ಕಣ್ಣುಗಳ ಆರೈಕೆಗಾಗಿ ಆದರ್ಶ ದಿನಚರಿ !

Article also available in :

Dr. Nikhil Mali, Eye specialist
ಡಾ. ನಿಖಿಲ್ ಮಾಳಿ

ಆನ್‌ಲೈನ್ ಶಿಕ್ಷಣವು ಈಗ ಎಲ್ಲೆಡೆ ಲಭ್ಯವಿದೆ. ಶಿಶುವಿಹಾರದಿಂದ ಪದವಿಪೂರ್ವದವರೆಗಿನ ಎಲ್ಲರೂ ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾರೆ. ತಂತ್ರಜ್ಞಾನದ ನೆರವಿನಿಂದ ನಾವು ಈಗಿನ ಪರಿಸ್ಥಿತಿಯಲ್ಲೂ ಎಲ್ಲಿಯೂ ಹೋಗದೆ ನಮ್ಮ ಶಿಕ್ಷಣವನ್ನು ಮುಂದುವರಿಸಿದ್ದೇವೆ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಈ ಅನಿಯಮಿತ ಬಳಕೆಯು ಕಣ್ಣುಗಳ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತಿದೆ. ಹೆಚ್ಚಿನ ಜನರು ನಿರಂತರವಾಗಿ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸುತ್ತಿದ್ದಾರೆ, ಮಲಗುವ ಮೊದಲೂ ಮೊಬೈಲ್ ಫೋನ್ ಬಳಸುತ್ತಾರೆ, ಕತ್ತಲೆ ಕೋಣೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಕೆಲಸ ಮಾಡುತ್ತಾರೆ, ಬಾಯಾರಿಕೆ ಮತ್ತು ಹಸಿವನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ದೇಹವನ್ನು ನಿರ್ಲಕ್ಷಿಸುತ್ತಾರೆ.

ಇದು, ಕಣ್ಣುಗಳು ಒಣಗುವುದು, ಕೆಂಪಾಗುವುದು, ನೋಯುವುದು, ತಲೆನೋವು, ಕುತ್ತಿಗೆ ನೋವು, ಅಜೀರ್ಣ, ಪಿತ್ತ, ಮಲಬದ್ಧತೆ, ಉತ್ಸಾಹ ಕಳೆದುಕೊಳ್ಳುವುದು, ನಿದ್ರಾಹೀನತೆ, ಕಿರಿಕಿರಿ, ಹೆಚ್ಚಿದ ಒತ್ತಡ ಇತ್ಯಾದಿಗಳಿಗೆ ಕಾರಣವಾಗಬಹುದು. ಈ ಎಲ್ಲಾ ರೋಗಲಕ್ಷಣಗಳು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗುವ ಹಾನಿಕಾರಕ ಪರಿಣಾಮಗಳನ್ನು ಸೂಚಿಸುತ್ತವೆ. ಆದ್ದರಿಂದ, ಕಣ್ಣುಗಳು ಸೇರಿದಂತೆ ಇಡೀ ದೇಹದ ಆರೈಕೆಗಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಪ್ರಸ್ತುತ ಆನ್‌ಲೈನ್ ಯುಗದಲ್ಲಿ ಕಣ್ಣುಗಳ ಜೊತೆಗೆ ಇಡೀ ದೇಹದ ಬಗ್ಗೆ ಕಾಳಜಿ ಹೇಗೆ ವಹಿಸುವುದು ಎಂಬುವುದನ್ನು ತಿಳಿಸಲು ಈ ಲೇಖನ…

