾಗ, ‘ಈಶ್ವರನು ನನಗೆ ಸಾಧನೆ ಮಾಡಲು ಅವಕಾಶ ನೀಡಿರುವುದು ಆನಂದಪ್ರಾಪ್ತಿಗಾಗಿ, ಹೀಗಿದ್ದಾಗ ನಾನು ಕೋಪ ಮಾಡಿಕೊಂಡು ಈಶ್ವರನು ನೀಡಿರುವ ಆನಂದದಾಯಕ ಕ್ಷಣವನ್ನು ಏಕೆ ವ್ಯರ್ಥವಾಗಿ ಕಳೆದುಕೊಳ್ಳಲಿ ? ನಾನು ಹೀಗೆ ಮಾಡಿದರೆ ನನಗೂ ಹಾಗೂ ಸಾಧನೆ ಮಾಡದಿರುವವರಿಗೂ ವ್ಯತ್ಯಾಸವಾದರೂ ಏನು ?’ ಎಂದು ಯೋಚಿಸಬೇಕು. ‘ತನಗೆ ಕೋಪ ಬಂದಷ್ಟು ಕಾಲ ತಾನು ದೇವರನ್ನು ಮರೆತೆನಲ್ಲ’? ಎಂದು ತನ್ನ ಮೇಲೆಯೇ ತನಗೆ ಕೋಪ ಬರಬೇಕು. ಯಾವುದಾದರೊಂದು ವಿಷಯದ ಬಗ್ಗೆ ಬೇಗನೆ ದುಃಖವಾಗುವ ಸ್ವಭಾವದೋಷವಿದ್ದಲ್ಲಿ, ‘ನನಗೆ ದುಃಖವಾಗುತ್ತದೆ’ ಎಂದ ಮೇಲೆ ‘ನಾನು ಇಂತಹ ಒಬ್ಬ ವ್ಯಕ್ತಿಯಾಗಿದ್ದೇನೆ’ ಎನ್ನುವುದರ ಅರಿವು ನನ್ನಲ್ಲಿದೆ ಮತ್ತು ಈ ‘ಅರಿವಿದೆ’ ಎಂದ ಮೇಲೆ ನಾನು ಈಶ್ವರನಿಂದ ಬಹಳ ದೂರ ಇದ್ದೇನೆ ಎಂದಾಯಿತು. ಈ ರೀತಿ ವಿಚಾರ ಮಾಡುವ ಬದಲು ನನಗೆ ಈಶ್ವರನ ಬಗ್ಗೆ, ನಾಮದ ಬಗ್ಗೆ ಒಲವು, ಸೆಳೆತ ಇನ್ನೂ ಹೆಚ್ಚಾಗುತ್ತಿಲ್ಲವಲ್ಲ? ಎನ್ನುವ ಬಗ್ಗೆ ದುಃಖವಾಗಬೇಕು.

ಇ. ಮೂರನೆಯ ಹಂತ : ಸ್ವಭಾವದೋಷಗಳು ಉಕ್ಕಿ ಬಂದರೂ ಅದರ ಬಗ್ಗೆ ವಿಚಾರ ಮಾಡಿ ದುಃಖಪಡಬಾರದು; ಉದಾ.ಯಾವುದಾದರೊಂದು ಕೃತಿ ಮಾಡುವಾಗ ಯಾರ ಮೇಲಾದರೂ ಕೋಪ ಬಂದರೆ, ನನಗೇಕೆ ಕೋಪ ಬಂದಿತು ಎಂದು ದುಃಖಪಡಬಾರದು. ಅದರ ಬದಲು ನಾನು ಕಲಿಯಬೇಕೆಂದು ನನ್ನ ಸ್ವಭಾವದೋಷವು ಪ್ರಕಟವಾಗುವಂತಹ ಪ್ರಸಂಗವನ್ನು ಈಶ್ವರನು ನಿರ್ಮಾಣ ಮಾಡಿದ್ದಾನೆಂದು ಈಶ್ವರನ ಬಗ್ಗೆ ಕೃತಜ್ಞತೆಯೆನಿಸಬೇಕು ಮತ್ತು ಕೂಡಲೇ ಆ ಕ್ಷಣವನ್ನು ಮರೆತು ವರ್ತಮಾನಕಾಲದಲ್ಲಿರಲು ಪ್ರಯತ್ನಿಸಬೇಕು.

