ಭಾದ್ರಪದ ಮಾಸದ ಪ್ರಮುಖ ವ್ರತಗಳು

ಹರಿತಾಲಿಕಾ ವ್ರತ (ಸ್ವರ್ಣಗೌರಿ)

ಹರಿತಾಲಿಕಾ ವ್ರತವನ್ನು ಭಾದ್ರಪದ ಶುಕ್ಲ ತದಿಗೆಯಂದು ಮಾಡುತ್ತಾರೆ. ಪಾರ್ವತಿಯು ಈ ವ್ರತವನ್ನು ಮಾಡಿ ಶಿವನನ್ನು ಪಡೆದಳು. ಆದುದರಿಂದ ಯುವತಿಯರು ತಮಗೆ ಅಪೇಕ್ಷಿತ ವರನನ್ನು ಪಡೆಯಲು ಈ ವ್ರತವನ್ನು ಮಾಡುತ್ತಾರೆ ಹಾಗೂ ಅಖಂಡ ಸೌಭಾಗ್ಯ ಸಿಗಲು ವಿವಾಹಿತ ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ.

ಪೂಜಾ ವಿಧಿ

ಈ ದಿನ ನದಿಯ ಅಥವಾ ಹರಿಯುವ ಶುದ್ಧ ನೀರಿನ ಬಳಿಯ ಮರುಳನ್ನು ಒಟ್ಟುಗೂಡಿಸಿ ಶಿವಲಿಂಗವನ್ನು ತಯಾರಿಸುತ್ತಾರೆ. ಪಟ್ಟಣಗಳಲ್ಲಿ ಪಾರ್ವತಿಯ ಮತ್ತು ಅವಳ ಸಖಿಯರ ಜೊತೆಗೆ ಶಿವಲಿಂಗದ ಮೂರ್ತಿಯನ್ನು ತಂದು ಅದನ್ನು ಪೂಜಿಸಲಾಗುತ್ತದೆ. ಈ ಪೂಜೆಯಲ್ಲಿ ಬಿಲ್ವ, ವನಸ್ಪತಿ, ಪಾರಿಜಾತ, ಕರವೀರ (ಕಣಗಿಲ ಗಿಡ), ಅಶೋಕ ಇತ್ಯಾದಿ ಹದಿನಾರು ಪ್ರಕಾರಗಳ ಎಲೆ ಹಾಗೂ ಬಿಳಿ ಹೂಗಳನ್ನು ಲಿಂಗಕ್ಕೆ ಅರ್ಪಿಸುತ್ತಾರೆ. ಮೊದಲು ಗಣಪತಿ ಪೂಜೆಯನ್ನು ಮಾಡಿ ನಂತರ ಲಿಂಗಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡುತ್ತಾರೆ. ಬಾಳೆಹಣ್ಣು, ಬೆಲ್ಲ-ಕೊಬ್ಬರಿ ಮತ್ತು ಹಾಲಿನ ನೈವೇದ್ಯವನ್ನು ತೋರಿಸುತ್ತಾರೆ. ಹರಿತಾಲಿಕೆಯ ಆರತಿಯನ್ನು ಹಾಡುತ್ತಾರೆ ಹಾಗೂ ಈ ಪೂಜೆಯ ದಿನ ಹಚ್ಚಿದ ನಂದಾದೀಪವನ್ನು ವಿಸರ್ಜನೆಯ ವರೆಗೆ ಸತತವಾಗಿಡುತ್ತಾರೆ. ಇದರಿಂದ ಪೂಜೆ ಮಾಡುವವರ ಭಾವಕ್ಕನುಸಾರ ಅವರಿಗೆ ‘ಶಿವತತ್ತ್ವ ಮತ್ತು ದೀಪತತ್ತ್ವ’ಗಳಿಂದ ಲಾಭವಾಗುತ್ತದೆ. ಸಂಜೆ ಆರತಿಯನ್ನು ಮಾಡಿ ರಾತ್ರಿ ಜಾಗರಣೆಯನ್ನು ಮಾಡಬೇಕು ಮತ್ತು ಹರಿತಾಲಿಕೆಯ ಕಥೆಯನ್ನು ಓದಬೇಕು. ಮರುದಿನ ಮೊಸರನ್ನದ ನೈವೇದ್ಯವನ್ನು ಮಾಡಿ ಶಿವ, ಪಾರ್ವತಿ ಮತ್ತು ಸಖಿಯರ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕು. ಈ ರೀತಿಯ ಪೂಜೆಯಿಂದ ನಮ್ಮಲ್ಲಿರುವ ಪಾರ್ವತಿಯ ತತ್ತ್ವ ಅಂದರೆ ಶಕ್ತಿತತ್ತ್ವವು ಜಾಗೃತವಾಗುತ್ತದೆ. ಈ ದಿನ ಪ್ರತಿಯೋರ್ವ ವಿವಾಹಿತ, ಅವಿವಾಹಿತ ಸ್ತ್ರೀಯು ಉಪವಾಸವನ್ನು ಮಾಡಿ ಸಾಂಸಾರಿಕ ಜೀವನದಲ್ಲಿ ಬರುವಂತಹ ತೊಂದರೆಗಳನ್ನು ದೂರ ಮಾಡುವುದಕ್ಕಾಗಿ ಶಿವನಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ಶಿವಶಕ್ತಿಯ ಪ್ರವಾಹವು ನಮ್ಮ ಕಡೆಗೆ ಬಂದು ನಮ್ಮ ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ. ಈ ವ್ರತವನ್ನು ಮಾಡಿ ಪಾರ್ವತಿಗೆ ಶಿವನ ಪ್ರಾಪ್ತಿಯಾಯಿತು ಮತ್ತು ಆದಿಶಕ್ತಿಯ ಸ್ಥಾನವು ಪ್ರಾಪ್ತವಾಯಿತು. ಆದುದರಿಂದ ಪ್ರತಿಯೊಬ್ಬ ಸ್ತ್ರೀಯ ಜೀವನದಲ್ಲಿ ಈ ದಿನವು ಮಹತ್ವದ್ದಾಗಿದೆಯೆಂದು ತಿಳಿಯಲಾಗುತ್ತದೆ.