ಕಣ್ಣುಗಳ ಆರೋಗ್ಯ ಕಾಪಾಡಲು ದಿನವಿಡೀ ಕಣ್ಣುಗಳ ಆರೈಕೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಮಾಡುವುದು ಮಹತ್ವದ್ದಾಗಿದೆ. ಕಣ್ಣುಗಳ ಆರೋಗ್ಯಕ್ಕಾಗಿ ಆದರ್ಶ ದಿನಚರಿ ಹೇಗಿರಬೇಕು ? ಎನ್ನುವ ವಿಷಯವನ್ನು ತಿಳಿದುಕೊಳ್ಳಬೇಕು. ಆಯುರ್ವೇದವೂ ಇದಕ್ಕೆ ಮಹತ್ವ ನೀಡಿದೆ. ಆಧುನಿಕ ವೈದ್ಯಕೀಯ ಶಾಸ್ತ್ರದ ಜನಕ ವಿಲಿಯಮ್ ಓಸಲರ್ ಇವರು ಕೂಡ ಅದನ್ನೇ ಹೇಳುತ್ತಾರೆ – One of the first duties of the physician is to educate the masses not to take medicine. (ಅರ್ಥ : ರೋಗಿಗಳಿಗೆ ನೇರವಾಗಿ ಔಷಧಗಳನ್ನು ನೀಡುವ ಬದಲು ಅವರಿಗೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಬಗ್ಗೆ ಶಿಕ್ಷಣ ನೀಡಬೇಕು, ಇದು ಡಾಕ್ಟರರ ಮೊದಲ ಕರ್ತವ್ಯವಾಗಿದೆ.) ಮುಂದಿನ ಕೃತಿಗಳನ್ನು ಮಾಡಿ ಕಣ್ಣುಗಳ ಆರೋಗ್ಯ ಕಾಪಾಡಿ…

1. ಮೊದಲಿಗೆ, ಕಣ್ಣುಗಳಿಗೆ ಸರಿಯಾಗಿ ವಿಶ್ರಾಂತಿ ನೀಡಬೇಕು. ಸರಿಯಾದ ನಿದ್ರೆ ಪಡೆಯುವುದೇ ಇದಕ್ಕೆ ಒಂದೇ ಒಂದು ಉಪಾಯವಾಗಿದೆ. ರಾತ್ರಿ ಜಾಗರಣೆ ಮಾಡಬಾರದು ಅಥವಾ ಹಗಲಿನಲ್ಲಿಯೂ ಮಲಗಬಾರದು.

2. ಕಣ್ಣುಗಳಿಗೆ ಸರಿಯಾದ ಪೋಷಣೆ ಸಿಗಲು ಸಮತೋಲಿತ ಆಹಾರವನ್ನು ಸೇವಿಸಬೇಕು. ಊಟದಲ್ಲಿ ತುಪ್ಪವನ್ನು ಬಳಸಬೇಕು. ಜಂಕ್ ಫುಡ್ ಅನ್ನು ತಪ್ಪಿಸಬೇಕು.

3. ಬಾಯಾರಿಕೆಯಾದಾಗ ನೀರು ಕುಡಿಯಬೇಕು. ಒಂದೇ ಸಮಯದಲ್ಲಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿ, ಹಾಗೆಯೇ ಮಲ-ಮೂತ್ರ ವಿಸರ್ಜನೆಯನ್ನು ತಡೆದು ಹಿಡಿದುಕೊಳ್ಳಬಾರದು.

4. ಕೆಲಸ ಮಾಡುವಾಗ ಆಸನಗಳು ಅಚ್ಚುಕಟ್ಟಾಗಿರಬೇಕು. ಗಣಕಯಂತ್ರದ ಪರದೆಯು (ಕಂಪ್ಯೂಟರ್ ಸ್ಕ್ರೀನ್) ಕಣ್ಣಿನ ಮಟ್ಟಕ್ಕಿಂತ ಕೆಳಗೆ ಮತ್ತು ನಿಮ್ಮಿಂದ ಒಂದೂವರೆ-ಎರಡು ಅಡಿ ದೂರ ಇರಬೇಕು.

5. ಕೆಲಸ ಮಾಡುವಾಗ ಕೋಣೆಯಲ್ಲಿ ಸಾಕಷ್ಟು ಬೆಳಕು ಮತ್ತು ಗಾಳಿ ಇರಬೇಕು.

6. ಕಂಪ್ಯೂಟರ್ ಮತ್ತು ಮೊಬೈಲ್ ಫೋನಿನ ಬ್ರೈಟ್ನೆಸ್ ಕಣ್ಣಿಗೆ ಸರಿಯಾಗಿ ಕಾಣಿಸುವಂತಿರಬೇಕು (ತೀರಾ ಹೆಚ್ಚು ಅಥವಾ ತೀರಾ ಕಡಿಮೆ ಇರಬಾರದು). ಓದುವಾಗ ‘ಬ್ಲೂ ಲೈಟ್ ಫಿಲ್ಟರ್’ ಬಳಸಲು ಮರೆಯದಿರಿ.