ಚಿತ್ತದಲ್ಲಿನ ಇಷ್ಟಾನಿಷ್ಟ, ವಾಸನೆ, ಸ್ವಭಾವ ಇತ್ಯಾದಿ ಕೇಂದ್ರಗಳಲ್ಲಿನ ಸಂಸ್ಕಾರಗಳು ಕಡಿಮೆಯಾದಂತೆ ಅಹಂಭಾವವು ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂಸ್ಕಾರಗಳನ್ನು ಕಡಿಮೆ ಮಾಡುವ ಒಂದು ಉಪಾಯವೆಂದರೆ ಸ್ವಯಂಸೂಚನೆಗಳನ್ನು ಕೊಡುವುದು. ಇದರ ಬಗ್ಗೆ ಹೆಚ್ಚಿನ ವಿವೇಚನೆಯನ್ನು ಇಲ್ಲಿ ನೀಡಲಾಗಿದೆ.

ಸ್ವಭಾವದೋಷಗಳನ್ನು ದೂರಮಾಡಲು ಪ್ರಯತ್ನಿಸಿದರೆ ಆ ಸ್ವಭಾವದೋಷಕ್ಕೆ ಸಂಬಂಧ ಪಟ್ಟ ಅಹಂಭಾವವು ಕಡಿಮೆಯಾಗಲು ಸಹಾಯವಾಗುತ್ತದೆ. ಅಹಂಭಾವವು ಸಂಪೂರ್ಣವಾಗಿ ನಾಶವಾಗಲು ಸ್ವಭಾವದೋಷ ನಿರ್ಮೂಲನದ ಜೊತೆಗೆ ಇನ್ನುಳಿದ ಪ್ರಯತ್ನಗಳನ್ನೂ ಸತತವಾಗಿ ಮಾಡಬೇಕಾಗುತ್ತದೆ. ಈ ಪ್ರಯತ್ನಗಳ ಮಾಹಿತಿಯನ್ನು ಇಲ್ಲಿ ಮತ್ತು ‘ಅಹಂ ಕಡಿಮೆ ಮಾಡಲು ಸಾಧನೆಯಲ್ಲಿನ ಮಹತ್ವದ ಘಟಕಗಳು’ ಇದರಲ್ಲಿ ಕೊಡಲಾಗಿದೆ.

ಅ ೨. ತಪ್ಪುಗಳನ್ನು ಒಪ್ಪಿಕೊಳ್ಳುವ ವೃತ್ತಿ

ಮನುಷ್ಯನು ಈಶ್ವರನಂತೆ ಪರಿಪೂರ್ಣನಾಗಿರುವುದಿಲ್ಲ. ಆದ್ದರಿಂದ ಅವನಿಂದ ತಪ್ಪುಗಳಾಗುತ್ತವೆ. ಪ್ರತಿಯೊಬ್ಬರಿಂದಲೂ ಹೆಚ್ಚುಕಡಿಮೆ ಪ್ರಮಾಣದಲ್ಲಿ ತಪ್ಪುಗಳು ಆಗುತ್ತಲೇ ಇರುತ್ತವೆ. ಆದರೆ ಬಹಳಷ್ಟು ಸಲ ತಮ್ಮಲ್ಲಿರುವ ಅಹಂಭಾವದಿಂದಾಗಿ ತಮ್ಮಿಂದಾದ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು ಎಂದರೆ ಅಹಂಭಾವದ ಪೋಷಣೆ ಮಾಡುವುದು; ‘ನಾನು ತಪ್ಪು ಮಾಡಿದ್ದೇನೆ’ ಎಂದು ಹೇಳುವುದೆಂದರೆ ತನ್ನಲ್ಲಿನ ಅಹಂಭಾವವನ್ನು ಕಡಿಮೆ ಮಾಡಲು ಪ್ರಯತ್ನ ಮಾಡುವುದು. ಮೊದಲನೆಯ ಹಂತದಲ್ಲಿ ತಪ್ಪುಗಳನ್ನು ಒಪ್ಪಿಕೊಳ್ಳಲು ಕಲಿಯಬೇಕು ಮತ್ತು ಎರಡನೆಯ ಹಂತದಲ್ಲಿ ಈಶ್ವರನಲ್ಲಿ ಹಾಗೂ ಯಾವ ವ್ಯಕ್ತಿಯ ಸಂದರ್ಭದಲ್ಲಿ ಆ ತಪ್ಪು ಘಟಿಸಿದೆಯೋ ಅವರಲ್ಲಿ ಕ್ಷಮೆ ಕೇಳಬೇಕು. ಇದರಿಂದ ಅಹಂಭಾವವು ಇನ್ನೂ ಕಡಿಮೆಯಾಗಲು ಸಹಾಯವಾಗುತ್ತದೆ.

