ಗೋಮೂತ್ರ – ಆರೋಗ್ಯವರ್ಧಕ ಹೇಗೆ ?

ಗೋಮೂತ್ರವು ಪುರಾತನಕಾಲದಿಂದ ಔಷಧಿಯಾಗಿ ಬಳಕೆಯಾಗುತ್ತಿದ್ದ ಗೋಜನ್ಯ ಪದಾರ್ಥವಾಗಿದೆ. ಆಯುರ್ವೇದ ಶಾಸ್ತ್ರಗಳಲ್ಲಿ ವಿಸ್ತೃತವಾಗಿ ಈ ಬಗ್ಗೆ ವಿವರಣೆಗಳಿವೆ. ಆಧುನಿಕ ವಿಜ್ಞಾನ ಇತ್ತೀಚೆಗಷ್ಟೇ ಈ ನಿಟ್ಟಿನಲ್ಲಿ ಕಾರ್ಯವೆಸಗುತ್ತಿದೆ. ವಿಶೇಷವೆಂದರೆ ನಡೆದ ಕೆಲವೇ ಸಂಶೋಧನೆಗಳು ಗೋವಿನ ಮಹಾತ್ಮೆಯನ್ನು ಸಾರುವಂಥದ್ದಾಗಿದೆ. ಇವರಲ್ಲಿ ಪ್ರಮುಖವಾದದ್ದು ಗೋಮೂತ್ರ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಅಧಿಕವಾಗುವಂತಹದ್ದು.

ರಕ್ತದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೊಂದಿರುವಂಥಹ ಜೀವಕೋಶಗಳು ಮ್ಯಾಕ್ರೋಫೇಸಸ್ ಆಗಿವೆ. ಈ ಜೀವಕೋಶಗಳು ದೇಹದಲ್ಲಿ ಸೈನಿಕರಿದ್ದಂತೆ. ದೇಹದೊಳಗೆ ಯಾವುದೇ ಕೀಟಾಣು ಪ್ರವೇಶಿಸಿದಾಗ ತಕ್ಷಣ ಎಚ್ಚೆತ್ತುಕೊಳ್ಳುವ ಮ್ಯಾಕ್ರೋಫೇಸಸ್‌ಗಳು ಆ ಕೀಟಾಣುಗಳ ಮೇಲೆ ಯುದ್ಧಸಾರಿ ಅವುಗಳನ್ನು ಕೊಲ್ಲುತ್ತವೆ ಅಥವಾ ಸ್ವಾಹಾ ಮಾಡುತ್ತವೆ. ಈ ಕ್ರಿಯೆಯಿಂದಾಗಿ ದೇಹಕ್ಕೆ ಜ್ವರ ಬರುತ್ತದೆ. ಮ್ಯಾಕ್ರೋಫೇಸಸ್‌ಗಳ ಈ ಯುದ್ಧದಲ್ಲಿ ಕೀಟಾಣುಗಳ ಸಂಖ್ಯೆ ಅಧಿಕವಾಗಿದ್ದರೆ ಕೀಟಾಣುಗಳು ಗೆಲ್ಲುತ್ತವೆ ಅಂದರೆ ದೇಹ ಸೋಲುತ್ತದೆ. ರಕ್ತವು ಹೆಚ್ಚು ಹೆಚ್ಚು ಮ್ಯಾಕ್ರೋಫೇಸಸ್‌ಗಳನ್ನು ಉತ್ಪಾದಿಸುತ್ತದೆ. ಅದೂ ಸಾಲದಾದಾಗ ರೋಗ ವಿಜೃಂಭಿಸುತ್ತದೆ.

ಗೋಮೂತ್ರ ಸೇವನೆಯ ಚಮತ್ಕಾರ ಇಲ್ಲಿ ನೋಡಿ. ಮ್ಯಾಕ್ರೋಫೇಸಸ್‌ನ ಸಂಖ್ಯೆ ೧೦೪ ಶೇಕಡಾ ಅಧಿಕವಾಗುವುದು, ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನಾ ಸರಣಿಯ ಮುಂದುವರಿದ ಭಾಗ ಇನ್ನುಷ್ಟು ವಿಶೇಷ. ಎಲ್ಲಾ ಮೂತ್ರವೂ ಇದೇ ಗುಣವನ್ನು ತೋರಿಸುತ್ತಿದೆಯೋ ಎಂದು ಇತರ ಪ್ರಾಣಿಗಳ ಮೂತ್ರವನ್ನೂ ಪರೀಕ್ಷೆಗೆ ಒಳಪಡಿಸಿದರು.

ವಿದೇಶೀ ಸಂಕರ ಗೋವಿನ ಮೂತ್ರವು ೧೨ ಶೇಕಡಾ ಮ್ಯಾಕ್ರೋಫೇಸಸ್‌ಗಳ ಸಂಖ್ಯೆಯನ್ನು ಅಧಿಕ ಮಾಡಿತ್ತು. ಎಮ್ಮೆಯ ಮೂತ್ರ ೧೮ ಶೇಕಡಾ ಅಧಿಕ ಮಾಡಿದರೆ ಆಡಿನ ಮೂತ್ರ ೪೦ ಶೇಕಡಾಕ್ಕಿಂತ ಅಧಿಕ ಸಂಖ್ಯೆ ವೃದ್ಧಿಮಾಡಿತ್ತು. ಅಂದರೆ ದೇಶೀ ಗೋವಿನ ಅರ್ಧದಷ್ಟು ಗುಣ ಆಡಿಗೆ, ಅದರರ್ಧ ಎಮ್ಮೆಗೆ, ಕನಿಷ್ಠ ವಿದೇಶೀ ಗೋವಿಗೆ ಎಂದಾಯಿತಲ್ಲವೇ? ಗೋಮೂತ್ರ ಸೇವನೆ ಪ್ರತಿದಿನ ಮಾಡಿದರೆ ದೇಹದ ರೋಗ ನಿರೋಧಕ ಅಧಿಕವಾಗಿ ಎಂತಹ ರೋಗವನ್ನೂ ವಿರೋಧಿಸು ಶಕ್ತಿ ಬರುತ್ತದೆ. ಗೋಮೂತ್ರವನ್ನು ಸಂಗ್ರಹಿಸಿ ಸೋಸಿ ನಂತರ ೧-೨ ಚಮಚ ಹಾಗೆಯೇ ಸೇವಿಸಬಹುದು. ಗೋಮೂತ್ರವನ್ನೂ ಭಟ್ಟಿ ಇಳಿಸಿ, ಅರ್ಕ ಮಾಡಿಯೂ ಬಳಸಬಹುದು. ಗೋಮೂತ್ರದ ತಾಜಾರೂಪದ ಸೇವನೆಯೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

– ಡಾ. ವೈ. ವಿ. ಕೃಷ್ಣಮೂರ್ತಿ (ಗೋ ವಿಶ್ವ ಪತ್ರಿಕೆ)

Leave a Comment