ಅಹಂಕಾರ ಎಂದರೇನು?

ಅಹಂ ಎಂದರೆ ಜೀವದ ಸ್ವಕೃತ ಧರ್ಮ. ‘ಸ್ವಕೃತ’ ಎಂಬ ಶಬ್ದವನ್ನು ‘ಸ್ವ’ದ ಅರಿವಿನಿಂದ, ಅಂದರೆ ತನ್ನತನದ ಅರಿವಿನಿಂದ ಜೀವವು ಸ್ವೀಕರಿಸಿದ ಕೃತಿಸ್ವರೂಪ ಕರ್ಮ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆ.

‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಈ ಪ್ರಸಿದ್ಧ ಉಕ್ತಿಯಿಂದ ಮನುಷ್ಯನಲ್ಲಿನ ‘ನನ್ನತನ’ದ, ಅಂದರೆ ಅಹಂಭಾವದ ವ್ಯರ್ಥತೆಯು ತಿಳಿಯುತ್ತದೆ. ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಇತ್ಯಾದಿ ಎಲ್ಲರಲ್ಲಿಯೂ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅಹಂಭಾವವು ಇದ್ದೇ ಇರುತ್ತದೆ.

ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತಿರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಮೇತ ನಾಶಮಾಡುವುದಿಲ್ಲವೋ, ಅಲ್ಲಿಯವರೆಗೆ ಒಳ್ಳೆಯ ಬೆಳೆ ಬರುವುದಿಲ್ಲ. ಆ ಹುಲ್ಲನ್ನು ನಮಗೆ ಸತತವಾಗಿ ನಾಶಮಾಡುತ್ತಲೇ ಇರಬೇಕಾಗುತ್ತದೆ; ಅದರಂತೆಯೇ ಅಹಂಭಾವವು ಸಂಪೂರ್ಣ ನಾಶವಾಗದ ಹೊರತು ಪರಮೇಶ್ವರನ ಕೃಪೆಯ ಬೆಳೆಯು ಬರಲು ಸಾಧ್ಯವಿಲ್ಲ. ಸಾಧನೆಯ ಉದ್ದೇಶವೇ ಅಹಂಭಾವವನ್ನು ನಾಶ ಮಾಡುವುದಾಗಿದೆ; ಆದರೂ ಮನುಷ್ಯನಲ್ಲಿ ಅಹಂಭಾವವು ಎಷ್ಟು ಬೇರೂರಿರುತ್ತದೆ ಎಂದರೆ ಸಾಧನೆಯನ್ನು ಮಾಡು ವಾಗಲೂ ಅದನ್ನು ಸಂಪೂರ್ಣ ನಾಶಮಾಡಲು ಸಹಜ ಸಾಧ್ಯವಾಗುವುದಿಲ್ಲ; ಆದುದರಿಂದ ಸಾಧನೆಯಿಂದ ಅಹಂಭಾವವು ತಾನಾಗಿಯೇ ಕಡಿಮೆಯಾಗುವುದು ಎಂದು ವಿಚಾರವನ್ನು ಮಾಡದೇ ಅಹಂಭಾವವನ್ನು ಕಡಿಮೆ ಮಾಡಿಕೊಳ್ಳಲು ಸತತವಾಗಿ ಪ್ರಯತ್ನ ಮಾಡಬೇಕು.

೧. ‘ಅಹಂ’ ಶಬ್ದದ ವ್ಯಾಖ್ಯೆ ಮತ್ತು ಅರ್ಥ

ಅ. ಸ್ಥೂಲದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ವಿವಿಧ ಸಂಸ್ಕಾರ ಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನನ್ನು ತಾನು ಇತರರಿಂದ ಮತ್ತು ಈಶ್ವರನಿಂದ ಬೇರೆ ಎಂದು ಪರಿಗಣಿಸುವುದು ಎಂದರೆ ಅಹಂ.
ಆ. ನಾನು, ನನ್ನದು, ನನಗೆ, ಇಂತಹ ಅಭಿಮಾನವನ್ನಿಟ್ಟುಕೊಳ್ಳುವುದು ಎಂದರೆ ಅಹಂ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಹೆಂಡತಿ- ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣವಾಗುತ್ತವೆ. ಈರುಳ್ಳಿಯ ಸಿಪ್ಪೆಯನ್ನು ಸುಲಿದರೆ ಸಿಪ್ಪೆಯೇ ಸಿಗುತ್ತದೆ ಹೊರತು, ಯಾವ ಸಾರವೂ ಕೈಗೆ ಸಿಗುವುದಿಲ್ಲ, ಹಾಗೆಯೇ ವಿಚಾರ ಮಾಡಿದಾಗ ‘ನಾನು’ ಎನ್ನುವ ವಸ್ತುವೇ ಸಿಗಲಾರದು. ಕೊನೆಗೆ ಏನು ಉಳಿಯುತ್ತದೆಯೋ ಅದೇ ಆತ್ಮ-ಚೈತನ್ಯ.