7. ಕನ್ನಡಕವನ್ನು ಹೊಂದಿದ್ದರೆ, ನಿಮ್ಮ ಕಣ್ಣುಗಳನ್ನು ಮತ್ತೊಮ್ಮೆ ಪರಿಶೀಲಿಸಿ ‘ಬ್ಲೂ ಬ್ಲಾಕ್ ಕೋಟಿಂಗ್’ ಕನ್ನಡಕವನ್ನು ಪಡೆಯಿರಿ. ಇದು ನೇರಳಾತೀತ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ.

8. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಪ್ರತಿ 20 ನಿಮಿಷಕ್ಕೆ 20 ಸೆಕೆಂಡುಗಳಿಗೆ ವಿಶ್ರಾಂತಿ ಪಡೆದು 20 ಅಡಿ ಅಂತರದಲ್ಲಿರುವ ವಸ್ತುಗಳನ್ನು ನೋಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿಶ್ವಪ್ರಸಿದ್ಧ ನೇತ್ರತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಕಣ್ಣಿನ ಕೋಶಗಳ ಮೇಲಿನ ಒತ್ತಡ ಕಡಿಮೆಯಾಗಿ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ.

9. ಕಣ್ಣು ಮಿಟುಕಿಸಿ! ಇದು ಕಣ್ಣುಗಳ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

10. ಮಧ್ಯ-ಮಧ್ಯದಲ್ಲಿ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು 21 ಬಾರಿ ಸಿಂಪಡಿಸಬೇಕು. ಆಮೇಲೆ ಬಾಯಲ್ಲಿರುವ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತವೆ. ಆಯುರ್ವೇದದಲ್ಲಿ ಇದನ್ನು ‘ನೇತ್ರಸೇಚನ’ ಅಥವಾ ‘ನೇತ್ರಪ್ರಕ್ಷಾಲನ’ ಎಂದು ಕರೆಯಲಾಗುತ್ತದೆ.

11. ಆಯುರ್ವೇದದಲ್ಲಿ ತಿಳಿಸಿರುವ ‘ಗಂಡೂಷ ಕ್ರಿಯಾ’ (oil pulling) ಮಾಡಬೇಕು. ಬೆಳಗ್ಗೆ ಹಲ್ಲುಜ್ಜಿದ ನಂತರ, ಬಾಯಿಯಲ್ಲಿ ಬೆಚ್ಚಗಿನ ಎಳ್ಳಿನ ಎಣ್ಣೆಯನ್ನು ಸುಮಾರು 15 ನಿಮಿಷಗಳ ಕಾಲ  ಇಟ್ಟುಕೊಳ್ಳಬೇಕು ಮತ್ತು ನಂತರ ಅದನ್ನು ಉಗುಳಿ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ವಿಶೇಷ ಲಾಭವಾಗುತ್ತದೆ.

12. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯಬೇಕು. ಇದರಿಂದ ಕಲಿಯುವಾಗ ಮತ್ತು ಕಲಿಸುವಾಗ ತಗಲುವ ಸಮಯದ ಉಳಿತಾಯವಾಗಿ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ. ಶಿಕ್ಷಕರು ಕಲಿಸುವಾಗ ಸ್ವತಃ ಅಲ್ಪ ವಿರಾಮ ಪಡೆದು ಮಕ್ಕಳಿಗೂ ಹೀಗೆ ಮಾಡಲು ಪ್ರೋತ್ಸಾಹಿಸಬೇಕು.

13. ಕೆಲಸ ಮಾಡುವಾಗ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ, ಹಾಗೆಯೇ ಎದ್ದು ಕೈ-ಕಾಲು ಸಡಿಲಗೊಳಿಸಬೇಕು. ವ್ಯಾಯಾಮ, ಯೋಗ, ಪ್ರಾಣಾಯಾಮವನ್ನು ಪ್ರತಿದಿನ ಅನುಸರಿಸಬೇಕು.