ಅ ೩. ನಮ್ರತೆ

‘ವಿದ್ಯಾ ವಿನಯೇನ ಶೋಭತೇ |’ ಎಂಬ ಸುಭಾಷಿತವಿದೆ. ವಿನಯವಿಲ್ಲದಿದ್ದರೆ ಅಹಂಭಾವ ಬರುತ್ತದೆ, ಅಂದರೆ ಅವಿದ್ಯೆ ಬರುತ್ತದೆ. ಒಬ್ಬ ವ್ಯಕ್ತಿಯು ಎಷ್ಟೇ ಜ್ಞಾನಿಯಾಗಿದ್ದರೂ ಈಶ್ವರನಷ್ಟು ಜ್ಞಾನಿಯಾಗಲು ಸಾಧ್ಯವಿಲ್ಲ. ಆತನು ಈ ಕೊರತೆಯನ್ನು ವಿನಯದ ಮೂಲಕ ತುಂಬಿಸಿಕೊಳ್ಳಬೇಕು; ಅಂದರೆ ಅವನಿಗೆ ಈಶ್ವರನಷ್ಟು ಜ್ಞಾನವಾಗುತ್ತದೆ. ಪ್ರತಿಯೊಂದು ವ್ಯಕ್ತಿ ಹಾಗೂ ಪ್ರತಿಯೊಂದು ವಿಷಯಗಳ ಬಗ್ಗೆ ನಾವು ಎಷ್ಟು ನಮ್ರರಾಗುತ್ತೇವೆಯೋ ನಮ್ಮ ಅಹಂಭಾವವು ಅಷ್ಟೇ ಕಡಿಮೆಯಾಗುತ್ತದೆ.

ಅ ೪. ಸತತವಾಗಿ ಇತರರಿಗೆ ಕಲಿಸುತ್ತಾ ಇರುವುದಕ್ಕಿಂತ ಇತರರಿಂದ ಕಲಿಯುವ ವೃತ್ತಿಯನ್ನು ಬೆಳೆಸಿಕೊಳ್ಳಬೇಕು

ಸತತವಾಗಿ ಕಲಿಯುತ್ತಿರುವುದು ಮನುಷ್ಯನ ಸ್ವಭಾವದ ಒಂದು ವೈಶಿಷ್ಟವಾಗಿದೆ. ಆದರೆ ಕೆಲವರು, ಇದನ್ನು ಮರೆತು ಸತತವಾಗಿ ಇತರರರಿಗೆ ಕಲಿಸುತ್ತಿರುತ್ತಾರೆ. ಇದರಿಂದಾಗಿ ಅವರಲ್ಲಿ ತಾವೇ ದೊಡ್ಡವರು ಮತ್ತು ಎಲ್ಲರೂ ತಮ್ಮ ಮಾತನ್ನು ಕೇಳುತ್ತಾರೆ ಎಂದೆನಿಸಿ ಅಹಂಭಾವ ಹೆಚ್ಚಾಗುತ್ತದೆ. ಇದಕ್ಕೆ ವಿರುದ್ಧವಾಗಿ ಎಲ್ಲಿ ಕಲಿಯುವ ವೃತ್ತಿ ಇರುತ್ತದೆಯೋ ಅಲ್ಲಿ ಅಜ್ಞಾನದ ಅರಿವು ಇರುತ್ತದೆ ಮತ್ತು ಎಲ್ಲಿ ಅಜ್ಞಾನದ ಅರಿವಿದೆಯೋ ಅಲ್ಲಿ ಅಹಂಭಾವವಿರುವುದಿಲ್ಲ.