೨. ಅಹಂಭಾವದ ವಿಧಗಳು

೨ ಅ. ಈಶ್ವರನ ಅಹಂ

ಅಹಂಕಾರ ಈ ಶಬ್ದವು ಅಹಂ + ಆಕಾರ ಹೀಗೆ ರೂಪುಗೊಂಡಿದೆ. ಆಕಾರವು ಹೋಯಿತೆಂದರೆ ಅಹಂ ಮಾತ್ರ ಉಳಿಯುತ್ತದೆ. ಆಗ ‘ನೀನು’ ಇಲ್ಲದಿರುವಂತಹ ‘ನಾನು’ ಉಳಿಯುತ್ತದೆ, ಅರ್ಥಾತ್ ಬ್ರಹ್ಮ ಅಥವಾ ಈಶ್ವರ ಮಾತ್ರ ಉಳಿಯುತ್ತಾನೆ. ಅಹಂರಹಿತ ‘ನಾನು’ ಎಂದರೆ ಬ್ರಹ್ಮ ಅಥವಾ ಈಶ್ವರ.

೨ ಆ. ಮನುಷ್ಯನ ಅಹಂ

೨ ಆ ೧. ಶುದ್ಧ ಅಹಂ : ಇದು ಮುಂದಿನಂತಿರುತ್ತದೆ.

ಅ. ಬ್ರಹ್ಮನಿಂದ ತನ್ನನ್ನು ಬೇರೆ ಎಂದು ತಿಳಿಯುವುದು, ಅಂದರೆ ದ್ವೈತದಲ್ಲಿದ್ದು ಸ್ವಸ್ವರೂಪದ ಅರಿವಿರುವುದು

ಆ. ಅಸ್ತಿತ್ವದ ಅರಿವು ಮಾತ್ರ ಇರುವುದು

ಇ. ‘ನಾನು ಇತರರವನಾಗಿದ್ದೇನೆ ಮತ್ತು ಎಲ್ಲರೂ ನನ್ನವರಾಗಿದ್ದಾರೆ’ ಎನ್ನುವ ಭಾವವಿರುವುದು. ದೇಹ ಇರುವವರೆಗೆ ಜಾಗೃತಾವಸ್ಥೆಯಲ್ಲಿ ಶುದ್ಧ ಅಹಂ ಇದ್ದೇ ಇರುತ್ತದೆ.೨ ಆ ೨. ಅಶುದ್ಧ ಅಹಂ : ‘ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ನಿರ್ಮಾಣವಾಗಿ, ಆ ಉತ್ಪತ್ತಿಯ ಪರಮಾವಧಿ ಆಯಿತೆಂದರೆ ಅಂತಃಕರಣವು ಸಂಪೂರ್ಣವಾಗಿ ಜನ್ಮಕ್ಕೆ ಬಂದಿದೆ ಎಂದು ತಿಳಿಯಬೇಕು. ಐಹಿಕ ಸುಖದ ಎಲ್ಲ ಕ್ರಿಯೆಗಳೂ ಅಹಂನ ಆಧಾರದಿಂದಲೇ ನಡೆಯುತ್ತವೆ. ಕಲಿಯುಗದಲ್ಲಿನ ಬುದ್ಧಿ ಮತ್ತು ಅಹಂ ಇವುಗಳ ಬಗ್ಗೆ ಹೀಗೆ ಹೇಳಬಹುದು – ಬುದ್ಧಿಯ ಪರಿಪೂರ್ಣ ವಿಕಾಸ ಎಂದರೆ ದೇಹಬುದ್ಧಿ. ದೇಹಸುಖ ಪಡೆಯಲು ಬುದ್ಧಿವಂತಿಕೆಯ ಗರಿಷ್ಠ ಮಿತಿ ಎಂದರೆ ಬುದ್ಧಿ ! ಅಹಂ ಎಂದರೆ ಬುದ್ಧಿಯ ಪರಿಪೂರ್ಣ ವಿಕಾಸ !’