14. ಕಣ್ಣುಗಳಿಗೆ ಉಪಯುಕ್ತವಾದ ವ್ಯಾಯಾಮಗಳು (ಕಣ್ಣಿನ ಚಲನೆ), ಹಾಗೆಯೇ ಯೋಗದಲ್ಲಿ ಹೇಳಿರುವ ‘ತ್ರಾಟಕ್ ಕ್ರಿಯಾ’ ಮಾಡಬೇಕು. ಕಣ್ಣುಗಳನ್ನು ವಿಶ್ರಾಂತಿ ಸಿಗಲು, ಅಂಗೈಗಳನ್ನು ಉಜ್ಜಿಕೊಂಡು ಮುಚ್ಚಿದ ಕಣ್ಣುಗಳ ಮೇಲೆ ಹಗುರವಾಗಿ ಇಡಬೇಕು. ಇದು ಕಣ್ಣುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.

ನಮ್ಮ ದಿನಚರಿಯಲ್ಲಿ ಮುಂದಿನಂತೆ ಬದಲಾವಣೆ ಮಾಡಿದರೆ ಕಣ್ಣುಗಳ ಆರೋಗ್ಯ ಚೆನ್ನಾಗಿರುವುದು ಎಂಬುದರಲ್ಲಿ ಸಂಶಯವಿಲ್ಲ ಹಾಗೂ ಭವಿಷ್ಯದಲ್ಲಿ ಕಾಯಿಲೆಗಳ ತೀವ್ರತೆಯೂ ಕಡಿಮೆಯಾಗುವುದು.

1. ಬೆಳಗ್ಗೆ ಆದಷ್ಟು ಬೇಗ ಏಳಲು ಪ್ರಯತ್ನಿಸಬೇಕು. ಅದಕ್ಕಾಗಿ ಸಹಜವಾಗಿಯೇ ರಾತ್ರಿ ಬೇಗನೆ ಮಲಗಬೇಕಾಗುತ್ತದೆ. ಮಧ್ಯಾಹ್ನ ಊಟದ ನಂತರ ತಕ್ಷಣ ಮಲಗುವುದನ್ನು ತಪ್ಪಿಸಬೇಕು.

2. ಹಲ್ಲುಜ್ಜಿದ ನಂತರ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು ಸಿಂಪಡಿಸಬೇಕು. ಆ ಮೇಲೆ ಬಾಯಲ್ಲಿರುವ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತವೆ.

3. ಸ್ನಾನ ಮಾಡುವ ಮೊದಲು ಅಭ್ಯಂಗ – ಅಂದರೆ ಮೈಗೆ ಮತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳಬೇಕು.

4. ತಲೆಗೆ ಸ್ನಾನ ಮಾಡುವಾಗ ಸಾಧ್ಯವಿದ್ದರೆ ತಣ್ಣೀರಿನಿಂದ ಸ್ನಾನ ಮಾಡಬೇಕು. ಬಿಸಿನೀರಿನಿಂದ ತಲೆ ಸ್ನಾನ ಮಾಡಿದರೆ ಕಣ್ಣುಗಳಿಗೆ ಮತ್ತು ಕೂದಲಿಗೆ ಹಾನಿಯಾಗಬಹುದು.

5. ವೈದ್ಯಕೀಯ ಸಲಹೆ ಪಡೆದು ಕಣ್ಣುಗಳಿಗೆ ಅಂಜನ ಹಚ್ಚಿಕೊಳ್ಳಬೇಕು. ಅದರಿಂದ ಕಣ್ಣುಗಳ ವಿಕೃತಿಗಳು ಹೊರಬಿದ್ದು ಕಣ್ಣುಗಳ ರಕ್ಷಣೆಯಾಗುತ್ತದೆ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ತಲೆಯನ್ನು ಸರಿಯಾಗಿ ಮುಚ್ಚಿಕೊಳ್ಳಬೇಕು, ಕಣ್ಣುಗಳಿಗೆ ಗಾಗಲ್ ಉಪಯೋಗಿಸಬೇಕು.