ಹರಿತಾಲಿಕೆಯ ವ್ರತದ ಲಾಭಗಳು

ಈ ವ್ರತವನ್ನು ಮಾಡುವುದರಿಂದ ಬ್ರಹ್ಮಾಂಡದಲ್ಲಿನ ಶಿವತತ್ತ್ವವು ಆಕರ್ಷಿಸಲ್ಪಡುತ್ತದೆ, ಕಾರ್ಯಕ್ಷಮತೆಯು ಹೆಚ್ಚಾಗುತ್ತದೆ, ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಸಹಾಯವಾಗುತ್ತದೆ, ಉಪವಾಸದಿಂದ ಶರೀರ ಪವಿತ್ರವಾಗುತ್ತದೆ, ಅಪೇಕ್ಷಿತ ವರನು ಪ್ರಾಪ್ತನಾಗುತ್ತಾನೆ. ಕಠೋರ ಉಪವಾಸ ಮಾಡಿದರೆ ಮೃತ್ಯುವಿನ ನಂತರ ಶಿವಲೋಕದಲ್ಲಿ ಸ್ಥಾನವು ಸಿಗುತ್ತದೆ. ಉಪವಾಸ ಮಾಡುವುದೆಂದರೆ ಅನ್ನದ ತ್ಯಾಗವನ್ನು ಮಾಡಿ ನಾಮಸ್ಮರಣೆಯನ್ನು ಮಾಡುತ್ತ ದೇವತೆಯ ಸೂಕ್ಷ್ಮ ರೂಪದೊಂದಿಗೆ ಏಕರೂಪವಾಗುವುದು.