ಅ ೫. ಪ್ರಶಂಸೆಯ ಅಪೇಕ್ಷೆಯಿಟ್ಟುಕೊಳ್ಳದಿರುವುದು

ಪ್ರಶಂಸೆಯ ಅಪೇಕ್ಷೆಯನ್ನಿಟ್ಟುಕೊಳ್ಳುವುದು ಅಹಂಭಾವದ ಲಕ್ಷಣವೇ ಆಗಿದೆ. ಎಲ್ಲ ಸಂಗತಿಗಳೂ ಗುರುಗಳ ಅಥವಾ ಈಶ್ವರನ ಇಚ್ಛೆಗನುಸಾರವಾಗಿ ಹಾಗೂ ನಿಯಮಗಳಿಗನುಸಾರವಾಗಿ ನಡೆಯುತ್ತಿವೆ ಎಂಬ ಭಾವವನ್ನಿಟ್ಟುಕೊಂಡರೆ ಪ್ರಶಂಸೆಯ ಅಭಿಲಾಷೆ ಬರುವುದಿಲ್ಲ. ಯಾರಾದರೊಬ್ಬರು ತಮ್ಮನ್ನು ಪ್ರಶಂಸಿಸಿದಾಗ ಆ ಪ್ರಶಂಸೆಯನ್ನು ಸಾಧನೆಯ ದೃಷ್ಟಿಯಿಂದ ಏನಾದರೂ ಕಲಿಯಲು ರೂಪಾಂತರಿಸಿಕೊಂಡರೆ ಆ ಪ್ರಶಂಸೆಯಿಂದ ಅಹಂಭಾವ ನಿರ್ಮಾಣವಾಗುವುದಿಲ್ಲ.

ಅ ೬. ಗೌರವದ ಅಭಿಲಾಷೆ ಇಟ್ಟುಕೊಳ್ಳದಿರುವುದು

ತನ್ನನ್ನು ಗೌರವಿಸಬೇಕು ಅಥವಾ ಗೌರವ ಸಿಗಬೇಕು ಎಂದೆನಿಸುವುದು ಎಂದರೆ ಅಹಂಭಾವದ ಪೋಷಣೆ ಮಾಡಿದಂತಾಗುತ್ತದೆ.

ಅ ೭. ತನ್ನನ್ನು ತನಗಿಂತ ಶ್ರೇಷ್ಠರಾಗಿರುವವರೊಂದಿಗೆ ತುಲನೆ ಮಾಡಿಕೊಳ್ಳುವುದು

ಗಾಯನದಲ್ಲಿ ಪ್ರಾವೀಣ್ಯತೆ ಇರುವವನು ತನಗಿಂತ ಶ್ರೇಷ್ಠನಾಗಿರುವ ಗಾಯಕನೊಂದಿಗೆ, ಕಛೇರಿಯಲ್ಲಿ ಕೆಲಸ ಮಾಡುವವನು ತನಗಿಂತ ಉಚ್ಚ ಪದವಿಯಲ್ಲಿರುವವನೊಂದಿಗೆ ತನ್ನನ್ನು ತಾನು ತುಲನೆ ಮಾಡಿ ನೋಡಬೇಕು. ಸಾಧಕನು ತನಗಿಂತ ಹೆಚ್ಚು ಉನ್ನತಿ ಹೊಂದಿರುವ ಸಾಧಕನೊಂದಿಗೆ ತುಲನೆ ಮಾಡಿಕೊಳ್ಳಬೇಕು. ಸಂತ ಕಬೀರರು ತಮ್ಮ ಭಕ್ತಿಯನ್ನು ಗೋಪಿಯರ ಭಕ್ತಿಯೊಂದಿಗೆ ಹೀಗೆ ತುಲನೆ ಮಾಡುತ್ತಾರೆ –