6. ಕಾಲುಗಳಿಗೆ ಚಪ್ಪಲಿಗಳನ್ನು ಹಾಕಿಕೊಳ್ಳಬೇಕು. ಆದಷ್ಟು ಪ್ಲಾಸ್ಟಿಕಿನ ಚಪ್ಪಲಿ ಅಥವಾ ಸ್ಯಾಂಡಲ್ ಉಪಯೋಗಿಸಬಾರದು.

7. ದಿನದಲ್ಲಿ ೩ – ೪ ಸಲ ಸ್ವಚ್ಛ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು.

8. ಹೊರಗಿನಿಂದ ಬಂದಾಗ ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

9. ರಾತ್ರಿ ಮಲಗುವಾಗ ಅಂಗಾಲಿಗೆ ಎಣ್ಣೆಯನ್ನು ಹಚ್ಚಿಕೊಳ್ಳಲು ಮರೆಯಬೇಡಿ. ಅದರಿಂದ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

ಈ ಮೇಲಿನ ಎಲ್ಲ ವಿಷಯಗಳನ್ನು ತಪ್ಪದೆ ಮಾಡಬೇಕು. ಇವುಗಳಲ್ಲಿನ ಹೆಚ್ಚು ಕಡಿಮೆ ಎಲ್ಲ ವಿಷಯವೂ ಆಯುರ್ವೇದ ಹೇಳುವ ದಿನಚರಿಯಲ್ಲಿ ಬಂದಿವೆ. ಅವುಗಳ ಆಚರಣೆ ಮಾಡಿದರೆ ಕಣ್ಣುಗಳ ಆರೋಗ್ಯ ಚೆನ್ನಾಗಿರುತ್ತದೆ.

ಆನ್‌ಲೈನ್‌ನಲ್ಲಿ ಕಲಿಯುವಾಗ ಅಥವಾ ಕಲಿಸುವಾಗ, ಮತ್ತು ದಿನ ನಿತ್ಯವೂ ಇವೆಲ್ಲವನ್ನೂ ಜೀವನದಲ್ಲಿ ಅನುಸರಿಸಬೇಕು. ಇದು ಕಣ್ಣುಗಳನ್ನು ರಕ್ಷಿಸುತ್ತದೆ. ನಿಮಗೆ ಯಾವುದೇ ರೀತಿಯ ಕಣ್ಣಿನ ಸಮಸ್ಯೆ ಇದ್ದರೆ, ನೇತ್ರತಜ್ಞರನ್ನು ಸಂಪರ್ಕಿಸಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಕಣ್ಣು, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

– ಡಾ. ನಿಖಿಲ್ ಮಾಳಿ, ಆಯುರ್ವೇದ ನೇತ್ರರೋಗ ತಜ್ಞ, ಚಿಪಳೂಣ, ರತ್ನಗಿರಿ ಜಿಲ್ಲೆ, ಮಹಾರಾಷ್ಟ್ರ.

2 thoughts on “ಕಣ್ಣುಗಳ ಆರೈಕೆಗಾಗಿ ಆದರ್ಶ ದಿನಚರಿ !”

  1. ಮಾಹಿತಿ ತುಂಬಾ ಚನ್ನಾಗಿದೆ ಸರಳ ವಿಧಾನಗಳಿಂದ ಕಣ್ಣಿನ ರಕ್ಷಣೆ ಮಾಡಿಕೊಳ್ಳಲು ಅನು ಕೂಲಕರ ಮಾಹಿತಿ ದೇಹಕ್ಕೆ ಕಣ್ಣು ಮುಖ್ಯವಾದ ಅಂಗ

    Reply
  2. ಸನಾತನ ಸಂಸ್ಥೆಯ ಮಾರ್ಗದರ್ಶನ ಅಮೂಲ್ಯ ವಾದದ್ದು. ಅನುಸರಿಸಲು ಪ್ರಯತ್ನ ಮಾಡುವೆನು. ಸದ್ಗುರು ಹಾಗೂ ದೇವರ ಅನುಗ್ರಹ ಇರಲಿ ಹರಿಃ ಓಂ ತತ್ಸತ್ 🙏

    Reply

Leave a Comment