ಋಷಿಪಂಚಮಿ

ಭಾದ್ರಪದ ಶುಕ್ಲ ಪಂಚಮಿಯಂದು ಸ್ತ್ರೀಯರು ಈ ವ್ರತವನ್ನು ಮಾಡುತ್ತಾರೆ. ‘ಮಾಸಿಕ ಸರದಿಯ ಸಮಯದಲ್ಲಿ ತಿಳಿದು-ತಿಳಿಯದೇ ಆದ ಸ್ಪರ್ಶದಿಂದ ಉಂಟಾದಂತಹ ದೋಷಗಳ ನಿವಾರಣೆಗಾಗಿ, ಅರುಂಧತಿ ಸಹಿತ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ’ ಎಂದು ಪೂಜೆಗೆ ಮುಂಚೆ ಸಂಕಲ್ಪ ಮಾಡುತ್ತಾರೆ. ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
ಈ ದಿನ ಸ್ತ್ರೀಯರು ವಿಶಿಷ್ಟ ವನಸ್ಪತಿಯ ಕಡ್ಡಿಯಿಂದ ಹಲ್ಲುಗಳನ್ನು ೧೦೮ಸಲ ಉಜ್ಜಬೇಕು. ಅನಂತರ ಸ್ನಾನ ಮಾಡಿ ಮಣೆಯ ಮೇಲೆ ಅಕ್ಕಿಯ ಎಂಟು ರಾಶಿಗಳನ್ನು ಹಾಕಿ ಅವುಗಳ ಮೇಲೆ ಕಶ್ಯಪಾದಿ ಸಪ್ತರ್ಷಿಗಳು ಮತ್ತು ಅರುಂಧತಿಗಾಗಿ ಒಂದು, ಹೀಗೆ ಎಂಟು ಅಡಿಕೆಗಳನ್ನಿಟ್ಟು ಅವುಗಳಿಗೆ ಷೋಡಶೋಪಚಾರ ಪೂಜೆ ಮಾಡಬೇಕು. ಮಾಸಿಕ ಸರದಿ, ಅಶೌಚ ಮತ್ತು ಸ್ಪರ್ಶಾಸ್ಪರ್ಶಗಳಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ ಹಾಗೂ ಗೋಕುಲಾಷ್ಟಮಿಯ ದಿನ ಮಾಡಿದ ಉಪವಾಸದಿಂದ ಕಡಿಮೆಯಾಗುತ್ತವೆ. (ಪುರುಷರ ಮೇಲಾಗುವ ಪರಿಣಾಮಗಳು ಕ್ಷೌರ ಮುಂತಾದ ಪ್ರಾಯಶ್ಚಿತ್ತ ಕರ್ಮದಿಂದಲೂ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮವು ಉದಕಶಾಂತಿಯಿಂದಲೂ ಕಡಿಮೆಯಾಗುತ್ತದೆ.)

೧೨ ವರ್ಷಗಳ ನಂತರ ಅಥವಾ ೫೦ನೇ ವರ್ಷದ ನಂತರ ಈ ವ್ರತದ ಸಮಾಪ್ತಿ (ಉದ್ಯಾಪನೆ) ಮಾಡಬಹುದು. ಉದ್ಯಾಪನೆಯ ನಂತರವೂ ವ್ರತವನ್ನು ಮುಂದುವರಿಸಬಹುದು. ಪೂಜೆಯ ನಂತರ ಋಷಿಗಳೆಂದು ಇಡಲಾದ ಅಡಿಕೆಗಳನ್ನು ವಿಸರ್ಜಿಸಬೇಕೆನ್ನುವ ವಿಧಿ ಇದೆ. ಈ ದಿನ ಕೇವಲ ಕಂದಮೂಲಗಳನ್ನು ಭಕ್ಷಿಸಬೇಕು. ಎತ್ತುಗಳ ಶ್ರಮದಿಂದ ಉತ್ತು ಬಿತ್ತಿದ ವಸ್ತುಗಳನ್ನು ತಿನ್ನಬಾರದು ಎಂದು ಹೇಳಲಾಗಿದೆ.