ಕಬೀರ ಕಬೀರ ಕ್ಯಾ ಕಹೇ | ಜಾಯೇ ಜಮುನಾ ತೀರ |
ಏಕ ಗೋಪಿಕೇ ಪ್ಯಾರ ಮೇಂ ಬಹ ಗಯೇ ಲಾಖ ಕಬೀರ ||
ಅರ್ಥ : ಕಬೀರ ಕಬೀರ ಎಂದು ನನ್ನನ್ನು ಏಕೆ ಪ್ರಶಂಸಿಸುತ್ತೀರಿ ? ಯಮುನಾ ತೀರಕ್ಕೆ ಹೋಗಿ ನೋಡಿ. ಒಬ್ಬೊಬ್ಬ ಗೋಪಿಕೆಯ ಕೃಷ್ಣನ ಮೇಲಿನ ಪ್ರೀತಿಯಲ್ಲಿ ಲಕ್ಷಗಟ್ಟಲೆ ಕಬೀರರು ಕೊಚ್ಚಿಕೊಂಡು ಹೋಗುವರು.

ಅ ೮. ಕುಟುಂಬದವರೊಂದಿಗೆ ವರ್ತಿಸುವಾಗ ಸ್ವೇಚ್ಛೆಯ ಬದಲು ಪರೇಚ್ಛೆಯಿಂದ ವರ್ತಿಸುವುದು

ಕುಟುಂಬದಲ್ಲಿ ಹಿರಿಯರೊಂದಿಗೆ ಮಾತನಾಡುವಾಗ ಆದರದಿಂದ ಮಾತನಾಡಬೇಕು. ಅವರಿಗೆ ಗೌರವಪೂರ್ವಕವಾಗಿ ನಮಸ್ಕರಿಸಬೇಕು. ಮನೆಯವರೂ ‘ಸಾಧಕರೇ ಆಗಿದ್ದಾರೆ’ ಎಂದು ಭಾವಿಸಿ ವರ್ತಿಸುವುದರಿಂದ ಆಶ್ರಮದಲ್ಲಿ ಅಥವಾ ಸಾಧಕರ ಸತ್ಸಂಗದಲ್ಲಿ ಸಿಗುವಂತಹ ಆನಂದವನ್ನು ಸಾಧಕನು ಮನೆಯಲ್ಲಿಯೂ ಪಡೆದುಕೊಳ್ಳಬಹುದು. ಕುಟುಂಬದಲ್ಲಿನ ವ್ಯಕ್ತಿಗಳ ಮಾತನ್ನು ಕೇಳುವುದರಿಂದ ಸಾಧಕನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ. ತಮ್ಮ ಸಹೋದ್ಯೋಗಿಗಳು, ನೆಂಟರಿಷ್ಟರು ಮುಂತಾದವರೊಂದಿಗೆ ವರ್ತಿಸುವಾಗಲೂ ಸಾಧಕರು ಹೆಚ್ಚು-ಕಡಿಮೆ ಮೇಲಿನ ನಿಯಮಗಳನ್ನೇ ಗಮನದಲ್ಲಿಟ್ಟುಕೊಳ್ಳಬೇಕು.