– ಪ.ಪೂ. ಕಾಣೇ ಮಹಾರಾಜರು, ನಾರಾಯಣಗಾಂವ್, ಪುಣೆ ಜಿಲ್ಲೆ, ಮಹಾರಾಷ್ಟ್ರ.

೨ ಆ ೨ ಅಶುದ್ಧ ಅಹಂ : ಅಶುದ್ಧ ಅಹಂ ಎಂದರೆ ದೇಹದಿಂದಾಗಿ ಅಥವಾ ಲಿಂಗದೇಹದಲ್ಲಿನ ಸ್ವಭಾವ, ವಾಸನೆ, ಇಷ್ಟಾನಿಷ್ಟ ಮುಂತಾದ ಸಂಸ್ಕಾರಕೇಂದ್ರಗಳಲ್ಲಿನ ಸಂಸ್ಕಾರಗಳಿಂದಾಗಿ ತನ್ನ ಅಸ್ತಿತ್ವದ ಅರಿವಿರುವುದು. ವಿಚಾರಗಳು ಹಾಗೂ ಭಾವನೆಗಳಿಗನುಸಾರವಾಗಿ ಅಹಂಭಾವವು ಸಾತ್ತ್ವಿಕ, ರಾಜಸಿಕ ಅಥವಾ ತಾಮಸಿಕವಾಗಿರುತ್ತದೆ. ಅಹಂಭಾವದ ಈ ಮೂರು ವಿಧಗಳನ್ನು ‘ಅಹಂತ್ರಯ’ ಅಥವಾ ‘ತ್ರಿವಿಧ ಅಹಂ’ ಎನ್ನುತ್ತಾರೆ.

೨ ಆ ೨ ಅ. ತಾಮಸಿಕ ಅಹಂ : ತಮೋಗುಣ ಪ್ರಧಾನವಾಗಿರುವಂತಹ ಅಹಂಭಾವವನ್ನು ‘ಭೂತಾದಿ’ ಅಥವಾ ‘ತಾಮಸಿಕ ಅಹಂ’ ಎನ್ನುತ್ತಾರೆ. ಉದಾ. ಕೇವಲ ಸ್ವಕರ್ತೃತ್ವವನ್ನು ಮಾತ್ರ ಒಪ್ಪಿಕೊಳ್ಳುವುದು.

೨ ಆ ೨ ಆ. ರಾಜಸಿಕ ಅಹಂ : ರಜೋಗುಣದ ಪ್ರಾಬಲ್ಯವಿರುವಂತಹ ಅಹಂಭಾವವನ್ನು ‘ತೈಜಸ’ ಅಥವಾ ‘ರಾಜಸಿಕ ಅಹಂಭಾವ’ ಎನ್ನುತ್ತಾರೆ. ಉದಾ. ಸದಾಕಾಲ ಸುಖಕ್ಕಾಗಿ ಚಡಪಡಿಸುವುದು.

೩ ಆ ೨ ಇ. ಸಾತ್ತ್ವಿಕ ಅಹಂ : ಸತ್ತ್ವಗುಣ ಪ್ರಧಾನವಾಗಿರುವಂತಹ ಅಹಂಭಾವವನ್ನು ‘ವೈಕೃತ’ ಅಥವಾ ‘ಸಾತ್ತ್ವಿಕ ಅಹಂ’ ಎನ್ನುತ್ತಾರೆ. ಉದಾ. ತ್ಯಾಗದ ಅಹಂ ಸಾತ್ತ್ವಿಕವಾಗಿರುತ್ತದೆ.

(ಆಧಾರ : ಸನಾತನ ನಿರ್ಮಿತ ‘ಅಹಂ ನಿರ್ಮೂಲನೆಗಾಗಿ ಸಾಧನೆ’ ಗ್ರಂಥ)

Leave a Comment