ಜ್ಯೇಷ್ಠ ಗೌರಿಯ ವ್ರತ

ದೇವರು ಮತ್ತು ದಾನವರ ನಡುವಿನ ಸಂಘರ್ಷದಿಂದ ದೇವರ ಮೇಲೆ ಬಂದ ಸಂಕಟ ದೂರ ಮಾಡಲು ಸ್ತ್ರೀ ದೇವತೆಗಳು ಮಹಾಲಕ್ಷ್ಮಿಗೆ ಪ್ರಾರ್ಥಿಸಿದರು ಮತ್ತು ಶ್ರೀ ಮಹಾಲಕ್ಷ್ಮಿಯು ಈ ಸಂಕಟವನ್ನು ದೂರ ಮಾಡಿದಳು. ಆಗಿನಿಂದ ಈ ಪ್ರಸಂಗದ ನೆನಪಿಗಾಗಿ ಮತ್ತು ಮಹಾಲಕ್ಷ್ಮಿಯು ನಮ್ಮ ಸೌಭಾಗ್ಯದ ರಕ್ಷಣೆ ಮಾಡಬೇಕೆಂದು ಜ್ಯೇಷ್ಠ ಗೌರಿಯ ವ್ರತವನ್ನು ಮಾಡಲಾಗುತ್ತದೆ. ಋಷಿಪಂಚಮಿಯ ನಂತರ ಮೂಲಾ ನಕ್ಷತ್ರದಲ್ಲಿ ಗೌರಿಯ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕಾಗಿ ೨ ಮುಖಚಿತ್ರಗಳನ್ನು ಮನೆಗೆ ತರಲಾಗುತ್ತದೆ. ಒಂದು ಮುಖಚಿತ್ರ ಜ್ಯೇಷ್ಠ ಗೌರಿಯದ್ದಾಗಿರುತ್ತದೆ ಮತ್ತೊಂದು ಕನಿಷ್ಟ ಗೌರಿಯದ್ದಾಗಿರುತ್ತದೆ. ಈ ಮುಖಚಿತ್ರವನ್ನು ೩ ದಿನ ಇಡಲಾಗುತ್ತದೆ. ಗೌರಿಗೆ ವಿವಿಧ ನೈವೇದ್ಯವನ್ನು ತೋರಿಸಲಾಗುತ್ತದೆ ಮತ್ತು ೩ ನೇ ದಿನ ಮುಖಚಿತ್ರದ ವಿಸರ್ಜನೆ ಮಾಡಲಾಗುತ್ತದೆ. ಕೆಲವೆಡೆ ಮುಖಚಿತ್ರದ ಬದಲು ಕಲ್ಲನ್ನು ತರಲಾಗುತ್ತದೆ.

ಅನಂತ ಚತುರ್ದಶಿ

ಈ ವ್ರತವನ್ನು ಭಾದ್ರಪದ ಶುಕ್ಲ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವ್ರತದ ಮುಖ್ಯ ದೇವನು ‘ಅನಂತ’ ಅಂದರೆ ವಿಷ್ಣು. ಶೇಷ ಮತ್ತು ಯಮುನೆಯು ಉಪ(ಗೌಣ)ದೇವತೆಗಳಾಗಿದ್ದಾರೆ. ಮುಖ್ಯವಾಗಿ ಈ ವ್ರತವನ್ನು ಗತವೈಭವದ ಪುನರ್‌ಪ್ರಾಪ್ತಿಗೆ ಮಾಡಲಾಗುತ್ತದೆ. ಇದರ ಕಾಲಾವಧಿಯು ೧೪ ವರ್ಷಗಳದ್ದಾಗಿದೆ. ಯಾರಾದರೂ ಹೇಳಿದಾಗ ಅಥವಾ ಅಕಸ್ಮಾತ್ತಾಗಿ ಅನಂತನ ದಾರವು ಸಿಕ್ಕಾಗ ಈ ವ್ರತವನ್ನು ಪ್ರಾರಂಭಿಸಬೇಕು.

Leave a Comment