ಅ ೯. ಎದುರಿರುವ ವ್ಯಕ್ತಿಗೆ ತಕ್ಷಣ ಪ್ರತಿಕ್ರಿಯೆ ಕೊಡದಿರುವುದು

ಒಂದು ಘಟನೆ ಅಥವಾ ಕೃತಿಯು ತನ್ನ ಮನಸ್ಸಿನ ವಿರುದ್ಧವಾಗಿ ನಡೆಯುತ್ತಿದ್ದಲ್ಲಿ ಆ ಸಮಯಕ್ಕೆ ಆ ಘಟನೆಯನ್ನು ಅಥವಾ ಕೃತಿಯ ಕುರಿತು ಸಾಧನೆಯ ದೃಷ್ಟಿಕೋನದಿಂದ ಚಿಂತನೆ ಮಾಡಿದರೆ ಪ್ರತಿಕ್ರಿಯೆಗಳ ಪ್ರಮಾಣ ಹಾಗೂ ತೀವ್ರತೆಯು ಕಡಿಮೆಯಾಗುತ್ತದೆ. ಪ್ರತಿಕ್ರಿಯೆಗಳು ಬರದಿದ್ದರೆ ಇತರರ ಬಗ್ಗೆ ಬೇಗನೆ ಪ್ರೀತಿ ನಿರ್ಮಾಣವಾಗುತ್ತದೆ.

ಅ ೯ ಅ. ಎದುರಿಗಿರುವ ವ್ಯಕ್ತಿಯು ಏನಾದರೂ ಹೇಳುತ್ತಿರುವಾಗ ಮಧ್ಯದಲ್ಲಿ ಮಾತನಾಡದಿರುವುದು : ಮಧ್ಯದಲ್ಲಿ ಮಾತನಾಡುವುದರಿಂದ ಈಶ್ವರನ ಮಾರ್ಗದರ್ಶನದಿಂದ ವಂಚಿತರಾಗುತ್ತೇವೆ. ಹಾಗೆಯೇ ಮಧ್ಯದಲ್ಲಿಯೇ ಮಾತನಾಡಿದ್ದರಿಂದ ಹೇಳುತ್ತಿರುವ ವ್ಯಕ್ತಿಯೂ ನೊಂದುಕೊಳ್ಳುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಬ್ಬರ ಮಾತನ್ನು ಕೇಳುವುದರಿಂದ ಸಾಧಕನಲ್ಲಿ ಕೇಳುವ ಪ್ರವೃತ್ತಿಯು ಹೆಚ್ಚಾಗುತ್ತದೆ .

ಅ ೯ ಆ. ಮಂದ ಸ್ವರದಲ್ಲಿ ಹಾಗೂ ನಮ್ರವಾಗಿ ಮಾತನಾಡುವುದು : ಎದುರಿಗಿರುವ ವ್ಯಕ್ತಿಯೊಂದಿಗೆ ಮಾತನಾಡುವಾಗ ಮಂದ ಸ್ವರದಲ್ಲಿ ಹಾಗೂ ನಮ್ರತೆಯಿಂದ ಮಾತನಾಡಿದರೆ ನಮ್ಮ ಮಾತುಗಳಿಂದ ಇತರರ ಅರಿವಿಗೆ ಬರುವ ಅಹಂ ಕಡಿಮೆಯಾಗುತ್ತದೆ.

ಅ ೧೦. ಪ್ರಮುಖ ಸಾಧಕರು ಇತರ ಸಾಧಕರೊಂದಿಗೆ ವರ್ತಿಸುವ ಸಂದರ್ಭದಲ್ಲಿ (ಇಲ್ಲಿ ನೀಡಿರುವುದನ್ನು ಯಾವುದೇ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರ ಸಂದರ್ಭದಲ್ಲಿಯೂ ಅನ್ವಯಿಸುತ್ತದೆ.)

ಅ ೧೦ ಅ. ಸಾಧಕರ ಕಾಳಜಿಯನ್ನು ತಂದೆ-ತಾಯಿಯಂತೆ ತೆಗೆದುಕೊಳ್ಳುವುದು : ತಂದೆ- ತಾಯಿಯರು ಹೇಗೆ ಎಲ್ಲ ವಿಧಗಳಲ್ಲಿಯೂ ತಮ್ಮ ಮಕ್ಕಳ ಕಾಳಜಿಯನ್ನು ವಹಿಸಿಕೊಳ್ಳುತ್ತಾರೆಯೋ, ಹಾಗೆಯೇ ಪ್ರಮುಖ ಸಾಧಕರು ಎಲ್ಲ ಸಾಧಕರ ಕಾಳಜಿಯನ್ನು ತೆಗೆದುಕೊಂಡರೆ ಎಲ್ಲ ಸಾಧಕರಿಗೂ ಅವರ ಬಗ್ಗೆ ಪ್ರೀತಿ ಎನಿಸತೊಡಗುತ್ತದೆ. ಇತರರಿಗೆ ಸಹಾಯ ಮಾಡುವುದರಲ್ಲಿ ಇರುವ ಆನಂದವನ್ನು ಅನುಭವಿಸುವುದರಿಂದ ಪ್ರಮುಖ ಸಾಧಕರಲ್ಲಿ ತಮ್ಮ ಬಗೆಗಿನ (ಸ್ವಂತದ) ವಿಚಾರಗಳು ಕಡಿಮೆಯಾಗುತ್ತವೆ.

ಅ ೧೦ ಆ. ಪ್ರತಿಯೊಬ್ಬ ಸಾಧಕನಿಂದಲೂ ಕಲಿಯುವ ವೃತ್ತಿಯನ್ನಿಟ್ಟುಕೊಳ್ಳುವುದು : ಪ್ರಮುಖ ಸಾಧಕರಲ್ಲಿ ಇತರ ಸಾಧಕರ ನೇತೃತ್ವದ ಜವಾಬ್ದಾರಿ ಬರುವುದರಿಂದ ಅವರಲ್ಲಿ ಅಹಂಭಾವ ಬೆಳೆಯುವ ಪ್ರಮಾಣವು ಬಹಳ ಹೆಚ್ಚಿರುತ್ತದೆ, ಆದುದರಿಂದ ಅವರು ಈಶ್ವರನಲ್ಲಿ, ‘ನೀನು ಯಾವಾಗಲೂ ನನಗೆ ಇತರರ ಮೂಲಕ ಕಲಿಸು’ ಎಂದು ಪ್ರಾರ್ಥಿಸಬೇಕು. ಪ್ರಮುಖ ಸಾಧಕರು ಇತರ ಸಾಧಕರಿಗೂ ಸತ್ಸಂಗಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿ ಸತ್ಸಂಗಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕೊಡಬೇಕು. ಹೀಗೆ ಮಾಡುವುದರಿಂದ, ನಾನೇ ಸತ್ಸಂಗಗಳನ್ನು ತೆಗೆದುಕೊಳ್ಳಬಲ್ಲೆನು ಎನ್ನುವ ಅವರ ಅಹಂಭಾವವು ಕಡಿಮೆಯಾಗುತ್ತದೆ ಮತ್ತು ಸತ್ಸಂಗ ತೆಗೆದುಕೊಳ್ಳುವ ಜವಾಬ್ದಾರಿಯಿಂದಾಗಿ ಇತರ ಸಾಧಕರಲ್ಲಿ ನೇತೃತ್ವಗುಣಗಳು ವೃದ್ಧಿಯಾಗುತ್ತವೆ.

ಅ ೧೦ ಇ. ಇತರ ಸಾಧಕರ ಬಗ್ಗೆ ಕೃತಜ್ಞತಾಭಾವವನ್ನಿಟ್ಟುಕೊಳ್ಳುವುದು : ‘ಇತರ ಸಾಧಕರಿಂದಾಗಿಯೇ ನನಗೆ ಪ್ರಮುಖ ಸಾಧಕನಾಗಿ ಸೇವೆ ಮಾಡುವ ಅವಕಾಶವು ಲಭಿಸುತ್ತಿದೆ’ ಎನ್ನುವ ಕೃತಜ್ಞತಾಭಾವವನ್ನು ಪ್ರಮುಖ ಸಾಧಕರು ಸತತವಾಗಿ ಎಲ್ಲ ಸಾಧಕರ ಬಗ್ಗೆ ಇಟ್ಟುಕೊಳ್ಳಬೇಕು.

(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)

Leave a Comment